ಗೂಢಚಾರಿಕೆ ಎಂಬ ಅನೂಹ್ಯ ಜಗತ್ತಿನ ಬಗ್ಗೆ ಬಾಲಿವುಡ್ ಮಂದಿಯ ಆಸಕ್ತಿ ಬಿರುಸುಗೊಂಡಂತಿದೆ. ಇತ್ತೀಚೆಗೆ ಬಿಡುಗಡೆಯಾದ 'ಡಿಡೇ' ಸೇರಿದಂತೆ ವಿಶ್ವರೂಪಂ, ಏಕ್‌ಥಾ ಟೈಗರ್, ಏಜೆಂಟ್ ವಿನೋದ್ ಚಿತ್ರಗಳೆಲ್ಲ ಭಾರತೀಯ ಗೂಢಚರನನ್ನು ಮುಖ್ಯಪಾತ್ರದಲ್ಲಿ ನಿಲ್ಲಿಸಿ ಕತೆ ಹೆಣೆದಿವೆ. ವಿದೇಶಿ ಬೇಹುಗಾರಿಕೆಯ ಜವಾಬ್ದಾರಿ ಹೊತ್ತಿರುವ 'ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್' (ರಾ) ದ ಏಜೆಂಟ್‌ನನ್ನು ಪ್ರತಿನಿಧಿಸುವ ಪಾತ್ರವನ್ನು ಇತ್ತೀಚಿನ ಅನೇಕ ಸಿನಿಮಾಗಳು ಒಳಗೊಂಡಿವೆ. ಕೆಲ ಚಿತ್ರಗಳು 'ರಾ' ಏಜೆಂಟ್‌ಗಳನ್ನು ವೈರಿನೆಲದಲ್ಲಿ ಕಾಲಿರಿಸಿ ಅಲ್ಲಿನವರನ್ನು ಹಣ್ಣುಗಾಯಿ-ನೀರುಗಾಯಿ ಮಾಡುವ ಮಸಾಲೆ ಮಾರ್ಗದಲ್ಲೇ ಬಿಂಬಿಸಿವೆಯಾದರೂ ಅವುಗಳ ಎಡೆಯಲ್ಲೇ ಗೂಢಚಾರಿಕೆಯ ಒಳತೋಟಿಗಳನ್ನು ಹಿಡಿದಿಡುವ ಕಾರ್ಯವೂ ನಡೆದಿರುವುದು ಸುಳ್ಳಲ್ಲ.
'ರಾ' ಏಜೆಂಟ್ ಪಾತ್ರವನ್ನೆ ಮುಖ್ಯ ಭೂಮಿಕೆಯಲ್ಲಿ ಹೊಂದಿರುವ, ಇನ್ನಷ್ಟೇ ತೆರೆಗೆ ಬರಲಿರುವ ಚಿತ್ರ 'ಮದ್ರಾಸ್ ಕೆಫೆ'. ಶ್ರೀಲಂಕಾದ ಜನಾಂಗೀಯ ಸಂಘರ್ಷದ ಹಿನ್ನೆಲೆ ಇರಿಸಿಕೊಂಡು ತಯಾರಾಗುತ್ತಿರುವ ಈ ಚಿತ್ರಕ್ಕೆ ಜಾನ್ ಅಬ್ರಾಹಂ ನಾಯಕ ಎಂಬ ವಿಚಾರ ತಿಳಿದವರು, 'ಸಖತ್ ಫೈಟು-ಸ್ಟಂಟು ಇರುತ್ತೆ ಬಿಡು' ಎಂಬ ನಿರ್ಧಾರಕ್ಕೆ ಬಂದುಬಿಡಬಹುದೇನೋ. ಆದರೆ ಚಿತ್ರದ ಸಂಬಂಧಿ ಪತ್ರಿಕಾಗೋಷ್ಠಿಯಲ್ಲಿ ಜಾನ್ ಅಬ್ರಾಹಂ ಆಡಿರುವ ಕೆಲ ಮಾತುಗಳು ಬೇರೆಯದೇ ನೆಲೆಯಲ್ಲಿ ಭರವಸೆ ಹುಟ್ಟಿಸುತ್ತಿವೆ. 'ನಾವು ಈ ಚಿತ್ರದಲ್ಲಿ ರಾ ಏಜೆಂಟ್‌ಗಳ ನೈಜ ಆಯಾಮವನ್ನು ತೋರಿಸಿದ್ದೇವೆ. ಇಬ್ಬರು ನಿವೃತ್ತ ರಾ ಏಜೆಂಟ್‌ಗಳೂ ಈ ಚಿತ್ರದಲ್ಲಿ ಪಾತ್ರ ವಹಿಸಿದ್ದಾರೆ. ಇವರ್ಯಾರೂ ಸ್ಪೈಡರ್‌ಮ್ಯಾನ್‌ನಂತೆ ಜಿಗಿಯುವುದಾಗಲಿ, ಸಿಕ್ಸ್‌ಪ್ಯಾಕ್ ದೇಹಸಿರಿ ಪ್ರದರ್ಶಿಸಿಕೊಂಡು ತಿರುಗುವುದನ್ನಾಗಲೀ ಮಾಡುವುದಿಲ್ಲ. ಚಿತ್ರದ ನಿರ್ದೇಶಕ ಸುಜಿತ್ ಸರ್ಕಾರ್ ನನಗೆ ಸಾಮಾನ್ಯ ಮನುಷ್ಯನಂತೆ ಇರುವುದಕ್ಕೆ ಸೂಚಿಸಿದ್ದರು. ಅದಕ್ಕಾಗಿ ನಾನು ತೂಕ ಇಳಿಸಿಕೊಂಡೆ. ಡ್ಯಾನ್ಸ್- ಹಾಡುಗಳಿಲ್ಲದ ಒಂದು ಗಂಭೀರ ಚಿತ್ರವಿದು. ಆರೇಳು ವರ್ಷಗಳ ಅಧ್ಯಯನ ಮತ್ತು ಚರ್ಚೆಯ ನಂತರ ರೂಪಿಸುತ್ತಿರುವ ಈ ಸಿನಿಮಾ ವಾಸ್ತವಕ್ಕೆ ಹತ್ತಿರವಾಗಿದೆ' ಎಂಬುದು ಜಾನ್ ಅಬ್ರಾಹಂ ನೀಡುತ್ತಿರುವ ವಿಶ್ವಾಸ.
ಅಂತೂ ನಿಧಾನವಾಗಿ ಬೇಹುಗಾರಿಕೆ ಎಂಬುದನ್ನು ಅತಿಮಾನುಷ ಸಾಹಸವನ್ನಾಗಿ ನೋಡದೆ ಅದರ ಸೂಕ್ಷ್ಮ ವಿವರಗಳಲ್ಲಿ ಗ್ರಹಿಸುವ ಕಾರ್ಯಕ್ಕೆ ಚಿತ್ರರಂಗ ಮುಂದಾಗುತ್ತಿದೆ ಎಂದಂತಾಯಿತು. ಅದದೇ ಲವ್ವು- ಸಂಸಾರಗಳ ಸುತ್ತ ರೀಲು ಸುತ್ತುವಿಕೆಯ ಪ್ರಕ್ರಿಯೆಯಿಂದ ತುಸು ಮಗ್ಗುಲಾಗಿ, ರಾಷ್ಟ್ರೀಯ ಭದ್ರತೆಯಂಥ ಗಂಭೀರ ವಿದ್ಯಮಾನವನ್ನು ಕಲೆಯ ಚೌಕಟ್ಟಿನಲ್ಲಿ ಕೂರಿಸುವ ನಿಟ್ಟಿನಲ್ಲಿ ಗಂಭೀರ ಹೆಜ್ಜೆಗಳನ್ನಿಡುವುದು ತುಂಬ ಸಂತಸದ ಸಂಗತಿ. ಇಂಥ ಫಿಲ್ಮಿ ವಿದ್ಯಮಾನಗಳ ಕುರಿತು ಇಷ್ಟೆಲ್ಲ ಯೋಚಿಸುವ ದರ್ದೇನಿದೆ ಎಂದೆನಿಸೀತು. ಆದರೆ ಕಲಾತ್ಮಕ ನಿರ್ಮಿತಿ ಮತ್ತು ಜನರ ಸ್ವೀಕೃತಿಗಳು ದೇಶವೊಂದು ಪ್ರೌಢವಾಗುತ್ತಿರುವುದರ ಸೂಚನೆ.
***
ಉಗ್ರವಾದದಂಥ ಘಟನೆಗಳ ಬಗ್ಗೆ ವಾಸ್ತವದ ಅಂಶಗಳನ್ನೇ ಎತ್ತಿಕೊಂಡು ಅಧ್ಯಯನ ನಡೆಸಿ, ಅವನ್ನೆಲ್ಲ ಉತ್ಪ್ರೇಕ್ಷಿತ ಅನ್ನಿಸದ ರೀತಿಯಲ್ಲಿ ಕಲಾಕೃತಿಗಳನ್ನಾಗಿ ಇಡುವ ಕೆಲಸವನ್ನು ಹಾಲಿವುಡ್ ಪರಿಣಾಮಕಾರಿಯಾಗಿ ಮಾಡಿಕೊಂಡು ಬಂದಿದೆ. ಈ ಹಿಂದಿನ ಅಂಕಣದಲ್ಲಿ ಉಲ್ಲೇಖಿಸಿದ್ದ 'ಜಿರೋ ಡಾರ್ಕ್ ಥರ್ಟಿ' ಅಂಥದೊಂದು ಉತ್ತಮ ಪ್ರಯತ್ನ. ಒಸಾಮಾ ಬಿನ್ ಲಾಡೆನ್‌ನನ್ನು ಹುಡುಕಿ ಹೊಸಕಿದ ಮಿಲಿಟರಿ ಪ್ರಕ್ರಿಯೆ, ಅದಕ್ಕೆ ಬಹುದೊಡ್ಡ ಕಾಣಿಕೆ ನೀಡಿದ ಸಿಐಎಯ ಗೂಢಚಾರಿಕೆಯ ಬರೋಬ್ಬರಿ ಹತ್ತು ವರ್ಷಗಳ ಅವಧಿಯನ್ನು ಚಿತ್ರದಲ್ಲಿ ಸೆರೆ ಹಿಡಿಯುವುದು ಕುಶಾಲಿನ ಮಾತಲ್ಲ. ಒಸಾಮಾನನ್ನು ಹೊಡೆಯುವುದಕ್ಕೆ ತೆಗೆದುಕೊಂಡ ಹತ್ತು ವರ್ಷಗಳ ಅವಧಿಯಲ್ಲಿ ವರದಿಯಾದ ವಿದ್ಯಮಾನಗಳನ್ನು 'ಜಿರೋ ಡಾರ್ಕ್ ಥರ್ಟಿ'ಯ ಚಿತ್ರಕತೆಯೊಂದಿಗೆ ಹೋಲಿಸಿದಾಗ ಎಷ್ಟೊಂದು ಸಾಮ್ಯಗಳು ತೆರೆದುಕೊಳ್ಳುತ್ತವೆ! ಹಾಗೆಯೇ ಗೂಢಚಾರಿಕೆ ಎಂಬುದು ಯಾವ ರೂಪ ಪಡೆದಿದೆ ಎಂಬ ಬಗ್ಗೆಯೂ ಅರಿವಾಗುತ್ತದೆ.
ಈ ಸಿನಿಮಾ ತೆರೆದಿಡುವ ಇತಿಹಾಸದಲ್ಲಿ ಒಸಾಮಾನ ಅಡಗುತಾಣ ಶೋಧಿಸುವ ಬೇಹುಗಾರಿಕೆ ಕೆಲಸದಲ್ಲಿ ಮುಂಚೂಣಿಯಲ್ಲಿ ನಿಂತ ಸಿಐಎ ಏಜೆಂಟ್- ಮಾಯಾ ಎಂಬ ಹೆಸರಿನ ಒಬ್ಬ ಹೆಂಗಸು. ಆಕೆ ತನ್ನೆದುರು ತೆರೆದುಕೊಂಡ ಸಣ್ಣ ಸಣ್ಣ ಮಾಹಿತಿಗಳ ಜಾಡು ಹಿಡಿದು ಆಳ ವಿಶ್ಲೇಷಣೆಗಿಳಿದು ಮುಂದಿನ ಹಾದಿಯನ್ನು ಕಂಡುಕೊಳ್ಳುವ ರೀತಿ, ತನ್ನ ಕೆಲಸದ ಬಗ್ಗೆ ಇರುವ ಅಸೀಮ ನಂಬಿಕೆ, ಪ್ರಾಣಾಪಾಯಕ್ಕೆ ಒಳಗಾಗಿಯೂ ಹಿಮ್ಮೆಟ್ಟದ ಛಾತಿ ಇವೆಲ್ಲ ಮನೋಜ್ಞವಾಗಿ ಚಿತ್ರಿತಗೊಂಡಿವೆ. ಸಿನಿಮಾ ರೋಚಕವಾಗಿರಲಿ ಎಂಬ ಕಾರಣಕ್ಕೆ ಮುಖ್ಯ ಭೂಮಿಕೆಯ ಸಿಐಎ ಏಜೆಂಟ್ ಪಾತ್ರವನ್ನು ಹೆಣ್ಣಾಗಿ ಚಿತ್ರಿಸಿದರೇ ಎಂಬ ಅನುಮಾನಕ್ಕೆ ಉತ್ತರಿಸುವಂತೆ, ಈ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಸಿಐಎನ ಮಾಜಿ ಸ್ಪೈ ಒಬ್ಬಳು ಟೆಲಿಗ್ರಾಫ್‌ಗೆ ಸಂದರ್ಶನ ನೀಡುತ್ತಾಳೆ. ಬುಷ್ ಕಾಲಘಟ್ಟದಲ್ಲಿ ಆರು ವರ್ಷಗಳವರೆಗೆ ಸಿಐಎನಲ್ಲಿದ್ದ ಲಿಂಡ್ಸೆ ಮೊರಾನ್ ಪ್ರಕಾರ, 'ಸಿಐಎದ ಅತಿದೊಡ್ಡ ಸಿಕ್ರೆಟ್ ಅಂದ್ರೆ ಅಲ್ಲಿ ಬೆಸ್ಟ್ ಎಂದು ಪರಿಗಣಿಸುವ ಏಜೆಂಟ್‌ಗಳ ಪೈಕಿ ಹೆಚ್ಚಿನವರು ಮಹಿಳೆಯರು. ಏಕೆಂದರೆ ಮಾಹಿತಿಯನ್ನು ಹೊರತೆಗೆಯುವುದರಲ್ಲಿ ಹೆಂಗಸರೆ ನಿಪುಣರು. ಜನರನ್ನು ಕೊಲ್ಲುವುದೋ, ಬಾಯ್ಬಿಡಿಸುವುದಕ್ಕೆ ಹಿಂಸಿಸುವುದೋ ಅಲ್ಲ. ಅವರೊಂದಿಗೆ ಸ್ನೇಹ ಸಾಧಿಸಿ ಬೇಕಾದ ಮಾಹಿತಿ ಪಡೆಯುವುದು ಸವಾಲು. ನನಗೆ ಮೆಸೆಡೋನಿಯಾ ಮತ್ತು ಇರಾಕ್‌ಗಳ ಮೂಲಗಳು ತಮ್ಮ ಜೀವಕ್ಕೇ ಎರವಾಗುವ ಮಾಹಿತಿಗಳನ್ನು ಹಂಚಿಕೊಂಡಿದ್ದಕ್ಕೆ ಈ ಸ್ನೇಹವೇ ಕಾರಣ' ಎಂದಿದ್ದಳಾಕೆ!
ಜಿರೋ ಡಾರ್ಕ್ ಥರ್ಟಿಯಲ್ಲಿ ತಲ್ಲಣಕ್ಕೀಡು ಮಾಡುವ ದೃಶ್ಯವೆಂದರೆ ಅಫ್ಘಾನಿಸ್ತಾನದ ಅಮೆರಿಕ ಶಿಬಿರ 'ಕ್ಯಾಂಪ್ ಚಾಪ್‌ಮನ್' ಮೇಲಾದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮಾಯಾಳ ಸಹೋದ್ಯೋಗಿ ಜೆಸ್ಸಿಕಾ ಮರಣಿಸುವುದು. ತನಗೆ ಮಾಹಿತಿ ಒದಗಿಸಲೆಂದು ಬರುತ್ತಿರುವ ಇನ್‌ಫಾರ್ಮರ್‌ಗೆ ಕಾಯುತ್ತಿರುತ್ತಾಳೆ ಜೆಸ್ಸಿಕಾ. ಆಕೆಯ ಸೂಚನೆ ಮೇರೆಗೆ ಗಾರ್ಡ್‌ಗಳೂ ಆಗಂತುಕನ ಕಾರನ್ನು ಒಳಬಿಡುತ್ತಾರೆ. ಅದರಿಂದ ಬಂದಿಳಿದ ಇಬ್ಬರ ಬಳಿ ಜೆಸ್ಸಿಕಾ, ಅಲ್‌ಕೈದಾ ಕುರಿತ ಇಂಟೆಲಿಜೆನ್ಸ್‌ನ ನಿರೀಕ್ಷೆಯಲ್ಲಿದ್ದಾಗಲೇ ಅವರು ತಮ್ಮನ್ನು ಸ್ಫೋಟಿಸಿಕೊಳ್ಳುತ್ತಾರೆ. ಗರ್ಭಿಣಿಯಾಗಿದ್ದ ಜೆಸ್ಸಿಕಾ ಸೇರಿದಂತೆ ಇನ್ನೂ ಆರು ಸಹೋದ್ಯೋಗಿಗಳ ಆಹುತಿ ತೆಗೆದುಕೊಳ್ಳುತ್ತದೆ ಆ ಸ್ಫೋಟ. ಸಿನಿಮಾದಲ್ಲಿ ಚಿತ್ರಿತಗೊಂಡಿರುವ ಈ ವಿದ್ಯಮಾನ ಜೂನ್ 2010ರಲ್ಲಿ 'ಕ್ಯಾಂಪ್ ಚಾಪ್‌ಮನ್'ನಲ್ಲಾದ ದಾಳಿಗೆ ಚೆನ್ನಾಗಿ ಹೋಲುತ್ತದೆ! ಅದರಲ್ಲಿ ಮೃತಳಾದ ಜೆನ್ನಿಫರ್ ಲಿನ್ನೆ ಮ್ಯಾಥ್ಯೂಳನ್ನು ಇಂಟೆಲಿಜೆನ್ಸ್‌ನ ನಿವೃತ್ತ ಅಧಿಕಾರಿಗಳು, 'ಅಲ್‌ಕೈದಾಗೆ ಸಂಬಂಧಿಸಿದಂತೆ ಸಿಐಎನ ಟಾಪ್ ಲೆವಲ್ ಪರಿಣತೆ' ಎಂದೇ ಗುರುತಿಸುತ್ತಾರೆ!
ಅಬೋಟಾಬಾದ್‌ನ ಮನೆಯಲ್ಲೇ ಲಾಡೆನ್ ಇದ್ದಾನೆ ಎಂದು ಮಾಯಾ ದೃಢಪಡಿಸಿ ನೂರು ದಿನಗಳೇ ಕಳೆದರೂ ದಾಳಿಗೆ ಮುಂದಾಗುವುದಿಲ್ಲ. ಏಕೆಂದರೆ ಮತ್ತಷ್ಟು ಖಚಿತ ಪಡಿಸಿಕೊಳ್ಳದೆ ದಾಳಿಗೆ ಆದೇಶ ನೀಡುವುದಕ್ಕೆ ಅಧ್ಯಕ್ಷರು ಒಪ್ಪಿರುವುದಿಲ್ಲ. ಆಗ ಪೊಲಿಯೋ ವ್ಯಾಕ್ಸೀನ್ ಹಾಕುವ ನೆಪ ಮಾಡಿಕೊಂಡು ಕೆಲ ವೈದ್ಯರು ಆ ಮನೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳ ಡಿಎನ್‌ಎ ಮಾದರಿ ತರುತ್ತಾರೆ. ಬೋಸ್ಟನ್‌ನಲ್ಲಿ 2010ರಲ್ಲಿ ಮಡಿದಿದ್ದ ಲಾಡೆನ್ ಸಹೋದರಿಯ ಡಿಎನ್‌ಎ ಮಾದರಿ ಜತೆ ಅದನ್ನು ಪರೀಕ್ಷಿಸುವುದು ಅದರ ಉದ್ದೇಶ. ನಿಜ ವಿದ್ಯಮಾನದಲ್ಲಿ, ಅಲ್ಲಿಗೆ ತೆರಳಿದವರು ಹೆಪಟೈಟಸ್ ಬಿ ಲಸಿಕೆ ಹೆಸರು ಹೇಳಿಕೊಂಡು ಹೋಗಿದ್ದರು ಎಂಬುದನ್ನು ಬಿಟ್ಟರೆ ಉಳಿದಿದ್ದೆಲ್ಲ ಸಿನಿಮಾದಲ್ಲಿ ತೋರಿಸಿದಂತೆಯೇ ನಡೆದಿದೆ. ಸಿನಿಮಾ ಹೇಳಿರದ ಮುಂದುವರಿದ ವಾಸ್ತವ ಏನೆಂದರೆ, ಸಿಐಎಯ ಈ ಕಾರ್ಯಾಚರಣೆಗೆ ಸಹಕರಿಸಿದ್ದ ಶಕೀಲ್ ಅಫ್ರಿದಿಗೆ ದೇಶದ್ರೋಹದ ಆಪಾದನೆ ಮೇಲೆ ಪಾಕಿಸ್ತಾನದ ಕೋರ್ಟ್ 33 ವರ್ಷಗಳ ಜೈಲುವಾಸ ವಿಧಿಸಿದೆ. ಆ ನಂತರದಲ್ಲಿ ನಿಜವಾಗಿ ಆರೋಗ್ಯದ ಕಾರ್ಯಕ್ಕೆ ತೆರಳಿದ ಕಾರ್ಯಕರ್ತರನ್ನೂ ಅಮೆರಿಕದ ಗೂಢಚರರೆಂದು ತಿಳಿದು ಕೊಂದಿರುವ ವಿದ್ಯಮಾನಗಳು ಪಾಕ್‌ನಲ್ಲಿ ಹೇರಳವಾಗಿವೆ.
***
ಒಬ್ಬ ಲಾಡೆನ್‌ನನ್ನು ಮುಗಿಸುವುದಕ್ಕೆ, ಆತನ ಉಗ್ರಜಾಲವನ್ನು ಬಹುಮಟ್ಟಿಗೆ ತಣ್ಣಗಾಗಿಸುವುದಕ್ಕೆ ಅಮೆರಿಕದ ಗೂಢಚಾರ ಪಡೆ ವಹಿಸಿದ ಶ್ರಮ ಎಂಥದ್ದಾಗಿತ್ತು ಎಂಬುದನ್ನು ಮನದಟ್ಟು ಮಾಡಲು ಒಂದು ಸಿನಿಮಾದ ವಿವರಗಳನ್ನು ಇಷ್ಟೆಲ್ಲ ದೀರ್ಘವಾಗಿ ವಿಶ್ಲೇಷಿಸಬೇಕಾಯಿತು.
ಅದಿರಲಿ, ಇನ್ನು ಕೆಲವೇ ವರ್ಷಗಳಲ್ಲಿ ಇಂಥದೇ ಚತುರಮತಿಯನ್ನು ತೋರಬೇಕಾದ ಸಂದರ್ಭ ಭಾರತದ ಗೂಢಚಾರ ಪಡೆಗೂ ಬರಲಿದೆ! ಏಕೆಂದರೆ ಅಮೆರಿಕವು ಗಾಂಧಾರಿಯ ನೆಲ ಅಫ್ಘನ್‌ನಿಂದ ಸೇನೆಯನ್ನು ನಿಧಾನವಾಗಿ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ. ಬಂದಿದ್ದ ದೊಡ್ಡ ಕೆಲಸವೊಂದು ಮುಗಿದಿರುವುದರಿಂದ ಅಫ್ಘಾನಿಸ್ತಾನದಲ್ಲಿ ಒಂದು ಮಟ್ಟದ ಪ್ರಭಾವವನ್ನಷ್ಟೆ ಇರಿಸಿಕೊಂಡು ಸೇನೆಯ ಉಪಸ್ಥಿತಿ ಕಡಿಮೆಗೊಳಿಸುವ, ಆ ಮೂಲಕ ತನ್ನ ಅರ್ಥವ್ಯವಸ್ಥೆ ಬಗ್ಗೆ ಹೆಚ್ಚಿನ ಗಮನ ವಹಿಸುವ ನಿರ್ಧಾರ ಅಮೆರಿಕದ ಮುಖದಲ್ಲಿ ಬಿಂಬಿತವಾಗುತ್ತಿದೆ. ಭದ್ರತಾ ಪರಿಣತರ ಅಭಿಪ್ರಾಯದಂತೆ ಇದರ ಗಂಭೀರ ಪರಿಣಾಮ ಎದುರಿಸಬೇಕಿರುವುದು ಭಾರತವೇ. ಇಷ್ಟು ದಿನ ಇಸ್ಲಾಂ ತೀವ್ರವಾದಿ ಶಕ್ತಿಗಳ ಒಟ್ಟೂ ಗಮನ ಇದ್ದದ್ದು ಅಫ್ಘಾನಿಸ್ತಾನದ ಎದೆ ಮೇಲೆ ಬಂದು ಕುಳಿತಿದ್ದ ಅಮೆರಿಕವನ್ನು ಸೆಣೆಸುವುದರ ಬಗ್ಗೆ. ಈಗಲ್ಲಿ ತುಸು ನಿರಾಳ ಒದಗುತ್ತಿದ್ದಂತೆ ಎಲ್ಲ ಜಿಹಾದಿ ಶಕ್ತಿಗಳೂ ತಮ್ಮ ಸೈತಾನದೃಷ್ಟಿಯನ್ನು ತಿರುಗಿಸುವುದು ಹಿಂದೂಸ್ತಾನದ ಕಡೆಗೇ ಎಂಬ ಬಗ್ಗೆ ಯಾರಿಗಿದೆ ಅನುಮಾನ? ಬಾಂಬ್ ಸ್ಫೋಟಗಳೇ ದಿನಚರಿ ಎನ್ನಿಸುವ ರಕ್ತಸಿಕ್ತ ಅಧ್ಯಾಯವೊಂದು ಭರತ ಭೂಮಿಯ ಮೇಲೆ ತೆರೆದುಕೊಳ್ಳಲಿದೆಯೇ? ಸಾಧ್ಯತೆಗಳಂತೂ ದಟ್ಟ.
ಇದಕ್ಕೆ ಉತ್ತರವಾಗಿ ಪಾಕಿಸ್ತಾನದ ಮೇಲೆಯೋ, ಅಫ್ಘನ್ ವಿರುದ್ಧವೋ ದಂಡೆತ್ತಿ ಹೋಗುವ ಸ್ಥಿತಿಯಲ್ಲಂತೂ ಭಾರತವಿಲ್ಲ. ಈ ದೇಶದ ಮುಂದಿರುವ ಏಕೈಕ ಆಯ್ಕೆ 'ಪರೋಕ್ಷ ಗೌಪ್ಯ ಸಮರ'. ಇಂಟೆಲಿಜೆನ್ಸ್‌ನ ಚಾಣಕ್ಯರು ನಮ್ಮಂಥ ಸಾಮಾನ್ಯರ ಊಹೆಗಳಿಗೆ ನಿಲುಕದಂತೆ ಸೆಣೆಸುವ ಮಹಾ ಸಮರವಿದು! ನಮ್ಮುಸಿರುಗಳನ್ನು ಕಾಯಲಿದ್ದಾರೆ ಹೆಸರೇ ಇಲ್ಲದ ಧೀಮಂತರು.
ನಮ್ಮ ಗೂಢಚಾರ ಪಡೆಗೆ ಆ ಶಕ್ತಿ ಇದೆಯಾ ಎಂಬ ಸಂದೇಹವೇ? 1971ರಲ್ಲಿ ಬಾಂಗ್ಲಾ ವಿಮೋಚನೆಗಾಗಿ ಭಾರತ ಯುದ್ಧಕ್ಕಿಳಿದಾಗ ಪಾಕಿಸ್ತಾನದ ಪರವಾಗಿ ಅಮೆರಿಕ ಗುಟುರು ಹಾಕಿತ್ತು. ಅಮೆರಿಕದ ನೌಕೆಗಳು ಸಮುದ್ರ ತಟಕ್ಕೆ ಬಂದು ನಮಗೆ ಬೆದರಿಕೆ ಒಡ್ಡುವ ಮೊದಲೇ ಯುದ್ಧ ಮುಗಿದು ಭಾರತ ವಿಜಯದ ನಗೆ ಹೊಮ್ಮಿಸಿತ್ತು. ಈ ಸಮರದಲ್ಲಿ ಸೇನೆಯ ಕರಾರುವಾಕ್ ದಾಳಿಗೆ ಸಹಾಯ ಒದಗಿಸಿದ್ದು 'ರಾ'ದ ನಿಖರ ಗುಪ್ತಚರ ಮಾಹಿತಿ. ಆಗಿನ ಪೂರ್ವ ಪಾಕಿಸ್ತಾನದಲ್ಲಿದ್ದ ಪಾಕ್ ವಿರೋಧಿ ಪಾಳಯವನ್ನು ಬಲಪಡಿಸಿ ಭಾರತಕ್ಕೆ ಲಾಭವಾಗುವಂತೆ ನೋಡಿಕೊಂಡಿರುವುದರಲ್ಲಿ 'ರಾ' ಏಜೆಂಟ್‌ಗಳ ಅನುಪಮ ಕೊಡುಗೆಯಿದೆ. 1975ರಲ್ಲಿ ಸಿಕ್ಕಿಂ ಈ ದೇಶದಲ್ಲಿ ವಿಲೀನವಾಗುವಂತೆ ಮಾಡಿದ್ದು, ಅಪ್ಘಾನಿಸ್ತಾನದಲ್ಲಿ ಭಾರತದ ಪ್ರಭಾವ ಹೆಚ್ಚುವಂತೆ ನೋಡಿಕೊಂಡಿದ್ದು ಇವೆಲ್ಲದರಲ್ಲೂ ಇದೆ 'ರಾ' ಕೊಡುಗೆ.
ದೆ ವಿಲ್ ಫೈಟ್ ಆ್ಯಂಡ್ ದೆ ಆರ್ ದಿ ಬೆಸ್ಟ್. ಆದರೆ ಆ ಕಾಲದಲ್ಲಿ ಅವರಿಗೆ ದೃಢ ಬೆಂಬಲ ನೀಡುವ ಧಾಡಸಿ ರಾಜಕೀಯ ನಾಯಕತ್ವವೊಂದು ದೆಹಲಿ ಗದ್ದುಗೆಯಲ್ಲಿರಬೇಕಾದದ್ದು ಅವಶ್ಯ. ಅಂಥ ನಾಯಕ ಯಾರೆಂದು ಅರಿತು ಅವನ ಪರವಾಗಿ ನಮ್ಮ ಪ್ರಾರ್ಥನೆ ಮತ್ತು ಮತಗಳನ್ನು ಮುಡುಪಿಡುವುದೇ ನಾವು ಸಲ್ಲಿಸಬಹುದಾದ ಕಾಣಿಕೆ.
- ಚೈತನ್ಯ ಹೆಗಡೆ
cchegde@gmail.com