ಅತಿಥಿ ಉಪನ್ಯಾಸಕರ ಅತಂತ್ರ ಸ್ಥಿತಿಗೆ ಎಂದು ಕೊನೆ?
ಅಧಿಕಾರದ ಚುಕ್ಕಾಣಿ ಹಿಡಿದ ಪಕ್ಷಗಳೆಲ್ಲವೂ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅತಿಥಿ ಉಪನ್ಯಾಸಕರ ಅತಂತ್ರ ಬದುಕಿಗೆ ಶಾಶ್ವತ ನೆಲೆ ಕಲ್ಪಿಸಲಾಗುವುದು ಎಂದು ಭರವಸೆಗಳ ಸುರಿಮಳೆಗೈದವೇ ಹೊರತು ಬಗೆಹರಿಸುವ ಪ್ರಾಮಾಣಿಕ ಮನಸ್ಸು ಮಾಡಲಿಲ್ಲ. ತಿಂಗಳಿಗೊಮ್ಮೆ ಪಗಾರ ಸಿಗುವುದಿಲ್ಲ. ವರ್ಷಕ್ಕೊಮ್ಮೆ ಸಿಗುವ ಅಲ್ಪ ಪ್ರಮಾಣದ ವೇತನವನ್ನು ಹೋರಾಟ ಮಾಡಿ, ಸಿಕ್ಕ ಸಚಿವರು, ಅಧಿಕಾರಿಗಳಿಗೆಲ್ಲಾ ಮನವಿ ಸಲ್ಲಿಸಿ ಪಡೆಯಬೇಕಾದುದು ರಾಜ್ಯಾದ್ಯಂತ ಇರುವ 15 ಸಾವಿರ ಅತಿಥಿ ಉಪನ್ಯಾಸಕರ ಸ್ಥಿತಿಯಾಗಿದೆ.
ಮತ್ತೊಂದು ವಿಷಾದನೀಯ ಸಂಗತಿಯೆಂದರೆ ಮಾಸಿಕ 60 ರಿಂದ 75 ಸಾವಿರ ಸಂಬಳ ಪಡೆಯುವ ಕಾಯಂ ಅಧ್ಯಾಪಕರು ಮಾಡುವಷ್ಟೇ ಕೆಲಸವನ್ನು ಅತಿಥಿ ಉಪನ್ಯಾಸಕರು ಮಾಡುತ್ತಾರೆ. ಆದರೆ ಉಪನ್ಯಾಸಕರ ವೇತನ ಕೇವಲ 8 ಸಾವಿರ ರು. ಗಳು ಮಾತ್ರ. 2003 ರಿಂದ ಅತಿಥಿ ಎಂಬ ಹೆಸರಿನಲ್ಲಿ ಶೋಷಣೆ ಮಾಡಲಾಗುತ್ತಿದೆ ಎಂದರೆ ತಪ್ಪಾಗಲಾರದು.
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಾನಾ ವಿಷಯಗಳ ಬಗ್ಗೆ ಸಮರ್ಥವಾಗಿಯೇ ಅತಿಥಿ ಉಪನ್ಯಾಸಕರು ಬೋಧನಾ ಕಾರ್ಯ ನಿರ್ವಹಿಸುತ್ತಿದ್ದಾರೆ. ವಾರಕ್ಕೆ ಎಂಟು ಗಂಟೆಗಳ ಬೋಧನಾ ಸೇವೆಯಂತೆ, ಮಾಸಿಕ 8000 ರು. ಸಂಬಳ ನೀಡಲಾಗುತ್ತಿದ್ದು, ಇದು ಸಹ ವರ್ಷವೊಂದರಲ್ಲಿ ಯಾವಾಗಲೋ ಒಮ್ಮೆ ಕೊಡುವ ಕೆಟ್ಟ ವ್ಯವಸ್ಥೆಯಿದೆ. ಅತಿಥಿ ಉಪನ್ಯಾಸಕರಿಲ್ಲದೇ ಕಾಲೇಜುಗಳನ್ನು ಮುಚ್ಚುವ ಪರಿಸ್ಥಿತಿಯೂ ಹಲವೆಡೆ ಉಂಟಾಗಿದೆ.
ಅತಿಥಿ ಉಪನ್ಯಾಸಕರು ಸ್ನಾತಕೋತ್ತರ ಪದವೀಧರರು. ಹಲವರು ಪಿಎಚ್.ಡಿ., ಎಂ.ಫಿಲ್., ಮುಂತಾದ ಸಂಶೋಧನಾ ಪದವಿಗಳನ್ನು ಪಡೆದವರು. ಮತ್ತು ಹಲವರು ಸಂಶೋಧನಾ ಕಾರ್ಯದಲ್ಲಿ ನಿರತರಾಗಿರುವರು. ಇಂದೋ, ನಾಳೆಯೋ ಸರ್ಕಾರ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತಮ್ಮನ್ನು ಕಾಯಂ ಮಾಡುವ ಮೂಲಕ ಬದುಕನ್ನು ಕಟ್ಟಿ ಕೊಡುತ್ತದೆ ಎಂಬ ಆಸೆಯಿಂದ ದುಡಿಯುತ್ತಿದ್ದಾರೆ.
ದೂರದ ಕಾಲೇಜುಗಳಲ್ಲಿ ಪಾಠ ಮಾಡಲು ಪ್ರತಿದಿನ ಕನಿಷ್ಠ 150 ರಿಂದ 200 ರು.ಗಳನ್ನು ವೆಚ್ಚ ಮಾಡಬೇಕಾಗುತ್ತದೆ. ಪ್ರಯಾಣವೆಚ್ಚವಾಗಿ ಕನಿಷ್ಠ 100 ರು., ಉಪಾಹಾರಕ್ಕಾಗಿ ಖರ್ಚು ಮಾಡಬೇಕಿದೆ. ಇಷ್ಟಲ್ಲದೇ ಈ ಹಣದಲ್ಲೇ ತಮ್ಮ ನಿತ್ಯೋಪಯೋಗಿ ಖರ್ಚುಗಳನ್ನು ನೋಡಿಕೊಳ್ಳಬೇಕು. ಮಾತ್ರವಲ್ಲ, ಇದರಲ್ಲೇ ಬೋಧನೋಪಕರಣ, ಪಾಠೋಪಕರಣ ಹಾಗೂ ಸಂಶೋಧನೆಗಾಗಿ ವ್ಯಯಿಸಬೇಕಿದೆ.
ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾದ ಸ್ವಯಂ ಉದ್ಯೋಗಿಗಳು, ಚಿಕ್ಕಪುಟ್ಟ ಕುಶಲಕರ್ಮಿಗಳು, ರಿಪೇರಿ ಮುಂತಾದ ತಂತ್ರವಿದ್ಯೆಯುಳ್ಳವರು, ದೈಹಿಕ ಶ್ರಮಜೀವಿಗಳು ಕೂಡ ತಿಂಗಳಿಗೆ ಹತ್ತು-ಹನ್ನೆರಡು ಸಾವಿರಕ್ಕಿಂತ ಕಡಮೆಯಿಲ್ಲದೇ ಸಂಪಾದಿಸುತ್ತಿರುವ ಈ ಕಾಲದಲ್ಲಿ ಸರ್ಕಾರವು ಅತಿಥಿ ಉಪನ್ಯಾಸಕರಿಗೆ ಕೊಡುತ್ತಿರುವ ಹಣ ಏನೇನೂ ಸಾಲದು. ಖಾಯಂ ಉಪನ್ಯಾಸಕರಿಗೆ ಯುಜಿಸಿ ವೇತನವನ್ನು ಪರಿಷ್ಕರಿಸಿ ಕೊಟ್ಟ ತರುವಾಯ ಅತಿಥಿ ಉಪನ್ಯಾಸಕರ ವೇತನವನ್ನೂ ಪರಿಷ್ಕರಿಸಬೇಕಿತ್ತು.
ಡಿಸೇಲ್ , ಪೆಟ್ರೋಲ್ ಮಾತ್ರವೇ ಅಲ್ಲ. ಅಗತ್ಯ ವಸ್ತುಗಳ ಬೆಲೆಗಳು ಏರುತ್ತಲೇ ಇವೆ. ಮಧ್ಯಮವರ್ಗದವರು ಸಾಲ ಮಾಡಿಯಾದರೂ ಬದುಕು ನಡೆಸಬೇಕಾದ ದುರ್ಗಮ ಸ್ಥಿತಿಯಿದೆ. ಅದರಲ್ಲೂ ಸ್ನಾತಕಪದವಿ ಪಡೆದ ನಿರುದ್ಯೋಗಿ ಯುವಜನತೆ ತಮಗೆ ಸರಿ ಹೊಂದಬಹುದಾದ ಏನೆಲ್ಲ ವೃತ್ತಿಗಳಿಗೆ ಅರ್ಜಿ ಸಲ್ಲಿಸಲು ಆಸೆ-ಆಕಾಂಕ್ಷೆಗಳಿಂದ ಮುಂದಾಗುತ್ತಾರೆ. ಪ್ರತಿಯೊಂದಕ್ಕೂ ಪೋಷಕರನ್ನೇ ಅವಲಂಬಿಸಲು ಸ್ವಾಭಿಮಾನ ಮತ್ತು ಆತ್ಮಗೌರವಗಳು ಅನುಮತಿ ಕೊಡವು. ಪ್ರಯಾಣಕ್ಕೆ, ನಿತ್ಯದ ವೆಚ್ಚಕ್ಕೆ, ಬೋಧನಾ ಸಾಮಗ್ರಿಗಳಿಗೆ, ಉದ್ಯೋಗಕ್ಕೆ ಅರ್ಜಿ ಹಾಕಲು, ಉನ್ನತ ವ್ಯಾಸಂಗ ಅಥವಾ ಸಂಶೋಧನಾ ಚಟುವಟಿಕೆಗಳಿಗೆ ಅಲ್ಪ ಸಂಬಳವನ್ನೇ ಅವಲಂಬಿಸಬೇಕಿದೆ.
ವರ್ಷಕ್ಕೆ ಒಂದೇ ಬಾರಿ ಸಂಬಳ, ಅದೂ ಅನಿಶ್ಚಿತ! ಕಾಯಂ ಅಧ್ಯಾಪಕರಷ್ಟೇ ಕೆಲಸದ ಹೊರೆ. ಅವರದು 16 ಗಂಟೆಗಳ ಬೋಧನೆ, ಇವರದು 8 ಗಂಟೆಗಳು. ಈ ವ್ಯತ್ಯಾಸವನ್ನು ಬಿಟ್ಟಂರೆ ಉಳಿದಂತೆ, ಪರೀಕ್ಷಾ ಕಾರ್ಯ, ಮೌಲ್ಯಮಾಪನ, ವಿಚಾರ ಸಂಕಿರಣ ಮತ್ತಿತರ ಕಾಲೇಜು ಕೆಲಸ ಕಾರ್ಯಗಳಿಗೆ ನೆರವು. ವಿವಿಧ ಸಮಿತಿಗಳ ಪದಾಧಿಕಾರಿಗಳಾಗಿ ಶಕ್ತ್ಯಾನುಸಾರ ಸಹಕಾರ ನೀಡಲಾಗುತ್ತದೆ. ಆದರೆ ವರ್ಷದಲ್ಲಿ ಕೇವಲ 8 ತಿಂಗಳು ಮಾತ್ರ ಸಂಬಳ, ಉಳಿದಂತೆ ನಿರುದ್ಯೋಗ!
ಸರ್ಕಾರಗಳು ತಮ್ಮಿಂದಾದ ಈ ಸಮಸ್ಯೆಯನ್ನು ಪರಿಹರಿಸುವ ಬದಲು ಪದವನ್ನು ಬದಲಿಸಿ, ತಂತಮ್ಮ ತಾಂತ್ರಿಕ ಕೌಶಲ್ಯವನ್ನು ಮೆರೆದವು! ಅಂದರೆ, ಅರೆಕಾಲಿಕ ಉಪನ್ಯಾಸಕರು ನ್ಯಾಯಾಲಯದ ಮೊರೆ ಹೋಗಿ ವಿಜಯಿಗಳಾಗಿ ಕಾಯಂ ಹೊಂದುವಲ್ಲಿ ಸಫಲರಾದರು. ಇದೇ ಪದವಿದ್ದರೆ ಇನ್ನು ಮುಂದೆ ಬರುವವರು ಕೂಡ ಅವರ ಹಾದಿಯಲ್ಲೇ ಹೋರಾಟ ಮಾಡಬಹುದೆಂಬ ದಿಗಿಲಿನಿಂದ 2003 ರಲ್ಲಿ ಅತಿಥಿ ಎಂಬ ಪದವನ್ನು ಟಂಕಿಸಲಾಯಿತು.
1985 ರಿಂದ 1994 ರ ವರೆಗೆ 600 ರು.ಗಳಿಗೆ, 1994 ರಿಂದ 2004 ರ ವರೆಗೆ 1200 ರು.ಗಳಿಗೆ, 2005 ರಲ್ಲಿ 2000 ರು.ಗಳಿಗೆ ವೇತನವನ್ನು ಏರಿಸಿತು. 2006 ರಲ್ಲಿ ರಾಜ್ಯದ ಆಗಿನ ಮುಖ್ಯಮಂತ್ರಿಗಳಾಗಿದ್ದ ಎಚ್. ಡಿ. ಕುಮಾರಸ್ವಾಮಿಯವರು 2000 ದಿಂದ 5000 ರು.ಗಳಿಗೆ ವೇತನ ಏರಿಕೆ ಮಾಡಿದರು. ಆ ತರುವಾಯ 8000 ರು. ಆಯಿತು. ಅಲ್ಲಿಂದ ಇಲ್ಲಿಯವರೆಗೆ ವೇತನ ಪರಿಷ್ಕರಣೆಯಾಗಿಲ್ಲ. ಯಾರು ಮುಖ್ಯಮಂತ್ರಿಗಳಾಗಿ ಬಂದರೂ ಇಕ್ಕಟ್ಟುಗಳನ್ನು ಬೇರುಮಟ್ಟದಿಂದ ಪರಿಹರಿಸಲು ಮನಸ್ಸು ಮಾಡಿಲ್ಲದಿರುವುದು ವಿಷಾದನೀಯ.
ಕಾಲಕಾಲಕ್ಕೆ ಸರ್ಕಾರವು ಉದ್ಯೋಗ ನೇಮಕಾತಿ ಮಾಡಿಕೊಳ್ಳದ ಕಾರಣ, ಈ ಸಮಸ್ಯೆಯು ಹುಟ್ಟುತ್ತದೆ. ವರ್ಷಗಳು ಹೆಚ್ಚಾದಂತೆ, ಈಗಾಗಲೇ ಸ್ನಾತಕೋತ್ತರ ಪದವಿ ಪಡೆದವರು ಸಹಜವಾಗಿ ತಮ್ಮ ನಂತರ ಪದವಿ ಪಡೆದವರ ಮುಂದೆ, ಎಲ್ಲ ರೀತಿಯಲ್ಲೂ ಕೀಳರಿಮೆ ಅನುಭವಿಸಬೇಕಾಗಿ ಬರುತ್ತದೆ. ಎಷ್ಟೋ ಕಡೆಗಳಲ್ಲಿ ತಮ್ಮಿಂದ ಪಾಠ ಕೇಳಿದ ವಿದ್ಯಾರ್ಥಿಗಳ ಜೊತೆಯಲ್ಲೇ ಅತಿಥಿ ಉಪನ್ಯಾಸಕರು ಸ್ಪರ್ಧಿಗಳಾಗಿ ಸಂದರ್ಶನ ಎದುರಿಸಬೇಕಾದ ವಿಪರ್ಯಾಸ ಏರ್ಪಟ್ಟಿದೆ.
ವೇತನವನ್ನು ಪರಿಷ್ಕರಿಸಿ, 25,000 ರು.ಗಳಿಗೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಮೂಲವಿಜ್ಞಾನ ಕೋರ್ಸುಗಳು, ವಾಣಿಜ್ಯ-ವ್ಯವಹಾರ ನಿರ್ವಹಣಾ ಕೋರ್ಸುಗಳು ಮತ್ತು ಜ್ಞಾನಮೂಲ ಶಿಸ್ತುಗಳಾದ ಭಾಷೆ, ಮಾನವಿಕ ಹಾಗೂ ಕಲೆ-ತಾತ್ತ್ವಿಕ ಕೋರ್ಸುಗಳನ್ನು ಬೇರುಮಟ್ಟದಿಂದ ಪರಿಷ್ಕರಿಸಿ, ಬಲಗೊಳಿಸಿ, ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಈ ಕೋರ್ಸಿಗೆ ಸೇರಲು ನಾನಾ ವಿಧದ ಪ್ರಯತ್ನಗಳನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಗಂಭೀರವಾಗಿ ನಡೆಸುತ್ತಿರುವ ಈ ಹೊತ್ತಿನಲ್ಲೇ ರಾಜ್ಯ ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ಬೋಧಕರ ಬಗೆಗೆ ಇಂಥ ದಿವ್ಯನಿರ್ಲಕ್ಷ್ಯವನ್ನೂ ಬೇಜವಾಬ್ದಾರಿಯನ್ನೂ ಹೊಂದಿರುವುದು ಸರಿಯಾದ ಧೋರಣೆಯಾಗದು.
ಯುಜಿಸಿಯಾಗಲಿ, ನ್ಯಾಕ್ ಮಾನ್ಯತೆ ನೀಡುವಾಗಲಾಗಲಿ ಕಾಲೇಜಿನ ಬೋಧಕ ವೃಂದವನ್ನು ಕಾಯಂ ಮತ್ತು ಅರೆಕಾಲಿಕ ಎಂದೋ ಒಡೆದು ನೋಡುವುದಿಲ್ಲ. ಪರೀಕ್ಷಾ ಕಾರ್ಯಕ್ಕಾಗಲಿ, ಮೌಲ್ಯಮಾಪನಕ್ಕಾಗಲಿ ಇಂಥ ವ್ಯತ್ಯಾಸ ಮಾಡುವುದಿಲ್ಲ. 3 ವರ್ಷಗಳ ಬೋಧನಾ ಸೇವೆ ಸಲ್ಲಿಸಿದ್ದರೆ ಎಲ್ಲರಿಗೂ ಅವಕಾಶ ಲಭಿಸುವುದು. ಇತ್ತ ಸರ್ಕಾರ ಗಮನಹರಿಸಬೇಕು. ಅತಿಥಿ ಉಪನ್ಯಾಸಕರಿಲ್ಲದಿದ್ದರೆ ರಾಜ್ಯದ ಕಾಲೇಜು ಶಿಕ್ಷಣ ಇಲಾಖೆಯನ್ನು ಅಕ್ಷರಶಃ ಮುಚ್ಚಬೇಕಾಗುತ್ತದೆ ಇದು ಆಶ್ಚರ್ಯವಾದರೂ ದಿಟ. ಉತ್ತರ ಕರ್ನಾಟಕದ ಕಡೆ ಇರುವ ಕಾಲೇಜುಗಳಲ್ಲಿ ಇಂಥ ಅತಿಥಿ ಉಪನ್ಯಾಸಕರೇ ವಿಭಾಗದ ಮುಖ್ಯಸ್ಥರಾಗಿದ್ದಾರೆ.
ಗುತ್ತಿಗೆ ಆಧಾರದ ಮೇಲೆ ವಯೋವುತಿ ಗರಿಷ್ಠ ಮುಟ್ಟಿದವರನ್ನೋ ಅನುಭವಿಗಳನ್ನೋ ಆಯ್ಕೆ ಮಾಡಬೇಕು. ಯುಜಿಸಿಯು ಶಿಫಾರಸು ಮಾಡಿದಂತೆ ರೂ. 25,000 ಕ್ಕೆ ಕಡಿಮೆ ಇಲ್ಲದಂತೆ ವೇತನ ನಿಗದಿ ಮಾಡಬೇಕು. ಕೆಲಸದ ಭದ್ರತೆ ಒದಗಿಸಬೇಕು. ಇದರಿಂದ ಶೈಕ್ಷಣಿಕ ಗುಣಮಟ್ಟ ತಂತಾನೇ ವೃದ್ಧಿಸುವುದು. ತಲೆಯ ಮೇಲೆ ತೂಗುಗತ್ತಿ ಓಡಾಡುತ್ತಿರುವಾಗ ಯಾವ ಅಧ್ಯಾಪಕರು ಕೆಲಸದಲ್ಲಿ ತೊಡಗಲು ಸಾಧ್ಯ? ಬೇರೆಲ್ಲ ಇಲಾಖೆಗಳಲ್ಲಿ ಇಂಥ ಸ್ಥಿತಿ ನಿರ್ಮಾಣವಾಗಿಲ್ಲ. ಯಾಕೆಂದರೆ ದಿನಗೂಲಿ ನೌಕರರು ಮತ್ತು ಅಂಶಕಾಲಿಕ ನೌಕರರು ಹಂತಹಂತವಾಗಿ ಖಾಯಮಾತಿ ಹೊಂದುತ್ತಾರೆ. ಈ ಇಲಾಖೆಯಲ್ಲೇಕೆ ಇಂಥ ತಾರತಮ್ಯ?
ಹಾಗಾಗಿ, ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಹೊಸ ಸರ್ಕಾರ ನೀಡಿ ಉನ್ನತ ಶಿಕ್ಷಣದ ಆಶೋತ್ತರಗಳು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕಾಗಿದೆ.
- ದಯಾಶಂಕರ ಮೈಲಿ, ಕನ್ನಡಪ್ರಭ