ಹಾಲುಣಿಸುವವಳ ರಕ್ತ ಹೀರುವುದು ಸರಿಯೇ?
'ಗಂಗೆಯಿಂದ ದೂರವಾಗುವ ದುಃಖಕ್ಕೆ ಬೇರಾವ ದುಃಖವೂ ಸಾಟಿಯಲ್ಲ. ತಾಯಿಯ ವಿಯೋಗವೂ ದೊಡ್ಡದಲ್ಲ. ತಂದೆಯ ವಿಯೋಗವೂ ಅಲ್ಲ. ಹೆಂಡತಿ ಮಕ್ಕಳ ವಿಯೋಗವೂ ಅಲ್ಲ. ಧನವಿಯೋಗವೂ ಅಷ್ಟು ದುಃಖಕರವಲ್ಲ' : ಶ್ರೀಮನ್ಮಹಾಭಾರತಮ್ (ಅನುಶಾಸನಪರ್ವ 26/75)
ಯಾವ ಗಂಗೆಗಾಗಿ ಭಗೀರಥನ ಮೂರು ತಲೆಮಾರು ತಪಗೈದು ಧನ್ಯವಾಯಿತೋ, ಜಗತ್ತಿನ ಅತಿ ದೊಡ್ಡ ಮನುಕುಲದ ಸಂಗಮವಾದ ಕುಂಭಸ್ನಾನ ಇಂದಿಗೂ ಭಕ್ತಿಭಾವದಿಂದ ನೆರವೇರುತ್ತಿದೆಯೋ, ಯಾವ ಗಂಗೆಯ ಗುಟುಕು ನೀರಿಲ್ಲದೇ ಭಾರತೀಯನೊಬ್ಬನ ಸಾವೂ ಪೂರ್ಣವಾಗುವುದಿಲ್ಲವೋ, ಯಾವ ನದಿಯ ಅಲೌಕಿಕ ಧಾರೆ ಭಾರತದ ಅಧಿದೇವತೆಯಾದ ಬದರೀನಾರಾಯಣನ ಪಾದೋದಕವಾಗಿ ನಮಗಾಗಿ ಇಳಿದುಬಂದಿದೆಯೋ, ಅಂತಹ ಗಂಗಾಮಾತೆಯ ಹರಿವು ಇಂದು ಸರ್ವನಾಶದ ಅಂಚಿನಲ್ಲಿದೆ. ಇತ್ತೀಚೆಗೆ ಸ್ವಾಮಿ ಜ್ಞಾನ ಸ್ವರೂಪ ಸಾನಂದರು ಮತ್ತು ಪೇಜಾವರ ಶ್ರೀಪಾದರು ಮಾತಾಡುತ್ತಾ ತಿಳಿಸಿದಂತೆ 'ಗಂಗೆ ನಾಶವಾದರೆ, ಇಡೀ ಭಾರತದ ಸಂಸ್ಕೃತಿಯೇ ಹೋದಂತೆ.' ಈ ಮಾತು ಅಕ್ಷರಶಃ ಸತ್ಯ. ಭಾರತವನ್ನು ಒಗ್ಗೂಡಿಸಿ ರಕ್ಷಿಸುವ ಚಿಹ್ನೆಗಳಲ್ಲಿ ಗಂಗೆಯಂತಹುದು ಮತ್ತೊಂದಿಲ್ಲ. ಕೋಟಿ ಕೋಟಿ ವರ್ಷಗಳ ಚಿಹ್ನೆ ಈ ಗಂಗಾಮಾತೆ.
ಆದರೆ ತಾಯಿಯ ಹಾಲನ್ನು ಮಾತ್ರ ಬಯಸದೇ, ತಾಯಿಯ ರಕ್ತವನ್ನೇ ಹೀರುವ ಮಹಾಪಾಪಕ್ಕೆ ನಾವೆಲ್ಲರೂ ಕಾರಣರಾಗುತ್ತಿದ್ದೇವೆ. ಗಂಗಾಮಾತೆಯ ಪುಣ್ಯಸಲಿಲದ ಶೇಕಡ ಹತ್ತರಷ್ಟು ಭಾಗವೂ ಪ್ರಯಾಗ ತಲುಪುತ್ತಿಲ್ಲ. ಗಂಗಾತೀರದ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನ ಗಂಗೆಯ ಮಾಲಿನ್ಯದಿಂದ ರೋಗಗ್ರಸ್ತರಾಗುತ್ತಿದ್ದಾರೆ. ಭಾಗೀರಥಿಯು ಹಿಮಾಲಯದ ತಪ್ಪಲಿನಲ್ಲೇ ನಿಂತ ನೀರಾಗುತ್ತಿದೆ. ಗಂಗಾಪ್ರವಾಹವೇ ಇಲ್ಲದ ಬರಿದಾದ ಗಂಗೆಯ ಪಾತ್ರಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹಿಮಪರ್ವತದ ಭೂರಚನೆಯನ್ನೇ ಬದಲಿಸುತ್ತಾ ಗಂಗೆಯ ದಿಕ್ಕನ್ನೇ ಬದಲಿಸುತ್ತಿದ್ದೇವೆ. ಎಲ್ಲವೂ ಒಂದೇ ಒಂದು ಕಾರಣಕ್ಕಾಗಿ : ವಿದ್ಯುತ್ ಹಾಗೂ ಆರ್ಥಿಕ ಪ್ರಗತಿ. ಅದಕ್ಕಾಗಿ ಅಣೆಕಟ್ಟುಗಳ ರಚನೆ!
ಬದಲಾದ ವಾಸ್ತವಿಕತೆಯಲ್ಲಿ ನದಿಗೆ ಅಣೆಕಟ್ಟು ಕಟ್ಟುವುದು ತಪ್ಪೇ ಎಂದು ಕೆಲವರು ವಾದಿಸಬಹುದು. ಆದರೆ ಭಾರತದ ನದಿಗಳು ಪ್ರಪಂಚದ ಬೇರೆಡೆಯ ನದಿಗಳಂತಲ್ಲ. ಥೇಮ್ಸ್ ನದಿಯಲ್ಲಿ ಆಚಮನ ಅಥವಾ ಸ್ನಾನ ಮಾಡಲು ಅಲ್ಲಿನ ಜನತೆ ಕಾತರರಾಗಿಲ್ಲ. ಅವರಿಗೆ ಅದು ಕೇವಲ ಪ್ರಾಕೃತಿಕ ಸಂಪನ್ಮೂಲ ಅಥವಾ ಪ್ರಾಕೃತಿಕ ಸೊಗಸು ಹೊರತು ಪ್ರಕೃತಿ ಮಾತೆಯಲ್ಲ.
ಗಂಗೆ ಕೇವಲ ಒಂದು ನದಿಯಲ್ಲ. ಅದು ಭಾರತ ದೇಶದ ಅದ್ವಿತೀಯ ಸಾಂಸ್ಕೃತಿಕ ಚಿಹ್ನೆ. ಅದು ದೇವನದಿ.
ಬದರೀ, ಕೇದಾರ, ಗಂಗೋತ್ರಿ, ಯಮುನೋತ್ರಿ ಎಂಬ ನಾಲ್ಕು ಕ್ಷೇತ್ರಗಳು ಗಂಗೆಯ ಉಗಮಸ್ಥಾನಗಳು. ಬದರಿಯಿಂದ ಅಲಕನಂದೆ ಹರಿದರೆ, ಕೇದಾರದಿಂದ ಮಂದಾಕಿನೀ, ಗಂಗೋತ್ರಿಯಿಂದ ಭಾಗೀರಥಿ ಹಾಗೂ ಯಮುನೋತ್ರಿಯಿಂದ ಯಮುನೆ. ಗಂಗೆಯ ಈ ಮುಖ್ಯಧಾರೆಗಳಲ್ಲಿ ಒಂದಾದ ಯಮುನೆ ಈಗಾಗಲೇ ವಿನಾಶದ ತುದಿಗೆ ತಲುಪಿದ್ದಾಳೆ. ದಿಲ್ಲಿಯ ಯಮುನಾ ಧಾರೆಯಲ್ಲಿ ಒಂದು ಹನಿಯೂ ಯಮುನೆಯ ನೀರಿಲ್ಲ. ಅದು ಕೇವಲ ಚರಂಡಿ ಎಂದು ಸಂಶೋಧನೆಗಳು ದೃಢಪಡಿಸಿವೆ. ಗಂಗೆಯ ಸ್ಥಿತಿಯೂ ಅದರ ಹತ್ತಿರವೇ ಇದೆ.
ಪ್ರಾಚೀನ ನಂಬಿಕೆಯಂತೆ ಹಾಗೂ ಸಂಶೋಧನೆಗಳೂ ಸೂಚಿಸುತ್ತಿರುವಂತೆ ಗಂಗೆಯ ನೀರಿನಲ್ಲಿ 'ಬ್ರಹ್ಮದ್ರವ್ಯ' ಎಂಬ ವಿಶೇಷ ದ್ರವ್ಯವಿದೆ. ವೈಜ್ಞಾನಿಕವಾಗಿಯೂ ಹಿಮಾಲಯ ಪರ್ವತಗಳಿಂದ ಅಲ್ಲಿನ ಕಣಗಳನ್ನು ತನ್ನಲ್ಲಿ ಹೊತ್ತು ತರುವ ಗಂಗೆ ಯಾವುದೇ ಮಾಲಿನ್ಯಗಳನ್ನು ಹೊಡೆದೋಡಿಸುವ ವಿಶಿಷ್ಟ ವಿಕಿರಣಶಕ್ತಿಯನ್ನು ಹೊಂದಿರುವುದು ಐಐಟಿ ಕಾನ್ಪುರ, ನೀರಿ, ಮೊದಲಾದ ಸಂಶೋಧನಾ ಕೇಂದ್ರಗಳಿಂದ ದೃಢಗೊಂಡಿದೆ. ಆದ್ದರಿಂದಲೇ ಎಂದೂ ಕೊಳೆಯದ ಅಮೃತದಂತಾಗಿ ಮರಣಶೀಲರಿಗೂ ಅಮೃತಸದೃಶವಾಗಿ ಹರಿಯುತ್ತಿದೆ.
ನದಿಯ ಹರಿವಿಗೆ ತಕ್ಕಂತೆ ಮನುಷ್ಯ ಬದುಕಬೇಕೇ ಹೊರತು, ಮನುಷ್ಯನ ಅವಶ್ಯಕತೆಗೆ ತಕ್ಕಂತೆ ನದಿ ಹರಿಯಬೇಕೇ? 'ಬಾಯಾರಿದವನು ಬಾವಿಯ ಬಳಿ ತೆರಳಬೇಕು. ಬಾವಿಯೇ ಬಾಯಾರಿದವನ ಬಳಿ ಬರುವುದಿಲ್ಲ' ಎನ್ನುವ ಮಾತಿದೆ. ಹಿಂದೆಲ್ಲ ನೀರಿಗೆ ಗೌರವವಿತ್ತು. ನದಿಯನ್ನು ನಿಲ್ಲಿಸಿ ನಲ್ಲಿಯಾಗಿಸುವ ಸಂಸ್ಕೃತಿಯಿರಲಿಲ್ಲ. ಆದರೆ, ಈಗ ದೇವಪ್ರಯಾಗದಲ್ಲಿನ ಭಾಗೀರಥಿ-ಅಲಕನಂದಾ ಸಂಗಮವೂ ಸರ್ಕಾರದ ಇಚ್ಛಾಧೀನ!
ಹೀಗೆ ಭಾಗೀರಥೀ ನದಿಯನ್ನು ನಿಲ್ಲಿಸಿದ್ದರಿಂದ ಎರಡು ದುಷ್ಪರಿಣಾಮಗಳನ್ನು ಕಂಡದ್ದಾಯಿತು. ಒಂದು, ಮನುಷ್ಯಾಧೀನತ್ವದ ನಾಶ. ಎರಡು, ಹರಿಯದ ಕಾರಣ ನದಿ ನಾಶ. ನಿಂತ ನೀರಾದ್ದರಿಂದ ಅಲ್ಲಿಂದ ಮುಂದೆ ಬ್ರಹ್ಮದ್ರವ್ಯ ಹರಿಯುವುದೇ ಇಲ್ಲ. ಅದು ಅಣೆಕಟ್ಟಿನಲ್ಲೇ ತಳವೂರಿ ನಿಲ್ಲುತ್ತದೆ. ಹಾಗಾಗಿ ದೇವಪ್ರಯಾಗ, ಹರಿದ್ವಾರ ಮೊದಲಾದೆಡೆ ಗಂಗೆಯಲ್ಲಿನ ಬ್ರಹ್ಮದ್ರವ್ಯ ಬಹುತೇಕ ಕ್ಷೀಣಿಸುತ್ತಿದೆ.
ನಿಂತ ನೀರಿನ ಮತ್ತೊಂದು ದೊಡ್ಡ ಸಮಸ್ಯೆ ನದಿಯ ಶುದ್ಧಿಯ ನಾಶ. ತಿಹರಿಯ ಹಿಂಬದಿಯಲ್ಲಿ 30-40 ಕಿ.ಮೀ ನಿಂತ ನೀರಾಗಿರುವ ಭಾಗೀರಥಿ ತನ್ನ ತಿಳಿ ನೀಲಿ ಬಣ್ಣವನ್ನು ಕಳೆದುಕೊಂಡು ಹಚ್ಚ ಹಸಿರು ಬಣ್ಣಕ್ಕೆ ತಿರುಗಿದೆ. ತಿಹರಿಯ ಮುಂಭಾಗಕ್ಕೆ ನೀರು ಹರಿಯಲು ಬಿಟ್ಟಾಗಲೂ ಅದು ನಿಂತ ನೀರೇ. ಏಕೆಂದರೆ ತಿಹರಿಯ ಮುನ್ನೀರಿನವರೆಗೂ ಕೋಟೇಶ್ವರದ ಹಿನ್ನೀರು ಚಾಚಿದೆ. ಹಿಮಾಲಯದಂತಹ ದುರ್ಗಮ ಪ್ರದೇಶದಲ್ಲಿನ ನೂರಾರು ಚದರ ಕಿ. ಮೀ. ವಿಸ್ತೀರ್ಣದ ಸೂಕ್ಷ್ಮ ಜೀವಸಂಕುಲದ ಪಾರಂಪರಿಕ ಜೀವವ್ಯವಸ್ಥೆ ಹದಗೆಟ್ಟಿದೆ. ಹಿಮಾಲಯದ ಭೂರಚನೆ ಇತರೆಡೆಯಂತಲ್ಲ. ಆ ಎತ್ತರದಲ್ಲಿನ ನಮ್ಮ ದುಸ್ಸಾಹಸದಿಂದ ತಿಹರಿಯ ಸುತ್ತಮುತ್ತ ಭೂಕುಸಿತವಾಗುತ್ತಿದ್ದು, ನಾಲ್ಕೈದು ಮೀಟರ್ಗಳ ಮಟ್ಟಕ್ಕೆ ದಿಢೀರ್ ಕುಸಿತವಾಗುತ್ತಿದೆ. ದಟ್ಟ ಅರಣ್ಯ ನಾಶವಾಗಿದೆ. ಎಲ್ಲವೂ ಯಾವುದಕ್ಕಾಗಿ?
ಇದಕ್ಕೂ ಸಮಜಾಯಿಷಿ ನೀಡುವಂಥ ಇಂಜಿನಿಯರ್ಗಳ ಹೊಸ ಸೂತ್ರ ಇತ್ತೀಚೆಗೆ ಚಾಲ್ತಿಯಲ್ಲಿದೆ. 'ನಾವು ಬೃಹತ್ ಜಲಾಶಯದ ಅಣೆಕಟ್ಟುಗಳನ್ನು ನಿರ್ಮಿಸುವುದಿಲ್ಲ. ರನ್ ಆಫ್ ದಿ ರಿವರ್ (ನದಿ ಪ್ರವಾಹ ಯೋಜನೆ) ಎಂಬ ಯೋಜನೆಗಳ ಮೂಲಕ ವಿದ್ಯುತ್ ಉತ್ಪಾದಿಸುತ್ತೇವೆ. ಇದರಿಂದ ನದಿಯ ಪ್ರವಾಹಕ್ಕೂ ಹೆಚ್ಚಿನ ಅಡಚಣೆಯಾಗುವುದಿಲ್ಲ, ವಿದ್ಯುತ್ ಉತ್ಪಾದನೆಯೂ ಆಗುತ್ತದೆ' ಎನ್ನುವುದು ಅವರ ವಾದ. ಈ ಯೋಜನೆ ನಮ್ಮಂತಹ ಸುಶಿಕ್ಷಿತ ಆಧುನಿಕರಿಗೆ ಮೆಚ್ಚಿಗೆಯಾದೀತೇನೋ?
ಇಲ್ಲಿ ಬೃಹತ್ ಜಲಾಶಯಗಳಿರುವುದಿಲ್ಲ. ಆದರೆ ನದಿಗೆ ಅಡ್ಡಲಾಗಿ ಅಣೆಕಟ್ಟೊಂದನ್ನು ನಿರ್ಮಿಸಿ, ಪಕ್ಕದ ಪರ್ವತದಲ್ಲಿ ದೊಡ್ಡ ಸುರಂಗವನ್ನು ಕೊರೆಯಲಾಗುತ್ತದೆ. ಆ ಸುರಂಗ 20-30 ಕಿ.ಮೀ ದೂರ ನೇರವಾಗಿ ಪಯಣಿಸಿ, ಆ ನಂತರದ ನದಿಯ ಪಾತ್ರಕ್ಕೆ ಹೆಚ್ಚಿನ ಎತ್ತರದಿಂದ ಬೀಳುವ ನೀರಿನ ಹೊರಬಾಗಿಲಾಗಿ ನಿಂತಿರುತ್ತದೆ. ಅಣೆಕಟ್ಟೆಯಲ್ಲಿ ನಿಗದಿತ ಮಟ್ಟಕ್ಕೆ ನೀರು ಶೇಖರವಾದ ಕೂಡಲೇ, ಮುಂಬರುವ ನೀರನ್ನು ಸುರಂಗದಲ್ಲಿ ಹರಿಸಿ, ಹೊರಗೆ ಬೀಳಿಸುವಾಗ ವಿದ್ಯುತ್ ಉತ್ಪಾದನೆಯಾಗುತ್ತದೆ. ವಸ್ತುತಃ ಈ ಯೋಜನೆಯಿಂದ ಮೇಲೆ ಹೇಳಿದ ಎಲ್ಲ ಸಮಸ್ಯೆಗಳ ಜೊತೆಗೆ ಅಧಿಕ ಸಮಸ್ಯೆಗಳೂ ಇವೆ. ಮೊದಲನೆಯದಾಗಿ ಅಣೆಕಟ್ಟೆಯ ಮುಂಭಾಗದಿಂದ ಸುರಂಗದ ಹೊರಬಾಗಿಲಿನ ತನಕ ನದಿಯಲ್ಲಿ ನೀರೇ ಇಲ್ಲದಂತಾಗುತ್ತದೆ. ಎರಡನೆಯದಾಗಿ, ಸುರಂಗದಲ್ಲಿ ಹರಿವ ನೀರಿನಲ್ಲಿ ಗಾಳಿ ಮತ್ತು ನೆಲದ ಸಂಪರ್ಕವಿಲ್ಲದಿರುವುದರಿಂದ ಅಲ್ಲಿ ಯಾವುದೇ ಜಲಚರಗಳು ಬದುಕದಂತಾಗುತ್ತವೆ. ಮೂರನೆಯದಾಗಿ, ಕೊರೆತದಿಂದಾಗಿ ಹಿಮಾಲಯದ ಭೂರಚನೆಯೇ ಅಲುಗಾಡುತ್ತದೆ. ಸುರಂಗಗಳು ಅಲ್ಲಿನ ಗ್ರಾಮಸ್ಥರಿಗೆ ಆಶ್ರಯವಾದ ಜಲ ಮೂಲಗಳನ್ನು ಬರಿದು ಮಾಡುತ್ತಿವೆ. ಡೈನಮೈಟ್ ಸ್ಫೋಟಗಳು ದೊಡ್ಡ ಪ್ರಾಕೃತಿಕ ನಾಶಕ್ಕೆ ನಾಂದಿಯಾಗುತ್ತಿವೆ.
ಈ ಎರಡೂ ಬಗೆಯ ಅಣೆಕಟ್ಟುಗಳ (ಜಲಾಶಯಸಹಿತ ಯೋಜನೆ ಮತ್ತು ನದಿ-ಪ್ರವಾಹ ಯೋಜನೆ) ಮತ್ತೊಂದು ಬೃಹತ್ ವಿತ್ವಿನಾಶಿನೀ ಶಕ್ತಿ/ ಕ್ಷೇತ್ರಗಳ, ಮಂದಿರಗಳ ಹಾಗೂ ಮೂರ್ತಿಗಳ ಜಲಸಮಾಧಿ. ಗಂಗಾತೀರ ಸರ್ವಾಧಿಕ ಪುಣ್ಯಕ್ಷೇತ್ರಗಳ ಬೀಡು. ಒಂದು ಭಯಾನಕ ಭವಿಷ್ಯದ ಮುನ್ಸೂಚನೆ ಕಳೆದ ಅಕ್ಷಯ ತೃತೀಯದಂದೇ ನಡೆದು ಹೋಯಿತು (ಜೂ 16.) ಶ್ರೀನಗರದ ಬಳಿ ಅಲಕನಂದೆಗೆ ಕಟ್ಟಿರುವ ನದಿ-ಪ್ರವಾಹದ ಅಣೆಕಟ್ಟು ಕಾರ್ಯಾರಂಭಿಸಿದೆ. ಇದರಿಂದ ಹಿನ್ನೀರಿನಲ್ಲಿ ಧಾರೀ ದೇವಿ ಮಂದಿರ ಮುಳುಗಡೆಯಾಗಲಿದೆ.
ಈ ಕ್ಷೇತ್ರ ಹಾಗೂ ಮಂದಿರ ಉತ್ತರಾಖಂಡದ ಜನತೆಯ ದೊಡ್ಡ ಶ್ರದ್ಧಾ ಕೇಂದ್ರ. ಹಳೇ ಮೈಸೂರು ಪ್ರಾಂತಕ್ಕೆ ಚಾಮುಂಡೇಶ್ವರಿಯಂತೆ ಉತ್ತರಾಖಂಡದ ಜನತೆಗೆ ಧಾರೀದೇವಿ. ಎಲ್ಲ ವಿರೋಧದ ನಡುವೆ ಆ ಮೂರ್ತಿಯ ವಿಸ್ಥಾಪನೆಯ ದುರದೃಷ್ಟ ನಡೆದು ಹೋಯಿತು. ಇದನ್ನು ತಡೆಯಲೆಂದೇ ಶ್ರೀ ಜ್ಞಾನಸ್ವರೂಪಸಾನಂದ ಸ್ವಾಮೀಜಿ ಜೂ 13 ರಿಂದ ಅಖಂಡ ನಿರಶನ ಆರಂಭಿಸಿದ್ದರು. ವಸ್ತುತಃ ಆ ಶಿಲೆಯ ಸ್ಥಳವೇ ಪವಿತ್ರ. ಅದನ್ನು ಬೇರೆಡೆ ಸ್ಥಳಾಂತರಿಸಲು ಸಾಧ್ಯವೇ ಇಲ್ಲ. ಕೊನೆಗೂ ಕತ್ತರಿಸಿ ತೆಗೆದ ಮರುದಿನವೇ ಉತ್ತರಾಖಂಡದಲ್ಲಿ ಭಾರೀ ಪ್ರವಾಹದ ದುರಂತ ಸಂಭವಿಸಿದ್ದು ಗಮನಾರ್ಹ.
ಈಗಾಗಲೇ ಬದರಿ ದೇವಸ್ಥಾನದ ಕೆಲವೇ ಕಿ.ಮೀ. ಕೆಳಗೆ ಯೋಜನೆಯೊಂದನ್ನು ಪ್ರಸ್ತಾವಿಸಲಾಗಿದೆ. ಯಾಕೆಂದರೆ ನಮಗೆ ಬೇಕಾಗಿರುವುದು ಉತ್ತರಾಖಂಡದ ಅಥವಾ ಭಾರತದೇಶದ ಅಧಿದೇವತೆಯಲ್ಲ, ಕೆಲವೇ ಕೆಲವು ಮಂದಿಯ ಆರ್ಥಿಕ ಪ್ರಗತಿ ಹಾಗೂ ಮುಂದಿನ ಜನಾಂಗಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ.
ಈ ವಿಷಮ ಸನ್ನಿವೇಶದಲ್ಲಿ ಶ್ರೀ ಜ್ಞಾನಸ್ವರೂಪಸಾನಂದ ಸ್ವಾಮೀಜಿ ದೇಶಾದ್ಯಂತ ಸಂತರ ಹಾಗೂ ಸಾಮಾಜಿಕ ಮುಖಂಡರನ್ನು ಭೇಟಿ ಮಾಡುತ್ತಾ ಜನರಲ್ಲಿ ಕರ್ತವ್ಯಪ್ರಜ್ಞೆ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಇವರೊಂದಿಗೆ ಹಲವರ ಹೋರಾಟವೂ ಚಾಲ್ತಿಯಲ್ಲಿದೆ. ಆದರೆ ಯಾವುದೂ ಫಲಕಾರಿಯಾಗುತ್ತಿಲ್ಲ. ಗಂಗೆಯನ್ನು ಸ್ವಂತ ತಾಯಿಯಂತೆ ಕಾಣುವ ಇಂತಹ ಅನೇಕ ಗಂಗಾಪುತ್ರರಿಗೆ ತ್ರಿವಳಿ ಆಘಾತಗಳನ್ನು ತಡೆಯಲಾಗುತ್ತಿಲ್ಲ. ಎತ್ತರದಲ್ಲಿ ಅಣೆಕಟ್ಟುಗಳು, ನಂತರದಲ್ಲಿ ನೀರಾವರಿಗಾಗಿ ಬರಿದಾಗಿಸುತ್ತಿರುವ ಕಾಲುವೆಗಳು,
ಇನ್ನೊಂದೆಡೆ ನಗರದ ಕಾರ್ಖಾನೆಗಳ ತ್ಯಾಜ್ಯಗಳು ಸೇರುತ್ತಿರುವ ನಾಲೆಗಳು. ಒಂದೆಡೆ ಕತ್ತು ಹಿಸುಕುವ ಪ್ರಯತ್ನ, ಇನ್ನೊಂದೆಡೆ ರಕ್ತ ಹೀರುವ ಅನಾಚಾರ. ಕೊನೆಯಲ್ಲಿ ವಿಷದ ಇಂಜೆಕ್ಷನ್ ನೀಡುವ ಅನೈತಿಕತೆ. ಈ ಮೂರರಿಂದ ಗಂಗಾಮಾತೆಯನ್ನು ಯಾರಾದರೂ ರಕ್ಷಿಸಬಲ್ಲಿರಾ ಎಂಬ ಆರ್ತನಾದ...
ಡಾ. ಶ್ರೀನಿಧಿ. ವಿ.
ಸಂಶೋಧಕ, ಐ ಐ ಎಂ ಬೆಂಗಳೂರು