ಅಂಕಣಗಳು

ಜನತೆ ಜೈ ಅನ್ನುವುದು ರಾಹುಲ್ ಗಾಂಧಿಗೋ, ನರೇಂದ್ರ ಮೋದಿಗೋ?

ಆಡ್ವಾಣಿಯವರ ರಾಜಿನಾಮೆ ಅಧ್ಯಾಯ ಬಿಜೆಪಿಯೊಳಗಿನ ಬಿರುಕನ್ನು ಬಹಿರಂಗ ಮಾಡಿರಬಹುದು. ಹಗರಣಗಳಿಂದ ಹೈರಾಣಾಗಿರುವ ಕಾಂಗ್ರೆಸ್‌ಗೆ ಈ ವಿಷಯದಿಂದಾಗಿ ತುಸು ಉಲ್ಲಾಸವಾಗಿರುವುದಂತೂ ಸತ್ಯ. ತೃತೀಯ ರಂಗವನ್ನು ಸ್ಥಾಪಿಸಬೇಕೆಂಬ ಮಹತ್ವಾಕಾಂಕ್ಷೆಯುಳ್ಳ ಸಣ್ಣಪುಟ್ಟ ಪಕ್ಷಗಳಿಗೆ ಈ ಘಟನೆ ಇನ್ನಷ್ಟು ಸ್ಫೂರ್ತಿ ನೀಡಿದೆ. ಆದರೆ ಮತದಾರರ ಮೇಲೆ ಈ ಘಟನೆಯಂತೂ ಗಾಢ ಪ್ರಭಾವ ಬೀರಿದೆ. ಸ್ವಕೇಂದ್ರಿತ ರಾಜಕಾರಣಿಗಳಿಂದ ಮತ್ತು ಹದಗೆಡುತ್ತಿರುವ ರಾಜಕೀಯ ಪರಿಸರದಿಂದ ಅವರು ಮೊದಲೇ ಗೊಂದಲಗೊಂಡಿದ್ದರು, ಈಗಂತೂ ಅವರ ಗೊಂದಲ ಮತ್ತು ಕೋಪ ಇನ್ನಷ್ಟು ಹೆಚ್ಚಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ 'ಕೆಟ್ಟವರಲ್ಲಿ'ಯೇ ತುಸು ಉತ್ತಮರನ್ನು ಆಯ್ಕೆ ಮಾಡದೆ ಬೇರೆ ಆಯ್ಕೆಯೇ ಇಲ್ಲ ಎನ್ನುವುದು ಅವರಿಗೆ ಗೊತ್ತಿದೆ. ನಿರ್ಣಾಯಕ ತೀರ್ಪು ನೀಡುವ ಮೂಲಕ ರಾಜಕೀಯ ವಲಯಕ್ಕೆ ಸ್ಪಷ್ಟ ಸಂದೇಶವೊಂದನ್ನು ಕಳುಹಿಸಲು ಅವರು ನಿಶ್ಚಯಿಸಿದ್ದಾರೆ.
ಕರ್ನಾಟಕದ ಮತದಾರರು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಆ ಕೆಲಸ ಮಾಡಿದ್ದಾರೆ. ಭ್ರಷ್ಟ ಹಾಗೂ ಆಲಸಿ ಬಿಜೆಪಿಯನ್ನು ಕಿತ್ತೆಸೆದು ಕಾಂಗ್ರೆಸ್‌ಗೆ ಸರ್ಕಾರ ರಚಿಸಲು ಅವರು ಅವಕಾಶ ಮಾಡಿಕೊಟ್ಟರು. ತಮ್ಮ ನಿರ್ಣಾಯಕ ತೀರ್ಪಿನಿಂದ, ಎರಡು ಪ್ರಬಲ ಸಂದೇಶಗಳನ್ನವರು ಕಳುಹಿಸಿಕೊಟ್ಟಿದ್ದಾರೆ. ಮೊದಲನೆಯದು, ಉತ್ತಮ ಆಡಳಿತ ನೀಡದ ಮತ್ತು ಭ್ರಷ್ಟ ಪಕ್ಷಕ್ಕೆ ಹೊರಬಾಗಿಲು ತೋರಿಸಬೇಕು ಮತ್ತು ಎರಡನೆಯದು, ಪಕ್ಷವೊಂದು ಬಹುಮತ ಪಡೆದು ಸರ್ಕಾರ ರಚಿಸಿದರೆ, ಚಿಕ್ಕ ಪಕ್ಷಗಳ ಅವಕಾಶವಾದಿ ನಡೆಯಾದ ಸಮ್ಮಿಶ್ರ ಸರ್ಕಾರದಂತಹ ಕಳಪೆ ರಾಜಕೀಯ ಇಲ್ಲವಾಗುತ್ತದೆ ಎನ್ನುವುದು. ಕೇಂದ್ರದ ಕಾಂಗ್ರೆಸ್ ಸರ್ಕಾರ ಹಗರಣಗಳ ಹೂಳಿಗೆ ಸಿಕ್ಕಿಬಿದ್ದಿದ್ದರೂ ರಾಜ್ಯ ಕಾಂಗ್ರೆಸ್ ಮಾತ್ರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಇನ್ನು ಕಿಂಗ್‌ಮೇಕರ್‌ಗಳಾಗುತ್ತೇವೆ ಎಂದುಕೊಂಡಿದ್ದ ದೇವೇಗೌಡರ ಜೆಡಿಎಸ್, ಯಡಿಯೂರಪ್ಪನವರ ಕೆಜೆಪಿ ಮತ್ತು ಬಳ್ಳಾರಿ ಮೈನಿಂಗ್ ಲಾಬಿಯ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ತೆರೆಮರೆಗೆ ಸರಿದಿವೆ.
2014ರ ಲೋಕಸಭಾ ಚುನಾವಣೆಗಳಲ್ಲಿ ಮತದಾರರು ಕರ್ನಾಟಕವನ್ನು ಮಾದರಿಯಾಗಿ ತಗೆದುಕೊಳ್ಳಲಿದ್ದಾರೆಯೇ? ಹೌದು ಮತ್ತು ಇಲ್ಲ. 'ಹೌದು' ಎನ್ನಲು ಕಾರಣ, ಅವರು ಕೇಂದ್ರದಲ್ಲಿ ಬೃಹತ್ ಬದಲಾವಣೆಯನ್ನು ಕಾಣಲು ಸಿದ್ಧರಾಗಿದ್ದಾರೆ ಎನ್ನುವುದಕ್ಕೆ. ಇನ್ನು 'ಇಲ್ಲ' ಎನ್ನುವುದೇಕೆಂದರೆ ಅವರು ಕಾಂಗ್ರೆಸ್‌ಗೆ ಪರ್ಯಾಯವಾಗಿ ಯಾವ ಪಕ್ಷವನ್ನು ಅಥವಾ ಒಕ್ಕೂಟವನ್ನು ತಂದು ಕೂರಿಸಬೇಕು ಎನ್ನುವುದರ ಬಗ್ಗೆ ಗೊಂದಲಗೊಂಡಿರುವುದಕ್ಕೆ.
ಸದ್ಯದ ಪರಿಸ್ಥಿತಿಯತ್ತ ಗಮನ ಹರಿಸಿದಾಗ...

ಬಿಜೆಪಿ ಮತ್ತು ನರೇಂದ್ರ ಮೋದಿ: ಬಿಜೆಪಿ ಭ್ರಷ್ಟಾಚಾರದ ವಿಚಾರವಾಗಿ ನಡೆದುಕೊಂಡ ರೀತಿ, ಅದು ಕರ್ನಾಟಕದಲ್ಲಿ ಕಾಂಗ್ರೆಸ್‌ನ ವಿರುದ್ಧ ಅನುಭವಿಸಿದ ಸೋಲು ಮತ್ತು ಮುನಿಸಿಕೊಂಡ ಆಡ್ವಾಣಿಯವರಿಂದಾಗಿ ಅನುಭವಿಸಿದ ಮುಜುಗರಗಳೆಲ್ಲವನ್ನೂ ನೋಡಿ ಮತದಾರರು ಗೊಂದಲಕ್ಕೀಡಾಗಿದ್ದಾರೆ. ಅದು ಕಾಂಗ್ರೆಸ್‌ಗೆ ಪರ್ಯಾಯವಾಗಬಲ್ಲದೇ ಎನ್ನುವ ಬಗ್ಗೆ ಅವರಲ್ಲೀಗ ಸಂದೇಹ ಶುರುವಾಗಿದೆ. ಆದರೆ ಬಿಜೆಪಿಯನ್ನು ಬಿಟ್ಟು ಮತ್ಯಾವ ಮಾರ್ಗವಿದೆ ಎನ್ನುವ ಬಗ್ಗೆಯೂ ಅವರಿಗೆ ತಿಳಿಯುತ್ತಿಲ್ಲ.
ನರೇಂದ್ರ ಮೋದಿ 'ಅಂಶ' ಬಿಜೆಪಿಯಲ್ಲಷ್ಟೇ ಅಲ್ಲದೆ ದೇಶದಲ್ಲೂ ಎರಡು ಗುಂಪುಗಳನ್ನು ಹುಟ್ಟುಹಾಕಿದೆ. ಮೊದಲನೆಯ ಗುಂಪು ನಮೋ ವಿರೋಧಿಗಳದ್ದಾದರೆ, ಎರಡನೆಯದು ನಮೋ ಬೆಂಬಲಿಗರದ್ದು. ಮೋದಿ, ಇತ್ತೀಚೆಗೆ ದೇಶವನ್ನು ನಡುಗಿಸಿದ ರಾಜಕೀಯ ಭೂಕಂಪದ ಕೇಂದ್ರ ಸ್ಥಾನವೂ ಹೌದು.
'ಅವರು ಬಿಜೆಪಿಯ ಹಿಂದುತ್ವ ಅಜೆಂಡಾದ ಜಾಗದಲ್ಲಿ ಅಭಿವೃದ್ಧಿಯ ಮಂತ್ರವನ್ನು ಪ್ರತಿಷ್ಠಾಪಿಸಿದ್ದಾರೆ, ಹಾಗಾಗೇ ದೇಶವನ್ನಾಳುವುದಕ್ಕೆ ಅವರೇ ಅರ್ಹ ವ್ಯಕ್ತಿ.ಅವರಿಗೆ ಸಮಾಜದ ಎಲ್ಲಾ ವಲಯಗಳಿಂದಲೂ ಬೆಂಬಲ ಸಿಗಲಿದೆ. ಸತತ ಮೂರು ಅವಧಿಗೆ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವುದು ಅವರ ಗಟ್ಟಿತನವನ್ನು ತೋರಿಸುತ್ತದೆ' ಎನ್ನುತ್ತಾರೆ ಅವರ ಬೆಂಬಲಿಗರು. ಇನ್ನು ವಿರೋಧಿಗಳು ಹೇಳುವುದೇ ಬೇರೆ. ಗೋಧ್ರಾ ಹತ್ಯಾಕಾಂಡವನ್ನು ಹಿನ್ನೆಲೆಯಲ್ಲಿಟ್ಟು ನೋಡುವ ಅವರುಗಳಿಗೆ ಮೋದಿ ಜಾತ್ಯತೀತ ಭಾರತವನ್ನು ಮುನ್ನಡೆಸುವ ವ್ಯಕ್ತಿಯಾಗಿ ಕಾಣಿಸುವುದಿಲ್ಲ. 'ಗುಜರಾತ್‌ನಲ್ಲಿ ಅವರು ಗೆದ್ದಿರಬಹುದು, ಆದರೆ ಅವರ ಆಟ ಕೇಂದ್ರದಲ್ಲಿ ನಡೆಯುವುದಿಲ್ಲ' ಎನ್ನುತ್ತಾರೆ ವಿರೋಧಿಗಳು. ಮೋದಿಗೆ ಜನತೆ ಮತ ನೀಡಲಿದ್ದಾರಾ ಎನ್ನುವುದನ್ನು ಕಾದು ನೋಡಲೇಬೇಕು. ಹಾಗೆ ನೋಡಿದರೆ ಅವರಿನ್ನೂ ಪ್ರಧಾನಿ ಅಭ್ಯರ್ಥಿಯಾಗಿಲ್ಲ. ಸದ್ಯಕ್ಕೆ ಅವರು ಬಿಜೆಪಿಯ ರಾಷ್ಟ್ರೀಯ ಪ್ರಚಾರ ಸಮಿತಿಯ ಅಧ್ಯಕ್ಷರಷ್ಟೆ. ಆದರೆ ಪಕ್ಷದಲ್ಲಿ ಅವರಿಗಿರುವ ಬೆಂಬಲಿಗರ ಸಂಖ್ಯೆಯನ್ನು ನೋಡಿದರೆ, ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.

ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ: ಮೇಲ್ನೋಟಕ್ಕೆ ಕಾಂಗ್ರೆಸ್ ಗಟ್ಟಿತನವನ್ನು ಪ್ರದರ್ಶಿಸುತ್ತಿದೆಯಾದರೂ, ಮೋದಿ ಏಳಿಗೆಯಿಂದ ಅದು ಹೆದರಿದೆ ಎನ್ನುವುದು ಸ್ಪಷ್ಟವಾಗಿ ಅರಿವಾಗುತ್ತದೆ. ಮನಮೋಹನ್ ಸಿಂಗ್ ಅವರಿಗೆ ವಯಸ್ಸಾಗುತ್ತಿದೆ ಮತ್ತು ತಮ್ಮ ಮೂಗಿನಡಿಯಲ್ಲೇ ನಡೆದ ಹಲವಾರು ಹಗರಣಗಳನ್ನು ಗಮನಿಸುವಲ್ಲಿ ಅವರು ವಿಫಲರಾದರು ಎನ್ನುವುದು ಕಾಂಗ್ರೆಸ್‌ಗೆ ಗೊತ್ತಿದೆ.
ಹಾಗಿದ್ದರೆ ರಾಹುಲ್ ಗಾಂಧಿ ಮೋದಿಯವರನ್ನು ಎದುರಿಸಲು ಸಿದ್ಧರಾಗಿದ್ದಾರೆಯೇ? ಮೋದಿ ಗಡ ರಾಹುಲ್ ಹೋರಾಟದ ಪ್ರಶ್ನೆಯೇ ಉದ್ಭವಿಸದು ಎಂದು ಕಾಂಗ್ರೆಸ್ ಹೇಳುತ್ತದೆ. ರಾಹುಲ್ ಗಾಂಧಿ ಜಾತ್ಯತೀತ ಭಾರತದ ಪ್ರತಿನಿಧಿ. ಇನ್ನೊಂದೆಡೆ ಮೋದಿಯವರ ವಿಷಯದಿಂದಾಗಿ ಬಿಜೆಪಿ ಆಗಲೇ ಹೋಳಾಗಿದೆ. ಅದು ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲಾರದು ಎನ್ನುವುದು ಅದರ ಅಂಬೋಣ. 'ಒಂದು ವೇಳೆ ಬಿಜೆಪಿಯೇನಾದರೂ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿತೆಂದರೆ ಕಾಂಗ್ರೆಸ್‌ಗೆ ಹೆಚ್ಚು ಲಾಭವಾಗಿ, ಅದು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ' ಎನ್ನುತ್ತಾರೆ ಕಾಂಗ್ರೆಸ್ಸಿಗರು.

ಮೂರನೇ ಪರ್ಯಾಯ: ಆಡಳಿತ ವಿರೋಧಿ ಅಲೆಯಿಂದ ಹೊಡೆತ ತಿನ್ನುತ್ತಿರುವ ಕಾಂಗ್ರೆಸ್ಸನ್ನು ಮತ್ತು ಆಡ್ವಾಣಿ ಅವರ ರಾಜಿನಾಮೆ ಪ್ರಸಂಗದಿಂದ ಬೆಚ್ಚಿಬಿದ್ದಿರುವ ಬಿಜೆಪಿಯನ್ನು ನೋಡಿ ಪ್ರಾದೇಶಿಕ ಪಕ್ಷಗಳು ಹಿಗ್ಗುತ್ತಿವೆ. ಬಿಜೆಪಿ ಅಥವಾ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂದು ಯೋಚಿಸುತ್ತಿರುವ ಕೆಲವು ಪಕ್ಷಗಳನ್ನು ಹೊರತುಪಡಿಸಿ ಉಳಿದ ಪಕ್ಷಗಳೆಲ್ಲ ತೃತೀಯ ರಂಗವನ್ನು ಸ್ಥಾಪಿಸಿ ಅಧಿಕಾರಕ್ಕೆ ಬರಬೇಕು ಎಂದು ಹಾತೊರೆಯುತ್ತಿವೆ. ಹಾಗೆ ನೋಡಿದರೆ ಈ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಹೆಚ್ಚು ಬಲಿಷ್ಠವಾಗಿವೆ. ಅಲ್ಲಿ ಹೋಗಿ ಅವನ್ನು ಹಿಮ್ಮೆಟ್ಟಿಸುವುದು ಕಾಂಗ್ರೆಸ್ ಅಥವಾ ಬಿಜೆಪಿಗೆ ಸಾಧ್ಯವಾಗಿಲ್ಲ. ಹಾಗಾಗೇ ಈ ಎರಡೂ ದೊಡ್ಡ ಪಕ್ಷಗಳನ್ನು ಹಿಂದಕ್ಕೆ ದೂಡಿ, ತೃತೀಯ ರಂಗವನ್ನು ರಚಿಸಿ ಅಧಿಕಾರಕ್ಕೇಕೆ ಬರಬಾರದು? ಎನ್ನುವ ಲೆಕ್ಕಾಚಾರ ಇವುಗಳದ್ದು. ಆದರೆ ಮಾಡುವುದಕ್ಕಿಂತ ಆಡುವುದು ಸುಲಭ. ಏಕೆಂದರೆ ಎಣಿಕೆಗೂ ಮೀರಿದ ಪ್ರಧಾನಿ ಹುದ್ದೆ ಆಕಾಂಕ್ಷಿಗಳು ಈ ಪಕ್ಷಗಳಲ್ಲಿದ್ದಾರೆ. ಪಕ್ಷ ಎಷ್ಟೇ ಚಿಕ್ಕದಾಗಿರಲಿ ಅದರ ನೇತೃತ್ವ ವಹಿಸಿಕೊಂಡವರೆಲ್ಲ ತಮ್ಮಲ್ಲೂ ಪ್ರಧಾನಿ ಆಗಲು ಅರ್ಹತೆ ಇದೆ ಎಂದೇ ಭಾವಿಸುತ್ತಾರೆ. ಇವರುಗಳ ನಡುವೆಯೇ ಸ್ಥಾನಕ್ಕಾಗಿ ಕಿತ್ತಾಟಗಳಾಗಲಿವೆ. ಹಿಂದೆಲ್ಲ ಇಂಥದ್ದನ್ನು ನೋಡಿದ್ದೇವಲ್ಲ!
ಮತದಾರರು ಇನ್ನೂ ಯಾವ ನಿರ್ಧಾರಕ್ಕೂ ಬಂದಂತಿಲ್ಲ. ಬದಲಾಗುತ್ತಿರುವ ರಾಜಕೀಯ ದೃಶ್ಯಾವಳಿಗಳನ್ನು ಅವರು ರೆಪ್ಪೆ ಅಲುಗಿಸದೇ ವೀಕ್ಷಿಸುತ್ತಿದ್ದಾರೆ. ಉತ್ತಮ ಆಯ್ಕೆ ಯಾವುದಿರಬಹುದು? ಮೋದಿ ನೇತೃತ್ವದ ಬಿಜೆಪಿಯೋ? ಮೋದಿಯನ್ನು ಬಿಟ್ಟು ಇನ್ನುಳಿದ ವ್ಯಕ್ತಿ ನೇತೃತ್ವ ವಹಿಸಿದ ಬಿಜೆಪಿಯೋ? ರಾಹುಲ್ ನೇತೃತ್ವದ ಕಾಂಗ್ರೆಸ್ಸೋ? ಅಥವಾ ಇನ್ನುಳಿದವರ ನೇತೃತ್ವದಲ್ಲಿನ ಕಾಂಗ್ರೆಸ್ಸೋ? ನಿತೀಶ್ ಕುಮಾರ್ ಅಥವಾ ಮುಲಾಯಂ ಅಥವಾ ಇನ್ಯಾರದ್ದಾದರೂ ನೇತೃತ್ವದ ತೃತೀಯ ರಂಗವೋ? ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲು ಇನ್ನೂ ಒಂದು ವರ್ಷ ಕಾಲಾವಕಾಶವಿದೆ.

ಕೊನೆಯ ಗುಟುಕು: ಈಗ ಕೇವಲ ಐವರು ಮಾತ್ರ ತಮ್ಮ ಕಾರುಗಳ ಮೇಲೆ ಕೆಂಪುದೀಪಗಳನ್ನು ಉರಿಸಬಹುದು. 1)1 ರಾಜ್ಯಪಾಲರು 2) ಸಿಎಂ ಅಥವಾ ಕ್ಯಾಬಿನೆಟ್ ಸಚಿವರು 3) ವಿಧಾನಸಭೆಯ ಸ್ಪೀಕರ್ 4) ವಿಧಾನ ಪರಿಷತ್ ಅಧ್ಯಕ್ಷ 5) ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಮತ್ತು ಹಾಲಿ ನ್ಯಾಯಾಧೀಶರು. ಹೈಕೋರ್ಟ್‌ನ ಆದೇಶದ ಮೇರೆಗೆ ಸಾರಿಗೆ ಸಂಸ್ಥೆ ಈ ಪಟ್ಟಿಯನ್ನು ಹೊರತಂದಿದೆ. ನಿಜಕ್ಕೂ ಇದು ಉತ್ತಮ ನಿರ್ಧಾರವೇ. ಈ ನಿಯಮದ ಉಲ್ಲಂಘನೆಯನ್ನು ಪೊಲೀಸ್ ಅಥವಾ ಸಾರಿಗೆ ಸಂಸ್ಥೆ ತಡೆಗಟ್ಟಬಲ್ಲವೇ? ಏಕೆಂದರೆ ಇತ್ತೀಚೆಗೆ ಎಲ್ಲರೂ ತಮ್ಮ ಕಾರಿನ ಮೇಲೆ ಕೆಂಪು ದೀಪವನ್ನು ಕುಣಿಸುತ್ತಾ ಅಡ್ಡಾಡುತ್ತಿದ್ದಾರೆ.

- ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!