ವೀಳ್ಯದೆಲೆಯಿಂದ ಆಯಿತು ಕಂದಾಯ ವಸೂಲು!
"ಗಧೆ ಬಿ ಕರ್ತೆಹೈ ಸುಬೇದಾರಿ" (ಕತ್ತೇನೂ ಮಾಡುತ್ತೆ ಸುಬೇದಾರ್ ಕೆಲಸ) ಅಂತ ಅನುಭವಿ ಉಪವಿಭಾಗಾಧಿಕಾರಿ ನಂಜುಂಡರಾವ್, ನಾನು ಪ್ರೊಬೇಷನರಿ ತಹಶೀಲ್ದಾರನಾಗಿ ಮೈಸೂರಿನಲ್ಲಿ ತರಬೇತಿ ಪಡೆಯುತ್ತಿದ್ದಾಗ ಹೇಳಿದ್ದು ನೆನಪಾಗುತ್ತದೆ. ಒಬ್ಬ ತಹಶೀಲ್ದಾರ ದಕ್ಷ ಹಾಗೂ ಯೋಗ್ಯನೆನಿಸಿಕೊಳ್ಳಬೇಕೆಂದರೆ ಕಲೆಕ್ಷನ್, ಎಲೆಕ್ಷನ್, ರಿಸೆಪ್ಷನ್ ಮಾಡುವುದರಲ್ಲಿ ಆತನದ್ದು ಎತ್ತಿದ ಕೈ ಆಗಿರಬೇಕು ಇಲ್ಲದಿದ್ದರೆ ನಾಲಾಯಕ್ಕು ಅಂತ ಅವರು ಹೇಳಿದ್ದರು. 1978ರಲ್ಲಿ ಆಗಿನ್ನು ನನಗೆ 24 ವಯಸ್ಸು. ಟಿ.ನರಸಿಪುರ ತಾಲೂಕನ್ನು ಇಬ್ಭಾಗ ಮಾಡಿ ಬನ್ನೂರು ಮತ್ತು ಸೋಸಲೆ ಹೋಬಳಿಗೆ ಪ್ರೊಬೇಷನರಿ ತಹಶೀಲ್ದಾರ್ ಆಗಿ ಸ್ವತಂತ್ರ ಪ್ರಭಾರ ನೀಡಿದ್ದರು. ಕೇಸು ನಡೆಸುವಾಗ ಮಾತ್ರ ಕೇಂದ್ರಸ್ಥಾನ ಟಿ.ನರಸಿಪುರದಲ್ಲಿ ಇರುತ್ತಿದ್ದೆ. ಉಳಿದ ದಿನ ಹಳ್ಳಿಗಳಿಗೆ ಹೋಗಿ ಅಲ್ಲೇ ಬೀಡು ಬಿಟ್ಟು ಕೆಲಸದಲ್ಲಿ ಮಗ್ನನಾಗುತ್ತಿದ್ದೆ. ಕೆಲವೇ ದಿನಗಳಲ್ಲಿ ಹಳ್ಳಿ ಮತ್ತು ಜನಸಂಪರ್ಕ ನಿಕಟವಾಯ್ತು. ಊರಿಂದೂರಿಗೆ ಬಸ್ಸಿನಲ್ಲಿ ಇಲ್ಲವೆ ರೆವೆನ್ಯೂ ಇನ್ಸ್ಪೆಕ್ಟರ್ ಜಾವಾ ಮೋಟರ್ ಸೈಕಲ್ನಲ್ಲಿ, ಯಾವುದು ಇಲ್ಲವೆಂದರೆ ಕಾಲು ನಡಿಗೆಯಲ್ಲೇ ಹೋಗುತ್ತಿದ್ದೆ. ಸರ್ಕಾರಕ್ಕೆ ಬರಬೇಕಾದ ಭೂ-ಜಲಕಂದಾಯ ಮತ್ತು ಇತರೇ ಬಾಕಿ ವಸೂಲಿ ಕೆಲಸ ತಹಶೀಲ್ದಾರರ ಪ್ರಮುಖ ಕೆಲಸ.
ಎಸ್. ಆರ್. ವಿಜಯ್ ಎಂಬ ಜಿಲ್ಲಾಧಿಕಾರಿಯನ್ನು ಕಂಡರೆ ಜಿಲ್ಲೆಯ ಎಲ್ಲಾ ಇಲಾಖೆಯ ನೌಕರರು ನಡುಗುತ್ತಿದ್ದರು. ಇಂಥಹವರ ಕೈಕೆಳಗೆ ಕೆಲಸ ಮಾಡುವುದು ಕಷ್ಟವೆಂದು ಹೆದರಿ ವರ್ಗಾವಣೆ ಮಾಡಿಸಿಕೊಂಡವರಿದ್ದರು. ಕೆಲಸ ಮಾಡದಿದ್ರೆ ಸಸ್ಪೆನ್ಷನ್/ ಡಿಸ್ಮಿಸ್ ಗ್ಯಾರಂಟಿ. ಪತ್ರಿ ತಿಂಗಳ 3ನೇ ತಾರೀಖಿನ ಕಂದಾಯ ಇಲಾಖಾಧಿಕಾರಿಗಳ ಸಭೆ ಎಂದರೆ ಎಲ್ಲರಿಗೂ ಭಯ. ಹೀಗೊಂದು ದಿನ ನನ್ನ ಕಂದಾಯ ವಸೂಲಿ ಪರಿಶೀಲನಾ ಸರದಿ ಬಂತು. ಎಷ್ಟು ನೋಟಿಸ್ ಕೊಟ್ಟಿದ್ದೀರಾ, ಎಷ್ಟು ಕ್ರಾಪ್ ಅಟಾಚ್ಮೆಂಟ್ ಮಾಡಿದ್ದೀರಾ, ಎಷ್ಟು ಆಸ್ತಿ ಹರಾಜು ಮಾಡಿದ್ದೀರಾ ಎಂದವರು ಗದರಿಸಿ ಕೇಳಿದಾಗ, ಎಲ್ಲಕ್ಕೂ 'ಇಲ್ಲ ಅದ್ಯಾವುದೂ ಮಾಡಿಲ್ಲ' ಅಂದೆ. ಗರಂ ಆದ ಜಿಲ್ಲಾಧಿಕಾರಿ 'ವಾಟ್, ಆರ್ ಯು ಸೀರಿಯಸ್?' ಅಂತ ಧ್ವನಿ ಮೇಲೇರಿಸಿದರು.What is your collection? ಅಂದಕೂಡಲೆ 8 ಲಕ್ಷ ಅಂದೆ. ಅವರು ಆಶ್ಚರ್ಯದಿಂದ ತಟ್ಟನೆ , ಗುರಿಗಿಂತಲೂ ಜಾಸ್ತಿ ಕಲೆಕ್ಟ್ ಮಾಡಿರಿ ಎಂದು ಪ್ರಶ್ನಿಸಿದರು. ನೋಟಿಸು ಕೊಡುವುದಾಗಲಿ ಅಥವಾ ಅವರ ಆಸ್ತಿ, ಬೆಳೆ ಹರಾಜು ಮಾಡುವುದಾಗಲಿ ಮಾಡದೆ 'ವೀಳ್ಯದೆಲೆ ಅಡಿಕೆ' ನೀಡಿದೆ ಅಂದೆ. ಇದನ್ನೆಲ್ಲಾ ಜಿಲ್ಲೆಯ ಉಳಿದ ಅಧಿಕಾರಿಗಳು ಗಂಭೀರವಾಗಿ ಆಲಿಸುತ್ತಿದ್ದರು. ಬೇರೆ ಯಾವ ತಾಲೂಕಿನಲ್ಲೂ ಆ ಪ್ರಮಾಣದ ಸಾಧನೆ ಆಗಿರಲಿಲ್ಲ. ಕೆಲ ತಿಂಗಳ ನಂತರ ರೆವೆನ್ಯೂ ಕಮಿಷನರ್ ಮತ್ತು ಡಿವಿಜನಲ್ ಕಮೀಷನರು ನನ್ನ ಪರೀಕ್ಷಾರ್ಥಿ ಘೋಷಣೆ ಮಾಡುವ ಮುನ್ನ ಸಂದರ್ಶನ ಮಾಡುವ ಸಂದರ್ಭದಲ್ಲಿ, 'ಈ ನಿಮ್ಮ ಸಾಧನೆ ನೋಡಿದರೆ ಎಲೆ ಅಡಿಕೆ ಏಕೆ, ತೆಂಗಿನಕಾಯಿಯನ್ನು ಕೊಟ್ಟರೆ ಇನ್ನೂ ಹೆಚ್ಚು ಕಂದಾಯ ವಸೂಲಿ ಮಾಡಬಹುದು ಎನಿಸುತ್ತಿದೆ' ಎಂದು ಪ್ರಶಂಸೆ ಮಾಡುತ್ತಾ ನಕ್ಕರು.
ನನಗೆ ಈ ಸಾಧನೆ ಹೇಗೆ ಸಾಧ್ಯವಾಯ್ತು ಅಂತ ಹೇಳುವುದು ಮುಖ್ಯ. ಎಂದಿನಂತೆ ವಸೂಲಿಗೆ ಮೆಣಸಿಕ್ಯಾತನಹಳ್ಳಿ ರೆವೆನ್ಯೂ ಇನ್ಸಪೆಕ್ಟರ್ಗಳು ಮತ್ತು ಎಲ್ಲಾ ವಿಲೇಜ್ ಅಕೌಂಟೆಂಟ್ ಅವರನ್ನೊಡಗೂಡಿ ಹೋದೆವು. ಬೋರೆ ಗೌಡ್ರ ಮನೆ ಪಡಸಾಲೆ ಮುಂದೆ ಹಾಕಿದ ಚಾಪೆಯ ಮೇಲೆ ಚಕ್ಕಳಮಕ್ಕಳ ಹಾಕಿ ಕುಳಿತುಕೊಂಡಿದ್ದೆ. ಗ್ರಾಮ ಸಹಾಯಕ ಬಾಕಿದಾರರನ್ನು ಕರೆತಂದರು. ರೈತರಿಗೆ ಕಂದಾಯ ಕಟ್ಟಿ ಎಂದು ಒಳ್ಳೆಯ ಮಾತಿನಲ್ಲಿ ತಿಳಿಹೇಳಲಾಯ್ತು. 'ಈಗ ದುಡ್ಡು ಇಲ್ಲ ಸ್ವಾಮಿ, ಜೀವನ ಮಾಡೋದೆ ಕಷ್ಟ ಆಗಿದೆ, ಬೆಳೆ ಸರಿಯಾಗಿ ಆಗ್ಲಿಲ್ಲ' ಅಂದರು. ಸ್ಥಳದಲ್ಲಿ ಅಯ್ಯಂಗಾರ್ ಕಡೆಯಿಂದ ರಸೀತಿ ಬರೆಸಿ ನನ್ನಲ್ಲಿದ್ದ ಬ್ಯಾಗಿನಿಂದ ವೀಳ್ಯದೆಲೆ ಮತ್ತು ಅಡಿಕೆಯನ್ನು ಜೋಡಿಸಿ 'ಏನಾದ್ರೂ ಮಾಡಿ ಕಟ್ಟಿ, ನಿಮ್ಮ ಮೇಲಿನ ಭಾರ ಕಡಿಮೆ ಆಗುತ್ತೆ' ಎಂದು ಹೇಳಿ ರೈತರ ಕೈಗಿಟ್ಟೆ. ರೈತರು 'ಸ್ವಾಮಿ ನೀವು ದೊಡ್ಡವ್ರು ನಮಗೆ ವೀಳ್ಯ ಕೊಡೋದು ಅಂದ್ರೆ ಏನು? ನಿಮ್ಮಂಥವರ ಕೈಯಿಂದ ವೀಳ್ಯ ಈಸ್ಕೋಳೊ ಪುಣ್ಯ ಮಾಡಿದ್ವಿ, ಈಗ ಅಷ್ಟು ದುಡ್ಡಿಲ್ಲ ನಾಳೆ ಕೊಡ್ತೀವಿ' ಎಂದು ನಮಸ್ಕಾರಮಾಡಿ ಧನ್ಯತಾ ಭಾವದಿಂದ ಮನೆಗೆ ಹೋಗುತ್ತಿದ್ದರು. ಕೆಲವರು ಕೈಯಲ್ಲಿ ತೆಗೆದು ಕೊಳ್ಳಬಾರದೆಂದು ಸೆರಗನ್ನು ಚಾಚಿ ಪಡೆದು, ತಕ್ಷಣ ಅದನ್ನು ಎದೆಗೆ ಅವಚಿ ಮುಚ್ಚಿಕೊಂಡು ನಮಸ್ಕರಿಸಿ ಹೋಗುತ್ತಿದ್ದರು. ಮನೆಯ ಅಕ್ಕ ಪಕ್ಕದವರಿಗೂ ಹೆಮ್ಮೆಯಿಂದ 'ನೋಡಲೈ ತಹಶೀಲ್ದಾರಿಂದ ವೀಳ್ಯ ಈಸ್ಕೊಂಡು ಬಂದಿದ್ದೀನಿ' ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಹಳ್ಳಿಗಳಿಗೆ ಹೋಗುವಾಗಲೆಲ್ಲ ಒಂದೆರಡು ಕೌಳಿಗೆ ವೀಳ್ಯದೆಲೆ ಮತ್ತು ಅಡಿಕೆ ನನ್ನ ಬ್ಯಾಗಿನಲ್ಲಿರಿಸಿಕೊಂಡು ಹೋಗುವ ಅಭ್ಯಾಸವಾಗಿಬಿಟ್ಟಿತ್ತು.
ಎಷ್ಟೋ ಬಾರಿ ನಾವು ಮುಂಜಾನೆ ಹಳ್ಳಿಗೆ ಹೋಗುವಷ್ಟರಲ್ಲಿ ಕೆಲವರು ಗಂಡಸರು ಕೆಲಸಕ್ಕೋ ಇಲ್ಲ ಪೇಟೆಗೋ ಹೋಗಿರುತ್ತಿದ್ದರಿಂದ ಮನೆಯ ಹೆಂಗಸರೇ ನಾವು ಕೂತಿದ್ದ ಜಗುಲಿಗೆ ಬಂದು ಕಂದಾಯ ಕಟ್ಟಿ ರಸೀದಿ ವೀಳ್ಯವನ್ನು ಪ್ರೀತಿಯಿಂದ ಪಡೆದುಕೊಳ್ಳುವುದಲ್ಲದೆ ತಮ್ಮ ನೆರೆಹೊರೆಯವರಿಗೂ ಖುಷಿಯಿಂದ ಹೇಳಿಕೊಂಡು, ಹೋಗಿ 'ನೀವು ಸಾಹೇಬ್ರತ್ರ ಎಲಡ್ಕೆ ಈಸ್ಕೊಂಡು ಬನ್ನಿ' ಅಂತ ಹೇಳುತ್ತಿದ್ದರು. ಇದು ಯಾವ ಮಟ್ಟಿಗೆ ಹೋಯಿತೆಂದರೆ ಹೆಂಗಸರಲ್ಲಿ ಪೈಪೋಟಿ ಎರ್ಪಟ್ಟು, 'ಅವಳಿಗಿಂತ ನಾನು ಏನು ಕಡಿಮೆ ನಾನೂ ತಹಶೀಲ್ದಾರರಿಂದ ವೀಳ್ಯ ಈಸ್ಕೋತೀನಿ' ಎಂದು ಬಂದು ಕಂದಾಯ ಕಟ್ಟಿ ವೀಳ್ಯ ಪಡೆದು ಹೋಗುತ್ತಿದ್ದರು. ಇದು ಎಲ್ಲೆಡೆಯೂ ಪ್ರಚಾರವಾಗಿ ಜನರ ಬಾಯಲ್ಲಿ ವಸೂಲಿ ಶೈಲಿ ಜನ ಜನಿತವಾಗಿತ್ತು. ಹೀಗೆ ವೀಳ್ಯ ಕೊಟ್ಟು ಕಂದಾಯ ವಸೂಲಿ ಮಾಡುತ್ತಿದ್ದದ್ದನ್ನು ಜನ ಗಮನಿಸಿ ಹೋದಲ್ಲೆಲ್ಲಾ ಪ್ರೀತ್ಯಾದಾರಗಳಿಂದ ತಮ್ಮವನೆನ್ನುವಷ್ಟರ ಮಟ್ಟಿಗೆ ನನ್ನ ಕರ್ತವ್ಯಕ್ಕೆ ಸ್ಪಂದಿಸುತ್ತಿದ್ದುದ್ದನ್ನು ಮರೆಯುವಂತಿಲ್ಲ. ಅದಕ್ಕಾಗಿಯೇ ಆನಂತರದಲ್ಲಿ Gandhian Way of Revenue Collection, “Pan Wins Over Villagers'', ತಾಂಬೂಲ ತಹಶೀಲ್ದಾರ್, ವೀಳ್ಯದ ಕೃಷ್ಣಪ್ರಸಾದ್ ಎಂದು ರಾಷ್ಟ್ರೀಯ ಪತ್ರಿಕೆಗಳಲ್ಲಿ ಸುದ್ದಿಗಳು ಬಂದವು.
ವೀಳ್ಯದಿಂದಾದ ಪರಿಣಾಮಗಳೇನೆಂದು ಹೇಳಬೇಕಾಗುತ್ತದೆ. ರೈತರು ಆಯಾ ತಿಂಗಳ ಕೊನೆಯೊಳಗಾಗಿ ಹೇಗಾದರೂ ಹೊಂಚು ಹಾಕಿ ಚಾಚೂ ತಪ್ಪದೆ ಗ್ರಾಮಲೆಕ್ಕಾಧಿಕಾರಿಗೆ ಕಂದಾಯ ಸಂದಾಯಮಾಡುತ್ತಿದ್ದರು. ತಿಂಗಳ ಕೊನೆ ದಿನ ತಾಲ್ಲೂಕು ಕಚೇರಿಯಲ್ಲಿ ಇರಸಾಲು ಮಾಡಲು ಬಂದಾಗ 'ನಾನು ಇಷ್ಟು ಸಾವಿರ ಜಮಾ ಮಾಡಿದೆ' ಎಂದು ಗ್ರಾಮ ಲೆಕ್ಕಾಧಿಕಾರಿಗಳು ತಾವೇ ಬೆನ್ನುತಟ್ಟಿಕೊಳ್ಳುತ್ತಿದ್ದರು. ಒಂದೇ ಗ್ರಾಮದಲ್ಲಿ ಲಕ್ಷ ವಸೂಲಿ ಮಾಡಿದ ದಾಖಲೆಯೂ ಆಯ್ತು. ಸಿಬ್ಬಂದಿಯಲ್ಲಿ ಎಲ್ಲಿಲ್ಲದ ಉತ್ಸಾಹ, ಖುಷಿ ಮೂಡತೊಡಗಿತು. ಹಳ್ಳಿಗಳಲ್ಲಿ ಹೊಸ ವಾತಾವರಣ ನಿರ್ಮಾಣವಾಯ್ತು. ಅವರ ಮನೆ ಬಾಗಿಲಿಗೆ ಹೋಗಿ ಅವರ ಕಷ್ಟ ಸುಖ ವಿಚಾರಿಸುತ್ತಿದುದರಿಂದ ನನ್ನನ್ನು ಪ್ರೀತಿ ವಿಶ್ವಾಸದಿಂದ ಕಾಣತೊಡಗಿದರು. ಬೇಕು ಬೇಡಗಳ ಮಾತನಾಡುವಂತಾದರು. ಶಾಲಾ ಮಕ್ಕಳು ಹತ್ತಿರವಾದರು. ರಾಜಕೀಯ ಮುಖಂಡರು ಊರಿನ ಯಜಮಾನರು ನಂಬಿಕೆ, ಗೌರವ, ಪ್ರೀತ್ಯಾದರದಿಂದ ಕಾಣುತ್ತಿದ್ದರು. ಅವರಿಗೆ ಬೇಕಾದ ಖಾತೆ ಪಟ್ಟೆಗಳನ್ನು ಅವರ ಊರಿನಲ್ಲೇ ಕುಳಿತು ವಿಚಾರಿಸಿ ಇಂಡೀಕರಣ ಮಾಡಲಾಯ್ತು. ಎಷ್ಟೋ ವರ್ಷಗಳಿಂದ ತಾಲೂಕು ಕಚೇರಿಯಲ್ಲಿ ಬಾಕಿ ಇದ್ದ ಪ್ರಕರಣಗಳ ವಿಚಾರಣೆ ಹಳ್ಳಿಯಲ್ಲೇ ಮಾಡಿ ನಾಲ್ಕು ಜನರ ಮುಂದೆ ಮುಕ್ತಾಯಗೊಳಿಸಲಾಯ್ತು. ಊರಿಗೆ ಆಗ ಬೇಕಾದ ದೇವಸ್ಥಾನದ ಕೆಲಸ, ರಸ್ತೆ-ಜಮೀನು ಮಂಜೂರಾತಿ ಕೆಲಸ ಸ್ಥಳದಲ್ಲೆ ಆಗತೊಡಗಿದವು. ಎಷ್ಟು ಸಾಮೀಪ್ಯ ಬೆಳೆದಿತ್ತೆಂದರೆ ಊರಿಗೆ ಹೋದರೆ ಸಾಕು, 'ನಮ್ಮನೆಗೆ ಊಟಕ್ಕೆ ತಿಂಡಿಗೆ ಬನ್ನಿ' ಅಂತ ಕರೆಯುತ್ತಿದ್ದರು. ಜೂಜಾಡುವವರು, ಸಂಜೆ ಕುಡಿದು ಬರುವವರು ನಾನಿದ್ದೇನೆಂದರೆ ಕಾಣಿಸಿಕೊಳ್ಳುತ್ತಿರಲಿಲ್ಲ.
ಕಂದಾಯ ಇಲಾಖೆ ಅತ್ಯಂತ ಕಠಿಣವಾದ ಜವಾಬ್ದಾರಿ, ವಸೂಲಿ. ಸಿಬ್ಬಂದಿ ಒಟ್ಟಿಗೆ ಗುಂಪಿನಲ್ಲಿ ಹೋಗಿ ಅಲ್ಲಿಯ ಜನರ ಕೆಲಸಗಳನ್ನು ಸ್ಥಳದಲ್ಲೆ ಮುಗಿಸುತ್ತಿದ್ದೆವು. ಹಳ್ಳಿಯಲ್ಲೇ ಮಲಗುತ್ತಿದ್ದೆವು. ಹಾಗೆಯೇ ಎಷ್ಟೋ ಬಾರಿ ಶಾಲೆಗಳಲ್ಲಿ ಮಲಗಿದ್ದುಂಟು. ನಾನೇನೋ ಯಾವುದೇ ಚಿಂತೆಯಿಲ್ಲದೆ ನಿದ್ದೆಮಾಡಿ ಬಿಡುತ್ತಿದ್ದೆ. ಆಗಿನ್ನು ನನಗೆ ಮದುವೆಯೂ ಆಗಿರಲಿಲ್ಲ! ನನ್ನ ಜೊತೆಯಲ್ಲಿದ್ದ ರೆವೆನ್ಯೂ ಇನ್ಸ್ಪೆಕ್ಟರ್ ನಂಜುಂಡಯ್ಯನವರು ಮಾತ್ರ ನಾವು ಮಲಗಿದ ನಂತರ ಮೋಟರ್ ಸೈಕಲ್ನಲ್ಲಿ ಬನ್ನೂರಿನ ತಮ್ಮ ಮನೆಗೆ ಹೋಗಿ ಬೆಳಿಗ್ಗೆ ಹಾಜರಾಗಿಬಿಡುತ್ತಿದ್ದರು.
ಈ ಎಲೆ ಅಡಿಕೆ ಕೊಡಬೇಕೆಂಬ ಆಲೋಚನೆ ಬಂದಿದ್ದಾದರೂ ಹೇಗೆ ಎಂಬುದನ್ನು ಹೇಳಬೇಕು. ಬಹುತೇಕ ನಮ್ಮ ರೈತಾಪಿ ಜನ ನ್ಯಾಯ-ನೀತಿಪರರು. ನಮ್ಮ ನೆಲದ ಸಂಸ್ಕೃತಿಯಲ್ಲಿ ರೂಪುಗೊಂಡಿರುವ ಮೌಲ್ಯಗಳಿಗೆ ಗೌರವ ನೀಡುವವರು. ಇಂಥ ಜನರಿಗೆ ನಾನು ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಬೇಕೆಂಬ ಆಲೋಚನೆ ನನ್ನ ಮನದಲ್ಲಿ ಸದಾ ಕಾಡುತ್ತಿತ್ತು. ಆ ಹಿನ್ನೆಲೆಯಲ್ಲಿ ರೂಪುಗೊಂಡ ಚಿಂತನೆಯ ಫಲವೇ ವೀಳ್ಯ ನೀಡುವ ಯೋಜನೆ. ಹಿಂದು ಸಂಸ್ಕೃತಿಯ ಪ್ರಕಾರ ವೀಳ್ಯ ಕೊಡುವುದು ತೆಗೆದುಕೊಳ್ಳುವುದು ಒಂದು ಪವಿತ್ರವಾದ ಸಂಪ್ರದಾಯ. ಎರಡೂ ಕಡೆಯವರು ಕೊಟ್ಟ ಮಾತನ್ನು ತಪ್ಪದೇ ಉಳಿಸಿಕೊಳ್ಳುವುದಕ್ಕೆ ಬದ್ದರಾಗಿರುವಂತೆ ಮಾಡುವ ಒಂದು ಭಾವನಾತ್ಮಕ ಸಂಬಂಧ ಹುಟ್ಟಿಸುವಂಥದ್ದು. ಇದು ಹಳ್ಳಿಗಳಲ್ಲಿ ಈಗಲೂ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಪದ್ಧತಿ. ಆದುದರಿಂದಲೆ ಇದರ ಪಾವಿತ್ರ್ಯತೆಯನ್ನು ಕಾಪಾಡುವ ಜವಾಬ್ದಾರಿ ಮತ್ತು ನಂಬಿಕೆಯನ್ನು ನಮ್ಮ ಜನ ಸದಾ ಇರಿಕೊಂಡಿದ್ದಾರೆ.
ದೇವರನ್ನು ಮೆರೆಸುವಾಗ ಇಲ್ಲವೇ ಶವ ಯಾತ್ರೆಯಲ್ಲಿ ತಮಟೆ ಹೊಡೆಯುವುದು ಸಾಂಸ್ಕೃತಿಕವಾಗಿ ನಡೆದುಕೊಂಡು ಬಂದಿರುವ ಪದ್ಧತಿ. ಒಪ್ಪುವಂಥದ್ದು. ಆದರೆ ಇತ್ತೀಚಿನ ದಿನಗಳಲ್ಲಿ ತೆರಿಗೆ ಬಾಕಿದಾರರ ಕಂಪನಿ ಬಾಗಿಲಲ್ಲಿ ತಮಟೆ ಹೊಡೆಸುತ್ತದೆ ಎಂದು ಕೇಳಿದ್ದೇವೆ. ತಮಟೆ ಹೊಡೆದು, ಸಾರ್ವಜನಿಕರ ಗಮನ ಸೆಳೆದು ಮಾನ ಹರಾಜು ಮಾಡಿ ಪ್ರಚಾರ ಮಾಡುವುದರಿಂದ ಬಾಕಿದಾರರಿಗೆ ತೇಜೊವಧೆಯಾಗಿ ಅವಮಾನವಾಗುತ್ತದೆ.
ಹಳ್ಳಿಯ ಜನ ಸಾಮಾಜಿಕ ಭದ್ರತೆಯನ್ನು ಅಲ್ಲಿ ಕಂಡುಕೊಂಡಿರುತ್ತಾರೆ. ಹಾಗಿರುವಾಗ ಅವರಿಗೆ ಬಾಕಿದಾರನೆಂದು ನೋಟಿಸ್ ಜಾರಿ ಮಾಡುವುದಾಗಲಿ, ಬೆಳೆ ಅಥವಾ ಚರಾಸ್ತಿಗಳನ್ನು ಹರಾಜು ಹಾಕುವುದಾಗಲಿ ಮಾಡಿಬಿಟ್ಟೆವೆಂದರೆ ಆ ಮನೆ ಮಂದಿಯ ಗತಿ ಏನೆಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಮಾನ ಮರ್ಯಾದೆಗೆ ಅಂಜಿ ಬಾಳುವ ಕುಟುಂಬದ ಗೋಳು ಆ ಪರಿಸರದಲ್ಲಿ ಬದುಕಿ ಬಾಳಿದವರಿಗಷ್ಟೆ ಅರಿವಾಗುತ್ತೆ. ಕಂದಾಯ ಬಾಕಿ ಉಳಿಯಲಿಕ್ಕೆ ಅನೇಕ ಕಾರಣಗಳಿರುತ್ತವೆ. ಮುಖ್ಯವಾಗಿ ಬೆಳೆದ ಫಸಲಿನಿಂದ ಬಂದ ಆದಾಯ ಕಡಿಮೆ ಇರಬಹುದು. ಬಂದದ್ದು ಅವರ ಜೀವನ ನಿರ್ವಹಣೆಗೆ ಸಾಲದಿರಬಹುದು. ಮದುವೆ, ಹಬ್ಬಗಳ ಖರ್ಚು ಬೀಳಬಹುದು. ಇದೆಲ್ಲಕ್ಕೂ ಮಿಗಿಲಾಗಿ ಅನಿಶ್ಚಿತ ಮಳೆ ಮತ್ತು ಅನಿಶ್ಚಿತ ಕೃಷಿ ಬೆಲೆಯಿಂದಾಗಿ ಸಂಕಷ್ಟ ಅನುಭವಿಸಬಹುದು. ರೈತರು ಕಂದಾಯ ನಿರಾಕರಿಸುವ ಮೂಲಕ ದಾಷ್ಟ್ರ್ಯತೋರಿಸುವ ಜನರಲ್ಲ. ಏನಿದೆಯೋ ಅದರಲ್ಲೆ ಬದುಕುತ್ತಿರುವ ರೈತಾಪಿ ಜನರ ಮೇಲೆ ಏಕಾಏಕಿ ಕಾನೂನಿನ ಕ್ರಮ ಜರುಗಿಸಿದರೆ ಅವರ ಅಸ್ತಿತ್ವಕ್ಕೆ ಆಘಾತಕಾರಿ ಪರಿಣಾಮಬೀರುತ್ತದೆ. ಅಧಿಕಾರಿಗಳಿಗೆ ವಸೂಲಿ ಮಾಡುವ ದೃಷ್ಟಿಯಾದರೆ ರೈತರಿಗೆ ತಮ್ಮ ಮಾನ ಮರ್ಯಾದೆ ಪ್ರಶ್ನೆಯಾಗಿರುತ್ತದೆ. ವಸ್ತು ಸ್ಥಿತಿ ಹೀಗಿರುವಾಗ ರೈತನ ಮನೆಗೆ ಕಂದಾಯ ಕೇಳುವವರು ಬಂದು ಜಬರ್ದಸ್ತ್ ಮಾಡಿ ಪಾತ್ರೆ ಪಗಡಿ ಆಸ್ತಿಪಾಸ್ತಿ ಹೊರ ಹಾಕಿ ಪಟ್ಟಿಮಾಡಿ, ಹರಾಜು ಮಾಡಿಬಿಟ್ಟರೆ ಅವನ ಗತಿ ಆ ಮನೆಯವರಿಗೆ ಇದ್ದರೂ ಒಂದೇ ಸತ್ತರೂ ಒಂದೇ ಎಂಬಂತಾಗುತ್ತದೆ. ಅವರು ಅದರಿಂದ ಸುಧಾರಿಸಿಕೊಳ್ಳುವುದು ಕಷ್ಟ. ಅಂಥವರ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಮದುವೆಗೆ ಹೆಣ್ಣು ಕೇಳಲು ಹಿಂದು ಮುಂದು ನೋಡುತ್ತಾರೆ. ಆಗದವರು, 'ಆ ಮನೆ ಹರಾಜಿಗೆ ಬಂದಿತ್ತು' ಎಂಬ ಕಳಂಕ ಹಚ್ಚಿ ಕಿಚ್ಚು ಹತ್ತಿಸುತ್ತಾರೆ. ಊರಿನಲ್ಲಿ ತಲೆ ಎತ್ತಿ ಓಡಾಡಲು ಕಷ್ಟವಾಗುತ್ತದೆ. ಆದ್ದರಿಂದ ಅವರಿಗಾಗಬಹುದಾದ ಅವಾಂತರ ಆಘಾತಗಳನ್ನು ನಿವಾರಿಸಿ ಅವರ ಸ್ವಾಭಿಮಾನ ಗೌರವಗಳನ್ನು ಉಳಿಸಿ ಅಧಿಕಾರಿಗಳು ತಮ್ಮ ಕೆಲಸ ಮಾಡಬೇಕಾಗುತ್ತದೆ.
ಸಾರ್ವಜನಿಕ ಆಡಳಿತ ದೃಷ್ಟಿಯಿಂದ ಗಮನಿಸಲೇಬೇಕಾದ ಕೆಲವು ಅಂಶಗಳಿವೆ. ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಸೇವೆ ಮಾಡುವ ಜವಾಬ್ದಾರಿ ಹೊಂದಿರುವವರು ಮೊದಲು ಕಲಿಯಬೇಕಾದದ್ದು ಕಾನೂನುಗಳಲ್ಲ. ಜನರ ವಾಸ್ತವ ಪರಿಸ್ಥಿತಿಗಳಿಗೆ ಮುಕ್ತವಾದ ಮನಸ್ಸಿನಿಂದ ಸ್ಪಂದಿಸುವುದನ್ನು. ಬಡಜನರನ್ನು ನೋಡಿದಾಗ ಮೊದಲು ಕನಿಕರ, ಪ್ರೀತಿ ಮೂಡಬೇಕು, ಆನಂತರವೇ ನಿಯಮಗಳು ನೆನಪಾಗಬೇಕು. ಸರ್ಕಾರಿ ಸೇವಕನ ಮನಸ್ಸು ಕರಗಿದರೆ ಸಾಕು. ಕಾನೂನು ಕೈ ಜೋಡಿಸದಿದ್ದರೂ ಪರವಾಗಿಲ್ಲ, ತನ್ನ ಕೈಲಾದ ಸಹಾಯ ಮಾಡಲು ಮುಂದಾಗುತ್ತಾನೆ. ಇಂಥ ಗುಣ ಸಾರ್ವಜನಿಕ ಸೇವಕರಲ್ಲಿ ಹುಟ್ಟಿದಲ್ಲಿ ಮಾತ್ರ ಜನರಿಗೆ ನೆಮ್ಮದಿಯನ್ನು ನೀಡಬಲ್ಲರು. ನಾನು ಹೇಳಬಯಸುವುದುದೇನೆಂದರೆ ಯಾವೊಬ್ಬ ಪ್ರಾಧಿಕಾರಿಯೂ ತಾನು ಆಫೀಸರ್, ಕಮಿಷನರ್, ನಿರ್ದೇಶಕ, ಚೀಫ್ ಎಂಬ ಪ್ರಿಫಿಕ್ಸ್ ಸಫಿಕ್ಸಗಳ ಕವಚದ ಭ್ರಮೆಯಲ್ಲಿ ತೇಲುವುದನ್ನು ಬಿಟ್ಟು ನೆಲಕ್ಕಿಳಿದು ಮನುಷ್ಯನಾಗಿ ತನ್ನ ಜವಾಬ್ದಾರಿಗಳನ್ನು ಸಾರ್ವಜನಿಕವಾಗಿ ನಿರ್ವಹಿಸುವನೋ ಅವನೇ ನಿಜವಾದ ಸಾರ್ವಜನಿಕ ಸೇವಕ. ಎಷ್ಟೇ ಪುಸ್ತಕ ಓದಿದವರಾಗಾಲಿ, ತರಬೇತಿ ಪಡೆದವರಿರಲಿ ಈ ಸೇವಕನ ಲಕ್ಷಣಗಳಲ್ಲಿದಿದ್ದವರು ಸಮಾಜ ದ್ರೋಹಿಗಳಾಗಿ 30-33 ವರ್ಷ ವೈಯಕ್ತಿಕ ಹಿತಾಸಕ್ತಿಯ ದರ್ಪದ ಜೀವಗಳಾಗಿಬಿಡುತ್ತಾರೆ. ಅಂಥವರಿಂದ ಕಲ್ಪನೆಗೂ ನಿಲುಕದಷ್ಟು ಅನ್ಯಾಯ ಸಮಾಜಕ್ಕೆ ಆಗಿಬಿಡುತ್ತದೆ!
- ಡಾ. ಬಿ.ಎಸ್. ಕೃಷ್ಣಪ್ರಸಾದ್
krishnaprasadz@yahoo.co.in