ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ರೈತರಿಗೆ ಖಾತ್ರಿಯಾದ ಆದಾಯ ಬೇಕಲ್ಲವೆ?

ಅರ್ಥ ವ್ಯವಸ್ಥೆಯ ವಿವಿಧ ಕಸಬುಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ವರ್ಗಗಳೂ...

Vishwanath S
Updated On : 26 Jul 2013, 12:40 pm

ಅರ್ಥ ವ್ಯವಸ್ಥೆಯ ವಿವಿಧ ಕಸಬುಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ವರ್ಗಗಳೂ ತಮಗೆ ಸಿಗುವ ಆದಾಯ ಮತ್ತು ಅದನ್ನು ಖಾತ್ರಿಗೊಳಿಸುವ ವಿಚಾರವಾಗಿ ಸದಾ ಚಿಂತಿಸುತ್ತಿದ್ದರೆ ರೈತಾಪಿ ವರ್ಗ ಮಾತ್ರ ಇವುಗಳ ಬಗ್ಗೆ ಮಾತನಾಡದೆ ಇರುವುದು ವಿಪರ್ಯಾಸ.  ಇದರ ಪರಿಣಾಮವಾಗಿ ಇಂದು ಹಲವು ರೈತರು ಕೃಷಿಗೆ ಬೆನ್ನು ಮಾಡಿ ಬೇರೆ ಕಸುಬುಗಳಿಗೆ  ಹೋಗುತ್ತಿದ್ದರೆ, ಇನ್ನೊಂದೆಡೆ  ಆತ್ಮಹತ್ಯೆಯಂಥ ದಾರುಣ ಹಾದಿ ಹಿಡಿದಿರುವುದೂ ಈ ಶತಮಾನದ ದೊಡ್ಡ  ದುರಂತವಾಗಿದೆ. ರೈತರು ಆದಾಯ ಮತ್ತು ಅದನ್ನು ಖಾತ್ರಿಗೊಳಿಸುವ ವಿಚಾರವಾಗಿ ತೀವ್ರ ಗಮನ ಹರಿಸದಿದ್ದಲ್ಲಿ ಅತ್ಯಂತ ಪ್ರಾಚೀನ ಕಸುಬಾದ ಕೃಷಿಗೆ ಗಂಡಾಂತರ ಬರುವ ದಿನಗಳು ದೂರವಿಲ್ಲ.
ಸರ್ಕಾರದ ಎರಡು ವರದಿಗಳ ಅನ್ವಯ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ 14 ಪ್ರಮುಖ ಬೆಳೆಗಳನ್ನು ಉತ್ಪಾದಿಸಿದ ರೈತರು ಎಲ್ಲಾ ವೆಚ್ಚಗಳನ್ನು, ಅಂದರೆ ಭೂಮಿಯ ಮೇಲಿನ ಗೇಣಿ, ದಿರ್ಘ ಕಾಲದ ಹೂಡಿಕೆ ಮೇಲಿನ ಬಡ್ಡಿ, ಯಂತ್ರೋಪಕರಣಗಳ ಮೇಲಿನ ಸವಕಳಿ, ಮನೆಯ ಸದಸ್ಯರ ಅವಕಾಶ ವೆಚ್ಚ, ನಿರ್ವಹಣಾ ವೆಚ್ಚ ಇತ್ಯಾದಿಗಳನ್ನು ಪರಿಗಣಿಸಿದ್ದೇ ಆದಲ್ಲಿ ನಿವ್ವಳ ನಷ್ಟ ಅಥವ ಅತ್ಯಲ್ಪ ಲಾಭಗಳಿಸಿರುವುದು ತಿಳಿದು ಬರುತ್ತದೆ.  ಈ ನಷ್ಟದ ಪ್ರಮಾಣ ಎಕರೆ ಒಂದಕ್ಕೆ ಶೇಂಗಾ, ಸೂರ್ಯಕಾಂತಿ ಬೆಳೆಗಳಲ್ಲಿ ತಲಾ ಸುಮಾರು ರು. 1500 ಇದ್ದರೆ, ಭತ್ತ, ರಾಗಿ ಬೆಳೆಗಳಲ್ಲಿ ತಲಾ ರು. 2000 ದಷ್ಟಿರುತ್ತದೆ. ಇನ್ನು ಜೋಳ, ಸೋಯಾ ಅವರೆ ಬೆಳೆದ ರೈತರು ಅನುಭವಿಸಿದ ನಷ್ಟದ ಪ್ರಮಾಣ ಎಕರೆ ಒಂದಕ್ಕೆ ಕ್ರಮವಾಗಿ ರುಪಾಯಿ 2800 ಮತ್ತು 3762 ರುಪಾಯಿಗಳಷ್ಟಿರುತ್ತದೆ.  ಒಂದು ಸರಳ ಲೆಕ್ಕಾಚಾರದ ಪ್ರಕಾರ ಕರ್ನಾಟಕದಲ್ಲಿ 2009-10 ರ ಸಾಲಿನಲ್ಲಿ ಈ ಎಲ್ಲಾ ಪ್ರಮುಖ ಬೆಳೆಗಳ ಕೃಷಿ ಕೈಗೊಂಡ ರೈತರು ಈ ರೀತಿ ಭರಿಸಿದ ಒಟ್ಟಾರೆ ನಷ್ಟದ ಪ್ರಮಾಣ ಏನಿಲ್ಲವೆಂದರೂ ರುಪಾಯಿ 3000 ಕೋಟಿ ಮೀರಿರುತ್ತದೆ! ಕೃಷಿ ಈ ರೀತಿ ನಷ್ಟದ ಕಸುಬಾಗಿರುವುದಕ್ಕೆ ರೈತರು ಕೂಲಿ, ಜಾನುವಾರು ಮತ್ತು ಯಾಂತ್ರಿಕ ಶ್ರಮದ ಬಾಬ್ತು ಹೆಚ್ಚಿನ ವೆಚ್ಚ ಅಂದರೆ ಒಟ್ಟು ವೆಚ್ಚದಲ್ಲಿ ಸುಮಾರು ಶೇ. 40 ರಷ್ಟು ಭರಿಸುವಂತಾಗಿರುವುದೇ ಮುಖ್ಯಕಾರಣವಾಗಿದೆ.
ಕೃಷಿಯೇ ಒಂದು ನಷ್ಟದ ಕಸುಬಾಗಿರುವಾಗ ಇದರಿಂದ ರೈತರಿಗೆ ಸಿಗುವ ಆದಾಯವಾಗಲಿ ಆ ಮೂಲಕ ದೊರೆಯುವ ಆರ್ಥಿಕ ಅಭದ್ರತೆಯನ್ನಾಗಲಿ ಊಹಿಸುವುದು ಕಷ್ಟವಾಗದು. ಇಲ್ಲಿ ಮುಖ್ಯ ಪ್ರಶ್ನೆ ಎಂದರೆ ನಮ್ಮ ರೈತರಲ್ಲಿ ಎಷ್ಟು ಮಂದಿ ಕನಿಷ್ಟ ಬಡತನ ರೇಖೆಗಿಂತ ಮೇಲೇರುವಷ್ಟು ಆದಾಯವನ್ನಾದರೂ ಹೊಂದಿರುವರು ಎಂಬುದಾಗಿದೆ.  ಒಂದು ಸರಳ ಲೆಕ್ಕಾಚಾರದ ಪ್ರಕಾರ ಶೇಕಡಾ 75 ರಷ್ಟಿರುವ ನಮ್ಮ ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಮೂಲದ ಆದಾಯವನ್ನು ಮಾತ್ರ ಪರಿಗಣಿಸಿದಲ್ಲಿ ಅವರು ಬಡತನ ರೇಖೆಗಿಂತ ಕೆಳಗೆ ಜೀವಿಸುತ್ತಿರುವುದು ತಿಳಿದು ಬರುತ್ತದೆ.
ತಾಂತ್ರಿಕವಾಗಿ ನೋಡಿದ್ದೇ ಅದಲ್ಲಿ ನಮ್ಮ ಕೃಷಿ ವ್ಯವಸ್ಥೆ ಕೆಲ ಮೂಲಭೂತ ಕೊರತೆ ಅಥವಾ ಅಂತರಗಳನ್ನು ಎದುರಿಸುತ್ತಿದೆ. ಇದನ್ನು ಒಂದರ್ಥದಲ್ಲಿ  ಕೃಷಿ ನೀತಿಯ ವೈಫಲ್ಯವೂ ಎನ್ನಬಹುದು. ಇವುಗಳಲ್ಲಿ ಮೊದಲನೆಯದೆಂದರೆ ವ್ಯವಸ್ಥಿತ ರೀತಿಯಲ್ಲಿ ನೀರು, ಬೀಜ, ಗೊಬ್ಬರ ಇತ್ಯಾದಿಗಳನ್ನು ಬಳಸಿ ಪಡೆಯುವ ವೈಜ್ಞಾನಿಕ ಇಳುವರಿಗಿಂತ ನಮ್ಮ ರೈತರು ಪಡೆಯುವ ಇಳುವರಿಯಲ್ಲಿನ ಭಾರೀ ವ್ಯತ್ಯಾಸ ಎನ್ನಬಹುದು. ಈ ಇಳುವರಿಯ ಅಂತರ ಭತ್ತ, ರಾಗಿಯಂತಹ ಆಹಾರ ಬೆಳೆಗಳಲ್ಲೇ ಶೇಕಡಾ 56 ರಷ್ಟಿದೆ.  ಉದಾಹರಣೆಗೆ ವೈಜ್ಞಾನಿಕವಾಗಿ ಕೃಷಿ ಮಾಡಿದರೆ ರಾಗಿಯಂತಹ ಬೆಳೆಯಲ್ಲಿ ಎಕರೆವಾರು 17 ಕ್ವಿಂಟಾಲ್ ಇಳುವರಿ ಬರಬಹುದಾಗಿದ್ದರೂ ಹೊಲಗಳಲ್ಲಿ ನಮ್ಮ ರೈತರು ಪಡೆಯುತ್ತಿರುವುದು ಕೇವಲ 6.18 ಕ್ವಿಂಟಾಲ್‌ಗಳು ಮಾತ್ರ.  ಈ ರೀತಿಯ ಇಳುವರಿ ಅಂತರ ಎಣ್ಣೆ ಕಾಳುಗಳಲ್ಲಿ ಸರಾಸರಿ ಶೇಕಡಾ 60 ರಷ್ಟಿದ್ದರೆ ದ್ವಿದಳ ಧಾನ್ಯಗಳಲ್ಲಿ ಶೇಕಡಾ 46 ರಷ್ಟಿರುತ್ತದೆ.
ಬೆಲೆ ವಿಚಾರದಲ್ಲಿ ನಮ್ಮ ರೈತರು ಪಡುವ ಬವಣೆ ಇನ್ನೂ ಶೋಚನೀಯ ಸ್ವರೂಪದ್ದು. ನಮ್ಮ ಪ್ರಮುಖ ಬೆಳೆಗಳ ಬೆಲೆ ಬೇಕಾಬಿಟ್ಟಿ ಕಡಿಮೆ ಆಗದಿರಲಿ ಎಂದೇ ಸರ್ಕಾರ ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡಿ ಸುಮಾರು 24 ಬೆಳೆಗಳ ಉತ್ಪಾದನಾ ವೆಚ್ಚವನ್ನು ಆಧರಿಸಿ ಪ್ರತಿ ವರ್ಷ ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸುತ್ತದೆ.  ಇವುಗಳಲ್ಲಿ ಭತ್ತ, ಗೋಧಿಯನ್ನು ಗಮನಾರ್ಹ ಪ್ರಮಾಣದಲ್ಲಿ ಸರ್ಕಾರವೇ ಖರೀದಿಸುತ್ತದೆ. ಕಬ್ಬಿಗೆ ಆಯಾ ಸಕ್ಕರೆ ಕಾರ್ಖಾನೆಗಳಿಂದ ಖರೀದಿಸುವ ವ್ಯವಸ್ಥೆ ಇರುತ್ತದೆ. ಇನ್ನಿತರ ಬೆಳೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಧಾರಣೆ ಕುಸಿದಾಗ ಮಾರುಕಟ್ಟೆಯ ಮಧ್ಯಸ್ಥಿಕೆ ವಹಿಸಿಕೊಳ್ಳುತ್ತವೆ. ಆಶ್ಚರ್ಯವೆಂದರೆ ರಾಷ್ಟ್ರಮಟ್ಟದಲ್ಲಿ ಘೋಷಿಸುವ ಈ ಕನಿಷ್ಟ ಬೆಂಬಲ ಬೆಲೆಗಳ ಪ್ರಮಾಣ ಕರ್ನಾಟಕದ ಪ್ರಮುಖ ಬೆಳೆಗಳ ವಿಚಾರಕ್ಕೆ ಬಂದಾಗ ಸುಮಾರು 12 ಬೆಳೆಗಳಲ್ಲಿ ರೈತರು ಭರಿಸುವ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಇರುವುದು ತಿಳಿದುಬರುತ್ತದೆ.  ಉದಾಹರಣೆಗೆ ನಮ್ಮ ರಾಜ್ಯದ ರೈತರು ಭತ್ತ ಬೆಳೆಯಲು (2009-10 ರಲ್ಲಿ) ಸರಾಸರಿ ಕ್ವಿಂಟಾಲ್ ಒಂದಕ್ಕೆ 1047 ರುಪಾಯಿ ವೆಚ್ಚ ಮಾಡಿದ್ದರೆ ಆ ಸಾಲಿನಲ್ಲಿ ಘೋಷಿಸಿರುವ ಬೆಂಬಲ ಬೆಲೆ ಕೇವಲ 950 ರುಪಾಯಿ. ಇನ್ನು ರಾಗಿ ಮತ್ತು ಜೋಳ ಬೆಳೆಗಾರರು ಭರಿಸುವ ಉತ್ಪಾದನಾ ವೆಚ್ಚದಲ್ಲಿ ಕ್ರಮವಾಗಿ ಶೇಕಡಾ 57 ಮತ್ತು ಶೇಕಡಾ 53 ರಷ್ಟು ಮಾತ್ರ ಆ ಸಾಲಿನ ಬೆಂಬಲ ಬೆಲೆಯಲ್ಲಿ ವ್ಯಕ್ತವಾಗಿರುತ್ತದೆ.  ಇದನ್ನು ಸರ್ಕಾರದ ಹಸ್ತಕ್ಷೇಪದಲ್ಲಾದ ಕೊರತೆ ಅಥವಾ ಅಂತರ ಎನ್ನಬಹುದು.
ಈ ಎಲ್ಲಾ ಕೊರತೆ ಅಥವಾ ಅಂತರಗಳಿಗಿಂತ ರೈತರ ಆದಾಯದ ಮೇಲೆ ನೇರ ಪರಿಣಾಮ ಬೀರುವಂತಹದ್ದೆಂದರೆ ಮಾರುಕಟ್ಟೆಯ ಲೋಪದ ಮುಖೇನ ಬರುವ ಕೊರತೆ ಅಥವಾ ಅಂತರ ಎನ್ನಬಹುದು.  ಒಂದು ಕೃಷಿ ಉತ್ಪನ್ನವನ್ನು ಅಂತಿಮವಾಗಿ ಗ್ರಾಹಕ ಖರೀದಿಸಿದಾಗ ಅದರ ಎಷ್ಟು ಪಾಲು ಉತ್ಪಾದಿಸಿದ ರೈತನ ಕೈ ಸೇರುತ್ತದೆ ಎನ್ನುವುದು ಅರ್ಥವ್ಯವಸ್ಥೆಯ ಅತ್ಯಂತ ಮೂಲಭೂತ ಪ್ರಶ್ನೆಯಾಗಿದೆ. ಈ ಪ್ರಮಾಣ ಭತ್ತ, ರಾಗಿಗಳಂತಹ ಆಹಾರ ಬೆಳೆಗಳಲ್ಲಿ ಶೇಕಡಾ 30 ರಷ್ಟು ಮಾತ್ರವಿರುತ್ತದೆ ಎಂಬುದು ಅತ್ಯಂತ ಶೋಚನೀಯ ವಿಚಾರ. ಅಂದರೆ ಇಲ್ಲಿ ನಮ್ಮ ಕೃಷಿ ಉತ್ಪನ್ನಗಳಿಗೆ ಗ್ರಾಹಕರು ನೀಡುವ ಹಣದಲ್ಲಿ ಬಹುಪಾಲು ಅಂದರೆ ಶೇಕಡಾ 70 ರಷ್ಟು ರೈತರ ಕೈ ಸೇರದೇ ಮಧ್ಯವರ್ತಿಗಳು ಮತ್ತು ಇತರರ ಪಾಲಾಗುತ್ತದೆ ಎಂದಾಯ್ತು. ಈ ಅಂತರವನ್ನು ಮಾರುಕಟ್ಟೆಯ ಅಂತರ ಮಾತ್ರವಲ್ಲ ವೈಫಲ್ಯ ಎಂದೂ ಕರೆಯಲಾಗಿದ್ದು, ನಮ್ಮ ಎಲ್ಲಾ ಪ್ರಮುಖ ಬೆಳೆಗಳನ್ನು ಪರಿಗಣಸಿದ್ದೇ ಆದಲ್ಲಿ ಈ ಪ್ರಮಾಣ ಶೇಖಡಾ 60 ರಷ್ಟಿರುತ್ತದೆ. ಅಂದ ಮೇಲೆ ಇಲ್ಲಿ ನಮ್ಮ ರೈತರಿಗೆ ಗೌರವಯುತ ಬದುಕು ನಡೆಸಲು ಅಗತ್ಯವಿರುವ ಆದಾಯ ಭದ್ರತೆಯ ಮಾತೆಲ್ಲಿದೆ?  
ಇಂದು ಕೃಷಿ ಅಭಿವೃದ್ಧಿಯ ವಿಚಾರದಲ್ಲಿ ನಮ್ಮ ಚಿಂತನೆಗಳು ಆಳಕ್ಕಿಳಿಯಬೇಕಾಗುತ್ತದೆ. ನಮ್ಮ ಗಮನ ಬರಿದೇ ಕೃಷಿ ಉತ್ಪಾದಕತೆ, ವೆಚ್ಚ ಮತ್ತು ಬೆಲೆಗಳಿಗೆ ಮಾತ್ರ ಸೀಮಿತವಾಗದೆ ರೈತರಿಗೆ ಒಂದು ಗೌರವಯುತ ಬದುಕು ನಡೆಸಲು ಅಗತ್ಯವಿರುವ ಆದಾಯದತ್ತವೂ ವಿಸ್ತರಿಸಬೇಕಾಗುತ್ತದೆ. ಕೇಂದ್ರ ಸರ್ಕಾರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗಕ್ಕೆ ಸಂವಿಧಾನ ಬದ್ಧ ರೂಪನೀಡಿ ಇದನ್ನು ಕೃಷಿ ವೆಚ್ಚ, ಬೆಲೆ ಮತ್ತು ರೈತ ಆದಾಯ ಆಯೋಗ ಎಂದು ಪುನರ್ ಸಂಘಟಿಸಬೇಕಾಗುತ್ತದೆ.  ನಮ್ಮ ರಾಜ್ಯದ ಮಟ್ಟದಲ್ಲಿ ಈಗಾಗಲೇ ಕಳೆದ ಆಯವ್ಯಯದಲ್ಲಿ ಒಂದು ರೈತ ಆದಾಯ ಆಯೋಗದ ಬಗ್ಗೆ ಪ್ರಸ್ತಾಪಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯವನರು ಇತ್ತೀಚೆಗೆ ಮಂಡಿಸಿರುವ ತಮ್ಮ ಚೊಚ್ಚಲ ಆಯವ್ಯಯದಲ್ಲಿ ರೈತರಿಗೆ ಯೋಗ್ಯ ಬೆಲೆ ದೊರಕಿಸಿಕೊಡಲು ಬೆಲೆ ಆಯೋಗದ ಬಗ್ಗೆ ಪ್ರಸ್ತಾವನೆ ಮಾಡಿರುವರು.  ಇವೆಲ್ಲವನ್ನು ಸಂಯೋಜಿಸಿ ರಾಜ್ಯಕ್ಕೆ ಒಂದು ಪ್ರತ್ಯೇಕ ರೈತ ಆದಾಯ ಖಾತ್ರಿ ಆಯೋಗ ರಚಿಸಿ ಅದರ ರಚನೆ, ಕಾರ್ಯವ್ಯಾಪ್ತಿ ಮತ್ತು ಉದ್ದೇಶಗಳನ್ನು ಖಚಿತಪಡಿಸುವ ಕಾರ್ಯ ಮೊದಲಾಗಬೇಕಿದೆ.  
ಹಾಗೇ, ಕೃಷಿಯಲ್ಲಿನ ಉತ್ಪಾದನಾ ವೆಚ್ಚ, ಅದರಲ್ಲೂ ಮುಖ್ಯವಾಗಿ ಶ್ರಮದ ವೆಚ್ಚ ಕಡಿಮೆ ಮಾಡಲು ಅಗತ್ಯ ಸಂಶೋಧನೆ, ತಂತ್ರಜ್ಞಾನ ಮತ್ತು ಕೃಷಿ ಯಾಂತ್ರೀಕರಣದತ್ತ ತಕ್ಷಣ ಗಮನ ಹರಿಸಬೇಕಾಗಿದೆ. ಉತ್ಪಾದನೆ ಮತ್ತು ಮಾರುಕಟ್ಟೆಗಳಲ್ಲಿ ನಮ್ಮ ರೈತರ ಸಾಂಘಿಕ ಶಕ್ತಿಯನ್ನು ಅಧಿಕಗೊಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನೂ ಕೈಗೊಳ್ಳಬೇಕಾಗುತ್ತದೆ. ಇವೆಲ್ಲಕ್ಕಿಂತ ಮಿಗಿಲಾಗಿ ಗ್ರಾಮಾಂತರ ಪ್ರದೇಶದಲ್ಲಿ ರೈತರ ಆದಾಯ ವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಮಾಡಲು ಸಂಸ್ಕರಣೆ, ಯಂತ್ರ-ತಂತ್ರಜ್ಞಾನಗಳ ಸೇವಾ ಸೌಲಭ್ಯ, ಗ್ರಾಮೀಣ ಕರಕುಶಲ, ಗುಡಿಕೈಗಾರಿಕೆಗಳ ಅಭಿವೃದ್ಧಿ, ಕೃಷಿ ಪರಿಸರ ಪ್ರವಾಸದಂತಹ ಕಾರ್ಯಕ್ರಮಗಳ ಮೇಲೆ ಭಾರಿ ಪ್ರಮಾಣದ ಹೂಡಿಕೆಯಾಗಬೇಕು. ನಮ್ಮ ಯುವ ರೈತರು ಕೃಷಿಯಿಂದ ಗೌರವಯುತ ಬದುಕು ಸಾಧ್ಯ ಎಂದು ಗ್ರಾಮದಲ್ಲಿ ನೆಲಸಿ ಬೇಸಾಯವನ್ನು ಮುಂದುವರೆಸುವಂತಾದಾಗ ಮಾತ್ರ ಈ ಎಲ್ಲಾ ಪ್ರಯತ್ನಗಳು ಯಶಸ್ಸು ಕಾಣುತ್ತವೆ.

- ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಕೃಷಿ ವಿ.ವಿ., ಪ್ರಾಧ್ಯಾಪಕರು
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement