ಸಮುದಾಯ ಕಾಲೇಜುಗಳ ಸಂಖ್ಯೆ ಸಹಸ್ರವಾಗಲಿ
ಉದ್ಯೋಗ ಪ್ರಪಂಚ ಹಾಗೂ ನಾಗರಿಕ ಸಮಾಜವನ್ನು 21ನೇ ಶತಮಾನದಲ್ಲಿ ಮರುರೂಪಿಸಿರುವುದು 'ನಾವಿನ್ಯ'. ಆರ್ಥಿಕವಾಗಿ ಬೆಳೆಯುತ್ತಿರುವ ಕ್ಷೇತ್ರಗಳಿಗೆ ಬೆಂಬಲ ನೀಡಲು ಅಗತ್ಯವಾಗಿರುವ ಜ್ಞಾನ ಹಾಗೂ ಕೌಶಲ್ಯಗಳನ್ನು 'ನಾವಿನ್ಯ' ಮರುವ್ಯಾಖ್ಯಾನಿಸುತ್ತದೆ. ನಮ್ಮೆಲ್ಲ ನಾಗರಿಕರ ಶೈಕ್ಷಣಿಕ ಸಾಧನೆಯ ಮಟ್ಟವನ್ನು ಸಮಗ್ರವಾಗಿ ಎತ್ತರಿಸುವುದು ಮಾತ್ರವಲ್ಲದೇ, ಕೌಶಲ್ಯಗಳ ನಡುವಿನ ಅಂತರವನ್ನು ಸರಿದೂಗಿಸುವುದೂ ಅಗತ್ಯವಾಗಿದೆ.
ಸ್ಥಳೀಯ ಕಾರ್ಮಿಕ ಮಾರುಕಟ್ಟೆಯ ಸ್ಥಿತಿಗೆ ಅನುಗುಣವಾಗಿ ಪಠ್ಯಕ್ರಮವನ್ನು ವಿನ್ಯಾಸಗೊಳಿಸುವುದು ಸಮುದಾಯ ಕಾಲೇಜುಗಳನ್ನು ವಿಶಿಷ್ಟ ಸಾಲಿನಲ್ಲಿ ನಿಲ್ಲಿಸಿದೆ. ಅಲ್ಲದೇ, ಅಗತ್ಯಕ್ಕನುಗುಣವಾಗಿ ಹೊಂದಿಸಿಕೊಳ್ಳಬಹುದಾದ ಹಾಗೂ ಇಂದಿನ ಆರ್ಥಿಕತೆ ಹಾಗೂ ಉದ್ಯೋಗ ಮಾರುಕಟ್ಟೆಗೆ ಪ್ರಸ್ತುತವಾಗಿರುವುದೂ ಈ ಕಾಲೇಜುಗಳ ವಿಶೇಷ. ಸ್ಥಳೀಯ ಸಮುದಾಯಗಳ ಬಲು ದೊಡ್ಡ ಪ್ರಮಾಣದ ಜನಸಂಖ್ಯೆಗೆ, ಉದ್ಯೋಗಕ್ಕೆ ಪ್ರಸ್ತುತವೆನಿಸುವ ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸುವ ಮುಕ್ತ ಪ್ರವೇಶ ಸಂಸ್ಥೆಗಳಿವು. ಹಿಂದೆಂದಿಗಿಂತಲೂ ಹೆಚ್ಚಿನ ಕೌಶಲ್ಯ ಬೆಳವಣಿಗೆ ಹಾಗೂ ದೃಢೀಕರಣ ಬೇಡುವ ಇಂದಿನ ಜ್ಞಾನಾಧಾರಿತ ಆರ್ಥಿಕತೆಯಲ್ಲಿ ಈ ಕಾಲೇಜುಗಳ ಪದವೀಧರರು ಸಕ್ರಿಯವಾಗಿ ಭಾಗಿಯಾಗುತ್ತಿರುವುದು ವಿಶೇಷ.
ಭಾರತ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನಗಳ ಮುಂದಿದ್ದ ಆಗಿನ ಸವಾಲೆಂದರೆ, ತಮ್ಮ ವೈವಿಧ್ಯ ಹಾಗೂ ಚಲನಶೀಲ ಜನಸಂಖ್ಯೆಗೆ ಇಂಥ ಹಾಗೂ ಇನ್ನಿತರ ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸುವುದೇ ಆಗಿತ್ತು. ಈ ದಿಶೆಯಲ್ಲಿ ಮುನ್ನಡೆಯಬೇಕಾದರೆ ವಿಶ್ವ ಆರ್ಥಿಕತೆಗೆ ತಳುಕು ಹಾಕಿಕೊಂಡಿರುವ ಹಾಗೂ ಸ್ಥಳೀಯ ಸಮುದಾಯಗಳ ಅಗತ್ಯಗಳಿಗೆ ಪ್ರತಿಕ್ರಿಯಾತ್ಮಕವಾದ 21ನೇ ಶತಮಾನದ ಉದ್ಯೋಗ ಕೌಶಲ್ಯಗಳನ್ನು ಕಲಿಸಲು ನಾವು ಮುಂದಾಗಬೇಕಾಗುತ್ತದೆ. ಪದವೀಧರರ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಪರಸ್ಪರ ಆಂತರಿಕವಾಗಿ ಹೆಣೆದುಕೊಂಡಿರುವ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಗಳಿಸಲು ಅಗತ್ಯವಿರುವ ಜ್ಞಾನ ಹಾಗೂ ಕೌಶಲ್ಯಗಳನ್ನು ಅಮೆರಿಕನ್ನರು ಹೊಂದುವಂತಾಗಲು ಸಮುದಾಯ ಕಾಲೇಜುಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಮೆರಿಕ ಅಧ್ಯಕ್ಷ ಒಬಾಮಾ ಹೇಳುತ್ತಾರೆ. ಅಮೆರಿಕ ಸಂಯುಕ್ತ ಸಂಸ್ಥಾನದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸಂಸ್ಥೆಗಳೆಂದರೆ ಸಮುದಾಯ ಕಾಲೇಜುಗಳೇ. ಅಮೆರಿಕದ ಒಟ್ಟಾರೆ ಪದವಿ ವಿದ್ಯಾರ್ಥಿ ಸಮುದಾಯದ ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ದೇಶಾದ್ಯಂತ ಇರುವ 1,100 ಸಮುದಾಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಉದ್ಯಮ-ಅಂಗೀಕೃತ ಪ್ರಮಾಣ ಪತ್ರ ಹಾಗೂ ಪದವಿಗಳನ್ನು ನೀಡುವಂತಾಗಲು ಬಹುತೇಕ ಕಾಲೇಜುಗಳು ಸ್ಥಳೀಯ ಉದ್ಯೋಗದಾತರ ಸಹಭಾಗಿತ್ವದಲ್ಲಿ ಕೋರ್ಸಿನ ಮೂಲ ಅಂಶಗಳನ್ನು ವಿನ್ಯಾಸಗೊಳಿಸುತ್ತವೆ. ಅಲ್ಲದೇ, ಆರೋಗ್ಯ, ಅನ್ವಯಿಕ ಇಂಜಿನಿಯರಿಂಗ್ ಹಾಗೂ ಹಸಿರು ತಂತ್ರಜ್ಞಾನಗಳಂಥ ಸಾಕಷ್ಟು ಬೆಳವಣಿಗೆಯುಳ್ಳ ಕ್ಷೇತ್ರಗಳಿಗಾಗಿ ಸಜ್ಜುಗೊಳ್ಳುವ ಈ ಪದವೀಧರರು, ತಮ್ಮ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.
ಭಾರತವೂ ಕೂಡಾ ಇಂಥದೇ ಸವಾಲುಗಳನ್ನು ಅಂದರೆ, ಆಟೋಮೋಟೀವ್, ಆರೋಗ್ಯ ತಂತ್ರಜ್ಞಾನಗಳಂಥ ಕ್ಷಿಪ್ರವಾಗಿ ಬೆಳೆಯುತ್ತಿರುವ ಕ್ಷೇತ್ರಗಳ ಕುರಿತು ತನ್ನ ಜನರಿಗೆ ಶಿಕ್ಷಣ ಒದಗಿಸುವ ಸವಾಲನ್ನು ಎದುರಿಸುತ್ತಿದೆ. ಈ ಕ್ಷೇತ್ರಗಳಲ್ಲಿ ಭಾರತೀಯರು ಹೊಸ ಉದ್ಯೋಗ ಗಳಿಸುವಂತಾಗಲು, ಭಾರತವೂ ಸಹ ಸಮುದಾಯ ಕಾಲೇಜುಗಳಂಥ ಅತ್ಯುತ್ತಮ ಪದ್ಧತಿಯನ್ನು ಅವಲೋಕಿಸುತ್ತಿದೆ. ಕಾರ್ಯಪಡೆಯ ಬೇಡಿಕೆಗಳನ್ನು ಈಡೇರಿಸಲು, ಪ್ರಭಾವಶಾಲಿ ಆರ್ಥಿಕ ಬೆಳವಣಿಗೆಯನ್ನು ಸ್ಥಿರಗೊಳಿಸಲು ಹಾಗೂ ಸಮೃದ್ಧ ಸಮಾಜವಾಗಲು, ಈಗ ಸಮುದಾಯ ಕಾಲೇಜುಗಳ ರಾಷ್ಟ್ರೀಯಜಾಲವೊಂದನ್ನು ನಿರ್ಮಿಸಲು ಭಾರತವೂ ಸಹ ಮುಂದಾಗಿದೆ.
ಕಳೆದ ಫೆಬ್ರವರಿಯಲ್ಲಿ ಭಾರತದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಮುದಾಯ ಕಾಲೇಜುಗಳ ಸಮಾವೇಶದಲ್ಲಿ ಪಾಲ್ಗೊಳ್ಳುವ ಗೌರವ ಅಮೆರಿಕ ಸಂಯುಕ್ತ ಸಂಸ್ಥಾನದ್ದಾಗಿತ್ತು. ಭಾರತದ ಭವಿಷ್ಯವನ್ನು ಉಜ್ವಲಗೊಳಿಸಲು ಅಗತ್ಯವಿರುವ ಜನ ಸಮುದಾಯಕ್ಕೆ ಜ್ಞಾನ ಹಾಗೂ ಕೌಶಲ್ಯ ಕಲಿಸಲು ಮಾತ್ರವಲ್ಲದೇ ಉದ್ಯಮದೊಂದಿಗೆ ಬಲವಾದ ಸಂಬಂಧ ಹೊಂದಿರುವ 200 ಸಮುದಾಯ ಕಾಲೇಜುಗಳ ಜಾಲವೊಂದನ್ನು ನಿರ್ಮಿಸುವುದು ಈ ಸಮಾವೇಶದ ಆಶಯವಾಗಿತ್ತು. ರಾಷ್ಟ್ರೀಯ ಕೌಶಲ್ಯಗಳ ಗುರಿಯನ್ನು ಸಾಧಿಸಲು ಅನುವಾಗುವಂತೆ ಸರ್ಕಾರ ಹಾಗೂ ಖಾಸಗಿ ವಲಯಗಳ ಕೌಶಲ್ಯ ಅಭಿವೃದ್ಧಿ ಪ್ರಯತ್ನಗಳನ್ನು ಸಂಘಟಿಸಲು ಹಾಗೂ ಸುಗಮಗೊಳಿಸಲು, ಸಚಿವ ಪಲ್ಲಂ ರಾಜು ಅವರ ನಾಯಕತ್ವದಲ್ಲಿ, ಸರ್ಕಾರವು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಏಜೆನ್ಸಿಯನ್ನು (National Skill Development Agency -NSDA) ಸ್ಥಾಪಿಸಿದೆ.
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಪರಿಗಣಿಸಲು ಹಲವಾರು ಯಶಸ್ವಿ ಮಾದರಿಗಳುಂಟು. ಉದ್ಯೋಗದಾತನೊಬ್ಬನಿಗೆ ಅಗತ್ಯವಿರುವ ಕಾರ್ಯಪಡೆಯ ಹೇಳಿಕೆಗಳನ್ನು ಗಮನಿಸಿ, ಬಹುತೇಕ ಸಮುದಾಯ ಕಾಲೇಜು-ಉದ್ಯಮಗಳ ಸಹಭಾಗಿತ್ವಗಳು ಆರಂಭವಾಗುತ್ತವೆ. ಇನ್ನು ಪ್ರಾದೇಶಿಕ ಆರ್ಥಿಕ ವಲಯಗಳ ಸವಾಲುಗಳನ್ನು ಗುರುತಿಸಿ ಹಾಗೂ ಅವನ್ನು ಎದುರಿಸಲು ಬೇಕಾಗಿರುವ ನೆರವನ್ನು ಸ್ಥಳೀಯ ಉದ್ದಿಮೆಗಳಿಂದ ಪಡೆಯುವ ಮೂಲಕ ಸಮುದಾಯ ಕಾಲೇಜುಗಳ ಇತರ ಸಹಭಾಗಿತ್ವಗಳು ಆರಂಭವಾಗುತ್ತವೆ.
ವಾಷಿಂಗ್ಟನ್ನಲ್ಲಿ, ಬೋಯಿಂಗ್ ಕಂಪನಿ ಸೇರಿದಂತೆ ಇತರ ಸ್ಥಳೀಯ ಏರೋಸ್ಪೇಸ್ ಕಂಪನಿಗಳೊಂದಿಗೆ ಸ್ಪೋಕಾನೆ ಸಮುದಾಯ ಕಾಲೇಜು ಜೊತೆಗೂಡಿ ತರಬೇತಿ ನೀಡುವ ಮೂಲಕ ಇಡೀ ರಾಜ್ಯದಲ್ಲಿ ಆ ಕ್ಷೇತ್ರದ ಕಾರ್ಯಪಡೆಯ ಗುಣಮಟ್ಟವನ್ನು ಸುಧಾರಿಸಲು ಯತ್ನಿಸುತ್ತಿದೆ. ಮೇರಿಲ್ಯಾಂಡಿನಲ್ಲಿ ಮಾಂಟಗೋಮೆರಿ ಸಮುದಾಯ ಕಾಲೇಜಿನ ವಿದ್ಯಾರ್ಥಿಗಳು ಬಯೋ ಮ್ಯಾನುಫ್ಯಾಕ್ಚರಿಂಗ್(ಜೈವಿಕ ಉತ್ಪಾದನಾ) ಕ್ಷೇತ್ರದಲ್ಲಿ ಮುಂದುವರಿಯುವುದನ್ನು ಪ್ರೋತ್ಸಾಹಿಸಲು ಗ್ಲಾಕ್ಸೋಸ್ಮಿತ್ ಕ್ಲಿನ್ ಸಂಸ್ಥೆಯು ಶಿಷ್ಯವೇತನಗಳನ್ನು ನೀಡುತ್ತಿದೆ. ಈ ಕಂಪನಿಗಳು ಸಮುದಾಯ ಕಾಲೇಜುಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಲ್ಲಿ ತಮಗೆ ಅಗತ್ಯವಾದ ವಿಭಿನ್ನ ಪರಿಣತೆಯನ್ನು ಪಡೆಯಲು ಅನುವು ಮಾಡಿಕೊಡುತ್ತವೆ.
ಈ ಬಗೆಯ ಪಾಲುದಾರಿಕೆಗಳನ್ನು ಮುಂದುವರಿಸಲು ಒಬಾಮಾ ಆಡಳಿತವು, ವ್ಯಾಪಾರ ಹೊಂದಾಣಿಕೆ ನೆರವು, ಸಮುದಾಯ ಕಾಲೇಜು ಮತ್ತು ವೃತ್ತಿ ತರಬೇತಿ ಅನುದಾನ ಕಾರ್ಯಕ್ರಮಗಳ ಮೂಲಕ ಐತಿಹಾಸಿಕ ಬಂಡವಾಳ ಹೂಡಲು ಮುಂದಾಯಿತು. ಅಮೆರಿಕದ ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಮುಖಾಂತರ ಜಾರಿಯಾಗುವ ಈ ಕಾರ್ಯಕ್ರಮವು, ಅಮೆರಿಕದ ಸಮುದಾಯ ಕಾಲೇಜುಗಳಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಅಲ್ಪಕಾಲೀನ ವೃತ್ತಿ ತರಬೇತಿ ಕಾರ್ಯಕ್ರಮಗಳನ್ನು ನಿರ್ಮಿಸಿ ಮತ್ತು ವಿಸ್ತರಿಸಲು ಸಹಾಯಕವಾಗುತ್ತದೆ. ಅಲ್ಲದೇ, ವಿದ್ಯಾರ್ಥಿಗಳನ್ನು ಉದ್ಯೋಗದಾತರ ಸಹಭಾಗಿತ್ವದೊಂದಿಗೆ ಹೆಚ್ಚಿನ-ವೇತನ ಹಾಗೂ ಹೆಚ್ಚು ಕೌಶಲ್ಯದ ಅಗತ್ಯವಿರುವ ವೃತ್ತಿಗಳಿಗೆ ಸಜ್ಜುಗೊಳಿಸುವುದೂ ಸಾಧ್ಯವಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಭಾರತದ ಗುರಿ ವಲಯಗಳಲ್ಲಿ, ನಮ್ಮ ಯುವಕರನ್ನು ತರಬೇತಿಗೊಳಿಸಲು ಅಂಥ ವೃತ್ತಿಪರರಿಗೆ ಹೊಸ ಕೌಶಲ್ಯವನ್ನು ಒದಗಿಸಿ ಅದರಿಂದ ಅವರು ತಮ್ಮ ಜೀವನದಲ್ಲಿ ಮುಂದುವರಿಯಲು ಮತ್ತು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಭದ್ರ ಭವಿಷ್ಯ ಪಡೆಯಲು ಇಂಥ ನಡೆ ಸಹಾಯಕವಾಗಿದೆ. ಸಚಿವ ಪಲ್ಲಂ ರಾಜು ಅವರ ಈಚೆಗಿನ ವಾಷಿಂಗ್ಟನ್ ಭೇಟಿ ಸಂದರ್ಭದಲ್ಲಿ, ಕಡಿಮೆ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಅರಿವು ನೀಡುವ ಕುರಿತ ನಮ್ಮ ಬದ್ಧತೆಯನ್ನು ಮರುವ್ಯಕ್ತಪಡಿಸಿದೆವು. ಇಂಥ ಉದ್ದೇಶದ ಕೆಲ ಆಯಾಮಗಳು ಬಹು ಮುಖ್ಯ ಹಾಗೂ ಸಕಾಲಿಕವಾದವುಗಳು.
ಎರಡೂ ದೇಶಗಳ ಸಹಭಾಗಿತ್ವವನ್ನು ಮತ್ತಷ್ಟು ಗಾಢವಾಗಿಸಲು ಹಾಗೂ ನಮ್ಮೆರಡೂ ದೇಶಗಳ ಸಮೃದ್ಧಿಯನ್ನು ಇಡಿಯಾಗಿ ಹಾಗೂ ಬಿಡಿಯಾಗಿಯೂ ಮತ್ತಷ್ಟು ಹೆಚ್ಚಿಸಲು ಮುಂದಿನ ದಿನಗಳಲ್ಲಿ ನಡೆಯಲಿರುವ 'ಅಮೆರಿಕ- ಭಾರತ ಉನ್ನತ ಶಿಕ್ಷಣ ಸಂವಾದ' ಮತ್ತೊಂದು ಅವಕಾಶ ಕಲ್ಪಿಸಲಿದೆ. ಕೈಗೆಟುಕುವ ಉನ್ನತ ಶಿಕ್ಷಣ ಅವಕಾಶವನ್ನು ಕಲ್ಪಿಸುವ ಮೂಲಕ ವಿದ್ಯಾರ್ಥಿಗಳನ್ನು ಮಹತ್ವಾಕಾಂಕ್ಷಿಯಾದ ಆಧುನಿಕ ಕಾರ್ಯಪಡೆಯಾಗಿ ಸಜ್ಜುಗೊಳಿಸಬೇಕಿದೆ. ಭಾರತದ ಸಹಕಾರದ ಮುಂದುವರಿಕೆಯನ್ನು ನಾವು ಇದಿರು ನೋಡುತ್ತಿದ್ದೇವೆ ಹಾಗೂ ಸಮುದಾಯ ಕಾಲೇಜುಗಳ ವ್ಯವಸ್ಥೆಯ ಅಭಿವೃದ್ಧಿಗೆ ಭಾರತದ ಬದ್ಧತೆಯನ್ನು ಶ್ಲಾಘಿಸುತ್ತೇವೆ.
- ತಾರಾ ಡಿ. ಸೊನೆನ್ ಶೈನ್
ಯುಎಸ್ಎ ಅಧೀನ ಕಾರ್ಯದರ್ಶಿಗಳು, ವಿದೇಶಾಂಗ ಇಲಾಖೆ
- ಮಾರ್ತಾ ಕ್ಯಾಂಟರ್
ಅಮೆರಿಕ ಸಂಯುಕ್ತ ಸಂಸ್ಥಾನದ ಅಧೀನ ಕಾರ್ಯದಶಿಗಳು, ಶಿಕ್ಷಣ ಇಲಾಖೆ