ಅಕ್ರಮಗಳೆಲ್ಲ ಸಕ್ರಮಗಳೆಂದಾದರೆ ದೇಶದ ಗತಿಯೇನು?
ಕರಣ ಎನ್ನುವ ಸಂಸ್ಕೃತ ಶಬ್ದಕ್ಕೆ ಇರುವ ಹಲವಾರು ಅರ್ಥಗಳ ಪೈಕಿ ಕಾರ್ಯ, ಕೆಲಸ ಎಂಬ ಅರ್ಥಗಳೂ ಇವೆ. ಮನುಷ್ಯರಿಂದ ಆಗುವಂಥ ಯಾವುದೇ ಕಾರ್ಯ ಅಥವಾ ಕೆಲಸವನ್ನು
ಕರಣ ಎನ್ನುವ ಸಂಸ್ಕೃತ ಶಬ್ದಕ್ಕೆ ಇರುವ ಹಲವಾರು ಅರ್ಥಗಳ ಪೈಕಿ ಕಾರ್ಯ, ಕೆಲಸ ಎಂಬ ಅರ್ಥಗಳೂ ಇವೆ. ಮನುಷ್ಯರಿಂದ ಆಗುವಂಥ ಯಾವುದೇ ಕಾರ್ಯ ಅಥವಾ ಕೆಲಸವನ್ನು ಕರಣ ಎಂದು ಹೇಳುವುದಿದೆ. ಒಟ್ಟಾರೆ ಮನುಷ್ಯಕೃತ ಎನ್ನುವುದನ್ನು ಕರಣ ಎಂದಿಟ್ಟುಕೊಂಡು ಮುಂದವರಿಯಬಹುದು. ವಾಸ್ತವವಾಗಿ ತಿಳಿದಿರುವಂತೆ ನಗರೀಕರಣ, ಡಾಂಬರೀಕರಣ, ಸಬಲೀಕರಣ, ವ್ಯಾಪಾರೀಕರಣ, ಜಾಗತೀಕರಣ, ಕಂಪ್ಯೂಟರೀಕರಣ, ವಸಾಹತೀಕರಣ, ಇನ್ನೂ ಇನ್ನೂ ಅನೇಕ ಕರಣ ಬಳಗದ ಶಬ್ದಗಳನ್ನು ನಾವು ಮನಗಾಣಬಹುದು. ಪ್ರಕೃತಿಬದ್ಧವಾದ, ನಿಸರ್ಗ ಸಹಜ ಪ್ರಕ್ರಿಯೆಗಳನ್ನು, ವಿದ್ಯಮಾನಗಳನ್ನು, ಸಂಸ್ಕೃತದಲ್ಲಿ ಭವನ ಎಂಬ ಪದದಿಂದ ಹೇಳುವುದಿದೆ. ಇಲ್ಲೂ ಭವನ ಎಂಬುದಕ್ಕೆ ಹಲವಾರು ಅರ್ಥಗಳುಂಟು. ಮನುಷ್ಯರ ಕೈವಾಡ ಇಲ್ಲದಿರುವ ವಿದ್ಯಮಾನಗಳನ್ನು ಭವನ ಎಂಬ ಉತ್ತರ ಪ್ರತ್ಯಯ ಸೇರಿ ಹೇಳುವುದಿದೆ. ಉದಾ: ಬಾಷ್ಪೀಭವನ (ಎವಾಪೊರೇಷನ್), ವಕ್ರಿಭವನ (ರಿಫ್ರ್ಯಾಕ್ಷನ್) ಇತ್ಯಾದಿ. ಇಂಥವೆಲ್ಲ ನಿಸರ್ಗ ಸಹಜವಾದ ವಿದ್ಯಮಾನಗಳು. ಆ ಮಾತು ಬೇರೆ. ಇರಲಿ...
ಮನುಷ್ಯಕೃತ ವಿದ್ಯಮಾನಗಳಾದ ಹಲವಾರು ಕರಣಗಳ ಜತೆಗೆ ಈಗಿನ ಸಾಮಾಜಿಕ, ಆರ್ಥಿಕ, ರಾಜಕೀಯ ಸಂಬಂಧೀ ಕೆಲಸ, ಕಾರ್ಯಗಳನ್ನೂ ನಾವು ಉದಾಹರಿಸಬಹುದು. ಇಂಥಲ್ಲೆಲ್ಲ ವಿಧಿ- ನಿಯಮಗಳಿಗೆ ಅನುಸಾರವಾಗಿ ಕೆಲವು ಕೆಲಸ ಕಾರ್ಯಗಳು ನಡೆಯುತ್ತವೆ. ಮತ್ತೆ ಕೆಲವು ವಿಧಿ ನಿಯಮಗಳನ್ನು ಉಲ್ಲಂಘಿಸಿ 'ಅನುಕೂಲಸಿಂಧು' ಎಂಬ ಶೀರ್ಷಿಕೆಯ ಅಡಿಯಲ್ಲಿ ಇಟ್ಟು ಕಾರ್ಯರೂಪಕ್ಕೆ ತರುವುದಿದೆ. ವಿದ್ಯಾವಂತರೂ, ಗುಣಗ್ರಾಹಿಗಳೂ, ಸಚ್ಚಾರಿತ್ರರೂ ಆದ ಮಂದಿ ಇಂಥ ಉಲ್ಲಂಘನಾಬದ್ಧ ಕೆಲಸ ಕಾರ್ಯಗಳನ್ನು ಅಕ್ರಮ ಎಂಬ ಶಬ್ದದ ವ್ಯಾಖ್ಯೆಯ ಅಡಿಯಲ್ಲಿ ಸೇರಿಸಿರುತ್ತಾರೆ. ಕೆಲಸ ಕಾರ್ಯಗಳು ಕಾರ್ಯರೂಪಕ್ಕೆ ಬಂದಾಗ ಅಲ್ಲಿ ಜರುಗಿರಬಹುದಾದ ಅಕ್ರಮ ಸನ್ನಿವೇಶಗಳು ಬೆಳಕಿಗೆ ಬರುತ್ತವಷ್ಟೇ. ಗೌಪ್ಯವಾಗಿ ನಡೆದಿರಬಹುದಾಗ, ಮೇಲ್ನೋಟಕ್ಕೆ ಸರಿಯಾಗಿದೆ ಎಂದು ಕಾಣಿಸುವ ವಿದ್ಯಮಾನಗಳ ಕುರಿತು ಹೇಳುವ ಮತ್ತೊಂದು ಪದ 'ಹಗರಣ'. ಇಂಥ ಹಗರಣಗಳ ಹಿಂದೆ ನಡೆದಿರುವ ಅಕ್ರಮ ಕಾರ್ಯಚಟುವಟಿಕೆಗಳು, ವಿಧಿನಿಯಮಗಳನ್ನು ರೂಪಿಸುವವರೇ ಅವನ್ನು ಸ್ವಹಿತಕ್ಕಾಗಿ ಉಲ್ಲಂಘಿಸಿ, ಸ್ವಪಕ್ಷಪಾತ, ಪರಹಿತವಂಚನೆಗಳ ಹಿನ್ನೆಲೆಯಲ್ಲಿ ಕಾರ್ಯರೂಪಕ್ಕೆ ತಂದಿರುವುದುಂಟು. ಇಂತಹ ಕೆಲಸ ಕಾರ್ಯಗಳನ್ನು ಅಕ್ರಮೀಕರಣ ಎಂದು ಬೇಕಾದರೂ ಕರೆಯಬಹುದು. ಇಂಥ ಹಲವಾರು ಅಕ್ರಮ ಕೆಲಸ ಕಾರ್ಯಗಳ ಬಗ್ಗೆ ಜನಸಾಮಾನ್ಯರು ಈಗೀಗ ವೃತ್ತ ಪತ್ರಿಕೆಗಳು, ದೃಶ್ಯಮಾಧ್ಯಮಗಳ ಮೂಲಕ ಅರಿವು ಮೂಡಿಸಿಕೊಳ್ಳುತ್ತಲೇ ಇದ್ದಾರೆ. ವಿಧಿ-ವಿಧಾನಗಳನ್ನು ಅನುಸರಿಸಿ ನಡೆಸುವ ಯಾವುದೇ ಕೆಲಸಕ್ಕೂ ಸಮಾಜವಾದದ ಅಸ್ತು ಇದ್ದೇ ಇರುತ್ತದೆ. ಆದರೆ ವಿಧಿವಿಧಾನಗಳನ್ನು ಮೂಲೆಗೊತ್ತಿ, ಅನುಮತಿ-ಅನುಮೋದನೆ-ರಹದಾರಿ-ಪರವಾನಿಗೆ ಮುಂತಾದವು ಇಲ್ಲದೆಯೇ ಮಾಡುವ ಅಕ್ರಮ ಚಟುವಟಿಕೆಗಳು ಇತ್ತೀಚೆಗೆ ಹೇರಳವಾಗಿ ಕಾಣಬರುತ್ತವೆ. ಅಂಥವಲ್ಲಿ ಅಕ್ರಮ ಗಣಿಗಾರಿಕೆ, ಅಕ್ರಮ ಅದುರು ಸಾಗಾಣಿಕೆ, ಅಕ್ರಮ ಉದ್ಯಮಕ್ಕೆ ಅನುಮತಿ, ಅಕ್ರಮ ನೇಮಕಾತಿ, ಅಕ್ರಮ ಪ್ರವೇಶಾತಿ, ಪ್ರಭಾವೀ ವ್ಯಕ್ತಿಗಳ ಕೈವಾಡ, ಲಂಚ ಪ್ರಕರಣ ಇತ್ಯಾದಿಗಳು ಮೈದಳೆದಿವೆ. ನೆಲ-ಭೂಮಿಗಳ ಅಕ್ರಮ ಒತ್ತುವರಿ ಇದಕ್ಕೆ ಅಪವಾದವೇನಲ್ಲ. ಪರೀಕ್ಷೆಯಲ್ಲಿ ಉತ್ತೀರ್ಣರನ್ನಾಗಿ ಮಾಡುವುದು, ಮೋಸ-ವಂಚನೆ-ಪಾತ್ರಧಾರಿತ್ವ ಮುಂತಾದವುಗಳೂ ಅಕ್ರಮ ಚಟುವಟಿಕೆಗಳ ವ್ಯಾಪ್ತಿಯಲ್ಲೇ ಬರುವಂಥವು.
ಹಾಗಾದರೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ, ನಿರ್ಮೂಲ ಮಾಡುವ ವಿಧಾನಗಳುಂಟು ಎನ್ನುತ್ತೇವಲ್ಲ? ಆದರೆ ಇವನ್ನು ಬದಿಗೊತ್ತಿ ಅವನ್ನು ಸಕ್ರಮಗೊಳಿಸುವ ಸಕ್ರಮೀಕರಣ ಎಂಬ ನೂತನ ಪರಿಹಾರ ವಿಧಾನವೂ ಮೈದಳೆಯುತ್ತಿದೆ. ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿ, ಭಾಜನರಾಗುವ ವ್ಯಕ್ತಿಯನ್ನು ಗುರುತಿಸಿ ಆ ವ್ಯಕ್ತಿಯನ್ನು ಆತ ಅಲಂಕರಿಸಿರುವ ಸ್ಥಾನದಿಂದ ತೆಗೆದು ಹಾಕುವುದು, ಇಲ್ಲವೆ ಆತನಿಂದಲೇ ಆ ಸ್ಥಾನಕ್ಕೆ ರಾಜಿನಾಮೆ ಪಡೆಯುವುದು ನಡೆದು ಬಂದಿದೆ. ತಾವು ಮಾಡಿದ ಅಕ್ರಮ ಚಟುವಟಿಕೆ ಸಾಬೀತಾದರೆ ತಾವೇ ಖುದ್ದು ಚಟುವಟಿಕಾ ಸಂನ್ಯಾಸವನ್ನು (ರಾಜಕೀಯ ಸಂನ್ಯಾಸ, ಕೌಟುಂಬಿಕ ಸಂನ್ಯಾಸ ಇತ್ಯಾದಿ) ಸ್ವೀಕರಿಸುವೆ ಎಂತಲೇ ಹೇಳುವಂಥ ಸಂದರ್ಭಗಳೂ ಪರಿಚಿತವಾಗಿವೆ. ಹಗರಣಗಳ ಹಿನ್ನೆಲೆಯಲ್ಲಿನ ಅಕ್ರಮಗಳಿಗೆ ಕಾರಣರಾದ ವ್ಯಕ್ತಿಯ ಮೇಲೆ ಆಪಾದನೆ ಹೊರೆಸುವುದು ಒಂದು ಹಂತ. ಆ ವ್ಯಕ್ತಿಯನ್ನು ರಕ್ಷಿಸಲು ಪರಿಶೀಲನಾ ಸಮಿತಿಗಳನ್ನೋ, ಏಕಸದಸ್ಯ ಪೀಠವನ್ನೋ ಏರ್ಪಡಿಸಿ ವಿಚಾರಣೆಯನ್ನು ನಡೆಸುವುದು ಇನ್ನೊಂದು ಹಂತ. ವಿಚಾರಣೆಯ ವರದಿ ಹೊರಬಂದು ಅಕ್ರಮ ಕಾರ್ಯಾಚರಣೆ ಊರ್ಜಿತಗೊಂಡಾಗಲೂ ಆ ವ್ಯಕ್ತಿಯ ಮೇಲೆ ಕ್ರಮ ತೆಗೆದುಕೊಳ್ಳುವುದರಲ್ಲಿ ವಿಳಂಬ ಉಂಟು ಮಾಡುವುದು ಇನ್ನೊಂದು ಹಂತ. ಈ ಹಂತಗಳು ಮೈದಳೆದು ಅಂತಿಮವಾಗಿ ಕ್ರಮ ಜರುಗಿಸುವುದರ ಅವಧಿ ಬಹಳ ದೀರ್ಘವಾಗಿರುತ್ತದೆ. ಹೀಗಾಗಿ ಸಾರ್ವಜನಿಕರ ಜ್ಞಾಪಕಶಕ್ತಿ ಬಹಳ ಅಲ್ಪಾವಧಿಯದು ಎಂಬ ಹೇಳಿಕೆಯ ಅನುಸಾರ ಎಲ್ಲ ಅಕ್ರಮ ಕಾರ್ಯಾಚರಣೆಗಳೂ ಮರೆತು ಹೋಗುತ್ತವೆ. ಒಟ್ಟಾರೆ ಅಕ್ರಮೀಕರಣ ಎನ್ನುವುದು ಸಹಜವಾಗಿಯೇ ಸಕ್ರಮೀಕರಣದ ವ್ಯಾಪ್ತಿಯಲ್ಲಿ ಬಂದು ಹೋಗಿರುತ್ತದೆ.
ಈಗಿನ ವಿದ್ಯಮಾನಗಳನ್ನು ಗಮನಿಸಿದಾಗ ಈ ಮೇಲಿನ ಹಂತಗಳನ್ನು ರೂಢಿಸಿಕೊಳ್ಳುವುದು ಮಾತ್ರವಲ್ಲದೆ ಸಕ್ರಮೀಕರಣದ ಇನ್ನಿತರ ವಿಧಿವಿಧಾನಗಳೂ ಇಲ್ಲದಿಲ್ಲ. ಹೆಸರಿಗೆ ಮಾತ್ರ ಬಂಧನ, ವಿಚಾರಣೆ, ಪರಿಶೀಲನೆ, ವರದಿ ಮಂಡನೆ ಮುಂತಾದ ಪ್ರಕ್ರಿಯೆಗಳು ನಡೆದರೂ ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲದಿರುವುದರಿಂದ ಆರೋಪಿಯನ್ನು ಖುಲಾಸೆ ಮಾಡುವ ಸನ್ನಿವೇಶಗಳು ಇದ್ದಿಲ್ಲವೇ? ವಾಸ್ತವತೆಯ ಕಣ್ಣಿಗೆ ಸಾಕ್ಷ್ಯಾಧಾರ ಎಂಬ ಮಣ್ಣನ್ನು ಎರಚಿ ಪ್ರಕರಣವನ್ನು ಮುಕ್ತಾಯಗೊಳಿಸುವುದು ನಡೆದಿದೆ. ಇನ್ನು ನೇಮಕಾತಿ, ಪ್ರವೇಶ, ಉತ್ತೀರ್ಣಗಳ ವಿಚಾರದಲ್ಲಿ ಮೋಸ-ವಂಚನೆ-ಲಂಚ ರುಶುವತ್ತುಗಳ ರೂಪದಲ್ಲಿ ಅಕ್ರಮವನ್ನು ಸಕ್ರಮಗೊಳಿಸುವ ಚಾಲಾಕಿತನವನ್ನೂ ಸಮಾಜ ಕಂಡುಕೊಂಡಿದೆ. ಹಾಗಲ್ಲದಿದ್ದ ಪಕ್ಷಕ್ಕೆ ಲೋಕಾಯುಕ್ತ ಆಡಳಿತದ ಸ್ಥಾಪನೆ ತಾನೇ ಏಕೆ ಆಗಬೇಕಾಗಿತ್ತು? ಆಸ್ಪತ್ರೆಗಳು ಇರುವುದರಿಂದಲೇ ರೋಗಗ್ರಸ್ತರ ಇರುವಿಕೆ ಸ್ಥಿರಪಡುತ್ತದಲ್ಲವೆ?
ಅಕ್ರಮ ಸನ್ನಿವೇಶಗಳಿಗೆ ಮತ್ತೊಂದು ನಿದರ್ಶನ ಎಂದರೆ ಗೊತ್ತುಪಡಿಸಲಾಗಿರದ, ಮತ್ತೊಬ್ಬರಿಗೆ ಸೇರಿದ ನೆಲದ ಮೇಲೆ ವಾಸದ ಮನೆಗಳನ್ನೋ, ಉದ್ದಿಮೆಗಳನ್ನೋ ಸ್ಥಾಪಿಸಿಕೊಳ್ಳುವುದು. ಬಹಳ ವರ್ಷಗಳು ಕಳೆದ ಬಳಿಕ ಆಡಳಿತಾರೂಢರೇ ಸೃಷ್ಟಿಸಿರುವ ಸಕ್ರಮ ಕಾರ್ಯಾಚರಣೆ ಅಡಿಯಲ್ಲಿ ಅವರು ಕೇಳುವ ದಂಡ ಶುಲ್ಕ ಕಂದಾಯ ನೀಡಿ, ಉತ್ತರಪತ್ರಗಳನ್ನು ಪಡೆದು ಸಕ್ರಮಗಳಿಸಿಕೊಂಡರಾಯಿತು ಎಂಬ ಮನೋಭಾವ. ನೀರಿನ ಸಂಪರ್ಕ, ವಿದ್ಯುತ್ತಿನ ಸಂಪರ್ಕ ಮೊದಲಾದವುಗಳಲ್ಲಿ ಈ ಸಕ್ರಮೀಕರಣ ತಾಂಡವವಾಡುತ್ತಿರುವುದನ್ನು ನಾವು ಕಾಣಬಹುದು.
ಮನುಷ್ಯನಾಗಿ ಭೂಮಿ ಮೇಲೆ ಅವತರಿಸಿದ ಮೇಲೆ ಏನೇನು ಕಂಡೆ ಎಂಬ ಮಾತೊಂದು ಉಂಟು. ಅಂತೆಯೇ ಬಂದ ಮೇಲೆ ಏನೇನೆಲ್ಲವನ್ನೂ ಮಾಡಿದೆ ಎಂಬುದಕ್ಕೆ ಉತ್ತರ ಕೆಲವೊಂದು ನ್ಯಾಯ ಸಮ್ಮತವಾದದ್ದೂ, ಸರ್ವಜನಹಿತ ಕಾಪಾಡುವಂಥದ್ದೂ, ಆದರ್ಶ ಪ್ರಾಯವೆನಿಸುವಂಥದ್ದೂ ಇರುವುದರ ಜತೆಗೆ ಅಕ್ರಮೀಕರಣದಲ್ಲಿ ಪಾಲ್ಗೊಂಡಿದ್ದರ ಸನ್ನಿವೇಶಗಳೂ ಇರುತ್ತವೆ. ಮೊದಲನೆಯ ವರ್ಗಕ್ಕೆ ಸೇರಿದ ಮಹಾಮಹಿಮರು ದೇಶದ ಉತ್ಕರ್ಷೆಗೆ ಕಾರಣರಾದರು. ಎರಡನೆಯ ವರ್ಗಕ್ಕೆ ಸೇರಿದವರು ದೇಶಕ್ಕೆ ಕಳಂಕ ತಂದವರು. ದೇಶದ ಪರಿಸ್ಥಿತಿ ಹೀಗೇ ಮುಂದುವರಿದರೆ, ನಡೆಸಿದ ಅಕ್ರಮಗಳೆಲ್ಲ ಸಕ್ರಮಗಳೆಂದಾದರೆ ದೇಶದ ಮುಂದಿನ ಇತಿಹಾಸದ ಪುಟಗಳಲ್ಲಿ ದಾಖಲಾಗುವ ಸಂಗತಿಗಳನ್ನು ಮುಂದಿನ ಪೀಳಿಗೆ ಸಹಿಸಿಕೊಳ್ಳುವುದಾದರೂ ಹೇಗೆ? ಸದ್ಯ ಅಶ್ಲೀಲ ಚಟುವಟಿಕೆಗಳನ್ನೂ ಸಕ್ರಮಗೊಳಿಸುವ ವಿಧಾನವನ್ನು ಸಮಾಜ ಕಂಡುಕೊಂಡಿಲ್ಲ ಎನ್ನಬಹುದೇ? 'ಕಾಲಾಯ ತಸ್ಮೈ ನಮಃ' ಎಂದು ಹೇಳಿ ಸಮಾಧಾನ ಪಟ್ಟುಕೊಳ್ಳಬೇಕಷ್ಟೇ!
-ಪ್ರೊ.ಎಸ್. ರಾಮಪ್ರಸಾದ್
ಸಂಪಾದಕರು
ಸವಿಗನ್ನಡ ಪಾಕ್ಷಿಕ