ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭಾರತದ ಹೇಳಿಕೆಗಳು ಬದಲಾಗಿದ್ದೇಕೆ?

Vishwanath S
Updated On : 7 Jun 2013, 10:31 am

ಈ ತಿಂಗಳ ಮೊದಲಲ್ಲಿ ಆಸ್ಟ್ರೇಲಿಯಾ ಇಂಡಿಯಾ ಇನ್ಸ್‌ಟಿಟ್ಯೂಟ್, ಮೆಲ್ಬೋರ್ನ್ ವಿ.ವಿ. ಮತ್ತು ಸಿಡ್ನಿಯ ಲೊವಿ ಇನ್ಸ್‌ಟಿಟ್ಯೂಟ್  "India poll 2013: Facing the Future' ಎಂಬ ವರದಿಯನ್ನು ಬಿಡುಗಡೆ ಮಾಡಿದವು.  ಅನ್ಯ ರಾಷ್ಟ್ರಗಳ ಬಗ್ಗೆ ಭಾರತೀಯರ ಭಾವನೆ ಮತ್ತು ವಿದೇಶಾಂಗ ನೀತಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನೊಳಗೊಂಡಿದ್ದ ವರದಿಯದು. ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶದ ಜನತೆಯನ್ನು ಮಾತನಾಡಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.
ಊಹಿಸಿದಂತೆ, ಅದರಲ್ಲಿ ವಿವಿಧ ರೀತಿಯ ವಿಚಾರಗಳಿವೆ. ಸದ್ಯದ ಮಂದಗತಿಯ ಏಳಿಗೆಯ ನಡುವೆಯೂ 74 ಪ್ರತಿಶತ ಭಾರತೀಯರು ಮುಂದಿನ 5 ವರ್ಷಗಳ ನಂತರದ ಭಾರತದ ಆರ್ಥಿಕ ಸ್ಥಿತಿಯ ಬಗ್ಗೆ ಆಶಾಭಾವನೆ ಹೊಂದಿದ್ದಾರೆ. ಇನ್ನು 'ಅನ್ಯ ರಾಷ್ಟ್ರಗಳ ಬಗೆಗೆ ನಿಮ್ಮ ಅಭಿಪ್ರಾಯವೇನು?' ಎನ್ನುವ ಪ್ರಶ್ನೆ ಕೇಳಿದಾಗ, 62 ಪ್ರತಿಶತ ಜನ ಅಮೆರಿಕವನ್ನು ಮೆಚ್ಚಿಕೊಂಡಿದ್ದಾರೆ. ಅಮೆರಿಕ ಭಾರತದ ಒಳ್ಳೆಯ ಸ್ನೇಹಿತ ಎಂಬ ಭಾವನೆ ಬಹುತೇಕರಿಗಿದೆ.
ಇನ್ನು ಚೀನಾಕ್ಕೆ ಸಂಬಂಧಿಸಿದ ವಿಷಯಗಳು ಎಲ್ಲದಕ್ಕಿಂತಲೂ ಕುತೂಹಲಕರವಾಗಿವೆ. ಭಾರತದ ಬಹುಸಂಖ್ಯಾತರು ಚೀನಾವನ್ನು ಅನುಮಾನದಿಂದಲೇ ನೋಡುತ್ತಾರೆ ಎನ್ನುವ ಅಂಶ ಸ್ಪಷ್ಟವಾಗುತ್ತದೆ ಎಂದು ಆ ವರದಿ ಹೇಳುತ್ತದೆ. ಏಷಿಯಾ ಖಂಡದ ಸೂಪರ್ ಪವರ್ ಆಗಬೇಕು, ಅದನ್ನು ಆಳಬೇಕೆಂಬ ಗುರಿ ಚೀನಾಕ್ಕಿದೆ ಎಂದು 70 ಪ್ರತಿಶತ ಮಂದಿ ಭಾವಿಸುತ್ತಾರೆ. ಚೀನಾದ ಪ್ರಭಾವವನ್ನು ಕಡಿಮೆ ಮಾಡಲು ಭಾರತ ಅನ್ಯ ದೇಶಗಳೊಂದಿಗೆ ಕೈ ಜೋಡಿಸಬೇಕು ಎಂದು ಆಪೇಕ್ಷಿಸುವವರ ಸಂಖ್ಯೆ 65 ಪ್ರತಿಶತದಷ್ಟಿದೆ(ಅದಾಗ್ಯೂ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚೀನಾ ಮತ್ತು ಭಾರತ ಒಂದಾಗಿ ಮುಂದುವರಿಯಬೇಕು ಎನ್ನುವವರ ಸಂಖ್ಯೆ 64 ಪ್ರತಿಶತವಿದೆ). 97 ಪ್ರತಿಶತದಷ್ಟು ಜನ ವಿದೇಶಾಂಗ ನೀತಿಯ ಪ್ರಮುಖ ಗುರಿ ಭಾರತದ ಆರ್ಥಿಕತೆಯನ್ನು ಬಲಿಷ್ಠಪಡಿಸುವುದೇ ಆಗಬೇಕು ಎಂದು ಬಯಸಿದರೆ; ಭಾರತದ ವಿದೇಶಾಂಗ ನೀತಿಯ ಗುರಿಯನ್ನು ಯಶಸ್ವಿಯಾಗಿ ಸಾಧಿಸಬೇಕಾದರೆ ಸೇನೆಯ ಸಬಲೀಕರಣವಾಗಬೇಕು ಎಂದು ಹೇಳುವವರ ಸಂಖ್ಯೆ 99 ಪ್ರತಿಶತ.
ಈ ಅಂಕಿ ಸಂಖ್ಯೆಯನ್ನು ನೋಡಿದಾಗ, ಇದನ್ನೆಲ್ಲ ನೈಜ ಘಟನೆಗಳು ಮತ್ತು ರಾಜತಾಂತ್ರಿಕತೆಯೊಂದಿಗೆ ಹೊಂದಿಸಿ ನೋಡಬೇಕು ಎಂದೆನಿಸುವುದು ಸಹಜ. ಡೆಸ್ಪಾಂಗ್, ಲದಾಖ್‌ನಲ್ಲಿ ಇತ್ತೀಚೆಗೆ ನಡೆದ ಅಕ್ರಮ ಒಳನುಸುಳುವಿಕೆ ಮತ್ತು ಚೀನಾದ ಪ್ರಧಾನಿ ಲೀ ಕಿಯಾಂಗ್‌ರ ಭಾರತ ಭೇಟಿಯ ಹಿನ್ನೆಲೆಯಲ್ಲಿ ಇದನ್ನೆಲ್ಲ ಪರೀಕ್ಷಿಸುವುದು ಒಳಿತು. ಚೀನಿಯರು ಭಾರತದ ಗಡಿಯೊಳಗೆ ಸುಮಾರು 19 ಕಿಲೋಮೀಟರ್‌ನಷ್ಟು ಒಳ ಬಂದಿದ್ದು ಗಡಿ ಒಪ್ಪಂದದ ಉಲ್ಲಂಘನೆಯಷ್ಟೇ ಅಲ್ಲದೆ, ಪ್ರಚೋದನಾತ್ಮಕ ನಡೆಯೂ ಹೌದು. ಆದರೆ ಚೀನಾದ ಈ ನಡೆಗೆ ಹೇಗೆ ಪ್ರತಿಕ್ರಿಯಿಸಬೇಕೆಂಬ ಬಗ್ಗೆ ಪ್ರಧಾನಮಂತ್ರಿ ಕಾರ್ಯಾಲಯ ಮತ್ತು ವಿದೇಶಾಂಗ ಸಚಿವಾಲಯದ ನಡುವೆ ಆ ಸಮಯದಲ್ಲಿ ಒಮ್ಮತವೇ ಇರಲಿಲ್ಲ!
ಒಂದು ವರ್ಗವಂತೂ ಈ ಘಟನೆಗೆ ಹೆಚ್ಚು ಒತ್ತು ಕೊಡದೇ ಇರುವುದೇ ಒಳಿತು ಎಂದು ಹೇಳಿತು. 'ಚೀನಿಯರು ಬೇಕಿದ್ದರೆ ತಮ್ಮ ಟೆಂಟ್‌ಗಳನ್ನು ಅಲ್ಲೇ ಉಳಿಸಿಕೊಳ್ಳಲಿ, ನಾವು ಇನ್ನಿತರ ಆಯಾಮಗಳತ್ತ ಗಮನ ಹರಿಸೋಣ. ಇನ್ನೊಂದು ದಶಕದವರೆಗೆ ಚೀನಾದ ಪ್ರಧಾನಿಯಾಗಿ ಉಳಿಯಲಿರುವ ಲೀ ಕಿಯಾಂಗ್ ಅವರಿಗೆ ಮುಖಭಂಗ ಮಾಡುವುದು ಬೇಡ' ಎನ್ನುವುದು ಅದರ ವಾದವಾಗಿತ್ತು. ಇನ್ನೊಂದು ವರ್ಗದ ವಾದ ಇದಕ್ಕೆ ತದ್ವಿರುದ್ಧವಿತ್ತು. ಡೆಪ್ಸಾಂಗ್‌ನಿಂದ ಚೀನಿಯರು ಟೆಂಟ್‌ಗಳನ್ನು ಎತ್ತಂಗಡಿ ಮಾಡದಿದ್ದರೆ ಚೀನಿ ಪ್ರಧಾನಿಯನ್ನು ಭಾರತದಲ್ಲಿ ಕಾಲಿಡಲು ಬಿಡಬಾರದು ಎಂದು ಅವರು ಹೇಳಿದರು. ಆದರೆ ಸತ್ಯವೇನೆಂದರೆ, ಟೆಂಟ್ ಹೂಡಿದ ಸೇನೆ ನಿಜಕ್ಕೂ ಅಪಾಯದಲ್ಲಿತ್ತು. ಅದಕ್ಕೆ 'ಬ್ಯಾಕ್‌ಅಪ್‌' ಇರಲಿಲ್ಲ. ಅಲ್ಲದೆ ನೂತನ ಪ್ರಧಾನಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದೂ ಅದಕ್ಕೆ ಇಷ್ಟವಿರಲಿಲ್ಲವಾದ್ದರಿಂದ ಅದು ಹಿಂದಕ್ಕೆ ಸರಿಯಿತು ಎನ್ನುವ ಮಾತಿದೆ.
ಅಂತೂ ಮೊದಲಿನ ವರ್ಗಕ್ಕೆ ಗೆಲುವಾದಂತಾಯಿತು. ಚೀನಿಯರು ಹಿಂದೆ ಸರಿದರು, ಚೀನಾದ ಪ್ರಧಾನಿಗಳು ಮುಂದೆ ಬಂದರು(ಭಾರತಕ್ಕೆ). ಆಗ ದೆಹಲಿಯಲ್ಲಿಯೇ ನಮ್ಮ ಪ್ರಧಾನಿಗಳು ಚೀನಾದ ಪ್ರಧಾನಿಗಳಿಗೆ, ಗಡಿ ಭಾಗದಲ್ಲಿನ 'ಶಾಂತಿ ಮತ್ತು ಪ್ರಶಾಂತತೆ'ಯೇ ಎರಡೂ ದೇಶಗಳ ನಡುವಿನ ಸಂಬಂಧಕ್ಕೆ 'ಬುನಾದಿ' ಎಂದು ಹೇಳಿದರು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕಡಿಮೆ ಬಲಿಷ್ಠ ರಾಷ್ಟ್ರವೊಂದು, ಡೆಪ್ಸಾಂಗ್‌ನಂತಹ ಘಟನೆಗಳನ್ನು ಮತ್ತೊಮ್ಮೆ ನಡೆಸಿ ಶಾಂತಿಯನ್ನು ಹದಗೆಡಿಸಬಾರದು' ಎಂದು ದೊಡ್ಡ ರಾಷ್ಟ್ರಕ್ಕೆ ಎಚ್ಚರಿಕೆ ನೀಡಿತು.
ಮನಮೋಹನ್ ಸಿಂಗ್ ಅವರ ಎಚ್ಚರಿಕೆ ಸರಿಯಾಗಿಯೇ ಇತ್ತು, ಅಲ್ಲದೆ ಅವರು ಭಾರತದ ಮುಖ್ಯವಾಹಿನಿ ಭಾವನೆಯನ್ನು ಚೀನೀ ಪ್ರಧಾನಿಗಳ ಅರಿವಿಗೆ ತಲುಪಿಸುವ ಪ್ರಯತ್ನ ಮಾಡಿದರು. ಆದರೆ ಅದಕ್ಕಿಂತ ಮುಂಚೆ ನಮ್ಮ ಸರ್ಕಾರದಿಂದ ಬಂದ ಹೇಳಿಕೆಗಳೆಲ್ಲ ತದ್ವಿರುದ್ಧ ರೂಪದಲ್ಲೇ ಇದ್ದವು. ಸಿಂಗ್ ಅವರು ಚೀನಿಯರ ಒಳನುಸುಳುವಿಕೆಯನ್ನು 'ಸ್ಥಳೀಯ ವಿದ್ಯಮಾನ' ಎಂದು ಕರೆದಿದ್ದರು. ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಕಣ್ಣಿಗೆ ಅದು 'ಮೊಡವೆ'ಯಷ್ಟು ಚಿಕ್ಕ ಸಂಗತಿಯಾಗಿ ಕಂಡಿತು. ಲೀ ಅವರು ಭಾರತಕ್ಕೆ ಬರುವ ಕೆಲವೇ ದಿನಗಳ ಮುನ್ನ ಸಲ್ಮಾನ್ ಖುರ್ಷಿದ್ ಚೀನಾಕ್ಕೆ ಭೇಟಿಕೊಟ್ಟರು. ಅಲ್ಲಿ ಅವರು 'ಚೀನಿಯರು ಡೆಪ್ಸಾಂಗ್‌ಗೆ ಏಕೆ ಬಂದಿದ್ದರೋ ತಮಗೆ ಗೊತ್ತಿಲ್ಲವೆಂದೂ ಮತ್ತು ಆ ವಿಚಾರವನ್ನು ಚರ್ಚಿಸುವ ಅವಶ್ಯಕತೆ ಇಲ್ಲವೆಂದೇ ತಮಗೆ ಅನಿಸುತ್ತದೆಂದು' ಹೇಳಿದ್ದರು. ಈ ಹೇಳಿಕೆಗಳಿಗೂ, ಮನಮೋಹನ್ ಸಿಂಗ್ ಅವರು ಲೀ ಅವರಿಗೆ ದೆಹಲಿಯಲ್ಲಿ ಕೊಟ್ಟ ಎಚ್ಚರಿಕೆಗೂ ಸಂಬಂಧವೇ ಇಲ್ಲ. ಹಾಗಿದ್ದರೆ ಬದಲಾಗಿದ್ದು ಏನು?
'ಸ್ಥಳೀಯ ವಿದ್ಯಮಾನ' ಎಂಬ ಅಸಡ್ಡೆಯ ಹೇಳಿಕೆಯಿಂದ ಹಿಡಿದು 'ಶಾಂತಿ ಮತ್ತು ಪ್ರಶಾಂತತೆಯನ್ನು ಕದಡಬಾರದು' ಎಂಬಂಥ ಎಚ್ಚರಿಕೆಯವರೆಗಿನ ಸಮಯದಲ್ಲಿ ಕ್ಯಾಬಿನೆಟ್‌ನಲ್ಲಿ ಈ ವಿಷಯವಾಗಿ ಬಹಳಷ್ಟು ಚರ್ಚೆ ನಡೆಯಿತು. ಆ ಚರ್ಚೆ ನಡೆದದ್ದು ಪ್ರಧಾನ ಮಂತ್ರಿ ಕಾರ್ಯಾಲಯ, ವಿದೇಶಾಂಗ ಸಚಿವಾಲಯ, ರಕ್ಷಣಾ ಸಚಿವಾಲಯ ಮತ್ತು ಈ ಸಮಸ್ಯೆಯನ್ನು ಬಗೆಹರಿಸಲು ನಿಯೋಜಿಸಲ್ಪಟ್ಟ ಅಧಿಕಾರಿಗಳ ಮಧ್ಯೆ. ಒಂದಂತೂ ಸ್ಪಷ್ಟವಾಗಿ ಅರಿವಾಗುತ್ತದೆ: ಚೀನಿಯರು ಹಿಂದೆ ಸರಿಯದಿದ್ದರೆ ಅವರ ಪ್ರಧಾನಿಗಳನ್ನು ಭಾರತದಲ್ಲಿ ಕಾಲಿಡಲು ಬಿಡಬಾರದು ಎಂದು ವಾದಿಸುತ್ತಿದ್ದ ವಿದೇಶಾಂಗ ಸಚಿವಾಲಯದ ಒಂದು ವರ್ಗ, ನಾಗರಿಕ ಸಮಾಜ, ಮಾಧ್ಯಮಗಳು ಮತ್ತು ರಾಜಕೀಯ ವಿಶ್ಲೇಷಕರ ಅಭಿಪ್ರಾಯವನ್ನು ನೋಡಿ ಆ ರೀತಿ ವಾದಿಸಿತ್ತು.
ಈ ವರ್ಗದ ದೃಷ್ಟಿಗೆ ಎರಡು ಪ್ರಮುಖ ಅಂಶಗಳು ಕಂಡವು. ಒಂದು ವಿದೇಶಾಂಗ ನೀತಿಯ ಮಧ್ಯಸ್ಥಗಾರರ ಕ್ಷೇತ್ರ ವಿಸ್ತಾರವಾಗುತ್ತಿರುವುದು ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಎದುರು ಹಾಕಿಕೊಳ್ಳುವುದು ತರವಲ್ಲ ಎನ್ನುವುದು. ಇನ್ನೊಂದು ವರ್ಗ 'ಸ್ಥಳೀಯ ವಿದ್ಯಮಾನ' ಎಂಬ ಕ್ಲೀಷೆಯನ್ನು ಬಳಸುವುದೊಳಿತು ಎಂದು ಪ್ರಧಾನಿಗಳಿಗೆ ಹೇಳಿತು. ಹಾಗೆ ಮಾಡುವುದರಿಂದ ಚೀನಾಕ್ಕೆ ಸಿಟ್ಟು ಬರುವುದಿಲ್ಲ ಮತ್ತು  ತಟಸ್ಥ ನೀತಿಗೆ ಹಾನಿಯಾದಂತೆಯೂ ಆಗುವುದಿಲ್ಲ ಎಂಬುದು ಅದರ ಲೆಕ್ಕಾಚಾರವಾಗಿತ್ತು.
ಹಾಗಿದ್ದರೆ ಯಾವ ವರ್ಗದ ವಾದ ಸರಿ?  ಯಾವ ವರ್ಗದ ರಾಜಕಾರಣಿಗಳಿಗೆ ಆಧುನಿಕ ರಾಜತಾಂತ್ರಿಕೆಯ ಬಗ್ಗೆ ಹೆಚ್ಚು ಅರಿವಿದೆ ಎಂದಾಯಿತು?  ರಾಜತಾಂತ್ರಿಕ ನಿರ್ಣಯಗಳ ಮೇಲೆ ಜನರ ಅಭಿಪ್ರಾಯಗಳ ಒತ್ತಡ ಬೀಳಬಾರದು, ಹಾಗಂತ ಸಾಮಾನ್ಯ ಜನರ ಅಭಿಪ್ರಾಯಗಳನ್ನೆಲ್ಲ ಬದಿಗೊತ್ತಿ ಎಲ್ಲವನ್ನೂ ನೀತಿ ನಿರೂಪಕರೇ ನಿರ್ಧರಿಸುವಂತೆ ಆಗಬಾರದು ಅಲ್ಲವೇ?

 -ಅಶೋಕ್ ಮಲಿಕ್ ಅಂಕಣಕಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement