ಜೈಲುವಾಸದಿಂದ ಜಗನ್ ಬಲಿಷ್ಠರಾಗಿದ್ದಾರೆ!
ವೈ.ಎಸ್. ಜಗನ್ ಮೋಹನ್ ರೆಡ್ಡಿ ಚಂಚಲಗುಡ ಜೈಲು ಸೇರಿ ಅದಾಗಲೇ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯವಾಯಿತು. ರಾಜಶೇಖರ ರೆಡ್ಡಿ ಸರ್ಕಾರ ತೆಗೆದುಕೊಂಡ ಕೆಲವು ನಿರ್ಧಾರಗಳಿಂದಾಗಿ ಜಗನ್ರ ಉದ್ಯಮಕ್ಕೆ ಲಾಭವಾಗಿದೆ ಎನ್ನುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಈಗ ಅವರ ವ್ಯವಹಾರಗಳನ್ನೆಲ್ಲ ಅವರ ಪತ್ನಿ 'ಭಾರತಿ' ನೋಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ನೊಂದಿಗೆ ಜಗನ್ ದೂರವಾಗಿದ್ದೇಕೆ, ಏಕೆ ಜಗನ್ರನ್ನು ಇಂದಿಗೂ ಜೈಲಿನಲ್ಲಿಡಲಾಗಿದೆ ಎನ್ನುವ ಕುರಿತು 'ಇಂಡಿಯಾ ಟುಡೆ'ಯೊಂದಿಗೆ ಮಾತಿಗಿಳಿದ ಭಾರತಿ ಹೇಳಿದ್ದು ಹೀಗೆ...
- ಜಗನ್ ಮೋಹನ್ ಜೈಲು ಸೇರಿ ಆಗಲೇ ಒಂದು ವರ್ಷವಾಯಿತು. ಸಿಬಿಐ ಇನ್ನೂ ಚಾರ್ಜ್ಶೀಟ್ ಸಲ್ಲಿಸುವ ಪ್ರಕ್ರಿಯೆಯಲ್ಲಿಯೇ ಇದೆ. ಅದು ಬೇಕೂಂತಲೇ ಈ ರೀತಿ ತಡಮಾಡುತ್ತಿದೆ ಎಂದು ನಿಮ್ಮ ಪಕ್ಷ ದೂರುತ್ತಿದೆ. 'ಹಗರಣದ ವ್ಯಾಪ್ತಿ ಬಹಳ ದೊಡ್ಡದಿರುವುದರಿಂದ ತಡವಾಗುತ್ತಿದೆ' ಎಂದು ಇನ್ನೊಂದೆಡೆ ಸಿಬಿಐ ಹೇಳುತ್ತಿದೆ.
ಜಗತಿ ಪಬ್ಲಿಕೇಷನ್ನ ಒಟ್ಟಾರೆ ಹೂಡಿಕೆ 1100 ಕೋಟಿ ರುಪಾಯಿಗಳು. ಇನ್ನಿತರ ಮೂರು ಹೂಡಿಕೆದಾರರನ್ನೊಳಗೊಂಡಂತೆ ಭಾರತಿ ಸಿಮೆಂಟ್ನಲ್ಲಿನ ಒಟ್ಟಾರೆ ಹೂಡಿಕೆ 400 ಕೋಟಿ ರುಪಾಯಿ. ಈ ಎರಡೇ ಕಂಪನಿಗಳು ವಿವಾದಕ್ಕೆ ಗುರಿಯಾಗಿರುವುದು. ಉಳಿದ ಕಂಪನಿಗಳನ್ನು ಜಗನ್ ತಮ್ಮ ತಂದೆ ಮುಖ್ಯಮಂತ್ರಿಯಾಗುವುದಕ್ಕಿಂತ ಮುಂಚೆಯೇ ಆರಂಭಿಸಿದ್ದರು. ಸಿಬಿಐ ಹೇಳುತ್ತಿರುವ 1 ಲಕ್ಷ ಕೋಟಿ ರುಪಾಯಿ ಇರುವುದಾದರೂ ಎಲ್ಲಿ? ಅವರು ನಮ್ಮ ಮನೆಯನ್ನೆಲ್ಲ ಹುಡುಕಿದರು, ನಾವು ಮೊದಲು ಘೋಷಿಸಿದ್ದಕ್ಕಿಂತ ಒಂದಾಣೆಯೂ ಹೆಚ್ಚು ಹಣ ಅಥವಾ ಒಡವೆ ಅವರಿಗೆ ಸಿಗಲಿಲ್ಲ.
- ವೈ.ಎಸ್. ಆರ್ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ಪ್ರತಿಯಾಗಿ ಜಗನ್ ಲಾಭ ಮಾಡಿಕೊಂಡರು ಎಂದು ಸಿಬಿಐ ಹೇಳುತ್ತಿದೆ. ನೀವು ನೋಡಿದರೆ ರಾಜಕೀಯ ದ್ವೇಷ ಎನ್ನುತ್ತಿದ್ದೀರಿ...
ಕಾಂಗ್ರೆಸ್ನ ಸಂಸ್ಕೃತಿಯೇ ಹೀಗೆ. ಹಿರಿಯ ನಾಯಕತ್ವ ಯಾವಾಗಲೂ ಕಿರಿಯರ ಮೇಲೆ ಸವಾರಿ ಮಾಡುವುದನ್ನೇ ಬಯಸುತ್ತದೆ. ನಿಮಗೊಂದು ವಿಷಯ ಗೊತ್ತಾ? ಜಗನ್ ಯಾವಾಗಲೂ ರಾಹುಲ್ ಗಾಂಧಿಯವರನ್ನು 'ಸರ್' ಎಂದೇ ಕರೆಯುತ್ತಿದ್ದರು. ಹಾಗೆ ನೋಡಿದರೆ ಇಬ್ಬರೂ ಸಮಕಾಲೀನರೇ. ವೈಎಸ್ಆರ್ ಸಾವಿನಿಂದ ಆಘಾತಗೊಂಡು ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ನೀಡುವ ಸಲುವಾಗಿ 'ಒಡರ್ಪು ಯಾತ್ರೆ' ಕೈಗೊಳ್ಳುತ್ತೇನೆ ಎಂದು ಜಗನ್ ಒತ್ತಾಯಿಸಿದರಷ್ಟೆ. ತಮ್ಮ ತಂದೆಗೆ ಸಾವಿಗೀಡಾದ ಸ್ಥಳದಲ್ಲಿ ಅವರು ಆ ಪ್ರಮಾಣ ಮಾಡಿದ್ದರು. ಯಾತ್ರೆಯ ಮೊದಲ ಹಂತಕ್ಕೆ ಹೈಕಮಾಂಡ್ ಸಮ್ಮತಿ ಸೂಚಿಸಿತ್ತಾದರೂ ಮಧ್ಯದಲ್ಲೇ ತೊಡಕುಗಳು ಶುರುವಾದವು. ಮೊದಲ ಹಂತದ ನಂತರ ಜಗನ್ ದೆಹಲಿಗೆ ಹೋಗಿ, ಯಾತ್ರೆಯುದ್ದಕ್ಕೂ ತಾವು ಕಾಂಗ್ರೆಸ್ನ ಧ್ವಜಗಳನ್ನೇ ಬಳಸಿರುವ ಫೋಟೋಗಳನ್ನು ವೀಡಿಯೋಗಳನ್ನು ಹೈಕಮಾಂಡ್ಗೆ ತೋರಿಸಿದರು. ಎರಡನೇ ಹಂತದ ಯಾತ್ರೆ ಶುರುವಾಗುವ ವೇಳೆಗೆ ಎಲ್ಲರೂ ವಿರೋಧಿ ವ್ಯಕ್ತಪಡಿಸತೊಡಗಿದರು. ಕೆಲವರಂತೂ ಆ ಯಾತ್ರೆ ಕೈಗೊಳ್ಳುವುದು ಸರಿಯಲ್ಲ ಎಂದು ಮನೆಗೇ ಬಂದು ಹೇಳಿ ಹೋದರು. ಜಗನ್ ಎಲ್ಲರ ಮಾತನ್ನು ಮೌನವಾಗಿ ಆಲಿಸಿದರು. 'ನಿಮ್ಮ ನಿರ್ಧಾರ ಬದಲಿಸಿದ್ದೀರಾ' ಎಂದು ನಾನು ಒಂದು ರಾತ್ರಿ ಅವರನ್ನು ಕೇಳಿದೆ. ಅದಕ್ಕವರು, 'ನಾನು ನನ್ನ ತಂದೆಗೆ ಏನು ಉತ್ತರ ಕೊಡಲಿ? ಹೆಚ್ಚೆಂದರೆ ಏನಾಗಬಹುದು? ನಾನು ರಾಜಕೀಯ ಉಪೇಕ್ಷೆಗೆ ಒಳಗಾಗಬಹುದಷ್ಟೆ ಅಲ್ಲವೇ?' ಎಂದಿದ್ದರು.
- ಸಿಬಿಐ, ತನ್ನ ರಾಜಕೀಯ ಧಣಿಗಳ ನಿರ್ದೇಶನದಂತೆ ನಡೆಯುತ್ತಿದೆ ಎಂದು ಭಾವಿಸುತ್ತೀರಾ?
ಜಗನ್ರ ಕೇಸನ್ನು ಕಾಂಗ್ರೆಸ್ ಪ್ರತಿದಿನವೂ ಪರಿಶೀಲಿಸುತ್ತದೆ ಎಂದು ನಾನು ಹೇಳಲಾರೆ. ಆದರೆ ಏನೇನು ನಡೆಯುತ್ತಿದೆ ಎನ್ನುವುದರ ಬಗ್ಗೆ ಅವರಿಗೆ ಸ್ಪಷ್ಟವಾಗಿ ತಿಳಿದಿದೆ ಎನ್ನುವುದು ಮಾತ್ರ ಖಚಿತ.
- ಜಗನ್ ವಿಚಾರದಲ್ಲಿ ಸಿಬಿಐ ನಡೆದುಕೊಳ್ಳುತ್ತಿರುವ ರೀತಿಯನ್ನು ಖಂಡಿಸಿ ನಿಮ್ಮ ಕುಟುಂಬ ಪ್ರಧಾನಿ ಮತ್ತು ರಾಷ್ಟ್ರಪತಿಗಳನ್ನು ಭೇಟಿಮಾಡಿತಲ್ಲ?
ಕಳೆದ ವರ್ಷ ನನ್ನ ಅತ್ತೆ, ಈ ವಿಷಯವಾಗಿ ಪ್ರಧಾನಿಯನ್ನು ಭೇಟಿಯಾದರು. ಆಗ ಅವರು ತುಂಬಾ ಎಮೋಷ್ನಲ್ ಆಗಿಬಿಟ್ಟರು. ನಿಜ ಹೇಳಬೇಕೆಂದರೆ ಮನಮೋಹನ್ ಸಿಂಗ್ ಅವರ ಕಣ್ಣಲ್ಲೂ ನೀರು ಜಿನುಗಿತ್ತು. 'ಇವತ್ತು ನಾವು ಇಲ್ಲಿರುವುದಕ್ಕೆ ಕಾರಣ ವೈಎಸ್ಆರ್. ಅಂಥವರ ಕುಟುಂಬಕ್ಕೆ ಈ ರೀತಿ ಆಗಬಾರದಿತ್ತು' ಎಂದು ಸಿಂಗ್ ಕಣ್ಣೀರಿಟ್ಟಿದ್ದರು.
- ಆದರೂ ನೀವು ಕೇಂದ್ರ ನಾಯಕತ್ವದ ಮೇಲೆ ಆರೋಪ ಮಾಡುತ್ತಿದ್ದೀರಲ್ಲ, ಏನಿದರರ್ಥ?
ನಮ್ಮನ್ನು ಬೇಟೆಯಾಡಲು ಕಾಂಗ್ರೆಸ್ ಸರ್ಕಾರ ಈ ರೀತಿ ತಮ್ಮ ಸಂಸ್ಥೆಗಳನ್ನು ಬಳಸಿಕೊಳ್ಳುವುದು ತಪ್ಪಲ್ಲವೇ? ನಮ್ಮ ಬಿಸ್ನೆಸ್ನಲ್ಲಿ ಮೋಸವೆಲ್ಲಿದೆ? 6 ಮಂತ್ರಿಗಳು ಕೊಟ್ಟ ಸರ್ಕಾರಿ ಆದೇಶದಲ್ಲಿ ಯಾವುದೇ ತಪ್ಪಿಲ್ಲ ಎಂದು ಒಂದೆಡೆ ಅವರು ಹೇಳುತ್ತಾರೆ, ಇನ್ನೊಂದೆಡೆ ನಮ್ಮ ಮೇಲೆ ವೃಥಾ ಆರೋಪ ಮಾಡುತ್ತಾರೆ. ಇದು ಅಧಿಕಾರದ ದುರುಪಯೋಗವಲ್ಲವೇ?
- ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿಯವರು ತಮ್ಮ ಮಂತ್ರಿಗಳನ್ನು ಸಮರ್ಥಿಸಿಕೊಂಡಿದ್ದಾರೆ. ಸರ್ಕಾರಿ ಆದೇಶವನ್ನು ನೀಡುವಾಗ ಮಂತ್ರಿಗಳು ಯಾವ ತಪ್ಪನ್ನೂ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಒಬ್ಬ ಸಚಿವ ಕಾಂಗ್ರೆಸ್ನವನೋ ಅಥವಾ ಹೊರಗಿನವನೋ ಎನ್ನುವುದರ ಮೇಲೆ ಹೇಳಿಕೆಗಳು ಬದಲಾಗುತ್ತಾ ಹೋಗುತ್ತವೆ ಎಂದು ನಿಮಗನಿಸುತ್ತಿಲ್ಲವೇ?
ಸಿಎಂ ಅವರು ತಮ್ಮ ಸಚಿವರು ನಿಯಮವನ್ನು ಮೀರಿಲ್ಲ ಎಂದು ಹೇಳುತ್ತಿದ್ದಾರೆ. ಇದರರ್ಥ, ಅವರಿಂದ ಯಾರಿಗೂ ಲಾಭವಾಗಿಲ್ಲ ಎಂದೇ ಅಲ್ಲವೇ? ಹಾಗಿದ್ದರೆ ಸರ್ಕಾರಿ ಆದೇಶದಿಂದ ಜಗನ್ಗೆ ಹೇಗೆ ಲಾಭವಾಗುತ್ತದೆ? ತಮ್ಮ ಸಚಿವರು ತಪ್ಪು ಮಾಡಿಲ್ಲವೆಂದರೆ, ಜಗನ್ ಹೇಗೆ ತಪ್ಪುಮಾಡಿದಂತಾಯಿತು? ಅವರನ್ನೇಕೆ ಒಂದು ವರ್ಷದಿಂದ ಜೈಲಿನಲ್ಲಿಡಲಾಗಿದೆ?
-ವೈ.ಎಸ್. ರಾಜಶೇಖರ ರೆಡ್ಡಿ ಅವರ ಸಾವಿನ ನಂತರ ಜಗನ್ರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಕೂಗು ಹೆಚ್ಚಾಗಿತ್ತು. ಇದರಿಂದ ಕೇಂದ್ರ ನಾಯಕತ್ವ ಕುಪಿತಗೊಂಡಿರಬಹುದಾ?
ತಾವು ಮುಖ್ಯಮಂತ್ರಿಯಾಗಬೇಕೆಂದು ಜಗನ್ ಹೇಳಿರಲಿಲ್ಲ. ವೈಎಸ್ಆರ್ ಸಾವಿನ ನಂತರ ಇಡೀ ಆಂಧ್ರಪ್ರದೇಶ ದುಃಖದ ಮಡುವಿನಲ್ಲಿ ಮುಳುಗಿತ್ತು. ಅಂಥದ್ದರಲ್ಲಿ ಅವರ ಕುಟುಂಬದ ಪಾಡು ಹೇಗಿದ್ದಿರಬಹುದೋ ಯೋಚಿಸಿ? ಅವರ ಅನುಪಸ್ಥಿತಿಯಿಂದ ನಾವೆಲ್ಲ ಕಂಗಾಲಾಗಿ ಹೋಗಿದ್ದೆವು. ಶಾಸಕರ ಸಹಿ ಸಂಗ್ರಹಿಸುತ್ತಾ ಕುಳಿತುಕೊಳ್ಳಲು ಆಗ ಸಮಯವಾದರೂ ಎಲ್ಲಿತ್ತು(ಜಗನ್ರನ್ನು ಸಿಎಂ ಮಾಡಲು)?
- ಹಾಗಿದ್ದರೆ 'ಒಡರ್ಪು ಯಾತ್ರೆ'ಯಿಂದಲೇ ಹೀಗೆಲ್ಲ ಆಯಿತೇ?
ವೈ.ಎಸ್. ರಾಜಶೇಖರರೆಡ್ಡಿಯವರು 2003ರಲ್ಲಿ ಪಾದಯಾತ್ರೆ ಕೈಗೊಂಡಾಗಲೂ, 'ಅವರು ತಮ್ಮ ಹೆಸರನ್ನು ಬಲಿಷ್ಠಪಡಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ' ಎನ್ನುವ ಗುಸುಗುಸು ಶುರುವಾಗಿತ್ತು. ಜಗನ್ ಒಡರ್ಪು ಯಾತ್ರೆ ಕೈಗೊಳ್ಳುತ್ತಿರುವುದು ಇಂತಹ ಕಾರಣಕ್ಕಾಗಿಯೇ ಎಂದು ದೆಹಲಿ ನಾಯಕರಿಗೆ ಕಿವಿಚುಚ್ಚಲಾಯಿತು.
- ಪ್ರಬಲ ನಾಯಕನ ಅನುಪಸ್ಥಿತಿಯಿಂದಾಗಿ ಪಕ್ಷ ಸಂಕಷ್ಟ ಎದುರಿಸುತ್ತಿರಬಹುದು. ಜಗನ್ರ ಬಂಧನದಿಂದಾಗಿ ಪಕ್ಷಕ್ಕಾದ ಹಾನಿಯೆಷ್ಟು?
ಅವರು ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿಯನ್ನು ವಹಿಸಿ ಹೋಗಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಅವರು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ನಾವು ಆಗಾಗ ಹೋಗಿ ಅವರ ಜೊತೆಗೆ ಈ ಕುರಿತು ಚರ್ಚಿಸುತ್ತೇವೆ.
- ಇದೇ ಕಾರಣಕ್ಕೇ ತೆಲುಗು ದೇಶಂ ಪಕ್ಷ, ಜಗನ್ ಚಂಚಲಗುಡ ಜೈಲನ್ನು ತಮ್ಮ ಪಕ್ಷದ ಘಟಕವನ್ನಾಗಿಸಿಕೊಂಡಿದ್ದಾರೆ ಎಂದು ದೂರುತ್ತಿದೆ...
ಅಲ್ಲೆಲ್ಲ ವಿಡಿಯೋ ಕ್ಯಾಮೆರಾಗಳನ್ನು ಅಳವಡಿಸಿದ್ದಾರಲ್ಲ? ಒಂದು ವೇಳೆ ನಾವು ಕಾನೂನನ್ನು ವಂಚಿಸುತ್ತಿದ್ದೇವೆ ಎಂಬ ಅನುಮಾನಗಳಿದ್ದರೆ ಎಲ್ಲಾ ಫೂಟೇಜ್ಗಳನ್ನೂ ಪರೀಕ್ಷಿಸಿ ನೋಡಲಿ.
- ಜಗನ್ ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಕಥೆ ಮುಗಿದಂತೆಯೇ ಎಂದು ಹಲವರು ಹೇಳುತ್ತಿದ್ದಾರಲ್ಲ?
ನನ್ನ ಪತಿಯನ್ನು ಜೈಲಿನಲ್ಲಿಟ್ಟಿರುವುದು ತಪ್ಪು ಎಂದು ಜನಕ್ಕೆ ಗೊತ್ತಿದೆ. ಅವರು ಜೈಲಿನಲ್ಲಿದ್ದಷ್ಟೂ ಜನಕ್ಕೆ ಅವರ ಬಗ್ಗೆ ಹೆಚ್ಚಿನ ಒಲವು ಬೆಳೆಯುತ್ತದೆ. ಅದರ ಫಲಿತಾಂಶವನ್ನು ಈ ಬಾರಿಯ ಚುನಾವಣೆಯಲ್ಲಿ ನೀವೇ ನೋಡಲಿದ್ದೀರಿ.
- ಜೈಲಿನಲ್ಲಿ ಜಗನ್ರ ಜೀವನ ಹೇಗಿದೆ? ಕಳೆದೊಂದು ವರ್ಷದಲ್ಲಿ ಅವರಲ್ಲೇನಾದರೂ ಬದಲಾವಣೆಯಾಗಿದೆಯೇ?
ಅವರು ಮಾನಸಿಕವಾಗಿ ಇನ್ನಷ್ಟು ಬಲಿಷ್ಠರಾಗಿದ್ದಾರೆ. ಯಾವಾಗಲೂ ಸಕಾರಾತ್ಮಕವಾಗಿಯೇ ಯೋಚಿಸುತ್ತಾರೆ. ಕೆಲವು ದಿನಗಳ ಹಿಂದೆ ಅವರನ್ನು ಭೇಟಿಯಾದಾಗ ತಮಗೆ ತಲೆ ನೋವು ಹೆಚ್ಚಾಗುತ್ತಿದೆ ಎಂದು ಹೇಳಿದ್ದರು. ನನ್ನ ತಂದೆಯೇ ವೈದ್ಯರಾಗಿರುವುದರಿಂದ ಅವರಿಗೆ ಈ ಬಗ್ಗೆ ಹೇಳಿದೆ. 'ಒತ್ತಡ'ದಿಂದ ಹೀಗಾಗುತ್ತಿರಬಹುದು ಎಂದು ಅಪ್ಪ ಹೇಳಿದರು. ನಮ್ಮಪ್ಪ ಹೇಳಿದ ಮಾತನ್ನೇ ಕಳೆದ ಬಾರಿ ಭೇಟಿಯಾದಾಗ ಜಗನ್ಗೆ ಹೇಳಿದೆ. ಅದಕ್ಕವರು ನಕ್ಕು, 'ಒತ್ತಡ ನನಗಲ್ಲ, ನಿಮ್ಮಪ್ಪನಿಗಾಗಿರಬಹುದು' ಎಂದು ತಮಾಷೆ ಮಾಡಿದ್ದರು. ಜೈಲಿನ ಪರಿಸರ ಅವರ ಮೇಲೆ ಕಿಂಚಿತ್ ಪರಿಣಾಮವನ್ನೂ ಬೀರಿಲ್ಲ.
- ಕಾಂಗ್ರೆಸ್ನೊಂದಿಗೆ ನಿಮ್ಮ ಸಂಬಂಧ ಹದಗೆಟ್ಟಿದೆ, ಈ ಹಿನ್ನೆಲೆಯಲ್ಲಿ ನೋಡಿದಾಗ, ಮುಂದಿನ ಚುನಾವಣೆಯ ನಂತರ ನೀವು ಕಾಂಗ್ರೆಸ್ಗೆ ಬೆಂಬಲ ಕೊಡುವ ಸಾಧ್ಯತೆ ಇಲ್ಲವೆಂದೇ ಹೇಳಬಹುದೇನೋ?
ಇದೆಲ್ಲ ಜಗನ್ರಿಗೆ ಬಿಟ್ಟ ವಿಷಯ. ಆಂಧ್ರಪ್ರದೇಶಕ್ಕೆ ಒಳಿತಾಗುವ ನಿರ್ಧಾರವನ್ನು ಅವರು ಕೈಗೊಳ್ಳುತ್ತಾರೆ.
- ಟಿ.ಎಸ್. ಸುಧೀರ್