ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಮಾವೋವಾದಿಗಳ ಮೇಲೇಕೆ ಕಾಂಗ್ರೆಸ್‌ಗಿಷ್ಟು ಮಮತೆ?

Vishwanath S
Updated On : 5 Jun 2013, 11:39 am

2008ರಲ್ಲಿ ಛತ್ತೀಸ್‌ಗಢದಲ್ಲಿ ಒಂದು ಚಿಕ್ಕ ತನಿಖಾ ತಂಡ ಉದ್ಭವವಾಯಿತು. ಭಾರತದ ನೀಚ ಯುದ್ಧದಿಂದ ದಿಗಿಲುಗೊಂಡಿದ್ದ ಆ ಗುಂಪು ವರದಿಯೊಂದನ್ನು ಸಿದ್ಧಪಡಿಸಿತು. 'ನಕ್ಸಲ್ ನಿಗ್ರಹಕ್ಕೆ ಮುಂದಾದವರು ಸುಮಾರು 640 ಹಳ್ಳಿಗಳನ್ನು ಸುಟ್ಟು ಬೂದಿ ಮಾಡಿ, ಸ್ಥಳೀಯರ ಹಣೆಗೆ ಬಂದೂಕಿಟ್ಟು ಬೆದರಿಸಿ ಓಡಿಸಿದ್ದಾರೆ. ಮಹೇಂದ್ರ ಕರ್ಮ ಅವರ 'ಮೃತ್ಯು ಪಡೆ'ಯಂತೂ 3,50,000 ಆದಿವಾಸಿಗಳನ್ನು ನಿರಾಶ್ರಿತರ ಶಿಬಿರಕ್ಕೆ ತಳ್ಳಿದೆ. ಆದಿವಾಸಿ ಮಹಿಳೆಯರು ಅತ್ಯಾಚಾರಕ್ಕೊಳಗಾದರು, ಅವರ ಹೆಣ್ಣುಮಕ್ಕಳನ್ನು ನಿರ್ದಯವಾಗಿ ಕೊಲ್ಲಲಾಯಿತು, ಯುವಕರನ್ನೆಲ್ಲ ಶಾಶ್ವತ ಅಂಗವೈಕಲ್ಯಕ್ಕೆ ತಳ್ಳಲಾಯಿತು. ಈ ಮಾರಣಹೋಮದ ಮೂಲ ಕರ್ತೃಗಳು 'ಟಾಟಾ ಮತ್ತು ಎಸ್ಸಾರ್ ಸ್ಟೀಲ್ ಕಂಪನಿಗಳು'. ಅಲ್ಲಿನ ಕಬ್ಬಿಣದ ಅದಿರಿರುವ ಬೃಹತ್ ಪ್ರದೇಶಗಳನ್ನೆಲ್ಲ ವಶ ಪಡಿಸಿಕೊಳ್ಳಲು ಅವುಗಳು ಈ ತಂತ್ರ ರಚಿಸಿದವು. ಕೊಲಂಬಸ್‌ನ ನಂತರ ಬುಡಕಟ್ಟು ಪ್ರದೇಶಗಳ ಅತಿ ದೊಡ್ಡ ಭೂಕಬಳಿಕೆ ಇದು' ಎನ್ನುವುದು ಆ ವರದಿಯ ಸಾರಾಂಶವಾಗಿತ್ತು.
ಈ ಕರುಣಾಜನಕ ವರದಿಯನ್ನು ಬರೆದದ್ದು ಯಾರು ಗೊತ್ತೆ? ಭಾರತ ಸರ್ಕಾರ!
ಈ ವರದಿಯನ್ನು ಎಲ್ಲೆಡೆಯೂ ಹರಿಬಿಡುತ್ತಿದ್ದ ಸಮಯದಲ್ಲೇ ಪ್ರಧಾನಿ ಮನಮೋಹನ್ ಸಿಂಗ್ ಅವರು, 'ನಮ್ಮ ದೇಶದ ಆಂತರಿಕ ಭದ್ರತೆಗೆ ಅತಿ ದೊಡ್ಡ ಕಂಟಕವೆಂದರೆ ಎಡಪಂಥೀಯ ಉಗ್ರವಾದಿಗಳು(ನಕ್ಸಲರು)' ಎಂದು ಹೇಳಿದ್ದರು!
ಮೇ 25 ರಂದು ನಕ್ಸಲರ ದಾಳಿಗೆ ಕಾಂಗ್ರೆಸ್ ನಾಯಕರು ಮೃತಪಟ್ಟಾಗಿನಿಂದ ಇಂತಹದ್ದೇ ಗೊಂದಲಮಯ ಹೇಳಿಕೆಗಳು ಮತ್ತೆ ಜನ್ಮ ತಾಳುತ್ತಿವೆ. ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಮಾವೋವಾದಿಗಳನ್ನು 'ಉಗ್ರವಾದಿಗಳೆಂದು' ಕರೆದರೆ, ಬುಡಕಟ್ಟು ವ್ಯವಹಾರಗಳ ಸಚಿವ ಕಿಶೋರ್ ಚಂದ್ರ 'ಮಾವೋವಾದಿಗಳದ್ದೇನೂ ತಪ್ಪಿಲ್ಲ, ಸೇನೆಯನ್ನು ಮೊದಲು ಓಡಿಸಿ' ಎಂದು ಹೇಳುತ್ತಾರೆ! ಹಿಂದೆ ಮಾವೋವಾದಿಗಳ ವಿರುದ್ಧ ಪಿ. ಚಿದಂಬರಂ ಉಗ್ರರಾದಾಗ ದಿಗ್ವಿಜಯ್ ಸಿಂಗ್ ಮತ್ತು ಮಣಿಶಂಕರ್ ಐಯ್ಯರ್ ಅವರ ವಿರುದ್ಧವೇ ತಿರುಗಿಬಿದ್ದಿದ್ದರು.  ಕಾಂಗ್ರೆಸ್‌ಗೆ ಎರಡು ನಾಲಗೆ ಹುಟ್ಟಿಕೊಂಡಿರುವುದು ಗೊಂದಲದಿಂದಾಗಿ ಅಲ್ಲ, ಅಳೆದು ತೂಗಿ ರಚಿಸಲಾಗಿರುವ ಅದರ ಅತ್ಯಂತ 'ಸುರಕ್ಷಿತ' ನೀತಿಯಿಂದಾಗಿ.
ರಾಜಕೀಯ ವರ್ಗದೊಂದಿಗೆ ಇಂತಹ ನಿಗೂಢ ಸಂಬಂಧವನ್ನು ಭಾರತದ ಮಾವೋವಾದಿಗಳು ಹಲವಾರು ವರ್ಷಗಳಿಂದ ಮುಂದುವರಿಸಿದ್ದಾರೆ. 1985ರಲ್ಲಿ 'ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್‌'(ಪಿಯೂಡಿಆರ್)ನ ಸ್ವಯಂಸೇವಕರು ಪೊಲೀಸರಿಂದ ನಕ್ಸಲನೊಬ್ಬ ಮೃತಪಟ್ಟ ಘಟನೆಯ ಕುರಿತು ವರದಿ ಸಿದ್ಧಪಡಿಸಲು ಹೋಗಿದ್ದರು. ಆಗ ಕಾಂಗ್ರೆಸ್‌ನ ಎಮ್‌ಪಿ ಮಂಕುರಾಮ್ ಸೋಧಿ, 'ನಕ್ಸಲರು ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ' ಎಂದು ಹೇಳಿದ್ದನ್ನು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೊಬ್ಬ ನಾಯಕ ಕೂಡ 'ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕಾಗಿ ಸಶಸ್ತ್ರ ಪಡೆಗಳನ್ನು ನಿಯೋಜಿಸಿ ನಕ್ಸಲರ ಮೇಲೆ ಗೂಬೆ ಕೂರಿಸಲಾಗುತ್ತಿದೆ' ಎಂದು ದೂರಿದ್ದರು. ಅಲ್ಲದೆ ಖುದ್ದು ಅಲ್ಲಿನ ಪೊಲೀಸ್ ಸೂಪರಿಂಟೆಂಡೆಂಟ್ 'ನಕ್ಸಲರು ಸರಿಯಾದ ಕೆಲಸವನ್ನೇ ಮಾಡುತ್ತಿದ್ದಾರೆ' ಎಂದು ಪಿಯುಡಿಆರ್‌ಗೆ ಹೇಳಿದ್ದರು.
ಮಾವೋವಾದಿಗಳಿಗೆ ಮಸ್ಕಾ ಹಚ್ಚುವುದರಿಂದ ಎಲ್ಲರಿಗೂ ಲಾಭವಿದೆ! ಪೊಲೀಸರಿಗೆ ಕಾನೂನು ಜಾರಿ ಮಾಡುವ ಅಗತ್ಯ ಬೀಳುವುದಿಲ್ಲ, ಆಡಳಿತ ವರ್ಗಕ್ಕೆ ಕೆಲಸ ಮಾಡದಿರಲು ನೆಪ ಸಿಗುತ್ತದೆ ಮತ್ತು ರಾಜಕಾರಣಿಗಳಿಗೆ ಪ್ರಬಲ ಸ್ನೇಹಿತರೂ ಸಿಕ್ಕಂತಾಗುತ್ತದೆ!
1960ರ ದಶಕದಿಂದಲೂ ಮಾವೋವಾದಿಗಳು ಹಲವಾರು ಹೋರಾಟ ನಡೆಸಿದ್ದಾರೆ. 1976ರಲ್ಲಿ ಆಂಧ್ರಪ್ರದೇಶದಲ್ಲಿ ನಾಗಭೂಷಣ್ ಪಟ್ನಾಯಕ್ 250 ಆದಿವಾಸಿಗಳೊಂದಿಗೆ ಸೇರಿ ಪಾರ್ವತಿಪುರಂನ ಭೂ ಒಡೆಯರೊಬ್ಬರ ಮನೆ ಮೇಳೆ ದಾಳಿ ಮಾಡಿದ್ದ. ಆ ಮನೆಯಲ್ಲಿನ ಎಲ್ಲಾ ಧಾನ್ಯಗಳನ್ನು ಎತ್ತಿಕೊಂಡು ಹೋಗಿದ್ದಲ್ಲದೆ, ಆದಿವಾಸಿಗಳಿಗೆ ಕೊಟ್ಟಿದ್ದ ಸಾಲದ ದಾಖಲೆಗಳನ್ನೆಲ್ಲ ಸುಟ್ಟುಹಾಕಿದ್ದ. ಹಾಗಂತ ಅದು ಆಂಧ್ರಪ್ರದೇಶದಲ್ಲಿ ಭೂ ಮಾಲೀಕರ ವಿರುದ್ಧ ಭುಗಿಲೆದ್ದ ಮೊದಲ ಹೊರಾಟವೇನೂ ಆಗಿರಲಿಲ್ಲ. ಆದರೆ ಆ ನಾಟಕೀಯದಾಳಿ, ಆ ನಂತರದ ನಿರ್ದಯ ಹತ್ಯೆಗಳೆಲ್ಲ ಯುವಕರ ಮನಸೂರೆಗೊಂಡುಬಿಟ್ಟಿತು!
ಈ ಮಾವೋವಾದಿಗಳು ಆಂಧ್ರಪ್ರದೇಶದಲ್ಲಿನ ಔದ್ಯಮಿಕ ವಿವಾದಗಳು, ಬಿಹಾರದಲ್ಲಿ ಮೇಲ್ವರ್ಗದ ದೌರ್ಜನ್ಯದ ವಿರುದ್ಧ ಭುಗಿಲೆದ್ದ ದಲಿತರ ಹೋರಾಟಗಳು, ಬಸ್ತಾರ್‌ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಆಸೆಬುರುಕ ಕಾಂಟ್ರಾಕ್ಟರ್‌ಗಳಿಂದಾಗಿ ಉದ್ಭವವಾಗಿದ್ದ ಆದಿವಾಸಿಗಳ ಒದ್ದಾಟಗಳನ್ನೆಲ್ಲ ತಮ್ಮ ಲಾಭಕ್ಕೆ ಬಳಸಿಕೊಂಡರು. ಮುಖ್ಯವಾಹಿನಿ ರಾಜಕಾರಣಿಗಳ ವ್ಯವಹಾರಗಳಲ್ಲಿ ಮಾತ್ರ ಅವರೆಂದೂ ಮೂಗು ತೂರಿಸಲಿಲ್ಲ ಎನ್ನುವುದು ಬೇರೆ ವಿಷಯ! ಅದಕ್ಕೆ ತಕ್ಕಂತೆ ಪ್ರತಿಫಲವನ್ನೂ ಅವರು ಪಡೆದರು.
ಉದಾಹರಣೆಗೆ, 1983ರಲ್ಲಿ ಆಂಧ್ರದ ಮುಖ್ಯಮಂತ್ರಿ, ಪ್ರಖ್ಯಾತ ನಟ ಎನ್.ಟಿ. ರಾಮಾರಾವ್ ನಕ್ಸಲರನ್ನು  'ನಿಜವಾದ ದೇಶಭಕ್ತರು' ಎಂದು ಕರೆದಿದ್ದರು. ಈ ಪೂಸಿ ಹೊಡೆಯುವ ಸಂಸ್ಕೃತಿ ಇಂದಿಗೂ ಮುಂದುವರಿದಿದೆ. ಕೆಲವು ವರ್ಷಗಳ ಹಿಂದೆ ಬಿಹಾರ್‌ನ ಮುಖ್ಯಮಂತ್ರಿ ನಿತೀಶ್ ಕುಮಾರ್ ನಕ್ಸಲ್‌ವಾದವನ್ನು 'ಉನ್ನತ ಮಟ್ಟದ ಸೈದ್ಧಾಂತಿಕ ಪ್ರೇರಣೆ' ಎಂದು ಬಣ್ಣಿಸಿದ್ದರು. ಇದನ್ನೇ ಸುರಕ್ಷಿತ ಮಾರ್ಗ ಎಂದು ಕರೆಯುವುದು!
ಆದರೆ ಭಾರತದ ಆರ್ಥಿಕ ಆಸಕ್ತಿಗಳು ಬದಲಾದಂತೆಲ್ಲ ರಾಜಕಾರಣಿಗಳ ಮತ್ತು ನಕ್ಸಲರ 'ಬದುಕಿ-ಬದುಕಲು ಬಿಡಿ' ಎನ್ನುವ ಆಹ್ಲಾದಕರ ಸಂಬಂಧಕ್ಕೆ ಹೊಡೆತ ಬೀಳತೊಡಗಿತು. ಆದಿವಾಸಿ ನೆಲದಲ್ಲಿನ ನೈಸರ್ಗಿಕ ಸಂಪತ್ತಿನ ಅವಶ್ಯಕತೆ ಭಾರತಕ್ಕಿದೆ ಎಂಬ ಅರ್ಥಶಾಸ್ತ್ರಜ್ಞರ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳ ಬೇಡಿಕೆಯಿಂದಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2007ರಿಂದಲೂ ನಕ್ಸಲ್ ವಿರೋಧಿಗಳ ಸಾಲಿನಲ್ಲಿ ಸೇರಿಕೊಂಡಿದ್ದಾರೆ. 2008ರಲ್ಲಿ ಗೃಹ ಸಚಿವರಾಗಿ ಅಧಿಕಾರಕ್ಕೆ ಬಂದ ಪಿ. ಚಿದಂಬರಂ ಕೂಡ ನಕ್ಸಲರ ವಿರುದ್ಧ ನಿಂತರು. ಅವರ ಈ ಹೊಸ ನಿಲುವಿನಿಂದಾಗಿ ಕಾಂಗ್ರೆಸ್‌ನ ಕೆಲವು ಹಿರಿಯ ತಲೆಗಳು ಕಂಗಾಲಾದವು ಎನ್ನುವುದೂ ಸುಳ್ಳಲ್ಲ. ರಾಹುಲ್ ಗಾಂಧಿ ಇತ್ತೀಚೆಗೆ 'ಟೂ ಇಂಡಿಯಾಸ್‌' ಎನ್ನುವ ಭಾಷಣ ಮಾಡುತ್ತಿದ್ದಾಗ ಅವರ ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಗೆ ನಕ್ಸಲರೊಂದಿಗೆ ನಿಕಟ ಸಂಪರ್ಕವಿದೆ ಎನ್ನುವ ಆರೋಪವಿದೆ.
ಇನ್ನು ಕಾಂಗ್ರೆಸ್ ನಾಯಕತ್ವಕ್ಕೆ ದೆಹಲಿಯ ಲಿಬರಲ್ ವಲಯದೊಂದಿಗೂ ನಿಕಟ ಮೈತ್ರಿಯಿದೆ. ಈ ಉದಾರವಾದಿಗಳ 'ಸೈದ್ಧಾಂತಿಕ ತೀವ್ರವಾದ' ಅವಕಾಶದೊಂದಿಗೆ ಬದಲಾಗುತ್ತದೆ. ಇವರೆಲ್ಲ ಬೃಹತ್ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ, ತಮ್ಮ ಮಕ್ಕಳನ್ನು ಪ್ರೈವೇಟ್ ಶಾಲೆಗಳಿಗೆ ಕಳುಹಿಸುವ, ಸಿಗಾರ್ ಸೇದಿಕೊಂಡು ಅಡ್ಡಾಡುವ ಮಂದಿ. ತಮ್ಮ ಮನೆ ಪಾಯಿಖಾನೆಯನ್ನು ಸ್ವಚ್ಛ ಮಾಡುವಂತಹ ಯೋಚನೆ ಇವರ ಕನಸಿನಲ್ಲಿಯೂ ಸುಳಿಯುವುದಿಲ್ಲ!
ನಕ್ಸಲ್ ನಿಗ್ರಹ ಕಾರ್ಯಾಚರಣೆ ಶುರುವಾದಾಗಿನಿಂದಲೂ ಅವರ ಪರ ಅನುಕಂಪ ಸೂಸುವ ಮಾತುಗಳೂ ಅಧಿಕೃತ ದಾಖಲೆಗಳಲ್ಲಿ ಸೇರಿಕೊಳ್ಳುತ್ತಲೇ ಇವೆ. 'ನಕ್ಸಲರು ದುರ್ಬಲರನ್ನು ರಕ್ಷಿಸುವವರು' ಎಂದು ಒತ್ತಿ ಒತ್ತಿ ಹೇಳುತ್ತದೆ ಯೋಜನಾ ಆಯೋಗದ ಒಂದು ವರದಿ. ಆದರೆ ಕೊನೆಗೆ ಮಾತ್ರ 'ನಕ್ಸಲರು ಅನುಸರಿಸುವ ಮಾರ್ಗ ಬಹಳ ಕ್ರೂರವಾಗಿದೆ' ಎಂದು ಹೇಳಿ ಅದು ಮುಕ್ತಾಯವಾಗುತ್ತದೆ. ಆದರೂ ಅದು ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ದೂಷಿಸುತ್ತದೆ!
ಆದರೆ ಅದರ ಹೇಳಿಕೆಗೂ ಸತ್ಯದ ಭದ್ರ ಬುನಾದಿಯಿದೆ: ಸಲ್ವಾ ಜುಡುಂನ ಪಡೆಗಳು ಭಯಾನಕ ಕ್ರೌರ್ಯದಲ್ಲಿ ತೊಡಗಿದ್ದವು. ಅಮಾಯಕರ ಮರಣ ಜಾತ್ರೆ ನಡೆಯಿತು, ಕೆಲವೊಮ್ಮೆ ಪೊಲೀಸರೂ ಉದ್ದೇಶಪೂರ್ವಕವಾಗಿ ಕೊಲೆಗೆ ನಿಂತರು. ಆದರೆ ಈ ಮಾರಣಹೋಮದಲ್ಲಿ ಸಲ್ವಾ ಜುಡುಂ ಏಕಸ್ವಾಮ್ಯತೆ ಸಾಧಿಸಿತ್ತು ಎನ್ನುವುದು ಮಾತ್ರ ಸುಳ್ಳು. ಸುಮಾರು 640 ಹಳ್ಳಿಗಳು ಆ ಸಂಘಟನೆಯಿಂದಾಗಿ ಸುಟ್ಟು ಕರಕಲಾದವು ಎನ್ನುವುದರ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟ ಪುರಾವೆ ಸಿಕ್ಕಿಲ್ಲ. ಎಸ್ಸಾರ್ ಕಂಪನಿ ಸಲ್ವಾ ಜುಡುಂಗೆ ಹಣ ಸರಬರಾಜು ಮಾಡುತ್ತಿತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಅದಕ್ಕಂತೂ ಒಂದು ರೀತಿಯಲ್ಲಿ ಲಾಭವಾಗಿದೆ.
ಇನ್ನು ದೆಹಲಿ ವಿ.ವಿ.ಯ ಸ್ಕಾಲರ್‌ಗಳು ಸರ್ಕಾರಕ್ಕೆ ಬರೆದ ಪತ್ರವೊಂದರಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಆದರೆ ಮಾವೋವಾದಿಗಳು ನಡೆಸುತ್ತಿರುವ ಕ್ರೌರ್ಯದ ಬಗ್ಗೆ ಅದರಲ್ಲಿ ಒಂದು ಪದವೂ ಇಲ್ಲ!
ಇನ್ನು ನಕ್ಸಲರ ವಿಚಾರಕ್ಕೆ ಬಂದರೆ ಅವರು 'ದಂಡಕಾರಣ್ಯದಿಂದ ಎಲ್ಲಾ ಪ್ಯಾರಾಮಿಲಿಟರಿ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು, ಟ್ರೇನಿಂಗ್‌ನ ಹೆಸರಿನಲ್ಲಿ ಸೇನೆಯನ್ನು ಆ ಭಾಗದಲ್ಲಿ ನಿಯೋಜಿಸುವುದನ್ನು ಬಿಡಬೇಕು, ವಾಯು ಸೇನೆಯಿಂದ ಪರಿಶೀಲನೆ ನಡೆಸುವುದನ್ನು ಬಿಡಬೇಕು ಮತ್ತು ತಮ್ಮ ಜೈಲಿನಲ್ಲಿರುವ ನಕ್ಸಲರನ್ನೆಲ್ಲ ಬಿಟ್ಟುಬಿಡಬೇಕು' ಎಂದು ಆಶಿಸುತ್ತಾರೆ. ಆದರೆ ತಾವು ಮಾತ್ರ ರಕ್ತಹರಿಸುವುದನ್ನು ಬಿಡುವ ಮಾತನಾಡುವುದಿಲ್ಲ. ಬಹುಷಃ ತನಗೇನು ಬೇಕು ಎಂದು ಅರಿವಿರದ ಏಕೈಕ ಸರ್ಕಾರವೆಂದರೆ ಕಾಂಗ್ರೆಸ್/ಯುಪಿಎ ಸರ್ಕಾರ. ಅದಕ್ಕೆ ಸುರಕ್ಷಿತ ಮಾರ್ಗ ಹಿಡಿಯುವುದರಲ್ಲಿಯೇ ಆಸಕ್ತಿಯಿದೆ. ದುರ್ದೈವವೆಂದರೆ, ಹಾಗೆಂದರೇನು ಎನ್ನುವುದೇ ಆ ಸರ್ಕಾರಕ್ಕೆ ಗೊತ್ತಿಲ್ಲ.
ಯುಪಿಎ ಸರ್ಕಾರ ಒಂದೇ ಒಂದು ಸರಳ ಪ್ರಶ್ನೆಗೆ ಉತ್ತರಿಸಬೇಕಿದೆ: ನಕ್ಸಲರನ್ನು ನಿಗ್ರಹಿಸಲು ಅನ್ಯ ಮಾರ್ಗಗಳಿವೆಯೇ? 1996ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶರಾದ ಎಮ್. ರಾವ್ ಮತ್ತು ಎಸ್. ನಾಯಕ್, ಅಪ್ಪಾರಾವ್ ಎನ್ನುವ ನಕ್ಸಲ್ ನಾಯಕನ ವಿಚಾರಣೆ ನಡೆಸಿದರು. 'ನಕ್ಸಲ್ ಸಮಸ್ಯೆಯನ್ನು ಬಗೆಹರಿಸಲು ಉಗ್ರಮಾರ್ಗವನ್ನೇ ಅನುಸರಿಸಬೇಕಿಲ್ಲ. ಸುರಕ್ಷಿತ ಮತ್ತು ಅರ್ಥಪೂರ್ಣ ಮಾರ್ಗ ಇದ್ದೇ ಇರುತ್ತದೆ' ಎಂದ ಅವರು- 'ಎಲ್ಲಾ ವಲಯದಲ್ಲಿನ ಶಿಕ್ಷಿತ ವ್ಯಕ್ತಿಗಳನ್ನೊಳಗೊಂಡ ಒಂದು ಶಾಂತಿ ಸಮಿತಿಯನ್ನು ಸ್ಥಾಪಿಸಿ ನಕ್ಸಲರೊಂದಿಗೆ ಮಾತನಾಡಿದರೆ, ಪೊಲೀಸರ ಎನ್ಕೌಂಟರ್‌ಗಳನ್ನು ಮತ್ತು ಹಿಂಸಾಚಾರವನ್ನು ಕೂಡಲೇ ತಡೆಗಟ್ಟಬಹುದು' ಎಂದು ಅಭಿಪ್ರಾಯಪಟ್ಟರು.
ಈಗಲೂ ಬಹುತೇಕರು ಆ ನ್ಯಾಯಾಧೀಶರುಗಳ 'ದೊಡ್ಡ ದೊಡ್ಡ' ಮಾತನ್ನು ಬಹುವಾಗಿ ಶ್ಲಾಘಿಸುತ್ತಾರೆ. ಆದರೆ ತದನಂತರ ಏನಾಯಿತು ಎನ್ನುವುದರ ಬಗ್ಗೆ ಮಾತ್ರ ಯಾರೂ ತುಟಿಪಿಟಕ್ ಅನ್ನುವುದಿಲ್ಲ.
ಮುಂದೆ ಅಪ್ಪಾರಾವ್‌ನ ಮೇಲಿನ ಆಪಾದನೆಗಳನ್ನೆಲ್ಲ ತಳ್ಳಿಹಾಕಿದ ಹೈಕೋರ್ಟ್ ಆತನನ್ನು ಬಿಟ್ಟುಬಿಟ್ಟಿತು. ಅದಾದ ಕೆಲವೇ ದಿನಗಳಲ್ಲಿ ಆತ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೆ.ಎಸ್. ವ್ಯಾಸ್ ಅವರನ್ನು ಗುಂಡಿಟ್ಟು ಕೊಂದುಬಿಟ್ಟ! 2003ರಲ್ಲಿ ಚಂದ್ರಬಾಬು ನಾಯ್ಡು ಅವರ ಮೇಲಾದ ದಾಳಿಯ ಪ್ರಮುಖ ರೂವಾರಿಯೂ ಇದೇ ಅಪ್ಪಾರಾವ್. ಪೊಲೀಸರ ಕಣ್ಣಿಗೆ ಬೂದಿ ತೂರುತ್ತಾ ತಪ್ಪಿಸಿಕೊಂಡ ಅಪ್ಪಾರಾವ್ ಮುಂದಿನ ಕೆಲವೇ ವರ್ಷಗಳಲ್ಲಿ ನಕ್ಸಲರ ಮುಖ್ಯ ಕಮಾಂಡರ್ ಆಗಿ ಭಡ್ತಿ ಪಡೆದ. ಆಗ ಆಂಧ್ರ ಸರ್ಕಾರ ಆತನ ತಲೆಗೆ 10 ಲಕ್ಷ ರುಪಾಯಿ ಬಹುಮಾನ ಘೋಷಿಸಿತು!
2010ರಲ್ಲಿ ಆಂಧ್ರ ಪೊಲೀಸರು ಅಪ್ಪಾರಾವ್‌ನನ್ನು ನೆತ್ತಿಕೊಂಡದ ದಟ್ಟ ಅರಣ್ಯದಲ್ಲಿ ಕೊಂದುಹಾಕಿದರು. ಅವನನ್ನು ಕೊಲ್ಲುವ ಆದೇಶ ನೀಡುವ ಮುನ್ನ ಆಂಧ್ರ ಸರ್ಕಾರ ತಾನು ಸ್ಥಾಪಿಸಿದ 'ಶಾಂತಿ ಸಮಿತಿಯ' ವರದಿಯತ್ತ ತಿರುಗಿಯೂ ನೋಡಲಿಲ್ಲ. ಆದರೆ ಒಂದು ಮಾತಂತೂ ಸತ್ಯ. 1998ರಲ್ಲಿ ನಕ್ಸಲ್-ಪೊಲೀಸ್ ತಿಕ್ಕಾಟದಿಂದ ಮಡಿದವರ ಸಂಖ್ಯೆ 508ರಷ್ಟಿತ್ತು. ಆದರೆ ಈಗ ಅದು ಸೊನ್ನೆಗಿಳಿದಿದೆ.
ಬಹುಶಃ ಈ ಸಮಸ್ಯೆಯನ್ನು ಬಗೆಹರಿಸಲು ಸುರಕ್ಷಿತ ಮಾರ್ಗವೇ ಇಲ್ಲವೇನೋ!

- ಪ್ರವೀಣ್ ಸ್ವಾಮಿ
ಅಂಕಣಕಾರರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement