ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅಣ್ಣಾಗೆ ಜೈ ಅಂದವರು ಮತಗಟ್ಟೆಗೂ ಹೋಗಿ

Mainashree
Updated On : 6 Mar 2013, 12:01 pm

ಇನ್ನೇನು ಆರಂಭವಾಗುತ್ತಿದೆ ಚುನಾವಣಾ ಪರ್ವಕಾಲ. ಸದ್ಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ. ಕೆಲ ತಿಂಗಳಲ್ಲೇ ವಿಧಾನಸಭಾ ಚುನಾವಣೆ. ಆಗಲೋ ಈಗಲೋ ಎನ್ನುತ್ತಿರುವ ಕೇಂದ್ರ ಸರ್ಕಾರದ ಪತನ, ನಂತರ 16ನೇ ಲೋಕಸಭೆಗಾಗಿ ಚುನಾವಣೆ. ಅನೈತಿಕ ರಾಜಕಾರಣಕ್ಕೆ ಸಾಕ್ಷಿಯಾಗಿ ಕಳೆದ ಐದು ವರ್ಷಗಳಲ್ಲಿ ಎದುರಿಸಿದ ಉಪಚುನಾವಣೆಗಳೆಂಬ ನಾಟಕ ಮರೆಯಾಗುವ ಮುನ್ನವೇ ಸಾಲು ಸಾಲು ಚುನಾವಣೆಗಳು ಕರ್ನಾಟಕದ ಮತದಾರನ ಮುಂದೆ ಬರಲಿವೆ.  
ಅದು 05 ಏಪ್ರಿಲ್ 2011. ಅಣ್ಣಾ ಹಜಾರೆ ಬಲಿಷ್ಠ ಲೋಕಪಾಲ ಜಾರಿಗೆ ಆಂದೋಲನ ಶುರು ಮಾಡಿದ ದಿನ. ಅದರಿಂದಾಚೆ ಅವರ ಸತ್ಯಾಗ್ರಹಕ್ಕೆ ಸಮಸ್ತ ಭಾರತ ಪುಳಕಗೊಂಡಿತು. ತಮ್ಮದೇ ಧ್ವನಿಯನ್ನು ಹಜಾರೆ ಪ್ರತಿಧ್ವನಿಸುತ್ತಿದ್ದಾರೆ ಎಂಬಂತೆ ಆಡಳಿತ ವ್ಯವಸ್ಥೆಯಿಂದ ಬೇಸತ್ತವರೆಲ್ಲ ದೇಶದ ಮೂಲೆ ಮೂಲೆಗಳಲ್ಲಿ ಧರಣಿ ಕುಳಿತರು. ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂಬಷ್ಟರಮಟ್ಟಿಗಿನ ಉತ್ಕರ್ಷವನ್ನು ಕಟ್ಟಿಕೊಟ್ಟಿತದು. ಇದಕ್ಕೆ ಕರ್ನಾಟಕವೇನೂ ಹೊರತಾಗಿರಲಿಲ್ಲ. ಅಂದು ಬೀದಿಗಿಳಿದವರಲ್ಲಿ ಮಧ್ಯಮ ವರ್ಗದ ಜನತೆ, ಕಾಲೇಜು ವಿದ್ಯಾರ್ಥಿಗಳು, ನಗರ ಪಟ್ಟಣಗಳಲ್ಲಿ ವಾಸವಿರುವವರೇ ಹೆಚ್ಚು. ಕೆಲ ರಾಷ್ಟ್ರಗಳಲ್ಲಿರುವಂತೆ ಪ್ರಜೆಗಳಿಗೆ ್ಠಜ್ಛಛಟಟ (ಹಿಂದಕ್ಕೆ ಕರೆಯಿಸಿಕೊಳ್ಳುವುದು) ನಂತಹ ಅವಕಾಶವಿದ್ದಿದ್ದರೆ ಕೇಂದ್ರ ಸಚಿವ ಸಂಪುಟದಲ್ಲಿದ್ದು ತಿಂದು ತೇಗುತ್ತಿರುವ ಮಂತ್ರಿಗಳು, ಹಾಗೆ, ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಬಡಬಡಾಯಿಸುತ್ತಿರುವ ಅದೆಷ್ಟೋ ಜನತಾ ಪ್ರತಿನಿಧಿಗಳು ರಾಜಿನಾಮೆ ನೀಡಬೇಕಾಗುತ್ತಿತ್ತೇನೋ...  ಆದರೆ ನಮ್ಮಲ್ಲಿ ಅದಕ್ಕೆ ಅವಕಾಶವಿಲ್ಲ.  ಹಾಗಾಗಿಯೇ ಎಷ್ಟೇ ಹೋರಾಟಗಳು ನಡೆದರೂ ಚುನಾವಣೆಯೊಂದೇ ರಹದಾರಿ. ಮತದಾನವೊಂದೇ ಮಂತ್ರದಂಡ. ನಮ್ಮಲ್ಲಿ ಚುನಾವಣೆಗು ಮುನ್ನ ಬಡವರ ಬಂಧು, ಸ್ನೇಹಜೀವಿ, ದೀನದಲಿತರ ಆಶಾಕಿರಣ, ಜನಪ್ರಿಯ ನಾಯಕ, ಯುವಕರ ಕಣ್ಮಣಿ ಮುಂತಾದ ಸವೆದು ಹೋದ ಪದಗಳನ್ನು ಹೊತ್ತು ಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿವ ಜನಪ್ರತಿನಿಧಿಗಳಿಗೆ ಕಿವಿ ಕೇಳದಂತಾಗುವುದು ಸಾಮಾನ್ಯ ಕಾಯಿಲೆಯಾಗಿದೆ.  ಪುನಃ ಅವರುಗಳ ಕಿವಿ ಕೇಳಬೇಕಾದರೆ ಚುನಾವಣೆಯೊಂದೇ ಮದ್ದು. ವ್ಯವಸ್ಥೆಯ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುವವರಿಗೂ ಇರುವುದೊಂದೇ ದಾರಿ ಅದು ಮತದಾನ. ಇದನ್ನು ಹೊರತುಪಡಿಸಿ ವ್ಯವಸ್ಥೆ ಬದಲಾಗಲಿ ಎಂದು ಅಲವತ್ತುಕೊಂಡರೆ ಕೇಳುವವರು ಇಲ್ಲದಂತಾಗುತ್ತದೆ.
ಆದರೆ ಮತದಾನದಲ್ಲಿ ಜನರ ಭಾಗಿತ್ವ ಶೇ.60-70ರ ಆಜುಬಾಜಿನಲ್ಲೇ ಕಳೆದು ಹೋಗುತ್ತಿರುವುದೇ ವ್ಯವಸ್ಥೆ ಇನ್ನೂ ನೆಲೆ ಗಟ್ಟಿಸಿಕೊಳ್ಳಬೇಕಾದ ತುರ್ತು ಅವಶ್ಯಕತೆಯನ್ನು ಎತ್ತಿ ತೋರಿಸುತ್ತಿದೆ. ಡೇವಿಡ್ ಬಟ್ಲರ್ ಅವರು ತಮ್ಮ 'ಇಂಡಿಯಾ ಡಿಸೈಡ್ಸ್: ಎಲೆಕ್ಷನ್ಸ್ 1952-55' ಎಂಬ ಕೃತಿಯಲ್ಲಿ ಭಾರತ ಮತ್ತು ಇದರ ರಾಜಕಾರಣಿಗಳು ಅನೇಕ ವೈಫಲ್ಯಗಳನ್ನು ಎದುರಿಸಿದ್ದಾರೆ. ಆದರೆ ಭಾರತದಲ್ಲಿನ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಯಶಸ್ಸನ್ನು ಯಾರೂ ಶಂಕಿಸುವಂತಿಲ್ಲ. ಅನೇಕ ದೇಶಗಳು ತಮ್ಮ ಸರ್ಕಾರಗಳನ್ನು ಕ್ಷಿಪ್ರ ಕ್ರಾಂತಿಗಳಿಂದ ಮಾತ್ರ ಬದಲಾಯಿಸಬಲ್ಲವು.  ಆದರೆ ಭಾರತದಲ್ಲಿ ರಾಜ್ಯ ಮತ್ತು ಕೇಂದ್ರಗಳೆರಡರಲ್ಲೂ ಕೂಡ ಜನರ ಮತದಾನವೇ ಸರ್ಕಾರಗಳನ್ನು ಬದಲಾಯಿಸುತ್ತದೆ ಅಥವಾ ಸ್ಥಿರಪಡಿಸುತ್ತದೆ. 1977ರಲ್ಲಿ ಭಾರತದ ಮತದಾರ ಸಮುದಾಯವು ಒಂದು ಸರ್ಕಾರವನ್ನು ಕಿತ್ತೆಸೆಯಿತು. ಆದರೆ 1980ರಲ್ಲಿ ಮರಳಿ ಅದೇ ಸರ್ಕಾರವನ್ನು ಅಧಿಕಾರದ ಗುದ್ದುಗೆಯಲ್ಲಿ ಕೂರಿಸಿದರು ಎಂದು ಜನತಂತ್ರ ವ್ಯವಸ್ಥೆಯ  ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ.   
ಆರಂಭದ ದಶಕಗಳಲ್ಲಿ ಮತದಾನದ ಪ್ರಮಾಣ ಏರಿಕೆ ಕಂಡರೂ ನಂತರ ಯಥಾಸ್ಥಿತಿ ಕಾಯ್ದುಕೊಂಡು ಬರುತ್ತಿದೆ. ನೆಹರೂ ನಾಯಕತ್ವದ 1952ರ ಲೋಕಸಭಾ ಚುನಾವಣೆಯಲ್ಲಿ (488 ಕ್ಷೇತ್ರಗಳು) ಶೇಕಡ 45.7 ಮತದಾರರು ಭಾಗವಹಿಸಿದ್ದರು.  ನಂತರದ 1962ರ ಚುನಾವಣೆಯಲ್ಲಿ 55.4 (494 ಕ್ಷೇತ್ರಗಳು)ರಷ್ಟು  ಮತದಾನ ನಡೆದಿದ್ದರೆ, ಭಾರತದ ಪ್ರಜಾಪ್ರಭುತ್ವದಲ್ಲಿ ಪರ್ವಕಾಲ ಎಂದು ಬಣ್ಣಿಸಲ್ಪಟ್ಟಿದ್ದು 1967ರ ಚುನಾವಣೆ. ಈ ಚುನಾವಣೆಯಲ್ಲಿ ಶೇ.61.30ರಷ್ಟು ಮತದಾನ ನಡೆದಿತ್ತು.  ತುರ್ತು ಪರಿಸ್ಥಿತಿ ನಂತರದ 1977ರ ಚುನಾವಣೆಯಲ್ಲಿಯೂ ಶೇ.60.5ರಷ್ಟು ಮತದಾನ ನಡೆದಿತ್ತು.  2009ರ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಶೇ.58.19ರಷ್ಟು ಮತದಾನವಾಗಿದೆ.
ಇದೇ ಪರಿಸ್ಥಿತಿ ಸ್ಥಳೀಯ ಸಂಸ್ಥೆಗಳು, ವಿಧಾನಸಭೆಗೆ ನಡೆಯುವ ಚುನಾವಣೆಗಳಲ್ಲೂ ಕಂಡು ಬರುತ್ತಿದೆ. ಮತದಾನದಲ್ಲಿ ಹೆಚ್ಚಳವಾದರೆ, ಇರುವವರಲ್ಲೇ ಉತ್ತಮರನ್ನು ಆಯ್ಕೆ ಮಾಡಬಹುದಾಗಿದೆ. ಮತಗಟ್ಟೆಗಳತ್ತ ಮತದಾರ ಬಾರದಿರುವುದನ್ನು ಪ್ರಜಾಸತ್ತಾತ್ಮಕ ಕೊರತೆ ಎನ್ನುತ್ತಾರೆ ವಿಶ್ಲೇಷಕರು. ಚುನಾವಣೆಯ ನಂತರದಲ್ಲಿ ವಿಜಯ ಸಾಧಿಸುವವರು ಒಟ್ಟಾರೆ ಜನಾಭಿಪ್ರಾಯ ಎಂದು ಬೀಗುತ್ತಾರೆ. ಆದರೆ ಮತದಾನವಾಗುವುದೇ ಶೇ.60-70ರಷ್ಟು, ಅಂದರೆ ಅರ್ಧಕ್ಕಿಂತ ತುಸು ಹೆಚ್ಚು. ಇತ್ತೀಚೆಗಂತೂ ಸ್ಪರ್ಧಿಸುವ ಅಭ್ಯರ್ಥಿಗಳೂ ಹೆಚ್ಚಿದ್ದಾರೆ. ಹಾಗಾಗಿ ಶೇ.20ರಿಂದ 40ರಷ್ಟು ಜನರ ಒಲವು ಗಳಿಸುವವರೂ ಬಹುಮತ ಪಡೆದಂತಾಗುತ್ತಿದೆ. ಹಕ್ಕು ಮಾತ್ರವೆಂದು ಪರಿಗಣಿಸದೇ, ಪ್ರಜೆಗಳ ಪ್ರಭುತ್ವಕ್ಕೆ ಕೀಲಿಕೈ ಆಗಿರುವ ಮತದಾನ ಪ್ರಕ್ರಿಯೆಯಲ್ಲಿ ಮತ ಹಾಕುವುದು ಜವಾಬ್ದಾರಿಯುತ ಕರ್ತವ್ಯವೆಂದು ಅರಿತುಕೊಳ್ಳುವ ಅವಶ್ಯಕತೆಯೂ ಭಾರತೀಯರ ಮುಂದಿದೆ.
ಅದರಲ್ಲೂ ಅಣ್ಣಾ ಹಜಾರೆ ಹೋರಾಟದಲ್ಲಿ ಬೆಂಬಲದ ಮಹಾಪೂರವನ್ನೇ ಹರಿಸಿದ್ದ ಕನ್ನಡಿಗರಿಗೆ ತಮ್ಮ ಅಸ್ತ್ರ ಪ್ರಯೋಗಿಸುವ ಕಾಲ ಬಂದಿದೆ. ಎದುರಿಗಿರುವುದು ಸ್ಥಳೀಯ ಸಂಸ್ಥೆಗಳ ಚುನಾವಣೆ. 4,976 ವಾರ್ಡ್‌ಗಳಿಗೆ 10,482 ಮತಗಟ್ಟೆಗಳ ಮೂಲಕ 85,32,931 ಮತದಾರರು ತಮ್ಮ ಹಕ್ಕನ್ನು ಚಲಾಯಿಸಬಹುದಾಗಿದೆ.  7 ಮಹಾನಗರ ಪಾಲಿಕೆಗಳು, 43 ನಗರಸಭೆಗಳು, 93 ಪುರಸಭೆಗಳು, 65 ಪಟ್ಟಣ ಪಂಚಾಯಿತಿ ಸೇರಿದಂತೆ ಒಟ್ಟು 208 ನಗರ ಸ್ಥಳೀಯ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಆದೇಶ ಮತ್ತು ಸಂವಿಧಾನದ (324ನೇ ಅನುಚ್ಛೇದ) ಆಶಯದಂತೆ ಚುನಾವಣಾ ಆಯೋಗ ಚುನಾವಣೆ ಪ್ರಕ್ರಿಯೆ ನಡೆಸುತ್ತಿದೆ.
ಜನಪರವಾದ ಮಸೂದೆಗಳು ಮಂಡನೆಯಾಗಲು ಅಣ್ಣಾ ಹಜಾರೆಯಂತಹವರು ಬೀದಿ ಬೀದಿಗಳಲ್ಲಿ ಉಪವಾಸ ಕುಳಿತರೂ, ಮಸೂದೆ ಕಾಯಿದೆಯಾಗುವ ಖಾತ್ರಿ ಇರುವುದಿಲ್ಲ. ಆದರೆ ರಾಜಕೀಯ ಪಕ್ಷಗಳಿಗೆ ಅನುಕೂಲವಾಗುವ ಮಸೂದೆಗಳು ಎಲ್ಲಾ ಎಲ್ಲೆಗಳನ್ನೂ ಮೀರಿ ಕಾಯಿದೆಯಾಗುವತ್ತ ದಾಪುಗಾಲಿಡುವುದು ಸರ್ವೇ ಸಾಮಾನ್ಯವಾಗಿದೆ. ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರ ಕಾನೂನು(ತಿದ್ದಪಡಿ) ಮಸೂದೆ ಇದಕ್ಕೆ ಸ್ಪಷ್ಟ ಉದಾಹರಣೆ. ಕಳೆದ ಫೆಬ್ರವರಿ 12ರಂದು ಮಂಗಳವಾರ ಅಂಗೀಕಾರವಾದದ್ದು, ಮರುದಿನವೇ ಅಂದರೆ ಬುಧವಾರದ ಬೆಳಿಗ್ಗೆ 11.30ಕ್ಕೆ ರಾಜ್ಯಪಾಲರ ಸಹಿಗಾಗಿ ಕಾದುಕುಳಿತಿರುತ್ತದೆ. ರಾಜ್ಯಪಾಲರು ಅಂಕಿತ ಹಾಕಬೇಕೆಂಬುದು ಎಲ್ಲಾ ರಾಜಕೀಯ ಪಕ್ಷಗಳ ಮಹದಾಸೆಯಾಗಿತ್ತು. ಇದು ಅಂಗೀಕರಿಸಲು ಯೋಗ್ಯವಾದ ಮಸೂದೆಯಲ್ಲ. ಹೀಗಾಗಿ ಇದನ್ನು ತಿರಸ್ಕರಿಸಲಾಗಿದೆ ಎಂದು ಉಲ್ಲೇಖಿಸಿ ರಾಜ್ಯಪಾಲರು ಸಹಿ ಹಾಕಲು ನಿರಾಕರಿಸಿದ್ದು, ಸಮಪಾಲು-ಸಮಬಾಳು ಸೂತ್ರ ಅನುಸರಿಸಿದ ಎಲ್ಲಾ ರಾಜಕೀಯ ಪಕ್ಷಗಳಿಗೆ ನುಂಗಲಾರದ ತುತ್ತಾಗಿದ್ದಂತೂ ಸತ್ಯ. ಎಷ್ಟೇ ಪ್ರಹಸನ ಪಟ್ಟರೂ ಚುನಾವಣೆ ಮುಂದೂಡುವ ಪ್ರಯತ್ನ ಕೈಗೂಡಲಿಲ್ಲ. ಚುನಾವಣಾ ಆಯೋಗಕ್ಕೆ ಪೂರ್ಣ ಸಹಕಾರ ನೀಡುವಂತೆ ಸರ್ವೋಚ್ಛ ನ್ಯಾಯಾಲಯವೇ ತರಾಟೆಗೆ ತೆಗೆದುಕೊಳ್ಳುವಂತಾಯಿತು.
ಸ್ಥಳೀಯ ಸಂಸ್ಥೆ ಚುನಾವಣೆಯೆಂದು ನಿರ್ಲಕ್ಷಿಸುವವರೇ ಹೆಚ್ಚಿರುತ್ತಾರೆ. ಆದರೆ ಇಲ್ಲಿ ಆಯ್ಕೆಯಾಗುವವರೂ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಉತ್ತಮರ ಆಯ್ಕೆ ಅಗತ್ಯವಿದೆ. ಜೊತೆಗೆ ತಮ್ಮಿಚ್ಛೆಯಂತೆ ಬದಲಾಗುವ ರಾಜಕಾರಣಿಗಳಿಗೆ ಕಡಿವಾಣ ಹಾಕುತ್ತಿರುವ ಕೆಲವೇ ಕೆಲವು ಪ್ರಾಮಾಣಿಕ ಅಧಿಕಾರಿಗಳಿಗೂ ನೈತಿಕ ಬೆಂಬಲ ನೀಡಿದಂತಾಗುತ್ತದೆ.  85,32,931 ಮತದಾರರು ಪಾಲ್ಗೊಳ್ಳಬಹುದಾದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಮತದಾನವಾದರೆ ದಿಟ್ಟ ಕ್ರಮ ಕೈಗೊಳ್ಳುವ ಅಧಿಕಾರಿಗಳಿಗೂ ನೈತಿಕ ಬೆಂಬಲ ನೀಡಿದಂತಾಗುತ್ತದೆ. ಎಷ್ಟೇ ಒತ್ತಡವಿದ್ದರೂ ಸಂವಿಧಾನದ ಆಶಯವನ್ನು ಎತ್ತಿ ಹಿಡಿದ ಚುನಾವಣಾ ಆಯುಕ್ತ ಸಿ.ಆರ್.ಚಿಕ್ಕಮಠ ಅವರೂ ಅಂತಹ ಅಧಿಕಾರಿಗಳ ಸಾಲಿನಲ್ಲಿ ನಿಲ್ಲುತ್ತಾರೆ.
ಐತಿಹಾಸಿಕ ದಾಖಲೆ ಬರೆದ ಹಗರಣಗಳು, ಸದನದಲ್ಲಿ ಬ್ಲೂಫಿಲ್ಮ್, ಲೋಕಾಯುಕ್ತದಲ್ಲಿ ಸರಮಾಲೆಯಷ್ಟು ಪ್ರಕರಣಗಳು, ಅಭದ್ರತೆಯ ಗೂಡಿನಲ್ಲಿ ಮಹಿಳೆಯರು ಇವೆಲ್ಲದರ ಬಗ್ಗೆ ಅಸಹನೆ, ಆಕ್ರೋಶ ವ್ಯಕ್ತಪಡಿಸಿದವರೆಲ್ಲ ಮತದಾನದಲ್ಲಿ ಪಾಲ್ಗೊಳ್ಳಲೇಬೇಕು. ಅಣ್ಣಾ ಹಜಾರೆ ಹೋರಾಟದ ಕಾವು ಇನ್ನೂ ತಣ್ಣಗಾಗಿಲ್ಲ.  ಇಷ್ಟೆಲ್ಲಾ ಇದ್ದು, ಮತದಾನ ಪ್ರಕ್ರಿಯೆಯಲ್ಲಿ ಹಳೆಯ ರಾಗವೇ ಪುನರಾವರ್ತಿತವಾದರೆ ಕಡ್ಡಾಯ ಮತದಾನವೊಂದೇ ಪರಿಹಾರ.

- ಗೋಪಾಲಕೃಷ್ಣ ಕೆ. ಸಿ.
ಹವ್ಯಾಸಿ ಲೇಖಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement