ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ತಾಲಿಬಾನಿಗಳಿಗೆ ಸಿಗಲಿದೆ ತರುಣಿಯರ ತಪರಾಕಿ

Rashmi Kasaragodu
Updated On : 19 Jul 2013, 10:57 am

ಮಲಾಲಾ ಯೂಸುಫ್‌ಜಾಯ್‌ಗೆ ಗುಂಡಿಕ್ಕಿದ್ದ ತಾಲಿಬಾನಿಗಳ ಪರವಾಗಿ ಆಕೆಗೆ ರಷೀದ್ ಎಂಬಾತ ಪತ್ರ ಬರೆದು, ಮತ್ತೆ ಪಾಕಿಸ್ತಾನಕ್ಕೆ ಮರಳುವಂತೆ ಕೇಳಿಕೊಂಡಿದ್ದು ಸುದ್ದಿಯಾಗಿತ್ತು. ಆ ಪತ್ರಸಾರವನ್ನು ಜುಲೈ 19ರ ಕನ್ನಡಪ್ರಭದಲ್ಲಿ ಓದಬಹುದು. ಇದಕ್ಕೆ ಚರ್ಚೆಯ ರೂಪದ ಪ್ರತಿಕ್ರಿಯೆ ನೀಡಿದ್ದಾರೆ, 'ದ ಕೇಸ್ ಆಫ್ ಎಕ್ಸ್‌ಪ್ಲೋಡಿಂಗ್ ಮ್ಯಾಂಗೊ'ದಂಥ ಕೃತಿಯ ಮೂಲಕ ಪಾಕಿಸ್ತಾನದ ಸಾಹಿತ್ಯ ವಲಯದಲ್ಲಿ ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಮೊಹಮ್ಮದ್ ಹನೀಫ್. 'ಗಾರ್ಡಿಯನ್‌' ಪತ್ರಿಕೆ ಆ ಲೇಖನವನ್ನು ಪ್ರಕಟಿಸಿದೆ.
--
ಪ್ರಿಯ ಅದ್ನಾನ್ ರಷೀದ್, ನಾನಿದನ್ನು ವೈಯಕ್ತಿಕ ಅನಿಸಿಕೆಯ ನೆಲೆಯಲ್ಲಿ ಬರೆಯುತ್ತಿದ್ದೇನೆ. ಇದು ಪಾಕಿಸ್ತಾನದ ಜನರ ಭಾವನೆಯನ್ನಾಗಲಿ, ಇಲ್ಲಿನ ಸರ್ಕಾರದ ನೀತಿಯನ್ನಾಗಲೀ ಬಿಂಬಿಸದೇ ಇದ್ದಿರಬಹುದು. ಮಲಾಲಾ ಯೂಸುಫ್‌ಜಾಯ್‌ಗೆ ಬರೆದ ಪತ್ರಕ್ಕಾಗಿ ನಿನಗೆ ಥ್ಯಾಂಕ್ಸ್ ಹೇಳುತ್ತೇನೆ. ಆಕೆಯ ಹಣೆಗೆ ಗುಂಡು ಹೊಡೆದು ನಿನ್ನ ಸಹವರ್ತಿ ತಾಲಿಬಾನಿಗಳು ಸಾಯಿಸುವುದಕ್ಕೆ ಪ್ರಯತ್ನಿಸಿದ್ದನ್ನು ನೀನು ಒಪ್ಪಿಕೊಂಡಿರುವೆ. ಪಾಕಿಸ್ತಾನದಲ್ಲಿರುವ ತಾಲಿಬಾನ್ ಹಿತೈಷಿಗಳು ಇಂದಿಗೂ ನೀವು ಚಿಕ್ಕ ಹುಡುಗಿಯ ಮೇಲೆ ದಾಳಿ ಮಾಡುವವರಲ್ಲ ಎಂದೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರ ಅಭಿಪ್ರಾಯದ ಪ್ರಕಾರ ಸೆಲಿಬ್ರಿಟಿ ಆಗುವುದಕ್ಕೆ, ಇಂಗ್ಲೆಂಡ್‌ನ ವೀಸಾ ಪಡೆಯುವುದಕ್ಕೆ ಮಲಾಲಾಳೇ ತನ್ನ ತಲೆಗೆ ಗುಂಡು ಹೊಡೆದುಕೊಂಡಿದ್ದಾಳೆ! ಹೀಗಾಗಿ ಈ ಹುಡುಗಿ ನಿಜಕ್ಕೂ ತಾಲಿಬಾನ್ ಪಡೆಯ ವೈರಿ ಆಗಿದ್ದಳು ಎಂಬುದನ್ನು ನಿನ್ನ ಪತ್ರದಲ್ಲಿಯೇ ಒಪ್ಪಿಕೊಂಡಿರುವುದಕ್ಕೆ ಧನ್ಯವಾದ. ಪೆನ್ನು ಖಡ್ಗಕ್ಕಿಂತ ಹರಿತ  ಎಂಬ ಕ್ಲೀಷೆಯ ಮಾತುಗಳನ್ನಾಡಿದರೆ ಆಕೆ ಖಡ್ಗವನ್ನೇ ಎದುರಿಸಬೇಕಾದ ಪರಿಸ್ಥಿತಿ ಇದೆ ಎಂಬುದನ್ನು ಜಾಹೀರು ಮಾಡಿದಂತಾಯಿತು.
ಮಲಾಲಾಳ ಮೇಲೆ ದಾಳಿ ಮಾಡಿದ್ದು 'ಇಸ್ಲಾಂ ಪ್ರಕಾರ ಸರಿಯೋ', ಅಥವಾ 'ಆಕೆ ಹತ್ಯೆಗೊಳಗಾಗುವುದಕ್ಕೆ ಯೋಗ್ಯಳೋ ಅಲ್ಲವೋ' ಎಂಬ ಬಗ್ಗೆ ನಿನ್ನಂತೆಯೇ ಹಲವರಿಗೆ ಸ್ಪಷ್ಟತೆ ಇಲ್ಲ. ಅದನ್ನೆಲ್ಲ ಅಲ್ಲಾಹುವೇ ನೋಡಿಕೊಳ್ಳುತ್ತಾನೆ ಎಂದು ಅವರೆಲ್ಲ ನಿಡುಸುಯ್ಯುತ್ತಾರೆ. ಪಾಕಿಸ್ತಾನದಲ್ಲಿರುವ ಮುಸ್ಲಿಮರಲ್ಲದ ಹಲವರಿಗೂ ದಿನನಿತ್ಯದ ಜೀವನದಲ್ಲಿ ಅಭಿಪ್ರಾಯ ತಳೆಯುವುದಕ್ಕೆ ನಿರಂತರ ಸಂದಿಗ್ಧಗಳಿದ್ದು ಅವರೂ ಅಲ್ಲಾಹುವೆ ನಿರ್ಧರಿಸಲಿ ಎನ್ನುವವರೇ ಆಗಿದ್ದಾರೆ. ಅದು ಹತಾಶೆಯ ಪ್ರತೀಕ. ಆದರೆ ನೀವು ಹೆಣ್ಣುಮಗುವಿನ ಹಣೆಗೆ ಗುಂಡಿಟ್ಟ ಕ್ಷಣದಲ್ಲೆ ಹೆಚ್ಚಿನ ಜನ ನಾವು ಎಲ್ಲವನ್ನು ಅಲ್ಲಾಹು ನಿರ್ಧರಿಸುತ್ತಾನೆ ಎಂದು ಬಿಡಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಹುಡುಗಿಯರ ಬಗ್ಗೆಯೇ ಇರುವ ಪುರಾಣದ ಅಂಶವನ್ನು ಇಲ್ಲಿ ವಿವರಿಸುತ್ತೇನೆ. ಇಸ್ಲಾಂ ವಿಕಸನ ಹೊಂದುವುದಕ್ಕೂ ಪೂರ್ವದಲ್ಲಿ, ನೀವೀಗ ಯಾವ ಪವಿತ್ರ ಕುರಾನ್ ಅನ್ನು ಮಲಾಲಾ ಅಭ್ಯಸಿಸಬೇಕು ಎಂದು ಫರ್ಮಾನು ಹೊರಡಿಸುತ್ತಿದ್ದೀರೋ ಆ ಗ್ರಂಥವನ್ನು ಪ್ರವಾದಿಯವರು ನಮಗೆ ನೀಡುವುದಕ್ಕಿಂತ ಪೂರ್ವದಲ್ಲಿ ಜನ ನವಜಾತ ಹೆಣ್ಣು ಶಿಶುಗಳನ್ನು ಹೂಳುತ್ತಿದ್ದರಂತೆ. ಬಹುಶಃ ಈ ಜೀವಗಳೇ ಅಪಶಕುನ ಎಂದು ಭಾವಿಸಿ ಅವು ಮಾತನಾಡುವುದನ್ನು ಕಲಿಸುವ ಮುಂಚೆಯೆ ಹೂಳಲಾಗುತ್ತಿತ್ತು. ಅಂಥ ಅಮಾನವೀಯ ಪದ್ಧತಿಯನ್ನು ಇಸ್ಲಾಂ ಕೊನೆಗೊಳಿಸಿತು ಎಂಬುದರ ಬಗ್ಗೆ ನಾವು ಕೇಳಿದ್ದೇವೆ. ಅದಾಗಿ 1400 ವರ್ಷಗಳ ನಂತರ ಹುಡುಗಿಯೊಬ್ಬಳ ಬಾಯಿ ಮುಚ್ಚಿಸುವುದಕ್ಕೆ ಆಕೆಗೆ ಗುಂಡು ಹೊಡೆಯಲಾಗುತ್ತದೆ ಎಂದರೆ ಯಾವ ಪ್ರಗತಿ ಸಾಧಿಸಿದಂತಾಯಿತು?
ನಿನ್ನಂತೆಯೇ ನಾನೂ ಮಲಾಲಾಳ ತವರು ಸ್ವಾತ್ ಕಣಿವೆ ಬಗ್ಗೆ ಸ್ವಲ್ಪಮಟ್ಟಿಗಿನ ಸಂಶೋಧನೆ ಮಾಡಿದ್ದೇನೆ. ನೀವು ಸಾರ್ವಜನಿಕವಾಗಿ ಶಿರಚ್ಛೇದನದಂಥ ಕೃತ್ಯ ಎಸಗಿ ಅರಗಿಸಿಕೊಳ್ಳಬಹುದು. ಆದರೆ ಶಾಲೆಗೆ ಹೋಗುವ ಹುಡುಗಿಯರನ್ನು ಗುರಿ ಮಾಡಿದರೆ ಜನ ಸುಮ್ಮನಿರುವುದಿಲ್ಲ ಎಂದು ಪತ್ರಕರ್ತನೊಬ್ಬ ನಿಮ್ಮ ಕಾಮ್ರೆಡ್‌ಗಳನ್ನು ಎಚ್ಚರಿಸಿದ್ದ. ಸರ್ಕಾರವೇನೊ ಇಡೀ ಪ್ರಾಂತ್ಯವನ್ನು ನಿಮ್ಮ ವಶಕ್ಕೆ ಒಪ್ಪಿಸಿಬಿಟ್ಟಿದೆ. ಆದರೆ ನಿಮ್ಮ ಅಂಕುಶ ಅಲ್ಲಿ ವಾರವೂ ಉಳಿಯಲಿಲ್ಲ. ಏಕೆಂದರೆ ಎಲ್ಲ ಮಹಿಳೆಯರೂ ಮನೆಯಲ್ಲೆ ಇರಬೇಕು ಎಂದು ನೀವು ಆದೇಶ ಹೊರಡಿಸಿದಿರಿ.
ನೀವು ಕಲಿಯಬೇಕಾದ ಒಂದು ಪಾಠವಿದೆ: ತಾಲಿಬಾನಿಗಳು ಪಾಕಿಸ್ತಾನಿ ಸೇನೆಯೊಂದಿಗೆ ಸೆಣೆಸಬಹುದು; ಪಾಕ್‌ನ ಕಮಾಂಡರ್ ಇನ್ ಚೀಫ್ ಅನ್ನು ಕೊಲ್ಲುವ ಯತ್ನದಲ್ಲಿ ಇನ್ನೇನು ಸಫಲರೂ ಆಗಿದ್ದಿರಿ; ಸಾಮ್ರಾಜ್ಯಶಾಹಿ ವಿರುದ್ಧ ಹಿಂಸಾತ್ಮಕ ಜಿಹಾದಿ ಯುದ್ಧ ಸಾರಬಹುದು. ಆದರೆ ನಿಮ್ಮ ಹಿಡಿತದ ಪ್ರದೇಶದಲ್ಲಿ ಮಹಿಳೆಯರ ವಿರುದ್ಧ ಯುದ್ಧ ಸಾರಿ ನೀವು ಯಶಸ್ವಿ ಆಗಲಾರಿರಿ. ಆ ಸಾಮಾನ್ಯ ಮಹಿಳೆಯರು ವಿಶ್ವಸಂಸ್ಥೆ ಗಮನ ಸೆಳೆಯದೇ ಇರಬಹುದಾದರೂ ಒಬ್ಬ ಹತ್ತಿ ಕೀಳುವವನಿಂದ ಹಿಡಿದು ಬ್ಯಾಂಕ್ ಲೆಕ್ಕಿಗನವರೆಗೆ ಎಲ್ಲರ ಬೆಂಬಲ ಪಡೆದುಕೊಳ್ಳುತ್ತಾರೆ.
ನಿನ್ನ ಪತ್ರ ಪಾಕಿಸ್ತಾನದ ಮುಖ್ಯವಾಹಿನಿ ಅಭಿಪ್ರಾಯ ಹೇಳುತ್ತಿದ್ದೇನೆ ಎಂಬ ಧಾಟಿಯಲ್ಲಿದೆ. ಆದರೆ ನಿಮ್ಮ ಜಿಹಾದ್ ಅನ್ನು ಬೆಂಬಲಿಸುವ ಸಾಕಷ್ಟು ಮಂದಿ ಇರಬಹುದಾದರೂ, ಅದೇ ತೀವ್ರತೆಯನ್ನು ಅವರು ಶಾಲೆ- ಕಾಲೇಜುಗಳಲ್ಲಿ ಓದುತ್ತಿರುವ ತನ್ನ ಮಗಳ ಅಂಕ ಗಳಿಕೆ ಹೆಚ್ಚಲಿ ಎಂಬ ವಿಷಯದಲ್ಲೂ ತೋರುತ್ತಿದ್ದಾರೆ.
ನನಗಂತೂ ವಿಶ್ವಾಸ ಇದೆ. ಇದೇ ಮಹಿಳೆಯರು ಒಂದು ದಿನ ತಾಲಿಬಾನಿಗಳ ಅಂಡಿಗೆ ಒದೆಯಲಿದ್ದಾರೆ. ಅವರು ದುರ್ಬಲರು, ತಿಂಗಳಲ್ಲಿ ಐದು ದಿನ ಅಪವಿತ್ರರಾಗುತ್ತಾರಾದ್ದರಿಂದ ಕೆಲಸದ ಜಾಗದಲ್ಲಿ ಅವರು ಇರಬಾರದು ಎಂಬ ನಿಮ್ಮ ವಾದಗಳನ್ನೆಲ್ಲ ನಾವು ಕೇಳಿಸಿಕೊಂಡಿದ್ದೇವೆ. ಅವರು ಒಳ್ಳೆಯ ಹೆಂಡತಿ ಎಂದಾದರೆ ವರ್ಷದಲ್ಲಿ ಒಂಬತ್ತು ತಿಂಗಳು ಬಸಿರು ಹೊತ್ತಿರಬೇಕು ಎಂಬ ಧೋರಣೆಯಲ್ಲಿರುವ ನನ್ನಂತವರನ್ನು ನಿನ್ನಂತವರನ್ನು ಸೇರಿಸಿಯೇ ಒಂದು ದಿನ ಅವರು ಜಾಡಿಸುತ್ತಾರೆ ನೋಡುತ್ತಿರು!
ನಂಬಿಕೆ ಬರುತ್ತಿಲ್ಲ ಎಂದಾದರೆ ನಿಮ್ಮ ತಾಲಿಬಾನ್ ಪಡೆಯ ಮಾಜಿ ಉದ್ಯೋಗದಾತರಾದ ಪಾಕಿಸ್ತಾನ ವಾಯುಸೇನೆಯವರು ಇತ್ತೀಚೆಗೆ ಬಿಡುಗಡೆ ಮಾಡಿದ್ದ ಪೋಸ್ಟರ್ ಗಮನಿಸು. ಕೆಲ ಮಹಿಳೆಯರು ಯುದ್ಧ ವಿಮಾನ ಚಲಾಯಿಸುವುದಕ್ಕೆ ಕಲಿತಿದ್ದಾರೆ. ಪಾಕಿಸ್ತಾನಿ ಸೇನೆಯ ದುಸ್ಸಾಹಸಗಳಿಂದ ಒಳ್ಳೆಯ ಪರಿಣಾಮಗಳೇನೂ ಇದುವರೆಗೆ ಬಂದಿದ್ದಿಲ್ಲ ಖರೆ. ಆದರೆ, ಹೀಗೆ ತರಬೇತುಗೊಳ್ಳುತ್ತಿರುವ ತರುಣಿಯರು, ನಾವು ಎಲ್ಲವನ್ನೂ ಅಲ್ಲಾಹುವಿಗೆ ಬಿಡಲಾರೆವು ಎನ್ನುತ್ತ ತಾವೇ ನಿರ್ಧಾರ ಕೈಗೊಳ್ಳುವ ದಿನಗಳು ಬಂದೇ ಬರುತ್ತವೆ.

-ಮೊಹಮದ್ ಹನೀಫ್
ಕಾದಂಬರಿಕಾರ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement