ಇನ್ಫಿ ಮೂರ್ತಿ ಮತ್ತೆ ಕ್ಲಿಕ್ ಆಗ್ತಾರಾ?
ಇನ್ಫೊಸಿಸ್ ಮತ್ತೆ ಸುದ್ದಿಯಲ್ಲಿದೆ. ನಾರಾಯಣಮೂರ್ತಿ ಮತ್ತೆ ಕಂಪನಿಯ ಸಾರಥ್ಯ ವಹಿಸಿಕೊಂಡಿರುವುದರಿಂದ. ಇದು ಕರ್ನಾಟಕದ ನೆಲದ್ದೇ ಕಂಪನಿಯಾಗಿರುವುದರಿಂದ ಕುತೂಹಲಕಾರಿ ವಿದ್ಯಮಾನವೂ ಹೌದು. ಇನ್ಫೊಸಿಸ್ನ ನೇತೃತ್ವವನ್ನು ನಾರಾಯಣಮೂರ್ತಿ ಮತ್ತೆ ವಹಿಸಿಕೊಂಡಿರುವುದರ ಬಗ್ಗೆ ನಿರೀಕ್ಷೆ ಹಾಗೂ ಆಕ್ಷೇಪಗಳ ಧ್ವನಿ ಹೊತ್ತ ಇಬ್ಬಗೆಯ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ. ಬಹುಶಃ ಅದೇ ವಲಯದಲ್ಲಿರುವವರು ಈ ಬಗ್ಗೆ ಏನು ಪ್ರತಿಕ್ರಿಯಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ಔಟ್ಲುಕ್ ನಿಯತಕಾಲಿಕವು ಬೆಂಗಳೂರು ನೆಲೆಯ ಸಾಫ್ಟ್ವೇರ್ ಕಂಪನಿ 'ಮೈಂಡ್ಟ್ರೀ' ಪ್ರವರ್ತಕ ಸುಬ್ರತೋ ಬಾಗ್ಚಿ ಅವರನ್ನು ಸಂದರ್ಶಿಸಿದೆ. ಅವರು ಹೇಳೋದೇನೆಂದರೆ.....
- ಇನ್ಫೊಸಿಸ್ನಲ್ಲಿ ನಾರಾಯಣಮೂರ್ತಿ ಎದುರಿಗಿರುವ ಸವಾಲುಗಳ್ಯಾವುವು? ಅವರು ಏನನ್ನು ಸಾಧಿಸಬಲ್ಲರು?
- ಅವರು ಕಾರ್ಯತಂತ್ರ ಹೆಣೆಯುವಲ್ಲಿ ಪರಿಣತರು ಆಗಬೇಕು ಎಂದೇನಿಲ್ಲ. ಅವರು ಇನ್ಫೊಸಿಸ್ನವರನ್ನು ಮತ್ತೆ ಕಾರ್ಯತಂತ್ರದ ಧಾಟಿಯಲ್ಲಿ ಯೋಚನೆಗೆ ಹಚ್ಚುವಲ್ಲಿ ಸಫಲರಾಗುವರೇ ಎಂಬುದು ಇಲ್ಲಿರುವ ಪ್ರಶ್ನೆ. ಪರ್ಯಾಯ ಮಾರ್ಗಗಳನ್ನು ಸೂಚಿಸಬಲ್ಲ ಕಾರ್ಯತಂತ್ರ ಪರಿಣತರನ್ನು ಅವರು ರೂಪಿಸಬಲ್ಲರೇ? ವಿಮರ್ಶಾತ್ಮಕ ಪ್ರಶ್ನೆಗಳನ್ನು ಹೂಡಿ, ವಾದಗಳೇ ಮೌನವಾಗಿಬಿಟ್ಟಿರುವ ಘಟಕದಲ್ಲಿ ಆಯ್ಕೆಗಳನ್ನು ವಿಮರ್ಶಿಸುವ ವ್ಯವಸ್ಥೆ ಕಟ್ಟುತ್ತಾರೆಯೇ? ಇದು ಆಗದ ಕೆಲಸ ಬಿಡು ಎಂಬ ಟೀಕೆ ಹಾಗೂ ಕಟುವಿಮರ್ಶೆಗಳಿಗೆ ಹಿಂಜರಿಯದೇ ಮುನ್ನುಗ್ಗುವುದು ಅವರ ಈಗಿನ ತುರ್ತು. ಖಂಡಿತ, ಮೂರ್ತಿಯವರ ಕಾಲಕ್ಕೂ ಇವತ್ತಿಗೂ ಬದಲಾವಣೆಗಳು ಸಾಕಷ್ಟಾಗಿವೆ. ಆದರೇನಂತೆ? ಅವರ ಕೆಲಸವೀಗ ಇನ್ಫೊಸಿಸ್ ಅನ್ನು ಗತ ವೈಭವದ ದಿನಗಳಿಗೆ ಮರಳಿ ಒಯ್ಯುವುದಲ್ಲ. ಹೊಸ ವೈಭವದ ದಿನಗಳತ್ತ ಕೊಂಡೊಯ್ಯುವುದು. ನಾರಾಯಣಮೂರ್ತಿಯವರನ್ನು ನಾನು ತಿಳಿದುಕೊಂಡಿರುವುದು ಸರಿಯಾಗಿದೆ ಎಂದಾದರೆ, ಅವರು ಹೊಯ್ದಾಡುತ್ತಿರುವ ವಿಮಾನವನ್ನು ಸ್ಥಿರತೆಗೆ ತಂದು ಮೋಡಗಳನ್ನು ಛೇದಿಸುತ್ತಾರೆ. ಅರ್ಧದಾರಿಯಲ್ಲೇ ಹೊಸ ಪೈಲಟ್ ಅನ್ನು ಕೂರಿಸುತ್ತಾರೆ.
- ಸ್ವಜನಪಕ್ಷಪಾತದ ಆರೋಪಗಳಿಗೆ ಏನನ್ನುವಿರಿ? ತಮ್ಮ ಮಗ ರೋಹನ್ರನ್ನು ಕರೆತರುವ ಮೂಲಕ ಕಂಪನಿಯಲ್ಲಿ ಕುಟುಂಬ ಸದಸ್ಯರನ್ನು ಪೇರಿಸಿಡುವುದಿಲ್ಲ ಎಂಬ ಅವರದ್ದೇ ತತ್ವವನ್ನು ಮರೆತಿದ್ದಾರೆ...
- ಇದು ಇನ್ಫೊಸಿಸ್ನ ಆಂತರಿಕ ವಿಷಯವಾದ್ದರಿಂದ ಆ ಬಗ್ಗೆ ಪ್ರತಿಕ್ರಿಯಿಸಲಾರೆ. ಆದರೂ ಸಾರ್ವಜನಿಕ ಗ್ರಹಿಕೆ ಹೇಗಿದೆ ಎಂಬ ಬಗ್ಗೆ ನಾರಾಯಣಮೂರ್ತಿಯವರು ಗಮನ ಹರಿಸಲಿಲ್ಲವೇ ಎಂಬುದು ನನಗೆ ಆಶ್ಚರ್ಯದ ವಿಷಯವಾಗುತ್ತದೆ. ಅವರೇನು ಮಾಡುತ್ತಿದ್ದಾರೆ ಎಂಬುದನ್ನು ಅವರು ಚೆನ್ನಾಗಿ ಅರಿತಿರುತ್ತಾರಾದ್ದರಿಂದ ಈ ಬಗ್ಗೆ ನಿರ್ಣಾಯಕವಾಗಿ ಏನೂ ಹೇಳುವುದು ಬೇಡ. ಸ್ವಜನಪಕ್ಷಪಾತ ಎಂಬುದು ಬದುಕಿನ ಅತ್ಯಮೂಲ್ಯ ಸಾಧನೆಗೆ ಹೇಗೆ ಗ್ರಹಣ ಹಿಡಿಸುತ್ತದೆ ಎಂಬುದು ಒಬ್ಬ ಮುತ್ಸದ್ಧಿಯಾಗಿ, ಪ್ರಮುಖ ಷೇರುದಾರರಾಗಿ ಅವರಿಗೆ ತಿಳಿದೇ ಇರುತ್ತದೆ.
- ಮೂರ್ತಿಯವರಿಗೆ ಇನ್ಫೊಸಿಸ್ ಅನ್ನು ಅದರ ಪಾಡಿಗೆ ಬಿಡಲು ಆಗುತ್ತಿಲ್ಲ. ಯಾವಾಗಲೂ ಅಧಿಕಾರ ಕೇಂದ್ರದಲ್ಲಿರಬೇಕು ಎಂಬುದು ಅವರ ತುಡಿತ ಎಂಬ ಟೀಕೆಗಳಿವೆ...
- ಇವೆಲ್ಲ ತುಂಬ ಊಹಾತ್ಮಕ ಹೇಳಿಕೆಗಳಾಗುತ್ತವೆ. ನಾರಾಯಣಮೂರ್ತಿ ಬಹಳ ಆಳವಾಗಿ ಆಲೋಚಿಸುವವರು. ಎಲ್ಲರೂ ಬರೆದುಕೊಂಡಿರುವ ಸ್ಕ್ರಿಪ್ಟ್ಗೆ ಬೇರೆಯಾದದ್ದನ್ನು ಮಾಡಬೇಕಿರುವುದು ಇಂದಿನ ಅಗತ್ಯವಾಗಿದೆ. ಅದರಲ್ಲಿ ಮೂರ್ತಿ ನಿಪುಣರು. ಏನು ಮಾಡಲಿದ್ದಾರೆ ಎಂದು ಕಾದು ನೋಡುವುದು ನಮ್ಮ ಕೆಲಸ.
- ಭಾರತದ ರಾಷ್ಟ್ರಪತಿ ಆಗುವ, ರಾಯಭಾರಿ ಆಗುವ ಅವರ ಆಸೆ ಈಡೇರಲಿಲ್ಲ. ಅವರ ಸಮಕಾಲೀನರಾದ ನಂದನ್ ನೀಲೇಕಣಿ ಸರ್ಕಾರಿ ಸೇವೆಯಲ್ಲಿ ಕಣ್ಣುಕುಕ್ಕುವ ಹುದ್ದೆಗೆ ಹೋದರು...