ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸಾವಿನ ನಂತರವೂ ನೆನಪುಳಿಯಲಿದೆ ರಾಮನ್ ಸೇವೆ

Mainashree
Updated On : 19 Jun 2013, 11:53 am

ಭಾರತದ ಗುಪ್ತಚರ ಸಂಸ್ಥೆ 'ರೀಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್‌' (ರಾ)ವನ್ನು ಪ್ರಾರಂಭಿಕ ದಿನಗಳಲ್ಲಿ ಮುನ್ನಡೆಸಿದ್ದ, ಭದ್ರತಾ ವಿಷಯಗಳಿಗೆ ಸಂಬಂಧಿಸಿದಂತೆ ಪರಿಣತ ವಿಶ್ಲೇಷಕರಾಗಿದ್ದ ಬಿ. ರಾಮನ್ ಅವರು ಭಾನುವಾರ ತಮ್ಮ 77ನೇ ವಯಸ್ಸಿನಲ್ಲಿ ನಿಧನರಾದರು. ಅವರ ಸಹೋದ್ಯೋಗಿಯಾಗಿದ್ದ ಇನ್ನೊಬ್ಬ ಭದ್ರತಾ ಪರಿಣತರಾದ ವಿಕ್ರಂ ಸೂದ್ ಅವರು ರೀಡಿಫ್ ಜಾಲತಾಣಕ್ಕೆ ಬರೆದ ಶ್ರದ್ಧಾಂಜಲಿ ಲೇಖನದಲ್ಲಿ ರಾಮನ್ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ.

ನಮ್ಮ ವೃತ್ತಿಯಲ್ಲಿ ನಾವಿಬ್ಬರೂ ಒಟ್ಟಿಗೆ ಬೇಟೆ ಆಡಿದೆವು. ಬಹುಕುತುಂಬಿ ರಾಮನ್ ಅವರು ನನ್ನ ಸ್ನೇಹಿತರೂ ಹೌದು ಹಾಗೂ ನನ್ನನ್ನು ರೂಪಿಸಿದವರೂ ಹೌದು. ಇಂದು ಅವರನ್ನು ಕಳೆದುಕೊಂಡಿರುವ ಗಳಿಗೆಯಲ್ಲಿ ಒತ್ತರಿಸಿರುವ ದುಃಖ ನನಗಾಗಿಯೇ ಅತ್ತಂತೆ ಆಗುತ್ತಿದೆ. ರಾಮನ್, ನಲ್ವತ್ತು ವರ್ಷಗಳ ಸ್ನೇಹಿತರಾಗಿದ್ದರು. ಆ ಅವಧಿಯುದ್ದಕ್ಕೂ ನನಗವರು ಕಂಡುಬಂದಿದ್ದು ಒಬ್ಬ ವೃತ್ತಿಪರ ಮನುಷ್ಯನಾಗಿ. ಆ ವೃತ್ತಿಪರತೆ ಅಂಶಕ್ಕೆ ಇನ್ನಷ್ಟು ಮೆರಗಿತ್ತು. ಅವರ ಅತಿ ಸದೃಢ ನಿಷ್ಠೆ ಮತ್ತು ವೃತ್ತಿಪರ ಔನ್ನತ್ಯ. ಲೋಕಾಭಿರಾಮದ ಮಾತುಗಳಲ್ಲಿ ಗಾಳಿಸುದ್ದಿಯನ್ನು ತುಂಬ ಆಸ್ವಾದಿಸುತ್ತಿದ್ದರಾದರೂ ವೃತ್ತಿಯಲ್ಲಿನ ವಿಷಯಗಳ ಬಗ್ಗೆ ಅಷ್ಟೇ ಕಟ್ಟುನಿಟ್ಟಿನ ಗೌಪ್ಯತೆ ಕಾಪಾಡುತ್ತಿದ್ದರು. ಬಹಳ ಗಂಭೀರವಾಗಿ ಮತ್ತು ಪೂರ್ಣ ಪ್ರಮಾಣದಲ್ಲಿ ವೃತ್ತಿಗೆ ಸಮರ್ಪಿಸಿಕೊಂಡಿದ್ದ ಅವರಿಗೆ ಪ್ರತಿ ವಿಷಯದಲ್ಲೂ ವಿವರಗಳನ್ನು ಕಲೆಹಾಕುವ ಬದ್ಧತೆ ಇತ್ತು.
ಅವರು ಬಹಳ ಖಾಸಗಿ ವ್ಯಕ್ತಿ. ಹಾಗೆಂದೇ ಅವರ ಅಡಿಯಲ್ಲಿ ಅಧ್ಯಯನದ ಕೆಲಸಕ್ಕೆ ನಾನು ನಿಯುಕ್ತನಾದಾಗ ಅವರ ಸಾಮಿಪ್ಯ ಪಡೆದುಕೊಳ್ಳುವುದಕ್ಕೆ ದೀರ್ಘ ಅವಧಿಯೇ ಬೇಕಾಯಿತು. ನಂತರ 1972ರಲ್ಲಿ ಅವರ ಸ್ಥಾನಕ್ಕೆ ನಾನು ನಿಯುಕ್ತಗೊಂಡೆ. ಕೆಲದಿನಗಳವರೆಗೆ ಅವರು ದಿವ್ಯಮೌನವನ್ನು ತಾಳಿಬಿಡುತ್ತಿದ್ದರು. ಆದರೆ ಒರಟಾಗಿ ವರ್ತಿಸುತ್ತಿರಲಿಲ್ಲ. ತಾವೇನು ಮಾಡುತ್ತಿದ್ದಾರೋ ಅದರಲ್ಲಿ ಮುಳುಗಿಹೋಗುವುದು ಅವರ ಜಾಯಮಾನವಾಗಿತ್ತು. ಅವರ ಹತ್ತಿರದಲ್ಲೆ ಕುಳಿತು ಗುಪ್ತಚರ ಮಾಹಿತಿಗೆ ಸಂಬಂಧಿಸಿದ ಅತಿದಪ್ಪ ಮಾಹಿತಿಗಳನ್ನೆಲ್ಲ ಓದಿ ನಿರ್ಗಮಿಸುತ್ತಿದ್ದೆ. ನಮ್ಮ ನಡುವೆ ಒಂದು ಶಬ್ದದ ಮಾತೂ ಇರುತ್ತಿರಲಿಲ್ಲ. ಕೆಲವೊಂದು ದಿನ ಕಾಣಿಸಿಕೊಳ್ಳುತ್ತಿರಲಿಲ್ಲ.
ಇನ್ನು ಕೆಲದಿನ ಅವರು ಉಲ್ಲಸಿತರಾಗಿ ಲೋಕಾಭಿರಾಮದ ಹರಟೆಯಲ್ಲಿ ತಲ್ಲೀನರಾಗಿರುತ್ತಿದ್ದರು. ಮಧ್ಯಪ್ರದೇಶದಲ್ಲಿ ಅವರು ಸೇವೆಯಲ್ಲಿದ್ದಾಗ ಎದುರಿಸಿದ ಪ್ರಸಂಗಗಳನ್ನು ಹೇಳಿ ನಗಿಸುತ್ತಿದ್ದರು. ಅವರು ನನ್ನನ್ನು ರೂಪಿಸುವುದಕ್ಕೂ ಸಮಯ ವ್ಯಯಿಸಿದರು. ಎಲ್ಲ ಹಂತಗಳಲ್ಲಿ ನನ್ನನ್ನು ಜತೆಗೊಯ್ದು, ವಿಶ್ಲೇಷಕನಾಗಿ ಏನು ಮಾಡಬೇಕು ಏನೆಲ್ಲ ಮಾಡಬಾರದು ಎಂಬುದರ ಬಗ್ಗೆ ಅರಿವು ಮೂಡಿಸುತ್ತ, ಇಂಟಲಿಜೆನ್ಸ್ ಅಧಿಕಾರಿಯಾಗಿ ವೃತ್ತಿಪಾರಮ್ಯ ಮೆರೆಯುವುದಕ್ಕೆ ಮಾರ್ಗದರ್ಶನ ಮಾಡುತ್ತಿದ್ದರು. ಸಮಯ ಉರುಳುತ್ತಲೇ ನಮ್ಮಿಬ್ಬರ ಮಧ್ಯದ ಬಾಂಧವ್ಯ ಗಟ್ಟಿಗೊಂಡಿತು. ನಮ್ಮಿಬ್ಬರ ನಡುವೆ ಅಭಿಪ್ರಾಯಭೇದಗಳು ಕೆಲವೊಮ್ಮೆ ಎದುರಾದರೂ ಆ ಕ್ಷಣದ ವಾದದ ನಂತರ ಮುಂದೆ ಸಾಗಿಬಿಡುತ್ತಿದ್ದೆವು.
1974ರಲ್ಲಿ ನಮ್ಮ ವೃತ್ತಿಬದುಕು ಕವಲೊಡೆದು ಬೇರೆ ಬೇರೆ ಕಡೆ ಕರೆದೊಯ್ದಿತು. 1983ರಲ್ಲಿ ಮತ್ತೆ ವೃತ್ತಿಯಲ್ಲಿ ಒಂದಾದೆವು. 1994ರಲ್ಲಿ ಅವರು ನಿವೃತ್ತರಾದಾಗ ಅವರ ಹುದ್ದೆಗೆ ನಾನು ಹೋದೆ. ಆದರೆ ಅವರು ನಿಜಕ್ಕೂ ನಿವೃತ್ತರಾಗಿರಲಿಲ್ಲ. ಅಂಥವರು ಹಾಗೆಲ್ಲ ರಿಟೈರ್ ಆಗುವುದೂ ಇಲ್ಲ. ಅವರು ಯಾವುದೇ ವಿದ್ಯಮಾನವನ್ನು ವಿಶ್ಲೇಷಣೆಗೆ ಒಳಪಡಿಸುತ್ತಿದ್ದದ್ದು, ಅವರ ಅಂದಾಜುಗಳು ಮತ್ತು ವರದಿಗಳು ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನಮಗೆಲ್ಲ ದಿಕ್ಸೂಚಿಯಂತಾಗಿತ್ತು.
ಅಂಥ ಎಲ್ಲ ವಿಶ್ಲೇಷಣೆಗಳೂ ಈಗ ಅವರ ಬ್ಲಾಗ್‌ನಲ್ಲಿ ಲಭ್ಯವಿದ್ದು ಓದು ಮತ್ತು ಕಲಿಕೆಗೆ ಬಹುದೊಡ್ಡ ಆಸ್ತಿಯಾಗಿವೆ. ಅವರು ಹೇಗೆ ದಂತಕತೆಯಾದರೋ ಅಂತೆಯೇ ಅವರು ವಿಶ್ಲೇಷಣಾ ಬರಹಗಳಿಗೆ ತೊಡಗಿಸಿಕೊಂಡ ಸ್ವಲ್ಪಕಾಲದಲ್ಲೆ ಅವರ ಬರಹಗಳೂ ದಂತಕತೆಯಂತಾದವು. ಕಾರ್ಗಿಲ್ ಪರಾಮರ್ಶೆ ಸಮಿತಿ ರೂಪುಗೊಂಡಾಗ ಅವರನ್ನು ಮತ್ತೆ ಗುಪ್ತಚರ ವಿಷಯಗಳ ಮೇಲಿನ ಕಾರ್ಯಪಡೆಗೆ ಸೇರಿಸಿಕೊಳ್ಳಲಾಯಿತು. ರಾಷ್ಟ್ರೀಯ ಭದ್ರತೆಯ ಸಲಹಾ ಸಮಿತಿಗೆ ಅವರು ಸದಸ್ಯರಾದರು. ನರೇಶ್‌ಚಂದ್ರ ಸಮಿತಿಯ ಪರಾಮರ್ಶೆಗೆ ಸಹಾಯಕ್ಕೆಂದು ಅವರಿಗೆ ಬೇಡಿಕೆ ಬಂತು.
ರಾಮನ್ ಅವರ ವೃತ್ತಿಬದುಕು ಅರಾಜಕ ಅವಧಿಗಳನ್ನೆಲ್ಲ ಒಳಗೊಂಡಿದ್ದಾಗಿತ್ತು. ಶೀತಲ ಸಮರ, ಇಂಡೊ-ಪಾಕ್ ಯುದ್ಧ ಮತ್ತು 1971ರ ಬಾಂಗ್ಲಾದೇಶ ವಿಮೋಚನೆ ಯುದ್ಧವನ್ನೆಲ್ಲ ಅದು ಒಳಗೊಂಡಿತ್ತು. ನಾಗಾ ಮತ್ತು ಮಿಜೋಗಳ ಬಂಡುಕೋರ ಸಂಘರ್ಷಗಳು ಮತ್ತು ನಂತರದ ಶಾಂತಿ ಮಾತುಕತೆಗಳು, 1980ರ ಸಿಖ್ ಉಗ್ರವಾದ, 1990ರ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಐಎಸ್‌ಐ ಪ್ರೇರಿತ ರಕ್ತಪಾತ, 1993ರ ಮುಂಬೈ ಬಾಂಬ್ ಸ್ಫೋಟ ಇವೆಲ್ಲವಕ್ಕೂ ರಾಮನ್ ಸಾಕ್ಷಿಯಾಗಿದ್ದು ಅವರ ವೃತ್ತಿಯ ಮಹತ್ತರ ಮೈಲಿಗಲ್ಲುಗಳೆಂದು ಗುರುತಿಸಬಹುದು.
ಮೂರು ಪುಸ್ತಕಗಳ ಕೃತಿಕಾರ ಎನ್ನಿಸಿಕೊಂಡ ಭಾರತದ ಏಕಮೇವ ಇಂಟಲಿಜೆನ್ಸ್ ಅಧಿಕಾರಿ ರಾಮನ್. ಅವುಗಳಲ್ಲಿ ಎರಡು: 'ಇಂಟಲಿಜೆನ್ಸ್: ಪಾಸ್ಟ್ ಪ್ರಸೆಂಟ್ ಆ್ಯಂಡ್ ಫ್ಯೂಚರ್‌', 'ಎ ಟೆರರಿಸ್ಟ್ ಸ್ಟೇಟ್ ಆ್ಯಸ್ ಫ್ರಂಟ್‌ಲೈನ್ ಆ್ಯಲಿ'. ತಮ್ಮ ಕೊನೆಯ ಪುಸ್ತಕದ 'ದ ಕಾವೊಬಾಯ್ಸ್ ಆಫ್ ಆರ್ ಆ್ಯಂಡ್ ಎಡಬ್ಲ್ಯು'ನಲ್ಲಿ ಅವರು ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.
ಈ ಪುಸ್ತಕದಲ್ಲಿ ಆಪ್ತಹರಟೆಯ ಧಾಟಿಯಲ್ಲಿರುವವರಂತೆ ಕಾಣುವ ರಾಮನ್, ಗುಪ್ತಚರ ಜಗತ್ತಿನ ತಮ್ಮ ದಿನಗಳು ಹಾಗೂ ಅದು ಅಧಿಕಾರಸ್ಥರೊಂದಿಗೆ ವ್ಯವಹರಿಸುತ್ತಿದ್ದ ರೀತಿಗಳನ್ನು ಓದುಗರಿಗೆ ಪರಿಚಯಿಸುತ್ತಾರೆ. ಬಿಲ್ ಕ್ಲಿಂಟನ್ ಅವಧಿಯಲ್ಲಿ ಅಮೆರಿಕದ ಗೃಹಖಾತೆಯು ಭಾರತದ ಮೇಲೆ ಪಾಕಿಸ್ತಾನದ ವಿಷಯವಾಗಿ ನಿರಂತರ ಒತ್ತಡಗಳನ್ನು ಹೇರಿ ಉಭಯ ದೇಶಗಳ ನಡುವೆ ಯಾವತ್ತೂ ಆತಂಕ ನೆಲೆಸುವಂತೆ ಮಾಡಿದ್ದರ ಬಗ್ಗೆ ಸಿಟ್ಟಿನಿಂದ ಬರೆಯುತ್ತಾರೆ. ಕೊನೆಗದು ಕಾರ್ಗಿಲ್ ಯುದ್ಧದಲ್ಲಿ ಪರಿಸಮಾಪ್ತಿಯಾಯ್ತು.
ಅಮೆರಿಕ ಹಾಗೂ ಪಾಶ್ಚಾತ್ಯ ಧೋರಣೆಗಳ ಕುರಿತು ಅವರ ಕೊನೆ ನಿಲುವು ಇಂದಿಗೂ ಪ್ರಸ್ತುತ. 'ಪಾಕಿಸ್ತಾನವು ಮಾಡುತ್ತಿರುವ ಕೆಟ್ಟಕಾರ್ಯಗಳಿಗೆ ಪ್ರತಿಯಾಗಿ ಅದನ್ನು ರಕ್ಷಿಸುವ ನಿಟ್ಟಿನಲ್ಲಿ ಈ ದೇಶಗಳ ಅತಿ ಉತ್ಸುಕತೆಯೇ ಅವರ ಗೃಹಖಾತೆಯ ನೀತಿಗಳ ಮುಖ್ಯಲಕ್ಷಣವಾಗಿದೆ' ಎಂದಿದ್ದರು ಅವರು. 'ಮುಂದೆಂದಾದರೂ ಜಗತ್ತಿನ ಯಾವುದೇ ಭಾಗದಲ್ಲಿ ಜನಸಮೂಹವನ್ನೇ ನಾಶಮಾಡುವ ಶಸ್ತ್ರಾಸ್ತ್ರ ಸಂಬಂಧಿ ಉಗ್ರಕೃತ್ಯ ನಡೆದರೆ ಆ ಮಾರಕಾಸ್ತ್ರ ಪಾಕಿಸ್ತಾನದಿಂದಲೇ ಬಂದಿರುತ್ತದೆ ಎಂದು ಖಾತ್ರಿಯಾಗಿ ಹೇಳಬಹುದು' ಎಂದಿದ್ದರು.
ಕೊನೆಯ ಅಧ್ಯಾಯದಲ್ಲಿ ಅವರು ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ ಸಂಸ್ಥೆ ಬಗ್ಗೆ ಬರೆಯುತ್ತ ಅದನ್ನು ನಿರ್ವಹಿಸುವವರಿಗೆ ಸಲಹೆಗಳನ್ನು ನೀಡಿದ್ದಾರೆ. ಅವರು ಮುಂದಿಟ್ಟ ಆದರ್ಶಗಳು ಹಾಗೂ ಗುರಿಗಳಲ್ಲಿ ತುಸುವನ್ನಾದರೂ ನಿಭಾಯಿಸುವಲ್ಲಿ ನಾವು ಯಶಸ್ವಿಯಾದರೆ ಅದರಿಂದ ನಮಗೇ ಭಾರಿ ಶ್ರೇಯಸ್ಸಾಗುತ್ತದೆ.
ರಾಮನ್ ಗತಿಸಿದ್ದಾರೆ. ಅವರ ದಂತಕತೆ ಅಮರ.

- ವಿಕ್ರಂ ಸೂದ್
'ರಾ'ದ ನಿವೃತ್ತ ಮುಖ್ಯಸ್ಥರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement