ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಅನಿವಾರ್ಯ

Mainashree
Updated On : 19 Jun 2013, 11:53 am

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ  ಕಲ್ಪಿಸುವ ನಿಟ್ಟಿನಲ್ಲಿ ರಚಿತವಾದ ಎ.ಜೆ. ಸದಾಶಿವ ಆಯೋಗ ತನ್ನ ವರದಿಯನ್ನು ಸರ್ಕಾರಕ್ಕೆ ನೀಡಿ 1 ವರ್ಷವಾಯ್ತು. ಅಹಿಂದ ಮುಖಂಡ ಎಂದೇ ಬಿಂಬಿತಗೊಂಡಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವ ಈ ಸಂದರ್ಭದಲ್ಲಾದರೂ ಅಸ್ಪೃಶ್ಯ ಜಾತಿಗಳಿಗೆ ನ್ಯಾಯ ಸಿಗುತ್ತದೆಯೇ?

ಸಂವಿಧಾನದತ್ತವಾಗಿ ಬಂದಿರುವ ಶೇ. 15 ಮೀಸಲಾತಿಯಲ್ಲಿ ತಾರತಮ್ಯ ಉಂಟಾಗಿದೆ ಎಂಬ ಅತೃಪ್ತಿಯಿಂದ ಹುಟ್ಟಿದ ಒಳಮೀಸಲಾತಿ ಹೋರಾಟಕ್ಕೆ ಒಂದೂವರೆ ದಶಕಗಳ ಸುದೀರ್ಘ ಹೋರಾಟವಿದೆ. ಮಾದಿಗ ದಂಡೋರ, ದಲಿತ ಪರ ಸಂಘಟನೆಗಳು, ಪ್ರಗತಿ ಪರ ಸಂಘಟನೆಗಳ ತೀವ್ರ ಒತ್ತಡಕ್ಕೆ ಮಣಿದ ಸರ್ಕಾರ ಕಡೆಗೂ ಒಳಮೀಸಲಾತಿ ವಿಚಾರವಾಗಿ ನ್ಯಾಯಮೂರ್ತಿ ಸದಾಶಿವ ಆಯೋಗ ರಚಿಸಿ ವರದಿ ಸಲ್ಲಿಸುವಂತೆ ಕೋರಿತ್ತು. ಬುದ್ದಿಜೀವಿಗಳು, ಸಮಾಜಶಾಸ್ತ್ರಜ್ಞರು, ಸಾಹಿತಿಗಳು ಹಾಗೂ ಪ್ರಗತಿಪರ ಚಿಂತಕರ ಮಾರ್ಗದರ್ಶನದಲ್ಲಿ ಸುದೀರ್ಘ 8 ವರ್ಷಗಳ ಕಾಲ ಅಧ್ಯಯನ ನಡೆಸಿದ ಸದಾಶಿವ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿ 1 ವರ್ಷವಾದರೂ ಅದನ್ನು ಜಾರಿಗೊಳಿಸುವಲ್ಲಿ ಸರ್ಕಾರಗಳು ಹಿಂದೇಟು ಹಾಕುತ್ತಿವೆ.
ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಜಾರಿಗೆ ಬಂದಿರುವುದರಿಂದ ಅದೇ ಅನುಪಾತದಲ್ಲಿ ಒಳಮೀಸಲಾತಿ ಕಲ್ಪಿಸಬೇಕು ಎಂಬ ಪ್ರಶ್ನೆ ಈಗ ಎದ್ದಿದೆ. ಎಲ್.ಜಿ. ಹಾವನೂರು ಅವರ ವರದಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮಾದಿಗ ಜನಾಂಗ ಶೇ. 57.3 ರಷ್ಟು ಇದೆ ಎಂದು ನಮೂದಿಸಿದೆ. ಅದೇ ಆಧಾರದ ಮೇಲೆ ಒಳಮೀಸಲಾತಿ ಕಲ್ಪಿಸಿದರೆ ಶೇ. 15ರ ಮೀಸಲಾತಿಯಲ್ಲಿ ಮಾದಿಗ ಜನಾಂಗಕ್ಕೆ ಶೇ. 8 ರಷ್ಟು ಮೀಸಲಾತಿ ನೀಡಬೇಕಾಗುತ್ತದೆ. ಆದರೆ ಈಗ ಸಿಗುತ್ತಿರುವುದು ಶೇ. 2 ಮಾತ್ರ. ಒಂದು ವೇಳೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಯಥಾವತ್ತು ಜಾರಿಗೊಳಿಸಿದರೆ. ಶೇ. 6 ರಷ್ಟು ಮೀಸಲಾತಿ ಈ ಸಮುದಾಯಕ್ಕೆ ಸಲ್ಲುತ್ತದೆ.
ಎ.ಜೆ. ಸದಾಶಿವ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಮಾದಿಗ ಸಹಸಂಬಂಧಿ ಜಾತಿಗಳಿಗೆ ಶೇ. 6, ಹೊಲೆಯ ಮತ್ತು ಸಹಸಂಬಂಧಿ ಜಾತಿಗೆ ಶೇ. 5, ಲಂಬಾಣಿ, ಬೋವಿ, ಕೊರಚ, ಕೊರಮ ಜಾತಿಗಳಿಗೆ ಶೇ. 3 ಮತ್ತು 16 ಜಾತಿಗಳನ್ನು ಒಳಗೊಂಡ ಅಲೆಮಾರಿ ಸ್ಪೃಶ್ಯ ಜಾತಿಗೆ ಶೇ. 1 ರಷ್ಟು ಮೀಸಲಾತಿ ಹಂಚಿದೆ.
ಅಸ್ಪೃಶ್ಯ ಸಮುದಾಯಕ್ಕೆ ಈ ವರದಿ ನೆರವಾಗುತ್ತದೆ ಎಂಬ ಕುರುಡು ಆಲೋಚನೆಯಿಂದ, ಒಳಮೀಸಲಾತಿ ಬಗ್ಗೆ ಯಾವೊಂದು ಸ್ಪಷ್ಟತೆ ಇಲ್ಲದೆ ಕೇವಲ ರಾಜಕೀಯ ಕಾರಣಕ್ಕಾಗಿ ಸರ್ಕಾರಗಳು ಹಿಂದೇಟು ಹಾಕುತ್ತಿದೆ.
ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನಿರ್ಧಾರವಾದ ಹಾಗೆ ಒಳಮೀಸಲಾತಿ ಕೂಡ ಜನಸಂಖ್ಯೆ ಆಧಾರದ ಮೇಲೆ ನಿರ್ಧಾರವಾಗಬೇಕಾಗಿದೆ. ಮೀಸಲಾತಿಯನ್ನು ಒಪ್ಪಿರುವ ಸರ್ಕಾರಗಳು ಒಳಮೀಸಲಾತಿ ಒಪ್ಪುವಲ್ಲಿ ವಿಳಂಬ ಮಾಡುತ್ತಿರುವುದು ಕೇವಲ ರಾಜಕೀಯ ಕಾರಣಕ್ಕೆ ಎಂಬುದಂತೂ ಸತ್ಯ. ಈಗಾಗಲೇ ತಮಿಳುನಾಡು, ಸಿಕ್ಕಿಂ, ಪಂಜಾಬ್, ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಆದರೆ ಅಹಿಂದ ವರ್ಗದ ಬಹುದೊಡ್ಡ ಹೋರಾಟಕ್ಕೆ ಸಾಕ್ಷಿ ಪ್ರಜ್ಞೆಯಾಗಿರುವ, ಸಮಾಜವಾದವನ್ನು ರಾಷ್ಟ್ರಕ್ಕೆ ತೋರಿಸಿದ ಕರ್ನಾಟಕದಲ್ಲಿ ಮಾತ್ರ ಒಳಮೀಸಲಾತಿ ಜಾರಿಗೆ ರಾಜಕೀಯ ಮುಖಂಡರು ಕುಂಟು ನೆಪ ಹುಡುಕುತ್ತಿದ್ದಾರೆ.
ಮೀಸಲಾತಿ ವಿರೋಧಿಸುವ ಮೇಲ್ವರ್ಗದವರು ಹಾಗೂ ಒಳಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಪರಿಶಿಷ್ಟ ಜಾತಿಯಲ್ಲಿನ ಕೆಲವರಿಂದ ಸದಾಶಿವ ವರದಿ ಜಾರಿಯಾಗಲು ಅಡ್ಡಿಯುಂಟಾಗಿದೆ.
1976 ರಲ್ಲಿ ಪರಿಶಿಷ್ಟ ಜಾತಿಗೆ ಲಂಬಾಣಿ, ಬೋವಿ, ಕೊರಚ ಹಾಗೂ ಕೊರಮ ಜಾತಿಗಳನ್ನು ಸೇರ್ಪಡೆಗೊಳಿಸಿದಾಗ ಅಸ್ಪೃಶ್ಯರಿಂದ ವಿರೋಧ ಬರಲಿಲ್ಲ. ರಾಚಯ್ಯನವರು ಮಾತ್ರ ಅಂದು ವಿರೋಧಿಸಿದ್ದರು. ಪರಿಶಿಷ್ಟ ಜಾತಿಗೆ ಈ ನಾಲ್ಕು ಸ್ಪೃಶ್ಯ ಜಾತಿಗಳನ್ನು ಸೇರಿಸಿದಾಗ ಅಸ್ಪೃಶ್ಯರು ಸುಮ್ಮನಿದ್ದರು. ಒಳಮೀಸಲಾತಿ ಜಾರಿಗೆ ಈಗ ಈ ನಾಲ್ಕು ಸ್ಪೃಶ್ಯ ಜಾತಿಗಳದ್ದೇ ತಕರಾರು ಎಂಬುದು ಒಳಮೀಸಲಾತಿ ಪರ ಇರುವವರ ವಾದವಾಗಿದೆ.
ಒಳಮೀಸಲಾತಿ ಜಾರಿಯಾದರೆ ದಲಿತರಲ್ಲಿ ಸ್ಪೃಶ್ಯ ಮತ್ತು ಅಸ್ಪೃಶ್ಯರ ನಡುವೆ ಒಡಕು ಉಂಟಾಗುತ್ತದೆ ಎಂಬ ಕಾರಣದಿಂದ ಕೆಲ ಬುದ್ಧಿಜೀವಿಗಳು ಮೌನವಹಿಸಿದ್ದಾರೆ. ಆದರೆ ಚಮ್ಮಾರಿಕೆ, ಪೌರಕಾರ್ಮಿಕ ವೃತ್ತಿಯಲ್ಲಿ ತೊಡಗಿಕೊಂಡು ಶಿಕ್ಷಣದಿಂದ ವಂಚಿತವಾಗಿರುವ ಬಹುಸಂಖ್ಯಾತ ಮಾದಿಗ ಸಮುದಾಯಕ್ಕೆ ಶೇ. 6 ರಷ್ಟು ಮೀಸಲಾತಿ ಸಿಕ್ಕರೆ ಆ ವರ್ಗಗಗಳಲ್ಲೂ ಕೂಡ ಬಹಳಷ್ಟು ಮಂದಿ ವಿದ್ಯಾವಂತರಾಗುತ್ತಾರೆ.
ಅಲ್ಲದೇ ಸ್ಪೃಶ್ಯ ಜನಾಂಗವನ್ನು ಸಮಾಜ ಸ್ವೀಕರಿಸುವಷ್ಟು ಅಸ್ಪೃಶ್ಯರನ್ನು ಸ್ವೀಕರಿಸುವುದಿಲ್ಲ. ಉದಾಹರಣೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೋವಿ ಜನಾಂಗದ ಗೂಳಿಹಟ್ಟಿ ಶೇಖರ್ ಅವರು ಮೀಸಲು ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರದಲ್ಲಿ ನಿಂತು ವಿಧಾನಸಭೆಗೆ ಆಯ್ಕೆಯಾದರು. ಆದರೆ ಕೆಪಿಸಿಸಿ ಅಧ್ಯಕ್ಷರೂ ಆಗಿದ್ದ ಡಾ. ಜಿ. ಪರಮೇಶ್ವರ್ ಅವರು ಮಾತ್ರ ಮೀಸಲು ಕ್ಷೇತ್ರದಲ್ಲೇ ಸ್ಪರ್ಧಿಸಿದರು. ಜಾತಿಯಲ್ಲಿ ಬಲಗೈ ಆಗಿರುವ ಪ್ರಭಾವಿಯೂ ಆಗಿರುವ ಪರಮೇಶ್ವರ್ ಅವರಂತವರೇ ಮೀಸಲು ಕ್ಷೇತ್ರ ಬಿಟ್ಟು ಸಾಮಾನ್ಯ ಕ್ಷೇತ್ರದಲ್ಲಿ ನಿಂತು ಗೆಲ್ಲುವುದು ಎಷ್ಟು ಕಷ್ಟ ಎಂಬುದು ಈ ಎರಡೂ ಘಟನೆಯಿಂದಲೇ ನಿದರ್ಶನವಾಗುತ್ತದೆ.
ಮಂಡಲ ವರದಿ ಬಂದಾಗ ಬನಾರಸ್ ವಿವಿ ವಿದ್ಯಾರ್ಥಿಗಳು ಸಜೀವ ದಹನ ಮಾಡಿಕೊಳ್ಳಲು ಮುಂದಾದಾಗ ಹಿಂದುಳಿದ ವರ್ಗದ ಪರ ದಲಿತರು ಆಗ ಗಟ್ಟಿ ಧ್ವನಿ ಎತ್ತಿದ್ದರು. ಆದರೆ ಈಗ ಒಳಮೀಸಲಾತಿ ವಿಷಯದಲ್ಲಿ ಹಿಂದುಳಿದ ವರ್ಗದ ಬುದ್ಧಿಜೀವಿಗಳು ಹಾಗೂ ಸಾಹಿತಿಗಳು ಜಾಣ ಮೌನ ವಹಿಸಿದ್ದಾರೆ. ಇವರ ಜತೆಗೆ ಸ್ಪೃಶ್ಯ ಜಾತಿಯವರು ಕೂಡ ಕೈ ಜೋಡಿಸಿದ್ದಾರೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಒಪ್ಪುವವರು ಒಳಮೀಸಲಾತಿಯನ್ನು ಒಪ್ಪಬೇಕಾಗಿದೆ. ವರದಿ ಜಾರಿಯಿಂದ ಪರಿಶಿಷ್ಟ ಜಾತಿಗಳ ಮಧ್ಯೆ ಬಿರುಕು ಉಂಟಾಗುತ್ತದೆ, ವರದಿಯಲ್ಲೇ ದೋಷವಿದೆ ಎಂಬ ಗುಲ್ಲನ್ನು ಹರಡಿಸಲಾಗುತ್ತಿದೆ. ಸುದೀರ್ಘ ಒಂದೂವರೆ ದಶಕಗಳ ಕಾಲ ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಎಂಬ ಕಲ್ಪನೆಯಡಿ ಹೋರಾಟ ನಡೆಸಿದ ಅಸ್ಪೃಶ್ಯ ಜಾತಿಗಳು ಈಗ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಎ.ಜೆ. ಸದಾಶಿವ ವರದಿ ಜಾರಿಗೆ ಮತ್ತೊಂದು ಸುದೀರ್ಘ ಹೋರಾಟ ಮಾಡಬೇಕಾಗಿರುವುದು ಆಶ್ಚರ್ಯ ಹುಟ್ಟಿಸಿದೆ.
ಈಗಾಗಲೇ ಒಳಮೀಸಲಾತಿ ಜಾರಿ ಸಂಬಂಧ ದೊಡ್ಡ ಹೋರಾಟವೇ ಕರ್ನಾಟಕದಲ್ಲಿ ನಡೆದು ಹೋಗಿದೆ. ಪಾರ್ಲಿಮೆಂಟ್‌ಗೆ ಮುತ್ತಿಗೆ ಹಾಕಲಾಗಿದೆ. ರಾಜ್ಯದ ಎಲ್ಲಾ ಸಂಸದರ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆದು ಹೋಗಿದೆ. ಕಪ್ಪು ಬಾವುಟ ಪ್ರದರ್ಶಿಸಿ ದಲಿತರು ಲಾಠಿ ಏಟನ್ನು ತಿಂದಿದ್ದಾರೆ. ಆದರೂ ಪ್ರತಿಭಟನೆ ಮತ್ತು ಹೋರಾಟದ ಕಾವು ಒಂದಿಷ್ಟೂ ಕಡಿಮೆಯಾಗಿಲ್ಲ.
ಸಂವಿಧಾನದತ್ತ ಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯ ಸಿಗಬೇಕಾದರೆ ಒಳಮೀಸಲಾತಿ ಜಾರಿಯಾಗಬೇಕು ಎಂಬ ಕೂಗು ಕೂಡ ಎದ್ದಿದೆ. ಮೀಸಲಾತಿ ಒಪ್ಪಿದ ಸರ್ಕಾರ ಒಳಮೀಸಲಾತಿಯನ್ನು ಒಪ್ಪಬೇಕು. ಸಮಾನತೆ ಮತ್ತು ಸಾಮಾಜಿಕ ನ್ಯಾಯ ಕಾಪಾಡಬೇಕಾದರೆ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಬೇಕಾಗಿದೆ.
ಮೀಸಲಾತಿ ವಿರೋಧಿಸುವ ಒಂದು ಗುಂಪು ಮತ್ತು ಸ್ಪೃಶ್ಯ ದಲಿತರ ಒಂದು ವರ್ಗ ಸಾಮಾಜಿಕ ನ್ಯಾಯದ ತತ್ವದಡಿ ರಚಿತವಾದ ಸದಾಶಿವ ವರದಿ ಜಾರಿಯಾಗದಂತೆ ಅಡ್ಡಗಾಲು ಹಾಕುತ್ತಿದ್ದಾರೆ. ಹಸಿದವನು ಅನ್ನಕ್ಕೆ ಹಾತೊರೆಯುವಂತೆ ಹೊಲೆಯ- ಮಾದಿಗರು ಒಳಮೀಸಲಾತಿಗಾಗಿ ಕಾದು ಕುಳಿತಿದ್ದಾರೆ. ಇದು ಕೇವಲ ಅಸ್ಪೃಶ್ಯರ ಒಳಪಂಗಡಗಳ ಜಾತಿ ಜಗಳವೆಂದು ಯಾರೂ ಭಾವಿಸಬಾರದು. ಜಾತಿ ದಬ್ಬಾಳಿಕೆಯ ಪ್ರಭುತ್ವದ ನಡುವೆ ಹಾಗೂ ಮೀಸಲಾತಿ ವಿರೋಧಿಗಳ ನಡುವೆ ಅಹಿಂಸಾತ್ಮಕವಾಗಿ ಒಳಮೀಸಲಾತಿ ಹೋರಾಟ ಪ್ರಜಾಸತ್ತಾತ್ಮಕವಾಗಿ ಸಾಗಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯ ಎಂಬ ಬಾಬಾ ಸಾಹೇಬರ ಚಿಂತನೆ ನೆಲೆಗಟ್ಟಿನಲ್ಲಿ ನಡೆದಿರುವ ಒಳಮೀಸಲಾತಿ ಹೋರಾಟವನ್ನು ಕೇವಲ ತಾಂತ್ರಿಕ ಕಾರಣದಿಂದ ವಿರೋಧಿಸುವುದು ಸರಿಯಲ್ಲ. ಬದಲಿಗೆ ಮಾನವೀಯ ಅಂತಃಕರಣದಿಂದ ನೋಡಬೇಕಾಗಿದೆ.
ಅಂದಿನ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ಎ.ಜೆ. ಸದಾಶಿವ ಆಯೋಗ ರಚಿಸಿತ್ತು. ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅಹಿಂದ ಮುಖಂಡ ಎಂದೇ ಬಿಂಬಿತಗೊಂಡಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಂದಲಾದರೂ ಅಸ್ಪೃಶ್ಯ ಜಾತಿಗಳಿಗೆ ನ್ಯಾಯ ಸಿಗುತ್ತದೆಯೇ ಎಂಬ ನಿರೀಕ್ಷೆಯಲ್ಲಿ ಆ ಸಮುದಾಯ ಕಾದು ಕುಳಿತಿದೆ.

- ಉಗಮ ಶ್ರೀನಿವಾಸ್
ಕನ್ನಡಪ್ರಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement