ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಭಾಷಣ
ಮೈಸೂರು ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಲವಾಲದಲ್ಲಿ ವ್ಯವಸ್ಥೆಯಾಗಿತ್ತು. ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದವರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ. ಮೊದಲಿಗೆ ಸ್ವಾಗತಕ್ಕೆ ನಿಂತ ಇವರು, ಚುನಾವಣಾಪೂರ್ವ, ಚುನಾವಣೋತ್ತರ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾತಾಡಿದರು. ತಮ್ಮ ಆಯ್ಕೆಗೆ ಹಾಗೂ ಈ ಸಮ್ಮೇಳನ ಆಯೋಜಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಎಲ್ಲಾ ಮುಗಿದ ನಂತರ ಇದು ಸಾಹಿತ್ಯ ಸಮ್ಮೇಳನ. ಹೀಗಾಗಿ ರಾಜಕೀಯ ಭಾಷಣ ಬೇಡ. ಇಲ್ಲಿಗೆ ವಿರಮಿಸುತ್ತೇನೆ ಎಂದಾಗ ಸಭೆಯಲ್ಲಿ ನಗುವಿನ ಅಲೆ. ಏಕೆಂದರೆ ಅವರು ಹೇಳೊದನ್ನೆಲ್ಲಾ ಹೇಳಿ ಆಗಿತ್ತು. ಹೇಳಲು ಇನ್ನೇನು ಉಳಿದಿರಲಿಲ್ಲ.
ಸನ್ಮಾನ ಬೇಡ ಅಂದ್ರು ಬಿಡ್ತಾ ಇಲ್ಲ ಮಾರಾಯ್ರೆ
ಮಂತ್ರಿಗಳು ಯಾವುದೇ ಸನ್ಮಾನ ಸ್ವೀಕರಿಸಬಾರದು. ಹಾರ- ತುರಾಯಿ ಹಾಕಿಸಿಕೊಳ್ಳಬಾರದೆಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರು ಫರ್ಮಾನು ಹೊರಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ಯಾರೂ ಸನ್ಮಾನ ಮಾಡಬಾರದು, ಯಾರೂ ಕಾಲಿಗೆ ಬೀಳಬಾರದು ಎಂದು ಹೇಳಿದ್ದಾರೆ. ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕು ತಲಕಾಡು ಗಂಗಸಾಮ್ರಾಟ್ ಸಂಶೋಧನಾ ಕೇಂದ್ರದವರು ಸಿಎಂ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲು ಉದ್ದೇಶಿಸಿ ಹೋಗಿ ಕೇಳಿದಾಗ ಅವರು ನಿರಾಕರಿಸಿದರು. ಹೀಗಾಗಿ ಈ ಕೇಂದ್ರದ ಪದಾಧಿಕಾರಿಗಳು ಅವರ ಬಲಗೈ- ಎಡಗೈ ಎಂದೇ ಗುರುತಿಸಿಕೊಂಡಿರುವ ಕಟ್ಟಾ ಬೆಂಬಲಿಗ ಸಚಿವರಾದ ವಿ. ಶ್ರೀನಿವಾಸಪ್ರಸಾದ್ ಹಾಗೂ ಡಾ.ಎಚ್.ಸಿ. ಮಹದೇವಪ್ಪ ಅವರನ್ನು ಸನ್ಮಾನಿಸಲು ಮುಂದಾದರು. ಈ ಸಚಿವದ್ವಯರು ಕೂಡ ಉತ್ತರಾಖಂಡ ಜಲಪ್ರಳಯ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಲು ಒಪ್ಪಲಿಲ್ಲ. ಆದರೂ ಪದಾಧಿಕಾರಿಗಳು ಬಿಡಲಿಲ್ಲ. ಇದೀಗ ಹಿತೈಷಿಗಳ ಹಿತನುಡಿಯ ಹೆಸರಿನಲ್ಲಿ ಆಹ್ವಾನಿಸಿದರು. ಒಟ್ಟಾರೆ ನಮ್ ಜನ ಸನ್ಮಾನ ಬೇಡ ಅಂದ್ರು ಬಿಡ್ತಾ ಇಲ್ಲ, ಸಚಿವರನ್ನು ಕರೆಸಲು, ಓಲೈಸಲು ಬೇರೆ ದಾರಿ ಹುಡುಕುತ್ತಿದ್ದಾರೆ.
ಅಯ್ಯೋ.. ನಾನು ಹಾರದ ಭಾರ ಹೊರಲಾರೆ!
ನೂತನ ಸಚಿವರಾಗಿ ಹೊಸ ಉಮೇದಿನಲ್ಲಿರುವ ಟಿ.ಬಿ. ಜಯಚಂದ್ರ ಸಾಹೇಬರಿಗೆ ಅವರ ಅಭಿಮಾನಿಗಳು ಹಾರ, ತುರಾಯಿ ಹಿಡಿದು ಓಡಾಡುವುದು ಸಾಮಾನ್ಯವಾಗಿದೆ. ಪ್ರತಿ ಕಾರ್ಯಕ್ರಮಕ್ಕೂ ಬಂದಾಗಲೂ ಸಚಿವರ ಕೊರಳಿಗೆ ಅಭಿಮಾನಿ ದೇವರುಗಳು ಭಾರಿ ಗಾತ್ರದ ಹಾರ ಹಾಕಿ ಧನ್ಯರಾಗುತ್ತಿದ್ದಾರೆ. ಸಚಿವ ಜಯಚಂದ್ರ ಅವರಿಗೆ ಹಾರ ಹಾಕಿಸಿಕೊಳ್ಳುವುದು ಯಾಕೋ ಮುಜುಗರ ಎನಿಸಿತು. ಕಡೆಗೆ ಕಾರ್ಯಕ್ರಮವೊಂದರಲ್ಲಿ ಇನ್ನು ಮುಂದೆ ನನಗೆ ಹಾರ ಹಾಕಬೇಡಿ ಎಂದು ಫರ್ಮಾನು ಹೊರಡಿಸಿದರು. ಫರ್ಮಾನು ಹೊರ ಬಿದ್ದ ಬೆನ್ನಲ್ಲೇ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರು ಸಚಿವರ ಕೊರಳಿಗೆ ಹಾರ ಹಾಕಲು ಮುಂದಾದರು. ಜಯಚಂದ್ರ ಸಾಹೇಬರು ವಿನಮ್ರವಾಗಿ ಹಾರ ನಿರಾಕರಿಸಿದರು. ಆಮೇಲೆ ಒಂದಷ್ಟು ಆಪ್ತರು, ಪತ್ರಕರ್ತರೊಂದಿಗೆ ಹರಟುತ್ತಾ, 'ಈ ಹಾರದ್ದು ದೊಡ್ಡ ಸಮಸ್ಯೆಯಾಗಿದೆ. ನಮ್ಮ ಭಾಗದಲ್ಲಿ ಹೂವನ್ನು ಹೆಚ್ಚು ಹೆಚ್ಚು ಬೆಳೆಯುತ್ತಿದ್ದಾರೆ. ಹೇಗೂ ಹೂವು ಖರ್ಚಾಗ್ತಾ ಇಲ್ಲ. ಕಡೆಗೆ ಹೂವು ಕಟ್ಟಿ ನನ್ನ ಕೊರಳಿಗೆ ಹಾಕ್ತಾ ಇದ್ದಾರೆ. ನಾನಂತೂ ಹರಕೆಯ ಕುರಿಯಾಗಲಾರೆ' ಎಂದು ಜೋಕು ಸಿಡಿಸಿದರು!
'ನೀತಿ ಸಂಹಿತೆ ಶಾಸಕ' ಜೆ.ಟಿ. ಪಾಟೀಲ್
ತಮಗೆ ಸಹನೆಯಾಗದ ವಿಷಯಗಳು ಮಾಧ್ಯಮಗಳಲ್ಲಿ ಪ್ರಕಟವಾದಾಗ ಜನಪ್ರತಿನಿಧಿಗಳು ಮಾಧ್ಯಮಗಳ ವಿರುದ್ಧ ಉರಿದು ಬೀಳುವುದು, ಮಾಧ್ಯಮಗಳು ನೀತಿ ಸಂಹಿತೆ ಅಳವಡಿಸಿಕೊಳ್ಳಬೇಕು ಎಂದು ಬೋಧನೆ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಅಂಥವರ ಸಾಲಿಗೆ ಈಗ ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದ ಶಾಸಕ ಜೆ.ಟಿ. ಪಾಟೀಲ ಸೇರಿದ್ದಾರೆ. ಇತ್ತೀಚೆಗೆ ಪಾಟೀಲರ ತವರೂರು ಯಡಹಳ್ಳಿ ಗ್ರಾಮದಲ್ಲಿನ ಮೂಲಸೌಲಭ್ಯಗಳ ಕೊರತೆ, 13 ವರ್ಷಗಳಿಂದ ತಗಡಿನ ಶೆಡ್ಡಿನಲ್ಲಿ ಜೀವ ಕೈಯಲ್ಲಿ ಹಿಡಿದು ಬದುಕುತ್ತಿರುವ ಹಿನ್ನೀರು ಸಂತ್ರಸ್ತರ ಕರುಣಾಜನಕ ಕತೆ ಪ್ರಕಟವಾಗಿ ವರದಿಗಳು ಅತ್ಯಂತ ಜನಪ್ರಿಯವಾದವು. ಆದರೆ ಪಾಟೀಲರಿಗೆ ಇದು ಹಿಡಿಸಲಿಲ್ಲ. ಮೊನ್ನೆ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ, ಸಭೆಗೆ ಸಂಬಂಧವಿಲ್ಲದಿದ್ದರೂ ಮಾಧ್ಯಮಗಳು ನೀತಿ ಸಂಹಿತೆಅಳವಡಿಸಿಕೊಳ್ಳಬೇಕು ಎಂದು ಘೋಷಿಸಿಬಿಟ್ಟರು. ದಿನವೂ ಡಂಗೂರು ಸಾರುತ್ತಿದ್ದ ಶಾಸಕರ ಮಾತು ಕೇಳಿ ಎದುರಿಗಿದ್ದ ಪತ್ರಕರ್ತರಿಗೆ ಸಕತ್ ಐಡಿಯಾ ಹೊಳೆಯಿತು. ಜು.1 ಪತ್ರಿಕಾ ದಿನಾಚರಣೆ. ಅಂದು ಪತ್ರಿಕೆಗಳಿಗೆ ನೀತಿ ನಡವಳಿಕೆ ಬಗ್ಗೆ ಮಾತನಾಡವವರನ್ನು ಯಾರನ್ನು ಹುಡುಕಬೇಕು ಎಂದು ತಲೆ ಕೆರೆದುಕೊಳ್ಳುತ್ತಿದ್ದವರಿಗೆ ಶಾಸಕ ಪಾಟೀಲರೇ ಸೂಕ್ತ ಅತಿಥಿ ಎಂದು ಪತ್ರಕರ್ತ ಮಿತ್ರರೊಬ್ಬರಿಗೆ ಹೊಳೆಯಿತು. ಆಗ ಅವರು ಗುಂಪಿನ ಮಧ್ಯೆ 'ಪತ್ರಿಕಾ ದಿನಾಚರಣೆಯಂದು ಶಾಸಕರಿಂದ ನೀತಿ ಪಾಠ' ಎಂದು ಪಿಸುಗುಟ್ಟಿದರು. ಇದನ್ನು ಗಮನಿಸಿದ ಪಾಟೀಲರು ಅದೇನು ಅನಿಸಿತೋ ಗೊತ್ತಿಲ್ಲ. ವೇದಿಕೆಯಿಂದ ಹೊರ ನಡೆದರು. ಈಗ ಎದುರಾದಾಗಲೆಲ್ಲ 'ನೀತಿ ಸಂಹಿತೆ ಶಾಸಕರು' ಎನ್ನುವ ಹಣೆಪಟ್ಟಿ ಅಂಟಿರುವುದು ಹೊಸ ಸುದ್ದಿಯಾಗಿ ಹರಿದಾಡುತ್ತಿದೆ.
ಬಗಲಿ ದವಾಖಾನೆಗೆ ಪೇಷೆಂಟೇ ಬರ್ತಿಲ್ಲ!
ಎಂಎಲ್ಎ ಆದಾಗ ರೋಗಿಗಳಿಗೆ ಬೈದು ಸಾಗ ಹಾಕುತ್ತಿದ್ದ ಡಾ.ಬಗಲಿ ಸಾಹೇಬ್ರರು ಮಾಜಿ ಎಮ್ಮೆಲ್ಲೆಯಾದ ಮ್ಯಾಲೆ ಕೊರಳಲ್ಲಿ ಸ್ಟೆಥೆಸ್ಕೋಪ್ ಹಾಕಿಕೊಂಡು ತಮ್ಮ ದವಾಖಾನೆ ಮುಂದೆ ಕುಳಿತು ಬರ್ರೋಪಾ... ನಾನ್ ಮತ್ತ ಡಾಕ್ಟರ್ ಆಗೀನಿ... ನಿಮ್ಮ ರೋಗಕ್ಕ ತಪಾಸಣೆ ಮಾಡಿ ಔಷಧ ಕೊಡ್ತಿನಿ ಎಂದು ಗೋಗರೆಯುತ್ತಿದ್ದರು ಯಾರೂ ಅತ್ತ ಸುಳಿಯುತ್ತಿಲ್ಲ. ಹೀಗಾಗಿ ಡಾಕ್ಟರ್ ಬಗಲಿ ಸಾಹೇಬರಿಗೆ ಅತ್ತ ಎಮ್ಮೆಲ್ಲೆನೂ ಇಲ್ಲಾ.. ಇತ್ತ ಡಾಕ್ಟರ್ಗಿರಿನೂ ಇಲ್ದಾಂಗ ಆಗಿ ದಿಕ್ಕೆಟ್ಟು ಕೈ ಕೈ ಹಿಚುಕಿಕೊಳ್ಳುವಂತಾಗಿದೆ. 2008ರಲ್ಲಿ ಎಮ್ಮೆಲ್ಲೆಯಾಗಿ ಫುಲ್ ಖುಷಿಯಾಗಿದ್ದ ಡಾ. ಸಾರ್ವಭೌಮ ಬಗಲಿ ಐದು ವರ್ಷ ಶಾಸಕರಾಗಿ ಲೈಫ್ ಅನ್ನು ಎಂಜಾಯ್ ಮಾಡಿದ್ರು. ಎಮ್ಮೆಲ್ಲೆಯಾದ ಹೊಸದರಲ್ಲಿ ಹಳೆಯ ರೋಗಿಗಳು ಸಾಹೇಬ್ರ ನನ್ನ ಹೊಟ್ಟೆ ಬ್ಯಾನಿ ಭಾಳ ಆಗೇದ್ರಿ ಎಂದು ಹೇಳಲು ಹೋದರೆ ಲೇ... ಹೋಗ್ಲೆ ಮಗ್ನ ನಾನೀಗ ಡಾಕ್ಟ್ರ ಅಲ್ಲ. ಎಮ್ಮೆಲ್ಲೆ, ಎಮ್ಮೆಲ್ಲೆ ಆಗೀನ... ಅಲ್ಲಿ ನನ್ನ ಮಗಾ ಡಾಕ್ಟ್ರ ಅದಾನ ಅವ್ನಗ ತೋರಿಸಿಕೊಂಡು ಹೋಗ್ರಿ ಎಂದು ಏರಿದ ಧ್ವನಿಯಲ್ಲಿ ಗದರಿಸಿ ರೋಗಿಗಳನ್ನು ಮುಂದೆ ಸಾಗ ಹಾಕುತ್ತಿದ್ದರು. ಈಗ ಮತ್ತೆ 'ಹಳೆ ಗಂಡನ ಪಾದವೇ ಗತಿ' ಎಂದು ಸ್ಟೆಥಾಸ್ಕೋಪ್ ಹಿಡಿದು ಪ್ರಾಕ್ಟೀಸ್ಗೆ ನಿಂತು ಬಿಟ್ಟಿದ್ದಾರೆ!
- ನಂಬಿರಾಜ್