ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಯುರೋಪ್ ಕುಸಿಯುತ್ತಿದೆ, ಪರಿಣಾಮ ನಮಗೇನಿದೆ?

Mainashree
Updated On : 6 Mar 2013, 12:00 pm

ದಿನಗಳೆದಂತೆ ಯುರೋಪಿನ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟು ಉಲ್ಬಣಿಸುತ್ತಲೇ ಸಾಗಿದೆ. 2008ರಲ್ಲಿ ಟಿವಿ ವಾಹಿನಿಯೊಂದು ನನ್ನನ್ನು ಈ ಕುರಿತು ಪ್ರಶ್ನಿಸಿತ್ತು. ಯುರೋಪಿನ ಅರ್ಥವ್ಯವಸ್ಥೆ ಚೇತರಿಸಿಕೊಳ್ಳುವುದಕ್ಕೆ ಎಷ್ಟು ಸಮಯ ಹಿಡಿಯಬಹುದು ಎಂದು ವಿಚಾರಿಸಿದಾಗ ನಾನು 40 ಕ್ವಾರ್ಟರ್ಸ್ ಎಂದು ಪ್ರತಿಕ್ರಿಯಿಸಿದ್ದೆ. ಆ ನಂತರ ಯಾವತ್ತೂ ಅವರು ನನ್ನ ಸಂದರ್ಶನ ಬಯಸಲಿಲ್ಲ. ಆದರೆ ಈಗ ಭವಿಷ್ಯ ನುಡಿಯುವುದಾದರೆ ಅದು ಚೇತರಿಸಿಕೊಳ್ಳುವುದೇ ಇಲ್ಲವೇನೋ ಎಂದೇ ಹೇಳಬೇಕಾಗುತ್ತದೆ.
ಭಾರತವು ಪಾಶ್ಚಿಮಾತ್ಯ ನಾಗರಿಕತೆಯ ಬೂದಿಯ ಮೇಲೆ ಎದ್ದು ನಿಲ್ಲುತ್ತದೆ ಎಂದು ಮಹರ್ಷಿ ಅರವಿಂದರು ಹೇಳಿದ್ದರು. ಆ ಮಾತು ನಿಜವಾಗಲಿದೆಯೇನೋ ಎಂದು ಅನ್ನಿಸುತ್ತಿದೆ. ಬಹಳ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಈ ಬಗೆಯ ಪಾಶ್ಚಿಮಾತ್ಯ ಹಿಡಿತದ ಅವಧಿ 200 ವರ್ಷಗಳದ್ದಷ್ಟೇ ಎಂಬುದು. ಆ್ಯಂಗಸ್ ಮ್ಯಾಡಿಸನ್ ಎಂಬ ಅಧ್ಯಯನಕಾರ ಹೇಳುವಂತೆ 1820ರ ಸುಮಾರಿಗೆ ಭಾರತ ಮತ್ತು ಚೀನಾಗಳ ನಿವ್ವಳ ಆಂತರಿಕ ಉತ್ಪನ್ನ ಜಗತ್ತಿನ ಶೇಕಡ 50ರಷ್ಟಿತ್ತು. ಹೀಗಾಗಿ ಭಾರತ ಮತ್ತು ಚೀನಾಗಳನ್ನು ಅಭ್ಯುದಯ ಹೊಂದುತ್ತಿರುವ ರಾಷ್ಟ್ರಗಳು ಎಂದು ಕರೆಯುವುದು ತಪ್ಪಾಗುತ್ತದೆ. ಅವು ತಮ್ಮ ವಾಸ್ತವದ ವೈಭೋಗಕ್ಕೆ ಮರಳುತ್ತಿರುವ ದೇಶಗಳು! 1990ರಲ್ಲಿ ಖರೀದಿ ಸಾಮರ್ಥ್ಯವನ್ನಾಧರಿಸಿದ ಜಾಗತಿಕ ಜಿಡಿಪಿಯಲ್ಲಿ ಜಿ-7 ರಾಷ್ಟ್ರಗಳ ಪಾಲು ಶೇಕಡ 51ರಷ್ಟಿತ್ತು. ಅಭ್ಯುದಯ ಹೊಂದುತ್ತಿರುವ ಮಾರುಕಟ್ಟೆ ರಾಷ್ಟ್ರಗಳ ಪಾಲು ಶೇ. 36 ಆಗಿತ್ತು. ಆದರೆ 2012 ಬರುವಷ್ಟರಲ್ಲಿ ಎಲ್ಲವೂ ಬುಡಮೇಲಾಗಿತ್ತು. ಹೀಗಾಗಿ ಪಾಶ್ಚಿಮಾತ್ಯರ ಪಾರಮ್ಯ ಎಂಬುದು ಮಿಥ್ಯೆ ಎಂದಾಯಿತು.
ಯುರೋಪ್ ಮೂರು ಬಗೆಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಆರ್ಥಿಕ, ಜನಸಂಖ್ಯೆ ಸಂಬಂಧಿ ಹಾಗೂ ನಾಗರಿಕತೆ ಸಂಬಂಧಿ ಸಂಕಷ್ಟಗಳು. ಈ ಬಿಕ್ಕಟ್ಟುಗಳಿಂದ ಹೊರಬರುವ ಪರಿಸ್ಥಿತಿಯಲ್ಲೂ ಅದಿಲ್ಲ. ಈ ಯಾವ ಸಮಸ್ಯೆಗಳೂ ಇತ್ತೀಚಿನವಲ್ಲ. ಅವು ದೀರ್ಘ ಅವಧಿಯಿಂದ ರೂಪುಗೊಳ್ಳುತ್ತಾ ಸಾಗಿ ಈಗ ಮಹಾ ವಿಪತ್ತಿನ ರೀತಿ ಸಂಭವಿಸಿವೆ.
ಜಿಡಿಪಿ ದರದೊಂದಿಗೆ ಅವುಗಳ ಸಾಲದ ಪ್ರಮಾಣವನ್ನು ಹೋಲಿಸಿದಾಗ ಬಹುಪಾಲು ಐರೋಪ್ಯ ರಾಷ್ಟ್ರಗಳ ಸ್ಥಿತಿ ಚಿಂತಾಜನಕವಾಗಿರುವುದು ಕಂಡುಬರುತ್ತದೆ. ನಮ್ಮದೇ ಬ್ರಿಟನ್‌ನ ಪ್ರಮಾಣ ಗಣನೆಗೆ ತೆಗೆದುಕೊಂಡರೆ ಅದು ಶೇಕಡ 500ರಷ್ಟಿದೆ. ಇಲ್ಲಿ ನಮ್ಮದೇ ಬ್ರಿಟನ್ ಎಂದು ಸಂಬೋಧಿಸಿರುವುದು ಏಕೆ ಎಂಬ ಪ್ರಶ್ನೆ ಏಳಬಹುದೇನೋ. ಏಕೆಂದರೆ ಇಂದಲ್ಲ ನಾಳೆ ಅವರ ದೇಶವನ್ನು ಆಳುವಲ್ಲಿ ನಾವವರಿಗೆ ಸಹಕರಿಸಲಿದ್ದೇವೆ. ಸಾಲದ ವಿಷಯದಲ್ಲಿ ಮೂರು ಮುಖ್ಯ ಭಾಗಗಳಿವೆ. ಸರ್ಕಾರದ ಸಾಲ, ಉದ್ಯಮ ಸಾಲ ಹಾಗೂ ಗೃಹ ಸಾಲಗಳು. ಈ ಮೂರರಲ್ಲಿ ಗೃಹಸಾಲ ಅಥವಾ ಮನೆಬಳಕೆಗೆ ಮಾಡಿದ ಸಾಲ ಎಂಬುದು ಯುರೋಪಿನ ಹೆಚ್ಚಿನ ರಾಷ್ಟ್ರಗಳಲ್ಲಿ ಜಿಡಿಪಿಯ 80ರಿಂದ 100 ಶೇಕಡಕ್ಕೆ ಹೋಗಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಕಾರಣವೂ ಬಹಳ ಸರಳವಾಗಿದೆ. ಭಾರತದಲ್ಲಿರುವಂತೆ ಅಮೆರಿಕ ಹಾಗೂ ಯುರೋಪಿನ ಮನೆವಾರ್ತೆಯಲ್ಲಿ ಶಬ್ದವೊಂದಿಲ್ಲ. ಆ ಶಬ್ದ 'ಉಳಿತಾಯ'. ಅವರು ಸಾಲದಲ್ಲೇ ಜೀವಿಸುತ್ತಾರೆ, ಸಾಲವೇ ಅವರ ಜೀವನವನ್ನು ನಿರ್ದೇಶಿಸುತ್ತದೆ.
ಪಾಶ್ಚಿಮಾತ್ಯರ ಸಂಕಷ್ಟದ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿರುವುದು ನಿರುದ್ಯೋಗದ ಪರಿಸ್ಥಿತಿ. ಸ್ಪೇನ್‌ನಲ್ಲಿ ಯುವಜನರ ನಿರುದ್ಯೋಗ ಪ್ರಮಾಣ ಶೇಕಡ 55ಕ್ಕೆ ಮುಟ್ಟಿದೆ. ಇನ್ನೂ ಬಹುತೇಕ ರಾಷ್ಟ್ರಗಳಲ್ಲಿ ಶೇಕಡ 30ರಷ್ಟಿದೆ. ಯುವಜನ ಎಂದರೆ 16ರಿಂದ 24ರ ವಯೋವಾನದಲ್ಲಿರುವವರು. ಭಾರತದಲ್ಲಿ ಬಿಡಿ, 43 ವರ್ಷದ ವ್ಯಕ್ತಿಯನ್ನೂ 'ಯೂಥ್ ಐಕಾನ್‌' ಅನ್ನುತ್ತಾರೆ. ಹೆಚ್ಚಿನ ರಾಷ್ಟ್ರಗಳ ಒಟ್ಟಾರೆ ನಿರುದ್ಯೋಗ ಶೇಕಡ 25ಕ್ಕೂ ಹೆಚ್ಚಿದೆ. ಇದು ಅಲ್ಲಿನ ಸಾಮಾಜಿಕ ಅಶಾಂತಿಗೂ ಕಾರಣವಾಗುತ್ತಿದೆ.
ಇದರ ಜತೆಗೆ ಕಾಡುತ್ತಿರುವುದು ಜನಸಂಖ್ಯೆಗೆ ಸಂಬಂಧಿಸಿದ ಸಂಕಷ್ಟ. ಮೊದಲ ವಿಶ್ವಯುದ್ಧದ ವೇಳೆಗೆ ಯುರೋಪಿನ ಜನಸಂಖ್ಯೆ ಇದ್ದಿದ್ದು ಜಗತ್ತಿನ ಶೇಕಡ 25ರಷ್ಟು. ಇವತ್ತಿಗೆ ಅದು ಶೇಕಡ 11ಕ್ಕೆ ಕುಸಿದಿದೆ ಹಾಗೂ ಇನ್ನು ಮುಂದಿನ 20 ವರ್ಷಗಳಲ್ಲಿ ಅದು ಶೇ.3ಕ್ಕೆ ಇಳಿಯಲಿದೆ. ಇದಕ್ಕೆ ಕಾರಣ ಜನೋತ್ಪಾದನೆ ದರ ತಗ್ಗಿರುವುದು. ಕೆಲ ದೇಶಗಳಲ್ಲಿ ಇದು 1 ಅಂಶಕ್ಕೆ ಕುಸಿದಿದೆ. 2.1 ಅಂಶವನ್ನು ಸಮಾಧಾನಕರ ದರ ಎಂದು ಗುರುತಿಸಲಾಗುತ್ತದೆ. ಆಫ್ರಿಕಾ ಹಾಗೂ ಏಷ್ಯದ ವಲಸಿಗರು ಆಸಕ್ತಿ ತೋರದೇ ಹೋದ ಪಕ್ಷದಲ್ಲಿ ಯುರೋಪು ಜಾಗತಿಕ ನಕಾಶೆಯಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ. ಹಾಗೆಂದೇ ಈಗ ಯುರೋಪ್ ಅನ್ನು ಯುರೋಬಿಯಾ ಎಂದೂ ಲಂಡನ್ ಅನ್ನು ಲಂಡನಿಸ್ತಾನ ಎಂದು ಕರೆಯುವುದು ಚಾಲ್ತಿಗೆ ಬಂದಿದೆ.
ಈ ಸಮಸ್ಯೆಯ ಬೇರು ಎಲ್ಲಿದೆ ಗೊತ್ತೇ? ಕುಟುಂಬ ಹಾಗೂ ಖಾಸಗಿ ವ್ಯವಹಾರಗಳನ್ನು ರಾಷ್ಟ್ರೀಕೃತಗೊಳಿಸುವ ಯುರೋಪಿನ ಪ್ರಯತ್ನದಲ್ಲಿ! ವೃದ್ಧಾಪ್ಯ, ಆರೋಗ್ಯ ನಿಗಾ, ಮಕ್ಕಳ ನಿಗಾ ಇವೆಲ್ಲ ಕೌಟುಂಬಿಕ ಚಟುವಟಿಕೆಗಳು. ಇವನ್ನೆಲ್ಲ ಸರ್ಕಾರವೇ ಇಡಿ ಇಡಿಯಾಗಿ ತಾನು ವಹಿಸಿಕೊಂಡಿತು. ಈಗ ಸರ್ಕಾರ ಸಂಕಷ್ಟಕ್ಕೆ ಬಿದ್ದಾಗ ಎಲ್ಲ ವ್ಯವಸ್ಥೆಗಳೂ ಅದರೊಂದಿಗೆ ಬಿದ್ದಿವೆ. ಸಾಮಾಜಿಕ ಭದ್ರತಾ ಯೋಜನೆಗಳೆಲ್ಲ ಮುಗ್ಗಟ್ಟಿನಲ್ಲಿವೆ, ಏಕೆಂದರೆ ಕೆಲಸಗಾರರ ಪಡೆ ಇಲ್ಲ. ಜನೋತ್ಪಾದನೆ ದರ ಕುಸಿದಿರುವುದರಿಂದ ಈ ಪಾಡು. ಜನಸಂಖ್ಯೆಯ ದರ ತುಂಬ ಕೆಳಮಟ್ಟಕ್ಕೆ ಕುಸಿದಿರುವುದರಿಂದ ತೆರಿಗೆ ಆದಾಯವೂ ಇಲ್ಲದಂತಾಗಿದೆ. ತೆರಿಗೆ ಹಣ ಬೊಕ್ಕಸ ತುಂಬದಿದ್ದರೆ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಪನ್ಮೂಲ ಒದಗಿಸುವುದಾದರೂ ಎಲ್ಲಿಂದ?
ಈ ಆರ್ಥಿಕ ಹಾಗೂ ಜನಸಂಖ್ಯೆ ಬಿಕ್ಕಟ್ಟಿನೊಂದಿಗೆ ಯುರೋಪಿನಲ್ಲಿ ನಾಗರಿಕತೆಯ ಬಿಕ್ಕಟ್ಟೂ ತೀವ್ರವಾಗಿದೆ. ಅದು ಚರ್ಚ್‌ಗೆ ಮುಖ ತಿರುಗಿಸಿ ತಾನು ಸೆಕ್ಯುಲರ್ ಎಂದು ಹೇಳಿಕೊಂಡಿದೆ. ಚರ್ಚ್‌ಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದ್ದು, ಅಲ್ಲಿ ಈಗ ಪೂಜಾಸ್ಥಳಕ್ಕಿಂತ ಹೆಚ್ಚಾಗಿ ಪ್ರವಾಸಿಗರ ಆಕರ್ಷಣೆಯಾಗಿ ಉಳಿದುಕೊಂಡಿವೆ ಅಷ್ಟೆ.
ವಲಸಿಗರು ಎಂದು ಬಂದವರು, ಅದರಲ್ಲೂ ಕೊಳಚೆ ನಿರ್ವಹಣೆ, ಹೋಟೆಲ್‌ಗಳಲ್ಲಿ ಪಾತ್ರೆ ತೊಳೆಯುವುದು, ಬಂದರಿನಲ್ಲಿ ಸರಕು ಸರಂಜಾಮುಗಳನ್ನು ಹೊರುವುದು, ದ್ರಾಕ್ಷಿ ಕೀಳುವುದು ಇಂಥ ಕೆಲಸಗಳಲ್ಲಿ ತೊಡಗಿಸಿಕೊಂಡವರೆಲ್ಲ ಬಂದಿರುವುದು ಸೋಮಾಲಿಯಾ, ಅಲ್ಜೀರಿಯಾ ಕಡೆಗಳಿಂದ. ಹೆಚ್ಚಿನವರು ಇಸ್ಲಾಂ ಮತಾನುಯಾಯಿಗಳು. ಯುರೋಪಿನಲ್ಲಿ ನಿರುದ್ಯೋಗ ಹೆಚ್ಚಾಗಿರುವುದರಿಂದ ಅವರೆಲ್ಲರ ಆಕ್ರೋಶ ಈಗ ಮುಸ್ಲಿಮರತ್ತ ತಿರುಗುತ್ತಿದೆ. ಫ್ರಾನ್ಸ್‌ನಲ್ಲಿ ಇಸ್ಲಾಂ ಮೂಲಭೂತವಾದಿಗಳ ವಿರುದ್ಧ ಹೋರಾಟ ಎಂಬ ಹೆಸರಿನಲ್ಲಿ ಒಂದು ಸಂಘಟನೆಯೇ ತಲೆ ಎತ್ತಿದೆ. ಯುರೋಪಿನ ಪಾಲಿಗೆ ಆಫ್ರಿಕಾವೇ ವಿಯೆಟ್ನಾಮ್‌ನಂತೆ ಕಾಣುತ್ತಿದೆ.
ಅಂತೂ ಯುರೋಪ್ ಬಾಂಬ್ ಒಂದರ ಮೇಲೆ ಕುಳಿತಿದೆ ಎನ್ನುವುದಕ್ಕೆ ಅಡ್ಡಿಯಿಲ್ಲ. ಒಂದು ಸಣ್ಣ ಕಿಡಿ ಸೋಕಿದರೂ ಸಾಕು ಅದು ಆಸ್ಫೋಟಗೊಳ್ಳಲಿದೆ. ಒಂದು ನೆನಪಲ್ಲಿಡಿ. ಕಳೆದ 2000 ವರ್ಷಗಳ ಚರಿತ್ರೆಯಲ್ಲಿ ಎಲ್ಲ ಸಂಘರ್ಷಗಳೂ ಯುರೋಪಿನಲ್ಲಿಯೇ ಪ್ರಾರಂಭವಾಗಿ ನಂತರ 'ಜಾಗತಿಕ' ಸಂಘರ್ಷ ಎನಿಸಿಕೊಂಡಿದ್ದು. ಭಾರತ ಅದಾಗಲೇ 56 ಸಾವಿರ ಕೋಟಿ ರುಪಾಯಿಗಳ ಹಣವನ್ನು ಯುರೋಪಿಗೆ ಸಹಾಯವಾಗಿ ನೀಡಿದೆ. ಅದು ಹೆಚ್ಚು ಕಡಿಮೆ ನಮ್ಮ ಜಿಡಿಪಿಯ ಶೇಕಡ 1ರಷ್ಟಾಗುತ್ತದೆ. ಆದರೆ ಯುರೋಪಿನ ಯಾವುದೇ ಪತ್ರಿಕೆಯಾಗಲೀ, ಒಬ್ಬನೇ ಒಬ್ಬ ನಾಯಕನಾಗಲೀ ಇದಕ್ಕೆ ಧನ್ಯವಾದ ಹೇಳಿಲ್ಲ! ನಾವು ಈ ಪಾಶ್ಚಿಮಾತ್ಯರ ಹೊಟ್ಟೆ ತುಂಬಿಸುವ ಉಗ್ರಾಣವಾಗಬೇಕೆ?
ನಮ್ಮ ಸರ್ಕಾರಗಳ ಬಗ್ಗೆ ನಾವು ಯಾವ ವಿಶ್ವಾಸವನ್ನೂ ಇರಿಸಿಕೊಳ್ಳುವಂತಿಲ್ಲ. ಏಕೆಂದರೆ ನಮ್ಮ ವಿದೇಶಿ ನೀತಿ ಯುರೋಪಿನಲ್ಲಿ ನೆಲೆಗೊಂಡ ಆಂಗ್ಲರಿಗೆ ತಲೆಬಾಗುವ ನಿಟ್ಟಿನಲ್ಲೇ ಸಾಗುತ್ತದೆ. ಯುರೋಪ್ ಇಂಥದೊಂದು ಹರಾಕಿರಿಯಲ್ಲಿ ವ್ಯಸ್ತವಾಗಿರುವಾಗ ಭಾರತವು ಕಾರ್ಯತಂತ್ರದ ದೃಷ್ಟಿಯಿಂದ ಯೋಚಿಸುವುದು ಅಗತ್ಯವಿದೆ.
(ಮೂಲತಃ niticentral.com ಜಾಲತಾಣದಲ್ಲಿ ಪ್ರಕಟಗೊಂಡ ಲೇಖನ)
- ಪ್ರೊ. ಆರ್. ವೈದ್ಯನಾಥನ್
ಐಐಎಂ ಬೆಂಗಳೂರು
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement