ಎತ್ತ ಹೊರಟಿದೆ ಈ ಎಗ್ಗಿಲ್ಲದ ರಾಜಕಾರಣ?
ಮೊನ್ನೆ ಅಸೆಂಬ್ಲಿ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಗೆದ್ದಾಗ ಅನೇಕ ಜನರಂತೆ ನನಗೂ ಸಂತೋಷವಾಗಿದ್ದು ಕಾಂಗ್ರೆಸ್ ಗೆದ್ದದ್ದಕ್ಕಲ್ಲ, ಯಾವುದೋ ಒಂದು ಪಕ್ಷಕ್ಕೆ ಬಹುಮತ...
ಮೊನ್ನೆ ಅಸೆಂಬ್ಲಿ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಗೆದ್ದಾಗ ಅನೇಕ ಜನರಂತೆ ನನಗೂ ಸಂತೋಷವಾಗಿದ್ದು ಕಾಂಗ್ರೆಸ್ ಗೆದ್ದದ್ದಕ್ಕಲ್ಲ, ಯಾವುದೋ ಒಂದು ಪಕ್ಷಕ್ಕೆ ಬಹುಮತ ಬಂದಿದ್ದಕ್ಕೆ. ಒಂದು ಪಕ್ಷಕ್ಕೆ ಸುಭದ್ರ ಸರಕಾರ ನಡೆಸಬಹುದಾದ ನಿಚ್ಚಳ ಬಹುಮತ ಬಂದಿತಲ್ಲಾ ಅನ್ನೋ ಸಮಾಧಾನ ಒಂದು ಕಡೆಯಾದರೆ, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಇರುವುದರಿಂದ ರಾಜ್ಯಕ್ಕೆ ಒಳ್ಳೆಯದಾಗಬಹುದು ಎಂಬ ಸಂತಸ ಇನ್ನೊಂದು ಕಡೆ.
ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ಹಲವರು ಸಿದ್ದೂ ನಡೆಯನ್ನು ನೋಡಿ ಹುಬ್ಬೇರಿಸಿದರು. ಬಡವರಿಗೆ 1 ರುಪಾಯಿಗೆ ಕೇಜಿ ಅಕ್ಕಿ, ಗೋಹತ್ಯೆ ನಿಷೇಧ ಕಾನೂನು ವಾಪಸ್ಸು ತೆಗೆದುಕೊಳ್ಳಬಹುದಾದ ಸೂಚನೆ ನೀಡಿದರು. ನಂತರ ಸರ್ಕಾರೀ ಪ್ರಾಯೋಜಿತ ಅಗ್ಗದ ಮದ್ಯದ ಸರಬರಾಜು ಜೊತೆಗೇ ಉಡುಪಿ ಮತ್ತು ಗೋಕರ್ಣ ದೇವಾಲಯಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಮಾತೂ ಬಂತು. ಆಮೇಲೆ ಗುಟ್ಕಾ ನಿಷೇಧದ ವಿದ್ಯಮಾನ. ಸೂಕ್ಷ್ಮವಾಗಿ ನೋಡಿದರೆ ಇವೆಲ್ಲಾ ಮುಂಬರುವ ಲೋಕಸಭಾ ಚುನಾವಣೆಯನ್ನು ಗುರಿಯಲ್ಲಿಟ್ಟುಕೊಂಡು ತೆಗೆದುಕೊಂಡ ನಿರ್ಧಾರಗಳು. ಇವೆಲ್ಲವಕ್ಕೂ ಕಾಂಗ್ರೆಸ್ ಹೈಕಮಾಂಡಿನ ಕುಮ್ಮಕ್ಕು ಇದ್ದೇ ಇದೆ.
ಬಡವರಿಗೆ ತಿಂಗಳಿಗೆ ಮೂವತ್ತು ಕೆಜಿ ಅಕ್ಕಿ ಮೂವತ್ತು ರುಪಾಯಿಗೆ ಯಾರಿಗೆ ಬೇಡ? ಇದು ಬಿ.ಪಿ.ಎಲ್ ಕಾರ್ಡುದಾರರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಕಡೆಗೆ ಕಾಂಗ್ರೆಸ್ನ ದೊಡ್ಡ ಹೆಜ್ಜೆ. ಈ ಯೋಜನೆಗಳು ಮೇಲ್ನೋಟಕ್ಕೆ ಬಡವರನ್ನು ಉದ್ಧಾರ ಮಾಡುವಂತೆ ತೋರಿದರೂ ಒಳಗೆ ಬಡವರ ಬಗ್ಗೆ ಕಾಳಜಿಯಂತೂ ಖಂಡಿತಾ ಇಲ್ಲ. ಈ ರೀತಿ (ಪುಕ್ಕಟೆ ಕೊಟ್ಟ ಹಾಗೇ) ಅಕ್ಕಿಯನ್ನು ಕೊಟ್ಟರೆ ಯಾವ ಕೂಲಿಯವರು ಕಷ್ಟಪಟ್ಟು ಕೆಲಸಮಾಡಲು ಇಷ್ಟ ಪಡುತ್ತಾರೆ? ಅಗ್ಗದ ಅಕ್ಕಿಯಿಂದ ಊಟಮಾಡುತ್ತಾ 2 ರುಪಾಯಿಯ ಸರಾಯಿಯನ್ನು ಕುಡಿದು ಹಾಯಾಗಿ ಗುಡಿಸಲಿನಲ್ಲೇ ಮಲಗುತ್ತಾರೆ ಅಷ್ಟೇ. ಇದೇನಾ ಸಾಮಾಜಿಕ ನ್ಯಾಯ? ತಮಿಳು ನಾಡಿನಲ್ಲಿ ಕೊಟ್ಟಂತೆ ಟಿ.ವಿಯನ್ನೂ ಕೊಟ್ಟುಬಿಟ್ಟರೆ ಮನೆಯಲ್ಲಿ ಬೇಸರವೂ ಕಳೆಯುತ್ತಿತ್ತಲ್ಲ? 'ಹಸಿವಾದವನಿಗೆ ತಿನ್ನಲು ಮೀನನ್ನು ಕೊಡಬೇಡ, ಮೀನನ್ನು ಹಿಡಿಯುವ ತಂತ್ರಹೇಳಿಕೊಡು' ಎಂಬ ನಾಣ್ಣುಡಿ ಕಾಂಗ್ರೆಸಿಗರಿಗೆ ಅರ್ಥವಾದೀತಾ?
ಗೋಹತ್ಯೆ ಮಾಡಲು ಅನುಮತಿಕೊಟ್ಟರೆ ಮುಸಲ್ಮಾನರು, ಕ್ರಿಶ್ಚಿಯನ್ನರು ಮತ್ತು ದಲಿತರ ಓಟು ಪಡೆಯಬಹುದೆಂಬ ಮುಂದಾಲೋಚನೆ. ಕನಕಪೀಠದ ಗುರುಗಳೊಬ್ಬರಂತೂ ಸಿದ್ದರಾಮಯ್ಯನವರ ಗೋಹತ್ಯೆಯ ಬಗೆಗಿನ ನುಡಿಮುತ್ತುಗಳನ್ನು ಕೇಳಿ ಖುಷಿಯ ಭರದಲ್ಲಿ 'ನಮಗೆ ಕುರಿಯೇ ಗೋವಿಗಿಂತ ಪವಿತ್ರವಾದುದು, ಗೋಹತ್ಯೆಮಾಡಿದರೆ ಏನೇನೂ ಪಾಪವಿಲ್ಲ, ಕುರಿಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು' ಎಂದುಬಿಟ್ಟರು. ಶೇಖಡಾ 99ಮಂದಿ ಹಿಂದುಗಳು ಗೋಹತ್ಯೆ ಬೇಡವೆನ್ನುವಾಗ ಇಂತಹ ಮನಸ್ಥಿತಿಯಿರುವವರನ್ನು ಏನನ್ನಬೇಕು?
ಆದಾಗ್ಯೂ ಇಲ್ಲಿ ಕಾಂಗ್ರೆಸ್ಸಿಗೆ ಎಡವಟ್ಟಾಗುವ ಲಕ್ಷಣವೂ ಇದೆ. ಗೋಹತ್ಯೆಯ ಬಗ್ಗೆ ಮುಸಲ್ಮಾನರಲ್ಲೇ ಭಿನ್ನಾಭಿಪ್ರಾಯವಿದೆ. ಸಮೀಕ್ಷೆಯೊಂದರ ಪ್ರಕಾರ 40 ಪ್ರತಿಶತ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ಗೋವುಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಸುಮಾರು 70 ಭಾಗ ಮುಸಲ್ಮಾನರು ಇರುವ ಕಾಶ್ಮೀರದಲ್ಲೇ ಗೋಹತ್ಯೆಗೆ 10ವರ್ಷ ಜೈಲು ಶಿಕ್ಷೆ ಇದೆ. ಇಷ್ಟೇ ಅಲ್ಲದೆ ಅನಾವಶ್ಯಕವಾಗಿ ದಲಿತರ ಹೆಸರನ್ನು ಇಂಥ ವಿಷಯಕ್ಕಾಗಿ ಎಳೆದುತರುತ್ತಿದೆ ಕಾಂಗ್ರೆಸ್. ಇಂಥ ತೀರ್ಮಾನಗಳಿಂದಾಗಿ ಅನವಶ್ಯಕವಾಗಿ ಕೋಮುಗಳ ನಡುವೆ ಅಸಹನೆ ಹೆಚ್ಚುವುದಿಲ್ಲವೇ?
ಉಡುಪಿ ಮತ್ತು ಗೋಕರ್ಣ ದೇವಾಲಯಗಳನ್ನು ಸರ್ಕಾರೀಕರಣ ಮಾಡುತ್ತೇವೆಂದರೆ ಕೆಲವರಿಗೆ ಖುಷಿಯಾಗುತ್ತದೆ. ಕುರುಬರಿಗೆ ಉಡುಪಿಯ ಕೃಷ್ಣ ದೇವಾಲಯದ ಜತೆ ಭಾವನಾತ್ಮಕ ಸಂಬಂಧವಿದೆ. ಸ್ವತಃ ಕುರುಬ ಜನಾಂಗದಿಂದ ಬಂದ ಸಿದ್ದರಾಮಯ್ಯನವರಿಗೆ ಕುರುಬರನ್ನು ಈ ವಿಷಯದಲ್ಲಿ ಗುಂಪುಗೂಡಿಸುವುದು ಬಲು ಸಲೀಸಿನ ಕೆಲಸ. ಹೇಗೇ ಆದರೂ ಈ ಎರೆಡೂ ದೇವಾಲಯಗಳು ರಾಜ್ಯದ ಅಲ್ಪಸಂಖ್ಯಾತ ಜಾತಿಯ ಹಿಡಿತದಲ್ಲಿರುವುದರಿಂದ ಕಾಂಗ್ರೆಸ್ಸಿಗೆ ಓಟಿನ ಲೆಕ್ಕಾಚಾರದಲ್ಲಿ ಲುಕ್ಸಾನು ಇಲ್ಲ.
ಹಾಗೆ ಒಂದುವೇಳೆ ಖಾಸಗೀ ಹಿಡಿತದಲ್ಲಿರುವ ಎಲ್ಲಾ ಶ್ರೀಮಂತ ದೇವಾಲಯಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರಬೇಕೆಂದರೆ ಅಂತಹ ನೂರಾರು ದೇವಾಲಯಗಳ ಧೀರ್ಘಪಟ್ಟಿಯೇ ಇದೆ. ಆದರೆ ಹಾಗೆ ಮಾಡಿದರೆ ಕಾಂಗ್ರೆಸ್ಸಿಗೇನು ಲಾಭ? ಧರ್ಮಸ್ಥಳದ ದೇವಾಲಯ ವಶಪಡಿಸಿಕೊಂಡರೆ ಲಕ್ಷಾಂತರ ಮಂದಿಯ ಆಕ್ಷೇಪಕ್ಕೆ ಪಾತ್ರವಾಗಬೇಕು. ಆದಿಚುಂಚನಗಿರಿ ದೇವಾಲಯವನ್ನು ಮುಟ್ಟಲು ಹೋದರೆ ಒಕ್ಕಲಿಗರು ಓಡಿಸಿಕೊಂಡು ಬಂದಾರು. ಲಿಂಗಾಯಿತರ ಯಾವ ದೇವಾಲಯದ ಬಗ್ಗೆ ಮಾತನಾಡಿದರೂ ತೀವ್ರ ಹಿನ್ನೆಡೆ ಎದುರಿಸಬೇಕಾದೀತು.
ಇನ್ನು ಗುಟ್ಕಾ ನಿಷೇಧ. ಇದೊಂದು ಬ್ಯಾಲೆನ್ಸ್ ಮಾಡುವ ಹೈ ನಾಟಕವೇ ಸೈ. ನ್ಯಾಯಾಲಯದ ಆದೇಶ ಪಾಲಿಸುತ್ತೇವೆಂದು ಹೇಳುತ್ತಾ ಅಡಿಕೆ ಬೆಳೆಗಾರರ ಮೇಲೆ ಚಪ್ಪಡಿಕಲ್ಲು ಎಳೆದುಬಿಟ್ಟರು. ಸರ್ಕಾರೀ ಪ್ರಾಯೋಜಿತ ಅಗ್ಗದ ಸಾರಾಯಿ ಮಾರುವುದರಿಂದ ಸ್ತ್ರೀಶಕ್ತಿ ಸಂಘಗಳು ಕಣ್ಣುಕೆಂಪಗೆ ಮಾಡಿಕೊಳ್ಳುತ್ತವೆ. ಹಿಂದೊಮ್ಮೆ ಎಸ್.ಎಮ್.ಕೃಷ್ಣ ಸರ್ಕಾರ ಬೀರ್ ಬಾಟಲ್ಗಳನ್ನು ಪ್ರಾವಿಜನ್ ಸ್ಟೋರ್ಸ್ಗಳಲ್ಲಿ ಇಟ್ಟುಕೊಳ್ಳಬಹುದು ಎಂದು ಲೈಸೆನ್ಸ್ಕೊಡಲು ಹೋಗಿ, ಸ್ತ್ರೀ ಸಮುದಾಯದಿಂದ ಮತ್ತು ಪ್ರಜ್ಞಾವಂತರಿಂದ ಛೀಮಾರಿ ಹಾಕಿಸಿಕೊಂಡಿತ್ತು. ಈ ವಿಷಯ ಗೊತ್ತಿರುವ ಕಾಂಗ್ರೆಸ್ ಸಾರಾಯಿ ಪರಿಣಾಮವನ್ನು ಬ್ಯಾಲೆನ್ಸ್ ಮಾಡಲು ಈ ಅಸ್ತ್ರವನ್ನು ಪ್ರಯೋಗಿಸಿದೆ. ಇದು ನ್ಯಾಯಾಲಯದ ತೀರ್ಪು ಎಂದು ಹೇಳಿದರೆ ಜನ ಎದುರು ಆಡುವುದಿಲ್ಲ. ಅದೂ ಅಲ್ಲದೇ ಮುಕ್ಕಾಲು ಭಾಗ ಅಡಿಕೆಬೆಳೆಗಾರರು ಅಸಂಘಟಿತರು ಮತ್ತು ಗಲಾಟೆ ಮಾಡದ ಮೆತ್ತಗಿನ ಜನ ಎಂಬುದು ಮುಖ್ಯಮಂತ್ರಿಗೆ ಗೊತ್ತಿರುವ ವಿಷಯ.
ಕಾಂಗ್ರೆಸ್ ಯಾವತ್ತೂ ಅಡಿಕೆ ಬೆಳೆಗಾರರ ಪರವಾಗಿ ಇರಲಿಲ್ಲ. ತಮ್ಮ ಕಷ್ಟಗಳನ್ನು ಹೇಗೋ ಉಪಾಯದಿಂದ ಸಂಭಾಳಿಸಿಕೊಂಡು ಹೋಗುವ ಜಾಯಮಾನ ಅಡಿಕೆ ಬೆಳೆಗಾರರಿಗೆ ಇದೆ. ಅಡಿಕೆ ಬೆಳೆಗಾರರಿಗೆ ಸರ್ಕಾರದ ಕಡೆಯಿಂದ ಸ್ವಲ್ಪ ಜೀವ ಬಂದಿದ್ದು ಯಡಿಯೂರಪ್ಪನವರ ಸರಕಾರ ಬೆಂಬಲ ಬೆಲೆ ಕೊಟ್ಟಿದ್ದಾಗ ಮಾತ್ರ.
ಬೀಡಿ-ಸಿಗರೇಟುಗಳಿಂದಾಗಿ ಲಕ್ಷಾಂತರ ಜನರ ಆರೋಗ್ಯಕ್ಕೆ ಹಾನಿಯಾಗುತ್ತಿರುವಾಗ, ಲಾಟರಿ ಕುದುರೆ ಜೂಜುಗಳಿಂದಾಗಿ ಸಾವಿರಾರು ಮನೆಗಳು ಹೊತ್ತಿ ಉರಿಯುತ್ತಿರುವಾಗ, ತಂಬಾಕು ಸೇವನೆಯಿಂದ ಲಕ್ಷಾಂತರ ಮಂದಿ ದಂತ ಕ್ಷಯದಿಂದ ನರಳುತ್ತಿರುವಾಗ, ಗುಟಖಾವೊಂದೇ ಜನರಿಗೆ ಹಾನಿಮಾಡಿ ಬಿಡುತ್ತದೆಯೇ? 'ಧೂಮಪಾನ ಆರೋಗ್ಯಕ್ಕೆ ಹಾನಿಕರ-ಶಾಸನ ವಿಧಿಸಿದ ಎಚ್ಚರಿಕೆ' ಎಂದು ಬರೆದುಕೊಂಡೇ ತಂಬಾಕಿನ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಸೂಚನೆಗಳು ಗುಟಕಾ ಬರುವುದಕ್ಕಿಂತ ದಶಕಗಳ ಹಿಂದಿನಿಂದಲೂ ಇದ್ದವು. ಆದರೆ ಸಿಗರೇಟ್ ಕಂಪನಿಗಳ ಲಾಬಿಯಿಂದಾಗಿ ಬ್ಯಾನ್ ಆಗಲಿಲ್ಲ. ಗುಟಕಾ ಆರೋಗ್ಯಕ್ಕೆ ಹಾನಿಕರ ಅಂದಮೇಲೆ ಬೇರೆ ತಂಬಾಕಿನ ಎಲ್ಲ ಉತ್ಪನ್ನಗಳೂ ಹಾನಿಕರವಲ್ಲವೇ? ಮಾತೆತ್ತಿದರೆ ಸಾಮಾಜಿಕ ನ್ಯಾಯವೆಂದು ಬೊಬ್ಬೆ ಇಡುವ ಕೆಲ ಕಾಂಗ್ರೆಸ್ ನಾಯಕರು, ಕುಡಿಸುವುದರಿಂದ ಎಲ್ಲಿ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು ತಿಳಿಸಲಿ.
ಈಗಾಗಲೇ ಹೆಚ್ಚಾಗಿ ಕೂಲಿ ಕಾರ್ಮಿಕರ ನಿತ್ಯ ಚಟವಾಗಿರುವ ಗುಟಕಾವನ್ನೂ ಕೆಲವು ನಿಷೇಧಿತ ರಾಸಾಯನಿಕ-ರಹಿತವನ್ನಾಗಿಸಿ ಪುನಃ ಪರಿಶೀಲನೆಗೆ ನ್ಯಾಯಾಲಯಕ್ಕೆ ಮೊರೆಹೋಗಲು ಸರಕಾರಕ್ಕೆ ಅವಕಾಶವಿತ್ತು. ಕಾಂಗ್ರೆಸ್ಸಿಗೆ ಅಡಿಕೆ ಬೆಳೆಗಾರರನ್ನು ರಕ್ಷಿಸಬೇಕೆಂಬ ಇಚ್ಛೆ ಇದ್ದಿದ್ದರೆ ಗೋರಖ್ ಸಿಂಗ್ ವರದಿಯನ್ನು ಯಾವಾಗಲೋ ಅನುಷ್ಠಾನಕ್ಕೆ ತರಬಹುದಿತ್ತು. ಆದರೆ ಮೊದಲೇ ಹೇಳಿದಹಾಗೆ ಅಡಿಕೆ ಬೆಳೆಗಾರ ಅಲ್ಪಸಂಖ್ಯಾತರನ್ನು ರಕ್ಷಿಸಿ ಕಾಂಗ್ರೆಸ್ಸಿಗೆ ಏನಾಗಬೇಕಾಗಿದೆ? ನೆನಪಿರಲಿ. ಪುಕ್ಕಟೆ ಹಂಚಿ ಹೊಳೆಹರಿಸುವುದು ನಮ್ಮ ತೆರಿಗೆ ವಸೂಲಿ ಹಣದಿಂದ. ಕಾಂಗ್ರೆಸ್ಸಿನ ಬೊಕ್ಕಸದಿಂದಲ್ಲ. ಈಗ ಭಾರತ ಅನುಭವಿಸುತ್ತಿರುವ ಸಂಕಷ್ಟದ ಕಾಲದಲ್ಲಿ ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಆಗದಿರಲಿ.
- ವೆಂಕಟೇಶ ದೊಡ್ಮನೆ
ತಲಕಾಲಕೊಪ್ಪ
ಹವ್ಯಾಸೀ ಪತ್ರಕರ್ತ