ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ವಾಲುವವರ ಮತ್ತು ಇಳಿಸಿದ ವಾಲೀಕಾರ್ ಏಕೆ ಕಟಕಟೆಗೆ?

Mainashree
Updated On : 15 Jul 2013, 11:49 am

ಶನಿವಾರ ನ್ಯೂಸ್ ಚಾನಲ್‌ವೊಂದನ್ನು ನೋಡುತ್ತಿದ್ದೆ. ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಅಮಾನವೀಯ ವರ್ತನೆ ಎಂಬುದಾಗಿ ಕೆಳಗೆ (scroll) ಬರುತ್ತಿತ್ತು. ಮಹಿಳಾ ಅಧಿಕಾರಿ ಒಬ್ಬನಿಗೆ ಹೊಡೆಯುವ ವೀಡಿಯೋ ಬರುತ್ತಿತ್ತು. ಕುತೂಹಲದಿಂದ ಕುಳಿತು ನೋಡಿದೆ. ವಿಷಯ ಸ್ಪಷ್ಟವಾಯಿತು.
ರಾಯಚೂರಿನ ಮಾರುಕಟ್ಟೆ ಪ್ರದೇಶದಲ್ಲಿ ಕುಡುಕರು ತೂರಾಡಿ ಗಲಾಟೆ ಮಾಡುತ್ತಾರೆ. ಅಲ್ಲಿಯ ಸಾಮಾನ್ಯ ನಾಗರಿಕರಿಗೆ ಓಡಾಡಲೂ ತೊಂದರೆಕೊಡುತ್ತಾರೆ. ಕಾಲೇಜಿನ ಬಳಿ ಹೋಗಿ ಹೆಣ್ಣು ಮಕ್ಕಳನ್ನು ಚುಡಾಯಿಸುವ ಕೃತ್ಯವೆಸಗುತ್ತಾರೆ. ಚುನಾವಣೆ ಸಂದರ್ಭದಲ್ಲಿಯೂ ಕುಡಿದು ಗಲಾಟೆಯನ್ನೆಬ್ಬಿಸಿದ್ದಾರೆ. ಇಷ್ಟಲ್ಲದೇ ಪುನಃ ಅದೇ ಕುಡುಕರು ಗಲಾಟೆ ಮಾಡಿದಾಗ ಮಹಿಳಾ ಪೊಲೀಸ್ ಅಧಿಕಾರಿ (ಸಬ್‌ಇನ್‌ಸ್ಪೆಕ್ಟರ್) ಬೇಬಿ ವಾಲೀಕಾರ್ ಅವರು ಅವರನ್ನು ಠಾಣೆಗೆ ಎಳೆದೊಯ್ದು ಪೆಟ್ಟಿನ ರುಚಿ ತೋರಿಸಿದ್ದಾರೆ. ಅದರ ವೀಡಿಯೋ ಸಿಗುತ್ತಿದ್ದಂತೆ ಸಮಾಜ ಸುಧಾರಕ ಚಾನಲ್‌ಗಳು ಪೊಲೀಸರ ಅಮಾನವೀಯ ಕೃತ್ಯ ಎಂದು ಬಿತ್ತರಿಸಿದ್ದೇ ಬಿತ್ತರಿಸಿದ್ದು.
ಕುಡುಕರು ಕುಡಿದು ಹೆಣ್ಣು ಮಕ್ಕಳನ್ನು ಚುಡಾಯಿಸುವುದು ಅಮಾನವೀಯವಲ್ಲವೇ? ಅಮಲಿನಲ್ಲಿ ಅಮ್ಮ-ಅಕ್ಕ-ತಂಗಿ ಯಾವುದೂ ಗೊತ್ತಾಗದೇ ಸಿಕ್ಕವರ ಮೈಮೇಲೆ ಮುಗಿಬಿದ್ದರೆ ಅದು ಅಮಾನವೀಯವಲ್ಲವೇ? ಕುಡಿದು ತೂರಾಡಿ ಸಾಮಾಜಿಕ ಶಾಂತಿಗೆ ಭಂಗ ಮಾಡಿದರೆ ಅದು ಅಮಾನವೀಯವಲ್ಲವೇ? ಅವರು ಚುಡಾಯಿಸಿದಾಗಲೇ ಎರಡು ಪೆಟ್ಟುಕೊಟ್ಟು ಸುಧಾರಿಸುವ ಪ್ರಯತ್ನ ಮಾಡಬೇಕೇ ಅಥವಾ ಅತ್ಯಾಚಾರ ಮಾಡುವ ತನಕವೂ ಕಾಯಬೇಕೇ? ಅವರಿಗೆ ಎರಡು ಪೆಟ್ಟುಕೊಡುವುದು ಅಮಾನವೀಯ ಎಂದಾದರೆ ಕುಡುಕರು ಮಾಡುವುದು ಘನಂಧಾರಿ ಕೆಲಸವೇ ಹಾಗಾದರೆ? ಇವರಿಗೆ ಠಾಣೆಗೆ ಕರೆದು ಎರಡು ಪೆಟ್ಟು ಕೊಡದೇ ಕರೆದು ಸನ್ಮಾನ ಮಾಡಬೇಕೇ? ಯಾಕೆ ನಮ್ಮ ಪ್ರಜ್ಞಾವಂತ ನಿರೂಪಕರಿಗೆ ಈ ವಿಷಯ ಅರ್ಥವಾಗುವುದಿಲ್ಲ? ಪದೇ ಪದೆ ಟಿವಿ ಪರದೆಯಲ್ಲಿ ಬೇಬಿ ವಾಲೀಕಾರ್  ಅವರು ಹೊಡೆದದ್ದನ್ನೇ ತೋರಿಸುವ ಇವರು ಕುಡುಕರು ಮಾಡಿದ ಗಲಾಟೆಗಳನ್ನೂ ತೋರಿಸಬಹುದಿತ್ತಲ್ಲ. ಅದರ ವೀಡಿಯೋ ಇವರ ಬಳಿ ಇಲ್ಲ. ಕೇವಲ ಪೊಲೀಸರು ಹೊಡೆದಿದ್ದನ್ನು ತೋರಿಸಿ ಅಸಂಬದ್ಧವಾಗಿ ಮಾತನಾಡುವಾಗ ಮೈಯೆಲ್ಲ ಉರಿಯುತ್ತಿತ್ತು.
ಚಾನಲ್‌ನವರು ಇಷ್ಟೆಲ್ಲ ಮಾಡಿ ಆಗಿದ್ದೇನು? ಬೇಬಿ ವಾಲೀಕಾರ್ ಅವರನ್ನು ಅಮಾನತು ಮಾಡಲಾಗಿದೆ. ಇದರಿಂದ ಟಿವಿಯವರು ಸಾಧಿಸಿದ್ದೇನು? ಇನ್ನು ಮುಂದೆ ಯಾರಾದರೂ ಕುಡಿದು ಗಲಾಟೆ ಮಾಡಿದರೆ ಯಾವ ಪೊಲೀಸರೂ ಕ್ರಮ ಕೈಗೊಳ್ಳಲು ಮುಂದಾಗದಿರಬಹುದು. ಇಂತಹ ಗಲಾಟೆಗಳನ್ನು ಚಾನಲ್‌ನವರು ಸರಿಪಡಿಸುತ್ತಾರೆಯೇ? ಒಮ್ಮೆ ವಿಚಾರ ಮಾಡಿ. ನಿಮ್ಮ ಮನೆಯ ಮುಂದೆ ಒಂದಿಬ್ಬರು ಕುಡಿದು ಗಲಾಟೆ ಮಾಡುತ್ತಿದ್ದರೆ, ನಿಮ್ಮ ಅಕ್ಕ-ತಂಗಿ- ಹೆಂಡತಿಯನ್ನು ಕಿಚಾಯಿಸುತ್ತಿದ್ದರೆ, ನಿಮ್ಮ ಮನೆಯ ಕಿಟಕಿಗಳಿಗೆ ಕಲ್ಲೆಸದರೆ ಮೊದಲು ನೀವು ಚಾನಲ್‌ನವರಿಗೆ ಕರೆ ಮಾಡುತ್ತೀರೋ? ಪೊಲೀಸರಿಗೆ ಕರೆ ಮಾಡುತ್ತೀರೋ? ಚಾನಲ್‌ನವರಿಗೆ ಕರೆ ಮಾಡಿ ಒಳ್ಳೆ ದೃಶ್ಯಗಳಿವೆ ಬನ್ನಿ ಚಿತ್ರೀಕರಿಸಿ ಎಂದು ಕರೆಯುತ್ತೀರಾ? ಪತ್ರಕರ್ತರ ಮನೆಯ ಮುಂದೇ ಇಂತಹ ಘಟನೆ ನಡೆಯಿತು ಅಂದುಕೊಳ್ಳಿ. ಅವರು ಕೂಡ ಕರೆ ಮಾಡುವುದು ಪೊಲೀಸರಿಗೇ ಅಲ್ಲವೇ? ಒಂದೊಮ್ಮೆ ಹಾಗೆ ಕರೆ ಮಾಡಿದಿರಿ ಅಂದುಕೊಳ್ಳಿ, ಇದೇ ಚಾನಲ್‌ನ ಮಂದಿ ಬಂದು ಅದನ್ನು ಚಿತ್ರೀಕರಿಸಿ, ಪೊಲೀಸರು ಏನೂ ಮಾಡಿಲ್ಲ ಎಂದು ಬಿತ್ತರಿಸುತ್ತಾರೆ. ಭಾರತ ಭ್ರಷ್ಟವಾಗಿದೆ. ಪೊಲೀಸ್ ಅಧಿಕಾರಿಗಳು ಹಣ ಪಡೆದು ಯಾವುದೇ ಕ್ರಮ ಜರುಗಿಸಲಿಲ್ಲ ಎಂದು ಬೊಂಬಡಾ ಹೊಡೆಯುತ್ತಾರೆ.
ಹಾಗಾದರೆ ಪೊಲೀಸರು ಏನು ಮಾಡಬೇಕು? ನಮ್ಮ ದೇಶದಲ್ಲಿ ಕುಡಿದು ಗಲಾಟೆ ಮಾಡಿದ್ದಕ್ಕೆ ಎಂತಹ ಶಿಕ್ಷೆಯಿದೆ? ಹೆಚ್ಚೆಂದರೆ ಸಾಮಾಜಿಕ ಶಾಂತಿ ಭಂಗ ಎಂಬ ಚಿಲ್ಲರೆ ಕೇಸು ಹಾಕಬೇಕು. ಮದ್ಯದ ಅಮಲಿನಲ್ಲಿರುವ ವ್ಯಕ್ತಿಯನ್ನು ಠಾಣೆಗೆ ಕರೆದುಕೊಂಡು ಹೋಗಲು ಬಹುತೇಕ ಪೊಲೀಸ್ ಅಧಿಕಾರಿಗಳು ಹೆದರುತ್ತಾರೆ. ಹೀಗಿರುವಾಗ ಮಹಿಳೆಯಾದರೂ ಲೆಕ್ಕಿಸದೇ ಕುಡುಕರನ್ನು ಠಾಣೆಗೆ ಕರೆದುಕೊಂಡು ಹೋಗಿ ಎರಡು ಬಾರಿಸಿ ಸಮಸ್ಯೆ ನಿವಾರಿಸಲು ಯತ್ನಿಸಿದ ಬೇಬಿ ವಾಲೀಕಾರ್‌ಗೆ ಚಾನಲ್‌ಗಳು ಕೊಡಿಸಿದ್ದೇನು? ಅಮಾನತ್ತಿನ ಶಿಕ್ಷೆ! ನಮ್ಮ ಕೆಲವು ಬುದ್ದಿಜೀವಿಗಳು, ಮಾನವಹಕ್ಕು ಸಂಘಟನೆಗಳು 'ಕುಡುಕರಿಗೆ ಹೊಡೆಯುವುದು ಅಪರಾಧ.  ಅವರಿಗೆ ಬುದ್ದಿ ಹೇಳಬಹುದಿತ್ತು' ಎಂಬ ವಾದ ಮಂಡಿಸಬಹುದು. ಆದರೆ ಈ ಕುಡುಕರನ್ನು ಕೂರಿಸಿ ಬುದ್ದಿ ಹೇಳಿದರೆ ಕೇಳುವರೇ? ಹಾಗೆ ಕೇಳುವುದಿದ್ದರೆ ಅವರದ್ದೇ ತಂದೆ- ತಾಯಿ, ಹೆಂಡತಿ, ಮಕ್ಕಳ ಮಾತು ಕೇಳುತ್ತಿದ್ದರು. ಠಾಣೆಗೆ ಬಂದು ಹೊಡೆತ ತಿನ್ನುವ ಸ್ಥಿತಿ ಬರುತ್ತಿರಲಿಲ್ಲ. ಅವರ ಉಪಟಳ ಮಿತಿಮೀರಿದ್ದರಿಂದಲೇ ಬೇಬಿ ವಾಲೀಕಾರ್ ಪೊಲೀಸ್ ಲಾಠಿ ರುಚಿ ತೋರಿಸಿದ್ದಾರೆ. ಏಟಿನ ರುಚಿ ಮರೆಯುವ ತನಕವಾದರೂ ಅವರ ಉಪಟಳ ನಿಯಂತ್ರಣದಲ್ಲಿರುತ್ತದೆ. ದಕ್ಷವಾಗಿ ಕೆಲಸ ಮಾಡುವವರನ್ನು ಪ್ರೋತ್ಸಾಹಿಸೋಣ. ಉತ್ತಮ ಸಮಾಜ ನಿರ್ಮಾಣಕ್ಕೆ ಸಹಾಯ ಮಾಡೋಣ. ಅದನ್ನು ಬಿಟ್ಟು ವೀಡಿಯೋ ಸಿಕ್ಕಿತು ಎಂಬ ಕಾರಣಕ್ಕೆ ಸಿಕ್ಕಿದ್ದೆಲ್ಲವನ್ನೂ ಬಿತ್ತರಿಸಿ ಸಮಾಜವನ್ನು ಇನ್ನಷ್ಟು ಹಾಳುಮಾಡಲು ನಾವು ಕೊಡುಗೆ ನೀಡುವುದು ಬೇಡ. ಮಹಿಳಾ ಸಂಘಟನೆಗಳು ಕೇವಲ ಮಹಿಳೆಯರ ಮೇಲೆ ದೌರ್ಜನ್ಯವಾದಾಗ, ಅತ್ಯಾಚಾರವಾದಾಗ ಮಾತ್ರ ದನಿ ಎತ್ತಬೇಕು ಎಂಬ ನಿಯಮವಿದೆಯೇನು? ಕುಡುಕರಿಗೆ ಎರಡೇಟು ಕೊಟ್ಟ ಕಾರಣಕ್ಕೆ ಒಬ್ಬ ಮಹಿಳಾ ಸಬ್‌ಇನ್ಸ್‌ಪೆಕ್ಟರ್ ಒಬ್ಬರನ್ನು ಅಮಾನತು ಮಾಡುವುದು ಕೂಡ ಮಹಿಳೆಯರ ಮೇಲಿನ ದೌರ್ಜನ್ಯ ಅನಿಸುವುದಿಲ್ಲವೇ? ಧೈರ್ಯವಾಗಿ ಕಾರ್ಯನಿರ್ವಹಿಸುವ ಬೇಬಿ ವಾಲೀಕಾರ್ ಹಾಗೂ ಅವರಂತಹ ಪೊಲೀಸ್ ಅಧಿಕಾರಿಗಳಿಗೆ ಹ್ಯಾಟ್ಸ್‌ಆಫ್.

- ಸಿಂಧೂಶ್ರೀ ಭಟ್ ,
ಉಪನ್ಯಾಸಕರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement