ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬೋಧ್ ಗಯಾ: ನಮ್ಮ ನಿರ್ಲಕ್ಷ್ಯಕ್ಕೆ ಎಲ್ಲೆ ಇಲ್ಲಯ್ಯಾ!

Mainashree
Updated On : 9 Jul 2013, 12:04 pm

ಇದು ನಮಗೆಲ್ಲ ಗೊತ್ತಿರುವ ವ್ಯಥೆಯ ಕತೆಯೇ. ಬೋಧ್ ಗಯಾದಲ್ಲಿ ನಡೆದ ಬಾಂಬ್ ಸ್ಫೋಟದ ಒಡಲಾಳದಲ್ಲಿರುವುದೂ ಅದೇ ಹಳೆಯ ಜಾಯಮಾನದ ನಿರ್ಲಕ್ಷ್ಯ ಮತ್ತು ಅಸಾಮರ್ಥ್ಯಗಳ ಹತಾಶ ಅಲವರಿಕೆ.
ದೇವಾಲಯದ ಮೇಲೆ ದಾಳಿ ಸಂಘಟಿಸುವುದಕ್ಕೆ ಸಂಚು ರೂಪುಗೊಂಡಿದೆ ಎಂಬುದು ಭಾರತದ ಪೊಲೀಸ್ ಪಡೆ ಮತ್ತು ಗುಪ್ತಚರ ವಿಭಾಗಕ್ಕೆ ತಿಳಿದಿತ್ತು. ವಾಸ್ತವವಾಗಿ, ತಾವು ಬೌದ್ಧರಿಗೆ ಸಂಬಂಧಿಸಿದ ಸ್ಥಳಗಳನ್ನು ಗುರಿಯಾಗಿಸಿಕೊಳ್ಳಲಿದ್ದೇವೆ ಎಂದು ಜಿಹಾದಿಗಳು ಸಾರ್ವಜನಿಕವಾಗಿಯೇ ಬೊಬ್ಬೆ ಹಾಕಿದ್ದರು. ಬೋಧ್ ಗಯಾ ದೇವಸ್ಥಾನದ ಬಳಿ ಭದ್ರತೆ ಸೂಕ್ತವಾಗಿಲ್ಲ ಎಂದು ಈ ಹಿಂದೆಯೇ ಹಲವು ಸಲ ಎಚ್ಚರಿಸಲಾಗಿತ್ತು.
ಈ ಕುರಿತು ಜನವರಿಯಿಂದಲೇ ಆತಂಕಗಳು ವ್ಯಕ್ತವಾಗಿದ್ದವು ಹಾಗೂ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ವರದಿಗಳೂ ಬಂದಿದ್ದವು. ಮ್ಯಾನ್ ಮಾರ್ನಲ್ಲಿ ಮುಸ್ಲಿಂ ವಿರೋಧಿ ಗಲಭೆ ನಡೆದಿದ್ದರ ಪರಿಣಾಮವಾಗಿ ಇಲ್ಲಿ ಬೌದ್ಧ ಶ್ರದ್ಧಾಕೇಂದ್ರಗಳನ್ನು ಜಿಹಾದಿಗಳು ಗುರಿಯಾಗಿಸಿಕೊಳ್ಳುವ ಸಾಧ್ಯತೆ ಇದೆ ಎಂಬುದು ಆ ಎಲ್ಲ ಎಚ್ಚರಿಕೆಗಳ ತಿರುಳು.
ದಾಳಿಯನ್ನು ಸಂಘಟಿಸುವುದಕ್ಕಾಗಿ ಇಂಡಿಯನ್ ಮುಜಾಹಿದೀನ್ನ ಉಗ್ರ ಬೋಧ್ ಗಯಾದಲ್ಲಿ ಒಂದು ಹಂತದ ಪರಿವೀಕ್ಷಣೆಯನ್ನು ನಡೆಸಿದ್ದ ಎಂಬ ಅಂಶವನ್ನು ಆ ಉಗ್ರನನ್ನು ಬಂಧಿಸಿದ್ದ ದೆಹಲಿ ಪೊಲೀಸರು ಜನವರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಹಾಗೆ ಕೆಲವು ಇಂಡಿಯನ್ ಮುಜಾಹಿದೀನ್ ಉಗ್ರರನ್ನು ಬಂಧಿಸುವುದಕ್ಕೆ ಇಂಟಲಿಜೆನ್ಸ್ ಬ್ಯೂರೊ ನೀಡಿದ್ದ ಮಾಹಿತಿಯೇ ಆಧಾರವಾಗಿತ್ತು. ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಬಾಂಬ್ ಸ್ಫೋಟಿಸುವ ಯೋಜನೆ ಹೊಸೆಯುತ್ತಿದ್ದ ತಂಡದೊಳಗೆ ನುಸುಳಿ ಅಂಥ ಅಮೂಲ್ಯ ಮಾಹಿತಿಯನ್ನು ಗುಪ್ತಚರ ವಿಭಾಗ ಹೊತ್ತು ತಂದಿತ್ತು. ಈ ವರ್ಷದ ಆರಂಭದಲ್ಲಿ ಹೈದರಾಬಾದ್ನಲ್ಲಿ ನಡೆದ ಬಾಂಬ್ ಸ್ಫೋಟ ಈ ಗುಂಪಿನ ಯೋಜನೆಯದ್ದೆ ಭಾಗವಾಗಿತ್ತು.
ಆ ಸಂದರ್ಭದಲ್ಲಾಗಲಿ, ಇಲ್ಲವೇ ಬೋಧ್ ಗಯಾ ದಾಳಿಗೆ ತುತ್ತಾಗಲಿದೆ ಎಂದು ಪದೇ ಪದೆ ಗುಪ್ತಚರ ಇಲಾಖೆ ನೀಡಿದ ಎಚ್ಚರಿಕೆಗಳಲ್ಲಾಗಲಿ ಯಾವುದೇ ನಿರ್ದಿಷ್ಟ ಉಗ್ರವಾದಿ ಘಟಕ ಇಲ್ಲವೇ ವ್ಯಕ್ತಿಯೊಬ್ಬನ ಹೆಸರಿನ ಉಲ್ಲೇಖವಾಗಿರಲಿಲ್ಲ. ಆದಾಗ್ಯೂ ಆ ಎಲ್ಲ ಎಚ್ಚರಿಕೆಗಳೂ ದೇವಾಲಯದ ಭದ್ರತೆ ಬಿಗಿಗೊಳ್ಳಬೇಕಾಗಿದೆ ಎಂಬುದನ್ನು ಸಾರಿದ್ದವು.
ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ನಯ್ಯರ್ ಹಸ್ನೈನ್ ಖಾನ್ ಕೇವಲ ವಾರದ ಹಿಂದಷ್ಟೆ ಬೋಧ್ಗಯಾದ ದೇವಾಲಯ ನಿರ್ವಹಣಾ ಸಮಿತಿಗೆ ಸ್ಪಷ್ಟ ಎಚ್ಚರಿಕೆಯೊಂದನ್ನು ರವಾನಿಸಿದ್ದರು. ದೇವಾಲಯದ ಭದ್ರತಾ ವ್ಯವಸ್ಥೆಯಲ್ಲಿರುವ ಸಾಲು ಸಾಲು ಲೋಪಗಳ ಬಗ್ಗೆ ಅವರು ಗಮನ ಸೆಳೆದಿದ್ದರು. ಬಾಗಿಲಿಗೆ ಅಳವಡಿಸಿರುವ ಲೋಹ ಶೋಧಕಗಳನ್ನು ನಿರ್ವಹಿಸುವುದು ಹೇಗೆ ಎಂಬುದೇ ಆ ದೇಗುಲದ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಸಿಬ್ಬಂದಿಗೆ ತಿಳಿದಿಲ್ಲ ಎಂಬ ಅಂಶವನ್ನು ಅವರು ಹೇಳಿದ್ದರು. ಸಿಸಿಟಿವಿ ಕೆಮರಾಗಳಿಂದ ಬರುತ್ತಿದ್ದ ದೃಶ್ಯಗಳನ್ನು ಅದೇ ಕಾಲಕ್ಕೆ ವೀಕ್ಷಿಸಿ ನಿಗಾ ವಹಿಸುವುದಕ್ಕೆ ಯಾರೂ ಇದ್ದಿರಲಿಲ್ಲ. ಅಲ್ಲದೆ ಆ ದೃಶ್ಯಾವಳಿಗಳನ್ನು ಸಂಗ್ರಹಿಸಿ ವಿಶ್ಲೇಷಿಸುವ ವ್ಯವಸ್ಥೆಯೂ ಇರಲಿಲ್ಲ. ಇವೆಲ್ಲವನ್ನೂ ನಯ್ಯರ್ ದೇಗುಲ ನಿರ್ವಹಣಾ ಮಂಡಳಿ ಗಮನಕ್ಕೆ ತಂದಿದ್ದರು.  ಈ ಘಟನೆಗೆ ಸಂಚು ರೂಪಿಸಿದ್ದವರು ಯಾರು ಎಂದು ಈ ಕ್ಷಣಕ್ಕೆ ನಿಖರವಾಗಿ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಇಸ್ಲಾಮಿಸ್ಟ್ ಗಳಿಂದ ಹಿಡಿದು ಗುಪ್ತಚರ ಇಲಾಖೆವರೆಗೆ ಎಲ್ಲರನ್ನೂ ಜಾಡಿಸುತ್ತ ಸಂಚಿನ ಸಿದ್ಧಾಂತ ಹೊಸೆಯುವುದು ಇಂಟರ್ನೆಟ್ ಅಭಿವ್ಯಕ್ತಿಗೆ ಸರಿಯಾಗಬಹುದಷ್ಟೆ. ಅಪರಾಧ ತನಿಖೆ ಎಂಬುದು ಸಾಕ್ಷ್ಯಗಳನ್ನು ಅವಲಂಬಿಸಿರುತ್ತದೆ ಶಿವಾಯ್ ದಾಳಿಯ ಉದ್ದೇಶದ ಬಗೆಗಿನ ಊಹೆಯನ್ನಲ್ಲ. ಆದಾಗ್ಯೂ ಕೆಲವು ಸಾಕ್ಷ್ಯಗಳು ಅದಾಗಲೇ ಕಣ್ಣಿಗೆ ರಾಚುತ್ತಿವೆ.
ಬಾಂಬ್ ಸ್ಫೋಟದ ಸ್ಥಳಕ್ಕೆ ಹೋಗಿ ಪರೀಶೀಲಿಸಿದ ತನಿಖಾಧಿಕಾರಿಗಳ ಮೇಲ್ಮಟ್ಟದ ಗ್ರಹಿಕೆಗೆ ಸಿಕ್ಕಿರುವುದೇನು ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಪೊಲೀಸ್ ಮೂಲದ ಮಾಹಿತಿಗಳ ಪ್ರಕಾರ ಬಾಂಬ್ಗಳನ್ನು ಮಾಡಿರುವುದು ವ್ಯವಹಾರಿಕವಾಗಿ ಲಭ್ಯವಾಗಿರುವ ಅಮೋನಿಯಂ ನೈಟ್ರೇಟ್ ಮತ್ತು ಪೊಟಾಷಿಯಂ ಪರ್ಮಾಂಗನೇಟ್ಗಳನ್ನು ಬಳಸಿಕೊಂಡು. ಈ ಪದಾರ್ಥಗಳು ಮಿಲಿಟರಿ ಹಂತದ ಸ್ಫೋಟಕಗಳಾದ ಪಿಇಟಿಎನ್ ಮತ್ತು ಸೆಮ್ ಟೆಕ್ಸ್ ಗಳಷ್ಟು ಘಾತುಕವಲ್ಲ. ಆದರೆ ಇವುಗಳ ಲಭ್ಯತೆ ಸುಲಭದ್ದಾಗಿದೆ. ಜಗತ್ತಿನಾದ್ಯಂತ ವಿಧ್ವಂಸಗಳನ್ನು ನಡೆಸುತ್ತಿರುವ ಹಲವಾರು ಭಯೋತ್ಪಾದಕ ಸಂಘಟನೆಗಳು ಇವನ್ನು ನೆಚ್ಚಿಕೊಂಡಿವೆ. ವಿಧಿವಿಜ್ಞಾನ ಪರಿಣತರು ಅಭಿಪ್ರಾಯ ಪಡುವಂತೆ ಬಹುಶಃ ಇವುಗಳನ್ನು ಉಪಯೋಗಿಸಿಕೊಂಡು ಬಾಂಬ್ ತಯಾರಿಕೆ ಮಾಡುವಾಗ ಆದ ದೋಷ ಇಲ್ಲವೆ ನಂತರದಲ್ಲಿ ತೇವ ಸೇರಿಕೊಂಡ ಪರಿಣಾಮವಾಗಿ ಇವು ನಿರೀಕ್ಷಿತ ಪರಿಣಾಮವನ್ನು ಉಂಟುಮಾಡುವುದಕ್ಕೆ ವಿಫಲವಾಗಿದ್ದಿರಬಹುದು. ಕಳೆದ ವರ್ಷ ಮುಂಬೈನ ಕ್ರಾಫರ್ಡ್ ರಸ್ತೆಯಲ್ಲಿ ಇಟ್ಟಿದ್ದ ಬಾಂಬ್ ಗೂ ಇದೇ ಗತಿ ಆಗಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳಬಹುದು.
ಅದೇನೆ ಇದ್ದರೂ, ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಮತ್ತು ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ಈ ಬಾಂಬ್ನ ಮಾದರಿಯನ್ನು ಕೂಲಂಕಷ ವಿಮರ್ಶೆಗೆ ಒಳಪಡಿಸಿದ ಮೇಲಷ್ಟೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.
ಬೌದ್ಧ ಶ್ರದ್ಧಾಕೇಂದ್ರಗಳನ್ನು ತಮ್ಮ ದಾಳಿಯ ಗುರಿಯಾಗಿಸಿಕೊಳ್ಳುತ್ತೇವೆ ಎಂದು ಜಿಹಾದಿ ಸಂಘಟನೆಗಳು ಒಂದು ವರ್ಷದಿಂದ ಹೇಳುತ್ತಲೆ ಬಂದಿದ್ದವು. ಮ್ಯಾನ್ಮಾರ್ನಲ್ಲಿ ಮುಸ್ಲಿಮರ ವಿರುದ್ಧ ಆದ ಹಿಂಸೆಗೆ ಪ್ರತಿಯಾಗಿ ಬೌದ್ಧಕೇಂದ್ರಗಳ ಮೇಲೆ ದಾಳಿ ನಡೆಸಲಿದ್ದೇವೆ ಎಂದು ಅಲ್ ಕೈದಾದ ಜತೆ ಬಾಂಧವ್ಯ ಹೊಂದಿರುವ ಪಾಕಿಸ್ತಾನದ ತೆಹ್ರಿಕ್ ಇ ತಾಲಿಬಾನ್ ಸಂಘಟನೆ 2012ರ ಜುಲೈನಲ್ಲಿ ಅವಾಜು ಹಾಕಿತ್ತು. ಇದೇ ವರ್ಷ ಜೂನ್ನಲ್ಲಿ ಲಷ್ಕರೆ ತಯ್ಬಾದ ಮುಖ್ಯಸ್ಥ ಹಫೀಜ್ ಮಹಮದ್ ಸಯೀದ್- ಮ್ಯಾನ್ಮಾರ್ ತನ್ನ ಮುಸ್ಲಿಂ ಜನಸಂಖ್ಯೆಯನ್ನು ಅಳಿಸಿಹಾಕುವುದಕ್ಕೆ ಭಾರತ ಸಹಕಾರ ನೀಡಿದೆ ಎಂದು ಬಹಿರಂಗವಾಗಿ ಕೆಂಡ ಕಾರಿದ್ದ.
ಬೋಧ್ ಗಯಾದಲ್ಲಿ ಸ್ಫೋಟ ನಡೆಸಿದ ಸಂಘಟನೆ ಯಾವುದೇ ಆಗಿದ್ದರೂ ಅದು ಆ ಕಾರ್ಯಕ್ಕೆ ಹಲವು ವ್ಯಕ್ತಿಗಳನ್ನು ಬಳಸಿಕೊಂಡಿದೆ. ಸ್ಫೋಟಕಾರ್ಯದಲ್ಲಿ ಉನ್ನತಮಟ್ಟದ ಸಮನ್ವಯ ಮತ್ತು ಕೌಶಲಗಳೂ ಕಂಡುಬಂದಿವೆ. ಮುಂಜಾನೆ 5.40ಕ್ಕೆ ಮಹಾಬೋಧಿ ದೇವಾಲಯದ ಆವರಣದಲ್ಲಿ ನಾಲ್ಕು ಬಾಂಬ್ ಗಳು ಸ್ಫೋಟಿಸಿದವು. ತೆರೆಗಾ ಆಶ್ರಮದ ಬಳಿ ಮೂರು ಬಾಂಬ್ಗಳು ಸ್ಫೋಟಿಸಿದವು. ಬುದ್ದದೇವನ 80 ಅಡಿ ಎತ್ತರದ ವಿಗ್ರಹದ ಎದುರು ಎಂಟು ಸ್ಫೋಟಗಳಾದವು. ಹೀಗಾಗಿ ಇಷ್ಟೆಲ್ಲ ಬಾಂಬ್ಗಳನ್ನು ಅಳವಡಿಸುವುದು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ದೇವಾಲಯಕ್ಕೆ ದೇಣಿಗೆ ಕೊಡುವ ಬುಟ್ಟಿಯ ರೂಪದಲ್ಲಿ ಇವೆಲ್ಲವನ್ನೂ ಇಟ್ಟುಹೋಗಿರಬೇಕು. ಅಲ್ಲದೇ ಏಕಕಾಲಕ್ಕೆ ಸ್ಫೋಟಿಸುವುದಕ್ಕೆ ಟೈಮರ್ ಗಡಿಯಾರ ಇಲ್ಲವೆ ಮೊಬೈಲ್ ಫೋನ್ ಪರಿಕರ ಬಳಸಿರುತ್ತಾರೆ. ಅಂದರೆ ಇದರ ಹಿಂದೆ ವಿಸ್ತೃತ ಯೋಜನೆ ರೂಪುಗೊಂಡಿದೆ.
ಬಿಹಾರದ ದರ್ಭಾಂಗ್ ಪ್ರಾಂತ್ಯದ ಕೆಲವರ ಮೇಲೆ ಭಾರತದಲ್ಲಿ ಜಿಹಾದಿ ಕಾರ್ಯಯೋಜನೆಗೆ ಸಹಕರಿಸಿದ ಆರೋಪವಿದೆ. ಬೋಧ್ ಗಯಾದ ಪರಿವೀಕ್ಷಣೆ ಕಾರ್ಯದ ಬಗ್ಗೆ ಈ ಹಿಂದೆ ತಪ್ಪೊಪ್ಪಿಕೊಂಡಿದ್ದ ಇಂಡಿಯನ್ ಮುಜಾಹಿದೀನ್ ನ ಬಂಧಿತ ಸದಸ್ಯ ಡ್ಯಾನಿಷ್ ಅಹ್ಮದ್ ಇವರಲ್ಲೊಬ್ಬ. ತಲೆಮರೆಸಿಕೊಂಡಿರುವ ಇಂಡಿಯನ್ ಮುಜಾಹಿದೀನ್ ನ ಕಮಾಂಡರ್ ಯಾಸಿನ್ ಜರಾರ್ ಸಿದ್ಧಿಬಾಪಾ ದರ್ಭಾಂಗದಲ್ಲೆ ಆಶ್ರಯ ಪಡೆದಿರುವ ಶಂಕೆ ಇದೆ.

- ಪ್ರವೀಣ್ ಸ್ವಾಮಿ, ಖ್ಯಾತ ಪತ್ರಕರ್ತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement