ನೀವು ಸ್ಕೂಟಿ ತೊಗೊಂಡ್ರೆ, ನಾವೇನ್ರಿ ಮಾಡೋಣ?
ಖಂಡಿತಾ ಇದು ನನ್ನ ಪ್ರಾಮಾಣಿಕ ಪ್ರಶ್ನೆ. ಅಷ್ಟೇ ಪ್ರಾಮಾಣಿಕ ಉತ್ತರವನ್ನು ತಾವು ನೀಡುವಿರೆಂಬ ಭರವಸೆ ಇದೆ. ಪ್ರಣತಿಯವರ...
ಖಂಡಿತಾ ಇದು ನನ್ನ ಪ್ರಾಮಾಣಿಕ ಪ್ರಶ್ನೆ. ಅಷ್ಟೇ ಪ್ರಾಮಾಣಿಕ ಉತ್ತರವನ್ನು ತಾವು ನೀಡುವಿರೆಂಬ ಭರವಸೆ ಇದೆ. ಪ್ರಣತಿಯವರ ಕೆಲವು ಲೇಖನಗಳನ್ನು ಓದಿದಾಗ, ನನಗನ್ನಿಸಿದ್ದು ಇದು: "ಪ್ರೀತಿ ಪ್ರೇಮ ಪ್ರಣತಿ" ಅಂಕಣಕ್ಕಾಗಿ ಪ್ರಣತಿಯವರನ್ನು ಆಯ್ಕೆ ಮಾಡಿಕೊಂಡದ್ದೋ? ಅಥವಾ ಪ್ರಣತಿಗಾಗಿ ಈ ಅಂಕಣವನ್ನು ಸೃಷ್ಟಿಸಿದ್ದೋ? ಈ ಪ್ರಶ್ನೆ ಬಹುಶಃ ಇನ್ನಿತರ ಓದುಗರಿಗೂ ಕಾಡಿರಬಹುದು. ಏಕೆಂದರೆ ದಿನಾಂಕ 26.05.13ರ ಲೇಖನದುದ್ದಕ್ಕೂ ನಿಸ್ತೇಜ ಹಾಗೂ ನೀರಸ ವಸ್ತುವನ್ನು ತೆಗೆದುಕೊಂಡು ಪತ್ತೆದಾರಿ ಕಾದಂಬರಿಯ ಮೆರುಗು ನೀಡಿ, ತಮ್ಮ ಹೊಸ 'ಸ್ಕೂಟಿ'ಯನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಅದರ ಅಗತ್ಯವಿರಲಿಲ್ಲ. ಅವರು ಸ್ಕೂಟಿ ತೆಗೆದುಕೊಂಡರೆ, ನಾವೇನು ಮಾಡಬೇಕು? ಇಷ್ಟು ಸಾಲದೆಂಬಂತೆ 'ಬಾಯ್ಫ್ರೆಂಡ್' ಎಂಬ ಬಾಡಿಗೆ ಶೋಕಿಯ ತಮ್ಮ ಮನಸ್ಸಿನ ಬಯಕೆಯನ್ನು ಬೇರೆ ರೀತಿಯಲ್ಲಿ ಬಿಂಬಿಸಿರುವುದು ಅವರಿಗೆ ಸಂಬಂಧಿಸಿದ ವಿಷಯವಾದರೂ, ಅದರ ಅಗತ್ಯ ಯಾವೊಬ್ಬ ಓದುಗರಿಗೂ ಇರಲಾರದು ಎಂಬುದು ನನ್ನ ಅಭಿಪ್ರಾಯ. ಇಷ್ಟಕ್ಕೂ ಅವರ ವೈಯಕ್ತಿಕ ಆದರ್ಶ ಹಾಗೂ ಭಾವನೆಗಳು ಸಮಾಜಮುಖಿ ಅಥವಾ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದರೆ ಪರವಾಗಿಲ್ಲ. ಆದರೆ ಇದು ಪ್ರಬುದ್ಧ ಲೇಖನವೋ, ಪ್ರಮೋದ ಲೇಖನವೋ ಅಥವಾ ಪ್ರಮಾದ ಲೇಖನವೋ? ಅದರ ಅನಿವಾರ್ಯತೆ ಕನ್ನಡಪ್ರಭಕ್ಕೆ ಅಷ್ಟೊಂದು ಇದೆಯಾ ಎನಿಸಿತು.
-ಮಾಗಡಿ ಶ್ರೀನಿವಾಸ್, ಬಾಳೆಕಟ್ಟೆ, ರಾಮನಗರ ಜಿಲ್ಲೆ
ಮೇ 19 ಭಾನುವಾರದ ಕನ್ನಡಪ್ರಭದ ಸಂಪಾದಕರ ಸರದಿ ಅಂಕಣದಲ್ಲಿ ಮೂಡಿ ಬಂದ ಮುದ್ದು ತೀರ್ಥಹಳ್ಳಿಯವರ ಬರಹ 'ತಲೆಯಲ್ಲಿ ಕೂದಲಿಲ್ಲದಿದ್ದರೂ ವಿಗ್ಗಿಗೆ ಮಲ್ಲಿಗೆ ಹೂ' ಸೊಗಸಾಗಿತ್ತು. ಬೆಳ್ಳಂಬೆಳಗ್ಗೆ ಬಿಸಿಬಿಸಿ ಕಾಫಿ ಹೀರುತ್ತಾ ಪೇಪರ್ ನೋಡ್ತಾ ಇದ್ದ ನಾನು ಈ ಲೇಖನ ಓದ್ತಾ, ಓದ್ತಾ ನಗು ತಡೆಯಲಾಗದೆ ಬಿಸಿ ಕಾಫಿ ಗಂಟಲಲ್ಲೇ ಸಿಕ್ಕಿ ಹಾಕಿಕೊಂಡು ನೆತ್ತಿ ಹತ್ತಿ, ನನ್ನ ನಗುವಿನ ಆರ್ಭಟಕ್ಕೆ ನಲುಗಿ ಕೈನಲ್ಲಿದ್ದ ಕಾಫಿ ಲೋಟ ಅಲ್ಲಾಡಿ ಅಲ್ಲಾಡಿ ಮೈ ಮೇಲೆಲ್ಲಾ ಕಾಫಿ ಸುರಿದುಕೊಂಡು ಬಿಟ್ಟೆ! ತಲೆಯಲ್ಲಿ ಕೂದಲು ಇದ್ದವರಿಗೆ ಮಾತ್ರ ಸಮಸ್ಯೆ ಇರುತ್ತದೆ ಎಂದುಕೊಂಡಿದ್ದೆ. ಆದರೆ ಕೂದಲು ಇಲ್ಲದೆ ತಲೆಗೆ 'ವಿಗ್' ಹಾಕಿಕೊಳ್ಳುವವರಿಗೂ ಇಷ್ಟೊಂದು ಅಪಾಯ! ಈ ರೀತಿಯ ಕಷ್ಟಗಳೂ ಎದುರಾಗಬಹುದು ಅಂತ ಗೊತ್ತೇ ಇರ್ಲಿಲ್ಲ. ಹಾಸ್ಯ ಬರಹ ಕೊಟ್ಟ 'ಕನ್ನಡಪ್ರಭ'ಕ್ಕೆ ವಂದನೆಗಳು.
-ಫ್ಯಾಷನ್ ಡಿಸೈನರ್ ಮಧು, ಹಾಸನ,
ಗಾಳಿಮಾತು- 99457-37427
ವಿಶ್ವೇಶ್ವರಭಟ್ಟರ 'ನೂರೆಂಟು ನೋಟ' (23/5) ಲೇಖನ ಓದಿದ ನಂತರ ಪ್ರಧಾನಿಯಂತಹ ಹುದ್ದೆಯನ್ನು ಅಲಂಕರಿಸಿ ಕೇವಲ "ಯೆಸ್ ಮ್ಯಾನ್" ಆಗಿ ತಮ್ಮ ಪ್ರಭಾವ ಹಾಗೂ ಅನುಭವಗಳನ್ನು ಸ್ವಲ್ಪವೂ ಬೀರದೆ ಕಟಪುತಲಿಯಂತೆ ವರ್ತಿಸುವ ಅನಿವಾರ್ಯತೆ ಮನಮೋಹನಸಿಂಗರಲ್ಲಿ ಏನಿರಬಹುದೆಂಬ ಪ್ರಶ್ನೆ ಕಾಡಿತು. ನಿಜಕ್ಕೂ ಇದು ಬಿಡಿಸಲಾಗದ ಅಥವಾ ತಿಳಿಯಲಾರದ ಕಗ್ಗಂಟು. ಯಾವುದೇ ವ್ಯಕ್ತಿಯಿರಲಿ, ತನ್ನತನವೆಂಬುದು ಸ್ವಲ್ಪವಾದರೂ ಇರಲೇಬೇಕು. ತನ್ನ ಪಥವನ್ನೇ ಅರಿಯದವ ಉಳಿದವರ ಪಥವನ್ನೇನು ನಿರ್ಧರಿಸಿಯಾನು ಎಂಬುದನ್ನು ಲೇಖಕರು ಮಾರ್ಮಿಕವಾಗಿ ತಿಳಿ ಹೇಳಿದ್ದಾರೆ. ಕ್ರೂರ ವ್ಯಾಘ್ರನ ಮುಂದೆ ನಿಂತ ಗೋವು 'ಕಂದ ನಿಮ್ಮವನೆಂದು ಕಾಣಿರಿ' ಅಂದಾಗ ಆ ವ್ಯಾಘ್ರನಿಗೂ ದಯೆ ಬಂದೀತು. ಆದರೆ ಈ ಕಂದನಿಗೆ ಆ ಕರುಣೆ ಲಭ್ಯವಾದೀತೆ? ಈ ರೀತಿಯ ರಾಜಕೀಯ ಅರೇಂಜ್ಮೆಂಟಿಗೆ ಪ್ರಜಾಪ್ರಭುತ್ವ ಅನ್ನದೆ ಇನ್ಯಾವ ಬೇರೆ ರೀತಿಯ ಪದ ಪ್ರಯೋಗ ಸಮಂಜಸವೆನಿಸಬಹುದು? ಬೇರೆ ಬೇರೆ ಸುದ್ದಿವಾಹಿನಿಗಳ ಸಮೀಕ್ಷೆ ಏನೇ ಹೇಳಲಿ ದೇಶದ ಪ್ರಧಾನಿಯಾದವನು ಹೇಗಿರಬೇಕೆಂಬುದನ್ನು ದೇಶವಾಸಿಗಳಿಗೆ ಮನದಟ್ಟು ಮಾಡಿಕೊಟ್ಟಂತಹ ಲೇಖಕರಿಗೆ ಧನ್ಯವಾದಗಳು.
-ಶಂಕರನಾರಾಯಣಭಟ್, ಮಾಡಗೇರಿ,
ಹೊನ್ನಾವರ, ಮೊ. 9632 821920
19.5.2013ರ 'ಗೋಡೆ ಬರಹ'ದಲ್ಲಿ ಪ್ರಹ್ಲಾದರಾಜು ಬುರ್ಲಿ ದಾವಣಗೆರೆಯವರು 'ಕನ್ನಡಪ್ರಭದಲ್ಲಿ ಗೌರವಾನ್ವಿತ ಹುದ್ದೆಯಲ್ಲಿರುವವರ ಪೂರ್ಣ ಹೆಸರನ್ನು ಬಳಸದೆ, ಅಡ್ಡ ಹೆಸರು ಬಳಸುವುದು ಎಷ್ಟು ಸರಿ?' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ನಾನು ಕನ್ನಡಪ್ರಭವನ್ನು 1980ರಿಂದಲೂ ಓದುತ್ತಿದ್ದೇನೆ. ಹಾಗೆಯೇ 1980ರ ದಶಕದಲ್ಲಿ 'ಲಂಕೇಶ' ಮೇಷ್ಟ್ರು ಮೊದಲು ಈ ಸಂಪ್ರದಾಯ ಹಾಕಿದವರು. ಅವರಲ್ಲಿ ಹಾಸ್ಯಪ್ರಜ್ಞೆ ಬಹಳಷ್ಟಿತ್ತು. ಅವರೂ ಕೂಡಾ ಹೀಗೆ ಅಡ್ಡ ಹೆಸರಿನಿಂದ ಆಳುವವರ ಮೇಲೆ ಹಾಸ್ಯದಿಂದಲೇ ಚಾಟೀ ಬೀಸುತ್ತಿದ್ದರು. 'ಬಂ', 'ಗುಂ', ಎಂದು ಬರೆಯುತ್ತಿದ್ದರು. ಪ್ರತಿಯೊಂದು ಶಬ್ದಗಳನ್ನು, ಬರಹಗಳನ್ನು ಗಂಭೀರವಾಗಿ ಓದುವುದರ ಜೊತೆಗೆ, ಅದರಲ್ಲಿರುವ ಹಾಸ್ಯಪ್ರಜ್ಞೆಯನ್ನೂ ಗುರಿತಿಸಬೇಕು. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಈ ಅಡ್ಡ ಹೆಸರು ಇಲ್ಲ. ನಮ್ಮ ಭಾರತೀಯ ಶೈಲಿಯಲ್ಲಿ ಅಜ್ಜ, ಅಜ್ಜಂದಿರ ಕಾಲದಿಂದಲೂ ಪ್ರತಿಯೊಬ್ಬರಿಗೂ 'ನಿಕ್ನೇಮ್'ಅಡ್ಡ ಹೆಸರು ಇದ್ದೇ ಇರುತ್ತದೆ. ಪ್ರೀತಿಯಿಂದ ಕರೆಯುವ ಹೆಸರುಗಳೂ ಯಾವಾಗಲೂ ಗೌರವದಿಂದ ಕೂಡಿರುತ್ತದೆ. ಗಣ್ಯರನ್ನು ಆಸನ ಅಲಂಕರಿಸಿದ ಕೂಡಲೇ ಅಡ್ಡ ಹೆಸರಿನಿಂದ ಕರೆದಾಗ ಅದು ಅಪಹಾಸ್ಯ ಹೇಗಾಗುತ್ತದೆ? ಹುಡುಕಿನೋಡಿದಾಗ ಆ ಅಡ್ಡಹೆಸರಲ್ಲಿಯೂ ಪ್ರೀತಿ, ಗೌರವದ ಸಮ್ಮಿಲನವಿರುತ್ತದೆ. ಸಾಹಿತ್ಯದ ಒಳಹೊರಗನ್ನು ಚೆನ್ನಾಗಿ ಅರಗಿಸಿಕೊಂಡಾಗ ಈ ಅಪಹಾಸ್ಯದ ಮಾತು ಬರೊಲ್ಲ.
-ರಾಜೇಂದ್ರ ಹೆಗಡೆ,. ಹಾವೇರಿ, ಮೊ. 9342 582490
ನಿಮ್ಮ ಅನಿಸಿಕೆಗಳನ್ನು ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.