ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಹೈ.ಕ. ಜನರ ಬದುಕು ಹಸನಾಗುವುದೆಂದು?

Mainashree
Updated On : 13 Jul 2013, 9:29 am

ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸರ್ಕಾರಿ ನೇಮಕಾತಿ, ವೃತ್ತಿ ಮತ್ತು ಉನ್ನತ ಶಿಕ್ಷಣ ಹಾಗೂ ಅಭಿವೃದ್ಧಿ ಕ್ಷೇತ್ರಗಳಲ್ಲಿ ವಿಶೇಷ ಮೀಸಲಾತಿ ಸೌಲಭ್ಯ ರೂಪದಲ್ಲಿ ಸಂವಿಧಾನದ 371ನೇ (ಜೆ) ಅನುಚ್ಛೇಧ ವರವಾಗಿ ಬಂದಿದೆ ಎನ್ನಬಹುದು.
ಈ ಹಿನ್ನೆಲೆಯಲ್ಲಿಯೇ ದೆಹಲಿಯಲ್ಲಿರುವ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹೈ. ಕ. ಅಭಿವೃದ್ಧಿ, ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ವಿಶೇಷ ಮೀಸಲಾತಿ ಕಲ್ಪಿಸಲು ಕಾಯ್ದೆ ರೂಪಿಸಲು ನಿಯಮಾವಳಿಗಳನ್ನು ರೂಪಿಸಿ ಕೇಂದ್ರದ ಅವಗಾಹನೆಗಾಗಿ ಅತೀ ಶೀಘ್ರದಲ್ಲಿ ಕಳಿಸಿಕೊಡಲು ಆದೇಶಿಸಿದೆ.
ಅದರಿಂದಾಗಿ ರಾಜ್ಯ ಸರ್ಕಾರ ಕೂಡ ರೂಪರೇಷೆ ಹಾಗೂ ನಿಯಮಾವಳಿ ರೂಪಿಸಲು ಹಿರಿಯ ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಎಚ್. ಕೆ. ಪಾಟೀಲ್ ಅಧ್ಯಕ್ಷತೆಯಲ್ಲಿ ಉಪ ಸಮಿತಿಯೊಂದನ್ನು ರಚಿಸಿದೆ.
ಈ ಸಮಿತಿಯಲ್ಲಿ ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ, ಸಂಸದೀಯ ವ್ಯವಹಾರಗಳ, ಕಾನೂನು ಸಚಿವ ಟಿ. ಬಿ. ಜಯಚಂದ್ರ, ಜವಳಿ ಮತ್ತು ಒಳನಾಡು ಸಾರಿಗೆ ಖಾತೆ ಸಚಿವ ಬಾಬುರಾವ ಚಿಂಚನಸೂರ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಶಾಖೆ ಸಚಿವೆ ಉಮಾಶ್ರಿ, ಕಾರ್ಮಿಕ ಸಚಿವ ಪಿ. ಟಿ. ಪರಮೇಶ್ವರ ಅವರನ್ನು ಉಪ ಸಮಿತಿ ಸದಸ್ಯರನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಿದೆ.
ಹೈ.ಕ. ಅಭಿವೃದ್ಧಿ ಅನುಷ್ಠಾನ ಉಪ ಸಮಿತಿಯ ಅಧ್ಯಕ್ಷರಾದ ಎಚ್. ಕೆ. ಪಾಟೀಲ್ ದಕ್ಷ ಮತ್ತು ಪ್ರಾಮಾಣಿಕ ಆಡಳಿತಗಾರರು, ಅಭಿವೃದ್ಧಿಪರ ಚಿಂತಕರು, ಸದಾ ಕ್ರಿಯಾಶೀಲರಾಗಿರುವ ಅವರ ಸೇವೆಯನ್ನು ಹೈ. ಕ. ಜನತೆ ಸಮರ್ಪಕವಾಗಿ ಬಳಿಸಿಕೊಳ್ಳಲು ಇದು ಸಕಾಲವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಹೈ. ಕ. ಅಭಿವೃದ್ಧಿ ಅನುಷ್ಠಾನ ಉಪ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿಕೊಂಡ ಕೂಡಲೇ ಅವರು ಕಾರ್ಯೋನ್ಮುಖರಾಗಿದ್ದಾರೆ. ಈಗಾಗಲೇ 2- 3 ಸಭೆಗಳನ್ನು ನಡೆಸಿ ಹೈ.ಕ. ಅಭಿವೃದ್ಧಿಗಾಗಿ ಸ್ವತಃ ಅವರೆ ಸಂಬಂಧಪಟ್ಟ ಜಿಲ್ಲೆಗಳಿಗೆ ಭೇಟಿ ನೀಡಿ ಅಹವಾಲುಗಳನ್ನು ಸ್ವೀಕರಿಸಲು ಆಗಮಿಸುತ್ತಿರುವುದರಿಂದ ಸ್ವಾಗತ ಮಾಡುವುದು ಈ ಭಾಗದ ನಮ್ಮೆಲ್ಲರ ಕರ್ತವ್ಯವಾಗಿದೆ.
ಈ ಕುರಿತು ಹೈ. ಕ. ಹೋರಾಟಗಾರರು, ಬುದ್ಧಿಜೀವಿಗಳು, ರಾಜಕೀಯ ಪ್ರತಿನಿಧಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗದ ಬೇಡಿಕೆಗಳನ್ನು ಅವರ ಗಮನಕ್ಕೆ ತರುವ ಮೂಲಕ ಅತೀ ಶೀಘ್ರದಲ್ಲಿ 371ನೇ (ಜೆ) ಕಲಂ ತಿದ್ದುಪಡಿಯನ್ನು ಕಾಯ್ದೆಯನ್ನಾಗಿ ರೂಪಿಸಲು ಅನುಕೂಲವಾಗುವುದರ ಜತೆಗೆ ಈ ಭಾಗದಲ್ಲಿ  ಖಾಲಿ ಇರುವ ಸಾವಿರಾರು ಹುದ್ದೆಗಳ ನೇಮಕ ಮತ್ತು ವೃತ್ತಿ ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶ, ಅಭಿವೃದ್ಧಿಗೆ ಒತ್ತು ನೀಡಿದಂತಾಗುತ್ತದೆ.
ಹೈ. ಕ. ಅಭಿವೃದ್ಧಿಗಾಗಿ ಅನೇಕ ನಾಯಕರು, ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದು, ಈಗ ಅವರ ಶ್ರಮಕ್ಕೆ ಪ್ರತಿಫಲವಾಗಿ ಕೇಂದ್ರ ಸರ್ಕಾರ 371ನೇ (ಜೆ) ಕಲಂಗೆ ತಿದ್ದುಪಡಿಗೆ ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ಈ ತಿದ್ದುಪಡಿಯ ರೂವಾರಿಗಳಾದ ಕೇಂದ್ರ ಸರ್ಕಾರದ ರೇಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್, ಹೈ. ಕ. ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ್, ಹೈ. ಕ. ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಸೇರಿದಂತೆ ಪ್ರತ್ಯಕ್ಷ, ಪರೋಕ್ಷವಾಗಿ ಶ್ರಮಿಸಿದವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ.
ಹೈ. ಕ. ವಿಭಾಗದ ವ್ಯಾಪ್ತಿಗೆ ಗುಲ್ಬರ್ಗ, ಬೀದರ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಬರುತ್ತವೆ. ಈ ಆರು ಜಿಲ್ಲೆಗಳು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆಗಳೆಂದು ಗುರುತಿಸಲ್ಪಟ್ಟಿವೆ.
ಅದರಲ್ಲಿ ಗುಲ್ಬರ್ಗ ಜಿಲ್ಲೆ ವಾರಂಗಲ್ನ ಕಾಕತೀಯರ ಆಳ್ವಿಕೆ ಕಾಲದಲ್ಲಿ ಬೆಳಕಿಗೆ ಬಂದಿತ್ತೆಂದು ಹೇಳಲಾಗುತ್ತಿದ್ದು, ಈ ಪ್ರದೇಶ 'ಕಲ್ಯಾಣ ಕರ್ನಾಟಕ'ದ ಶಕ್ತಿ ಕೇಂದ್ರವಾಗಿತ್ತು ಎಂದು ಇತಿಹಾಸ ಪುಟಗಳು ಸಾರುತ್ತವೆ.
ಈ ಪ್ರದೇಶ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಯಾದವರು, ಹೊಯ್ಸಳರು, ದೆಹಲಿ ಸುಲ್ತಾನರು, ಬಹುಮನಿಯರು ನಾಯಕ ದೊರೆಗಳು ಹಾಗೂ ಹೈ. ಕ. ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು.
ನೃಪತುಂಗನ ಕವಿರಾಜ ಮಾರ್ಗದಂತೆ ಶ್ರೇಷ್ಠ ಸಾಹಿತ್ಯ ಕೃತಿಗಳು ಹಾಗೂ ಸೂಫೀ ಸಂತರ ಸಾಮಾಜಿಕ ಚಳವಳಿಗಳು 14 ಮತ್ತು 15ನೇ ಶತಮಾನದಲ್ಲಿ ಬಹುಮನ ರಾಜಧಾನಿಯಾಗಿ ಗುಲ್ಬರ್ಗ ಗರಿಗೆದರಿತ್ತು ಎಂಬುದು ಹೆಮ್ಮೆಯ ಸಂಗತಿ.
ನಗರದ ಪ್ರಮುಖ ಯಾತ್ರಾ ಸ್ಥಳಗಳಾದ ಖಾಜಾ ಬಂದೇನವಾಜ ದರ್ಗಾ ಮತ್ತು ಶರಣಬಸವೇಶ್ವರ ದೇವಸ್ಥಾನ ಇವುಗಳೊಂದಿಗೆ ಹೊಸದಾಗಿ ಸೇರ್ಪಡೆಯಾಗಿರುವುದು ಬುದ್ಧ ವಿಹಾರ. ಇದರಿಂದಾಗಿ ಈ ಪ್ರದೇಶ ಭಾವೈಕ್ಯತೆಯ ಕೇಂದ್ರವಾಗಿದೆ.
'ಕೋಮು ಸೌಹಾರ್ದಕ್ಕೆ ಮಾದರಿ ಈ ಬರಡು ನೆಲ ಆದರೆ ಜನರ ಹೃದಯ ಮಾತ್ರ ಕೋಮಲ' ಎಂದು ಖ್ಯಾತಿಯಾಗಿದ್ದ ಇಲ್ಲಿನ ಭವ್ಯ ಸಂಸ್ಕೃತಿ ಪರಂಪರೆ ಕಪ್ಪು ಮಣ್ಣಿನಡಿ ಅಡಗಿ ಹೋಗಿದೆ. ಜಿಲ್ಲೆಯ ಒಂದು ಭಾಗದಲ್ಲಿ ಮರಾಠಿ, ಇನ್ನೊಂದೆಡೆ ತೆಲಗೂ ಪ್ರಭಾವ ಹಾಗೂ ಇಡೀ ಜಿಲ್ಲೆಯಲ್ಲಿನ ಉರ್ದು ಹಿಂದಿ ಪ್ರಭಾವ ಅಂತೂ ಕನ್ನಡ ಭಾಷೆಯ ಮೇಲೆ ಸವಾರಿ ಮಾಡುತ್ತಿವೆ.
1947 ರಲ್ಲಿ ಇಡೀ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ಆದರೆ, ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಮಾತ್ರ ಸ್ವಾತಂತ್ರ ಸಿಗದಿರುವುದಕ್ಕೆ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದೆ ಕಾರಣವಾಯಿತು.
ಹೈದ್ರಾಬಾದ್ ಕರ್ನಾಟಕದ ಪ್ರತಿನಿಧಿಗಳು ಸಮಾಜದ ಚಿಂತಕರು ಅಂದಿನ ರಾಮಾನಂದ ತೀರ್ಥ ಸ್ವಾಮಿ ಅವರ ನೇತೃತ್ವದಲ್ಲಿ ಹೈದ್ರಾಬಾದ್ ಕರ್ನಾಟಕಕ್ಕೆ ಒಳಪಟ್ಟ ಬೀದರ, ಗುಲ್ಬರ್ಗ, ರಾಯಚೂರು, ಬಳ್ಳಾರಿ ಮತ್ತು ಈಗಿನ ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳು ಭಾರತದ ಒಕ್ಕೂಟಕ್ಕೆ ಸೇರಲು ಚಳವಳಿಗಳು, ಪ್ರತಿಭಟನೆಗಳು ನಿರಂತರವಾಗಿ ಪ್ರಾರಂಭವಾದವು. ನಿಜಾಮರ ಕಪಿಮುಷ್ಠಿಯಿಂದ ಹೊರಬರಲು ಸ್ವಾಮಿ ರಮಾನಂದ ತೀರ್ಥರೊಂದಿಗೆ ಅನೇಕ ರಾಜಕೀಯ ನಾಯಕರು ಮುತ್ಸದ್ದಿಗಳು ನಿಜಾಮರ ವಿರುದ್ಧ ಪ್ರತಿಭಟನೆ ನಿರಂತರವಾಗಿ ಮುಂದುವರಿಸಿದರು.
ಇದನ್ನು ಗಮನಿಸಿದ ಅಂದಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರು ಸೇನಾ ಕಾರ್ಯಚರಣೆ ಮೂಲಕ ನಿಜಾಮರನ್ನು ಭಾರತ ಸರ್ಕಾರದ ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಮೂಲಕ 1948 ಸೆಪ್ಟೆಂಬರ್ 17 ರಂದು ಹೈದ್ರಾಬಾದ್ ಕರ್ನಾಟಕ ವಿಮೋಚನೆಯಾಯಿತು. 1956ರಲ್ಲಿ ಭಾಷಾವಾರು ಪ್ರಾಂತಗಳು ರಚನೆಯಾದವು. ಹೈದ್ರಾಬಾದ್ ಕರ್ನಾಟಕದ ಬೀದರ, ಗುಲ್ಬರ್ಗ, ರಾಯಚೂರು, ಬಳ್ಳಾರಿ ಜಿಲ್ಲೆಗಳು ಮೈಸೂರು ಜಿಲ್ಲೆಗೆ ಸೇರಬೇಕಾಯಿತು.
ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಎಂಬಂತೆ ಈ ಭಾಗದ ಜನತೆ ನಿಜಾಮರ ಆಳ್ವಿಕೆಯಿಂದ ಸಾಮಾಜಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ವಂಚನೆಗೊಂಡಿದ್ದ ನಮಗೆ ಮೈಸೂರು ರಾಜ್ಯದಲ್ಲೂ ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆ ದೊರಕಿತು ಎಂಬ ಭಾವನೆ ಹುಸಿಯಾಯಿತು ಎನ್ನಬಹುದು.
ನಿಜಾಮರ ಆಳ್ವಿಕೆಯಿಂದ ನಲುಗಿ ಹೋಗಿದ್ದ ಈ ಭಾಗಕ್ಕೆ ಮತ್ತೆ ಪ್ರಾದೇಶಿಕ ಅಸಮಾನತೆ ಎದುರಾಯಿತು. ಇಲ್ಲಿಯ ಜನರ ಭವಿಷ್ಯ ಮತ್ತೆ ಮಂಕಾಯಿತು. 1956ರಲ್ಲಿ ಪ್ರಾದೇಶಿಕ ಅಸಮಾನತೆಯಿಂದಾಗಿ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು ಆಂಧ್ರದ ತೆಲಂಗಾಣ, ಮಹಾರಾಷ್ಟ್ರದ ಮರಾಠವಾಡ ವಿದರ್ಭ ಪ್ರದೇಶಗಳಿಗೆ ಕೇಂದ್ರ ಸರ್ಕಾರ 371ನೇ ಕಲಂಗೆ ತಿದ್ದುಪಡಿ ತರುವ ಮೂಲಕ ಸ್ಥಾನಮಾನ ಕಲ್ಪಿಸಲಾಯಿತು.
ಆದರೆ, ನಾವು ಕನ್ನಡ ಭಾಷಿಕರು ಕನ್ನಡ ಪ್ರಾಂತ್ಯಕ್ಕೆ ಸೇರಬೇಕೆಂಬ ಏಕೈಕ ಉದ್ದೇಶದಿಂದ ಅಂದು 371ನೇ ಕಲಂಗೆ ತಿದ್ದುಪಡಿ ಒತ್ತಾಯಿಸಿದ್ದಾದರೆ ಇತರ ರಾಜ್ಯಗಳಂತೆ ನಾವು ಕೂಡ ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದೆ ಬರಬಹುದಾಗಿತ್ತು.
ಅಂದು ತಪ್ಪಿಸಿಕೊಂಡ ಅವಕಾಶ 60 ವರ್ಷಗಳ ನಂತರ ಕೇಂದ್ರ ಸರ್ಕಾರ ಈ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿ ವಿಶೇಷ ಸ್ಥಾನಮಾನ ಕಲ್ಪಿಸಲು ಸಂವಿಧಾನದ 371ನೇ (ಜೆ) ಕಲಂಗೆ ತಿದ್ದುಪಡಿ ಅಂಗೀಕರಿಸಿ ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದು ಸ್ವಾಗತಾರ್ಹ. ಈ ದಿಶೆಯಲ್ಲಿ ಕೆಲಸಕಾರ್ಯಗಳು ಬೇಗನೆ ನಡೆದು ಕಲಂ 371 (ಜೆ) ಸಿಹಿಫಲ ಹೈ- ಕ ಮಂದಿಗೆ ಬೇಗ ದೊರಕಲಿ ಎಂಬುದೆ ನಮ್ಮ ಆಶಯ.

  ಶಿವರಾಯ ದೊಡ್ಮನಿ
ಸಂಪಾದಕರು
ನೃಪತುಂಗ, ಕನ್ನಡ ದಿನಪತ್ರಿಕೆ, ಗುಲ್ಬರ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement