ಬಂಗಾರ ಖರೀದಿ ನಿಲ್ಲಿಸಿ ಅನ್ನುವುದೇ ಮಾರ್ಗವಲ್ಲ
ಮಾನ್ಯ ಕೇಂದ್ರ ಹಣಕಾಸು ಸಚಿವರು ಜನತೆಗೆ ಒಂದು ವರ್ಷದ ಮಟ್ಟಿಗಾದರೂ ಚಿನ್ನ ಖರೀದಿಯನ್ನು ನಿಲ್ಲಿಸಿ ಎಂದು ಸಂದೇಶ ನೀಡಿದ್ದಾರೆ. ಇದಕ್ಕೆ ಕಾರಣ ಈಗ ನಾವು ಖರೀದಿ ಮಾಡುತ್ತಿರುವ ಚಿನ್ನ ವಿದೇಶಗಳಿಂದ ಆಮದು ಆಗಿದ್ದು. ಇದರಿಂದ ವಿತ್ತೀಯ ಕೊರತೆ (Current Account) ಹೆಚ್ಚಾಗುತ್ತಿದೆ ಎಂಬ ಕಾರಣ ನೀಡಿದ್ದಾರೆ. ಅಹುದು 18ರ್ ಆಮದು ಸರಕು-ಚಿನ್ನವೇ ಆಗಿದೆ. ವಿದೇಶಿ ವಿನಿಮಯದಲ್ಲಿ ಇದು ಗಣನೀಯ ವ್ಯಯವೆಂಬುದರಲ್ಲಿ ಸಂಶಯವೇ ಇಲ್ಲ. ಇರಲಿ, ಜನಸಾಮಾನ್ಯರಿಗೆ ಹೇಳಿದ ಈ ಮಾತನ್ನೇ, ದೇಶದ ದೇವರುಗಳಿಗೂ ಶ್ರೀ ಚಿದಂಬರಂ ಸಾಹೇಬರು ಹೇಳಲಿ. ದೇವರುಗಳಿಗೆ ಭಕ್ತರಿಂದ ಕಾಣಿಕೆ ರೂಪದಲ್ಲಿ ಚಿನ್ನದ ಪೂರೈಕೆಯಾಗುತ್ತಿರುವುದು ನಿಜವಷ್ಟೆ. ಒಂದು ವರ್ಷದ ಮಟ್ಟಿಗಾದರೂ ದೇವರುಗಳು ಭಕ್ತರಿಂದ ಚಿನ್ನರೂಪದಲ್ಲಿ ಹರಕೆ ಪಡೆಯುವುದನ್ನು ನಿಷೇಧಿಸಲಿ. ಈ ಬಗ್ಗೆ ಕೇಂದ್ರ ಎಲ್ಲಾ ದೇವಾಲಯಗಳು, ಮಠ-ಮಾನ್ಯಗಳು ಹಾಗೂ ಆಶ್ರಮಗಳಿಗೆ ಚಿನ್ನ ಪಡೆಯದಂತೆ ಆದೇಶಿಸುವುದೆಂದು ನಂಬಬಹುದೇ?
ಇನ್ನು ದೇವಸ್ಥಾನ- ಮಠ ಮಾನ್ಯಗಳಲ್ಲಿ ಚಿನ್ನ ಇದೆಯಲ್ಲದೆ-ದೇವರುಗಳು ಇಷ್ಟು ವರ್ಷ ಧರಿಸಿದ್ದು ಸಂತೃಪ್ತಿಪಟ್ಟಿದ್ದು ಆಗಿದೆಯಲ್ಲ, ಈಗ ಅದೇ ಚಿನ್ನವನ್ನು ಶ್ರೀಸಾಮಾನ್ಯಭಕ್ತರು ಮದುವೆ ಮುಂಜಿಗಳಿಗೆ ಬಳಕೆ ಮಾಡಲನುವಾಗಲು ಚಿನ್ನದ ವ್ಯಾಪಾರಿಗಳಿಗೇ ಮಾರಲಿ. ಹೀಗೆ ಮಾಡುವುದರಿಂದ ವಿದೇಶದಿಂದ ಚಿನ್ನದ ಆಮದು 5-10 ವರ್ಷಗಳ ಕಾಲ ನಿಂತೇ ಹೋಗುತ್ತದೆ. ದೇವಸ್ಥಾನಗಳು ಚಿನ್ನ ಮಾರಿ ಬಂದ ಹಣವನ್ನು ದೇವಸ್ಥಾನದ ಇತರೆ ಪ್ರಗತಿ ಕಾರ್ಯಗಳಿಗೆ ಬಳಸಲಿ. ದೇವರು, ದೇವಸ್ಥಾನ ಹಾಗೂ ದೇಶದ ಪ್ರಗತಿಗೆ ಇದು ಸರಳೋಪಾಯವಾಗುತ್ತದೆ.
ಮಹಾತ್ಮ ಗಾಂಧೀಜಿಯವರು ದೇಶದ ಜನತೆಗೆ ಅದರಲ್ಲೂ ಬಡವರು ಧರಿಸಲು ಬಟ್ಟೆಯಿಲ್ಲವೆಂದು ಎರಡೇ ಬಟ್ಟೆ ತುಂಡುಗಳನ್ನು ಧರಿಸುತ್ತಿದ್ದರು. ಅದೇ ರೀತಿ ಈಗಿನ ರಾಜಕಾರಣಿಗಳು ತಮ್ಮ ಮನೆಯ ಚಿನ್ನವನ್ನು ದಾನ ಬೇಡ, ಹೋಗಲಿ, ವ್ಯಾಪಾರಿಗಳಿಗೆ ಮಾರಿ ಇತರರಿಗೆ ಆದರ್ಶವಾಗಿ ನಡೆದುಕೊಳ್ಳಲಿ. ತಮ್ಮ ಮನೆಯಲ್ಲಿ ಕೆ.ಜಿ.ಗಟ್ಟಲೆ ಬಂಗಾರ ಇಟ್ಟುಕೊಂಡಿರುವ ನೇತಾರರು ಜನಸಾಮಾನ್ಯರಿಗೆ ಚಿನ್ನ ಕೊಳ್ಳುವುದು ಬೇಡ, ಎಂದು ಹೇಳುತ್ತಿರುವುದು ವಿಚಿತ್ರ ಆದರೂ ಸತ್ಯ. ಜನಸಾಮಾನ್ಯರು ಚಿನ್ನವನ್ನು ಆಭರಣ ಧರಿಸುವ ಸಲುವಾಗಿಯೇ ಕೊಳ್ಳುವುದಿಲ್ಲ. ಹೊಲ-ಮನೆ ಖರೀದಿಸುವಾಗ, ಮದುವೆ ಮುಂಜಿ ಮಾಡುವಾಗ, ಹಣದ ಆವಶ್ಯಕತೆಗಾಗಿ ಮಾರಲು ಸುಲಭ ಸಾಧನ ಚಿನ್ನ ಎಂಬ ಕಾರಣ ಮುಖ್ಯವಾಗಿದೆ. ಸಾಲ ಮಾಡಿ ಚಿನ್ನ ಖರೀದಿಸುವುದು ಬೇಡ ಎಂಬುವುದನ್ನು ಎಲ್ಲರೂ ಒಪ್ಪುತ್ತಾರೆ.
ಇನ್ನು 38ರ್ ಆಯತದ ಸರಕು ಕಚ್ಚಾ ತೈಲವಾಗಿದ್ದು ವಿದೇಶಿ ವಿನಿಮಯದಲ್ಲಿ ಹೆಚ್ಚು ವ್ಯಯವಾಗುತ್ತಿದೆ. ಇದನ್ನು ನಿಯಂತ್ರಿಸಲು ಸರ್ಕಾರದ ಮಾರ್ಗೋಪಾಯಗಳು ಏನು? ಮಧ್ಯಮ ವರ್ಗದ ಜನ ಕಾರುಗಳ ಖಯಾಲಿಗೆ ಬಿದ್ದಿದ್ದಾರೆ. ಅವಶ್ಯವಿರಲಿ ಬಿಡಲಿ, ಕಾರು ಚಾಲನೆ ಮಾಡಿಯೇ ತೀರುತ್ತಾರೆ! ದೊಡ್ಡ ದೊಡ್ಡ ಕಾರುಗಳಿಗೆ ಹಾಕಿಸುವ ಪೆಟ್ರೋಲ್ ಮತ್ತು ಡೀಸೆಲ್ ದರಗಳು, ಆಟೋಗಳಿಗೆ ಮತ್ತು ಟ್ಯಾಕ್ಸಿಗಳಿಗೆ ಹಾಕಿಸುವ ಪೆಟ್ರೋಲ್ ಮತ್ತು ಡೀಸೆಲ್ದರಗಳೂ ಒಂದೇ! ಯಾರಿಗೆ-ಯಾವುದಕ್ಕಾಗಿ ಬಳಕೆ ಎಂಬುದನ್ನು ಯೋಚಿಸುವ ಶಕ್ತಿ ಸರ್ಕಾರಕ್ಕಿಲ್ಲವೇ? ಐಷಾರಾಮಿ ಪ್ರೈವೇಟ್ ಕಾರುಗಳಿಗೆ ಹಾಕುವ ಪೆಟ್ರೋಲ್, ಡೀಸೆಲ್ ಬೆಲೆ ದುಪ್ಪಟ್ಟು ಮಾಡಲಿ, ಬೇಡವೆಂದವರಾರು? ಇದರಿಂದ ಮೋಜಿನ ಕಾರು ಚಾಲನೆಗೆ ತಡೆ ಹಾಕಬಹುದಲ್ಲವೇ? ಹೀಗೆ ಹುಡುಕಿದರೆ ಹಲವಾರು ಮಾರ್ಗಗಳು ಗೋಚರಿಸುತ್ತವೆ.
ಟ್ರಾಫಿಕ್ ಜಾಮ್ ಆದಾಗ, ಆಟೋದಲ್ಲಿ ಕೂತು ಸುತ್ತಲೂ ನೋಡಿದಾಗ, 60ರ್ ಕಾರುಗಳಲ್ಲಿ ಒಬ್ಬರೇ ಪ್ರಯಾಣ ಮಾಡುವುದನ್ನು ಕಂಡಾಗ, ವಾಯುಮಾಲಿನ್ಯ, ಶಬ್ದಮಾಲಿನ್ಯ ಟ್ರಾಫಿಕ್ ಮಾಲಿನ್ಯದ ಜೊತೆಗೆ ಚಿದಂಬರಂ ಸಾಹೇಬರ ಕಚ್ಚಾ ತೈಲ ಆಮದಿನ ಚಿಂತೆ, ಎಲ್ಲವೂ ನೆನಪಾಗಿ ಮೈ ಪರಚಿಕೊಳ್ಳ ಬೇಕೆನಿಸುತ್ತದೆ. ಸರ್ಕಾರದ ಆದೇಶ ಹಾಗೂ ಪಾಲನೆಯುಂದ ಶ್ರೀಸಾಮಾನ್ಯನ ಬದುಕು ಸಹ್ಯವಾಗಲಿ ಎಂಬುದಷ್ಟೇ ಆಶಯ.
- ಹೆಚ್.ಎಲ್. ವೀರಮ್ಮ
ರಾಯಚೂರ