ಹಗಲು ದರೋಡೆ ಮಾಡುತ್ತಿವೆಯೇ ಆಟೋಗಳು?
ರಾಜ್ಯದ ರಾಜಧಾನಿ ಬೆಂಗಳೂರನ್ನು ಹೊರತು ಪಡಿಸಿ ರಾಜ್ಯದ ಇನ್ನ್ಯಾವುದೇ ನಗರಗಳಲ್ಲಿ ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ದಾಯವಾಗಿಲ್ಲವೆನ್ನಿಸುತ್ತದೆ. ಬೆಳಗಾವಿ, ಹುಬ್ಬಳ್ಳಿಯಂತಹ ಮಹಾನಗರಗಳಲ್ಲಿ ಇಂದಿನ ಪರಿಸ್ಥಿತಿ ಹೇಗಿದೆ ನೋಡಿ: 1-2 ಕಿ. ಮೀ. ದೂರದ ಪ್ರಯಾಣಕ್ಕೆ ಆಟೋ ಚಾಲಕರು ಬಾಯಿಗೆ ಬಂದಂತೆ ಬಾಡಿಗೆ ಕೇಳುತ್ತಾರೆ. ಈ ಹಗಲ ದರೋಡೆಗೆ ಜನಸಾಮಾನ್ಯರು ತೆರಬೇಕಾದದ್ದು 50-60 ರುಪಾಯಿ! ಇನ್ನು ರಾತ್ರಿ 9 ಗಂಟೆಯ ನಂತರ ಈ ಬೆಲೆ ದುಪ್ಪಟ್ಟಾಗಿರುತ್ತದೆ. ಪ್ರಯಾಣಿಕರಿಲ್ಲದೆ ಆಟೋಚಾಲಕರು ಗಂಟೆಗಟ್ಟಲೆ ತಮ್ಮ ನಿಲ್ದಾಣಗಳಲ್ಲಿ ಕಾಯುತ್ತಾರೆಯೇ ಹೊರತು ನ್ಯಾಯವಾದ ಬೆಲೆಗೆ ಬಾಡಿಗೆಗೆ ಬರುವುದಿಲ್ಲ. ಇನ್ನು ಶಾಲಾ ಮಕ್ಕಳನ್ನು ಕುರಿ ಮರಿಗಳ ಹಾಗೆ ಸಾಗಿಸುವ ಇದೆ ಆಟೋ ಚಾಲಕರು, ಅಲ್ಲಿಯೂ ಪೋಷಕರಿಂದ ದುಡ್ಡು ಕೀಳುವುದು ಸಾಮಾನ್ಯ. ಆದರೆ ಅಲ್ಲಿಯೂ ಅದೆಷ್ಟೋ ನಿಯಮಗಳ ಉಲ್ಲಂಘನೆ ಮಾಡುವುದು, ಅಸುರಕ್ಷಿತವಾಗಿ ಮಕ್ಕಳನ್ನು ಸಾಗಿಸುವುದು ಹೀಗೆ ಪ್ರತಿ ದಿನ ಎಡವಟ್ಟುಗಳ ಸರಮಾಲೆಯಲ್ಲೇ ಜೀವನ ಸಾಗಿಸುವ ಈ ಮಹಾನುಭಾವರಿಗೆ ಶಿಸ್ತಿನ ಪಾಠ ಕಲಿಸುವುದು ಹೇಗೆ? ಯಾರು?
ಉತ್ತರ ಕರ್ನಾಟಕದ ಅಥವಾ ಕರ್ನಾಟಕದ ಅದೆಷ್ಟೋ ನಗರಗಳ ರೇಲ್ವೆ ನಿಲ್ದಾಣದ ಮುಂದಿರುವ ಎಲ್ಲ ಪ್ರೀ-ಪೇಯ್ಡ್ ಕೌಂಟ್ರಗಳು ಅದಾಗಲೇ ತುಕ್ಕು ಹಿಡಿದಿವೆ. ಆ ಕೌಂಟರ್ಗಳ ಬಳಿ ಒಂದೇ ಒಂದು ಆಟೋ ಕೂಡ ಇರುವುದಿಲ್ಲ. ಅದೇ ಸ್ವಲ್ಪ ಆಚೆ ಬಂದರೆ ರಸ್ತೆಯ ಪಕ್ಕ ಸಾಲು ಸಾಲಾಗಿ ಆಟೋಗಳನ್ನು ನಿಲ್ಲಿಸಲಾಗಿರುತ್ತದೆ!ನಿಲ್ದಾಣದಿಂದ ಆಚೆ ಬರುವ ಎಲ್ಲ ಪ್ರಯಾಣಿಕರಿನ್ನು ಕರೆದು, ತಮ್ಮದೇ ಆದ ಬೆಲೆ ಹೇಳಿ, ಒಲ್ಲದಿದ್ದರೂ ಎಳೆದೊಯ್ಯುವ ಅಥವಾ ಒಪ್ಪಿಕೊಳ್ಳದಿದ್ದಲ್ಲಿ ತೆಗಳುವ ಅದೆಷ್ಟೋ ಆಟೋ ಚಾಲಕರನ್ನು ನಾವು ನೋಡಿಲ್ಲ? ಇವರ ಕಾಟ ತಡೆಯಲಾಗದೆ, ಹೇಳುವ ರೇಟು ಅರಗಿಸಿಕೊಳ್ಳಲಾಗದೆ ಅದೆಷ್ಟೋ ಜನ 'ಯಾಕಪ್ಪ ಇವರ ಉಸಾಬರಿ' ಅಂದುಕೊಂಡು ಬರಿಗಾಲಲ್ಲೇ ನಡೆದುಕೊಂಡು ಹೋಗುತ್ತಾರೆ. ಸರಿಯಾದ ಬೆಲೆಗೆ ಆಟೋಗಳು ಓಡಿದ್ದೆ ಆದರೆ ಅದೆಷ್ಟೋ ಜನ ಹೆಚ್ಚಿನ ಸಂಖ್ಯೆಯಲ್ಲಿ ಈ ಸಾರಿಗೆಯನ್ನೇ ಉಪಯೋಗಿಸುತ್ತಾರಲ್ಲವೇ?
'ದುಡಿಮೆಯೇ ದುಡ್ಡಿನ ತಾಯಿ' ಅನ್ನೋ ಮಾತಿದೆ. ಆದರೆ ಈ ಆಟೋಗಳ ವಿಷಯದಲ್ಲಿ ಮಾತ್ರ ಅದ್ಯಾಕೋ ನನಗೆ 'ದರೋಡೆಯೇ ದುಡ್ಡಿನ ತಾಯಿ' ಎಂಬಂತೆ ಕೇಳಿಸುತ್ತದೆ. ಬಾಯಿಗೆ ಬಂದ ಬೆಲೆ ಹೇಳಿ ಹಾಡು ಹಗಲೇ ಜನರನ್ನು ಲೂಟಿ ಮಾಡುವ ಈ ಚಾಲಕರು ಮೀಟರ್ ಕಡ್ಡಾಯದ ವಿಷಯ ಬಂದಾಗ ಮಾತ್ರ, 'ನಮ್ಮ ಬಳಿ ಬಾಡಿಗೆಗೆ ಬರುವ ಜನ ಕಡಿಮೆ, ಸಾಲ ಕಟ್ಟಬೇಕು, ಸಂಸಾರ ನಡೆಸಬೇಕು' ಎಂಬಿತ್ಯಾದಿ ಕಾರಣಗಳನ್ನು ಹೇಳುತ್ತಾರೆ. ಈ ಕುಂಟುನೆಪವೊಡ್ಡಿ ಮೀಟರ್ ಅಳವಡಿಸದ ಅದೆಷ್ಟೋ ಚಾಲಕರ ಆಟೋಗಳಿಗೆ DOLBY DIGITAL Music System, ಸಖತ್ ಆಗಿರೋ ಮೇಲ್ಚಾವಣಿ (Body built roof top)ಬೇಕು! ರಂಗು ರಂಗಿನ ಸೀಟುಗಳು, ರೇಡಿಯಂ ಸ್ಟಿಕರ್ಗಳು, ಬಣ್ಣ ಬಣ್ಣ ಬಲ್ಬುಗಳನ್ನು ಆಟೋಗಳಿಗೆ ಹಾಕಿಕೊಂಡು ಶೋಕಿ ಹೊಡೆಯೋದಕ್ಕೆ ಇವರ ಬಳಿ ಕಾಸು, ಸಮಯ ಇರುತ್ತದೆ. ಆದರೆ ಮೀಟರ್ ಪ್ರಕಾರ ಆಟೋ ಓಡಿಸುವ ಸಂದರ್ಭ ಬಂದಾಗ ಮಾತ್ರ ಇವರು ಸಪ್ತ ಸ್ವರಗಳಲ್ಲಿ ಆಲಾಪ ಶುರುಮಾಡುತ್ತಾರೆ. ಸಾಮಾನ್ಯ ಪ್ರಯಾಣಿಕನೆಂದಾದರೂ ಆಟೋ ಚಾಲಕನಿಗೆ, ನನಗೆ ಕಲರ್ಫುಲ್ ಸೀಟು ಬೇಕು, ಮ್ಯೂಸಿಕ್ ಸಿಸ್ಟಮ್ ಬೇಕು ಎಂದು ಕೇಳುತ್ತಾನೆಯೇ?
ಪ್ರತಿನಿತ್ಯ ಇಂತಹವನ್ನೆಲ್ಲ ನೋಡಿದರೂ ಜನ ಸಾಮಾನ್ಯರು ಅದನ್ನೆಲ್ಲ ಪ್ರಶ್ನಿಸುವುದಿಲ್ಲ. ಪ್ರಶ್ನಿಸಬೇಕಾದ ಅಧಿಕಾರಿಗಳು ಇದೆಲ್ಲ ತಮಗೆ ಸಂಭಂದವಿಲ್ಲವೇನೋ ಎನ್ನುವ ರೀತಿಯಲ್ಲಿ ಬದುಕುತ್ತಾರೆ. ಆದರೆ ನಾವ್ಯಾಕೆ ಇದನ್ನೆಲ್ಲಾ ಸಹಿಸಿಕೊಂಡು ಹೀಗೆ ಜೀವನ ತಳ್ಳಬೇಕು? ಭಾರತಿಯ ವಾಹನ ಕಾಯ್ದೆಯಡಿ ಆಟೋ ಚಾಲಕರು ಪ್ರಯಾಣಿಕರ ಕೋರಿಕೆಗೆ ವಿರುದ್ಧವಾಗಿ ನಡೆದುಕೊಳ್ಳುವ ಹಾಗಿಲ್ಲ. ಅಂದರೆ ಅವರು ಕರೆದ ಸ್ಥಳಕ್ಕೆ ಬರುವುದನ್ನು ನಿರಾಕರಿಸುವುದಾಗಲಿ (ಆಯಾನಗರದ ಪರಿಮಿತಿಯ ಒಳಗೆ), ಮಿತಿಗಿಂತ ಹೆಚ್ಚಿನ ಹಣ ಕೇಳುವುದಾಗಲಿ ಮಾಡುವ ಹಾಗಿಲ್ಲ. ಅಲ್ಲದೆ ಪರಿಮಿತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವುದು ಕೂಡ ಶಿಕ್ಷಾರ್ಹ ಅಪರಾಧ. ಆದರೆ ಇವುಗಳನ್ನೆಲ್ಲ ನಾವು ಪ್ರಶ್ನಿಸದಿದ್ದಲ್ಲಿ ಆಟೋ ಚಾಲಕರು ತಾವು ಮಾಡಿದ್ದೆ ರಾಜ್ಯಭಾರ ಎನ್ನುವ ಹಾಗೆ ನಡೆಕೊಳ್ಳುವುದಂತು ಸತ್ಯ.
ವಯಸ್ಕರು, ಮೈ ಕೈ ಗಟ್ಟಿ ಇರುವ ನಾಗರಿಕರು ಒಂದೊಮ್ಮೆ ಆಟೋ ಚಾಲಕರು ಲೂಟಿಗಿಳಿದರೆ ಅದನ್ನು ತಿರಸ್ಕರಿಸಿ ನಡೆದುಕೊಂಡೋ ಅಥವಾ ಸರ್ಕಾರಿ ಸಾರಿಗೆಯಲ್ಲೋ ಹೋಗಬಹುದು ಆದರೆ ಅತ್ಯವಶ್ಯಕ ಸಂದರ್ಭಗಳಲ್ಲಿ ವೃದ್ಧರ ಮತ್ತು ಮಕ್ಕಳ ಗತಿಯೇನು? ಸಣ್ಣ ಪುಟ್ಟ ನಗರಳಲ್ಲಂತೂ ಸರ್ಕಾರಿ ನಗರ ಸಾರಿಗೆ ಇಲ್ಲವೇ ಇಲ್ಲ. ಮನೆಗೊಂದು ಕಾರು ಬೈಕು ಇಟ್ಟುಕೊಳ್ಳುವ ಶ್ರೀಮಂತ ದೇಶದವರು ನಾವಲ್ಲ, ಇಂತಹ ಪರಿಸ್ಥಿತಿಯಲ್ಲಿ ಆಟೋಗಳನ್ನೇ ನೆಚ್ಚಿಕೊಂಡು ಬೀದಿಗಿಳಿಯೋ ಅದೆಷ್ಟೋ ಜನರ ಪಾಡು ಪ್ರತಿ ದಿನ ಏನಾಗುತ್ತೆ ಅನ್ನೋದನ್ನೊಮ್ಮೆ ಯೋಚಿಸಿದರೆ ನಿಜಕ್ಕೂ ಬೇಸರವಾಗುತ್ತದೆ. ಪೆಟ್ರೋಲ್ ಬೆಲೆ ಹೆಚ್ಚಾಗಿದ್ದೆ ತಡ ಕರಾರಸಾಸಂ ಹಾಗು ಬಿಎಂಟಿಸಿ ಬಸ್ಸುಗಳ ಟಿಕೆಟ್ ದರದಲ್ಲಿ ಶೇಕಡ 10 ರಷ್ಟು ಹೆಚ್ಚಳ ಮಾಡುವ ನಮ್ಮ ಸಾರಿಗೆ ಮಂತ್ರಿಗಳಾದ ರಾಮಲಿಂಗಾ ರೆಡ್ಡಿಗಳಿಗೆ ನಾನು ಹೇಳೋದು ಇಷ್ಟೇ, 'ಸ್ವಾಮಿ ಒಂದು ಸಾರಿ ಬೆಂಗಳೂರು ಬಿಟ್ಟು ಆಚೆ ಬನ್ನಿ. ಆಟೋಗಳಲ್ಲಿ ಸ್ವಲ್ಪ ಓಡಾಡಿ. ಅವಾಗಲೆ ನಿಮಗೆ ಜನಸಾಮಾನ್ಯರ ಕಷ್ಟ ಏನು ಅನ್ನೋದು ಅರ್ಥ ಆಗೋದು. ಬೆಂಗಳೂರಲ್ಲಿ ಕೂತು ಬೆಲೆ ಏರಿಸೋದು ಎಷ್ಟುಮುಖ್ಯವೋ, ಬೆಳಗಾವೀಲಿ ಆಟೋಗಳಿಗೆ ಮೀಟರ್ ಅಳವಡಿಸೋದು ಅಷ್ಟೇ ಮುಖ್ಯ. ಎಲ್ಲ ಕಡೆಯಿಂದಲೂ ಲೂಟಿ ಆಗಬಾರದು ಸ್ವಾಮೀ! ನಮಗೂ ಬದುಕಲು ಬಿಡಿ.
- ಮಹಾಂತ ವಕ್ಕುಂದ
ಹವ್ಯಾಸಿ ಬರಹಗಾರರು
mahantesh_vakkund@yahoo.co.in