ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಈಜಿಪ್ಟ್ ಕ್ರಾಂತಿ ಠುಸ್ ಎಂದಿದ್ದು ಏಕೆ ?

Mainashree
Updated On : 16 Jul 2013, 12:16 pm

ರಾಜಕೀಯ ಸುನಾಮಿ ಅಪ್ಪಳಿಸಿ ಅರಬ್ ಜಗತ್ತು ನವ ಮನ್ವಂತರಕ್ಕೆ ಅಡಿಯಿಟ್ಟಿತು ಎನ್ನುವಂತೆ ಆರಂಭವಾಯಿತು ಮಲ್ಲಿಗೆ ಕ್ರಾಂತಿ(ಅರಬ್ ಸ್ಪ್ರಿಂಗ್).  ಅನಭಿಷಿಕ್ತ ದೊರೆಗಳಾಗಿ ದಶಕಗಳ ಕಾಲ ದಬ್ಬಾಳಿಕೆ, ದೌರ್ಜನ್ಯಗಳಲ್ಲೇ ಮೆರೆಯುತ್ತಿದ್ದ ಟುನೇಷಿಯಾದ ಬೆನ್ ಅಲಿ, ಈಜಿಪ್ಟ್ನ ಹೋಸ್ನಿ ಮುಬಾರಕ್, ಲಿಬಿಯಾದ ಮುಅಮ್ಮರ್ ಗಡಾಫಿ, ಯೆಮನ್ನ ಅಬ್ದುಲಹ್ ಸಲೆಹ್ರಂತಹ ಸರ್ವಾಧಿಕಾರಿಗಳು ಜೀವ ಉಳಿಸಿಕೊಳ್ಳಲೂ ಪರದಾಡುವಂತಾಯಿತು. ಲಿಬಿಯಾ, ಸಿರಿಯಾ, ಯೆಮನ್ಗಳಲ್ಲಿ ಆಂತರಿಕ ದಂಗೆಗಳೆದ್ದು ಮಿಲಟರಿ ಕಾರ್ಯಾಚರಣೆ ನಡೆದರೆ, ಈಜಿಪ್ಟ್ ಮತ್ತು ಟುನೇಷಿಯಾಗಳಲ್ಲಿ ಕೆಲವು ಸಾವು-ನೋವು ಹೊರತುಪಡಿಸಿ, ಶಾಂತಿಯುತವಾಗಿಯೇ ಐತಿಹಾಸಿಕವಾದ ರಾಜಕೀಯ ಬದಲಾವಣೆಗಳಾದವು.
ತಕ್ಷಣದ ಬದಲಾವಣೆ ಬಹಳ ಕಾಲ ಉಳಿಯುವುದಿಲ್ಲ ಹಾಗೂ ಅಂದಿನ ಆಕ್ರೋಶಕ್ಕೆ ಬದಲಾದದ್ದು ಜಡ್ಡುಗಟ್ಟಿದ ವ್ಯವಸ್ಥೆಯಲ್ಲ, ಕೇವಲ ವ್ಯಕ್ತಿ ಮಾತ್ರ ಎಂಬುದು ನಿಜವಾಗಲು ಒಂದೆರಡು ವರ್ಷಗಳಷ್ಟೇ ಸಾಕಾಯಿತು. ಟುನೇಷಿಯಾದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆ ಇನ್ನೂ ಕಂಡು ಬಂದಿಲ್ಲ. ಆಂತರಿಕ ದಂಗೆಗಳಿಂದ ಲಿಬಿಯಾ, ಸಿರಿಯಾ, ಯೆಮನ್ಗಳು ಜರ್ಜರಿತವಾಗಿವೆ. ಮುಬಾರಕ್ ಹೋಗಿ, ಮೋರ್ಸಿ ಬಂದರೂ ಬವಣೆ ಕೊನೆಯಾಗಲಿಲ್ಲ.
ಮೂರು ದಶಕಗಳು ಹೋಸ್ನಿ ಮುಬಾರಕ್ನ ದಾಸರಂತೆ ಬದುಕಿದ ಈಜಿಪ್ಟಜನತೆಗೆ ಮಹಮ್ಮದ್ ಮೋರ್ಸಿ ಭರವಸೆಯ ನಾಯಕನಂತೆ ಕಂಡರು. ದಂಗೆಯ ನಂತರ ಜೂನ್ 2012ರಲ್ಲಿ ಪ್ರಜಾಪ್ರಭುತ್ವದ ಮೊದಲ ಸಾರ್ವತ್ರಿಕ ಚುನಾವಣೆ ನಡೆಯಿತು. ಶೇ.51.7ರಷ್ಟು ಮತ ಪಡೆದ ಮಹಮ್ಮದ್ ಮೋರ್ಸಿ ಅವರ 'ಮುಸ್ಲಿಂ ಬ್ರದರ್ಹುಡ್' ಪಕ್ಷ ಅಧಿಕಾರಕ್ಕೇರಿತು. ಮುಂದಿದ್ದ ಕಲ್ಲುಮುಳ್ಳಿನ ಹಾದಿಯನ್ನು ಅರಿತೇ ಅಧಿಕಾರ ವಹಿಸಿಕೊಂಡ ಮೋರ್ಸಿ ಇಡುವ ಪ್ರತಿ ಹೆಜ್ಜೆಯೂ ಮಹತ್ವದ್ದಾಗಿದ್ದವು. ವಿಶ್ವದ ಭೂಪಟದಲ್ಲಿ ಈಜಿಪ್ಟ್ನ ವರ್ಚಸ್ಸನ್ನು ಹೆಚ್ಚಿಸುವುದಷ್ಟೇ ಅಲ್ಲ, ಅರಬ್ ರಾಷ್ಟ್ರಗಳ ರಾಜಕೀಯವೂ ತಿರುವು ಪಡೆಯುವುದಿತ್ತು.  ಸಮಸ್ಯೆಗಳ ಆಗರವೇ ಮುಂದಿತ್ತು. ಈಜಿಪ್ಟ್ನ ಬಹಳ ಕಾಲದ ಆರ್ಥಿಕ ವೈಫಲ್ಯ, ಜನಸಂಖ್ಯೆ ಬೆಳವಣಿಗೆಯ ಹಿಂದೆಯೇ ಏರುತ್ತಿದ್ದ ನಿರುದ್ಯೋಗ ಸಮಸ್ಯೆ, ದುರ್ಬಲವಾಗಿದ್ದ ಸರ್ಕಾರಿ ಸಂಸ್ಥೆಗಳು, ರಾಜಕೀಯ ಇಚ್ಛಾಶಕ್ತಿಯ ಕೊರತೆ, ನ್ಯಾಯಾಲವೂ ಒಳಗೊಂಡಂತೆ ದೇಶದ ಅತ್ಯುನ್ನತ ಸ್ಥಾನಗಳಲ್ಲಿ ಮುಬಾರಕ್ ಕುಳ್ಳಿರಿಸಿದ ವ್ಯಕ್ತಿಗಳೇ ಇದ್ದುದು ಈಜಿಪ್ಟ್ ಅಭಿವೃದ್ಧಿಗೆ ಕಂಟಕವಾಗಿದ್ದವು. ಜನತೆ ಮೋರ್ಸಿಯ ಮೇಲೆ ಬೆಟ್ಟದಷ್ಟು ಭರವಸೆ ಹೊಂದಲು ಇವೂ ಕಾರಣವಾಗಿದ್ದವು.
ಆದರೆ...ಮೋರ್ಸಿ ಒಂದೇ ವರ್ಷದಲ್ಲಿ ಮರಳಿ ಮುಬಾರಕ್ ಆಡಳಿತವಿದೆಯೆನ್ನುವಂತೆ ಬದಲಾದದ್ದು ಆ ಜನರ ದುರಾದೃಷ್ಟವೇ ಸರಿ ಎನ್ನುವಂತಾಯಿತು. ದಶಕಗಳ ಕಾಲದ ದಬ್ಬಾಳಿಕೆ, ಮೂಲಭೂತವಾದಿಗಳ ಅಟ್ಟಹಾಸದ ನಡುವೆ ಬಳಲಿದ್ದ, ಬದಲಾವಣೆಯ ಶಕೆ ಆರಂಭವಾಯಿತೆಂದು ಬಯಸಿದ್ದವರಿಗೆ ಮುಬಾರಕ್ ಆಡಳಿತದ ಹೈಲೈಟ್ಸ್ನಂತೆ ಮೋರ್ಸಿ ಕಂಡದ್ದು ಆಕ್ರೋಶ ಉಂಟಾಗಲು ಕಾರಣವಾಯಿತು. ಮೋರ್ಸಿ ಅಧಿಕಾರ ಪದಗ್ರಹಣ ಮಾಡುತ್ತಿದ್ದಂತೆ ಈಜಿಪ್ಟ್ಸಂವಿಧಾನದತ್ತ ಎಲ್ಲರ ದೃಷ್ಟಿ ಹರಿಯಿತು.  1971ರಲ್ಲಿ ಮುಬಾರಕ್ ಕಾಲದಲ್ಲಿ ಜಾರಿಗೆ ಬಂದ ಸಂವಿಧಾನ ಷರಿಯಾ ಕಾನೂನನ್ನು ಒಳಗೊಂಡಿತ್ತು, ಹೀಗಾಗಿ ಮೋರ್ಸಿ ಸಂವಿಧಾನದ ತಿದ್ದುಪಡಿಗೆ ಮುಂದಾಗುತ್ತಿರುವಂತೆಯೇ ಕುತೂಹಲ ಗರಿಗೆದರಿತು.  ಮೋರ್ಸಿ ಆಡಳಿತದಲ್ಲಿ ಧರ್ಮದ ಪಾತ್ರವೆಷ್ಟು? ಆಡಳಿತದಿಂದ ಧರ್ಮವನ್ನು ಹೊರಗಿಟ್ಟ ರಾಜ್ಯವೋ ಅಥವಾ ಧರ್ಮವನ್ನು ಆಧರಿಸಿದ ರಾಜ್ಯವೋ ಎಂಬುದು ನಿರ್ಧಾರವಾಗಲಿತ್ತು. ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದ ಮೋರ್ಸಿ ಸಂವಿಧಾನ ರಚನೆಯಲ್ಲಿ ಇಸ್ಲಾಂ ಅನ್ನು ಪ್ರತಿಪಾದಿಸುವ ಮುಸ್ಲಿಂ ಬ್ರದರ್ಹುಡ್ ಪಕ್ಷದ ಮುಖಂಡರು ಮತ್ತು ಮೂಲಭೂತವಾದಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರು. ಈ ಮೊದಲಿದ್ದ ಷರಿಯಾ ಕಾನೂನಿನ ಪರಿಚ್ಛೇಧವನ್ನು ತಿದ್ದುಪಡಿ ಮಾಡುವ ಅಥವಾ ಇತಿಮಿತಿಗಳನ್ನು ಹೇರುವರೆಂಬ ನಿರೀಕ್ಷೆಯ ಕಣ್ಣುಗಳಿಗೆ ತಣ್ಣೀರೆರಚಿದರು. ಆಗಲೇ ಯುವಕರು, ಮಹಿಳೆಯರು, ಕಾಪ್ಟಿಕ್ ಚರ್ಚ್ನವರು ವಿರೋಧದ ಮಾತುಗಳನ್ನಾಡಿದ್ದು. ಜೊತೆಗೆ, ಪ್ರತಿಭಟನೆ, ವಿರೋಧಗಳನ್ನು ಹತ್ತಿಕ್ಕಲು ಅನುಕೂಲಕರವಾದ ಮಧ್ಯಂತರ ಆದೇಶಗಳನ್ನು ಹೊರಡಿಸುವ ಅಧಿಕಾರಗಳು ಅಧ್ಯಕ್ಷನಿಗಿರುವಂತೆ ಕಾನೂನುಗಳನ್ನು (ಇದು ಮೋರ್ಸಿ ಮುಂದಾಲೋಚನೆಯ ಕ್ರಮ) ತರಲಾಯಿತು. ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಯಿತು. ಮೊಟ್ಟ ಮೊದಲ ಪ್ರಜಾಪ್ರಭುತ್ವದ ಸರ್ಕಾರವೊಂದು ಐದಾರು ತಿಂಗಳುಗಳು ಕಳೆಯುವಷ್ಟರಲ್ಲೆ ಜನರನ್ನು ನಿಯಂತ್ರಿಸಲು ಮುಂದಾದ್ದು ಆಕ್ರೋಶ ಹೆಚ್ಚಿಸಿತು.  ವಿರೋಧವನ್ನು ಲೆಕ್ಕಿಸದ ಮೋರ್ಸಿ ಸೂಕ್ಷ್ಮ ಸ್ಥಳಗಳಲ್ಲಿ ಮಿಲಿಟರಿ ಬೇಲಿಯನ್ನಿಟ್ಟು ಜನಪ್ರತಿನಿಧಿಗಳ ಸಭೆಯಲ್ಲಿ ಒಪ್ಪಿಗೆಯನ್ನು ಪಡೆದು, ನೂತನ ಸಂವಿಧಾನವನ್ನು ಜಾರಿಗೆ ತಂದ.
ತಹ್ರೀರ್ ಚೌಕದಲ್ಲಿನ ಆರಂಭ ಮುಬಾರಕ್ಗೆ ಅಂತ್ಯ ಹಾಡಿದರೆ, ಮೋರ್ಸಿ ಪದಚ್ಯುತಿಗೆ ಸೂಯೆಜ್ ಕಾಲುವೆ ನಾಂದಿ ಹಾಡಿತು. ಸೂಕ್ಷ್ಮ ಸ್ಥಳಗಳಲ್ಲಿ ನಿಯೋಜಿಸಿದ್ದ ಸೇನೆಯನ್ನು ಹಿಂತಿರುಗಿಸಿ ವಾರವೂ ಕಳೆದಿರಲಿಲ್ಲ ಪ್ರತಿಭಟನೆ ಆರಂಭವಾಯಿತು. ಸೂಯೆಜ್ ಕಾಲುವೆ ಬಳಿ ಮೋರ್ಸಿ ಬೆಂಬಲಿಗರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ 50ಕ್ಕೂ ಹೆಚ್ಚು ಜನರು ಬಲಿಯಾದರು. ದೇಶದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಆಮರ್ ಜನರಲ್ ಅಬ್ದೆಲ್-ಫತ್ತಾಹ್ ಎಲ್-ಸಿಸ್ಸಿ ಆಡಳಿತ ಕುಸಿಯುವ ಬಗ್ಗೆ ಎಚ್ಚರಿಕೆ ನೀಡಿದರು.  ತಿಂಗಳು ಕಳೆಯುವುದರೊಳಗೆ ಇದು ನಿಜವೂ ಆಯಿತು. ಸೂಯೆಜ್ ಕಾಲುವೆಯಿಂದ ಆರಂಭವಾಗಿ ದೇಶಾದ್ಯಂತ ಹಬ್ಬಿದ ಪ್ರತಿಭಟನೆ, ತಹ್ರಿರ್ ಚೌಕದಲ್ಲಿ ಲಕ್ಷಾಂತರ ಜನರ ಜಮಾವಣೆಯೊಂದಿಗೆ ಮರಳಿ ಜೀವ ಪಡೆಯಿತು.
ಯುವಕರು-ವಯಸ್ಕರು, ಮಹಿಳೆಯರು-ಪುರುಷರು, ಮುಸ್ಲಿಂ-ಕ್ರಿಶ್ಚಿಯನ್, ಕೆಳ-ಮಧ್ಯಮ-ಮೇಲ್ವರ್ಗದ ಜನ ಅವರು ಇವರೆನ್ನದೆ ಒಂದಾಗಿ ಹೇಗೆ ಮುಬಾರಕ್ನ 30 ವರ್ಷಗಳ ಸರ್ವಾಧಿಕಾರವನ್ನು ಕೊನೆಗಾಣಿಸಿದ್ದರೋ ಹಾಗೆಯೇ ಮತ್ತೆ ಜನರು ಒಂದಾದರು. 'ಗಾಡ್ ಈಸ್ ಗ್ರೇಟ್', 'ಲಾಂಗ್ ಲಿವ್ ಈಜಿಪ್ಟ್' ಘೋಷಣೆಗಳು ಮುಗಿಲು ಮುಟ್ಟಿದವು. ಜೂನ್ 30ಕ್ಕೆ ಮೋರ್ಸಿ ಅಧಿಕಾರ ವಹಿಸಿಕೊಂಡು ವರ್ಷ ಕಳೆಯುವುದಿತ್ತು. ಆ ದಿನದೊಳಗೆ ಮೋರ್ಸಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕೆಂದು ಸಹಿಸಂಗ್ರಹವೂ ನಡೆಯಿತು. ಇದೇ ಸಮಯವನ್ನು ಕಾಯುತ್ತಿದ್ದವರಂತೆ ಜನರಲ್ ಸಿಸ್ಸಿ ಪ್ರತಿಭಟನಾಕಾರರ ಬೇಡಿಕೆಗಳನ್ನು ಈಡೇರಿಸಲು ಕೇವಲ 48 ಗಂಟೆಗಳ ಗಡುವು ನೀಡಿದರು. 'ಮೋರ್ಸಿ ರಾಜೀನಾಮೆ ನೀಡಬೇಕು. ಚುನಾವಣೆ ನಡೆಯಬೇಕು' ಇವು ಬೇಡಿಕೆಗಳಾಗಿದ್ದವು. ಇವುಗಳನ್ನು ಮೋರ್ಸಿ ಒಪ್ಪುವುದು ಸಾಧ್ಯವೇ ಇರಲಿಲ್ಲ.  
ಗಡುವು ಮುಗಿಯುತ್ತಿದ್ದಂತೆ ಮಾಧ್ಯಮಗಳ ಮುಂದೆ ಹಾಜರಾದ ಜನರಲ್ ಸಿಸ್ಸಿ ಮೋರ್ಸಿ ಸರ್ಕಾರವನ್ನು ಮತ್ತು ಸಂವಿಧಾನವನ್ನು ಅಮಾನತುಗೊಳಿಸಿ ಸವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಆಡ್ಲಿ ಮಾನ್ಸೌರ್ ಅವರಿಗೆ ತಾತ್ಕಾಲಿಕ ಸರ್ಕಾರದ ನೇತೃತ್ವ ವಹಿಸಿದರು. 'ಸ್ವಚ್ಛ ಮತ್ತು ಮುಕ್ತ ಚುನಾವಣೆಯಲ್ಲಿ ಜನತೆ ನನ್ನನ್ನು ಆಯ್ಕೆ ಮಾಡಿದ್ದಾರೆ, ಅಧಿಕಾರ ನೀಡಿದ್ದಾರೆ. ಮಿಲಿಟರಿಯ ನಿರ್ಧಾರ ಅಸಂವಿಧಾನಿಕವಾದದ್ದು' ಎಂದು ಮೋರ್ಸಿ ಎಷ್ಟೇ ಬಡಬಡಾಯಿಸಿದರೂ ಗೃಹಬಂಧನವೇ ಗತಿಯಾಯಿತು. 8.20 ಕೋಟಿ ಜನರಿರುವ ಈಜಿಪ್ಟ್ ಎರಡು ವರ್ಷಗಳಲ್ಲೇ ಹೊಸ ಕ್ರಾಂತಿಯ ಯಶಸ್ಸು ಮತ್ತು ವೈಫಲ್ಯ ಎರಡನ್ನೂ ಕಂಡಿತು. ಈಜಿಪ್ಟಿಯನ್ನರಿಗೆ ಸ್ವಾತಂತ್ರ್ಯ, ಘನತೆ, ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡಬಹುದಾಗಿದ್ದ ಮೋರ್ಸಿ, ಈಜಿಪ್ಟ್ ಅನ್ನು ಇಸ್ಲಾಂ ರಾಷ್ಟ್ರದಂತೆ ಬಿಂಬಿಸಲು ಹೋಗಿ ಖಳನಾಯಕನಾಗಬೇಕಾಯಿತು.
ತಹ್ರೀರ್ ಚೌಕದಲ್ಲಿ ಬಯಸಿದ್ದ ಬದಲಾವಣೆ ಈಜಿಪ್ಟ್ನ ಒಟ್ಟಾರೆ ಜನತೆಯ ಅಭಿಪ್ರಾಯವಲ್ಲ ಎಂಬುದು ಚುನಾವಣೆಯಲ್ಲೇ ಸಾಬೀತಾಗಿತ್ತು. ಇಸ್ಲಾಂ ಮೂಲಭೂತವಾದಿಗಳ ಬೆಂಬಲ ಪಡೆದ ರಾಜಕೀಯ ಪಕ್ಷಗಳು ಶೇ.67ರಷ್ಟು ಮತ ಪಡೆದಿದ್ದವು. ಮುಸ್ಲಿಂ ಜನಾಂಗ ಬಹುಸಂಖ್ಯಾತರಿರುವ ರಾಷ್ಟ್ರಗಳಲ್ಲಿ ಇದು ಆಶ್ಚರ್ಯದ ಸಂಗತಿಯಲ್ಲದಿದ್ದರೂ, ಸಂಪೂರ್ಣ ಬದಲಾವಣೆ ಬಯಸಿದ್ದ ಈಜಿಪ್ಟ್ಗೆ ಮಾತ್ರ ನಿರಾಸೆಯೇ ಸರಿ.

- ಗೋಪಾಲಕೃಷ್ಣ
gkckm@yahoo.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement