ಮನುಷ್ಯನ ಮೌಢ್ಯಕ್ಕೆ ಕೇದಾರನಾಥ ಮುನಿಸಿಕೊಂಡನೇ?
ಶಿವ, ಶಿವ. ಏನಿದು ನಿನ್ನ ತಾಂಡವ ನೃತ್ಯ? ಈ ವಿನಾಶ ಯಾವುದರ ಮುನ್ಸೂಚನೆ? ಮಾನವನ ಯಾವ ಪಾಪಕ್ಕಾಗಿ ಈ ಶಿಕ್ಷೆ? ಸುದ್ದಿವಾಹಿನಿಯೊಂದರಲ್ಲಿ ಈ ಪ್ರಚಂಡ ಪ್ರಳಯದ ಮೊದಲ ದೃಶ್ಯ ನೋಡಿದ ಕ್ಷಣ ಅನಿಸಿದ್ದು ಹೀಗೆ. ದೇವಸ್ಥಾನದ ಮುಂದೆ ಬಿದ್ದಿರುವ ರಾಶಿ ರಾಶಿ ಶವಗಳು, ಮಂದಿರದ ಒಳಗೂ ಹಾಗೆಯೇ ಶವಗಳು ಬಿದ್ದಿವೆ ಎನ್ನುವುದು ಕೇಳಿದ ಮೇಲೆ ಕರುಳು ಕಿತ್ತು ಬಂದ ಅನುಭವವಾಯಿತು. ಹಿಂದೆ ನಾನು ಅಲ್ಲಿ ಕಳೆದ ಒಂದು ದಿನದ ಸವಿ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆ...
ಅಪ್ಪಾಜಿ ಸಾವಿನಿಂದ ಕುಸಿದು ಹೋದವಳಿಗೆ ನೆನಪಾದದ್ದು ಹಿಮಾಲಯದ ಕೇದಾರನಾಥ್. ಮನಸ್ಸಿಗೆ ಸಮಾಧಾನ ಹುಡಿಕಿ ಎಲ್ಲ ಕೆಲಸಗಳನ್ನು ಬದಿಗೊತ್ತಿ ಹೊರಟವಳಿಗೆ, ಜೊತೆಯಲ್ಲಿ ಹೊರಟ ಗೆಳತಿಗೆ ಅನಾರೋಗ್ಯವಾಗಿ ಬರಲಾಗದಿದ್ದುದು, ಅದೇ ಟಿಕೆಟಿಗೆ ಹೊರಟ ಮತ್ತಿಬ್ಬರೂ ಬರಲಾಗದಿದ್ದುದು, ಕೊನೆಗೆ ಒಬ್ಬಳೇ ಹೊರಟವಳಿಗೆ ಮನೆಯವರೆಲ್ಲರ ವಿರೋಧ ಎದುರಾದದ್ದು... ಜೂನ್ನ ಕೊನೆಯಲ್ಲಿ ಎಲ್ಲರೂ ಹೋಗೋಣ ಈಗ ಬೇಡವೆಂದರೂ, ಹಿಮಾಲಯದ ಸೆಳೆತ ನನ್ನನ್ನು ಕೇದಾರದ ತನಕ ಎಳೆದುಕೊಂಡು ಹೋಯಿತು. ಅದು ಕೇದಾರನಾಥನ ಇಚ್ಚೆ ಯಾರನ್ನು ಯಾವಾಗ ತನ್ನ ಹತ್ತಿರ ಕರೆಸಿಕೊಳ್ಳಬೇಕು ಎಂದು ತೀರ್ಮಾನಿಸುವವನು ಅವನೇ ಎಂದು ಈಗ ಅನಿಸುತ್ತಿದೆ.
ಮೇ 10 ಬೆಂಗಳೂರು ಬಿಟ್ಟವಳು, ಹೃಷಿಕೇಶದಲ್ಲಿ ಎರಡು ರಾತ್ರಿ ಉಳಿದು, ರುದ್ರಪ್ರಯಾಗದ ಮುಖಾಂತರ ರಸ್ತೆಮಾರ್ಗವಾಗಿ ಗುಪ್ತಕಾಶಿ ತಲುಪಿಪಿದೆ. ಅಂದು ವಿಪರೀತ ಮಳೆ ಜೊತೆಗೆ ಚಳಿ. ಅಲ್ಲಿಯೇ ಒಂದು ಮನೆಯಲ್ಲಿ ಉಳಿದಿಕೊಂಡೆ. ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನಾದರೂ ಸಿಗುತ್ತಿಲ್ಲ. ಅವರ ಮನೆಯಿದ್ದುದು ರಸ್ತೆ ಬದಿಯಲ್ಲಿ. ಅದೀಗ ಇದೆಯೇ ಎನ್ನುವ ಅತಂಕ! ಅ ದಂಪತಿಗಳ ಮುದ್ದಾದ ಮೂರು ಮಕ್ಕಳ ಜೊತೆ ಕಳೆದ ಕ್ಷಣಗಳು, ಆ ಮನೆಯ ಗೃಹಿಣಿ ಮಾಡಿಕೊಟ್ಟ ಬಿಸಿ ಬಿಸಿ ಪುಲ್ಕ-ದಾಲ್, ಚಹ, ಯಜಮಾನ ರಾಣಾ ಸಿಂಗ್ ಅಲ್ಲಿನ ಜೀವನದ ಕಷ್ಟಗಳನ್ನು ಗಂಟೆಗಟ್ಟಲೆ ಹೇಳಿದ್ದು, ಕೃಷಿಗಿಂತ ಪ್ರವಾಸೋದ್ಯಮವೇ ತಮ್ಮ ಜೀವನಕ್ಕೆ ಆಧಾರವಾಗಿರುವುದು, ಹೊರ ರಾಜ್ಯದ ಉದ್ಯಮಿಗಳ ದಾಳಿಯಿಂದ ಸ್ಥಳಿಯರು ಪಡುತ್ತಿರುವ ಪಾಡಿನ ಬಗ್ಗೆ ತೋಡಿಕೊಂಡದ್ದು, ಬೆಳಿಗ್ಗೆ ಶಾಲೆಗೆ ಹೋಗುವಾಗ ಅವರ ಮಕ್ಕಳಿಗೆ ನಾನು ಬಾಯ್ ಹೇಳಿ ಕಳಿಸಿದ್ದು, ಮತ್ತೇ ಬನ್ನಿ ಎಂದು ಅವರು ಹೇಳಿದ್ದು...ಎಲ್ಲ ನೆನಪಾಗುತ್ತದೆ.
ರೈಲಿನಲ್ಲಿ ನನ್ನ ಬ್ಯಾಗಿನಲ್ಲಿದ್ದ ಪರ್ಸ್ ಯಾರೋ ತೆಗೆದಿದ್ದರಿಂದ, ಹಾಗಾಗಿ ನನ್ನ ತಮ್ಮ ಎಟಿಎಮ್ನಿಂದ ದುಡ್ಡು ಕಳಿಸಿ, 'ರಸ್ತೆ ಮುಖಾಂತರ ಬೇಡ, ಹೆಲಿಕ್ಯಾಪ್ಟರ್ನಲ್ಲಿ ಹೋಗು' ಎಂದು ಹೇಳಿದ್ದರಿಂದ, ಗುಪ್ತಕಾಶಿಯಿಂದ ಕೇದಾರನಾಥ್ ತಪ್ಪಲಿಗೆ ಹೆಲಿಕ್ಯಾಪ್ಟರ್ನಲ್ಲಿ ಕೇವಲ ಹತ್ತು ನಿಮಿಷದಲ್ಲಿ ತಲುಪಿದೆ. ನಾನಲ್ಲಿ ಇದ್ದಾಗ ಮಾತನಾಡಿಸಿದವರು ಅನೇಕರು. ನನ್ನನ್ನು ಅಲ್ಲಿನ ಬ್ರಹ್ಮಕುಂಡ, ರೇತಕುಂಡ, ಉದಕಕುಂಡಗಳಿಗೆ ಕರೆದುಕೊಂಡು ಹೋಗಿ ತೋರಿಸಿಕೊಂಡ ಬಂದ ಮಂದಿರದ ಪುರೋಹಿತರ ಮಗ ನೆನಪಾದ. ಅವನು ತನ್ನ ಭವಿಷ್ಯದ ಬಗ್ಗೆ ಕಟ್ಟಿಕೊಂಡ ಕನಸು ನೆನಪಾದವು. ತಾನು ಸ್ನಾತಕೋತ್ತರ ಮುಗಿಸಿದ್ದರೂ, ಇನ್ನು ಓದಬೇಕೆಂಬ ಹಂಬಲ, ತಂದೆಯ ಪೌರೋಹಿತ್ಯಕ್ಕೆ ಕಟ್ಟುಬೀಳಬೇಕೆ? ಎನ್ನುವ ಅವನ ಮಾತುಗಳು ಕಾಡಿದವು. ನನ್ನ ಎರಡೂ ಕಾಲಿನ ಮಂಡಿಗಳು ಶಕ್ತಿ ಕಳೆದುಕೊಂಡು ನಡೆಯಲಾರದೆ ಒದ್ದಾಡುತ್ತಿದ್ದಾಗ, ಮಂದಿರದ ಸಿಬ್ಬಂದಿ ಪ್ರತಿಯೊಂದು ಹಂತದಲ್ಲೂ ನನ್ನನ್ನು ನೋಡಿಕೊಂಡಿದ್ದು, ದೇವಸ್ಥಾನದಲ್ಲಿ ನನ್ನನ್ನು ಕೂರಿಸಿ ಶಿವನನ್ನು ಮನಃತೃಪ್ತಿಯಾಗುವಷ್ಟು ಪೂಜೆ ಮಾಡಿಸಿದ್ದು, ನಂತರ ಹೆಲಿಪ್ಯಾಡ್ ತನಕ ಕರೆದುಕೊಂಡು ಹೋಗು ಬಿಟ್ಟಿದ್ದು...ಆ ದೃಶ್ಯಗಳೆಲ್ಲ ಮತ್ತೆ ಕಣ್ಣು ಮುಂದೆ ಬಂದವು. ಟಿವಿಯಲ್ಲಿ ಕಂಡ ಶವಗಳಲ್ಲಿ ಅವರ್ಯಾರಾದರೂ ಇದ್ದಾರೆಯೇ ಎಂದು ಗಾಬರಿಯಿಂದ ಹುಡುಕುವ ಪ್ರಯತ್ನ ಮಾಡಿದೆ. ಅವರೆಲ್ಲ ಬದುಕಿರಲಿ ತಂದೆ ಎಂದು ಆ ಶಿವನನ್ನು ಪ್ರಾರ್ಥಿಸಿದೆ.
ಸರಿಯಾಗಿ ಒಂದು ತಿಂಗಳ ಹಿಂದೆ, ಅಂದರೆ ಮೇ 15-16 ರಂದು ನಾನು ಅಲ್ಲಿಯೇ ಇದ್ದೆ. ಕೇದಾರನಾಥ ಹಿಮಾಲಯ ಪರ್ವತ ಶ್ರೇಣಿಯಲ್ಲಿ, ಉತ್ತರಾಖಂಡ ರಾಜ್ಯದ ಚಮೋಲಿ (ಉತ್ತರಕಾಶಿ) ಜಿಲ್ಲೆಯಲ್ಲಿ ಮಂದಾಕಿನಿ ನದಿಯ ದಂಡೆಯ ಮೇಲಿರುವ ಶಿವನ ದೇವಾಲಯ. ಸುಮಾರು 3564 ಮೀಟರ್ ಎತ್ತರದಲ್ಲಿರುವ ಈ ಸ್ಥಳದಲ್ಲಿ ವಿಪರೀತ ಚಳಿ ಇರುವುದರಿಂದ ದೇವಾಲಯವು ಕೇವಲ ಏಪ್ರಿಲ್ ಕೊನೆಯ ಭಾಗದಿಂದ ನವೆಂಬರ್ ಮೊದಲ ವಾರದವರೆಗೆ ಮಾತ್ರ ಭಕ್ತಾದಿಗಳ ದರ್ಶನಕ್ಕೆ ಮುಕ್ತವಾಗಿರುತ್ತದೆ. ನಾನಲ್ಲಿ ಹೋದ ದಿನ ಇನ್ನು ಅಲ್ಲಲ್ಲಿ ನಾಲ್ಕೈದಡಿಗಳಷ್ಟು ಇದ್ದ ಮಂಜನ್ನು ತೆರವುಗೊಳಿಸುತ್ತಿದ್ದರು. ಮಂದಿರದ ಮುಂಭಾಗದ ಸಣ್ಣ ರಸ್ತೆಯ ಪಕ್ಕದಲ್ಲಿ ಐದಡಿಗಿಂತ ಹೆಚ್ಚು ಮಂಜಿತ್ತು. ಮಂದಿರದ ಹಾದಿಯಲ್ಲಿ ಕಿಲೋಮೀಟ್ರ ವರೆಗೆ ಹಬ್ಬಿದ ಸಾಲು ಸಾಲು ಅಂಗಡಿಗಳು, ಹೋಟೆಲ್ಗಳು. ಅಲ್ಲಿನ ವ್ಯಾಪಾರಿಗಳು 'ಈ ಬಾರಿ ಒಂದುವರೆ ಎರಡು ಲಕ್ಷದ ಸಾಮಾನುಗಳನ್ನು ಹಾಕಿದ್ದೇವೆ. ಏನಾಗುತ್ತದೋ ದೇವರ ಇಚ್ಛೆ' ಎನ್ನುತ್ತಿದ್ದರು. ಈ ಬಾರಿ ಅವರ ಅಂಗಡಿಗಳೆಲ್ಲ ಕೊಚ್ಚಿಕೊಂಡು ಹೋಗಿವೆ.... ಶಿವನೇ, ಮನುಷ್ಯನ ಅತಿಯಾದ ಲಾಲಸೆ, ತಾಂಡವವಾಡುತ್ತಿರುವ ಭ್ರಷ್ಟತೆ, ಮಡಬಾರದ್ದನ್ನೆಲ್ಲ ಮಾಡಿ ಮೈ ತುಂಬ ಪಾಪ ತುಂಬಿಕೊಂಡು, ನಿನ್ನಲ್ಲಿಗೆ ಬರುವವರನ್ನು ನಿಲ್ಲಿಸಿದ ಪರಿಯೇ ಇದು? ನಿನ್ನ ತಾಣದಲ್ಲಿ ಕೂಡಾ ಅಭಿವೃದ್ಧಿಯ ಹೆಸರಲ್ಲಿ ಉದ್ಯಮಿಗಳು ಮಾಡಹೊರಟಿದ್ದ ನಾಶಕ್ಕೆ ಕಡಿವಾಣ ಎಂದುಕೊಳ್ಳೋಣವೇ ಇದನ್ನು?
ಒಂಬತ್ತು ವರುಷದ ಹಿಂದೆ ಹೋದಾಗ ಇದ್ದ ಕೇದಾರನಾಥಕ್ಕು ಇಂದಿಗೂ ಆದ ಬದಲಾವಣೆ ಕಂಡಾಗಲೇ, ಮಾನವನ ಅಟ್ಟಹಾಸಕ್ಕೆ ಒಂದು ಕೊನೆಯಿದೆ ಎಂದು ಅಂದುಕೊಂಡಿದ್ದೆ. ಅದರೆ ಅದು ಇಷ್ಟು ಬೇಗ ಅಗುತ್ತದೆ ಎಂದು ಗೊತ್ತಿರಲಿಲ್ಲ. 'ಕಧಯಸ್ವ ಮಹಾದೇವ ವಿಸ್ತರಾ ನಮಃ ಕ್ಷೇತ್ರಕಮ್/ ಕೇದಾರ ನಾಮ ಯತ್ಪ್ರೋಕ್ತಂ ಸ್ವರ್ಗ ಮೋಕ್ಷ ಪ್ರದಾಯಕಮ್' ಕೇದಾರನಾಥ ಹಿಮಾಲಯದ ಪುಣ್ಯಕ್ಷೇತ್ರ. ಪಾಂಡವರಿಗೆ ಶಿವ ದರ್ಶನ ಕೊಟ್ಟ ಸ್ಥಳ. ನಂತರ ಅಲ್ಲಿಯೇ ನೆಲೆಸಿ ಭೀಮನೇ ಶಿವನಿಗೊಂದು ದೇವಸ್ಥಾನ ಕಟ್ಟಿದ ಎನ್ನುವ ಪ್ರತೀತಿ ಇದೆ. ದೇವಸ್ಥಾನದ ವಾಸ್ತುಶಿಲ್ಪ ನೋಡಿದರೆ 'ಹೇಗೆ ಕಟ್ಟಿದ್ದಾರೆ!' ಎಂದು ವಿಸ್ಮಯವಾಗುತ್ತದೆ. ಕೇದಾರೇಶ್ವರನ ನಾಮದಿಂದಲೇ ಮೋಕ್ಷ ಸಿಗುತ್ತದೆ ಎನ್ನುವ ಮೇಲಿನ ಶ್ಲೋಕದಂತೆ, ಹಿಂದೆ ಜನರೆಲ್ಲ ಜೀವನದ ಕೊನೆಯ ಹಂತವೆಂಬಂತೆ ಆ ಸ್ಥಳಕ್ಕೆ ಮೋಕ್ಷವರಸಿ ಹೋಗುತ್ತಿದ್ದರು. ಆದರೆ ಇಂದು ಲಕ್ಷಾಂತರ ಭಕ್ತಾದಿಗಳು ಸರಾಗವೆಂಬಂತೆ ಹೋಗಿ, ಬರುತ್ತಿದ್ದಾರೆ.
ರುದ್ರಪ್ರಯಾಗದ ಮುಂದೆ ಹದಿನಾರು ಕಿಲೋಮೀಟರ್ ನಂತರ ಇರುವುದೇ ಅಗಸ್ತ್ಯಮುನಿ ಎಂಬ ಹಳ್ಳಿ. 2004 ರಲ್ಲಿ ನಾನಲ್ಲಿಗೆ ಹೋದಾಗ ಅದೆಷ್ಟು ಪ್ರಶಾಂತ ಸ್ಥಳವಾಗಿತ್ತು! ಆದರೆ ಈ ಬಾರಿ ನೋಡಿದರೆ, ಬೆಂಗಳೂರಿನ ಚಿಕ್ಕಪೇಟೆ ನೋಡಿದ ಹಾಗಾಯ್ತು! ದೇವಭೂಮಿಯಲ್ಲಿ ಈ ಮಟ್ಟದ ಅಭಿವೃದ್ಧಿ ಬೇಡವೆನಿಸಿತು. ಹೃಷಿಕೇಶದಿಂದ ಹೊರಟರೆ, ಕಡಿದಾದ ಬೆಟ್ಟ ಮತ್ತು ಪ್ರಪಾತದಲ್ಲಿ ಹರಿಯುವ ನದಿಯ ಮಧ್ಯೆ ಇರುವ ಸಣ್ಣ ರಸ್ತೆ, ದಟ್ಟಕಾಡು, ಸಾಲು ಸಾಲು ಬೆಟ್ಟ, ಮೇಲಿನಿಂದ ಹರಿಯುವ ಝರಿಗಳು, ಅದಕ್ಕೆ ಕೈಯೊಡ್ಡಿ ನೀರು ಕುಡಿಯುವುದೇ ಒಂದು ಮಜಾ ಎನಿಸುತ್ತಿತ್ತು. ಎಲ್ಲೋ ಒಂದೊಂದು ಕಡೆ ಚಹಾ ಅಂಗಡಿಗಳು! ಗೌರಿಕುಂಡದಿಂದ ಕಡಿದಾದ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮುಖಾಂತರ ಪ್ರಕೃತಿ ಸೌಂದರ್ಯ ಸವಿಯುತ್ತ ಹೋಗಿ ಶಿವನನ್ನು ದರ್ಶಿಸುವುದೇ ಒಂದು ಪುನೀತ ಭಾವ. ಈಗ ಪಾಪಿಗಳು ಹೆಚ್ಚಾದರೇನೋ, ಅದಕ್ಕೇ ಕೇದಾರೇಶ್ವರ ನಮಗೆಲ್ಲ ಕಡಿವಾಣ ಹಾಕಲು ಈ ಜಲಪ್ರಳಯ ಸೃಷ್ಟಿಸಿರಬಹುದು.
ಬದರಿ ಕೇತ್ರದ ಜೋಷಿಮಠದಿಂದ 14 ಕಿಮಿ ಮೇಲಿರುವ ತಪೋಭೂಮಿಯಲ್ಲಿ ಹಿಂದಿನ ಬಾರಿ ಹೋದಾಗ ಅಲ್ಲೊಂದು ಹಳ್ಳಿ ಬಿಟ್ಟರೆ ಬೇರೇನೂ ಇರಲಿಲ್ಲ. ವಿಸ್ಮಯದ ಬಿಸಿನೀರಿನ ಬುಗ್ಗೆ, ಪಾರ್ವತಿ ತಪಸ್ಸು ಮಾಡಿದ ಸ್ಥಳ, ಸಿದ್ಧಿಪುರುಷರ ಗುಹೆಗಳು, ಅಲ್ಲಿಂದ ಮುಂದೆ ಭವಿಷ್ಯಬದರಿ, ನಂತರವೇ ದ್ರೋಣಗಿರಿಪರ್ವತ(ಸಂಜೀವಿನಿ ಪರ್ವತದ ಕೆಳಗೆ) ಇದೆ. ಈ ಬಾರಿ ತಪೋವನಕ್ಕೆ ಹೋದರೆ ಅಲ್ಲಿ ಬೆಟ್ಟಗಳನ್ನು ಕಡಿದು ನದಿಗೆ ಅಡ್ಡಲಾಗಿ (NTPC) National Power Project ನಡೆಯುತ್ತಿದ್ದುದು ಕಂಡು ಬಂತು. ಅಗಲೇ ಅಂದುಕೊಂಡೆ ವಿನಾಶಕಾಲೇ ವಿಪರೀತ ಬುದ್ಧಿ ಎಂದು. ಈ ಯೋಜನೆಯನ್ನು ಅಭಿವೃದ್ಧಿಯ ಪಥ ಎಂದುಕೊಂಡ ಮನುಷ್ಯನಿಗೆ, ಇದು ಪರಿಸರ ವಿನಾಶಕ ಎಂದೆನಿಸಲಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳುವವನೇ?
ಶೋಭಾ.ಎಚ್.ಜಿ
ಸಂಪಾದಕರು
ಸ್ತ್ರೀ ಜಾಗೃತಿ ಮಾಸಪತ್ರಿಕೆ