ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಖರ್ಗೆ ಅವಧಿಯಲ್ಲಾದೀತೆ ರಾಜ್ಯದ ರೈಲ್ವೆ ಅಭಿವೃದ್ಧಿ?

Mainashree
Updated On : 22 Jun 2013, 12:12 pm

2013-14ರ ಆರ್ಥಿಕ ವರ್ಷದ ಮೂರು ತಿಂಗಳುಗಳು ಮುಗಿದು ಹೋದವು. ಇನ್ನು ಕೇವಲ 9 ತಿಂಗಳು ಬಾಕಿ ಇದೆ. ಈ ಮೂರು ತಿಂಗಳಲ್ಲಿ ಕರ್ನಾಟಕದ ರೈಲ್ವೆಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳನ್ನು ನಾವು ನೋಡುತ್ತಿಲ್ಲ. ಗದಗ-ವಾಡಿ, ಗದಗ-ಹರಿಹರ, ಗದಗ-ಹಾವೇರಿ ಇತ್ಯಾದಿ ವಿಭಾಗಗಳ ನಿರ್ಮಾಣ ಕಾರ್ಯ  ಸ್ಯಾಂಕ್ಷನ್ ಆಗಿದ್ದರೂ ಯಾವುದೇ ಸುದ್ದಿ ತಿಳಿದು ಬರುವುದಿಲ್ಲ.
ಪ್ರತಿ 2 ತಿಂಗಳಿಗೊಮ್ಮೆ ತಮ್ಮ ಪತ್ರಿಕೆಯಲ್ಲಿ ರೈಲ್ವೆ ನಿರ್ಮಾಣ ಯಾವ ಲೈನ್‌ನ ಕೆಲಸ ಎಲ್ಲಿಗೆ ಬಂದಿದೆ? ಎಷ್ಟು ಉಳಿದಿದೆ? ತೊಂದರೆಗಳೇನು? ಎಂದು ಒಂದು ಸಾರ್ವಜನಿಕರ ಅವಗಾಹನೆಗೆ ಸುದ್ದಿ ಕೊಡಬೇಕಾಗಿ ವಿನಂತಿ. ಇದರಿಂದ "ಜನಸಮೂಹದ ಸಂಕಲ್ಪ" ನಿರ್ಮಾಣವಾಗಿ ಸರ್ಕಾರದ ಮೇಲೆ ಒತ್ತಡ ಬೀಳುತ್ತದೆ. ರೈಲ್ವೆ ಮಂತ್ರಿಗಳ ಹಗರಣದಲ್ಲಿ ನಮ್ಮ ಕರ್ನಾಟಕದ ರೈಲ್ವೆ ಅಭಿವೃದ್ಧಿ ಯಾಕೆ ಕುಂಠಿತಗೊಳ್ಳಬೇಕು?

ಈ ರೈಲ್ವೆ ಅಭಿವೃದ್ಧಿಗಾಗಿ ಕರ್ನಾಟಕದಲ್ಲಿಯೇ ರೈಲ್ವೆಯ ಅಭಿವೃದ್ಧಿಗಾಗಿ ನಿತ್ಯವೂ SWR/SCR ಕಚೇರಿ, ಕೇಂದ್ರದ ರೇಲ್ವೆ ವಿಭಾಗದ ನಡುವೆ ಕೋಆರ್ಡಿನೇಷನ್ ಮಾಡಬೇಕು. ಹಣದ ಅಡಚಣೆಗಳನ್ನು ನಿವಾರಿಸಬೇಕು. ಭೂಸ್ವಾಧೀನದ ಪ್ರಕ್ರಿಯೆಯನ್ನು ತೀವ್ರಗೊಳಿಸಬೇಕು. ಮುಂದೆ ಕರ್ನಾಟಕಕ್ಕೆ ಬೇಕಾಗುವ ಎಲ್ಲ ಹೊಸ ಲೈನುಗಳ ಸರ್ವೆ ಮಾಡಿಸಿ ಅಲ್ಲಿ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಅದರ ಮೇಲೆ ಒಂದು ಕಚ್ಚಾ ರೋಡ್ ತಯಾರಿಸಿ ಜನರ ಉಪಯೋಗಕ್ಕೆ ತಾತ್ಪೂರ್ತಿಕವಾಗಿ ಕೊಡಬೇಕು. ಅದರಿಂದ ಆ ನಿಯೋಜಕ ರೈಲ್ವೆ ಮಾರ್ಗ ಗಟ್ಟಿ ಆಗುತ್ತದೆ. ನಂತರ ಅದೇ ರೋಡ್ ಮೇಲೆ ಸೇತುವೆ ನಿರ್ಮಾಣ ಮಾಡಿ ರೈಲ್ವೆ ನಿರ್ಮಾಣ ವಿಭಾಗವು  ಹಳಿ ಹಾಕಬಹುದು. ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿ ಕಚ್ಚಾ ರೋಡ್ ತಯಾರಿಸಿಕೊಟ್ಟರೆ ತ್ವರಿತವಾಗಿ  ಅಭಿವೃದ್ಧಿಯಾಗುವುದು.
ಈ ನಿಯೋಜಿತ ರೈಲ್ವೆ ಲೈನ್ ಪಕ್ಕದಲ್ಲಿ ವಾಹನಗಳ ಓಡಾಟಕ್ಕೆ ಒಂದು ರಸ್ತೆಯನ್ನೂ ಮಾಡಬಹುದು. ಬೀದರ್-ಔರಾದ್-ನಾಂದೇಡ ರೈಲ್ವೆ ಲೈನ್ ನಿರ್ಮಾಣಕ್ಕಾಗಿ ಒತ್ತಡ ತರಬೇಕು. ಹಿಂದುಳಿದ ಬೀದರ್ ಜಿಲ್ಲೆ ಅಭಿವೃದ್ಧಿಯಾಗುತ್ತದೆ.
ಇದೀಗ ಬಂದ ಸಿಹಿ ಸುದ್ದಿಯ ಪ್ರಕಾರ ಖರ್ಗೆಯವರು ರೈಲ್ವೆ ಮಂತ್ರಿ ಆದರು. ಆದ್ದರಿಂದ ಅವರದೇ ಪ್ರಯತ್ನದಿಂದ ಆದ ಹೈ.ಕ. ಅಭಿವೃದ್ಧಿಯನ್ನು ಮುಂದವರಿಸಲು ಈ ಕೆಳಗಿನ ಕಾರ್ಯಗಳನ್ನು ಮಾಡಬೇಕಾಗಿ ವಿನಂತಿ.
1. ಗುಲ್ಬರ್ಗಾ ರೈಲ್ವೆ ಡಿವಿಜನ್ ಮಾಡಿ ಅದನ್ನು 'ಸೌತ್ ವೆಸ್ಟರ್ನ್ ರೈಲ್ವೆ'  SWRಗೆ ಜೋಡಿಸಬೇಕು.
2. ಕರ್ನಾಟಕದ ಎಲ್ಲಾ ರೈಲ್ವೆ ನಿರ್ಮಾಣ ಕಾರ್ಯಗಳನ್ನೂ  SWR ಗೆ ವಹಿಸಿಕೊಡಬೇಕು.
3. ಕೊಪ್ಪಳ- ಮೆಹಬೂಬನಗರ, ಗದಗ-ವಾಡಿ, ಗದಗ-ಹರಿಹರ, ಗದಗ-ಹಾವೇರಿ, ಚಾಮರಾಜನಗರ -ಸತ್ಯಮಂಗಲ, ಹುಬ್ಬಳ್ಳಿ-ಕಾರವಾರ ಈ ಎಲ್ಲ ಕಾಮಗಾರಿಗಳನ್ನು ಬೇಗನೆ (9 ತಿಂಗಳು ಬಾಕಿ ಇದೆ) ಅನುಷ್ಠಾನಕ್ಕೆ ತರಬೇಕು.
4. ಮಂಗಳೂರು ರೇಲ್ವೆ ಡಿವಿಜನ್‌ನನ್ನು SWRಗೆ ಜೋಡಿಸಬೇಕು.
ಈ ಎಲ್ಲ ಕಾರ್ಯಗಳನ್ನು ಮಾಡಲು ಅವರಿಗೆ ಈಗ ಸುಸಂಧಿ ದೊರಕಿದೆ. ಕಾಲವನ್ನು ಅಪವ್ಯಯ ಮಾಡದೇ ಶೀಘ್ರದಲ್ಲಿ ಅನುಷ್ಠಾನಕ್ಕೆ ತರಲು ವಿನಂತಿ.

- ವಿ.ಎ. ಕುಲಕರ್ಣಿ
ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement