ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬೋಧಗಯಾ ದಾಳಿಯ ಬೇರುಗಳು ಇರುವುದಾದರೂ ಎಲ್ಲಿ?

ಬೋಧಗಯಾ ದಾಳಿಯ ಬೇರುಗಳು ಇರುವುದಾದರೂ ಎಲ್ಲಿ?

Mainashree
Updated On : 10 Jul 2013, 12:23 pm

ಬೌದ್ಧರ ಶ್ರದ್ಧಾಕೇಂದ್ರ ಬೋಧಗಯಾ ಬಾಂಬ್ ಸ್ಫೋಟಕ್ಕೆ ತುತ್ತಾಗುತ್ತಲೆ ಆ ಕುರಿತು ಹಲವು ಆಯಾಮದ ವಿಶ್ಲೇಷಣೆಗಳು ಬಿಚ್ಚಿಕೊಳ್ಳುತ್ತಿವೆ. ಮ್ಯಾನ್ಮಾರ್‌ನಲ್ಲಿ ನಡೆದ ಹಿಂಸೆಗೆ ಉತ್ತರ ಕೊಡುವುದಕ್ಕೆ ಇಸ್ಲಾಂ ತೀವ್ರವಾದಿಗಳೇ ಈ ಸ್ಫೋಟ ನಡೆಸಿರಬಹುದು ಎಂಬುದು ಈ ಕ್ಷಣದ ಬಲವಾದ ಶಂಕೆ. ಬುದ್ಧನ ವಿಗ್ರಹದ ಎದುರೂ ಸ್ಫೋಟ ನಡೆದಿದೆ. ಹೀಗೆ ಬೌದ್ಧ ಅನುಯಾಯಿಗಳು ಆತಂಕದ ನೆರಳಿನಲ್ಲಿರುವ ಸಂದರ್ಭದಲ್ಲಿ ಈ ಸಂಘರ್ಷವನ್ನು ಚಾರಿತ್ರಿಕ ಚೌಕಟ್ಟಿನಲ್ಲಿ ಇಟ್ಟು ನೋಡುವ ಅವಶ್ಯಕತೆಯೂ ಇದೆ. ಈ ನಿಟ್ಟಿನಲ್ಲಿ ಭಾರತೀಯ ಪತ್ರಿಕೋದ್ಯಮದ ಅಚ್ಚಳಿಯದ ಹೆಸರು- ಅರುಣ್ ಶೌರಿಯವರು ಈ ಹಿಂದೆ ಬರೆದಿದ್ದ ಲೇಖನವೊಂದನ್ನು ಸಾದರಪಡಿಸುತ್ತಿದ್ದೇವೆ.

'ಭಾರತದಲ್ಲಿ ಬೌದ್ಧಧರ್ಮದ ಪತನವಾಗಿದ್ದು ಮುಸಲ್ಮಾನರ ಆಕ್ರಮಣದಿಂದಲೆ ಎಂಬುದರ ಬಗ್ಗೆ ಅನುಮಾನಗಳಿಲ್ಲ...' ಹೀಗೆಂದು ಬರೆಯುತ್ತಾರೆ ಕೃತಿಕಾರರೊಬ್ಬರು. 'ಇಸ್ಲಾಂ 'ಬಟ್‌'ನ ವೈರಿಯಾಗಿಯೇ ಬೆಳೆದುಬಂತು. ಬಟ್ ಎಂಬುದು ಅರೇಬಿಕ್ ಪದ ಹಾಗೂ ವಿಗ್ರಹ ಎಂಬುದು ಇದರ ಅರ್ಥ. ಆದಾಗ್ಯೂ ಬಹಳ ಮಂದಿಗೆ ಗೊತ್ತಿರದ ಸಂಗತಿ ಎಂದರೆ ಬಟ್ ಎಂಬ ಆ ಅರೇಬಿಕ್ ಪದ ಕಲುಷಿತಗೊಂಡಿದ್ದು ಅದು ಮೂಲತಃ 'ಬುದ್ಧ' ಎಂಬುದನ್ನು ಸೂಚಿಸುವುದಕ್ಕೆ ಬಳಸಿದ್ದು. ಈ ಮೂಲವನ್ನು ಗಮನಿಸಿದಾಗ ಮುಸ್ಲಿಮರು ವಿಗ್ರಹ ಆರಾಧನೆಯನ್ನು ಬೌದ್ಧಧರ್ಮದೊಂದಿಗೆ ತಳುಕು ಹಾಕಿದ್ದರು ಎಂಬುದು ಸ್ಪಷ್ಟವಾಗುತ್ತದೆ. ವಿಗ್ರಹಗಳನ್ನು ಧ್ವಂಸಗೊಳಿಸುವ ಅವರ ಅಭಿಯಾನ ಬೌದ್ಧಧರ್ಮವನ್ನು ಕೊನೆಗಾಣಿಸುವ ಉದ್ದೇಶವನ್ನೂ ಒಟ್ಟಿಗೇ ಹೊತ್ತಿತ್ತು. ಇಸ್ಲಾಂ ಭಾರತದಲ್ಲಿ ಮಾತ್ರವೇ ಬೌದ್ಧಧರ್ಮವನ್ನು ನಾಶಪಡಿಸಿದ್ದಲ್ಲ, ಬದಲಿಗೆ ಹೋದಲ್ಲೆಲ್ಲ ಆ ಕೆಲಸ ಮಾಡಿತು. ಇಸ್ಲಾಂ ಬರುವುದಕ್ಕೂ ಮೊದಲು ಬೌದ್ಧಧರ್ಮವು ಇಡೀ ಏಷ್ಯಾವನ್ನು ಆವರಿಸಿದ್ದ ರೀತಿಯಲ್ಲೇ ಬಾಕ್ಟ್ರಿಯಾ, ಪರ್ಷಿಯಾ, ಅಫ್ಘಾನಿಸ್ತಾನ, ಗಾಂಧಾರ, ಚೈನೀಸ್ ತುರ್ಕಿಸ್ತಾನಗಳಲ್ಲಿ ಆಚರಣೆಯಲ್ಲಿತ್ತು...'
ಆರೆಸ್ಸೆಸ್ ಶಾಖೆಯಿಂದ ಬಂದ ಕೋಮುವಾದಿ ಇತಿಹಾಸಕಾರನೊಬ್ಬ ಹೀಗೆಲ್ಲ ಬರೆದಿದ್ದಾನೆ ಎಂಬುದು ನಿಮ್ಮ ಅಭಿಪ್ರಾಯವಾಗಿದ್ದರೆ ಸ್ವಲ್ಪ ತಾಳಿ...
ಮುಂದುವರಿದು ಆ ಕೃತಿಕಾರ ಹೀಗೆ ವಿಶ್ಲೇಷಿಸುತ್ತಾರೆ.- ಆದರೆ ಇಸ್ಲಾಮ್‌ನ ಆಕ್ರಮಣವು ಹಿಂದೂಧರ್ಮದ ಮೇಲೂ ಆಯಿತಲ್ಲ? ಅದೇಕೆ ಭಾರತದಲ್ಲಿ ಬೌದ್ಧಧರ್ಮ ಮಾತ್ರ ಪತನಗೊಂಡು ಹಿಂದೂಧರ್ಮ ಹಾಗೆಯೇ ಉಳಿಯಿತು? ಏಕೆಂದರೆ ಹಿಂದೂಧರ್ಮ ರಾಜಾಶ್ರಯವನ್ನು ಪಡೆದಿತ್ತು. 'ಬ್ರಾಹ್ಮಣ ಆಡಳಿತಗಾರ'ರಿಂದ ಬೌದ್ಧರು ಎಷ್ಟರಮಟ್ಟಿಗೆ ಕಿರುಕುಳಕ್ಕೆ ಒಳಗಾಗಿದ್ದರು ಎಂದರೆ ಇಸ್ಲಾಂ ಬಂದಾಗ ಅವರು ಮತಾಂತರಕ್ಕೆ ಶರಣಾದರು. ಇದು ಮುಸ್ಲಿಂ ಪಾಳಯಕ್ಕೆ ಬಲ ತಂದಿತಾದರೂ ಬೌದ್ಧಧರ್ಮದ ಪಸೆ ಆರಿತು. ಮುಸ್ಲಿಂ ದಾಳಿಕೋರರು ಬ್ರಾಹ್ಮಣ ಮತ್ತು ಬೌದ್ಧ ಪುರೋಹಿತ ವರ್ಗಗಳೆರಡನ್ನೂ ಹಿಂಸೆಗೆ ಒಳಪಡಿಸಿದರಾದರೂ ಇವೆರಡೂ ಧರ್ಮಗಳ ಪುರೋಹಿತ ಪದ್ಧತಿ ಭಿನ್ನ ಬಗೆಯದ್ದಾಗಿತ್ತು. ಇಸ್ಲಾಂ ಪದಾಘಾತಕ್ಕೆ ಸಿಕ್ಕ ಬ್ರಾಹ್ಮಣ ಮತ ಏಕೆ ಉಳಿದುಕೊಂಡಿತು ಹಾಗೂ ಬೌದ್ಧಮತ ನಶಿಸಿತೇಕೆ ಎಂಬುದಕ್ಕೆ ಈ ರಚನೆಯಲ್ಲೇ ಉತ್ತರಗಳು ಸಿಗುತ್ತವೆ.
ಹಿಂದೂಗಳಿಗೆ ಪ್ರತಿ ಬ್ರಾಹ್ಮಣನೂ ಪುರೋಹಿತನೇ. ಅದಕ್ಕೆ ಪ್ರತ್ಯೇಕ ನಿರ್ದೇಶನವೊಂದು ಬೇಕಿಲ್ಲ. ನಿರ್ದಿಷ್ಟ ಮಂತ್ರಗಳನ್ನು ಕಲಿಯುವುದು, ಯಾತ್ರೆಗಳನ್ನು ಕೈಗೊಳ್ಳುವುದು, ವೇದಗಳನ್ನು ಬಾಯಿಪಾಠ ಮಾಡುವುದು ಇವೆಲ್ಲ ಬ್ರಾಹ್ಮಣರ ಮನೆಗಳಲ್ಲಿ ದೈನಿಕದ ಭಾಗವಾಗಿ ಬೆಳೆದುಬಂದಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಬೌದ್ಧಮತದಲ್ಲಿ ಪುರೋಹಿತರನ್ನು ತಯಾರು ಮಾಡುವುದಕ್ಕೆಂದೇ ನಿರ್ದಿಷ್ಟ ವ್ಯವಸ್ಥೆ ಇತ್ತು. ಹೀಗಾಗಿ ಇಸ್ಲಾಂ ದಾಳಿಕೋರರು ಬ್ರಾಹ್ಮಣರನ್ನು ಕೊಂದ ನಂತರವೂ ಹಿಂದೂಧರ್ಮ ಮುಂದುವರೆಯಿತು. ಆದರೆ ಬೌದ್ಧ ಸನ್ಯಾಸಿಗಳನ್ನು ಕೊಂದಾಗ ಅವರೊಂದಿಗೆ ಬೌದ್ಧಮತವೂ ಹತ್ಯೆಯಾಯಿತು.
ಮುಸಲ್ಮಾನ ದಾಳಿಕೋರರು ವಿಧ್ವಂಸ ಎಸಗಿದ ಬೌದ್ಧ ವಿಶ್ವವಿದ್ಯಾಲಯಗಳಾದ ನಳಂದ, ವಿಕ್ರಮಶಿಲಾ, ಜಗದ್ದಳ, ಓದಂತಪುರಿ ಇವನ್ನೆಲ್ಲ ಹೆಸರಿಸಬಹುದು. ಬೌದ್ಧ ಸನ್ಯಾಸಿಗಳ ವಾಸಸ್ಥಳಗಳನ್ನೆಲ್ಲ ದಾಳಿಕೋರರು ನೆಲಕ್ಕೆ ಉರುಳಿಸಿದರು. ಸಾವಿರ ಸಾವಿರ ಸಂಖ್ಯೆಯಲ್ಲಿ ಬೌದ್ಧ ಸನ್ಯಾಸಿಗಳು ನೇಪಾಳ, ಟಿಬೆಟ್ ಹಾಗೂ ಭಾರತಕ್ಕೆ ತಾಗಿಕೊಂಡಿರುವ ಇತರ ದೇಶಗಳಿಗೆ ಓಡಿಹೋದರು. ಬಹುದೊಡ್ಡ ಸಂಖ್ಯೆಯಲ್ಲಿ ಬೌದ್ಧ ಸನ್ಯಾಸಿಗಳನ್ನು ಈ ಮುಸ್ಲಿಂ ಕಮಾಂಡರ್‌ಗಳು ಹತ್ಯೆ ಮಾಡಿದರು. ಮುಸ್ಲಿಂ ದಾಳಿಕೋರರ ಖಡ್ಗಕ್ಕೆ ಆಹಾರವಾಗಿ ಬೌದ್ಧರ ಪುರೋಹಿತ ವರ್ಗ ಹೇಗೆ ನಶಿಸಿತು ಎಂಬ ಬಗ್ಗೆ ಮುಸ್ಲಿಂ ಇತಿಹಾಸಕಾರರೇ ವಿವರಗಳನ್ನು ದಾಖಲಿಸಿದ್ದಾರೆ. ಕ್ರಿಸ್ತಶಕ 1197ರಲ್ಲಿ ಮುಸಲ್ಮಾನ ಕಮಾಂಡರ್‌ಗಳು ಬಿಹಾರದ ಮೇಲೆ ದಾಳಿ ಮಾಡಿದಾಗ ಬೌದ್ಧ ಸನ್ಯಾಸಿಗಳನ್ನು ಕೊಚ್ಚಿ ಸಾಯಿಸಿದ ವಿದ್ಯಮಾನದ ಬಗ್ಗೆ ವಿನ್ಸೆಂಟ್ ಸ್ಮಿತ್ ಬರೆಯುತ್ತಾರೆ- 'ಬಲವಂತದಿಂದ ಸೂರೆಗೈದ ವಸ್ತುಗಳನ್ನು ರಾಶಿ ಹಾಕಲಾಗಿತ್ತು. 'ತಲೆ ಕ್ಷೌರ ಮಾಡಿಸಿಕೊಂಡಿದ್ದ ಬ್ರಾಹ್ಮಣ'ರನ್ನು (ಬೌದ್ಧ ಸನ್ಯಾಸಿಗಳು)ಅಮೂಲಾಗ್ರವಾಗಿ ಕೊಚ್ಚಿ ಹಾಕಲಾಯಿತು. ಅಲ್ಲಿ ಜಯಶಾಲಿಯಾದವ ಸನ್ಯಾಸಿಗಳ ವಾಸಸ್ಥಾನದಲ್ಲಿರುವ ಗ್ರಂಥಾಲಯದ ಪುಸ್ತಕಗಳನ್ನು ಓದಿ ಅರ್ಥೈಸಬಲ್ಲವರು ಯಾರಿದ್ದೀರಿ ಎಂದಾಗ, ಆ ಸಾಮರ್ಥ್ಯವಿರುವ ಒಬ್ಬರೂ ಉಳಿದಿರಲಿಲ್ಲ. ಇಸ್ಲಾಂ ದಾಳಿಕೋರರು ಬೌದ್ಧ ಸನ್ಯಾಸಿಗಳನ್ನು ಹತ್ಯೆ ಮಾಡಿದ ನಮೂನೆ ಈ ಬಗೆಯದ್ದಾಗಿತ್ತು. ಬೌದ್ಧ ಸನ್ಯಾಸಿಗಳನ್ನು ಸಾಯಿಸುವ ಮೂಲಕ ಇಸ್ಲಾಂ ಭಾರತದಲ್ಲಿ ಬೌದ್ಧಧರ್ಮವನ್ನೆ ಸಾಯಿಸಿತು. ಭಾರತದಲ್ಲಿ ಬುದ್ಧನ ಮತದ ಮೇಲೆ ಆದ ಅತ್ಯಂತ ವಿನಾಶಕಾರಿ ಸ್ಥಿತಿ ಇದೇ ಆಗಿದೆ..'
ಹೌದು. ಇದನ್ನೆಲ್ಲ ಬರೆದವರು ಯಾರೆಂದುಕೊಂಡಿರಿ? ಡಾ. ಬಿ. ಆರ್. ಅಂಬೇಡ್ಕರ್.
ಆದರೆ ಈಗೇನಾಗಿದೆ? ಬೌದ್ಧಮತದ ಪತನಕ್ಕೆ ಹಿಂದೂಗಳ ಹಿಂಸೆಯೇ ಕಾರಣ, ಹಿಂದೂಗಳೇ ಬೌದ್ಧ ದೇವಾಲಯಗಳನ್ನು ನಿರ್ನಾಮ ಮಾಡಿದರು ಎಂಬ ಸುಳ್ಳನ್ನು ಮಾರ್ಕ್ಸ್‌ವಾದಿ ಇತಿಹಾಸಕಾರರು ಒಂದಿನಿತೂ ಪುರಾವೆ ಇಲ್ಲದಿದ್ದರೂ ಹರಡುತ್ತಿದ್ದಾರೆ. ಹಿಂದೂಧರ್ಮವೇ ಬೌದ್ಧಮತಕ್ಕೆ ಕಂಟಕಪ್ರಾಯವಾಯಿತು ಎಂದು ಆರೋಪಿಸುವುದು ಈಗ ಫ್ಯಾಷನ್ ಆಗಿಬಿಟ್ಟಿದೆ. ಈ ಸುಳ್ಳುಗಳನ್ನು ಶಾಸನಗಳ ಅಧ್ಯಯನದ ಮೂಲಕ ದಣಿವಿಲ್ಲದಂತೆ ಎದುರಿಸಿದ ಶ್ರೇಯಸ್ಸು ಸೀತಾರಾಮ್ ಗೋಯಲ್ ಅವರಿಗೆ ಸಲ್ಲುತ್ತದೆ. ಮಾರ್ಕ್ಸ್‌ವಾದಿ ಇತಿಹಾಸಕಾರರು ತಮ್ಮ ವಾದಕ್ಕೆ ಪೂರಕವಾಗಿ ಉಲ್ಲೇಖಿಸಿದ್ದ ಮೂರು ಶಾಸನಗಳನ್ನು ಪರಿಶೀಲಿಸಿದಾಗ ಅವರ ಆರೋಪಕ್ಕೆ ಪುಷ್ಟಿ ನೀಡುವ ಯಾವ ಅಂಶವೂ ಅವುಗಳಲ್ಲಿ ಇರಲಿಲ್ಲ. ಬದಲಿಗೆ ಅವರೇ ಉಲ್ಲೇಖಿಸಿದ್ದ ಶಾಸನವೊಂದರಲ್ಲಿ, ಜೈನ ದೊರೆಯೊಬ್ಬ ದೇವಸ್ಥಾನವೊಂದನ್ನು ಜೈನಮತದ ಪುರೋಹಿತರಿಂದ ಹಿಂದಕ್ಕೆ ಪಡೆದುಕೊಂಡು ಅಲ್ಲಿ ಶೈವರನ್ನು ನೇಮಿಸಿದ್ದು ದಾಖಲಾಗಿತ್ತು. ದೇವಾಲಯ ನಿರ್ವಹಣೆ ಸರಿಯಾಗಿ ಆಗದ್ದರಿಂದ ಈ ಕ್ರಮ ಕೈಗೊಂಡಿರುವುದಾಗಿಯೂ ಅಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಗೋಯೆಲ್ ಕೇಳಿದಾಗ ಎಲ್ಲ ಇತಿಹಾಸಕಾರರೂ ಮೌನಕ್ಕೆ ಶರಣಾದರು.
ಹೋಗಲಿ, ಯಾವುದಾದರೂ ಹಿಂದೂ ಗ್ರಂಥವು ತನ್ನ ಅನುಯಾಯಿಗಳಿಗೆ ಬೇರೆ ಮತದ ಶ್ರದ್ಧಾಕೇಂದ್ರವನ್ನು ನಾಶಗೊಳಿಸುವಂತೆ ಹೇಳಿರುವುದನ್ನು ತೋರಿಸಿ ಎಂದು ಗೋಯೆಲ್ ಸವಾಲು ಹಾಕಿದರು. ಬೇರೆ ಮತದ ಶ್ರದ್ಧಾಕೇಂದ್ರವನ್ನು ನಾಶ ಮಾಡಿದ್ದಕ್ಕೆ ಹಿಂದೂಗಳು ಯಾರನ್ನಾದರೂ ಸನ್ಮಾನಿಸಿದ ಉಲ್ಲೇಖ ತೋರಿಸಿ ಎಂದರು. ಏಕೆಂದರೆ ಎಲ್ಲ ಮುಸ್ಲಿಂ ದಾಳಿಕೋರರನ್ನು ಆ ಕಾರಣಕ್ಕಾಗಿಯೇ ಇತಿಹಾಸಕಾರರು ವೈಭವೀಕರಿಸಿರುವುದು. ಆದರೆ ಇದಕ್ಕೂ ಇತಿಹಾಸಕಾರರ ಕಡೆಯಿಂದ ಮೌನವೇ ಉತ್ತರ.
ಅಕಾಡೆಮಿಷಿಯನ್‌ಗಳೆನಿಸಿಕೊಂಡು ವಿಶ್ವವಿದ್ಯಾಲಯಗಳ ಆಯಕಟ್ಟಿನ ಜಾಗದಲ್ಲಿರುವವರು ಯಾವ ಪುಸ್ತಕ ಓದಬೇಕು, ಏನನ್ನು ಕಲಿಸಬೇಕು ಹಾಗೂ ಯಾವ ಪ್ರಶ್ನೆಗಳನ್ನು ಕೇಳಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಇತಿಹಾಸದಲ್ಲಿ ಏನಿರಬೇಕು ಎಂಬುದನ್ನು ನಿರ್ಧರಿಸುವವರೂ ಇವರೇ. ಹಿಂದೂಗಳು ಅಸಹಿಷ್ಣುಗಳಾಗಿದ್ದರು ಎಂದು ಈಗಿನ ರಾಜಕೀಯ ವ್ಯವಸ್ಥೆಗೆ ಸರಿಹೊಂದುವಂತೆ ಚಿತ್ರಿಸುವ ಉಮೇದಿನಲ್ಲಿ ಇವರು- ಬೌದ್ಧಮತದ ಮೇಲೆ ಇಸ್ಲಾಂ ದಾಳಿಯ ಪರಿಣಾಮವೇನು ಎಂಬ ಬಗ್ಗೆ ಅಂಬೇಡ್ಕರ್ ಅವರು ಬರೆದಿದ್ದನ್ನೇ ಮುಚ್ಚಿಡುತ್ತಾರೆ. 'ಥಾಟ್ಸ್ ಆನ್ ಪಾಕಿಸ್ತಾನ್‌' ಎಂಬ ತಮ್ಮ ಪುಸ್ತಕದಲ್ಲಿ ಅಂಬೇಡ್ಕರ್ ಅವರು ಮುಸ್ಲಿಂ ಆಡಳಿತವನ್ನು ಹೇಗೆ ಚಿತ್ರಿಸಿದ್ದಾರೆ ಎಂಬುದನ್ನು ಬಚ್ಚಿಡುವ ಇವರು, ಬ್ರಾಹ್ಮಣಪಂಥವನ್ನು ಅವರು ಕಟುಟೀಕೆಗೆ ಒಳಪಡಿಸಿದ್ದನ್ನು ಹಾಗೂ ಮೌರ್ಯರು ಸ್ಥಾಪಿಸಿದ್ದ ಬೌದ್ಧ ಭಾರತವನ್ನು ಬ್ರಾಹ್ಮಣ ಆಡಳಿತಗಾರರು ಕೊನೆಗಾಣಿಸಿದರು ಎಂಬ ಅಭಿಪ್ರಾಯವನ್ನಷ್ಟೇ ಮುನ್ನೆಲೆಗೆ ಬರುವಂತೆ ನೋಡಿಕೊಳ್ಳುತ್ತಿದ್ದಾರೆ!
ಅಂಬೇಡ್ಕರರ ವಿಚಾರದ ನಂತರ ಇದೇ ವಿಷಯವಾಗಿ ಇನ್ನೊಬ್ಬ ಮಹಾತ್ಮರ ಅಭಿಪ್ರಾಯ ಏನಿತ್ತು ಎಂಬುದನ್ನು ಗಮನಿಸೋಣ. ಅವರು ಬರೆಯುತ್ತಾರೆ- 'ಪುರಾತನ ಕಾಲದಲ್ಲಿ ತುರ್ಕ್ ಜನಾಂಗವು ಭಾರತದ ಪಶ್ಚಿಮ ಭಾಗವನ್ನು ಆಗಾಗ ಗೆದ್ದುಕೊಂಡು ಅಲ್ಲಿ ಸಾಮ್ರಾಜ್ಯಗಳು ತಲೆ ಎತ್ತುವಂತೆ ಮಾಡಿತ್ತು. ಅವರು ಬೌದ್ಧರು ಇಲ್ಲವೇ ಭಾರತದ ಪ್ರದೇಶವನ್ನು ಗೆದ್ದ ನಂತರ ಬೌದ್ಧರಾದವರಾಗಿದ್ದರು. ಕಾಶ್ಮೀರದ ಪುರಾತನ ಇತಿಹಾಸದಲ್ಲಿ ಹುಷ್ಕ, ಯುಷ್ಕ, ಕಾನಿಷ್ಕ ಮುಂತಾದ ತುರ್ಕ್ ಚಕ್ರವರ್ತಿಗಳ ಹೆಸರಿದೆ. ಮಹಾಯಾನ ಪಂಥವನ್ನು ಆರಂಭಿಸಿದವನು ಕಾನಿಷ್ಕ. ಬಹಳ ಕಾಲ ತರುವಾಯ ಈ ಸಂತತಿ ಮೊಹಮದೀಯರಾಗಿ ಬದಲಾಯಿತು. ಹೀಗೆ ಇವರು ಮೊಹಮದೀಯರಾಗಿ ಬದಲಾಗುವುದಕ್ಕೂ ಮೊದಲು ತಾವು ಗೆದ್ದ ದೇಶದ ಸಂಸ್ಕೃತಿ- ಆಚಾರಗಳನ್ನು ಅರಿತುಕೊಂಡು ಅದನ್ನು ತಮ್ಮದರೊಂದಿಗೆ ಮೇಳೈಸಿ ನಾಗರಿಕತೆ ಮುಂದುವರಿಯುವಂತೆ ಆಸಕ್ತಿ ವಹಿಸುತ್ತಿದ್ದರು. ಆದರೆ ಮೊಹಮದೀಯರಾಗಿ ಬದಲಾಗುತ್ತಲೇ ಅವರಲ್ಲಿ ಯುದ್ಧೋತ್ಸಾಹ ಮಾತ್ರವೇ ಉಳಿದುಕೊಂಡಿತು. ಹೀಗಾಗಿ ಆನಂತರ ಅವರು ಗೆದ್ದ ಪ್ರದೇಶಗಳಲ್ಲೆಲ್ಲ ಕ್ರಮೇಣವಾಗಿ ನಾಗರಿಕತೆ ನಶಿಸುತ್ತ ಹೋಯಿತು. ಆಧುನಿಕ ಅಫ್ಘಾನಿಸ್ತಾನ ಮತ್ತು ಕಂದಹಾರ್‌ಗಳಲ್ಲಿ ಇಂದಿಗೂ ಅದ್ಭುತ ಸ್ತೂಪಗಳನ್ನು, ಬೌದ್ಧ ವಿಹಾರಗಳನ್ನು, ದೇವಾಲಯಗಳನ್ನು, ಬೌದ್ಧಮತ ಹಿರೀಕರ ವಿಗ್ರಹಗಳನ್ನು ಕಾಣಬಹುದಾಗಿದೆ. ತುರ್ಕರು ಮೊಹಮದೀಯರಾಗಿ ಬದಲಾದ ಪರಿಣಾಮವಾಗಿ ಆ ದೇವಾಲಯ- ಸ್ಮಾರಕಗಳೆಲ್ಲ ಪಾಳುಬಿದ್ದ ಸ್ಥಿತಿಯಲ್ಲಿವೆ. ಪ್ರಸ್ತುತ ಅಫ್ಘನ್‌ನ ಜನ ಸಮುದಾಯ ಅನಾಗರಿಕ, ಅಶಿಕ್ಷಿತವಾಗಿರುವುದರಿಂದ ಆ ಪುರಾತನ ವಾಸ್ತುಶಾಸ್ತ್ರಗಳನ್ನು ಅರ್ಥ ಮಾಡಿಕೊಳ್ಳಲಾರದೆ ಅವೆಲ್ಲ ನಿಸರ್ಗಾತೀತವಾದ ಶಕ್ತಿಯ ಸೃಷ್ಟಿ ಎಂದುಕೊಂಡಿವೆ...'
ಇದನ್ನು ಬರೆದವರು ಯಾರು? ಕೆಲ ವರ್ಷಗಳ ಹಿಂದೆ ಸೆಕ್ಯುಲರ್‌ವಾದಿಗಳೆಲ್ಲ ತಮ್ಮವ ಎಂದು ಹೊಂದಿಸಿಕೊಳ್ಳುವುದಕ್ಕೆ ಹಪಹಪಿಸಿದ ವ್ಯಕ್ತಿ- ಸ್ವಾಮಿ ವಿವೇಕಾನಂದರು.
ಈಗ ಈ ಇತಿಹಾಸಕಾರರತ್ತ ನೋಡಿ. ಇವರೆಲ್ಲ ಇಂಥ ವಿವರಗಳನ್ನು ಮೂಲೆಗೆ ಅಟ್ಟಿದ್ದಾರೆ. ಅದಕ್ಕೆ ರಾಷ್ಟ್ರೀಯ ಏಕತೆಯ ಕಾರಣ ಕೊಡುತ್ತಾರೆ. ಇಂಥ ಉಲ್ಲೇಖಗಳನ್ನೆಲ್ಲ ನೆನಪಿಸಿಕೊಳ್ಳುವುದು ಇವರ ಪ್ರಕಾರ ಮುಸ್ಲಿಮರನ್ನು ಕೆಣಕಿದಂತೆ ಆಗುತ್ತದೆ. ಸ್ವಾಮಿ ವಿವೇಕಾನಂದರು ಹೆಚ್ಚಿನವರು ಮಾತನಾಡದ ಇನ್ನೊಂದು ಅಂಶದ ಬಗ್ಗೆಯೂ ಗಮನ ಸೆಳೆದಿದ್ದರು. ಅದೆಂದರೆ ಆಂತರಿಕ ವಿನಾಶ. ಅವರು ಹೇಳುವಂತೆ- ಬುದ್ಧನು ನಮ್ಮ ಕಾಲದ ಗಾಂಧೀಜಿಯಂತೆ ಜನರು ಮೊದಲು ತಮ್ಮ ವರ್ತನೆಗಳಲ್ಲಿ ಬದಲಾವಣೆ ತಂದುಕೊಂಡು ನಂತರ ಒಳ ಹೊಳವು ಅಥವಾ ದೃಷ್ಟಿಕೋನವನ್ನು ಪಡೆಯಬೇಕು ಎಂದು ಪ್ರತಿಪಾದಿಸಿದ್ದ. ಆದರೆ ಜನರಿಗೆ ಇವೆಲ್ಲ ಕಷ್ಟದ ಕೆಲಸ. ಅವರಿಗೆ ಮಂತ್ರ, ಯಾತ್ರೆ, ತಮ್ಮ ಕರ್ಮದಿಂದ ಬಂಧಮುಕ್ತವಾಗಿಸುವ ವಿಗ್ರಹ ಇವೆಲ್ಲ ಬೇಕಿತ್ತು. ಬುದ್ಧನ ಪ್ರಾಜ್ಞ ಮಾರ್ಗದರ್ಶನದಿಂದ ಜನರು ಹೊರಬಿದ್ದದ್ದೆ ಈ ಕಾರಣದಿಂದ. ಅದಕ್ಕೆ ಇನ್ಯಾವುದೇ ಬಾಹ್ಯ ಒತ್ತಡ ಬೇಕಿರಲಿಲ್ಲ. ಗಾಂಧೀಜಿಯವರ ಉಪದೇಶಗಳಿಂದ ನಾವು ಇವತ್ತು ಹೇಗೆ ವಿಮುಖರಾಗುತ್ತಿದ್ದೇವೆಯೋ, ಅಂತೆಯೇ ಆಗಲೂ ಜನ ಹಾಗೆ ಮಾಡಿದರು..  
ಬೌದ್ಧಧರ್ಮದ ಅವನತಿಗೆ ಮುಸ್ಲಿಂ ಆಕ್ರಮಣವೇ ಪ್ರಮುಖ ಕಾರಣ ಎನ್ನುವ ಅಂಬೇಡ್ಕರ್ ಅವರೂ ಈ ಆಯಾಮವನ್ನು ಗುರುತಿಸಿದ್ದಾರೆ. ಮುಸ್ಲಿಂ ದಾಳಿಕೋರರಿಂದ ಬೌದ್ಧ ಸನ್ಯಾಸಿಗಳ ಮಾರಣಹೋಮವಾದ ನಂತರ ಆ ಸ್ಥಾನವನ್ನು ತುಂಬುವುದಕ್ಕೆ ಎಲ್ಲ ಬಗೆಯ ಜನರನ್ನು ಆಯ್ದುಕೊಳ್ಳಲಾಯಿತು. ಈ ಬಗ್ಗೆ ಅಂಬೇಡ್ಕರ್ ಬರೆಯುತ್ತಾರೆ- 'ಬೌದ್ಧರ ಹೊಸ ಪುರೋಹಿತ ವರ್ಗ ಗೌರವವನ್ನಾಗಲಿ, ಅಧ್ಯಯನ ಬಲವನ್ನಾಗಲಿ ಹೊಂದಿಲ್ಲ ಎಂಬುದು ಸ್ಪಷ್ಟ. ಹೀಗಾಗಿ ಅವರು ತಮ್ಮ ಎದುರಾಳಿಗಳಿಗೆ ಸಮನಾಗುವುದು ಸಾಧ್ಯವಾಗಲಿಲ್ಲ. ಅದರಲ್ಲೂ ಬ್ರಾಹ್ಮಣರ ಕುತಂತ್ರ ಮಾರ್ಗಗಳನ್ನು ಎದುರಿಸುವ ಕಲಿಕೆ ಅವರಲ್ಲಿರಲಿಲ್ಲ.'
ಸ್ವಾಮಿ ವಿವೇಕಾನಂದರು, ಶ್ರೀ ಅರವಿಂದರು ಎಲ್ಲರೂ ಈ ಧಾರ್ಮಿಕ ಹಂತವನ್ನು ವಿಶ್ಲೇಷಿಸಿದ್ದಾರೆ. ಸ್ವಾಮೀಜಿ ಬರೆಯುತ್ತಾರೆ- 'ಬುದ್ಧ ದೇವರಿಲ್ಲ- ವಿಶ್ವವನ್ನು ಆಳುವ ಅಧಿಪತಿ ಯಾರಿಲ್ಲ ಎಂದು ಬೋಧಿಸಿದ. ಆದರೆ ಜನರಿಗೆ ಉತ್ತೇಜಕಗಳು ಬೇಕಿದ್ದವು. ಹಾಗೆಂದೇ ಅವರು ದೇವರು-ದೆವ್ವ ಎಲ್ಲವನ್ನೂ ತಂದು ಭಾರತದಲ್ಲಿ ಬೌದ್ಧಧರ್ಮಕ್ಕೆ ಏನೆಲ್ಲ ಅಂಟಿಸಿಬಿಟ್ಟರು. ಬುದ್ಧನ ಸ್ಪಷ್ಟ ವಿಚಾರಗಳು ನೇಪಥ್ಯಕ್ಕೆ ಸರಿದು ಅಲ್ಲಿ ದೇವಾಲಯಗಳು ತಲೆ ಎತ್ತಿದವು, ವಿಗ್ರಹಗಳನ್ನು ನಿಲ್ಲಿಸಲಾಯಿತು. ದೇಶದಲ್ಲೆಲ್ಲ ಭವ್ಯ ಸಭಾಂಗಣಗಳು ಕಾಣಿಸಿಕೊಂಡವು. ಹೀಗಾಗಿ ಮೂಲ ಸಂದೇಶದ ನೈತಿಕ ಶಕ್ತಿ ಮಾಯವಾಗಿ ಅಲ್ಲಿ ಕಂದಾಚಾರ ಮತ್ತು ಬರಿದೇ ಆಚರಣೆಗಳು ತುಂಬಿಕೊಂಡವು. ಬೌದ್ಧಧರ್ಮವನ್ನು ಹತ್ತಿಕ್ಕಬೇಕು ಎಂಬ ಯಾವುದೇ ಉದ್ದೇಶಿತ ದೌರ್ಜನ್ಯಕ್ಕಿಂತ ನೂರು ಪಾಲು ಕಟು ಸಂಗತಿ ಇದು.'
ಸ್ವಾಮಿ ವಿವೇಕಾನಂದರು ಬುದ್ಧನನ್ನು ಎಷ್ಟು ಎತ್ತರದಲ್ಲಿ ಇರಿಸಿದ್ದರೆಂದರೆ, 'ಬುದ್ಧ ವೇದಾಂತದ ಪ್ರತಿರೂಪ' ಎಂದೇ ಹೇಳಿದ್ದರು. ಬುದ್ಧನ ಬಗ್ಗೆ ಆ ಮಟ್ಟದ ಗೌರವ ಇದ್ದಿದ್ದರಿಂದಲೇ ಅವರು ಬೌದ್ಧಧರ್ಮ ನಂತರ ಹೊರಳಿಕೊಂಡ ಮಗ್ಗುಲಿನ ಕುರಿತು ಎಲ್ಲರಿಗಿಂತ ಹೆಚ್ಚಿನ ಆಕ್ರೋಶವನ್ನು ಇರಿಸಿಕೊಂಡಿದ್ದರು. ಬೌದ್ಧಧರ್ಮದ ಲೋಪಗಳ ಬಗ್ಗೆ ಅವರು ನಿಖರವಾಗಿ ಮಾತನಾಡಿದರು. 'ಪ್ರತಿ ಸುಧಾರಣಾ ಚಳವಳಿಯು ಮೊದಲಿಗೆ ನಕಾರಾತ್ಮಕ ಅಂಶಗಳನ್ನು ಜನರ ಮುಂದೆ ಇರಿಸುತ್ತದೆ. ಆದರೆ ನಕಾರಾತ್ಮಕತೆಯನ್ನೇ ಉಬ್ಬಿಸುತ್ತ ಹೋದರೆ ಚಳವಳಿ ಮಂಕಾಗುತ್ತದೆ. ಬುದ್ಧನ ನಂತರದ ಅನುಯಾಯಿಗಳು ನಕಾರಾತ್ಮಕತೆಯನ್ನೆ ಪ್ರಚುರಪಡಿಸುತ್ತ ಹೋದರು. ಆ ಸಮಯದಲ್ಲಿ ಸಕಾರಾತ್ಮಕ ಅಂಶವನ್ನು ಜನ ಬಯಸುತ್ತಿದ್ದದ್ದು ಗಮನಕ್ಕೆ ತಂದುಕೊಳ್ಳಲಿಲ್ಲ. ಪ್ರತಿ ಚಳವಳಿಗೂ ಅದರದ್ದೇ ವಿಲಕ್ಷಣತೆ ಇರುತ್ತದೆ. ಅದು ಬಿದ್ದುಹೋದಾಗ ಯಾವುದು ಹೆಮ್ಮೆಯ ಸಂಗತಿ ಎನಿಸಿತ್ತೋ ಅದೇ ದೌರ್ಬಲ್ಯವಾಗುತ್ತದೆ' ಎಂದಿದ್ದರು.
ಹೀಗೆ ಬೌದ್ಧಧರ್ಮದ ಪತನಕ್ಕೆ ಕಾರಣವಾದ ಆಯಾಮಗಳ ಬಗ್ಗೆ ಹಲವರು ಬೆಳಕು ಚೆಲ್ಲಿದ್ದಾರೆ. ಆದರೆ ಇವತ್ತಿನ ಸೆಕ್ಯುಲರ್‌ವಾದಿಗಳ ಕತೆ ಮಾತ್ರ ಇವ್ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೇ ಏಕಮೇವ ಉದ್ದೇಶಕ್ಕೆ ಶ್ರಮಿಸುತ್ತಿದೆ. ಅದೆಂದರೆ ಹಿಂದೂಗಳೂ ಆಕ್ರಮಣಕಾರರಾಗಿದ್ದರು ಎಂಬುದನ್ನು ನಿರೂಪಿಸುವುದು. ಹಿಂದೂಗಳೇ ಬೌದ್ಧರನ್ನು ಹತ್ಯೆಗೈದರು ಹಾಗೂ ಅವರ ದೇವಾಲಯಗಳನ್ನು ನಾಶಪಡಿಸಿದರು ಎಂಬ ಸುಳ್ಳನ್ನೇ ಹರಡುವುದಕ್ಕೆ ಇತಿಹಾಸಕಾರರು ಕಟಿಬದ್ಧರಾಗಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಇತಿಹಾಸವನ್ನು ಹೀಗೆಯೇ ಬರೆದುಕೊಂಡು ಬರಲಾಗಿದೆ. ಈ 'ಶ್ರೇಷ್ಠ ಇತಿಹಾಸಕಾರರು' ಸಂಸ್ಥೆಗಳ ಆಯಕಟ್ಟಿನ ಜಾಗದಲ್ಲಿ ಕುಳಿತಿರುವುದೇ ಇವಕ್ಕೆಲ್ಲ ಕಾರಣ. ಈ ಮಿಥ್ಯಾವಾದ ಕೊನೆಗೊಳ್ಳಬೇಕೆಂದರೆ ಈ ನಿಯಂತ್ರಣವನ್ನು ತಪ್ಪಿಸುವುದೊಂದೇ ಮಾರ್ಗ.

- ಅರುಣ್ ಶೌರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement