ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

'ಮಜಾ' ತೆಗೆದುಕೊಳ್ಳುವ ಲೇಖನಗಳು ನಮಗೇಕೆ?

Mainashree
Updated On : 22 Jun 2013, 11:57 am

ಕನ್ನಡಪ್ರಭವು ಹೊಸ ಹೊಸ ರೂಪಗಳೊಂದಿಗೆ ಓದುಗ ಪರವಾಗಿರುವುದು ವಾಸ್ತವ. ಅದರಲ್ಲಿ ನನ್ನ ಅಚ್ಚು-ಮೆಚ್ಚಿನದ್ದು 'ಹೇಳಿ ಬುದ್ಧಿ ಏನ್ ಸುದ್ದಿ' ಎಂಬ ಪ್ರಯೋಗ. ಇದು ನಮ್ಮ ಸರ್ಕಾರದ ಮತ್ತು ಮಂತ್ರಿಗಳು ತಮ್ಮ ಅಧಿಕಾರ ಅವಧಿಯಲ್ಲಿ ನೀಡಿದ ಆಶ್ವಾಸನೆ, ಭರವಸೆ, ಯೋಜನೆ, ವಿವಿಧ ಕಾರ್ಯಕ್ರಮಗಳ ಕುರಿತು ಅದರ ಸದ್ಯದ ಸ್ಥಿತಿ-ಗತಿ, ಕುಂದು-ಕೊರತೆ, ಯೋಜನೆಗೆ ವೆಚ್ಚವಾದ ಹಣ, ಅದು ಜನಸಮುದಾಯಕ್ಕೆ ತಲುಪಿದ ವ್ಯವಸ್ಥೆ, ಅದರ ಸಾಧಕ-ಬಾಧಕಗಳ ಕುರಿತು ಓದುಗರು ಪತ್ರಗಳ ಮೂಲಕ ಪತ್ರಿಕೆಯ ಗಮನಕ್ಕೆ ತಂದು ಆಯಾ ವರದಿಗಾರರ ಮೂಲಕ ಅದರ ಸ್ಥಿತಿ-ಗತಿ ತಿಳಿಯುವುದು ಇದು ಕನ್ನಡ ಪತ್ರಿಕಾರಂಗದಲ್ಲಿ ಓದುಗ ಪರವಾದ ಒಂದು ವಿಶಿಷ್ಟ ಪ್ರಯೋಗವೆಂದರೆ ತಪ್ಪಾಗಲಾರದು. ಇತ್ತೀಚಿನ ಚುನಾವಣೆ ಸುದ್ದಿಗಳ ಭರಾಟೆಯಲ್ಲಿ ಆ ಅಂಕಣ ಮರೆಯಾಗಿತ್ತು. ಈಗ ಮತ್ತೆ ಪ್ರಾರಂಭವಾಗುತ್ತಿರುವುದು ನನಗಂತೂ ತುಂಬ ಸಂತೋಷ ತಂದಿದೆ. ಏನೇ ಆದರೂ ನಮ್ಮ ಕ.ಪ್ರ.ದಲ್ಲಿ ಪ್ರಕಟವಾಗುತ್ತಿರುವ ಇಂತಹ ಓದುಗ-ಜನಪರವಾದ ಪ್ರಯೋಗಗಳು ಎಂದಿಗೂ ನಿಲ್ಲಬಾರದೆಂದು ಎಲ್ಲಾ ಓದುಗರ ಪರವಾಗಿ ನನ್ನ ವಿನಮ್ರ ವಿನಂತಿ.
-ಗಿರೀಶ್ ಕೆ.ಜಿ., ಕೊತ್ತಲಚಿಂತಾ, ಸಿರುಗುಪ್ಪ ತಾ., ಬಳ್ಳಾರಿ ಜಿಲ್ಲೆ. ಮೊ. 944 8142294.

ಜೂನ್ 15ರ 'ಬೈಟು ಕಾಫಿ'ಯಲ್ಲಿ ಶಿವಕುಮಾರ್ ಕೆ. ಎಂಬುವವರ ಲೇಖನ 'ಬಸ್ ಡೋರ್‌ನಲ್ಲಿ ನಿಂದ್ರೋ ಮಜಾನೇ ಬೇರೆ...' ಓದಿ ಗಾಬರಿಗೊಂಡೆ! ಸಿಟಿ ಬಸ್‌ಗಳ ಬಾಗಿಲುಗಳ ಬಳಿ ನಿಂತು 'ಮಜಾ' ತೆಗೆದುಕೊಳ್ಳುವ ಯುವಕರಿಂದಾಗಿ, ಇತರ ಪ್ರಯಾಣಿಕರು ಬಸ್ ಹತ್ತುವಾಗ ಅಥವಾ ಇಳಿಯುವಾಗ ಅಪಘಾತಗಳಿಗೀಡಾಗುತ್ತಿರುವುದು ಮತ್ತು ಕಿಸೆಗಳ್ಳರಿಗೆ ಅನುಕೂಲವಾಗಿರುವುದು ಜನಜನಿತ ಸಂಗತಿ. ಹೀಗಿರುವಾಗ, 'ಡೋರ್‌ನಲ್ಲಿ ಜೋತು ಬಿದ್ದು ಹೋಗುವ ಮಜಾನೇ ಬೇರೆ;... ಒಳ್ಳೆ ಮಜಾ ಸಿಗತ್ತೆ... ಬಸ್ ಡೋರ್‌ನಲ್ಲಿ ಸಿಗೋ ಮಜಾ...ಎಂಜಾಯ್ ಮಾಡಬೇಕು ಕಣ್ರೀ' ಎಂದೆಲ್ಲ ಬರೆಯುತ್ತ, ಹುಡುಗರು ಡೋರ್ ಬಳಿ ಇದ್ದುಕೊಂಡು ಹುಡುಗಿಯರತ್ತ ಕಾಮದ ದೃಷ್ಟಿ ಬೀರುವುದನ್ನು ವಿಧವಿಧವಾಗಿ ಬಣ್ಣಿಸುತ್ತ ಸಮರ್ಥಿಸುವ ಈ ಅಪಾಯಕರ ಲೇಖನವನ್ನು ಪ್ರಕಟಿಸಿರುವ ನಿಮಗೆ ಕನಿಷ್ಠ ಸಾಮಾಜಿಕ ಹೊಣೆಗಾರಿಕೆಯಾದರೂ ಬೇಡವೆ? ಈ ಲೇಖನ ಓದಿ 'ಪಡ್ಡೆ ಮಂಗಗಳು' -ಇನ್ನಷ್ಟು -ಕಳ್ಳು ಕುಡಿದಂತಾಡಿದರೆ ಆಗ ಆಗುವ ಅಪಘಾತಗಳಿಗೆ, ಕಿಸೆಗಳ್ಳತನಗಳಿಗೆ ಯಾರು ಹೊಣೆ? 'ಮಜಾ' ತೆಗೆದುಕೊಳ್ಳುವ ಪಡ್ಡೆಯೋ ಅಥವಾ ಆತನೊಡನಿರುವ ಸಹಪಾಠಿಯೋ ಕೂಡ ಹೀಗೆ ಅಪಘಾತಕ್ಕೋ ಕಳ್ಳತನಕ್ಕೋ ಈಡಾಗುವುದು ಸಂಭಾವ್ಯ ತಾನೆ?
-ಎಚ್. ಆನಂದರಾಮಶಾಸ್ತ್ರಿ, ಬೆಂಗಳೂರು.

ಪ್ರತೀ ಭಾನುವಾರ ಬರುವ ಪ್ರಣತಿಯ ಬರಹ ಓದಿದಾಗ ಇದು ನಾವು ಓದುತ್ತಿರುವ 'ಕಲ್ಪನೆ ಕಥೆ' ಆಗಿರಲಿ ಅಂತ ಅಂದುಕೊಳ್ತೇನೆ. ಕಾಲ್ಪನಿಕ ಕಥೆಗಳನ್ನು ಹೆಣೆಯುವುದರಲ್ಲಿ ನಮ್ಮ ಪ್ರಣಿತಿ ಸಿದ್ಧಹಸ್ತಳು ಅಂತ ಹೇಳಿದರೆ ಅದು ನಮ್ಮ ತಪ್ಪು ಗ್ರಹಿಕೆ ಅಲ್ಲವೆಂದುಕೊಂಡಿದ್ದೇನೆ...ಏನೇ ಆಗಲಿ, ಆಕೆ-(ಪ್ರಣತಿ) ಬರೆಯುವ ಲೇಖನ ಸ್ವಾರಸ್ಯಕರ ಅಷ್ಟೇ ಅಲ್ಲ, ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.
-ಬೆಳ್ಳಾವೆ ರಮೇಶ್

ಬೆಂಗಳೂರಿನ ನಿಮ್ಮವನಲ್ಲದ ಕೆ.ಎಂ. ತ್ಯಾಗರಾಜರೆ, ಯಾಕಾಗಿ ಪ್ರತಾಪ್ ಮತ್ತು ಮೋದಿಯವರನ್ನೂ ಮುಂದಿಟ್ಟುಕೊಂಡು ಬ್ರಾಹ್ಮಣಿಕೆಯನ್ನೂ ಜರಿಯುತ್ತೀರಿ? (ತಾ. 16. ಗೋಡೆ ಬರಹ) ಬ್ರಾಹ್ಮಣೇತರರನೇಕರು, ಹರಿಜನ, ದಲಿತರುಗಳ ಮೇಲೆ ನಿರಂತರ ಅತ್ಯಾಚಾರ, ಹಿಂಸೆ, ವಂಚನೆ, ಕ್ರೌರ್ಯ ಮುಂತಾದ 'ಕಂಡರಿಯುವ' ದ್ರೋಹವೆಸಗುವುದು ತಮಗೆ ಹಿತವೆ? ಯಾವುದೇ ಕಾಲ ದೇಶವಾಗಲಿ, ತನ್ನ ಪ್ರಸ್ತುತದ ಸಮಸ್ಯೆ, ಜಟಿಲತೆಗಳಿಗೆ ಮುಂದಿನ ನಾಲ್ಕಾರು ತಲೆಮಾರುಗಳಲ್ಲೇ ಉತ್ತರ ಕಂಡುಕೊಳ್ಳುತ್ತವೆ. ಸಾವಿರ ವರ್ಷದ ಅಸಭ್ಯತೆಯೊಂದನ್ನು ಹಿಡಿದುಕೊಂಡು ತಮ್ಮಂತಹವರು ಅವಕಾಶ ಸಿಕ್ಕಾಗಲೆಲ್ಲ ಬ್ರಾಹ್ಮಣಿಕೆಯನ್ನು ಹಣಿಯುವ ಬದಲು ಎಷ್ಟೊಂದು ಕಾನೂನುಗಳಿದ್ದರೂ, ಹಲವು ಸಮಸ್ಯೆಗಳು ಜನರನ್ನು ಚೌಕಟ್ಟುಗಳಲ್ಲಿ ಬಂಧಿಸಿಡುವುದರ ಹಿಂದಿರುವ ಮರ್ಮಗಳ ಕುರಿತು ಚಿಂತನೆ ನಡೆಸುವುದು ಮುಖ್ಯವಲ್ಲವೆ? ಅನೇಕ ಸಂದರ್ಭಗಳಲ್ಲಿ ನಮ್ಮವ ನಿಮ್ಮವ ಪದಗಳು ಮುಖವಾಡವಷ್ಟೇ. ಒಳಗಿರುವುದು ಅಪ್ಪಟ ಸ್ವಾರ್ಥವಷ್ಟೇ.
-ಜಾವಗಲ್ ಕೃಷ್ಣಶರ್ಮ

ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾಗುತ್ತಿರುವ ಕ್ರೀಡಾವರದಿಯ ಜೊತೆಗಿನ ಮಹಿಳಾ ಆಟಗಾರ್ತಿಯರ ಫೋಟೋಗಳನ್ನು ಗಮನಿಸಿದಾಗ ಬಹುತೇಕ ಚಿತ್ರಗಳಲ್ಲಿ ಒಂದು ಸಾಮ್ಯತೆ ಗೋಚರವಾಗುತ್ತದೆ. ಒಂದೋ ಆಟಗಾರ್ತಿಯರ ಸ್ಕರ್ಟ್ ಮೇಲೇರಿ ಒಳಉಡುಪು ಕಾಣುತ್ತಿರುತ್ತದೆ; ಇಲ್ಲವೇ ರಿವರ್ಸ್ ಫೋಸಿನಲ್ಲಿ ಪೃಷ್ಠಗಳ ದರ್ಶನ; ಬಗ್ಗಿ ಹೊಡೆವ ಭಂಗಿಯಲ್ಲಿ ಎದೆ ಕಾಣುವಂತೆ ಕ್ಲಿಕ್ಕಿಸಿರುತ್ತಾರೆ. ಒಟ್ಟಾರೆ ಅವರ ಆಟಕ್ಕಿಂತ ಅವರ ದೇಹ ಪ್ರದರ್ಶನಕ್ಕೇ ಛಾಯಾಗ್ರಾಹಕರ ಆದ್ಯತೆ! ವೀನಸ್ ವಿಲಿಯಮ್ಸ್ -ಸೆರೆನಾ ವಿಲಿಯಮ್ಸ್, ಮರಿಯಾ ಶೆರಪೋವಾ-ಎಲೆನಾ ಯಾಂಕೊವಿಚ್- ಸೈನ್ ನೆಹವಾಲ್ ಎಲ್ಲಕ್ಕೂ ಕಲಶಪ್ರಾಯಳಾಗಿ ಮೂಗುತಿ ಸುಂದರಿ ಸಾನಿಯಾ ಮಿರ್ಜಾಳದಂತೂ ಇದುವರೆಗೆ ಒಂದು ಬೃಹತ್ ಆಲ್ಬಂ ಮಾಡಬಹುದಾದಷ್ಟು ರೋಚಕ ಛಾಯಾಚಿತ್ರಗಳು ಪ್ರಕಟವಾಗಿವೆ. ಏಕೆ? ಆಟಗಾರ್ತಿಯರ "ಈ ಟೈಪ್‌" ಅಲ್ಲದ ಛಾಯಾಚಿತ್ರಗಳನ್ನು ಪ್ರಕಟಿಸಿದರೆ ಪತ್ರಿಕೆ ಬಿಕರಿಯಾಗುವುದಿಲ್ಲವೇ?
-ಕೆ. ಶ್ರೀನಿವಾಸರಾವ್, ದಾವಣಗೆರೆ ಜಿಲ್ಲೆ, ಮೊ. 9845407095

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement