ಅಂಕಣಗಳು

ಐದು ವರ್ಷಗಳಲ್ಲಿ ಬದಲಾಗದೇ ಉಳಿದ ಬೆಂಗಳೂರಿನ ಆರ್ತನಾದ

ಇವತ್ತು ಗಡಿಯಾರವನ್ನು 2008ರ ಸಮಯಕ್ಕೆ ನಿಲ್ಲಿಸಿ ನೋಡುವ ಆಸೆಯಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಯು ದಕ್ಷಿಣ ಭಾರತದಲ್ಲೇ ತನ್ನ ಮೊದಲ ಸರ್ಕಾರವನ್ನು ಪ್ರಾರಂಭಿಸಿದ ಸಮಯವದು. ನಿರೀಕ್ಷೆಗಳು ಆಕಾಶದೆತ್ತರವಿದ್ದವು. ಅದರಲ್ಲೂ ರಾಜ್ಯವು ಸುಧೀರ್ಘ 40 ತಿಂಗಳುಗಳ ಕಾಲ ಮೈತ್ರಿ ಸರ್ಕಾರವನ್ನು ನೋಡಿತ್ತು. ಬೆಂಗಳೂರು ನಗರದ ಪರಿಸ್ಥಿತಿಯಂತೂ ಕೆಟ್ಟದ್ದು ಎಂಬ ಸ್ಥಿತಿಯಿಂದ ಅತಿ ಹದಗೆಟ್ಟಿದ್ದು ಎಂಬ ಗತಿಗೆ ಹೊರಳಿಕೊಂಡಿತ್ತು. ಮೂಲ ಸೌಕರ್ಯ ನಾಶವಾಗಿತ್ತು. ರಸ್ತೆಗಳ ಸ್ಥಿತಿಯಂತೂ ಗಂಭೀರ. ಇದನ್ನು ಇನ್ನಷ್ಟು ಹದಗೆಡಿಸುವಂತೆ ದಿನವಿಡೀ ಅಸ್ತವ್ಯಸ್ತವಾಗಿರುತ್ತಿದ್ದ ಸಂಚಾರ ಸ್ಥಿತಿ. ಆ ಸಮಯದಲ್ಲಿ ನಾನು ಲೇಖನ ಬರೆದು, ಹದಗೆಟ್ಟ ಬೆಂಗಳೂರನ್ನು ಮತ್ತೆ ಹಳಿಗೆ ತರುವುದಕ್ಕೆ ಬಿಜೆಪಿ ಸರ್ಕಾರ ಸಮಯ ಎತ್ತಿಡಬೇಕಾದ ಅವಶ್ಯದ ಬಗ್ಗೆ ಬರೆದಿದ್ದೆ. ಅದು ಕೇವಲ ನನ್ನ ಧ್ವನಿ ಆಗಿರಲಿಲ್ಲ. ನಗರದ ನಾಗರಿಕರೆಲ್ಲರೂ ಅದೇ ಧ್ವನಿಯಲ್ಲಿ ಮಾತನಾಡಿ, ಬೆಂಗಳೂರಿನ ಅವ್ಯವಸ್ಥೆಯನ್ನು ಸರಿ ಮಾಡುವಂತೆ ಅಂದಿನ ನೂತನ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಸರ್ಕಾರವು ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿತೇ? ಇಲ್ಲ. ಬೆಂಗಳೂರಿಗರ ವಿಶ್ವಾಸವನ್ನು ಗೆದ್ದುಕೊಳ್ಳುವ ಉತ್ತಮ ಅವಕಾಶವನ್ನು ಬಿಜೆಪಿ ಕಳೆದುಕೊಂಡಿತು.
ಅಂದು ಬರೆದ ಆ ಲೇಖನ ಇವತ್ತಿಗೂ ಪ್ರಸ್ತುತವಾಗಿದೆ. ಒಂದೇ ವ್ಯತ್ಯಾಸ ಎಂದರೆ ಅವತ್ತು ಅಧಿಕಾರದ ಹುದ್ದೆಯಲ್ಲಿ ಬಿಜೆಪಿ ಇತ್ತು. ಈಗ ಕಾಂಗ್ರೆಸ್ ಇದೆ. ಹಾಗೆಂದೇ ಆಗ ಬರೆದಿದ್ದನ್ನು ಮತ್ತೆ ನೆನಪಿಸಿಕೊಳ್ಳಬೇಕಿದೆ. 'ಒಳ್ಳೆಯ ರಸ್ತೆಗಳೇ ಒಳ್ಳೆಯ ನಗರಕ್ಕೆ ಕಾರಣೀಭೂತವಾಗುತ್ತವೆ. ನೀವು ವಿಶ್ವದ ಯಾವುದೇ ಅಗ್ರಮಾನ್ಯ ನಗರಕ್ಕೆ ಭೇಟಿ ಕೊಡಿ. ನಿಮ್ಮ ಕಣ್ಣುಗಳನ್ನು ಮೊದಲ ನೋಟಕ್ಕೆ ಸೆಳೆಯುವ ಸಂಗತಿ ಎಂದರೆ ಅಲ್ಲೆಲ್ಲ ಉತ್ತಮ ನಿರ್ವಹಣೆಯಲ್ಲಿ ಇರುವ ರಸ್ತೆಗಳು. ನಮ್ಮ ನಗರಗಳು ಅವುಗಳಂತೆ ಆಗುವುದೇಕೆ ಸಾಧ್ಯವಿಲ್ಲ? ನಮ್ಮಲ್ಲಿ ಪರಿಣತ ಪಡೆಗೆ ಕೊರತೆ ಇಲ್ಲ. ಹಣವೂ ಇದೆ. ರಸ್ತೆ ಉಪಯೋಗಕ್ಕೆ ಸಾಕಷ್ಟು ತೆರಿಗೆ ವಸೂಲು ಮಾಡಲಾಗುತ್ತದೆ. ಇಷ್ಟಾಗಿಯೂ ನಮ್ಮ ರಸ್ತೆಗಳ ಸ್ಥಿತಿ ಏಕೆ ಶೋಚನೀಯವಾಗಿದೆ? ದೀರ್ಘ ಕಾಲಕ್ಕೆ ಬಾಳಿಕೆ ಬರುವಂಥ ರಸ್ತೆಗಳನ್ನು ನಿರ್ಮಿಸುವುದು ನಮಗೇಕೆ ಸಾಧ್ಯವಾಗುತ್ತಿಲ್ಲ? ನಮ್ಮ ಪುರಪಿತೃಗಳು ಈ ಮೂಲಭೂತ ಅವಶ್ಯಕತೆಯತ್ತ ಕುರುಡಾಗಿರುವುದಾದರೂ ಏಕೆ?
ಬೆಂಗಳೂರನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳೋಣ. ಇದು ಜಾಗತಿಕ ನಗರ ಎಂದೇ ಕರೆಯಲ್ಪಡುತ್ತದೆ. ವಿಶ್ವದ ಜನರಿಗೆ ಭಾರತಕ್ಕಿಂತ ಹೆಚ್ಚಾಗಿ ಬೆಂಗಳೂರಿನ ಹೆಸರೇ ಗೊತ್ತಿದೆ ಎಂದು ಪ್ರಧಾನಿಯೇ ಹೇಳಿದ್ದರು. ಮಾಹಿತಿ ತಂತ್ರಜ್ಞಾನದಲ್ಲಿ ಇದು ಮಾಡಿರುವ ಸಾಧನೆಯಿಂದ ಬಂದಿರುವ ಶ್ರೇಯಸ್ಸು ಇದಾಗಿದೆ. ಕಳೆದೊಂದು ದಶಕದಲ್ಲಿ ಬೆಂಗಳೂರು ನಗರವು ಅಗಾಧವಾಗಿ ಬೆಳವಣಿಗೆಯನ್ನು ಕಂಡಿದೆ. ರಾಜ್ಯದ ಆದಾಯದ ಹೆಚ್ಚಿನ ಭಾಗವು ಇಲ್ಲಿಂದಲೇ ಹುಟ್ಟುವಂಥದ್ದು. ಇದರ ವೈಭವದ ಝಗಮಗದಲ್ಲೆ ನಮ್ಮ ರಾಜಕಾರಣಿಗಳು ಎದೆ ಉಬ್ಬಿಸುತ್ತಾರಾದರೂ ನಗರದ ಬೆಳವಣಿಗೆ ತಕ್ಕಂತೆ ಮೂಲ ಸೌಕರ್ಯಗಳನ್ನು ಒದಗಿಸುವ ಗೋಜಿಗೆ ಹೋಗುತ್ತಿಲ್ಲ. ರಸ್ತೆಗಳು ಕಿರಿದಾಗಿದ್ದು ಅವುಗಳ ನಿರ್ವಹಣೆ ಕೆಟ್ಟದಾಗಿದೆ. ಇಲ್ಲಿನ ಸ್ಥಿತಿಯೇ ಹೀಗಿರಬೇಕಾದರೆ ಸಣ್ಣ ನಗರಗಳ ಬಳಲಿಕೆ ಹೇಗಿದ್ದಿರಬಹುದು ಎಂದು ಅರ್ಥ ಮಾಡಿಕೊಳ್ಳಬಹುದು.
ನಮ್ಮ ನೇತಾಗಳು ಮತ್ತು ಅಧಿಕಾರಿಗಳು ಪದೇ ಪದೆ ವಿದೇಶ ಪ್ರವಾಸಗಳಿಗೆ ಹೋಗುತ್ತಲೇ ಇರುತ್ತಾರೆ. ಜನರ ತೆರಿಗೆ ಹಣದಲ್ಲಿ ವಿದೇಶಗಳ ರಸ್ತೆ- ಮೂಲ ಸೌಕರ್ಯಗಳನ್ನು ಅಧ್ಯಯನ ಮಾಡುವುದಕ್ಕೆಂದು ಹೋಗಿ ಬರುತ್ತಾರಿವರು. ಅಲ್ಲಿಂದ ಜ್ಞಾನೋದಯದೊಂದಿಗೆ ಮರಳುತ್ತಾರೆ. ಇಲ್ಲಿ ಪತ್ರಿಕಾಗೋಷ್ಠಿ ಕರೆದು ಬೆಂಗಳೂರನ್ನು ಸಿಂಗಾಪುರವನ್ನಾಗಿಯೋ, ಶಾಂಘೈ ಥರವೋ, ಟೋಕ್ಯೊ ರೀತಿಯಲ್ಲೋ ಮಾಡುವುದಾಗಿ ಹೇಳುತ್ತಾರೆ. ಇನ್ನೊಂದು ಪ್ರವಾಸಕ್ಕೆ ಸಿದ್ಧಗೊಳ್ಳುವವರೆಗೆ ಹೀಗೆ ಆಡಿದ ಮಾತುಗಳು ಅವರ ನೆನಪಿನಲ್ಲೇ ಇರುವುದಿಲ್ಲ. ಸಮಸ್ಯೆಯ ಮೂಲ ಎಲ್ಲಿದೆ ಎಂಬ ಕುರಿತು ಯಾವ ಹುಡುಕಾಟವನ್ನೂ ನಡೆಸುವುದಿಲ್ಲ. ರಸ್ತೆಗಳು ಅಷ್ಟು ಬೇಗ ಏಕೆ ಬಿರುಕು ಬಿಡುತ್ತವೆ? ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸುವ ವ್ಯವಸ್ಥೆ ಇದೆಯೇ? ಇಲ್ಲಿ ಯಾವುದಕ್ಕೂ ಉತ್ತರದಾಯಿತ್ವವೇ ಇಲ್ಲವೇ?
ಗುತ್ತಿಗೆದಾರರು ಕಳಪೆ ಕಾಮಗಾರಿಯಲ್ಲಿಯೇ ಮಗ್ನರು. ಅವರು ಎಷ್ಟೊಂದು ಅವಸರದಲ್ಲಿರುತ್ತಾರೆಂದರೆ ಪ್ರತಿ ತಿಂಗಳೂ ಅವರಿಗೊಂದು ಗುತ್ತಿಗೆ ಒಲಿದಿರುತ್ತದೆ. ಅಧಿಕಾರಿಗಳೊಂದಿಗೆ ಅವರು ಸಾಧಿಸಿಕೊಂಡಿರುವ ಸಂಬಂಧ ಯಾರಿಗಾದರೂ ಅರ್ಥವಾಗುವಂಥದ್ದೇ. ತೆರಿಗೆದಾರರ ಹಣ ಹೀಗೆಯೇ ಕೊಳ್ಳೆಯಾಗಿ ಹೋಗುತ್ತಿದೆ. ತಪ್ಪಿತಸ್ಥರನ್ನು ಸುಮ್ಮನೇ ಬಿಡುವುದೇಕೆ? ಪೌರ ಸಂಸ್ಥೆಗಳ ನಡುವೆ ಸಮನ್ವಯವೇ ಇಲ್ಲವಾಗಿದೆ. ಎಲ್ಲರೂ ಸ್ವತಂತ್ರವಾಗಿ ತಾವೇ ತಾವಾಗಿ ಕೆಲಸ ಮಾಡುವವರು. ನಂತರ ಅವ್ಯವಸ್ಥೆಗಳಾದಾಗ ಒಬ್ಬರನ್ನೊಬ್ಬರು ದೂರಿಕೊಂಡಿರುತ್ತಾರೆ. ಬಿಬಿಎಂಪಿ ರಸ್ತೆಗಳಿಗೆ ಡಾಂಬರು ಸವರುತ್ತದೆ. ಅದಾಗಿ ಒಂದೇ ದಿನಕ್ಕೆ ಬಿಡಬ್ಲ್ಯುಎಸ್ಎಸ್ಬಿ ನೀರಿನ ಸೋರಿಕೆ ತಡೆಯಲೆಂದೋ ಹೊಸ ಪೈಪ್ಗಳನ್ನು ಹಾಕುವುದಕ್ಕೆಂದೋ ಅದೇ ರಸ್ತೆಯನ್ನು ಅಗೆಯುತ್ತದೆ. ಇಂಥ ಕಾರ್ಯಕ್ಕೆ ಬಿಎಸ್ಎನ್ಎಲ್ ಸಾಥ್ ನೀಡುತ್ತದೆ. ಹಾಗೆಂದೇ ನಾವು ರಸ್ತೆಗಳಲ್ಲಿ ಇಷ್ಟೆಲ್ಲ ಅಗೆತವನ್ನು ಕಾಣುತ್ತಿದ್ದೇವೆ. ಈ ಎಲ್ಲ ಏಜೆನ್ಸಿಗಳೂ ಹೊಂದಾಣಿಕೆಯಿಂದ ಕೆಲಸ ಮಾಡಬಾರದೇಕೆ?
ಕೆಲವು ಬುದ್ಧಿವಂತ ಮನಸ್ಸುಗಳು ಕಾಲ ಕಾಲಕ್ಕೆ ಪ್ರಸ್ತಾವಿಸಿದ ನವೀನ ವಿಚಾರಗಳು- ಪರಿಹಾರಗಳೆಲ್ಲ ಕೇವಲ ಕಾಗದದಲ್ಲಿ ಉಳಿದುಕೊಂಡಿವೆ. ರಸ್ತೆ ಅಗೆತವನ್ನು ತಪ್ಪಿಸುವುದಕ್ಕೆ ಕೊಳವೆ ಮಾರ್ಗವನ್ನು ನಿರ್ಮಿಸಿ ಎಲ್ಲರೂ ಸೇವೆ ಒದಗಿಸುವುದಕ್ಕೆ ಆ ಮೂಲಕವೇ ಲೈನ್ಗಳನ್ನು ಎಳೆಯುವ ವ್ಯವಸ್ಥೆ ಮಾಡಲಾಗುವುದು ಎಂದು ಬಿಬಿಎಂಪಿ ಹೇಳಿಕೊಂಡಿತ್ತು. ಆ ಭರವಸೆ ಅದೇಕೆ ಆರಿಹೋಯಿತೋ ಗೊತ್ತಿಲ್ಲ. ಈ ಐಡಿಯಾವನ್ನು ಕಾರ್ಯರೂಪಕ್ಕೆ ತರುವ ಕ್ರಮಗಳನ್ನೇಕೆ ತೆಗೆದುಕೊಳ್ಳಲಾಗಿಲ್ಲ?
ಸ್ಥಳೀಯ ನಿವಾಸಿಗಳ ಸಂಘಗಳು ಕಾವಲುನಾಯಿ ಪಾತ್ರವನ್ನು ನಿರ್ವಹಿಸುವುದಕ್ಕೆ ಸಿದ್ಧವಿವೆ. ರಸ್ತೆ ಯೋಜನೆಗಳ ರೂಪುರೇಷೆ, ಪರಿವೀಕ್ಷಣೆ, ಅನುಷ್ಠಾನಗಳಲ್ಲಿ ಅವರು ನಿಗಾ ವಹಿಸಬಲ್ಲರು. ನಿವಾಸಿಗಳ ಸಂಘದ ಸದಸ್ಯರು ತಾವು ಖುದ್ದಾಗಿ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ಕೊಟ್ಟು ಅಲ್ಲಿ ರಸ್ತೆ ಕಾಮಗಾರಿಯ ಮಿಶ್ರಣಕ್ಕೆ ನಿಯಮದಂತೆ ಪದಾರ್ಥಗಳನ್ನು ಉಪಯೋಗಿಸಲಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಬಲ್ಲರು. ಆದರೆ ಪೌರಸಂಸ್ಥೆಗಳು ಅವರಿಗೆ ಈ ಅಧಿಕಾರ ಕೊಡುವುದಕ್ಕೆ ತಯಾರಿಲ್ಲ. ಗುತ್ತಿಗೆದಾರರು ಮತ್ತು ಅಧಿಕಾರಿಗಳ ಲಾಬಿ ಇದನ್ನು ತಡೆಯುತ್ತಿದೆಯೇ? ತಮ್ಮ ಭ್ರಷ್ಟಾಚಾರ ಬೆಳಕಿಗೆ ಬರುತ್ತದೆ ಎಂಬ ಆತಂಕವೇ ಅವರಿಗೆ?
ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಇವೆಲ್ಲವನ್ನೂ ಮಾಡಬಹುದಿತ್ತು. ಸ್ಥಳೀಯ ನಿವಾಸಿಗಳ ಸಂಘವನ್ನು ಪಾಲ್ಗೊಳ್ಳುವಂತೆ ಮಾಡಿ, ರಸ್ತೆ ಕಾಮಗಾರಿಗಳ ಗುಣಮಟ್ಟದ ಮೇಲೆ ನಿಗಾ ಇರಿಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂಥ ವ್ಯವಸ್ಥೆ ಜಾರಿಯಾಗಬೇಕು.
ಬೆಂಗಳೂರು ಮಾತ್ರವೇ ಏಕೆ? ಉಳಿದೆಲ್ಲ ನಗರಗಳ ರಸ್ತೆಗಳಿಗೂ ಇಂಥ ಗಮನ ಸಿಗುವಂತಾಗಬೇಕು. ನಗರದ ಸೌಲಭ್ಯಗಳು ಹಳ್ಳಿಗಳಿಗೂ ಸಿಗುವಂತಾಗಬೇಕು. ಪೊಳ್ಳು ಭರವಸೆ ಮತ್ತು ಮಾತಿನ ಆರ್ಭಟಗಳಿಂದ ಏನೂ ಸಾಧಿಸಲಿಕ್ಕಾಗದು.'
ಇದೀಗ ಐದು ವರ್ಷಗಳ ನಂತರವೂ ಈ ಲೇಖನದ ಒಡಲಾಳ ಪ್ರಸ್ತುತವಾಗಿಯೇ ಉಳಿದಿದೆ. ಯಾವುದೂ ಬದಲಾಗಿಲ್ಲ. ರಸ್ತೆಗಳ ನಿರ್ವಹಣೆ ಎಂದಿನಂತೆ ಕೆಟ್ಟ ಸ್ಥಿತಿಯಲ್ಲಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಡುವಿನ ಭ್ರಷ್ಟ ಬಾಂಧವ್ಯ ಇನ್ನಷ್ಟು ಬಲಗೊಂಡಿದೆ. ನಾಗರಿಕ ಏಜೆನ್ಸಿಗಳ ನಡುವೆ ಸಮನ್ವಯ ಏರ್ಪಟ್ಟಿಲ್ಲ. ಪರಿಣತ ಸಮಿತಿಗಳ ಹೊಸ ಹೊಸ ಐಡಿಯಾಗಳು ಕಸದ ಬುಟ್ಟಿಗೆ ಸೇರುತ್ತಿವೆ. ಸ್ಥಳೀಯ ನಿವಾಸಿಗಳ ಸಂಘಗಳಿಗೆ ಪಾಲುಗೊಳ್ಳುವಿಕೆಯ ಭಾಗ್ಯವಿಲ್ಲ. ಬೇರೆಯವರಿಗಿಂತ ತಾನು ಭಿನ್ನ ಎಂದು ತೋರಿಸುವ ಅವಕಾಶವನ್ನು ಬಿಜೆಪಿ ಕಳೆದುಕೊಂಡಿತು. ಉತ್ತಮ ರಸ್ತೆಗಳ ನಿರ್ಮಾಣದ ಮೂಲಕ ಅದು ಬೆಂಗಳೂರಿನ ಚಹರೆಯನ್ನೇ ಬದಲಾಯಿಸಬಹುದಿತ್ತು. ಆದರೆ ಆಂತರಿಕ ಕಚ್ಚಾಟ, ಭ್ರಷ್ಟಾಚಾರ, ಸ್ವಜನ ಪಕ್ಷಪಾತಗಳಲ್ಲೇ ಅದು ಕಾಲ ತಳ್ಳಿತು. ಆಡಳಿತ ಮತ್ತು ಅಭಿವೃದ್ಧಿಗಳು ಕುಂಠಿತಗೊಂಡವು. ಪಕ್ಷಕ್ಕೆ ಮತದಾರ ಬಾಗಿಲು ತೋರಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.
ಬಹುಕಾಲದ ನಂತರ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ತನ್ನ ಹಿಂದಿನವರು ಮಾಡಿರುವ ತಪ್ಪುಗಳಿಂದ ಪಾಠ ಕಲಿಯಬೇಕು. ಬೆಂಗಳೂರನ್ನು ಅದು ಮತ್ತೆ ಹಳಿಗೆ ತರಬೇಕು. ಆರೋಗ್ಯಕರ ಬೆಂಗಳೂರು ಎಂದರೆ ಆರೋಗ್ಯಯುತ ಕರ್ನಾಟಕದ ಸಾಕಾರ. ಹಂತ ಹಂತಗಳಲ್ಲಿ ಬೆಂಗಳೂರಿನ ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ತಮ್ಮ ಮಾತುಗಳನ್ನು ಕಾರ್ಯರೂಪಕ್ಕೆ ತರುತ್ತಾರೆಂದು ಆಶಿಸೋಣ.

ಕೊನೆ ಗುಟುಕು: ಒಂದು ಆಸಕ್ತಿಕರ ಟ್ವೀಟ್: ಜಂಭ ಕೊಚ್ಚಿಕೊಳ್ಳುವುದು ಸರಿಯಲ್ಲ. ಆದರೂ ಹೇಳುತ್ತಿದ್ದೇನೆ- ನಾವು ಎಷ್ಟು ಶ್ರೀಮಂತರೆಂದರೆ ಅಡುಗೆಯಲ್ಲಿ ಟೊಮೆಟೊ ಬಳಸುತ್ತೇವೆ!

- ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!