ಬೆಳಗಾವಿಯಲ್ಲಿನ ಕೆಲವು ಕಹಿ ನೆನಪುಗಳು
ಸರ್ಕಾರಿ ನೌಕರರಾಗಿ ವಿವಿಧ ಕೆಲಸಗಳನ್ನು ಜವಾಬ್ದಾರಿಯುತವಾಗಿ...
ಸರ್ಕಾರಿ ನೌಕರರಾಗಿ ವಿವಿಧ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಾಗ ಕೆಲವೊಮ್ಮೆ ಕಹಿ ಅನುಭವಗಳು ಎದುರಾಗುವುದು ಸಹಜ. ಉದಾಹರಣೆಗೆ- ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ನಾಗರಿಕರ ಕುಂದುಕೊರತೆಗಳ ನಿವಾರಣಾ ಅಧಿಕಾರಿಗಳೂ ಆಗಿರುತ್ತಾರೆ. ಅದಕ್ಕಾಗಿ ಅವರು ಯಾವಾಗಲೂ ನಾಗರಿಕರಿಗೆ ಲಭ್ಯವಿರಬೇಕು. ಬಹುತೇಕ ಸಂದರ್ಭಗಳಲ್ಲಿ ನಾಗರಿಕರ ಸಮಸ್ಯೆ ಹಾಗೂ ದೂರುಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ಬರುವುದಿಲ್ಲ. ಆ ಕಾರಣಕ್ಕಾಗಿ ನಾಗರಿಕರಿಗೆ ಪರಿಹಾರ ಸಹ ಸಿಕ್ಕಿರುವುದಿಲ್ಲ. ಇದರಿಂದ ಅಸಂತೃಪ್ತರಾಗಿ ಸರ್ಕಾರದ ಮೇಲೆ ಸಿಟ್ಟಾಗುತ್ತಾರೆ. ಹೀಗಾಗಬಾರದು ಎನ್ನುವ ಕಾರಣದಿಂದ, ನನ್ನ ಮೊಬೈಲ್ ನಂಬರನ್ನು ಎಲ್ಲಾ ಪತ್ರಿಕೆಗಳ ಮೂಲಕ ಪ್ರಕಟಿಸಿದೆ. ಪ್ರವಾಹದ ಸಮಸ್ಯೆಯಾಗಲಿ, ಲಂಚದ ಬಗ್ಗೆ ದೂರುಗಳು ಹಾಗೂ ಇತರೆ ಯಾವುದೇ ದೂರುಗಳನ್ನು ನನಗೆ ನೇರವಾಗಿ ತಿಳಿಸಲು ನಾಗರಿಕರಿಗೆ ಇದರಿಂದ ಅನುಕೂಲವಾಯಿತು. ಸುಮಾರು ಸಲ ಮಾಹಿತಿಯಾಧರಿಸಿ ಸುಧಾರಣಾ ಕ್ರಮ ತೆಗೆದುಕೊಳ್ಳಲು ಸಾಧ್ಯವಾಯಿತು. ಆದರೆ, ಕೆಲವರು ಈ ಸೌಲಭ್ಯದ ದುರುಪಯೋಗ ಪಡೆದು ಅನಾವಶ್ಯಕವಾಗಿ ಹಗಲು ರಾತ್ರಿ ಸಾರ್ವಜನಿಕ ಬೂತ್ನಿಂದ ಮೊಬೈಲ್ಗೆ ಕರೆ ಮಾಡಿ ಕಿರುಕುಳ ಕೊಡಲು ಪ್ರಾರಂಭಿಸಿದರು. ಸುಮಾರು ಸಲ ಅವರಿಗೆ ಎಚ್ಚರಿಕೆ ಕೊಟ್ಟರೂ ಸಹ ಅವರು ಅದನ್ನೇ ಮುಂದುವರಿಸಿದ್ದರು. ಆಗ ಆ ವಿಷಯವನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ಇಂತಹ ಸಮಾಜ ವಿರೋಧಿ ಕೃತ್ಯ ಎಸುಗುವವರಿಗೆ ಸರಿಯಾಗಿ ಪಾಠ ಕಲಿಸಿದೆ.
ಜಿಲ್ಲೆಯಲ್ಲಿ ನೂರಾರು ಯೋಜನೆಗಳು ನಿರ್ವಹಿಸುವಾಗ ಸರ್ಕಾರದ ಕೋಟ್ಯಂತರ ರುಪಾಯಿಗಳ ನಿರ್ವಹಣೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಿದ್ದರೂ ಸಹ ಕೆಲವರು ಯಾವಾಗಲೂ ಸಂಶಯ ಮನೋಭಾವವನ್ನು ಇಟ್ಟುಕೊಂಡಿರುತ್ತಾರೆ. ಇಂತಹ ಒಂದು ಘಟನೆ ನಾನು ನೆರೆ ಪರಿಹಾರದ ಕೆಲಸದಲ್ಲಿ ತೊಡಗಿದ್ದಾಗ ನಡೆಯಿತು. ಕೃಷ್ಣಾ ನದಿ ನೀರು ಮಹಾರಾಷ್ಟ್ರದಿಂದ ಹಾದು ಬೆಳಗಾವಿಯ ಹಳ್ಳಿಗಳಿಗೆ ಮುಟ್ಟುತ್ತಿದೆ ಎಂಬ ಸುದ್ದಿ ತಿಳಿದಾಗ ನಾನು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಪರಿವೀಕ್ಷಣೆಗೆ ಹೊರಟಿತ್ತಿದ್ದೆವು. ಆಗ ಒಂದು ಪತ್ರಿಕೆಯ ವರದಿಗಾರ, ತಾವು ಬೆಂಗಳೂರಿನಿಂದ ಬಂದಿರುವುದಾಗಿಯೂ ತನಗೆ ಪ್ರವಾಹದ ಬಗ್ಗೆ ಮಾಹಿತಿ ನೀಡಬೇಕೆಂದು ಕೇಳಿದರು. ನಾನು ಅವರನ್ನು ಬೆಳಗಾವಿಗೆ ಸ್ವಾಗತಿಸಿ, 'ಇಂಥ ಸನ್ನಿವೇಶ ಎದುರಾಗಿರುವುದರಿಂದ ನನಗೆ ತುರ್ತು ಕೆಲಸವಿದೆ. ಹಾಗಾಗಿ ಈ ಮಾಹಿತಿ ಕೊಡಲು ನನಗೆ ಸಾಧ್ಯವಾಗದು. ಅಪರ ಜಿಲ್ಲಾಧಿಕಾರಿಗಳು ಪ್ರತಿನಿತ್ಯ ಎಲ್ಲಾ ಪತ್ರಿಕಾ ಮಾಧ್ಯಮದವರಿಗೆ ವಸ್ತುಸ್ಥಿತಿ ಮತ್ತು ಅಂಕಿಅಂಶಗಳನ್ನು ನೀಡುತ್ತಾರೆ ದಯವಿಟ್ಟು ಅವರಿಂದ ಮಾಹಿತಿ ತಗೆದುಕೊಳ್ಳಿ ಮತ್ತು ಹೆಚ್ಚಿನ ವಿಷಯ ಅವಶ್ಯವಿದ್ದಲ್ಲಿ ನನ್ನನ್ನು ಸಂಪರ್ಕಿಸಬಹುದು' ಎಂದು ಕೇಳಿಕೊಂಡು, ಅವರನ್ನು ಅಪರ ಜಿಲ್ಲಾಧಿಕಾರಿಗಳ ಹತ್ತಿರ ಹಳುಹಿಸಿ ನಾನು ಸಿಬ್ಬಂದಿಯೊಂದಿಗೆ ಹೊರಟೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಸಮಯದ ಅರಿವಿಲ್ಲದೆ ಪ್ರವಾಹ ಸಂಬಂಧೀ ಕೆಲಸದಲ್ಲಿ ತಲ್ಲೀನವಾಗಿದ್ದಾಗ ಏಕಾಏಕಿ ನನಗೆ ಬೆಂಗಳೂರಿನಿಂದ ಕರೆ ಬಂದಿತು. 'ನಿಮ್ಮ ಬಗ್ಗೆ ಒಂದು ಪತ್ರಿಕೆಯಲ್ಲಿ ಎರಡು ಪುಟ ಸುದ್ದಿಯನ್ನು ಬರೆದು ದೊಡ್ಡದಾಗಿ ಫೋಟೋ ಹಾಕಿದ್ದಾರೆ. ಬಹಳ ದೊಡ್ಡ ಪ್ರಮಾಣದ ಲಂಚ ತೆಗೆದುಕೊಂಡು ನೀವು ಬರ ಪರಿಹಾರ ಕೆಲಸ ಮಾಡುತ್ತಿದ್ದೀರೆಂದು ಬರೆದಿದ್ದಾರೆ' ಎಂದು ತಿಳಿಸಿದರು. ನನ್ನ ಗಮನವೆಲ್ಲ ಪ್ರವಾಹ ಕಡೆಗೇ ಕೇಂದ್ರಿತವಾಗಿತ್ತಾದರೂ, ಈ ಸುದ್ದಿಯಿಂದ ಮಾನಸಿಕವಾಗಿ ತುಂಬಾ ನೋವು ಅನುಭವಿಸಿದೆ. ಯಾವುದೇ ಸತ್ಯಾಂಶ ಇಲ್ಲದಿದ್ದರೂ ಸಹ ಆ ಸುದ್ದಿಗಾರರು ಹೀಗೇಕೆ ಬರೆದರು, ಏನು ಬರೆದರು ಎಂದು ತಿಳಿದುಕೊಳ್ಳುವ ಕುತೂಹಲವಾಯಿತು. ಆ ಪತ್ರಿಕೆಯ ಪ್ರತಿಯನ್ನು ತರಿಸಿ ಓದಿದಾಗ ಒಂದು ಕಡೆ ನಗು, ಮತ್ತೊಂದು ಕಡೆ ಕೋಪ!
ಪತ್ರಿಕಾ ಮಾಧ್ಯಮದ ಸ್ನೇಹಿತರೊಬ್ಬರು ನನಗೆ ಸಮಾಧಾನ ಹೇಳಿದರು. ಇಂತಹ ಪತ್ರಿಕೆಗೆ ಯಾವ ಬೆಲೆಯೂ ಇಲ್ಲ. ತಾವು ಇದರ ಬಗ್ಗೆ ತಲೆ ಕೆಡೆಸಿಕೊಳ್ಳುವ ಅಗತ್ಯವಿಲ್ಲವೆಂದರು. ಆದರೂ ನಾನು ಸುಮ್ಮನಿದ್ದರೆ ಇದರಲ್ಲಿ ಸತ್ಯಾಂಶವಿರಬಹುದೆಂದು ಸಾರ್ವಜನಿಕರು, ಮತ್ತಿತರರು ಯೋಚಿಸಬಹುದೆಂದು ತಕ್ಷಣವೇ ದೆಹಲಿಯಲ್ಲಿರುವ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವನ್ನು ಸಂಪರ್ಕಿಸಿ ಪತ್ರಿಕೆಯಲ್ಲಿ ಬರೆದಿರುವ ಎಲ್ಲಾ ವಿಷಯಗಳು ಸತ್ಯಕ್ಕೆ ದೂರವಾಗಿದ್ದು, ಅದಕ್ಕೆ ಬೇಕಾದ ದಾಖಲೆಗಳೂ ನನ್ನ ಬಳಿ ಇವೆ ಎಂದೆ. ನಂತರ ಸ್ಥಳೀಯ ಪ್ರೆಸ್ ಕೌನ್ಸಿಲ್ಗೆ ಎಲ್ಲಾ ದಾಖಲೆಗಳನ್ನೂ ಸಲ್ಲಿಸಿದೆ. ಅಲ್ಲದೆ, ಮುಖ್ಯ ಕಾರ್ಯದರ್ಶಿಗಳು ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಆ ಪತ್ರಿಕೆಯಲ್ಲಿ ಪ್ರಕಟವಾದ ಎರಡು ಪುಟಗಳ ವರದಿಯಲ್ಲಿರುವ ಪ್ರತಿಯೊಂದು ಆಪಾದನೆಗಳೂ ಸುಳ್ಳು ಎನ್ನುವುದಕ್ಕೆ ಪೂರಕವಾದ ದಾಖಲೆ ಸಲ್ಲಿಸಿ ಈ ಬಗ್ಗೆ ತನಿಖೆ ನಡೆಸಿ ನ್ಯಾಯ ನೀಡುವಂತೆ ಕೋರಿದೆ. ಒಂದು ವೇಳೆ ಸುದ್ದಿಯಲ್ಲಿ ಇರುವ ಒಂದಾದರೂ ಅಂಶ ನಿಜವಾಗಿದ್ದರೆ ನನ್ನ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಹೇಳಿದೆ. ನನ್ನ ಮಾತು ಸತ್ಯವೆಂದು ಸ್ಪಷ್ಟವಾದರೆ ಪತ್ರಿಕೆಯ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಬೇಕೆಂದು ಕೋರಿದೆ.
ಏಕೆಂದರೆ, ಇಂಥ ಪ್ರಹಾರ ನನ್ನ ವೈಯಕ್ತಿಕ ಘನತೆಗಷ್ಟೇ ಅಲ್ಲದೆ, ಇದು ಸರ್ಕಾರದ ಪ್ರತಿಷ್ಠೆಗೂ ಧಕ್ಕೆ ತರುವಂತಹದಾಗಿತ್ತು. ಈ ಘಟನೆಯಿಂದಾಗಿ ಅನವಶ್ಯಕವಾಗಿ ನನ್ನ ಅಮೂಲ್ಯ ಸಮಯ ಹಾಳಾಯಿತು. ಆದರೆ, ನಾನು ತೆಗೆದುಕೊಂಡ ದಿಟ್ಟ ನಿಲುವಿನಿಂದ ನನ್ನ ಅಧೀನದಲ್ಲಿದ್ದ ಅಧಿಕಾರಿಗಳಿಗೆ ಧೈರ್ಯ ಬಂದಿತು. ಪರಿಹಾರ ಕಾರ್ಯವನ್ನು ಯಾವುದೇ ಅಡ್ಡಿಯಿಲ್ಲದೆ ಪ್ರಾಮಾಣಿಕವಾಗಿ ಮುಂದುವರೆಸಲು ಅನುಕೂಲವಾಯಿತು. ಇವತ್ತು ಜಿಲ್ಲಾಧಿಕಾರಿಗಳ ಮೇಲೆ ಆರೋಪ ಬಂದಂತೆ ನಾಳೆ ಬೇರೆ ಅಧಿಕಾರಿಗಳ ಬಗ್ಗೆಯೂ ಇಂತಹ ಗಾಳಿ ಸುದ್ದಿಗಳನ್ನು ಹೊರಡಿಸಿದಲ್ಲಿ ಧೈರ್ಯದಿಂದ ಕೆಲಸ ಮಾಡಲು ಕಷ್ಟವಾಗುತ್ತದೆ ಎಂದು ಸರ್ಕಾರಿ ನೌಕರರು ಮನಗಂಡರು.
ಜನರ ಜೊತೆಗೆ ನನ್ನ ನೇರ ಸಂಪರ್ಕ ಹೆಚ್ಚುತ್ತಾ ನಗರದ, ನಾಗರಿಕರ ಸಮಸ್ಯೆಗಳ ಬಗ್ಗೆ ದೂರುಗಳು ಬರುವುದೂ ಜಾಸ್ತಿಯಾಯಿತು. ವಿವಿಧ ಇಲಾಖೆಗಳಲ್ಲಿ ಕೆಲಸಗಾರರು ಅನುಭವಿಸುತ್ತಿರುವ ಕಿರುಕುಳದ ಬಗ್ಗೆ ಕೂಲಂಕಷ ವಿವರಣೆಯೊಂದಿಗೆ ಫಿರ್ಯಾದಿಗಳು ಬರುತ್ತಿದ್ದವು. ಇದರಿಂದಾಗಿ ಅತಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ನನಗೆ ಬೇಕಾದಷ್ಟು ಪುರಾವೆಗಳು ಸಿಕ್ಕವು. ನನ್ನ ಹಂತದಲ್ಲಿ ಒಂದು ತನಿಖೆ ಮಾಡಿ ಅವ್ಯವಹಾರದಲ್ಲಿ ತೊಡಗಿರುವ ಅಧಿಕಾರಿಯ ಮೇಲೆ ಕ್ರಮ ಜರುಗಿಸಲು ಪ್ರಸ್ತಾವನೆ ಸಲ್ಲಿಸಿದೆ. ಈ ವರದಿಯನ್ನು ಗೌಪ್ಯವಾಗಿ ಕಳುಹಿಸಿದರೂ ಸಹ ಸಂಬಂಧಪಟ್ಟ ಅಧಿಕಾರಿಗೆ ಅದು ತಿಳಿದುಹೋಯಿತು. ಆಗ ನನಗೆ ಬೆದರಿಕೆ ಪತ್ರಗಳು ಹಾಗೂ ದೂರವಾಣಿ ಕರೆಗಳು ಬರಲು ಪ್ರಾರಂಭವಾದವು. ನನ್ನ ಹೆಸರಿನಲ್ಲಿ ಮುಂಬೈಯ ಒಂದು ಗೂಂಡಾ ತಂಡಕ್ಕೆ ಸುಪಾರಿ ನೀಡಲಾಗಿದೆ ಎಂದು ನನಗೆ ಸುಳಿವು ಸಿಕ್ಕಿತು. ನಾನು ಪ್ರಸ್ತಾಪಿಸಿರುವ ವರದಿಯನ್ನು ಯಾವ ಕಾರಣಕ್ಕೂ ಹಿಂಪಡೆಯುವುದಿಲ್ಲವೆಂದು ನಿರ್ಧರಿಸಿ, ಆ ವಿಷಯವನ್ನು ರಾಜ್ಯದ ಆರಕ್ಷಕ ಮಹಾನಿರ್ದೇಶಕರ ಗಮನಕ್ಕೆ ತಂದಿದ್ದೆ. ಅವರು ಯಾವ ರೀತಿ ಅದನ್ನು ಬಗೆ ಹರಿಸಿದರು ಎಂಬುದು ನನಗೆ ಗೊತ್ತಿಲ್ಲ, ಆದರೆ, ಈ ವಿಷಯ ಅಲ್ಲಿಗೇ ನಿಂತಿತು.
ಕೆಲವು ದಿನಗಳಲ್ಲಿ ನನ್ನ ವರ್ಗಾವಣೆ ಆದೇಶ ಬಂದಿತು. 'ನೀವು ತುಂಬಾ ಜನಪ್ರಿಯ ಜಿಲ್ಲಾಧಿಕಾರಿಯಾಗಿದ್ದು, ಯಾವುದೇ ಚುನಾವಣೆಗೆ ಸ್ಫರ್ಧಿಸಿದರೆ ಖಂಡಿತವಾಗಿ ಗೆಲ್ಲುತ್ತೀರಿ ಎಂದು ಭಾವಿಸಿ, ನೀವು ಹೆಚ್ಚು ಸಮಯ ಇಲ್ಲಿ ಕೆಲಸ ಮಾಡಬಾರದು ಎಂಬ ಉದ್ದೇಶದಿಂದ ನಿಮ್ಮ ವರ್ಗಾವಣೆ ಮಾಡಿಸಿದ್ದಾರೆ' ಎಂದು ಕೆಲವರು ನನಗೆ ಹಾಸ್ಯ ಮಾಡಿದರು. ನಾನು ನಗುತ್ತಾ ಹೇಳಿದೆ, 'ರಾಜಕೀಯ ಕ್ಷೇತ್ರಕ್ಕೆ ಹೋದರೆ ನನಗೆ ಐದು ವರ್ಷವಾದರೂ ಸಮಾಜ ಸೇವೆ ಮಾಡುವ ಅವಕಾಶ ಸಿಗುತ್ತದೆಂಬ ಖಾತ್ರಿ ಇರುವುದಿಲ್ಲ. ಆದರೆ, ಐ.ಎ.ಎಸ್.ನಲ್ಲಿ ಸೇರಿರುವುದರಿಂದ ಸತತ ಮೂವತ್ತಾರು ವರ್ಷ ಸಮಾಜ ಸೇವೆ ಮಾಡಬಹುದು. ವರ್ಗಾವಣೆಗಳು ನಮ್ಮ ಆಡಳಿತ ಸೇವೆಯ ಒಂದು ಭಾಗ. ಹೊರ ರಾಜ್ಯದಿಂದ ಬಂದವರು ನಾವು, ಸರ್ಕಾರ ಯಾವುದೇ ಇಲಾಖೆ ಅಥವಾ ಜಿಲ್ಲೆಗೆ ಕಳುಹಿಸಿದರೂ ಅಲ್ಲಿ ಕೆಲಸ ನಿರ್ವಹಿಸಬೇಕು. ಎಷ್ಟು ಸಮಯ ಆ ಜಿಲ್ಲೆಯಲ್ಲಿ ಇರುತ್ತೇವೋ, ಅಲ್ಲಿಯವರೆಗೆ ಆ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪಿಸುವಂತಹ ಕೆಲಸ ಮಾಡಬೇಕು. ವರ್ಗಾವಣೆ ಆದ ಮೇಲೆ ಬಹುತೇಕ ಬಾರಿ ಆ ಜಿಲ್ಲೆಯೊಂದಿಗಾಗಲೀ ಅಥವಾ ಜಿಲ್ಲೆಯ ಜನರೊಂದಿಗಾಗಲೀ ನಮಗೆ ಯಾವುದೇ ಸಂಬಂಧ ಇರುವುದಿಲ್ಲ. ಅಧಿಕಾರಿಗಳ ವೈಯಕ್ತಿಕ ಗುರುತು ಯಾರಿಗೂ ಇರುವುದಿಲ್ಲ. ಅವರು ಸರ್ಕಾರದ ಒಂದು ಮುಖ ಅಷ್ಟೆ.' ಎಂದು ಹೇಳಿದೆ.
ಇಷ್ಟೆಲ್ಲ ಹೇಳಿದರೂ ಸಹ ಬಹಳಷ್ಟು ಸಂಘ ಸಂಸ್ಥೆಗಳು ನನ್ನ ವರ್ಗಾವಣೆಯ ಬಗ್ಗೆ ಪ್ರತಿಭಟಿಸಿದರು. ನನಗೆ ಬಹಳ ಮುಜುಗುರ ತರಿಸುವಂತಹ ಒಂದು ಸನ್ನಿವೇಶವೇನೆಂದರೆ, ಒಬ್ಬ ಯುವಕ ಇಂತಹ ಒಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಾಗ ವಿಷ ಸೇವಿಸಿದ. ಅವನನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆ ದಿನವೇ ಅನ್ನಿಸಿತು- ಇನ್ನೊಂದು ಕ್ಷಣವೂ ಬೆಳಗಾವಿಯಲ್ಲಿ ಇರಬಾರದೆಂದು. ಇನ್ನೊಮ್ಮೆ ಸಾರ್ವಜನಿಕರಿಗೆ ಮಾಧ್ಯಮದ ಮೂಲಕ ಪ್ರತಿಭಟನೆಗಳನ್ನು ನಿಲ್ಲಿಸಲು ಮನವಿ ಮಾಡಿ ಜಿಲ್ಲೆಯನ್ನು ಬಿಟ್ಟೆ.
(ಮುಂದುವರೆಯುವುದು)
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com