ಅಂಕಣಗಳು

ದೆಹಲಿಯಲ್ಲಿ ನಡೆಯಲಿದೆ ಆಮ್ ಆದ್ಮಿ ಪಕ್ಷದ ಮೊದಲ ಪರೀಕ್ಷೆ

ಕೆಲವು ವರ್ಷಗಳ ಹಿಂದೆ ಅಣ್ಣಾ ಹಜಾರೆಯವರು ಕೈಗೊಂಡ ಭ್ರಷ್ಟಾಚಾರದ...

ಕೆಲವು ವರ್ಷಗಳ ಹಿಂದೆ ಅಣ್ಣಾ ಹಜಾರೆಯವರು ಕೈಗೊಂಡ ಭ್ರಷ್ಟಾಚಾರದ ವಿರುದ್ಧದ ಸಮರ ದೇಶವನ್ನು ಬಡಿದೆಬ್ಬಿಸಿತು. ಮಧ್ಯಮ ವರ್ಗ, ಅದರಲ್ಲೂ ವಿದ್ಯಾವಂತ ಯುವ ಸಮೂಹ ಅಣ್ಣಾರ ಹಿಂದೆ ಸಾಲುಗಟ್ಟಿ ನಿಂತಿತು. ಇಂಥ ಬಂಡಾಯಕ್ಕೆ ಹಿಂದೆಂದೂ ಸ್ವತಂತ್ರ ಭಾರತ ಸಾಕ್ಷಿಯಾಗಿರಲಿಲ್ಲ. ನಾಗರಿಕರ ಈ ಆಂದೋಲನ ಭ್ರಷ್ಟ ಅಧಿಕಾರಿಗಳ ಬೆನ್ನೆಲುಬನ್ನು ಥರಗುಟ್ಟುವಂತೆ ಮಾಡಿತು, ಸರ್ಕಾರವನ್ನು ಬೇರುಸಹಿತ ಅಲ್ಲಾಡಿಸಿತು.
ಅಂಥ ಬೃಹತ್ ಆಂದೋಲನವನ್ನು ಬಹಳ ಸಮಯದವರೆಗೆ ಕಾಪಾಡಿಕೊಂಡು ಹೋಗುವುದು ದೊಡ್ಡ ಸವಾಲಾಗಿತ್ತು. ಕೆಲವೇ ದಿನಗಳಲ್ಲಿ ಈ ಆಂದೋಲನ ಎರಡು ಭಾಗವಾಯಿತು. ಕೆಟ್ಟ ರಾಜಕಾರಣಕ್ಕೆ ಒಳ್ಳೆಯ ರಾಜಕಾರಣವೇ ಸೂಕ್ತ ಉತ್ತರವಾಗಬಲ್ಲದು, ಹಾಗಾಗಿ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿ, ಸಂಸ್ಥೆಯನ್ನು ಒಳಗಿನಿಂದಲೇ ಸ್ವಚ್ಛಗೊಳಿಸುವ ಕೆಲಸ ಮಾಡಬೇಕು ಎಂದು ಒಂದು ವರ್ಗ ಭಾವಿಸಿತು. ಈ ಕಾರಣದಿಂದಾಗಿಯೇ ಹುಟ್ಟಿಕೊಂಡಿತು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ. ಇನ್ನೊಂದೆಡೆ ಅಣ್ಣಾ ಹಜಾರೆಯವರ ತಂಡ, 'ಒಮ್ಮೆ ಈ ಆಂದೋಲನ ರಾಜಕೀಯ ಧಿರಿಸು ಹಾಕಿಕೊಂಡಿತೆಂದರೆ, ನಿಸ್ಸಂಶಯವಾಗಿ ಅದು ನೆಲ ಹಿಡಿಯಲಿದೆ' ಎಂದು ಭಾವಿಸಿತು.
ಈಗ ಎಎಪಿಯ ಕಣ್ಣು ದೆಹಲಿಯ ಮೇಲಿದೆ. ಈ ವರ್ಷ ನವೆಂಬರ್ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸೆಣಸಲು ಅದು ತಯಾರಿ ನಡೆಸಿದೆ. ಆಮ್ ಆದ್ಮಿ ಪಕ್ಷಕ್ಕೆ ದೆಹಲಿ ಯಾವ ರೀತಿಯ ಪ್ರತಿಕ್ರಿಯೆ ತೋರಿಸಲಿದೆ ಎನ್ನುವುದರ ಮೇಲೆ, ಆ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಭವಿಷ್ಯ ನಿಂತಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ನಂತಹ ಬಲಿಷ್ಠ ಪಕ್ಷಗಳೊಂದಿಗೆ ಸೆಣಸಲು ಅದಕ್ಕೆ ಸಾಧ್ಯವೇ? ದೆಹಲಿಗರು ಆಪೇಕ್ಷಿಸುತ್ತಿರುವ ಬದಲಾವಣೆಯನ್ನು ಕೇಜ್ರಿವಾಲರ ಪಕ್ಷ ಕೊಡಬಲ್ಲದೇ? ತಾನು ಅಖಾಡಕ್ಕಿಳಿಸಿದ ಅಭ್ಯರ್ಥಿಗಳ ಮೇಲೆ ಅದಕ್ಕೆ ಭರವಸೆಯಿದೆಯೇ?
ಕೇಜ್ರಿವಾಲ್ ಭರವಸೆ ಹೊಂದಿದ್ದಾರೆ. ದೆಹಲಿ ಜನರು ತಮ್ಮನ್ನು ಗೆಲ್ಲಿಸಿದರೆ, ಇದೇ ಮಾರ್ಗವನ್ನೂ ಮುಂದೆ ಇಡೀ ದೇಶ ಅನುಸರಿಸಲಿದೆ ಎನ್ನುವುದು ಅವರ ನಂಬಿಕೆ. ಜನರು ಇಂಥ ಪಕ್ಷಗಳನ್ನು ಮುಕ್ತವಾಗಿ ಬೆಂಬಲಿಸುತ್ತಾರೆ. ಅದರಲ್ಲೂ ಚುನಾವಣಾ ಪ್ರಕ್ರಿಯೆಯ ಬಗ್ಗೆ ಸಾಮಾನ್ಯವಾಗಿ ಅನಾಸಕ್ತಿ ತೋರಿಸುವ ನಗರದ ವಿದ್ಯಾವಂತ ಮತದಾರರು ಈ ಬಾರಿ ಒಂದು ಕೈ ನೋಡಲು ಸಿದ್ಧರಿದ್ದಾರೆ. ಈಗಿರುವ ಸರ್ಕಾರಗಳಿಗಿಂತ ಭಿನ್ನವಾಗಿ ಯೋಚಿಸುವ ಪಕ್ಷದ ಅಗತ್ಯ ದೇಶಕ್ಕಿದೆ ಎನ್ನುವುದು ಅವರಿಗೆ ತಿಳಿದಿದೆ. ನುಡಿದಂತೆ ನಡೆಯುವ, ನಾಗರಿಕ ಕೇಂದ್ರಿತ ಆಡಳಿತ ನೀಡುವ, ಭ್ರಷ್ಟಾಚಾರದ ವಿರುದ್ಧ ತೊಡೆ ತಟ್ಟುವ, ಚುನಾವಣಾ ಸುಧಾರಣೆಯನ್ನು ತರುವ, ಕ್ರಿಮಿನಲ್‌ಗಳನ್ನು ರಾಜಕೀಯದಿಂದ ಹೊರಗಿಡುವ, ಎಲ್ಲರಿಗೂ ಸಾಮಾಜಿಕ ಸಮಾನತೆ, ಆರೋಗ್ಯ ಮತ್ತು ಶಿಕ್ಷಣ ತಲುಪುವಂತೆ ಮಾಡುವ ಪಕ್ಷ ವಿದ್ಯಾವಂತ ನಾಗರಿಕರಿಗೆ ಬೇಕಿದೆ. ಆದರೆ ಮತದಾನದ ವಿಷಯ ಬಂದಾಗ ಮಾತ್ರ, ಸಕಾರಣವಿಲ್ಲದೇ ಇವರು ಹೊರಗುಳಿದುಬಿಡುತ್ತಾರೆ.
ಈ ವರ್ಷ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಇಂಥದ್ದನ್ನು ನೋಡಿದ್ದೇವೆ. ಆಮ್ ಆದ್ಮಿ ಪಕ್ಷಕ್ಕಿಂತ ಬಹಳ ಹಿಂದೆಯೇ ಜನ್ಮತಾಳಿದ, ಆದರೆ ಅದೇ ರೀತಿಯ ಸಾಮರ್ಥ್ಯ ಹೊಂದಿರುವ ಈ ಪಕ್ಷ ಬೆಂಗಳೂರಿನಲ್ಲಿ ಎಲ್ಲಾ 28 ಸ್ಥಾನಗಳಿಗೂ ಸ್ಪರ್ಧಿಸಿತ್ತು. ಈ ಪಕ್ಷವನ್ನು ಹುಟ್ಟುಹಾಕಿದವರು ಡಾ. ಜಯಪ್ರಕಾಶ್ ನಾರಾಯಣ್. 16 ವರ್ಷಗಳು ಐಎಎಸ್ ಅಧಿಕಾರಿಯಾಗಿ ದುಡಿದ ಅವರು ಕೊನೆಗೆ ಜನರ ಸೇವೆಗಾಗಿ ಅಷ್ಟು ವರ್ಷದ ತಮ್ಮ ಕೆಲಸ ಬಿಟ್ಟು ಈ ಪಕ್ಷವನ್ನು ಹುಟ್ಟುಹಾಕಿದರು. ಆಮ್ ಆದ್ಮಿ ಪಕ್ಷದಂತೆಯೇ ಲೋಕಸತ್ತಾ ಕೂಡ ಮೊದಲು ಆಂದೋಲನದ ರೂಪದಲ್ಲಿಯೇ ಶುರುವಾಗಿ ನಂತರ ರಾಜಕೀಯ ರೂಪ ತಾಳಿತು. ಆ ಪಕ್ಷದ ಪಾಲಿಸಿಗಳು ಬೆಂಗಳೂರಿನ ಜನರ ಆಸಕ್ತಿಯನ್ನಂತೂ ಕೆರಳಿಸಿದ್ದವು. ನಾಗರಿಕ ಕೇಂದ್ರಿತ, ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುವುದೇ ತಮ್ಮ ಗುರಿ ಎಂದು ಲೋಕಸತ್ತಾ ಹೇಳಿಕೊಂಡಿತ್ತು. ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಷ್ಟೇ ಅಲ್ಲದೆ, ಜನರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಾಯಿಸುವಂತೆ ಮಾಡುವಲ್ಲೂ ಈ ಪಕ್ಷ ಬಹುವಾಗಿ ಶ್ರಮಿಸಿತು.
ಆದರೆ ಮತದಾನದ ಸಮಯ ಬಂದಾಗ ಬಹಳಷ್ಟು ಮತದಾರರು ಹಿಂದಕ್ಕೆ ಸರಿದು, ಮೊದಲಿನಿಂದಲೂ ಗಟ್ಟಿಯಾಗಿ ತಳವೂರಿದ್ದ ಪಕ್ಷಗಳಿಗೇ ಮತ ನೀಡಿದರು. ಲೋಕಸತ್ತಾದ ಎಲ್ಲಾ ಅಭ್ಯರ್ಥಿಗಳೂ ಸೋಲನುಭವಿಸಿದರು. ಆದರೆ ಒಂದು ಗುಣಾತ್ಮಕ ಬದಲಾವಣೆಯೆಂದರೆ ಅಭ್ಯರ್ಥಿಗಳು ಸೋತರೂ ಕೂಡ ಉತ್ತಮ ಮತವನ್ನೇ ಪಡೆದಿದ್ದರು. ಕೆಲವು ಸ್ಥಾನಗಳಲ್ಲಂತೂ ಅವರು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿ ಮೂರನೇ ಸ್ಥಾನ ಪಡೆದುಕೊಂಡರು.
ದೆಹಲಿ ಮತದಾರರು ಬೆಂಗಳೂರಿಗರಿಗಿಂತ ಭಿನ್ನವಾಗಿ ಮತ ನೀಡಲಿದ್ದಾರಾ? ಕಾಂಗ್ರೆಸ್ ಮತ್ತು ಬಿಜೆಪಿಗೆ ಆಮ್ ಆದ್ಮಿ ಪಕ್ಷ ಶಾಕ್ ನೀಡಲಿದೆಯೇ ಎಂಬುದನ್ನು ಕಾದು ನೋಡಲೇಬೇಕು. ಆ ಪಕ್ಷ ನೀಡುತ್ತಿರುವ ಭರವಸೆಗಳೇನಿವೆಯೋ ನೋಡೋಣ:

- ಕ್ರಿಮಿನಲ್‌ಗಳಿಗೆ ಟಿಕೆಟ್ ಕೊಡುವುದಿಲ್ಲ
- ಪಕ್ಷದ ನಾಯಕರ ಮಗ/ಮಗಳಿಗೆ ಟಿಕೆಟ್ ಕೊಡುವುದಿಲ್ಲ
- ಒಂದೇ ಕುಟುಂಬದ ಇಬ್ಬರಿಗೆ ಟಿಕೆಟ್ ಕೊಡುವುದಿಲ್ಲ
- ಹಣಕ್ಕಾಗಿ ಟಿಕೆಟ್ ಮಾರುವುದಿಲ್ಲ
- ಉತ್ತಮ ಅಭ್ಯರ್ಥಿಗಳ ಆಯ್ಕೆಯಲ್ಲಿ ನಾಗರಿಕರು ಸಹಾಯ ಮಾಡಬಹುದು
- ಹಣದ ವ್ಯವಹಾರ ಸಂಪೂರ್ಣವಾಗಿ ಪಾರದರ್ಶಕವಾಗಿರಲಿದೆ

ನಾಗರಿಕರೊಂದಿಗೆ ಸಮಾಲೋಚಿಸಿ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುವುದು ಎಂದು ಕೇಜ್ರಿವಾಲ್ ಹೇಳುತ್ತಾರೆ, 'ಇದುವರೆಗೂ ಜನರೆದುರು ಆಯ್ಕೆಗಳಿರಲಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಯಾವುದಾದರೊಂದನ್ನು ಆರಿಸಬೇಕಿತ್ತು. ಇದು ತಳವಿಲ್ಲದ ಸಮುದ್ರ ಮತ್ತು ದೆವ್ವದ ನಡುವೆ ಒಂದನ್ನು ಆರಿಸಿಕೋ ಎಂದಂತೆ. ಬಿಜೆಪಿ ಮತ್ತು ಕಾಂಗ್ರೆಸ್‌ನಂಥ ಭ್ರಷ್ಟ ಪಕ್ಷಗಳಿಗೆ ಜನ ಈ ಬಾರಿ ಮಣೆ ಹಾಕುವುದಿಲ್ಲ ಎನ್ನುವ ನಂಬಿಕೆ ನಮಗಿದೆ. ಭಾರತದ ಮತದಾರ ಬದಲಾಗುತ್ತಾನೆ ಎನ್ನುವ ಭರವಸೆಯಲ್ಲಿ ನಾವಿದ್ದೇವೆ'.
ತಮ್ಮ ಪಕ್ಷ ಮತ್ತು ಅದರ ನೀತಿಗಳ ಬಗ್ಗೆ ದೆಹಲಿಗರಲ್ಲಿ ಜಾಗೃತಿ ಮೂಡಿಸಲು ಕೇಜ್ರಿವಾಲ್ ಬೃಹತ್ ಪ್ರಚಾರವನ್ನೇ ಕೈಗೊಂಡಿದ್ದಾರೆ. ಸತತ ಮೂರು ಅವಧಿಯಿಂದ ದೆಹಲಿಯ ಚುಕ್ಕಾಣಿ ಹಿಡಿದಿರುವ ಶೀಲಾ ದೀಕ್ಷಿತರ ಸರ್ಕಾರದ ವಿರುದ್ಧ ಕೇಜ್ರಿವಾಲ್ ಯುದ್ಧ ಸಾರಿದ್ದಾರೆ. ನಿಜ ಹೇಳಬೇಕೆಂದರೆ ದೀಕ್ಷಿತ್ ಅವರ ವಿರುದ್ಧ ಸೆಣೆಸಲು ಅವರು ಸಿದ್ಧರಾಗುತ್ತಿದ್ದಾರೆ.
ಆಮ್ ಆದ್ಮಿ ಪಕ್ಷದ ಪರೀಕ್ಷೆ ದೆಹಲಿಯಲ್ಲಿ ನಡೆಯಲಿದೆ. ಆ ಚುನಾವಣೆಯಲ್ಲಿ ಅದು ಹೇಳಿಕೊಳ್ಳುವಂಥ ಮತಗಳನ್ನು ಗೆದ್ದರೂ ಸಾಕು, 2014ರ ಚುನಾವಣೆಗಳಲ್ಲಿ ದೊಡ್ಡ ಛಾಪು ಮೂಡಿಸುವ ಛಾತಿ ಅದಕ್ಕೆ ಬರುತ್ತದೆ. ಆದರೆ ಅದೆಲ್ಲ ಸಾಧ್ಯವಾಗುವಂಥದ್ದೇ? ಸಾಮಾನ್ಯವಾಗಿ, ಆಂದೋಲನಗಳಿಗೆ ಜನ ತುಂಬು ಹೃದಯದಿಂದ ಬೆಂಬಲ ನೀಡುತ್ತಾರೆ. ಆದರೆ ಅವು ರಾಜಕೀಯ ಪಕ್ಷಗಳಾಗಿ ಬದಲಾದಾಗ ಜನತೆ ಅದರಿಂದ ದೂರವಾಗುತ್ತಾರೆ. ಆಮ್ ಆದ್ಮಿ ಪಕ್ಷ ಈ ಮನಸ್ಥಿತಿಯನ್ನು ಬದಲಿಸುವುದಾ? ಚೆಂಡು ಈಗ ಮತದಾರರ ಅಂಗಳದಲ್ಲಿ ಬಂದು ಬಿದ್ದಿದೆ...

ಕೊನೆಯ ಗುಟುಕು: ಗುಟ್ಕಾ ನಿಷೇಧ ನಗೆ ನಾಟಕವೇ?
ಗುಟ್ಕಾ ನಿಷೇಧ ಪ್ರಹಸನವಾಗಿ ಬದಲಾಗಿದೆ. ಗುಟ್ಕಾದಿಂದ ತಂಬಾಕು ಪದಾರ್ಥವನ್ನು ಬೇರ್ಪಡಿಸಿ ಪ್ರತ್ಯೇಕವಾಗಿ ಮಾರತೊಡಗಿದ್ದಾರೆ ಪಾನ್‌ವಾಲಾಗಳು. ಹೇಗಿದ್ದರೂ ತಂಬಾಕು ಮಾರಾಟದ ಮೇಲೆ ನಿಷೇಧವಿಲ್ಲವಲ್ಲ! ಜನರು ಪಾನ್ ಮಸಾಲಾ ಮತ್ತು ತಂಬಾಕನ್ನು ಪ್ರತ್ಯೇಕವಾಗಿ ಖರೀದಿಸಿ, ಎರಡನ್ನೂ ಮಿಕ್ಸ್ ಮಾಡಿ ತಿನ್ನುತ್ತಿದ್ದಾರೆ. ಈಗ ಪರಿಸ್ಥಿತಿ ಮೊದಲಿನಂತೆಯೇ ಆಗಿದೆ. ಈ ಪ್ರಹಸನಕ್ಕೆ ಮುಕ್ತಾಯ ಬರೆಯುವರಾ ಮುಖ್ಯಮಂತ್ರಿಗಳು?

- ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ಹಣದುಬ್ಬರ ಶೇ.5.2; ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಆಹಾರ, ಇಂಧನ ಬೆಲೆ ಏರಿಕೆ!

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ