ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅರ್ಹತಾ ಪರೀಕ್ಷೆ ಪರಿಕಲ್ಪನೆಯಲ್ಲೇ ಗೊಂದಲ

ವೈದ್ಯ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನದ ಪ್ರವೇಶ ಪರೀಕ್ಷೆ 'ನೀಟ್'...

Rashmi Kasaragodu
Updated On : 21 Jul 2013, 1:55 am

ವೈದ್ಯ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನದ ಪ್ರವೇಶ ಪರೀಕ್ಷೆ 'ನೀಟ್' ಅನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ ಭಾರತೀಯ ವೈದ್ಯ ಪರಿಷತ್ನ ಮಾಜಿ ಸದಸ್ಯ ಡಾ.ದೇವಿಪ್ರಸಾದ್ ಶೆಟ್ಟಿ.


-    ನೀಟ್ ಪರೀಕ್ಷೆ ಕುರಿತಂತೆ ನಿಮ್ಮ ಪ್ರಸ್ತಾವನೆ ಏನಾಗಿತ್ತು?

ಈ ದೇಶದ 45,600ಕ್ಕೂ ಅಧಿಕ ವೈದ್ಯ ಶಿಕ್ಷಣ ಸೀಟುಗಳಿಗೆ ಸುಮಾರು 25 ಪ್ರವೇಶ ಪರೀಕ್ಷೆ ಬರೆಯಬೇಕಿದೆ. ಈ ಎಲ್ಲ ಪ್ರವೇಶ ಪರೀಕ್ಷೆಗಳು ಒಂದೂವರೆ ತಿಂಗಳ ಅಂತರದಲ್ಲಿ ನಡೆಯುತ್ತವೆ. ಒಬ್ಬ ವಿದ್ಯಾರ್ಥಿ ಪ್ರವೇಶ ಪರೀಕ್ಷೆಯ ಒಂದೂವರೆ ತಿಂಗಳ ಸಮಯದಲ್ಲಿ ಇಡೀ ದೇಶವನ್ನು ಸುತ್ತಾಡುತ್ತಿರಬೇಕಾಗುತ್ತದೆ. ವ್ಯವಹಾರಿಕವಾಗಿ ಯಾವುದೆ ವಿದ್ಯಾರ್ಥಿ 5ಕ್ಕೂ ಹೆಚ್ಚಿನ ಪರೀಕ್ಷೆ ತೆಗೆದುಕೊಳ್ಳುವುದು ಸಾಧ್ಯವಿರುವುದಿಲ್ಲ. ಮತ್ತೊಂದೆಡೆ ಒಬ್ಬ ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಇಷ್ಟೊಂದು ಪ್ರವೇಶ ಪರೀಕ್ಷೆ ಬರೆಯುವುದು ಗಗನಕುಸುಮವಾಗುತ್ತದೆ. ಇದರಿಂದ ಅಂತಹ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಷ್ಟ್ರೀಯ ಅರ್ಹತಾ ಪರೀಕ್ಷೆ ರೂಪಿಸಲಾಗಿತ್ತು. ರಾಜ್ಯದಲ್ಲಿ ನಡೆಯುವ ಸಿಇಟಿ 2400 ಸೀಟುಗಳನ್ನು ಹಾಗೂ ಕಾಮೆಡ್-ಕೆ ಸುಮಾರು ಒಂದು ಸಾವಿರ ಸೀಟುಗಳನ್ನು ನಿರ್ಧರಿಸುತ್ತದೆ. ಉಳಿದ 42 ಸಾವಿರ ಸೀಟುಗಳು ರಾಜ್ಯದ ವಿದ್ಯಾರ್ಥಿಗಳಿಗೆ ಬೇಕೆಂದರೆ ಬೇರೆ ಪ್ರವೇಶ ಪರೀಕ್ಷೆ ಬರೆಯಬೇಕಾಗುತ್ತದೆ. ನೀಟ್ ಪರೀಕ್ಷೆಯನ್ನು ಉಳಿದ ಪ್ರವೇಶ ಪ್ರಕ್ರಿಯೆಗಳಿಗೆ ಮಾನದಂಡವನ್ನಾಗಿ ಸ್ವೀಕರಿಸಬೇಕು ಎನ್ನುವುದು ನಮ್ಮ ಕಾಳಜಿಯಾಗಿತ್ತು. ಅಮೆರಿಕದ ಎಲ್ಲ ವಿಶ್ವವಿದ್ಯಾಲಯಗಳಿಗೆ ಒಂದೆ ಅರ್ಹತಾ ಪರೀಕ್ಷೆ ನಡೆಯುತ್ತದೆ. ಒಂದು ನಿಗದಿತ ಅಂಕ ಗಳಿಸದಿದ್ದರೆ ಯಾವುದೆ ವಿವಿಯಲ್ಲಿಯೂ ಪ್ರವೇಶ ದೊರೆಯುವುದಿಲ್ಲ. ಇದರಿಂದ ಗುಣಮಟ್ಟ ನಿಯಂತ್ರಣ ಸಾಧ್ಯವಿದೆ. ಸುಮ್ಮನೆ ದುಡ್ಡುಕೊಟ್ಟು ವೈದ್ಯ ಪದವಿ ಗಳಿಸುವ ಯುವಕರನ್ನು ಅರ್ಹತಾ ಪರೀಕ್ಷೆ ಮೂಲಕ ಹೊರಗಟ್ಟಲು ಸಾಧ್ಯವಿದೆ. ಜನರ ಜೀವವನ್ನು ರಕ್ಷಿಸುವಂತಹ ವೃತ್ತಿಗೆ ಮಾನದಂಡವಿಲ್ಲದಿದ್ದರೆ ಕತೆಯೇನು?

-    ಹಾಗಿದ್ದರೆ ಪ್ರಸ್ತುತ ನೀಟ್ನಲ್ಲಿ ಆಗಿರುವ ಬದಲಾವಣೆಯೇನು?
ಅರ್ಹತಾ ಪರೀಕ್ಷೆಯ ಪರಿಕಲ್ಪನೆ ಬದಲಿಸಿ ರಾಷ್ಟ್ರೀಯ ಪ್ರವೇಶ ಪರೀಕ್ಷೆಯಾಗಿ ಪರಿವರ್ತನೆಯಾಯಿತು. ದೇಶದಲ್ಲಿ ನಡೆಯುವ ಎಲ್ಲ ಪ್ರವೇಶ ಪ್ರಕ್ರಿಯೆಯನ್ನು ನೀಟ್ ಮೂಲಕ ನಿಯಂತ್ರಿಸಲು ಎಂಸಿಐ ಹಾಗೂ ಕೇಂದ್ರ ಸರ್ಕಾರ ಮುಂದಾಯಿತು. ಇದು ರಾಜ್ಯ ಸರ್ಕಾರದ ಸಂವಿಧಾನಾತ್ಮಕ ಅಧಿಕಾರವನ್ನು ಕಸಿದುಕೊಳ್ಳುವ ಪ್ರಯತ್ನವಾಗುತ್ತದೆ. ಯಾವುದೇ ರಾಜ್ಯ ಸರ್ಕಾರದ ಪ್ರವೇಶ ಪ್ರಕ್ರಿಯೆಯಲ್ಲಿ ಮೂಗು ತೂರಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲು ಸಾಧ್ಯವಿಲ್ಲ.  ಮೇಘಾಲಯದಲ್ಲಿನ ವಿದ್ಯಾರ್ಥಿಯು ಕರ್ನಾಟಕದ ವಿದ್ಯಾರ್ಥಿಯೊಂದಿಗೆ ಸ್ಪರ್ಧೆ ನಡೆಸಲು ಸಾಧ್ಯವಿಲ್ಲ. ಇದರಿಂದ ರಾಜ್ಯದ ವಿದ್ಯಾರ್ಥಿಗಳು ಮೇಘಾಲಯದ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದು ಅಭ್ಯಸಿಸುತ್ತಾರೆ. ಆದರೆ ಇಂಟರ್ನ್ಷಿಪ್ ಮಾಡಲು ಕೂಡ ಅಲ್ಲಿರದೆ ರಾಜ್ಯಕ್ಕೆ ಹಿಂತಿರುಗುತ್ತಾರೆ. ಪರಿಸ್ಥಿತಿ ಹೀಗಾದರೆ ಮೇಘಾಲಯ ಜನತೆಯ ಆರೋಗ್ಯವನ್ನು ರಕ್ಷಿಸುವವರು ಯಾರು? ಯಾವುದೆ ನಿಯಮ ರೂಪಿಸುವಾಗ ಸರ್ಕಾರ ಇಂತಹ ಗಂಭೀರ ವಿಚಾರಗಳನ್ನು ಪರಿಗಣಿಸಬೇಕಾಗುತ್ತದೆ. ಬೆಂಗಳೂರು, ದೆಹಲಿಯ ವಿದ್ಯಾರ್ಥಿಗೆ ಸಿಗುವ ಸೌಲಭ್ಯ ಎಂದಿಗೂ ಮೇಘಾಲಯದ ವಿದ್ಯಾರ್ಥಿಗೆ ದೊರೆಯುವುದಿಲ್ಲ.

-    ಹಾಗಿದ್ದರೆ ಇದಕ್ಕೆ ಪರಿಹಾರವೇನು? ಯಾವುದೇ ಪರೀಕ್ಷೆಗಳಿಲ್ಲದೆ ಖಾಸಗಿ ಕಾಲೇಜುಗಳಲ್ಲಿ ನಡೆಯುತ್ತಿರುವ ಪ್ರವೇಶ ಪ್ರಕ್ರಿಯೆಗೆ ಕೊನೆಯೆಂದು?
ನೀಟ್ನ ಮೂಲ ಸ್ವರೂಪವನ್ನು ಉಳಿಸಿಕೊಂಡು ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಹೋರಾಟ ನಡೆಸಬೇಕು. ಪ್ರವೇಶ ಪ್ರಕ್ರಿಯೆ ಬಗ್ಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸದೆ ಕೇವಲ ಅರ್ಹತೆ ಪರೀಕ್ಷೆಗೆ ಇದು ಸೀಮಿತವಾಗಬೇಕು. ಆಗ ಯಾವುದೇ ವಿರೋಧ ವ್ಯಕ್ತವಾಗುವುದಿಲ್ಲ. ಒಂದೊಮ್ಮೆ ವಿರೋಧ ವ್ಯಕ್ತವಾದರೂ ಕಾನೂನು ಚೌಕಟ್ಟಿನಲ್ಲಿ ನೆಲೆಸಿಗುತ್ತದೆ. ಇವೆಲ್ಲವನ್ನೂ ಹೊರತುಪಡಿಸಿ ಎಲ್ಲ ರಾಜ್ಯ ಸರ್ಕಾರಗಳ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಜಂಟಿ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದು. ದೇಶದಲ್ಲಿನ ಲಕ್ಷಾಂತರ ವಿದ್ಯಾರ್ಥಿಗಳ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲ ರಾಜ್ಯ ಸರ್ಕಾರಗಳೇ ಸೇರಿ ಒಂದು ಅರ್ಹತಾ ಪರೀಕ್ಷೆ ನಡೆಸಲು ಮುಂದಾಗಬಹುದು. ಈ ಮೂಲಕ ಖಾಸಗಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆಯ ಗುಣಮಟ್ಟ ನಿಯಂತ್ರಿಸಬಹುದು.

-    ಖಾಸಗಿ ಲಾಬಿಯ ನೆರಳಡಿ ಅಧಿಕಾರ ನಡೆಸುತ್ತಿರುವ ರಾಜ್ಯ ಸರ್ಕಾರಗಳಿಂದ ಇದನ್ನು ನಿರೀಕ್ಷಿಸಬಹುದೇ?
ಕೇವಲ ಖಾಸಗಿ ಕಾಲೇಜುಗಳ ಬಗ್ಗೆ ದೂರುತ್ತಾ ಕುಳಿತರೆ ಪ್ರಯೋಜನವಿಲ್ಲ. ಸಮಸ್ಯೆಯ ಮೂಲವನ್ನು ಹುಡುಕಬೇಕಿದೆ. ದೇಶದಲ್ಲಿನ ವೈದ್ಯಕೀಯ ಕಾಲೇಜುಗಳು ಭ್ರಷ್ಟಾಚಾರ ನಡೆಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಸಾಮಾನ್ಯ ಕುಟುಂಬಕ್ಕೆ ಸೇರಿದ ವ್ಯಕ್ತಿ ವೈದ್ಯ ಶಿಕ್ಷಣ ಮಾಡುವುದು ಕಷ್ಟವಾಗುತ್ತಿದೆ. ಇನ್ನೈದು ವರ್ಷದೊಳಗೆ ದೇಶದಲ್ಲಿ ಪ್ರತಿ ವರ್ಷ 100ರಂತೆ 500 ವೈದ್ಯ ಕಾಲೇಜು ಪ್ರಾರಂಭಿಸಿದರೆ 2025ರೊಳಗೆ ದೇಶದಲ್ಲಿನ ವೈದ್ಯರ ಕೊರತೆ  ನೀಗಿಸಬಹುದಾಗಿದೆ. ಬೇಡಿಕೆ ವಲಯದಲ್ಲಿ ಕೊರತೆ ಏರ್ಪಟ್ಟಾಗ ಇಂತಹ ಭ್ರಷ್ಟಾಚಾರ ನಡೆಯುವುದು ಸಾಮಾನ್ಯ. ಸರ್ಕಾರಗಳು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯ ಕಾಲೇಜು ಪ್ರಾರಂಭಿಸುವುದರಿಂದ ಎಲ್ಲ ಲಾಬಿ ಅಥವಾ ಒತ್ತಡ ತನ್ನಿಂದತಾನೆ ನಿಲ್ಲುತ್ತದೆ. ಇದೇ ಕಾರಣದಿಂದ ಇಂದು ಎಂಜಿನಿಯರಿಂಗ್ ಶಿಕ್ಷಣದಲ್ಲಿ ವ್ಯಾಪಕವಾದ ಭ್ರಷ್ಟಾಚಾರ ಕಾಣುತ್ತಿಲ್ಲ. ದೇಶದಲ್ಲಿ ಅಪಾರ ಸಂಖ್ಯೆಯ ಎಂಜಿನಿಯರಿಂಗ್ ಕಾಲೇಜುಗಳಿವೆ. ಪ್ರತಿವರ್ಷ ಶೇ.20ಕ್ಕೂ ಹೆಚ್ಚಿನ ಸೀಟುಗಳು ಖಾಲಿ ಉಳಿಯುತ್ತಿವೆ. ವಿದ್ಯಾರ್ಥಿಗಳ ಬೇಡಿಕೆಗೆ ತಕ್ಕಂತೆ ಕಾಲೇಜುಗಳನ್ನು ಸರ್ಕಾರ ನಿರ್ಮಿಸಲಿ. ವಿಚಿತ್ರವೆಂದರೆ ವೈದ್ಯಕೀಯ ಕಾಲೇಜು ನಿರ್ಮಿಸಲು ಸರ್ಕಾರ ಮುಂದಾಗುತ್ತಿಲ್ಲ. ದೇಶದಲ್ಲಿನ ವೈದ್ಯ ಕಾಲೇಜುಗಳಲ್ಲಿ ಶೇ.70ರಷ್ಟು ಖಾಸಗಿ ಆಡಳಿತ ಮಂಡಳಿಯದ್ದಾಗಿವೆ.

-    ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಎಂಸಿಐ ಕೂಡ ಸುಲಭವಾಗಿ ಒಪ್ಪಿಗೆ ನೀಡುತ್ತಿಲ್ಲ. ನಿಯಮಗಳಲ್ಲಿ ಬದಲಾವಣೆ ಮಾಡುವ ಅಗತ್ಯವಿಲ್ಲವೇ?
ಒಂದು ವೈದ್ಯಕೀಯ ಕಾಲೇಜು ನಿರ್ಮಿಸಲು 200-300 ಕೋಟಿ ಖರ್ಚಾಗುತ್ತಿದೆ. ಇಷ್ಟು ಹಣವನ್ನು ಹೂಡಿ ವಿದ್ಯಾರ್ಥಿಗಳಿಂದ ಹಣ ಪಡೆಯಬೇಡಿ ಎಂದು ಹೇಳಲು ಅವರು ಚಾರಿಟೇಬಲ್ ಟ್ರಸ್ಟ್ಗಳಲ್ಲ. ಆದರೆ ಎಂಸಿಐನ ಕೆಲ ನಿಯಮಗಳು ವಿಚಿತ್ರವಾಗಿವೆ. ಮಾನ್ಯತೆ ನೀಡಲು 500 ವಿದ್ಯಾರ್ಥಿಗಳು ಕೂರಬಹುದಾದ ಆಡಿಟೋರಿಯಂ, 200 ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಿರಬೇಕು ಎಂದು ಎಂಸಿಐ ಹೇಳುತ್ತದೆ. ಒಂದು ಉತ್ತಮ ಶಿಕ್ಷಣ ಸಂಸ್ಥೆಗಳಾಗಲು ಇದರ ಅಗತ್ಯವಿದೆಯೇ? ಇಂತಹ ಅಸಂಬದ್ಧ ನಿಯಮಗಳನ್ನು ಕೈಬಿಡಬೇಕಿದೆ.

-    ಭಾರತೀಯ ಆರೋಗ್ಯ ಕ್ಷೇತ್ರದ ವೈಫಲ್ಯಕ್ಕೆ ತಜ್ಞ ವೈದ್ಯರ ಕೊರತೆಯೂ ಕಾರಣವಲ್ಲವೇ?
ಭಾರತದಲ್ಲಿರುವ 45,600 ಪದವಿ ಸೀಟುಗಳಿಗೆ ಅನ್ವಯವಾಗಿ ಕೇವಲ 12 ಸಾವಿರ ಸ್ನಾತಕೋತ್ತರ ಸೀಟುಗಳಿವೆ. ಅದೆ ಅಮೆರಿಕದಲ್ಲಿ 19 ಸಾವಿರ ಪದವಿ ಹಾಗೂ 32 ಸಾವಿರ ಸ್ನಾತಕೋತ್ತರ ಕೋರ್ಸ್ಗಳಿವೆ. ಇವತ್ತಿನ ಪರಿಸ್ಥಿತಿಯಲ್ಲಿ ದೇಶದ 2 ಲಕ್ಷ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಮುಗಿಸಲು ಸುಮಾರು 10 ವರ್ಷಗಳ ಕಾಲ ಕಾಯಬೇಕಾಗುತ್ತದೆ. ಅದಕ್ಕಾಗಿ 5 ವರ್ಷಕ್ಕೂ ಅಧಿಕ ತರಬೇತಿ ಪಡೆಯುವ ದುಸ್ಥಿತಿ ಎಂದುರಾಗಿದೆ. ತಜ್ಞ ವೈದ್ಯರಿಲ್ಲದ ಕಾರಣದಿಂದ ಮಹಿಳೆಯರು ಹಾಗೂ ಮಕ್ಕಳ ಮರಣ ಪ್ರಮಾಣ ಹೆಚ್ಚಾಗುತ್ತಿದೆ. ಸ್ನಾತಕೋತ್ತರ ಸೀಟುಗಳ ಸಂಖ್ಯೆಯನ್ನು ಕೂಡಲೆ ಹೆಚ್ಚಿಸಬೇಕಿದೆ.

-    ದೇಶದಲ್ಲಿ ವೈದ್ಯರ ಕೊರತೆ ಹೆಚ್ಚಾಗುತ್ತಿದೆ. ಸರ್ಕಾರದ ಯಾವುದೆ ಪ್ರಯತ್ನ ಫಲಕಾರಿಯಾಗುತ್ತಿಲ್ಲ. ನಿಮ್ಮ ಸಲಹೆಯೇನು?
ಸುಮಾರು 4 ಸಾವಿರಕ್ಕೂ ಅಧಿಕ ಆಯುಷ್ ವೈದ್ಯರು ಪ್ರತಿವರ್ಷ ರಾಜ್ಯದಲ್ಲಿ ದೊರೆಯುತ್ತಿದ್ದಾರೆ. ಆದರೆ ಅವರನ್ನು ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಅಂತಹ ವೈದ್ಯರಿಗೆ ಅಲೋಪಥಿಕ್ ಚಿಕಿತ್ಸೆಯ 6 ತಿಂಗಳ ತರಬೇತಿ ನೀಡಬೇಕಿದೆ. ಇದರಿಂದ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇವರು ಚಿಕಿತ್ಸೆ ನೀಡಬಹುದಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇದಕ್ಕಿಂತ ಹೆಚ್ಚಿನ ಯಾವುದೆ ಕೆಲಸವಿರುವುದಿಲ್ಲ. ಆದರೆ ನಮ್ಮ ಸರ್ಕಾರಗಳಿಗೆ ಇದು ತಿಳಿದು ಕಾರ್ಯರೂಪಕ್ಕೆ ಬರಲು ಎಷ್ಟು ವರ್ಷಗಳು ಬೇಕೊ ಗೊತ್ತಿಲ್ಲ.

-    ಕರ್ನಾಟಕ ಸರ್ಕಾರದ ಕಡ್ಡಾಯ ಗ್ರಾಮೀಣ ಸೇವೆ ಕುರಿತು ನಿಮ್ಮ ಅಭಿಪ್ರಾಯವೇನು?
ಈ ನಿಯಮ ನನಗೆ ಆಶ್ಚರ್ಯ ತರಿಸಿದೆ. ಒಬ್ಬ ವಿದ್ಯಾರ್ಥಿ ಎಂಬಿಬಿಎಸ್, ಇಂಟರ್ನ್ಷಿಪ್, ಸ್ನಾತಕೋತ್ತರ ಕೋರ್ಸ್ ಮುಗಿಸಲು 8ರಿಂದ 10 ವರ್ಷಗಳು ಹಿಡಿಯುತ್ತವೆ. ಇದರರ್ಥ ಒಬ್ಬ ವಿದ್ಯಾರ್ಥಿಯ ಒಂದು ದಶಕದ ಜೀವನ ಪಾಲಕರ ಮೇಲೆ ಅವಲಂಬಿತವಾಗಿರುತ್ತದೆ. ದೇಶದ ಶ್ರೀಮಂತ ವರ್ಗ ಮಾತ್ರ ಇದನ್ನು ಸಹಿಸಿಕೊಳ್ಳಲು ಸಾಧ್ಯವಿದೆ. ಒಂದೆಡೆ ಸಮಾನತೆ ಹಾಗೂ ಬಡವರ ಶಿಕ್ಷಣದ ಬಗ್ಗೆ ಮಾತನಾಡುವ ಸರ್ಕಾರ ಮತ್ತೊಂದೆಡೆ ಬಡವರು ಇತ್ತ ಕಡೆ ತಲೆ ಹಾಕದಂತಹ ಪರಿಸ್ಥಿತಿ ನಿರ್ಮಾಣಮಾಡುತ್ತಿದೆ. ಅಷ್ಟಕ್ಕೂ ಒಬ್ಬ ಸ್ನಾತಕೋತ್ತರ ಪದವಿ ಅಥವಾ ಎಂಬಿಬಿಎಸ್ ಮುಗಿಸಿದ ವಿದ್ಯಾರ್ಥಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸುವುದರಲ್ಲಿ ಅರ್ಥವೇನಿದೆ? ಸರ್ಕಾರ ಯಾವುದೆ ನಿಯಮ ಮಾಡುವಾಗ ಆ ಕ್ಷೇತ್ರದ ಅಗತ್ಯವನ್ನು ಗಮನಿಸಬೇಕು. ಯೂರೋಪಿಯನ್ ದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನರ್ಸ್ಗಳು ನಡೆಸುತ್ತಾರೆ. 8-10 ವರ್ಷಗಳ ಅವಧಿಯಲ್ಲಿ ಕೋರ್ಸ್ ಮುಗಿಸುವ ವಿದ್ಯಾರ್ಥಿಗೆ ಮತ್ತೆ ಗ್ರಾಮೀಣ ಸೇವೆ ಮಾಡು ಅಥವಾ 25 ಲಕ್ಷ ದಂಡ ತುಂಬು ಎನ್ನುವುದು ವೈದ್ಯಕೀಯ ಕ್ಷೇತ್ರದ ದುರಂತ. ಇದಲ್ಲದೆ ಈಗಾಗಲೆ ಕೋರ್ಸ್ಗೆ ಹಾಜರಾದ ವಿದ್ಯಾರ್ಥಿಗೂ ಸರ್ಕಾರ ಅನ್ಯಾಯ ಮಾಡುತ್ತಿದೆ. ಸರ್ಕಾರದ ಇಂತಹ ನಿಯಮಗಳಿದ್ದರೆ ವಿದ್ಯಾರ್ಥಿಯು ಕೋರ್ಸ್ಗೆ ಸೇರುವ ಮುಂಚೆ ತನ್ನ ಭವಿಷ್ಯವನ್ನು ಯೋಚಿಸುತ್ತಿದ್ದ.

- ರಾಜೀವ ಹೆಗಡೆ, ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement