ತಿದ್ಕೊಂಡ ತಪ್ಪುಗಳ ಮಾಹಿತಿಯು ಬೇಕು
'ವಿಶ್ವೇಶ್ವರ ಭಟ್'ರವರ 'ರವಾಂಡಾ ಡೈರಿ' ಆಕರ್ಷಕವಾಗಿ ಮೂಡಿ ಬಂದಿದೆ. ಹಾಗೆಯೇ 'ಕೇಳ್ರಪ್ಪೋ ಕೇಳಿ' ಪ್ರಶ್ನೆಗಳು ಹಾಗೂ ಉತ್ತರಗಳಿಗೆ ಸ್ವಲ್ಪ ಮಟ್ಟಿಗೆ 'ಸೆನ್ಸಾರ್' ಬೇಕೆನಿಸುತ್ತಿದೆ. ಕೆಲವೊಂದು ಪ್ರಶ್ನೆಗಳು ಹಾಗೂ ಉತ್ತರಗಳು 'ಅಶ್ಲೀಲ'ವೆನಿಸುತ್ತವೆ. ಜೊತೆಗೆ 'ತಪ್ಪಾಯ್ತು ತಿದ್ಕೋತೀವಿ' ಅಂಕಣದಿಂದ ತಾವು ಇದುವರೆವಿಗೂ ತಿದ್ದಿಕೊಂಡಿರುವ ತಪ್ಪುಗಳ ವಿವರಣೆ (ಮಾಹಿತಿ) ನೀಡಿದರೆ ಮತ್ತಷ್ಟು ವಿಶೇಷವೆನಿಸುತ್ತದೆ.
- ಮಾಗಡಿ ಶ್ರೀನಿವಾಸ್. ಬಾಳೆಕಟ್ಟೆ, ರಾಮನಗರ ಜಿಲ್ಲೆ.
ಜುಲೈ 4ರ ನಿಮ್ಮ ಪತ್ರಿಕೆಯ 'ಬೈಟು ಕಾಫಿ' -ಸೈ ಜವಾನ್ ಚಿತ್ರ ಲೇಖನದಡಿ, ಸಂತ್ರಸ್ಥ ಯಾತ್ರಿಗಳ ರಕ್ಷಣೆಯಲ್ಲಿ ತೊಡಗಿರುವ, ಭಾರತೀಯ ಸೈನಿಕರು ರಚಿಸಿರುವ, ಸ್ವಯಂ ಮಾನವ ಸೇತುವೆ, ಲಕ್ಷಕ್ಕೊಂದು ಎನ್ನಬಹುದಾದ ದೃಶ್ಯ ಚಿತ್ರಣವಾಗಿ ಮೂಡಿ ಬಂದಿದೆ. ಆ ಚಿತ್ರವನ್ನು ಬಣ್ಣಿಸಲು ಪದಗಳೇ ಸಾಲದು. ಅಂತಿಂಥ ಚಿತ್ರ ಅದಲ್ಲ. ಅಸಾಮಾನ್ಯ, ಅನೂಹ್ಯ. ಅದೆಂತಹ ನಿರ್ಭಾವುಕನನ್ನೂ ಆರ್ದ್ರ ಹೃದಯಿಯನ್ನಾಗಿಸುವ ನೈಜ ಚಿತ್ರ. ನನ್ನ ಮನದಲ್ಲಿ ಸಾವಿರ ಭಾವನೆಗಳನ್ನು ಬಡಿದೆಬ್ಬಿಸಿದ ಅಸಾಧಾರಣ ಜೀವಂತ ಚಿತ್ರ. ದಯವಿಟ್ಟು ಸದರಿ ಚಿತ್ರವನ್ನು ಎಲ್ಲ ಓದುಗರಿಗಾಗಿ ಅರ್ಧಪುಟ ಗಾತ್ರಕ್ಕೆ ಮೀರಿಸಿ ಕನ್ನಡಪ್ರಭದಲ್ಲಿ ಮುದ್ರಿಸಿ ಎಂಬುದಾಗಿ ಸಂಪಾದಕರಲ್ಲಿ ಬೇಡಿಕೆ.
- ಎನ್.ಡಿ. ಕಾರಂತ, ಮೈಸೂರು-22
ದಿನಾಂಕ 06.07.2013ರ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಛಾಯಾಗ್ರಾಹಕ ಕೆ. ರವಿಯವರು ಸೆರೆ ಹಿಡಿದಿರುವ ಟಿಬೆಟಿಯನ್ರ ಧರ್ಮಗುರು ದಲೈಲಾಮರ 79ನೇ ಹುಟ್ಟು ಹಬ್ಬದ ಸಂಭ್ರಮದ ಸವಿನೆನಪಿಗಾಗಿ ಪತ್ರಿಕೆ ಮುಖಪುಟದಲ್ಲಿ ಪ್ರಕಟಿಸಿರುವ ಫೋಟೋ ಸೂಪರ್ ಆಗಿದೆ.
- ಎಂ.ಬಿ. ಕೃಷ್ಣಮೂರ್ತಿ, ಮೊ. 94491- 30531
ಮಾನ್ಯ ವಿಶ್ವೇಶ್ವರ ಭಟ್ಟರೇ, ತಾವು ಬರೆದ ಲೇಖನ 'ಕನ್ನಡದಲ್ಲೂ ವಿಜ್ಞಾನವನ್ನು ಮನೋಜ್ಞವಾಗಿಸಿದ ಮಹನೀಯರು' (ನೂರೆಂಟು ನೋಟ)ದಲ್ಲಿ ವಿಜ್ಞಾನ ಪತ್ರಿಕೆಯ ಇಬ್ಬರು ಮಹನೀಯರ ಬಗ್ಗೆ ತಿಳಿಸಿದ್ದೀರಿ. ಅದರಲ್ಲಿ ನಮ್ಮ ಮುತ್ತಾತನವರು "ಬೆಳ್ಳಾವೆ ವೆಂಕಟನಾರಣಪ್ಪನವರು"... ಇವರು ವಿಜ್ಞಾನ ಪತ್ರಿಕೆಯನ್ನು ಮುದ್ರಿಸುತ್ತಿದ್ದ ವಿಚಾರ ಅವರ ಮೊಮ್ಮಕ್ಕಳಾದ ನಮಗೆ ತಿಳಿದಿರಲಿಲ್ಲ. ನೂರೆಂಟು ನೋಟ ಓದಿದ ಮೇಲೆ ಈ ಮಹನೀಯರ ಸಾಧನೆ ಬಗ್ಗೆ ಸಹಜವಾಗೇ ಹೆಮ್ಮೆ ಮೂಡಿತು. ಬೆಳ್ಳಾವೆ ವೆಂಕಟನಾರಣಪ್ಪನವರ ಬಗ್ಗೆ ಇವರ ಮೊಮ್ಮಕ್ಕಳಲ್ಲಿ ಒಬ್ಬರಾದ ವಕೀಲರು ಬಿ.ಎಸ್. ಕೃಷ್ಣಮೂರ್ತಿರವರನ್ನು ಸಂಪರ್ಕಿಸಿದಿದ್ದರೆ ಇನ್ನೂ ಹೆಚ್ಚಿನ ಮಾಹಿತಿ ನಿಮಗೆ ಸಿಗುತ್ತಿತ್ತೋ ಏನೋ...? ಒಟ್ಟಿನಲ್ಲಿ "ವಿಜ್ಞಾನ"ವನ್ನು ಕನ್ನಡೀಕರಿಸಲು ಶ್ರಮಿಸಿದ ಈ ಇಬ್ಬರು ಮಹನೀಯರ ಬಗ್ಗೆ ತಿಳಿಸಿದ ನಿಮಗೆ ಹಾಗೂ ನೆಚ್ಚಿನ ಕ.ಪ್ರ.ಗೆ ವಂದನೆಗಳು.
- ಬೆಳ್ಳಾವೆ ರಮೇಶ್ ಬಿ.ಎಸ್, ಬೆಂಗಳೂರು-560085
ದಿನಾಂಕ 4.7.13ರ ಕ.ಪ್ರ.ದಲ್ಲಿ ಪ್ರಕಟವಾದ ಎಸ್. ಮಲ್ಲಿಕಾರ್ಜುನಪ್ಪ ಬರೆದ 'ಸಾಹಿತ್ಯಿಕ ದಾಳಿ' ಕುರಿತಾದ ಲೇಖನ ನಿಜಕ್ಕೂ ಎಚ್ಚರಗೊಳ್ಳುವಂತೆ ಮಾಡಿತು. ಯಾವುದೇ ಪುರಾವೆಯಿಲ್ಲದೆ, ಆಧಾರರಹಿತ ಸಂಗತಿಗಳನ್ನು ಮನಸ್ಸಿಗೆ ಬಂದಂತೆ ಬರೆಯುವ, ದುರುದ್ದೇಶ ಪ್ರೇರಿತ ಕೃತಿಗಳನ್ನು ಬರೆದು, ಅದಕ್ಕೆ ಜಾತಿಯ ಲೇಪ ಹಚ್ಚುವ ಸಾಹಿತಿಗಳ ಸಂಖ್ಯೆ ಪ್ರಸ್ತುತ ನಾಯಿಕೊಡೆಯಂತೆ ತಲೆಯೆತ್ತುತ್ತಿರುವುದು ಭಯ ಹುಟ್ಟಿಸುವಂತಿದೆ. ಇಂತಹ ಸಾಹಿತಿಗಳನ್ನು ಪ್ರೋತ್ಸಾಹಿಸುವ ಹಂಪಿ ವಿಶ್ವವಿದ್ಯಾಲಯ ಇತ್ತೀಚೆಗೆ ತನ್ನ ಗೌರವವನ್ನೇ ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಒಂದು ಕಡೆ ವಿದೇಶಿಯರ ವಿಲಾಸ, ಸ್ಥಳೀಯರ ಕುಮ್ಮಕ್ಕಿನಿಂದ ಸ್ಮಾರಕಗಳು ಬಣ್ಣ ಕಳೆದುಕೊಳ್ಳುತ್ತಿವೆ. ಇನ್ನೊಂದೆಡೆ 'ರಹಮತ' ರಂತಹ ವ್ಯಕ್ತಿಗಳು ಸಾಹಿತ್ಯಿಕ ರಂಗವನ್ನು, ಆಧಾರರಹಿತ ಮಾಹಿತಿಗಳನ್ನು ನೀಡಿ, ವಿಶ್ವವಿದ್ಯಾಲಯದ ಮಾನವನ್ನು ಹರಾಜು ಹಾಕುತ್ತಿದ್ದಾರೆ.
- ಪಾರಿಜಾತ, ಮೈಸೂರು
ಪ್ರತಿ ಭಾನುವಾರ ಪ್ರಕಟವಾಗುತ್ತಿರುವ ಟಿ.ಜೆ.ಎಸ್. ಜಾರ್ಜ್ರ 'ನೇರ ಮಾತು' ಅಂಕಣ ಚೆನ್ನಾಗಿ ಮೂಡಿ ಬರುತ್ತಿದೆ. ನಮ್ಮನ್ನು ನಾವು ಎಷ್ಟೇ ಪ್ರಬಲರು, ಸಮರ್ಥರು ಎಂದು ಹೇಳಿಕೊಳ್ಳುತ್ತಿದ್ದರೂ, ನಾವಿನ್ನೂ ಗುಲಾಮಗಿರಿ ಅಥವಾ ದಾಸ್ಯತ್ವದಿಂದ ಹೊರಬರುವ ಯಾವ ಲಕ್ಷಣವೂ ಕಾಣಬರುತ್ತಿಲ್ಲ ಎಂಬ ವಾಸ್ತವವನ್ನು ಜಾರ್ಜ್ ತಮ್ಮ ಜುಲೈ 7ರ ಲೇಖನದಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಇವರ ಅಂಕಣ ಈಗಿತ್ತಲಾಗಿ ಪತ್ರಿಕೆಯ ಕೊನೆಯ ಪುಟಗಳಲ್ಲಿ ಪ್ರಕಟವಾಗುತ್ತಿದೆ. ಒಂದು ಲೇಖನ ಅಥವಾ ಜಾಹೀರಾತು ಹೆಚ್ಚಿನ ಆಕರ್ಷಣೆ ಪಡೆಯಬೇಕೆಂದರೆ ಅವರನ್ನು ಯಾವ ರೀತಿ ಇಡುತ್ತೀರಿ (Positioning) ಎಂಬುದು ಮುಖ್ಯ. ಈ ದೃಷ್ಟಿಯಲ್ಲಿ ನೋಡಿದಾಗ ಜಾರ್ಜರ ಅಂಕಣವನ್ನು ಮುಂದಾದರೂ ಪ್ರಾರಂಭಿಕ ಪುಟದಲ್ಲಿ ನೋಡುವ ಅವಕಾಶ ಬರುವುದೇ? ಇನ್ನು ಶಾಲಿನಿ ರಜನೀಶ್ರವರ ಲೇಖನಮಾಲೆಗಳು ಈಗಿತ್ತಲಾಗಿ ತಮ್ಮ ಗುಣಮಟ್ಟವನ್ನೇ ಉಳಿಸಿಕೊಳ್ಳುತ್ತಿಲ್ಲ ಅನಿಸುತ್ತಿದೆ.
- ಶಂಕರನಾರಾಯಣ ಭಟ್, ಹೊನ್ನಾವರ, ಮೊ. 9632 821920