ರಾಷ್ಟ್ರೀಯ ಮಟ್ಟದಲ್ಲಿ, ನಮಗೆ ಆಯ್ಕೆ ಮಾಡಿಕೊಳ್ಳಲು ಎರಡು ರಾಜಕೀಯ ರಂಗಗಳಿವೆ. ಒಂದರ ನೇತೃತ್ವ ಕಾಂಗ್ರೆಸ್ ವಹಿಸಿದ್ದರೆ, ಇನ್ನೊಂದರ ಮುಂದಾಳು ಬಿಜೆಪಿ. ಇನ್ನು ರಾಜ್ಯ ರಾಜಕಾರಣದಲ್ಲಂತೂ ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ ಎನ್ನುವುದು ಗೊತ್ತಿರುವಂಥದ್ದೆ. ನಿಜ ಹೇಳಬೇಕೆಂದರೆ ಕಾಂಗ್ರೆಸ್ ಅಥವಾ ಬಿಜೆಪಿಯನ್ನು ಬೆಂಬಲಿಸುವ ಮೂಲಕ ರಾಷ್ಟ್ರೀಯ ರಾಜಕೀಯದಲ್ಲೂ ಇವು ತಮ್ಮ ಛಾಪು ಮೂಡಿಸುತ್ತಿವೆ. ಇನ್ನೂ ಕೆಲವೊಮ್ಮೆ ರಾಷ್ಟ್ರೀಯ ಪಕ್ಷಗಳನ್ನು ಆಡಳಿತದಿಂದ ದೂರವಿಡುವ ಉದ್ದೇಶದಿಂದ ತೃತೀಯ ರಂಗವನ್ನೂ ಇವು ಸ್ಥಾಪಿಸುತ್ತವೆ. ಆದರೆ ಹಿಂದೆ ಇಂತಹ ಪ್ರಯತ್ನಗಳು ನಡೆದಿವೆಯಾದರೂ ರಾಜಕಾರಣಿಗಳ ಅಧಿಕಾರದಾಸೆಯಿಂದಾಗಿ ಆ ಪ್ರಯತ್ನಗಳು ಯಶಸ್ವಿಯಾಗಿಲ್ಲ.
ಹಾಗಿದ್ದರೆ ಪರ್ಯಾಯ ಮಾರ್ಗವೊಂದಕ್ಕೆ ನಮ್ಮಲ್ಲಿ ಜಾಗವಿದೆಯೇ? ಈಗಿರುವ ಪಕ್ಷಗಳಿಗಿಂತಲೂ ಭಿನ್ನವಾಗಿ ಯೋಚಿಸುವ, ನುಡಿದಂತೆ ನಡೆಯುವ, ಪ್ರಜಾ ಕೇಂದ್ರಿತ ಆಡಳಿತ ನೀಡುವ, ಭ್ರಷ್ಟಾಚಾರದ ವಿರುದ್ಧ ಹೋರಾಡುವ, ಆರೋಗ್ಯ, ಶಿಕ್ಷಣಗಳನ್ನೊಳಗೊಂಡಂತೆ ಎಲ್ಲಾ ಸೌಲಭ್ಯಗಳನ್ನು ಎಲ್ಲರಿಗೂ ಸಮವಾಗಿ ಹಂಚಲು ಬಯಸುವ ಪಕ್ಷಕ್ಕೆ ಜಾಗವಿದೆಯೇ? ಇವು ಅರಗಿಸಿಕೊಳ್ಳಲು ಕಷ್ಟವಾಗುವ ಆಶ್ವಾಸನೆಗಳಾದರೂ, ಅಂತಹ ಪಕ್ಷವನ್ನು ಅಧಿಕಾರಕ್ಕೆ ತರಲು ಜನರು ತಯಾರಿದ್ದಾರೆಯೇ? ಸಾಮಾನ್ಯವಾಗಿ ಚುನಾವಣಾ ಪ್ರಕ್ರಿಯೆಯ ಬಗ್ಗೆ ಅಸಡ್ಡೆ ತೋರುವ ನಗರದ ಶಿಕ್ಷಿತ ಮಧ್ಯಮ ವರ್ಗ ಅಂತಹ ಪಕ್ಷವೊಂದು ಬಂದರೆ ಒಂದು ಕೈ ನೋಡೇ ಬಿಡೋಣ ಎಂದು ಸಿದ್ಧರಾಗುತ್ತಿದ್ದಾರೆ.
ಮೇಲೆ ತಿಳಿಸಿದ ಅಂಶಗಳ ಮೇಲೆ ರೂಪುಗೊಂಡಿರುವ ಪಕ್ಷ 'ಲೋಕಸತ್ತಾ ಪಾರ್ಟಿ'. 16 ವರ್ಷಗಳವರೆಗೆ ಐಎಎಸ್ ಅಧಿಕಾರಿಯಾಗಿ ದುಡಿದ ಡಾ. ಜಯಪ್ರಕಾಶ್ ನಾರಾಯಣ್ ಈ ಪಕ್ಷದ ಸ್ಥಾಪನೆಗಾಗಿ ತಮ್ಮ ಕೆಲಸಕ್ಕೇ ತಿಲಾಂಜಲಿ ಇಟ್ಟರು. ಈ ಪಕ್ಷ ಕಳೆದ ಕೆಲವು ವರ್ಷಗಳಿಂದ ರಾಜಕೀಯದಲ್ಲಿ ಪರ್ಯಾಯ ಮಾರ್ಗವನ್ನು ರೂಪಿಸಲು ನಿಷ್ಠೆಯಿಂದ ಶ್ರಮಿಸುತ್ತಿದೆ. ಈ ಪಕ್ಷದ ನೀತಿಗಳು ನಗರದ ವಿದ್ಯಾವಂತ ಮಧ್ಯಮ ವರ್ಗದಿಂದ ಮೆಚ್ಚುಗೆ ಪಡೆಯಿತಾದರೂ, ಚುನಾವಣಾ ಸಮಯದಲ್ಲಿ ಮಾತ್ರ ಅವರುಗಳು ಹಿಂದೆ ಸರಿದು ಮೊದಲಿನಿಂದಲೂ ಅಸ್ತಿತ್ವದಲ್ಲಿರುವ ಪಕ್ಷಗಳಿಗೇ ಮತ ನೀಡಿದರು ಅಥವಾ ಮತದಾನದಿಂದ ದೂರ ಉಳಿದರು. ಕಳೆದ ಕೆಲವು ಚುನಾವಣೆಗಳಲ್ಲಿ ಅದು ಕೆಲವು ಸ್ಥಾನಗಳನ್ನು ಗೆದ್ದುಕೊಳ್ಳಲು ಯಶಸ್ವಿಯಾಯಿತಾದರೂ, ಮಹತ್ತರ ಪರಿಣಾಮವೇನೂ ಉದ್ಭವವಾಗಲಿಲ್ಲ.
ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಚಳವಳಿ ಆರಂಭಿಸಿದಾಗ ಲೋಕಸತ್ತಾ ಪಾರ್ಟಿಯ ಅನೇಕ ಸದಸ್ಯರುಗಳು ಅದಕ್ಕೆ ಕೈಜೋಡಿಸಿ ವಿದ್ಯಾವಂತ ಯುವಕರಲ್ಲಿ ಜಾಗೃತಿ ಮೂಡಿಸಿದ್ದರು. ಈ ಮಹಾಪರಿವರ್ತನೆಯನ್ನು ಕಂಡು ಸರ್ಕಾರ ತತ್ತರಿಸಿಹೋಗಿತ್ತು. ಈಗ ಇದೇ ಪರಿವರ್ತನೆಯ ಲಾಭ ಮಾಡಿಕೊಳ್ಳಲು ಲೋಕಸತ್ತಾ ಪಕ್ಷ ನಿರ್ಧರಿಸಿದೆ. ನಾಗರಿಕ ಕೇಂದ್ರಿತ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಅದು ಜನರಿಗೆ ಭರವಸೆ ನೀಡುತ್ತಿದೆ. ಈ ಬಾರಿ ಅದು ನಗರದ ಪ್ರದೇಶದಲ್ಲಷ್ಟೇ ಅಲ್ಲದೆ, ಗ್ರಾಮೀಣ ಭಾಗದ ಜನರನ್ನೂ ಆಕರ್ಷಿಸಲು ಮುಂದಾಗಿದೆ. ಪ್ರಾಥಮಿಕ ಪ್ರತಿಕ್ರಿಯೆಯಂತೂ ಉತ್ತಮವಾಗಿದೆ. ಆದರೆ ಆ ಪ್ರತಿಕ್ರಿಯೆ ಓಟಿನ ರೂಪ ಪಡೆಯಬಲ್ಲದೇ ಎನ್ನುವ ಪ್ರಶ್ನಗೆ ಉತ್ತರಿಸುವುದು ಬಲು ಕಷ್ಟ.
ಲೋಕಸತ್ತಾ ಪಕ್ಷ ಯಾವುದರಲ್ಲಿ ನಂಬಿಕೆಯಿಟ್ಟಿದೆ ಮತ್ತು ಜನರಿಗೆ ಏನನ್ನು ಕೊಡಲು ಮುಂದಾಗಿದೆ ಎನ್ನುವುದನ್ನು ಮೊದಲು ನೋಡೋಣ. ಅದಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು '"Progress' ಎನ್ನುವ ಪ್ರಣಾಳಿಕೆಯನ್ನು ಅದು ಬಿಡುಗಡೆ ಮಾಡಿದೆ. ಪಕ್ಷ ಕೇವಲ 25-35 ಸ್ಥಾನಗಳಿಗಾಗಿ ಸ್ಪರ್ಧಿಸಲಿದೆ (ಬೆಂಗಳೂರು ನಗರದಲ್ಲಿ ಸುಮಾರು 15-20 ಸ್ಥಾನಗಳು ಮತ್ತು ರಾಜ್ಯದಾದ್ಯಂತ 10-15 ಸ್ಥಾನಗಳು). ಅದಾಗಲೇ ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಅದು ಘೋಷಿಸಿದೆ. ರಾಷ್ಟ್ರ ರಾಜಕೀಯದಲ್ಲಿ ಕರ್ನಾಟಕ ಬದಲಾವಣೆಯ ಅಧಿಕೇಂದ್ರವಾಗಲಿ ಎಂದು ಲೋಕಸತ್ತಾ ಆಶಿಸುತ್ತಿದೆ.
ಪ್ರಣಾಳಿಕೆಯ ಮುಖ್ಯ ಅಂಶಗಳು:
- ಬೆಂಗಳೂರು ಮತ್ತು ರಾಜ್ಯದ ಉಳಿದ ಪ್ರಮುಖ ನಗರಗಳು ತಮ್ಮ ಕಾನೂನು ಮಿತಿಯಲ್ಲಿ ತ್ಯಾಜ್ಯ ನಿರ್ವಹಣೆಮಾಡುವಂತಹ ಕಾನೂನನ್ನು ಜಾರಿಗೆ ತರುವುದು.
- ಮುನಿಸಿಪಲ್ ಕಾರ್ಪೊರೇಷನ್ನಿನ ವಾರ್ಡ್ ಮಟ್ಟದ ಸಮಿತಿ ಸದಸ್ಯರು ಕಾರ್ಪೊರೇಟರ್‌ಗಳಿಂದ ನಾಮನಿರ್ದೇಶಿತರಾಗದೇ ನೇರವಾಗಿ ಚುನಾಯಿತರಾಗುವಂತೆ ಮಾಡುವುದು.-60 ಅಡಿ ಅಥವಾ ಅದಕ್ಕಿಂತ ಅಗಲದ ರಸ್ತೆಗಳಿಗೆ ಹೊಂದಿಕೊಂಡಂತೆ 3 ಮೀಟರ್ ಫುಟ್‌ಪಾತ್‌ಗಳ ಕಡ್ಡಾಯ ನಿರ್ಮಾಣ. ಅಗತ್ಯ ಬಿದ್ದರೆ ಮೋಟಾರು ವಾಹನಗಳು ಸಂಚರಿಸಬಹುದಾದ ಜಾಗವನ್ನು ಗಾತ್ರದಲ್ಲಿ ಕಡಿಮೆ ಮಾಡುವುದು.
- ಎಲ್ಲಾ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ನೋಡಿಕೊಳ್ಳುವುದಕ್ಕಾಗಿ ಆಡಳಿತದಿಂದ ಪ್ರತ್ಯೇಕಿಸಿದ ಮೆಟ್ರೋಪಾಲಿಟನ್ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರುವುದು.
- ರಾಜ್ಯದ ಎಲ್ಲಾ ಹಳ್ಳಿಗಳಿಗೂ 12 ಗಂಟೆಗಳ ತಡೆರಹಿತ 3 ಫೇಸ್ ವಿದ್ಯುತ್ ಪೂರೈಕೆ.
- ಯೋಜನಾ ಅಧಿಕಾರಿಗಳು ಇನ್ನು ಮುಂದೆ ಭೂಸ್ವಾಧೀನ ಪಡಿಸಿಕೊಳ್ಳದಂತೆ ಮಾಡುವುದು. ಅಂದರೆ ಕೇವಲ ಜಂಟಿ ಅಭಿವೃದ್ಧಿಗೆ ಮಾತ್ರ ಅನುಮತಿ ಕೊಡುವುದು. ಹಾಗೆ ಮಾಡುವುದರಿಂದ ರೈತರಿಗೂ ಲಾಭವಾಗುತ್ತದೆ.
- ಮಹಿಳೆಯರು ಮತ್ತು ಪುರುಷರ ಸಮಾನ ಕೆಲಸಕ್ಕೆ ಸಮಾನ ವೇತನ.
- ಪ್ರತಿ ಪೊಲೀಸ್ ಠಾಣೆಯಲ್ಲೂ ಕನಿಷ್ಠ ಒಬ್ಬ ಮಹಿಳಾ ಅಧಿಕಾರಿಯನ್ನು ಕಡ್ಡಾಯವಾಗಿ ನೇಮಿಸುವುದು.
- ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸಮಗ್ರ ಯೋಜನೆಯೊಂದನ್ನು ರೂಪಿಸುವುದು.
- ಹೆಣ್ಣುಮಕ್ಕಳಿಗೆ ಎಲ್ಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕನಿಷ್ಠ 30 ಪ್ರತಿಶತದಷ್ಟು ಪ್ರವೇಶ.
- ಎಲ್ಲಾ ಬಡ ಜನರನ್ನು ಒಳಗೊಳ್ಳುವಂತಹ ಸಮಗ್ರ ಆರೋಗ್ಯ ವಿಮೆ ಯೋಜನೆಯನ್ನು ಮಾನ್ಯತೆ ಪಡೆದ ಆರೋಗ್ಯ ರಕ್ಷಣಾ ಸಂಸ್ಥೆಗಳೊಂದಿಗೆ ಸೇರಿ ಜಾರಿಗೆ ತರುವುದು.
- ಅನ್ಯಭಾಷಿಕರಿಗಾಗಿ ಕನ್ನಡ ಕಲಿಕೆಯ ಕೇಂದ್ರಗಳನ್ನು ತೆರೆಯುವುದು. ಆ ಮೂಲಕ ದಿನನಿತ್ಯದ ಸಂವಹನದಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚಾಗುವುದಕ್ಕೆ ಪ್ರೋತ್ಸಾಹಿಸುವುದು.
- ಎಲ್ಲಾ ಮಾಹಿತಿ ಮತ್ತು ದಸ್ತಾವೇಜು ಸೇವೆಗಾಗಿ ಕಡ್ಡಾಯವಾಗಿ 'ಸಕಾಲ' ಯೋಜನೆ.
- ಸರ್ಕಾರಿ ಕಚೇರಿಗಳಿಂದ ದಳ್ಳಾಳಿಗಳನ್ನು ಹೊರದಬ್ಬುವುದು. ಸರ್ಕಾರಿ ನೌಕರರಲ್ಲಿಯೇ 'ಅಸಿಸ್ಟೆನ್ಸ್(ನೆರವು) ಅಧಿಕಾರಿಗಳನ್ನು' ನೇಮಕ ಮಾಡುವುದು.
- ಲೋಕಾಯುಕ್ತ ಸಂಸ್ಥೆಗೆ ಸಂಪೂರ್ಣ ಅಧಿಕಾರವನ್ನು ಖಚಿತಪಡಿಸಲು ಶಾಸನವೊಂದನ್ನು ರೂಪಿಸುವುದು.
ಈ ಎಲ್ಲಾ ಭರವಸೆಗಳು ಹಾಳೆಯ ಮೇಲೆ ಉತ್ತಮವಾಗಿಯೇ ಕಾಣುತ್ತಿವೆ. ಇವುಗಳನ್ನು ಕಾರ್ಯರೂಪಕ್ಕೆ ತರಬಹುದು ಎಂದೂ ಅನ್ನಿಸುತ್ತದೆ. ಆದರೆ ಮತದಾರರ ಬಗ್ಗೆ ಏನೂ ಹೇಳುವುದು ಸಾಧ್ಯವಿಲ್ಲ. ಹಾಗೆ ನೋಡಿದರೆ ಅವರು ಗೊಂದಲಗೊಂಡಂತೆ ಕಾಣುತ್ತಿದ್ದಾರೆ. ನಿಜಕ್ಕೂ ಇಂತಹ ಹೊಸ ಪರ್ಯಾಯವನ್ನು ಅಪ್ಪಿಕೊಳ್ಳಲು ದೇಶ ಸಿದ್ಧವಿದೆಯಾ? ಹೌದು ಮತ್ತು ಇಲ್ಲ! ಉತ್ತರಕ್ಕಾಗಿ ಚುನಾವಣೆಯವರೆಗೂ ಕಾದು ನೋಡಲೇಬೇಕು.
ಕೊನೆಯ ಗುಟುಕು: ಕಚ್‌ನಲ್ಲಿ(ಗುಜರಾತ್), ಭುಜ್ ಮತ್ತು ವೈಟ್ ರಣ್(ಧೋರ್ಡೋ)ದ ನಡುವಿನ ಹೈವೆಯಲ್ಲಿ ಸಾಗುವಾಗ ಫಲಕವೊಂದು ಎದುರಾಗುತ್ತದೆ, 'TROPIC OF CANCER IS PASSING FROM THIS PLACE' ಎಂದು ಅದರ ಮೇಲೆ ಬರೆಯಲಾಗಿದೆ. ಆ ಭಾಗದಲ್ಲಿ ವಾಸಿಸುವ ಜನರು ಆ ಬೋರ್ಡಿನತ್ತ ಒಮ್ಮೆಯೂ ತಿರುಗಿ ನೋಡುವುದಿಲ್ಲ. ಅದರ ಮಹತ್ವವನ್ನು ಅವರು ಅರಿಯರು. ಭಾರತದ ಭೌಗೋಳಿಕ ಸಮೀಕ್ಷಾ ತಂಡ ಬಹುಶಃ ಆ ಬೋರ್ಡನ್ನು ಹಾಕಿರಬಹುದು. ಭೂಗೋಳದಲ್ಲಿ ಆಸಕ್ತಿ ಇದ್ದವರು ಕಚ್‌ಗೆ ಭೇಟಿ ನೀಡಿದಾಗ ಆ ಫಲಕವನ್ನು ನೋಡುವುದನ್ನು ಮಾತ್ರ ಮರೆಯದಿರಿ.
-ಎಚ್.ಎಸ್. ಬಲರಾಮ್
hsbalram@gmail.com