ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಜನರ ಸಾವಿನ ಗೋರಿಯ ಮೇಲೆ ಅಭಿವೃದ್ಧಿಯ ರಾಜಪಥ ಕಟ್ಟುವಿರಾ?

ಹಿಂದಿನ ಸರ್ಕಾರ ತನ್ನ 2013-14ನೇ ಮುಂಗಡಪತ್ರ ಮಂಡಿಸುವಾಗ 12,400 ಕೋಟಿ ರುಪಾಯಿಗಳ ಅಬಕಾರಿ ಆದಾಯವನ್ನು...

Rashmi Kasaragodu
Updated On : 20 Jul 2013, 11:09 am

ಹಿಂದಿನ ಸರ್ಕಾರ ತನ್ನ 2013-14ನೇ ಮುಂಗಡಪತ್ರ ಮಂಡಿಸುವಾಗ 12,400 ಕೋಟಿ ರುಪಾಯಿಗಳ ಅಬಕಾರಿ ಆದಾಯವನ್ನು ನಿರೀಕ್ಷಣೆ ಮಾಡಿತ್ತು. ಪ್ರಸಕ್ತ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿರೀಕ್ಷಿತ ಅಬಕಾರಿ ಆದಾಯ 12,600 ಕೋಟಿ ರು.ಗಳೆಂದು ಮುಂಗಡಪತ್ರದಲ್ಲಿ ಘೋಷಿಸಿದೆ. ಅಂದರೆ ಕಳೆದ ಸರಕಾರಕ್ಕಿಂತ 200 ಕೋಟಿ ಜಾಸ್ತಿ ಆದಾಯವನ್ನು ನಿರೀಕ್ಷಿಸಿದೆ.
ಆದಾಯ ಜಾಸ್ತಿ ನಿರೀಕ್ಷಿಸುವುದು ಎಂದರೆ ಮದ್ಯದ ಮಾರಾಟ ಹೆಚ್ಚಾಗಬೇಕು. ಇದರಲ್ಲಿ ಎರಡು ಸಾಧ್ಯತೆ: 1. ಕುಡುಕರ ಸಂಖ್ಯೆ ಜಾಸ್ತಿ ಆಗಬೇಕು. 2. ಅದಾಗದಿದ್ದರೆ ಹಾಲೀ ಕುಡುಕರು ಜಾಸ್ತಿ ಕುಡಿಯಬೇಕು! ಅಬಕಾರಿ ಇಲಾಖೆಯೇ ನೀಡುವ ಅಂಕಿ-ಸಂಖ್ಯೆಗಳನ್ನು ಗಮನಿಸಿದರೆ ಈ ಎರಡೂ ಸಾಧ್ಯತೆಗಳು ಏಕಕಾಲಕ್ಕೆ ಸಂಭವಿಸುತ್ತಿವೆ. ಇಲಾಖೆಯ ಪ್ರಕಾರ ಕರ್ನಾಟಕದಲ್ಲಿ ಸದ್ಯಕ್ಕೆ ಎರಡು ಕೋಟಿಯಷ್ಟು ಜನರು ಕುಡಿತದ ಹವ್ಯಾಸ ಉಳ್ಳವರಾಗಿದ್ದಾರೆ. ಕುಡಿತದ ಹವ್ಯಾಸಕ್ಕೆ ಹೊಸದಾಗಿ ಬೀಳುವವರ ಸಂಖ್ಯೆ ಪ್ರತಿವರ್ಷ 25 ಲಕ್ಷ.
ಹಾಲೀ ಕುಡುಕರು ಜಾಸ್ತಿ ಕುಡಿಯುವುದು ಎರಡನೆಯ ಸಾಧ್ಯತೆ. ಇದೂ ಕೂಡ ಬೃಹತ್ ಪ್ರಮಾಣದಲ್ಲಿ ಸಂಭವಿಸುತ್ತಿದೆ. ಅಬಕಾರಿ ಇಲಾಖೆಯೇ ಹೇಳುವ ಪ್ರಕಾರ ಕುಡಿತದ ಹವ್ಯಾಸವುಳ್ಳವರಲ್ಲಿ ಶೇಕಡಾ 20ರಷ್ಟು ಜನರು ಚಟಕ್ಕೆ ಬೀಳುತ್ತಾರೆ. ತಿಂಗಳಿಗೊಮ್ಮೆ ಕುಡಿಯುವವನು 15 ದಿನಗಳಿಗೊಮ್ಮೆ ಮತ್ತು ಹಾಗೆಯೇ ಮುಂದುವರಿದು ವಾರಕ್ಕೊಮ್ಮೆ ಕುಡಿಯತೊಡಗುತ್ತಾನೆ. ಹೀಗೆ ಎರಡು ಕುಡಿತಗಳ ನಡುವಿನ ಅಂತರ ಕಡಿಮೆಯಾಗುತ್ತಾ ದಿನಕ್ಕೊಮ್ಮೆ, ಆಮೇಲೆ ದಿನದಲ್ಲಿ ಎರಡು ಬಾರಿ, ಆಮೇಲೆ ಮೂರು ಬಾರಿ, ಕೊನೆಯಲ್ಲಿ ಸದಾಕಾಲ ಕುಡಿತ. ಇದನ್ನೇ ಚಟ ಎನ್ನುವುದು. ಹವ್ಯಾಸಿ ಕುಡುಕರಲ್ಲಿ ಶೇಕಡಾ 20ರಷ್ಟು ಚಟಕ್ಕೆ ಬೀಳುತ್ತಾರೆಂದರೆ ಹಾಲೀ ಎರಡು ಕೋಟಿ ಕುಡುಕರಲ್ಲಿ 40 ಲಕ್ಷ ಜನ ಚಟವಾನರಿದ್ದಾರೆಂದಾಯಿತು. ಪ್ರತಿವರ್ಷ 25 ಲಕ್ಷ ಜನ ಕುಡಿತದ ಹವ್ಯಾಸಕ್ಕೆ ಹೊಸದಾಗಿ ಸೇರ್ಪಡೆಗೊಳ್ಳುತ್ತಾರೆಂದರೆ ಅವರಲ್ಲಿ ಶೇ. 20ರಷ್ಟು ಅಂದರೆ ಪ್ರತಿವರ್ಷ ಐದು ಲಕ್ಷ ಜನರು ಹೊಸದಾಗಿ ಚಟವಾನರಾಗುತ್ತಿದ್ದಾರೆಂದು ಅರ್ಥ.
ಚಟಕ್ಕೆ ಬೀಳುವುದೆಂದರೆ ಚಟ್ಟ ಹತ್ತಲು ಸಿದ್ಧತೆ ನಡೆಸಿದಂತೆ. ನಾನು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಎಂಬ ಗ್ರಾಮಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಬೆಳಕು ಸಂಸ್ಥೆಯವರು ನನಗೆ ನೀಡಿದ ಮಾಹಿತಿಯ ಪ್ರಕಾರ ಆ ಒಂದು ಗ್ರಾಮದಲ್ಲಿಯೇ 400 ಜನ ವಿಧವೆಯರಿದ್ದಾರೆ. ಅವರಾರೂ ವೃದ್ಧರಲ್ಲ ಅಥವಾ ವೃದ್ಧಾಪ್ಯದಿಂದ ತೀರಿಕೊಂಡವರ ಪತ್ನಿಯರಲ್ಲ. ಅವರೆಲ್ಲರೂ ಎಳೆಯ ವಯಸ್ಸಿನ ವಿಧವೆಯರು. ಕುಡಿತದ ಚಟದಿಂದಾಗಿ ಚಟ್ಟವೇರಿದವರ ಪತ್ನಿಯರು. ಈ ಸಂಗತಿ ಕಟ್ಟೆಮಳಲವಾಡಿ ಗ್ರಾಮಕ್ಕೆ ಮಾತ್ರ ಸೀಮಿತವಲ್ಲ. ನಾನು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ತಾಳಗುಪ್ಪಾ ಗ್ರಾಮಕ್ಕೆ ಭೇಟಿ ನೀಡಿದಾಗಲೂ ಇದೇ ರೀತಿ ಮಾಹಿತಿ ಸಿಕ್ಕಿತು. ನಾನು ಅಲ್ಲಿಯ ಹರಿಜನ ಕೇರಿಯಲ್ಲಿ ಪಾದಯಾತ್ರೆ ಮಾಡಿದೆ. ಆ ಕೇರಿಯಲ್ಲಿರುವ 64 ಮನೆಗಳ ಪೈಕಿ 32 ಮನೆಗಳಲ್ಲಿ ವಿಧವೆಯರಿದ್ದಾರೆ. ಅವರೆಲ್ಲರೂ ಕುಡಿದು ಸತ್ತವರ ಹೆಂಡತಿಯರೇ!
ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನ 23 ಗಿರಿಜನ ಹಾಡಿಗಳಲ್ಲಿ ಒಟ್ಟೂ 230 ಮಂದಿ ಈ ರೀತಿ ವಿಧವೆಯಾದವರು ಇದ್ದಾರೆಂಬ ಮಾಹಿತಿಯನ್ನು ಅಲ್ಲಿ ಕೆಲಸ ಮಾಡುವ ಸ್ವಯಂಸೇವಾ ಸಂಸ್ಥೆಗಳವರು ನನಗೆ ನೀಡಿದರು.
ಎಳೆಯ ವಯಸ್ಸಿನಲ್ಲಿ ಕುಡಿತದ ಹವ್ಯಾಸಕ್ಕೆ ಬೀಳುವವರಲ್ಲಿ ಶೇಕಡಾ 40ಕ್ಕಿಂತ ಜಾಸ್ತಿ ಜನರು ಬಹುಬೇಗ ಚಟಕ್ಕೆ ಬೀಳುತ್ತಾರೆಂದು ಗ್ಲೋಬ್ ಎಂಬ ಆರೋಗ್ಯ ಕುರಿತ ಅಂತಾರಾಷ್ಟ್ರೀಯ ನಿಯತಕಾಲಿಕ ವರದಿ ಮಾಡಿದೆ. ಹೀಗೆ ಚಟಕ್ಕೆ ಬೀಳುವವರಲ್ಲಿ ಹೆಚ್ಚು ಜನರು 40 ವರ್ಷ ದಾಟುವ ಮೊದಲೇ ಯಮನಪಟ್ಟಣ ಸೇರುತ್ತಾರೆ ಎನ್ನುವುದು ಗಮನಾರ್ಹ.
ಈ ಎಲ್ಲ ಅಂಕಿ-ಸಂಖ್ಯೆಗಳನ್ನು ವಿಶ್ಲೇಷಿಸಿದಾಗ ಕುಡಿತವು ಸಾವಿನ ದಾರಿಯಾಗಿದೆ ಎಂಬುದು ನಿಚ್ಚಳವಾಗುತ್ತದೆ. ಸಾವಿನ ದಾರಿಯನ್ನು ಪ್ರೋತ್ಸಾಹಿಸಿ ಸರ್ಕಾರ ತನ್ನ ಖಜಾನೆಯನ್ನು ಭರ್ತಿ ಮಾಡಿಕೊಳ್ಳಲು ಹೊರಟಿರುವುದು ಎಷ್ಟರಮಟ್ಟಿಗೆ ನೈತಿಕ? ಅದು ಪಾಪದ ಹಣವಲ್ಲವೇ? ಜನರನ್ನು ಸಾವಿನ ದಾರಿಗೆ ದೂಡಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಬೇಕೆನ್ನುವುದು ಯಾರ ಅಭಿವೃದ್ಧಿ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಕೆಲವು ಜನರನ್ನು ಸಾವಿನತ್ತ ತಳ್ಳಿ ಉಳಿದವರ ಅಭಿವೃದ್ಧಿ ಮಾಡುತ್ತೇವೆನ್ನುವುದು ಹಾಸ್ಯಾಸ್ಪದವಲ್ಲವೇ? ಸರ್ಕಾರ ಜನರ ಸಾವಿನ ಗೋರಿಯ ಅಡಿಪಾಯದ ಮೇಲೆ ಅಭಿವೃದ್ಧಿಯ ರಾಜಪಥ ಕಟ್ಟಲು ಹೊರಟಿದೆಯೇ?
ಹಾಗೆ ನೋಡಿದರೆ ಮದ್ಯದಿಂದ ಬರುವ ಆದಾಯಕ್ಕಿಂತ ಸರ್ಕಾರದ ಖಜಾನೆಗೆ ನಷ್ಟವೇ ಜಾಸ್ತಿ ಎಂದು ನಿಮ್ಹಾನ್ಸ್ ನಡೆಸಿದ ಅಧ್ಯಯನ ಹೇಳುತ್ತದೆ. ಸರ್ಕಾರಕ್ಕೆ 900 ಕೋಟಿ ರುಪಾಯಿಗಳ ಅಬಕಾರಿ ಆದಾಯವಿದ್ದ ಕಾಲದಲ್ಲಿ ನಿಮ್ಹಾನ್ಸ್ ಈ ಅಧ್ಯಯನವನ್ನು ನಡೆಸಿತ್ತು. ಆಗ ಸರ್ಕಾರದ ಖಜಾನೆಗೆ ನೇರವಾಗಿ ನಷ್ಟ ಸಂಭವಿಸುತ್ತಿದ್ದುದು 1,800 ಕೋಟಿ ರು.ಗಳಿಗೂ ಜಾಸ್ತಿ ಎಂದು ಈ ಅಧ್ಯಯನ ಹೇಳಿದೆ. ಅದೇ ಮಾಪನವನ್ನು ಇಂದಿನ ಸನ್ನಿವೇಶಕ್ಕೆ ಮರುಹೊಂದಿಸಿದರೆ ಇಂದು ಸರ್ಕಾರಕ್ಕೆ ಸಂಭವಿಸುತ್ತಿರಬಹುದಾದ ನಷ್ಟ 25,000 ಕೋಟಿ ರು.ಗಳನ್ನಾದರೂ ದಾಟೀತು! 12,600 ಕೋಟಿ ರುಪಾಯಿಗಳ ಆದಾಯ ಗಳಿಸಲು ಹೋಗಿ ಅದರ ಎರಡುಪಟ್ಟು ನಷ್ಟ ಅನುಭವಿಸುವ ನಿರ್ಧಾರಕ್ಕೆ ಏನನ್ನಬೇಕು?
ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರಕ್ಕೆ ಹಣ ಬೇಕು ಎಂಬುದು ನಿಜ. ಆದರೆ ಅದು ಬರುವ ಮಾರ್ಗವೂ ನ್ಯಾಯವಾಗಿರಬೇಕು, ಶುದ್ಧವಾಗಿರಬೇಕು. ಚಿತ್ರದುರ್ಗದ ಮುರುಘಾ ಶರಣರು ಒಮ್ಮೆ ಅಂದಿನ ಮುಖ್ಯಮಂತ್ರಿಗಳಿಗೆ ಹೇಳಿದ ಮಾತನ್ನು ನಾನಿಲ್ಲಿ ಉಲ್ಲೇಖಿಸಬೇಕು. "ಗುಜರಾತಿನಲ್ಲಿ ಮದ್ಯಪಾನಕ್ಕೆ ನಿಷೇಧವಿದೆ. ಅಲ್ಲಿ ಅಬಕಾರಿ ಆದಾಯದ ಹೆಸರಿನಲ್ಲಿ ಸರಕಾರದ ಖಜಾನೆಗೆ ಒಂದು ಪೈಸೆ ಕೂಡ ಜಮಾ ಆಗುತ್ತಿಲ್ಲ. ಆ ರಾಜ್ಯ ಅಬಕಾರಿ ಆದಾಯವಿಲ್ಲದೇ ಇಡೀ ದೇಶದಲ್ಲಿಯೇ ಆರ್ಥಿಕವಾಗಿ ಮುಂಚೂಣಿಯಲ್ಲಿದೆ. ಅಭಿವೃದ್ಧಿ ವಿಷಯದಲ್ಲಂತೂ ನಂಬರ್ 1 ರಾಜ್ಯ ಎಂಬ ಹೆಸರು ಪಡೆದಿದೆ. ಗುಜರಾತ್‌ನಲ್ಲಿ ಸಾಧ್ಯವಾಗಿದ್ದು ಕರ್ನಾಟಕದಲ್ಲೇಕೆ ಸಾಧ್ಯವಿಲ್ಲ" ಎಂದು ಅವರು ಪ್ರಶ್ನಿಸಿದ್ದರು.
ಸ್ವಾತಂತ್ರ್ಯ ಹೋರಾಟದ ಮಹಾನೇತಾರ ಗಾಂಧೀಜಿ ಹೇಳಿದ ಒಂದು ಮಾತಿನೊಂದಿಗೆ ಈ ಲೇಖನವನ್ನು ಕೊನೆಗೊಳಿಸುತ್ತೇನೆ. "ನಾನೇನಾದರೂ ಈ ದೇಶದ ಪ್ರಧಾನಮಂತ್ರಿಯಾದರೆ ನಾನು ಮೊಟ್ಟ ಮೊದಲಿಗೆ ಸಹಿ ಹಾಕುವ ಕಡತವೆಂದರೆ ಈ ದೇಶದಲ್ಲಿ ಮದ್ಯಪಾನವನ್ನು ನಿಷೇಧಿಸುವ ಕುರಿತ ಆದೇಶದ್ದು. ನಮ್ಮ ಸರ್ಕಾರೀ ಕಚೇರಿಗಳಲ್ಲಿ, ನ್ಯಾಯಾಲಯಗಳಲ್ಲಿ ಹಾಗೂ ಪ್ರತಿಯೊಂದು ಸಾರ್ವಜನಿಕ ಸ್ಥಳದಲ್ಲಿ ಗಾಂಧೀಜಿ ಚಿತ್ರ ಗೌರವಾನ್ವಿತ ಸ್ಥಾನದಲ್ಲಿ ತೂಗುಹಾಕಲ್ಪಡುತ್ತದೆ. ಆದರೆ ಆ ಚಿತ್ರದ ಕೆಳಗಡೆಯೇ ಕೂತುಕೊಂಡ ಆಡಳಿತಗಾರರು ಮದ್ಯವನ್ನು ಆದಾಯಮೂಲವೆಂದು ಪರಿಗಣಿಸುವ ನಿರ್ಧಾರ ಕೈಗೊಳ್ಳುತ್ತಾರೆ ಮದ್ಯಪಾನಕ್ಕೆ ಪ್ರೋತ್ಸಾಹ ನೀಡುವ ಕ್ರಮಗಳನ್ನು ಕೈಗೊಳ್ಳುತ್ತಾರೆ".


-ಸಚ್ಚಿದಾನಂದ ಹೆಗಡೆ
ಸಂಪಾದಕರು
'ಧ್ಯೇಯನಿಷ್ಠ ಪತ್ರಕರ್ತ'  ಹಾಗೂ ಮಾಜಿ ಅಧ್ಯಕ್ಷರು,
ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement