ಯಥಾರ್ಥ ಭಾಷಣ ಭೀತ ಚೇತನರು ಈ ಬುದ್ಧಿಜೀವಿಗಳು!
'ಮೂರ್ಖರು ಹಿರಿಯರಲ್ಲ ಯಥಾರ್ಥ ಭಾಷಣ ಭೀತ ಚೇತನರು'
ಇದು ಕುಮಾರವ್ಯಾಸನ ಕರ್ಣಾಟ ಭಾರತ ಕಥಾ ಮಂಜರಿಯ ಒಂದು ಸಾಲು. ಸಭಾಪರ್ವದಲ್ಲಿ ಪಾಂಡವರು ದ್ರೌಪದಿಯನ್ನು ಜೂಜಿನಲ್ಲಿ ಪಣವಾಗಿಟ್ಟು ಸೋಲುತ್ತಾರೆ. ಜೂಜಿನ ನಿಯಮದಂತೆ ದ್ರೌಪದಿ ಕೌರವರ ದಾಸಿಯಾಗುತ್ತಾಳೆ. ದಾಸಿಯನ್ನು ಸಭೆಯಲ್ಲಿ ವಿವಸ್ತ್ರಗೊಳಿಸುವ ದುಷ್ಟತನವನ್ನು ನೋಡಿಯೂ ಮೌನರಾಗಿರುವ ಭೀಷ್ಮ-ದ್ರೋಣಾದಿಗಳನ್ನು ಉದ್ದೇಶಿಸಿ ದ್ರೌಪದಿ ಆಡುವ ಕಟೂಕ್ತಿ ಇದು. ಈ ಸಾಲಿನಲ್ಲಿ ಯಾರು ಪ್ರಾಜ್ಞರಲ್ಲ, ಹಿರಿಯರಲ್ಲ ಎಂಬುದರ ವ್ಯಾಖ್ಯೆ ಇದೇ. 'ಯಥಾರ್ಥ ಭಾಷಣ ಭೀತ ಚೇತನರು' ಎಂದರೆ ಸತ್ಯವನ್ನು ಹೇಳಲು ಅಂಜುವವರು ಎಂದರ್ಥ. ಸತ್ಯ ಮಾತನಾಡಲು ಹೆದರುವವರು ಹಿರಿಯರಲ್ಲ, ಅವರು ಮೂರ್ಖರು ಎಂಬುದು ದ್ರೌಪದಿಯ ವ್ಯಾಖ್ಯಾನ. ಇಲ್ಲಿ ಅಸಹಾಯಕ ಮಹಿಳೆಯೋರ್ವಳ ಮೇಲೆ ನಡೆಯುವ ದೌರ್ಜನ್ಯವನ್ನು ಧರ್ಮಸೂಕ್ಷ್ಮದ ದ್ವಂದ್ವದಲ್ಲಿ ನಿಷ್ಕ್ರಿಯರಾಗಿ ಕುಳಿತು ಸಹಿಸುವ ಭೀಷ್ಮಾದಿಗಳನ್ನು ದ್ರೌಪದಿ ಮೂರ್ಖರ ಪಟ್ಟಿಗೆ ಸೇರಿಸಿದ್ದಾಳೆ.
ಈ ಮಾತಿನ ಸಮಕಾಲೀನ ಪ್ರಸ್ತುತತೆ ಗಮನಕ್ಕೆ ಬಂದುದು ಇತ್ತೀಚೆಗೆ. ರಾಜ್ಯ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಹಿರಿಯ ಚಿಂತಕ ಬರಗೂರು ರಾಮಚಂದ್ರಪ್ಪ ಅವರು ತಮ್ಮದೇ ವಿಶಿಷ್ಟ ಶೈಲಿಯಲ್ಲಿ, 'ಭ್ರಷ್ಟಾಚಾರದಂಥ ಅನಿಷ್ಟಗಳ ಬಗ್ಗೆ ಬುದ್ಧಿಜೀವಿಗಳ ಮೌನವುಂಟಲ್ಲ, ಅದು ತುಂಬಾ ಅಪಾಯಕಾರಿಯಾದದ್ದು' ಎಂದು ಹೇಳಿದರು. ಹೌದು, ಭ್ರಷ್ಟಾಚಾರವೊಂದೇ ಏನು ಉಗ್ರವಾದ, ಮಾವೋವಾದ, ಕೋಮುವಾದ, ಜಾತಿವಾದ ಇತ್ಯಾದಿ ಹಲವು ಹತ್ತು ಸಮಸ್ಯೆಗಳ ಬಗ್ಗೆ ಕೂಡಾ ಸಮಾಜದ ಹಿರಿಯರ, ಬುದ್ಧಿಜೀವಿಗಳ ಮೌನವಷ್ಟೇ ಅಲ್ಲ ಅವರ ಮಾತು ಕೂಡಾ ಹಲವು ಸಲ ಅನುಮಾನಾಸ್ಪದವಾಗಿಯೇ ಕಾಣುತ್ತದೆ. ಧರ್ಮ ಜಿಜ್ಞಾಸೆ, ಅನ್ನದ ಋಣ ಇತ್ಯಾದಿಗಳಲ್ಲಿ ಸಿಲುಕಿ ಸತ್ಯ ಹೇಳಲಾಗದ, ಅನ್ಯಾಯ ಖಂಡಿಸಲಾಗದ ಭೀಷ್ಮರಂತೆ ಇವರು ತೋರುತ್ತಾರೆ. ಈ ಬುದ್ಧಿಜೀವಿಗಳಿಗೆ ಭೀಷ್ಮರೇ ಪ್ರ-ಪಿತಾಮಹರೇನೋ ಅಂತ ಅನ್ನಿಸಿಬಿಡುತ್ತದೆ.
ಇಂದಿನ ಸಾಮಾಜಿಕ ಸಂದರ್ಭದಲ್ಲಿ ಬುದ್ಧಿಜೀವಿಗಳ ಪಾತ್ರ ಮತ್ತೆ ಮತ್ತೆ ವಿವಾದಕ್ಕೆಡೆಮಾಡಿ ಕೊಡುತ್ತಿದೆ ಎಂಬುದು ಎಲ್ಲರ ಅನುಭವ. ಸಮಾಜದಲ್ಲಿ ಹಿರಿಯರು, ಬುದ್ಧಿಜೀವಿಗಳು ಸಾಕ್ಷಿಪ್ರಜ್ಞೆಯಂತೆ ಇರಬೇಕೆಂಬುದು ಒಂದು ನಿರೀಕ್ಷೆ. ಅವರ ನಡೆ-ನುಡಿ ಅಷ್ಟೇ ಏಕೆ, ಮೌನ ಕೂಡಾ ಅರ್ಥಪೂರ್ಣವೂ, ಸಮಯೋಚಿತವೂ ಆಗಿರುತ್ತದೆ ಎಂಬುದು ಜನರ ನಂಬಿಕೆ. ಅವರು ಸಮಾಜದ ದಿಗ್ದರ್ಶಕರು. ದಿಕ್ಕು ತಪ್ಪಿಸಲು ಕೂಡಾ ಅವರಿಗೆ ಯಥೇಚ್ಛ ಶಕ್ತಿ ಇರುತ್ತದೆ. ಆದ್ದರಿಂದಲೇ ಅವರ ಜವಾಬ್ದಾರಿ ಅಗಾಧವಾದದ್ದು. ಈ ಹಿನ್ನೆಲೆಯಲ್ಲಿ ನೋಡಿದರೆ ನಮ್ಮ ಬುದ್ಧಿಜೀವಿಗಳ ಬಗ್ಗೆ ಅತೃಪ್ತಿ ಆಗದಿರದು. ಇವರು ಯಥಾರ್ಥ ನುಡಿಯಲು ಅಂಜುತ್ತಿರುವರೇ? ಆಸೆ-ಆಕಾಂಕ್ಷೆ-ಪೂರ್ವಾಗ್ರಹಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಸತ್ಯವನ್ನೇ ಎತ್ತಿ ಹಿಡಿಯುತ್ತಿರುವರೇ? ಜೀವನ್ಮುಖಿಯಾದುದನ್ನು ಸ್ವಾಗತಿಸಿ, ಜೀವ ವಿರೋಧಿಯಾದುದನ್ನು ವಿರೋಧಿಸುತ್ತಿರುವರೇ? ಅಥವಾ ಕೇವಲ politically correct ಆದುದನ್ನು ಹೇಳಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವರೇ? ಬಾಯ್ಬಿಟ್ಟು ಹೇಳಲಾಗದ್ದನ್ನು ಮೌನದಲ್ಲಿ ಧ್ವನಿಪೂರ್ಣವಾಗಿ ಸೂಚಿಸುತ್ತಿರುವರೇ? ಎಂಬ ಪ್ರಶ್ನೆಗಳು ಬಾಧಿಸದಿರವು.
ಎಡ-ಬಲ ಇಲ್ಲವೇ ಯಾವುದೇ ಛಾಯೆಯ ಚಿಂತಕರು, ಬುದ್ಧಿಜೀವಿಗಳು ನಮ್ಮ ದೇಶದಲ್ಲಿಂದು ಜನರಿಗೆ ಅಡನಾಡಿಗಳಾಗಿ ತೋರುತ್ತಿದ್ದಾರೆ. ಬುದ್ಧಿಜೀವಿಗಳ ದೂರದರ್ಶಿತ್ವ, ಪರಿಜ್ಞಾನ ಜನರಿಗೆ ಅರ್ಥವಾಗದಿರುವುದೇ ಇದಕ್ಕೆ ಕಾರಣವೆಂದು ವಾದಿಸಬಹುದು. ಅದೂ ತುಸುಮಟ್ಟಿಗೆ ನಿಜ ಇದ್ದೀತು. ಆದರೆ ಅದಕ್ಕಿಂತ ಮುಖ್ಯ ಕಾರಣ, ಬುದ್ಧಿಜೀವಿಗಳು ವಾಸ್ತವಕ್ಕೆ ಕಣ್ದೆರೆಯದೇ ಕೇವಲ ಸಿದ್ಧಾಂತಕ್ಕೆ ಜೋತುಬಿದ್ದದ್ದೆಂದು ಕಾಣುತ್ತದೆ. ಎಡ-ಬಲ ಎಲ್ಲರೂ ಒಂದು ಸೈದ್ಧಾಂತಿಕ Strait-jacket ಬಂದಿಗಳೇ. ಭೀಷ್ಮರ ಸಮಸ್ಯೆ ಧರ್ಮದ ಗಹನತೆ. ಇಂದಿನ ಬುದ್ಧಿಜೀವಿಗಳ ಸಮಸ್ಯೆ ಅತಿಯಾದ ಸೈದ್ಧಾಂತಿಕ ನಿಷ್ಠೆ. ಆದರೆ ಸತ್ಯ ಮತ್ತು ವಾಸ್ತವಗಳು ಸಿದ್ಧಾಂತವನ್ನು ಸದಾ ಮೀರಿರುತ್ತವೆ. ಸಿದ್ಧಾಂತದ ಕನ್ನಡಕಕ್ಕೆ ಸಿಗುವುದು ಅರ್ಧಸತ್ಯ ಮಾತ್ರ. ದೇಶದಾದ್ಯಂತ ಇಂಥ ಬುದ್ಧಿಜೀವಿಗಳ ವರ್ಗವೇ ಇದ್ದು ಅದರ ನಡೆ-ನುಡಿ-ಮೌನ ಎಲ್ಲವೂ ಚಾಣಾಕ್ಷತನದಿಂದ ಕೂಡಿವೆ. ಏನನ್ನು ಸ್ವಾಗತಿಸಬೇಕು, ಏನನ್ನು ಖಂಡಿಸಬೇಕು, ಎಲ್ಲಿ ಮೌನವಾಗಿರಬೇಕು ಈ ಎಲ್ಲ ಸಂಗತಿಗಳು ಅವರ ಅತ್ಯಂತ ಲೆಕ್ಕಾಚಾರದ ಚಲನೆಗಳು. ಇವರೆಲ್ಲ ಬಹುವಚನ ಪಂಡಿತರೇ. ಆದರೆ ಮೌನಮುನಿಗಳೂ ಹೌದು. ಅಲ್ಲಿ ಮುಗ್ಧತೆಯೂ ಇಲ್ಲ, ಅಚಾತುರ್ಯವೂ ಇಲ್ಲ. ಎಲ್ಲವೂ ಅವರ ಇಷ್ಟದಂತೆ ಉರುಳುವ ದಾಳಗಳೇ.
ಈ ಪ್ರವೀಣರ ವರಸೆಗಳು ಕೆಲವೊಮ್ಮೆ ಮನರಂಜಕವಾಗಿರುತ್ತವೆ. ಒಬ್ಬರು ಹೇಳಿದ್ದನ್ನು ವಿರೋಧಿಸುವುದೇ ಇನ್ನೊಬ್ಬರ ಧರ್ಮ ಎಂಬ ತತ್ವದ ಮೇಲೆ ಇವರ ಸಹಬಾಳ್ವೆ. ಜೊತೆಗೆ ಜನಜನಿತ ಸತ್ಯವನ್ನು ತಿರಸ್ಕರಿಸುವ ಹಟ ಬೇರೆ. ಕೇಂದ್ರ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಹುಯಿಲೆಬ್ಬಿಸುವ ಬುದ್ಧಿಜೀವಿಗಳು ರಾಜ್ಯದ ಬಿಜೆಪಿ ಸರ್ಕಾರದ ಭ್ರಷ್ಟತೆಯ ಬಗ್ಗೆ ಕಣ್ಮುಚ್ಚಿರುತ್ತಾರೆ ಎಂಬುದು ಸಾಮಾನ್ಯ ನಿಯಮ. ಒಂದು ರಾಜಕೀಯ ಪಕ್ಷ ಕೋಮು ಸಂಘಟನೆಯೊಂದಿಗೆ ಕೈಜೋಡಿಸಿದರೆ ಅದು ಕೆಲವರಿಗೆ ಕೋಮು ಸ್ನೇಹಿ ಎನ್ನಿಸುತ್ತದೆ. ಇನ್ನೊಂದು ರಾಜಕೀಯ ಪಕ್ಷ ಇದನ್ನೇ ಮಾಡಿದರೆ ಕೋಮುವಾದಿಯಾಗಿಬಿಡುತ್ತದೆ. ಪ್ರಜಾಪ್ರಭುತ್ವದಲ್ಲಿ ಯಾವ ಕಾರಣಕ್ಕೂ ಹಿಂಸೆ ಸಲ್ಲದು, ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ ಎನ್ನುತ್ತಲೇ ಮಾವೋವಾದಿಗಳ ಹಿಂಸಾಚಾರವನ್ನು ಬೆಂಬಲಿಸುವವರು ಕೆಲವರು. ಅದೇ ಒಂದು ಅನೈತಿಕ ವ್ಯವಹಾರದ ಹೆಸರಿನಲ್ಲಿ ಹೊಟೆಲ್ ಮೇಲೆ ದಾಳಿ ಮಾಡಿದವರ ಬಗ್ಗೆ ಎಗರಾಡಿ ಆಕಾಶ -ಪಾತಾಳ ಒಂದು ಮಾಡುವವರು ಮತ್ತೆ ಕೆಲವರು. ಒಂದು ವಿಶ್ವ ವಿದ್ಯಾಲಯಕ್ಕೆ ಶಂಕರಾಚಾರ್ಯರ ಹೆಸರಿಡುವ ಸೂಚನೆಗೆ ಮೂಲಭೂತವಾದ, ಕೇಸರೀಕರಣ ಎಂದವರು, ಮತ್ತೊಂದು ವಿಶ್ವ ವಿದ್ಯಾಲಯಕ್ಕೆ ಟಿಪ್ಪು ಹೆಸರಿಡುವ ಪ್ರಸ್ತಾಪವನ್ನು ಪ್ರತ್ಯೇಕತೆ, ತುಷ್ಟೀಕರಣ ಎಂದು ಕರೆಯಲು ಮರೆತು ಹಾಯಾಗಿ ಇದ್ದು ಬಿಡುತ್ತಾರೆ. ಭಯೋತ್ಪಾದನಾ ಕೃತ್ಯಗಳು ನಡೆದಾಗ ಮರೆತೂ ತುಟಿ ಪಿಟಕ್ಕೆನ್ನದವರು, ಹಾಗೆಯೇ ಒಂದು ನಿರ್ದಿಷ್ಟ ಕೋಮಿನವರನ್ನೆಲ್ಲ ಭಯೋತ್ಪಾದಕರಂತೇ ಗುಮಾನಿಯಿಂದ ನೋಡುವವರು ಕೂಡಾ ಇದ್ದಾರೆ. ಹಾಗಿದ್ದರೆ ಇವರ ದೃಷ್ಟಿಯಲ್ಲಿ ಸಮಾಜವಿರೋಧಿಯಾದದ್ದು ಯಾವುದು? ಅಪರಾಧ ಯಾವುದು? ಇವರ ಕಾರ್ಯಸೂಚಿಯಲ್ಲಿ ಸಾಮಾಜಿಕ ಸ್ವಾಸ್ಥ್ಯ, ದೇಶದ ಹಿತಕ್ಕೆ ಅವಕಾಶವೇ ಇಲ್ಲವೇ? ಕೊನೇ ಪಕ್ಷ ರಾಷ್ಟ್ರರಕ್ಷಣೆಯ ವಿಷಯದಲ್ಲೂ ಇವರಲ್ಲಿ ಸಮನ್ವಯ ಸಾಧ್ಯವಿಲ್ಲವೇ?
ಮತ್ತೆ ಕುಮಾರವ್ಯಾಸನ ಸಭಾ ಪರ್ವಕ್ಕೆ ಮರಳೋಣ. ಭೀಷ್ಮರು ದ್ರೌಪದಿಯ ವಸ್ತ್ರಾಪಹರಣವನ್ನು ಖಂಡಿಸದೇ ಇದ್ದುದರಿಂದ ಅದು ಮಹಾಭಾರತ ಯುದ್ಧಕ್ಕೆ ಕಾರಣವಾಯಿತು. ಅವರ ವ್ಯಕ್ತಿತ್ವಕ್ಕೂ ಕಳಂಕ ಬಂತು. ಕೌರವ ಸಹೋದರ ವಿಕರ್ಣ ನೀತಿ-ಅನೀತಿ, ಧರ್ಮ-ಅಧರ್ಮಗಳ ತಾರತಮ್ಯ ಭೀಷ್ಮರಿಗೇ ಇಲ್ಲದಿದ್ದರೆ ಅದು ಮತ್ಯಾರಿಗೆ ಇರಲು ಸಾಧ್ಯ ಎಂದು ಕೇಳುತ್ತಾನೆ. ಹಾಗೆಯೇ ನಮ್ಮ ಬುದ್ಧಿಜೀವಿಗಳಿಗೇ ನ್ಯಾಯಾನ್ಯಾಯ, ಸತ್ಯಾಸತ್ಯಗಳು ಗೊತ್ತಾಗದಿದ್ದರೆ, ಅವರು ಅದನ್ನು ಖಂಡಿಸದಿದ್ದರೆ ಸಮಾಜಘಾತುಕರಿಗೆ ಎಂಥ ಸಂದೇಶ ರವಾನೆಯಾಗುತ್ತದೆ ಯೋಚಿಸಿ. ವಿದ್ರೋಹಿಗಳು ತಾವೇನೇ ಮಾಡಿದರೂ ಬುದ್ಧಿಜೀವಿ ವರ್ಗ ತಮ್ಮನ್ನು ಬೆಂಬಲಿಸುತ್ತದೆ ಎಂದು ತಿಳಿದುಬಿಟ್ಟರೆ ದೇಶದಲ್ಲಿ ಎಂಥ ಅಶಾಂತಿ, ಅವಾಂತರ ನಡೆಯಬಹುದು? ಈಗ ಅದೇ ಅಲ್ಲವೇ ಆಗುತ್ತಿರುವುದು?
ಬಹುಶಃ ಇದೇ ಕಾರಣಕ್ಕೇ ಇರಬೇಕು ಜನ ಬುದ್ಧಿಜೀವಿಗಳೆಂದರೆ ಮೂಗು ಮುರಿಯುವುದು. ಅವರ ಮಾತು-ನಡತೆ-ಮೌನ ಎಲ್ಲವೂ ಜನಪ್ರಿಯ ಕಾದಂಬರಿಯ ಪಾತ್ರಗಳಂತೆ ಜನರಿಗೆ ಅವಗತವಾಗಿಬಿಟ್ಟಿವೆ. ನನ್ನೊಬ್ಬ ಗೆಳೆಯರು ಯಾವಾಗಲೂ ಹೇಳುವುದುಂಟು- 'ಬುದ್ಧಿಜೀವಿಗಳು ಮಹಾಮಾನವತಾವಾದಿಗಳು. ಬಾಂಬ್ ಸ್ಫೋಟದಲ್ಲಿ ಯಾರೋ ಸತ್ತಾಗ, ದೇಶ ವಿಭಜನೆಯ ಪರಿಣಾಮ, ಕೋಮುಸಂಘರ್ಷ ಎಂದೆಲ್ಲ ಬಡಬಡಿಸುತ್ತಾರೆ. ಅದೇ ತಮ್ಮವರು ಸತ್ತರೆ ಆಡಳಿತ ವೈಫಲ್ಯ, ನಾಗರಿಕರ ರಕ್ಷಣೆ ಎಂದು ಕೂಗಾಡುತ್ತಾರೆ. ಅವರ ಸಿದ್ಧಾಂತ ನಿಷ್ಠೆ ಅದ್ಭುತ. ಏನೇ ಆದರೂ ಅವರು ಒಂದು ಸೈದ್ಧಾಂತಿಕ ಚೌಕಟ್ಟಿನಲ್ಲೇ ಮಾತನಾಡುತ್ತಾರೆ' ಎಂದು.
ಕೆಲವು ಬುದ್ಧಿಜೀವಿಗಳ ಬಗ್ಗೆಯಾದರೂ ಈ ವ್ಯಾಖ್ಯಾನ ಸರಿ ಇರಬಹುದು ಎನ್ನಿಸುತ್ತದೆ. ಯಥಾರ್ಥ ಮಾತನಾಡಲಾಗದ ಇಂಥವರನ್ನೂ ದ್ರೌಪದಿ ಮೂರ್ಖರೆಂದು ಕರೆದಿದ್ದಾಳೇನೋ!
- ಡಾ. ವಿ.ಎನ್. ಹೆಗಡೆ
anisikeprabha@gmail.com