ರಾಜಕಾರಣಿಗಳ 'ಕಾವೇರಿ'ದ ಆವೇಶ; ರೈತರಿಗೆ ಜೈಲುವಾಸ
ಇದು ಮೊನ್ನೆ ನಡೆದ ದುರಂತ ಘಟನೆ. ಬೆಂಗಳೂರು- ಮೈಸೂರು ರಸ್ತೆಯ ಹೆದ್ದಾರಿಯಲ್ಲಿರುವ ಮಂಡ್ಯ ತಾಲೂಕಿನ ಒಂದು ಪುಟ್ಟ ಗ್ರಾಮ ಇಂಡುವಾಳು. ರೈತ ಆರ್.ಜೋಗಿಗೌಡ ತನ್ನ ಜಮೀನಿನಲ್ಲಿ ಎಂದಿನಂತೆ ಕೆಲಸ ಮಾಡುತ್ತಿದ್ದ. ರೇಲ್ವೆ ಪೊಲೀಸರು ಸಂಜೆ ಆತನನ್ನು ಜಮೀನಿನಲ್ಲೇ ಬಂಧಿಸಿ ಕರೆದು ತಂದರು. ರಾತ್ರಿ ವೇಳೆಯಲ್ಲಿ ನ್ಯಾಯಾಧೀಶರ ಮನೆಯಲ್ಲೇ ಹಾಜರುಪಡಿಸಿದರು. ಯಾಕೆ ಈ ಸಮಯದಲ್ಲಿ ಕರೆದು ತಂದಿರಿ, ಬೆಳಿಗ್ಗೆ ಕರೆದು ತರಬಹುದಿತ್ತಲ್ಲವೇ ಎಂದು ನ್ಯಾಯಾಧೀಶರೇ ಪ್ರಶ್ನಿಸಿದರು. ಪೊಲೀಸರು ಮರು ಮಾತನಾಡಿಲ್ಲ. ನ್ಯಾಯಾಧೀಶರು ಜೋಗಿ ಗೌಡನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಈ ಘಟನೆಯಲ್ಲಿ ಯಾವ ದುರಂತ ಅಡಗಿದೆ ಎಂದು ಭಾವಿಸುತ್ತೀರಾ? ಈ ದುರಂತ ಕಥೆಯ ಮುಂದಿನ ಭಾಗ ಇಲ್ಲಿದೆ ಓದಿ. ಬಂಧನಕ್ಕೆ ಒಳಗಾದ ಜೋಗೀಗೌಡನ ಕೈಗೆ ಪೊಲೀಸರು ಬೇಡಿ ಹಾಕಿ ಎಳೆದುಕೊಂಡು ಜೈಲಿಗೆ ಹೋದರು. ಬೆಳಿಗ್ಗೆ ನ್ಯಾಯಾಲಯಕ್ಕೆ ಕರೆದು ತರುವಾಗಲೂ ಬೇಡಿ ಹಾಕಿಕೊಂಡೇ ಮಂಡ್ಯದ ರಸ್ತೆಗಳಲ್ಲಿ ಕರೆದು ತಂದರು. ನಾನು ಕಳ್ಳನಲ್ಲ. ಭಯೋತ್ಪಾದಕನೂ ಅಲ್ಲ, ದರೋಡೆ ಮಾಡಿಲ್ಲ. ರೌಡಿನೂ ಅಲ್ಲ. ಅತ್ಯಾಚಾರ ಮಾಡಿಲ್ಲ. ಯಾಕೆ ಇಂತಹ ಶಿಕ್ಷೆ ಕೊಟ್ಟು, ಮಂಡ್ಯದಲ್ಲಿ ನನ್ನ ಮರ್ಯಾದೆ ಕಳೆಯುತ್ತೀರಾ ಎಂದು ರೈತ ಜೋಗಿಗೌಡರು ಪೊಲೀಸರನ್ನು ಪ್ರಶ್ನೆ ಮಾಡಿದರೂ ರೇಲ್ವೆ ಪೊಲೀಸರು ಮಾತ್ರ ಕ್ಯಾರೆ ಅನ್ನಲಿಲ್ಲ. ನಿರ್ದಯವಾಗಿ ಅವಕಾಶವನ್ನು ದುರುಪಯೋಗಪಡಿಸಿಕೊಂಡರು.
ಕೊನೆಗೆ ಈ ಸಂಗತಿ ಸಾಮಾಜಿಕ ಕಳಕಳಿಯ ರೈತ ಪರ ವಕೀಲ ಎಂದು ಗುರುತಿಸಿಕೊಂಡಿರುವ ಮಂಡ್ಯದ ವಕೀಲರ ಸಂಘದ ಅಧ್ಯಕ್ಷ ಆರ್.ಕೇಶವಮೂರ್ತಿ ಅವರಿಗೆ ಗೊತ್ತಾದ ತಕ್ಷಣ, ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಎದುರೇ, ರೇಲ್ವೆ ಪೊಲೀಸರು ಒಬ್ಬ ಬಡ ರೈತನಿಗೆ ಮಾಡಿದ ಅಪಮಾನವನ್ನು ಖಡಾಖಂಡಿತವಾಗಿ ಖಂಡಿಸಿ ಮಾತನಾಡಿದರು. ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದ ರೈತನನ್ನು, ಬೇಡಿ ಹಾಕಿ ಕರೆದುಕೊಂಡು ಬರುವಷ್ಟು ಯಾವ ದೊಡ್ಡ ಅಪರಾಧ ಮಾಡಿದ್ದಾನೆಯೇ ಸ್ವಾಮಿ ಎನ್ನುವ ಪ್ರಶ್ನೆಯನ್ನು ವಕೀಲ ಕೇಶವಮೂರ್ತಿ ನ್ಯಾಯಾಧೀಶರ ಮುಂದಿಟ್ಟರು. ನಂತರ ವಕೀಲರು ಜಾಮೀನು ಕೊಡಿಸಿ, ಸಂಜೆ ವೇಳೆಗೆ ಬಿಡುಗಡೆ ಮಾಡಿಸುವ ಹೊತ್ತಿಗೆ ರೈತ ಜೋಗೀಗೌಡರು ಬಳಲಿ ಹೋಗಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು, ಮರ್ಯಾದೆ ಕಳೆದು ಕೊಂಡ ತಮ್ಮ ಬದುಕಿಗೆ ತಾವೇ ಹಿಡಿ ಶಾಪ ಹಾಕಿಕೊಂಡರು.
ಹೌದು, ಜೋಗಿಗೌಡರನ್ನು ರೇಲ್ವೆ ಪೊಲೀಸರು ಬೇಡಿ ಹಾಕಿ ಕರೆದುಕೊಂಡು ಹೋಗುವಂತಹ ಮಾಡಿದ್ದ ತಪ್ಪಾದರೂ ಏನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. 2006, 2008, 2013 ರಲ್ಲಿ ನಡೆದ ಕಾವೇರಿ ಗಲಾಟೆ ಸಮಯದಲ್ಲಿ ಇಂಡುವಾಳು ಬಳಿ ರೈಲು ತಡೆ ಪ್ರತಿಭಟನೆ ಮಾಡಿದ ಕಾರಣಕ್ಕಾಗಿ ಪೊಲೀಸರು ಕಳೆದ 7 ವರ್ಷಗಳಿಂದಲೂ ಇಂಡುವಾಳಿನ 15 ರಿಂದ 20 ಮಂದಿ ರೈತರ ವಿರುದ್ಧ ಕೇಸು ಹಾಕಿ ಪ್ರಾಣ ತೆಗೆಯುತ್ತಲೇ ಇದ್ದಾರೆ. ರೈತರು ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಟ್ಟ ಕ್ರಮ ವಿರೋಧಿಸಿ ಹಾಗೂ ತಮಗೆ ಆಗಿರುವ ಅನ್ಯಾಯ ಪ್ರತಿಭಟಿಸಿ ರೈಲು ತಡೆ ನಡೆಸಿದ್ದು ನಿಜ. ಇದರ ವಿರುದ್ಧ ಪೊಲೀಸರು ಕೇಸು ಹಾಕಿದರು. ಈ ಪ್ರಕರಣಗಳು ನ್ಯಾಯಾಲಯದ ಹಂತದಲ್ಲಿರುವಾಗ ರೈತರು ವಿಚಾರಣೆ ವೇಳೆಗೆ (ಹೀಯರಿಂಗ್) ಹಾಜರಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಪೊಲೀಸರು ರೈತರ ಹೆಸರಿನಲ್ಲಿ ಅರೆಸ್ಟ್ ವಾರೆಂಟ್ ತಂದು, ಬೇಡಿ ಹಾಕಿಕೊಂಡು ಕರೆದುಕೊಂಡು ಹೋಗುವಷ್ಟು ನಿರ್ದಯಿಗಳಾಗಿದ್ದಾರೆ ಎಂದರೆ ಇದಕ್ಕಿಂತ ನಾಚಿಕೆಯ ಸಂಗತಿ ಮತ್ತೊಂದಿಲ್ಲ.
ಕಾವೇರಿ ನೀರಿಗಾಗಿ ಹೋರಾಟ ನಡೆಸಿದ ಸಾಮಾನ್ಯ ರೈತರು ಈಗ ಸೆರೆಮನೆ ಸೇರುತ್ತಿದ್ದರೆ, ನಮ್ಮ ಜನ ನಾಯಕರು ಅರಮನೆಗಳಲ್ಲಿದ್ದಾರೆ. ಮಂಡ್ಯ ಜಿಲ್ಲೆಯ ಇಂಡುವಾಳು, ಗೆಜ್ಜಲಗೆರೆ, ಹನಕರೆ, ಬೂದನೂರು, ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಮದ್ದೂರು ಪಟ್ಟಣ ಸೇರಿದಂತೆ ಅನೇಕ ಹಳ್ಳಿಗಳ ರೈತರ ಸ್ಥಿತಿ ಕಾವೇರಿ ಹೋರಾಟ, ರಸ್ತೆ, ರೈಲು ತಡೆಯಂತಹ ಪ್ರತಿಭಟನೆಯಿಂದಾಗಿ ಹಿಂಡಿ ಹಿಪ್ಪೆಯಾಗಿದೆ. ಬಾಳೆ ಹಣ್ಣು ತಿಂದವರು ತಪ್ಪಿಸಿಕೊಂಡ, ಸಿಪ್ಪೇ ತಿಂದವರು ಸಿಕ್ಕಿ ಹಾಕಿಕೊಂಡರು ಎನ್ನುವ ಸ್ಥಿತಿಯನ್ನು ರೈತರು ಎದುರಿಸುತ್ತಲೇ ಇದ್ದಾರೆ.
ಕಾವೇರಿ ನದಿ ನೀರನ್ನು ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ ಬಿಡಲಾಗುತ್ತಿದೆ. ಆದರೆ, ಇಲ್ಲಿ ನೀರಿನ ಹಕ್ಕಿಗಾಗಿ ನಡೆಸಿದ ಹೋರಾಟ, ಪ್ರತಿಭಟನೆಯಿಂದಾಗಿ ರೈತರು, ಹೋರಾಟಗಾರರು ನ್ಯಾಯಾಲಯಕ್ಕೆ ಅಲೆಯುವಂತೆ ಆಗಿದೆ. ಪ್ರತಿ ಬಾರಿಯೂ ಕಾವೇರಿ ಹೋರಾಟಕ್ಕೆ ನಾಂದಿ ಹಾಡುವ ಮಂಡ್ಯ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ ಸಂಕಷ್ಟದಲ್ಲಿರುವ ಯಾವ ರೈತನ ನೆರವಿಗೂ ಬರುತ್ತಿಲ್ಲ. ರಸ್ತೆ, ರೈಲು ತಡೆ ಮಾಡಿಸುತ್ತಾರೆ. ಮನೆಗೊಬ್ಬ ಆಳು ಕಳುಹಿಸಿ ಕೆ.ಆರ್.ಎಸ್. ಗೇಟ್ಗೆ ಬೀಗ ಹಾಕೋಣ ಎಂದು ಕರೆ ಕೊಡುತ್ತಾರೆ. ಆದರೆ, ಪ್ರತಿಭಟನೆ, ರಸ್ತೆ, ರೈಲು ತಡೆ ಮಾಡಿದ ರೈತರ ಹಾಗೂ ಜನ ಸಾಮಾನ್ಯರ ವಿರುದ್ಧ ಪೊಲೀಸರು ಕೇಸು ಹಾಕಿದ ಮೇಲೆ ಯಾವ ನಾಯಕರೂ ರೈತರ ಕಷ್ಟ ಅಥವಾ ಕಾನೂನಿನ ನೆರವಿಗಾಗಲಿ ಬರುವುದಿರಲಿ, ರೈತರತ್ತ ತಿರುಗಿ ಸಹ ನೋಡದೇ ಇರುವುದು ವಿಪರ್ಯಾಸ.
ರೈತನಿಗೆ ಬೇಡಿ ಹಾಕಿ ಕರೆದುಕೊಂಡು ಘಟನೆ ನಂತರ ಮತ್ತೊಂದು ಕಾವೇರಿ ಚಳವಳಿ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ರೈತನೊಬ್ಬ ನೀಡಿದ ಪ್ರತಿಕ್ರಿಯೆ ಹೀಗಿತ್ತು. ಕಾವೇರಿ ಚಳವಳಿ, ಹೋರಾಟಗಳನ್ನೇ ಕೆಲವರು ಮಾರಿಕೊಂಡಿದ್ದಾರೆ. ಮತ್ತೆ ಕೆಲವರು ಲಾಭ ಮಾಡಿಕೊಂಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಚಳವಳಿಗೆ ಧುಮಿಕಿದವರೂ ಬಹಳಷ್ಟು ಮಂದಿ ಇದ್ದಾರೆ. ನಾವು ಅಮಾಯಕರು, ನೀರಿಗಾಗಿ ಹೋರಾಡಿದೆವು. ಆಗ ನೀರು ಹೋಯ್ತು, ಈಗ ನಮ್ಮ ಮಾನವೂ ಹರಾಜು ಆಗ್ತಾದೆ. ಇವೆಲ್ಲವನ್ನೂ ಮುಂದೆ ನಿಂತು ರೈತರನ್ನು ಹಿತರಕ್ಷಣೆ ಮಾಡಬೇಕಾದ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮೂಲ ಉದ್ದೇಶವೇ ಬುಡಮೇಲಾಗಿದೆ ಎಂದು ಚಳವಳಿ, ಹೋರಾಟಗಳನ್ನು ಕುರಿತು ಆ ರೈತನ ಮನಸ್ಸಿನಲ್ಲಿದ್ದ ನೋವು, ನಿರಾಶೆ, ಹತಾಶೆಯ ಜಿಲ್ಲೆಯ ಅಮಾಯಕ ರೈತ ಸುಮುದಾಯವನ್ನೇ ಪ್ರತಿನಿಧಿಸುವಂತಿತ್ತು.
1991- 92ರಿಂದಲೂ ಮಂಡ್ಯದಲ್ಲಿ ಕಾವೇರಿ ಹೋರಾಟದ ಕಾವು ಇದ್ದೇ ಇದೆ. ನಂತರ 2000 ರಿಂದ 2003 ರವರೆಗೆ ಮತ್ತೆ 2007 ರಲ್ಲಿ ಕಾವೇರಿ ಹೋರಾಟ ತೀವ್ರತೆ ಪಡೆದುಕೊಂಡಿತ್ತು. ತಮಿಳುನಾಡಿನಲ್ಲಿ ಜಯಲಲಿತಾ ಮುಖ್ಯಮಂತ್ರಿ ಆಗಿರುವ ವರ್ಷಗಳಲ್ಲಿ ಕಾವೇರಿ ಸಮಸ್ಯೆಯೂ ಉಲ್ಭಣ, ಹೋರಾಟ, ಪ್ರತಿಭಟನೆಗಳೂ ನಿರಂತರವಾಗಿವೆ. ಹೀಗಾಗಿ, ರೈತ ಮೇಲಿನ ಕೇಸುಗಳೂ ಕೂಡ ಸಾಕಷ್ಟಿವೆ. ಒಂದು ಅಂದಾಜಿನ ಪ್ರಕಾರ 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ 150 ಕ್ಕೂ ಹೆಚ್ಚು ರೈತರು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿವೆ. ಇವು ಮಾತ್ರವಲ್ಲದೇ ರಾಜ್ಯ ಪೊಲೀಸರು ಕೂಡ ರೈತರ ಮೇಲೆ ಕೇಸುಗಳನ್ನು ಹಾಕು ರೈತನನ್ನು ಹಣ್ಣುಗಾಯಿ, ನೀರುಗಾಯಿ ಮಾಡಿದ್ದಾರೆ.
ಈ ಹಿಂದಿನ ಬಿಜೆಪಿ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ ಅವರು ರೈತರ ಮೇಲಿನ ಕೇಸುಗಳನ್ನು ಹಿಂದಕ್ಕೆ ಪಡೆಯುವ ಪ್ರಸ್ತಾಪ ಮಾಡಿದರು. ರೈತರ ಕಣ್ಣೀರು ವರೆಸುವ ಮಾತುಗಳನ್ನು ಆಡಿದರೆ ವಿನಃ ಯಾವ ನಿರ್ಧಾರನ್ನು ಸರಿಯಾಗಿ ಮಾಡಲಿಲ್ಲ. ಆ ನಂತರ ಬಂದ ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೂ ಕೂಡ ಆ ಪ್ರಕ್ರಿಯೆಗೆ ಮಾತ್ರ ಯಾವುದೇ ಮುಕ್ತಿ ದೊರೆಯಲಿಲ್ಲ. ರೈತರ ಅಲೆದಾಟವು ಇನ್ನೂ ತಪ್ಪಿಲ್ಲ.
ಅದೇ ರೀತಿಯಲ್ಲಿ ಕೇಂದ್ರದಲ್ಲಿ ಮುನಿಯಪ್ಪ ರೇಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದಾಗ ಜಿಲ್ಲಾ ಕಾಂಗ್ರೆಸ್ ನಾಯಕರು ಸೇರಿದಂತೆ ರೈತ ಮುಖಂಡರು ಹಲವಾರು ಬಾರಿ ಮನವಿ ಸಲ್ಲಿಸಿ, ರೇಲ್ವೆ ಪೊಲೀಸರು ಹಾಕಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಳ್ಳಿ ಎಂದು ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈಗ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಕೇಂದ್ರದಲ್ಲೂ ಕೂಡ ನಮ್ಮವರೇ ಆಗ ಮಲ್ಲಿಕಾರ್ಜುನ ಖರ್ಗೆ ರೇಲ್ವೆ ಮಂತ್ರಿಗಳಾಗಿದ್ದಾರೆ. ಮುಖ್ಯಮಂತ್ರಿಗಳು ಮನಸ್ಸು ಮಾಡಿ ರೈತರಿಗೆ ಬಂದೊದಗಿರುವ ಸಂಕಷ್ಟವನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲದೇ ಹೋದರೆ ಸಾಮಾನ್ಯ ರೈತ ನ್ಯಾಯಾಲಯಕ್ಕೆ ಅಲೆದು ಅಲೆದು ಸೋತು ಸುಣ್ಣವಾಗುತ್ತಾನೆ.
ರಾಜ್ಯ ಸರ್ಕಾರ ರೈತ ಸಾಲ ಮನ್ನಾ, ರೈತರಿಗೆ ಉಚಿತ ವಿದ್ಯುತ್ ನೀಡಿಕೆ, ಬೀಜ ಗೊಬ್ಬರಕ್ಕೆ ಸಬ್ಸಿಡಿ, ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ರೈತನಿಗೆ ಬದುಕಿಗೆ ಆಶ್ರಯ ನೀಡುವಂತೆ ರಾಜ್ಯದಲ್ಲಿ ಕಾವೇರಿ ಹೋರಾಟ ಸೇರಿದಂತೆ ಯಾವುದೇ ಸಾಮಾಜಿಕ ಕಳಕಳಿಯ ಹೋರಾಟದಲ್ಲಿ ಬಾಗಿಯಾಗಿರುವ ರೈತರು, ಕನ್ನಡಪರ ಸಂಘಟನೆಗಳ ನಾಯಕರು, ಕಾರ್ಯಕರ್ತರು, ಹಾಗೂ ಕೆಲವು ಕಡೆ ಜನ ಸಾಮಾನ್ಯರ ಮೇಲೆ ಹಾಕಿರುವ ಕೇಸುಗಳನ್ನು ಹಿಂತೆಗೆದುಕೊಂಡು ಉಪಕಾರ ಮಾಡಿದರೆ ಸಾಕು ಎನ್ನುವ ಸ್ಥಿತಿಗೆ ರೈತರು ಬಂದು ನಿಂತಿದ್ದಾರೆ.
- ಕೆ.ಎನ್.ರವಿ, ಕನ್ನಡಪ್ರಭ