ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಬಂದೆರಗಿದೆ, ಒಂದು ಲೋಟ ನೀರಿಗಾಗಿ ಬೇಡುವ ಸ್ಥಿತಿ

ಲೋಕಸಭೆಯಲ್ಲಿ ಕಾವೇರಿ ಕುರಿತು ದೇವೇಗೌಡರ ಭಾಷಣದ ಪೂರ್ಣ ಪಾಠ

Rashmi Kasaragodu
Updated On : 8 Mar 2013, 2:23 am

ಲೋಕಸಭೆಯಲ್ಲಿ ಕಾವೇರಿ ನ್ಯಾಯಾಧಿಕರಣ ಕುರಿತಂತೆ ದೇವೇಗೌಡರು ಮಾಡಿದ ಭಾಷಣದ ಪೂರ್ಣ ಪಾಠ

ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸೂಚಿಸಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು.
 ಸಭಾಧ್ಯಕ್ಷರೆ, ನಾನು ಹೆಚ್ಚು ಕಾಲಾವಕಾಶ ತೆಗೆದುಕೊಳ್ಳುವುದಿಲ್ಲ. ಹಿಂದೆ ನಮ್ಮ ಪಕ್ಷದ ನಾಯಕರಾಗಿದ್ದ ಶರದ್ ಯಾದವ್ ಅವರು ಕೇವಲ ನೀರಿನ ಬಗ್ಗೆ ಮಾತನಾಡಿರುವುದರಿಂದ, ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತಿರುವ ನಿಮಗೆ ಮತ್ತು ನನಗೂ ಕೊಂಚ ಮುಜುಗರವಾಗಬಹುದೇನೋ ನನಗೆ ಗೊತ್ತಿಲ್ಲ. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಬಗ್ಗೆ ನಾವು ಸಾಕಷ್ಟು ಮಾತನಾಡಬಹುದು. ಆದರೆ, ನಾನು ರಾಷ್ಟ್ರ ಎದುರಿಸುತ್ತಿರುವ ಎಲ್ಲಾ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ನಾನು ಕರ್ನಾಟಕದ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು ಯತ್ನಿಸುತ್ತೇನೆ.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸೂಚಿಸುವ ವಂದನಾ ನಿರ್ಣಯ ಕುರಿತು ಮಾತನಾಡುವಾಗ, ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪಿನ ಅಧಿಸೂಚನೆ ಹೊರಡಿಸಿರುವುದರಿಂದ ಜನರಲ್ಲಿ ಸಂತಸ ತಂದಿದೆ ಎಂದು ಪ್ರಸ್ತಾಪಿಸುವಾಗ ನೀವೂ ಸಂತೋಷದಿಂದ ಇದ್ದಿರಿ. ಆದರೆ, ಇದೇ ವಿಷಯ ಕಳೆದ ಮೂವತ್ತು ವರ್ಷಗಳಿಂದ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈಗ ನಾವು ಸಂತಸವಾಗಿದ್ದೇವೆ. ಈ ಅಧಿಸೂಚನೆ ಪ್ರಕಟಣೆಯನ್ನು ನಾವು ಕೇಂದ್ರ ಸರ್ಕಾರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾಗೆ ಕೊಟ್ಟ ಹುಟ್ಟುಹಬ್ಬದ ಉಡುಗೊರೆ ಅಂದುಕೊಳ್ಳುತ್ತೇವೆ. ನನಗೆ ಈ ಬಗ್ಗೆ ಯಾವ ಅಸೂಯೆಯೂ ಇಲ್ಲ. ಸಭಾಧ್ಯಕ್ಷರೆ, ಈ ವಿವಾದ ಕೇವಲ 30 ವರ್ಷಗಳಷ್ಟೆ ಅಲ್ಲ, 1856ರಷ್ಟು ಹಿಂದಿನದು. ಸ್ವಾತಂತ್ರಪೂರ್ವದಲ್ಲಿ ಆರಂಭವಾದ ಹೋರಾಟ, ಸ್ವಾತಂತ್ರ್ಯಾ ನಂತರವೂ ಮುಂದುವರೆದಿದೆ. ಇದು ಇವತ್ತಿಗೂ ಮುಗಿದಿಲ್ಲ, ಮುಗಿಯುತ್ತಲೂ ಇಲ್ಲ.
ನನಗೆ ಈ ವಿಷಯ ಹೇಳಲು ದುಃಖವಾಗುತ್ತಿದೆ. 2007ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ಸದನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಲು ಪ್ರಯತ್ನಿಸಿದ್ದೆವು. ಆದರೆ, ಯುಪಿಎ ಸರ್ಕಾರ ಎಡಪಕ್ಷಗಳು ಹಾಗೂ ಡಿಎಂಕೆ ಬೆಂಬಲದಿಂದ ಅಧಿಕಾರ ನಡೆಸುತ್ತಿದ್ದರಿಂದ ನನಗೆ ಮಾತನಾಡಲು ಅವಕಾಶ ನೀಡಿರಲಿಲ್ಲ. ಆಗ ಸದನದಲ್ಲಿ ಎಐಡಿಎಂಕೆ ಸದಸ್ಯರೊಬ್ಬರೂ ಇರಲಿಲ್ಲ. ನಾವು ಮೂವರು ಸದಸ್ಯರಿದ್ದೆವು. ಆಗ ನಾವೂ ಯುಪಿಎಗೆ ಬೆಂಬಲ ನೀಡಿದ್ದೆವು. ಆಗ ಪ್ರಧಾನಿ ನನಗೆ ಕರೆ ಮಾಡಿ ಬೆಂಬಲ ನೀಡಲು ಸಾಧ್ಯವೇ ಎಂದು ಕೇಳಿದ್ದರು. ನಾವು ಬೆಂಬಲ ವ್ಯಕ್ತಪಡಿಸಿದ್ದೆವು.
ಕುಡಿಯುವ ನೀರಿನ ಕೊರತೆಯಿಂದಾಗಿ ನಾವು ಎಷ್ಟು ಸಂಕಷ್ಟ ಪಡುತ್ತಿದ್ದೇವೆ ಎಂಬುದನ್ನು ಸದನದ ಗಮನಕ್ಕೆ ತರಲಿಚ್ಛಿಸುತ್ತೇನೆ. ನಾನು ಆರಂಭದಲ್ಲಿ ಹೇಳಿದಂತೆ, ನನ್ನ ಗೆಳೆಯರಾದ ತಂಬಿದೊರೆ ಅವರಿಗೆ ಮುಜುಗರವಾಗಬಹುದು. ನಾನು ಇಂದು ಸುದೀರ್ಘವಾಗಿ ಮಾತನಾಡುವುದಿಲ್ಲ. ಆದರೆ, ಕೆಲವು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸುತ್ತೇನೆ. ಬೆಂಗಳೂರು ಮಹಾನಗರದ ಮೂರನೇ ಎರಡು ಭಾಗಕ್ಕೆ ಕುಡಿಯಲು ಕಾವೇರಿ ನದಿ ನೀರನ್ನು ನಿರಾಕರಿಸಲಾಗಿದೆ. ಈ ವಿಷಯ ನಿರ್ಧರಿಸಿದಾಗ ಬೆಂಗಳೂರಿನಲ್ಲಿ 80ರಿಂದ 90 ಲಕ್ಷ ಜನಸಂಖ್ಯೆ ಇತ್ತು. ಈಗ ಒಂದು ಕೋಟಿ ಒಂದು ಲಕ್ಷ ಜನಸಂಖ್ಯೆ ಇದೆ. ನಾನು ಯಾರನ್ನೂ ದೂಷಿಸುವುದಿಲ್ಲ. ನನ್ನ ಜೀವಮಾನದಲ್ಲೇ ನ್ಯಾಯಾಂಗವನ್ನು ದೂಷಿಸಿ ಒಂದು ಪದವನ್ನೂ ಬಳಸಿಲ್ಲ. ನಾನು ಮುಕ್ತವಾಗಿ ಮತ್ತು ನೇರವಾಗಿ ಹೇಳ್ತೇನೆ.
ನ್ಯಾಯಾಧಿಕರಣ ಹೇಳುತ್ತೆ, ಕಾವೇರಿ ನದಿ ನೀರು ಬಳಸುತ್ತಿರುವ ಬೆಂಗಳೂರು ಹಾಗೂ ಇತರ ಪ್ರದೇಶದಲ್ಲಿ ಕೂಡ ಕುಡಿಯುವ ನೀರಿಗೆ ಅಂತರ್ಜಲ ಬಳಸಬೇಕಂತೆ. ಒಂಭತ್ತು ಜಿಲ್ಲಾ ಕೇಂದ್ರಗಳು, ಮೂವತ್ತು ತಾಲೂಕು ಕೇಂದ್ರಗಳನ್ನು ಕಾವೇರಿ ನದಿ ನೀರು ಅಥವಾ ಉಪ ನದಿಗಳ ನೀರು ಬಳಸುವುದಕ್ಕೆ ನಿರ್ಬಂಧಿಸಲಾಗಿದೆ. ಈ ಕೇಂದ್ರಗಳು ಅಂತರ್ಜಲ ಬಳಸಬೇಕು. ಬೆಂಗಳೂರು ಈಗಾಗಲೇ 30 ಟಿಎಂಸಿ ನೀರು ಬಳಸುತ್ತಿದೆ. ಅವರೇನು ಹೇಳ್ತಾ ಇದ್ದಾರೆ, ಬೆಂಗಳೂರಿನ ಮೂರನೇ ಎರಡು ಭಾಗ ಕಾವೇರಿ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ. ಈ ಗೌರವಾನ್ವಿತ ಸದನ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ದಯವಿಟ್ಟು ಗಮನಹರಿಸಬೇಕು.
ಸಂಪುಟದಲ್ಲಿ ಒಪ್ಪಿಗೆ ಪಡೆದ 9 ಮಸೂದೆಗಳಿಗೆ ಅನುಮೋದನೆ ಪಡೆಯಲು ಹೆಣಗಾಡುತ್ತಿದ್ದಾರೆ ಎಂದು ಪ್ರಧಾನಿಯನ್ನು ದೂಷಿಸುವುದಿಲ್ಲ. ಅವರಿಗೆ ಅಗತ್ಯಕ್ಕೆ ತಕ್ಕ ಬಲ ಬೇಕಿದೆ. ಡಿಎಂಕೆ ಬೆಂಬಲ ನೀಡುವವರೆಗೂ ಅವರು ಈ ಮಸೂದೆಗಳಿಗೆ ಅನುಮೋದನೆ ಪಡೆಯಲಾಗುವುದಿಲ್ಲ. ಜಾಗತಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಆರ್ಥಿಕ ಇತಿಮಿತಿಗಳೇನು ಎಂಬುದು ನನಗೆ ಗೊತ್ತಿದೆ. ನಾನು ಆ ಬಗ್ಗೆ ಚರ್ಚಿಸುವುದಿಲ್ಲ. ನನ್ನ ಒಂದೇ ಮನವಿ ಎಂದರೆ, ನ್ಯಾಯ ಒದಗಿಸಿ ಎಂಬುದಷ್ಟೆ.
ನಾರಾಯಣಸ್ವಾಮಿಗಳೇ, ದಯವಿಟ್ಟು ನನ್ನ ಮಾತು ಕೇಳಿ. ಈ ದೇಶ ನೀರಿಗಾಗಿ ಹೋರಾಟ ಮಾಡಲಿದೆ. ನಿಮ್ಮ ಗಣರಾಜ್ಯ ಅಥವಾ ನೀವು ಏನಾದರೂ ಕರೆದುಕೊಳ್ಳಿ. ಕಾವೇರಿ ನ್ಯಾಯಾಧಿಕರಣದ ನ್ಯಾಯಾಧೀಶರ ನಡುವೆ ಇದ್ದ ಕ್ಷುಲ್ಲಕ ಕಚ್ಚಾಟ ಕುರಿತಂತೆ ತಮಿಳುನಾಡಿನ ಹಿರಿಯ ನ್ಯಾಯವಾದಿಯೊಬ್ಬರು 2006 ಜುಲೈ 10 ರಂದು ಹೀಗೆ ಹೇಳಿದ್ದರು- 'ನ್ಯಾಯಾಧೀಶರು, ವಕೀಲರ ನಡುವಿನ ವಿವಾದ ಬಗೆಹರಿಸಲು ಇದ್ದಾರೆ. ಆದರೆ, ನಿಮ್ಮ ಕಿತ್ತಾಟಗಳನ್ನು ಬಗೆಹರಿಸಲು ಹರಿಸಲು ವಕೀಲರಿಲ್ಲ. ದಯವಿಟ್ಟು ನಿಮ್ಮ ಕಿತ್ತಾಟಗಳನ್ನು ನಿಮ್ಮ ಕೊಠಡಿಗಳಲ್ಲೇ ಬಗೆಹರಿಸಿಕೊಳ್ಳಿ. ನನ್ನ 56 ವರ್ಷಗಳ ಅನುಭವದಲ್ಲಿ ಇಂಥ ಕಹಿ ಅನುಭವ ಆಗಿರಲಿಲ್ಲ' - ಇದೇ ನ್ಯಾಯಾಧಿಕರಣ ಅಂತಿಮ ಐತೀರ್ಪು ನೀಡಿದೆ. ನಾನು ಇಲ್ಲಿ ಒಳ್ಳೆಯ ಅಂಶಗಳ ಬಗ್ಗೆ ಮಾತ್ರ ಚರ್ಚಿಸುತ್ತೇನೆ. ಆದರೆ, ನಾನು ಯಾರ ವಿರುದ್ಧವೂ ವೈಯಕ್ತಿಕವಾಗಿ ದೂಷಿಸುತ್ತಿಲ್ಲ.
ಇದೇ ನ್ಯಾಯಾಧಿಕರಣ ನಮ್ಮ ಕುಡಿಯುವ ನೀರಿನ ಹಕ್ಕು ನಿರ್ಬಂಧಿಸಿ ತನ್ನ ತೀರ್ಪು ಪ್ರಕಟಿಸಿದೆ. ನ್ಯಾಯಾಧಿಕರಣದ ಮುಂದೆ ವಾದಿಸಿದ ತಮಿಳುನಾಡಿನ ಹಿರಿಯ ನ್ಯಾಯವಾದಿ ಹೇಳುತ್ತಾರೆ- ತಮ್ಮ 56 ವರ್ಷದ ಸೇವಾವಧಿಯಲ್ಲಿ ಇಂಥ ಕಹಿ ಅನುಭವ ಪಡೆದಿರಲಿಲ್ಲ ಅಂತ. ಇದೇ ನ್ಯಾಯಾಧಿಕರಣ ನೀಡಿದ ಐತೀರ್ಪನ್ನೇ ನೀವು ಅಧಿಸೂಚನೆ ಹೊರಡಿಸಿರುವುದು ಮತ್ತು ಜಯಲಲಿತಾಗೆ ಹುಟ್ಟುಹಬ್ಬದ ಉಡುಗೊರೆ ಕೊಟ್ಟಿರುವುದು. ನಾವು ಬೇಡುವವರು. ನೀಡುವವರಲ್ಲ. ನಮಗೆ ಆಯ್ಕೆ ಮಾಡುವ ಅವಕಾಶವೇ ಇಲ್ಲ. ನಾವು ಇಂಥ ಪರಿಸ್ಥಿತಿಯಲ್ಲೇ ಜೀವಿಸಬೇಕೆಂದು ಬಯಸುತ್ತೀರಾ?
ಸುಪ್ರೀಂ ಕೋರ್ಟ್ ಹೇಳಿದೆ- 'ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪಿನ ಅಧಿಸೂಚನೆ ಪ್ರಕಟಿಸುವುದರಿಂದ ಐತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು. ಅದಷ್ಟೆ ಅಲ್ಲ, ಎಲ್ಲಾ ವಿಶೇಷ ಮೇಲ್ಮನವಿಗಳೂ ಸಹ'. ಆದ್ದರಿಂದ ಆ ವಿಷಯಗಳು ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಆ ಬಗ್ಗೆ ನಾನು ಚರ್ಚಿಸುವುದಿಲ್ಲ. ನಾನು ಅಧಿಸೂಚನೆ ಪ್ರಕಟಿಸಲು ಅಷ್ಟು ತರಾತುರಿ ಮಾಡಿದ್ದಷ್ಟನ್ನು ಮಾತ್ರ ಪ್ರಸ್ತಾಪಿಸುತ್ತಿದ್ದೇನೆ. ಯಾಕೆ ಅಷ್ಟೊಂದು ತರಾತುರಿ ಅಂತ ಈ ಭಾರತ ಸರ್ಕಾರವನ್ನು ಕೇಳುತ್ತೇನೆ. ನಿಮಗೆ ಇದು ಗೊತ್ತಿರಲಿಲ್ಲವೇ? ಅದನ್ನು ಪ್ರಶ್ನಿಸುವ ಎಲ್ಲಾ ಹಕ್ಕು ನನಗೆ ಇದೆ. ಸೆಕ್ಷನ್ 5(3)ರಡಿಯಲ್ಲಿ ಎಲ್ಲಾ ವಿಷಯ ನ್ಯಾಯಾಧಿಕರಣದ ಮುಂದಿದೆ. ಸೆಕ್ಷನ್ 5(3)ರಡಿಯಲ್ಲಿ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಕೇರಳ ಸ್ಪಷ್ಟನೆಗಳನ್ನು ಕೇಳಿವೆ. ಅಲ್ಲದೇ ಕೇಂದ್ರ ಸರ್ಕಾರವೂ ನ್ಯಾಯಾಧಿಕರಣದ ಮುಂದೆ ಪ್ರತಿವಾದಿಯಾಗಿದೆ. ಇದು ಬಿರುಕುಬಿಟ್ಟ ನ್ಯಾಯಾಧಿಕರಣ. ಅದು ಎಲ್ಲಾ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಈ ವಿಷಯದಲ್ಲಿ ಯಾವುದೇ ರಹಸ್ಯವೇನಿಲ್ಲ. ಇದು ಗೌಪ್ಯವಿಷಯವೂ ಅಲ್ಲ. ಎಲ್ಲವೂ ಮಾಧ್ಯಗಳಲ್ಲಿ ವರದಿಯಾಗಿದೆ.
ನಾನು ನ್ಯಾಯಾಧಿಕರಣದಲ್ಲಿ ಏನಾಯ್ತು ಎಂಬುದನ್ನು ಹೇಳುತ್ತಿದ್ದೇನೆ. ಉಭಯ ಕಡೆಗಳ ನ್ಯಾಯಾಧೀಶರು ಕಿತ್ತಾಡುತ್ತಿದ್ದರು. ಏನಾಗಿದೆ ಎಂಬುದು ಎಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿದೆ. ಆ ಬಗ್ಗೆ ಇನ್ನೇನೂ ಹೆಚ್ಚಿಗೆ ಹೇಳುವುದಿಲ್ಲ. ಕುಡಿಯುವ ನೀರಿನ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರಾಧಾನ್ಯತೆ ನೀಡಿದೆ. ಸರ್ಕಾರ ಸಾಕಷ್ಟು ಅನುದಾನವನ್ನು ಒದಗಿಸಿದೆ. ಈ ವಿಷಯ ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಧಿಕರಣದ ಮುಂದೆ ಇರುವುದರಿಂದ ನಾನು ಕೆಲವು ಅಂಶಗಳನ್ನು ಓದುತ್ತೇನೆ. ಆ ಕಾರಣಕ್ಕಾಗಿ ನಾನು ಎಚ್ಚರಿಕೆಯಿಂದ ಭಾಷಣ ಸಿದ್ಧಪಡಿಸಿದ್ದೇನೆ. ಯಾರೂ ಇದನ್ನು ಆಕ್ಷೇಪಿಸಬಾರದೆಂದು ಬಯಸುತ್ತೇನೆ. ಇಲ್ಲದಿದ್ದರೆ ನಾನು ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಬಗ್ಗೆ ಗಂಟೆಗಟ್ಟಲೆ ಮಾತನಾಡಬಹುದಿತ್ತು. ಕುಡಿಯುವ ನೀರಿಗೆ ಸಾಕಷ್ಟು ಅನುದಾನ ಒದಗಿಸಿದ್ದೀರಿ. ಆದರೆ, ಕರ್ನಾಟಕದ 9 ಜಿ. ಕೇಂದ್ರಗಳು, 30 ತಾ.ಕೇಂದ್ರಗಳು ಮತ್ತು ಬೆಂಗಳೂರಿನ ಮೂರನೇ ಎರಡು ಭಾಗದ ಜನರಿಗೆ ಕಾವೇರಿ ನೀರಿನ ಹಕ್ಕನ್ನು ನಿರ್ಬಂಧಿಸಲಾಗಿದೆ.
ಕಾವೇರಿ ನ್ಯಾಯಾಧಿಕರಣದಲ್ಲಾಗಿರುವ ಲೋಪಗಳು ಅನ್ಯಾಯಗಳು ಸರಿಪಡಿಸಿ, ಸ್ಪಷ್ಟನೆಗಳನ್ನು ನೀಡುವ ಮುನ್ನ ಅಧಿಸೂಚನೆ ಪ್ರಕಟಿಸಬಾರದು ಎಂದು ಒತ್ತಾಯಿಸಿ ನಾನು ಕಂಬಕಂಬಗಳನ್ನು ಅಲೆದಿದ್ದೇನೆ. ಕೆಳಹಂತದ ಅಧಿಕಾರಿಯಿಂದ, ಮುಖ್ಯಮಂತ್ರಿಗಳು, ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇನೆ. ಎಲ್ಲರೂ ಭರವಸೆ ನೀಡಿದ್ದೇ ನೀಡಿದ್ದು. ಹೌದು ಹೌದು, ಕುಡಿಯುವ ನೀರು ಮೂಲಭೂತ ಅಗತ್ಯ. ಅದಕ್ಕೆ ಹೆಚ್ಚಿನ ಆದ್ಯತೆ ನೀಡಲೇಬೇಕು ಎಂದು ನಾನು ಭೇಟಿ ಮಾಡಿದ ಎಲ್ಲರೂ ಹೇಳಿದ್ದರು.
ನಾನು ಇವತ್ತು ಗೌರವಾನ್ವಿತ ಈ ಸದನದ ಮುಂದೆ ಹೇಳುತ್ತೇನೆ- ಕಾವೇರಿ ನ್ಯಾಯಾಧಿಕರಣದ ಐತೀರ್ಪು ಬೆಂಗಳೂರಿನ ಮೂರನೇ ಎರಡು ಭಾಗದ ಜನರಿಗೆ, ಒಂಭತ್ತು ಜಿಲ್ಲಾ ಕೇಂದ್ರಗಳಿಗೆ 30 ತಾಲೂಕುಗಳಿಗೆ ಕಾವೇರಿ ಮತ್ತು ಕಾವೇರಿ ಉಪನದಿಗಳ ಮೂಲದಿಂದ ಕುಡಿಯುವ ನೀರಿನ ಹಕ್ಕನ್ನು ನೀರಾಕರಿಸಿದೆ. ಅಲ್ಲದೇ ನ್ಯಾಯಾಧಿಕರಣ ಅಂದುಕೊಂಡಿರುವಂತೆ ಲಭ್ಯ ಅಂತರ್ಜಲ ಬಳಸುವಂತೆ ಸೂಚಿಸಿದೆ. ಈ ಬಗ್ಗೆ ಕೇಂದ್ರ ಸಚಿವರನ್ನು ಪ್ರಶ್ನಿಸಿದಾಗ ಅವರು ಹೇಳಿದ್ದರು - 'ಸುಪ್ರೀಂ ಕೋರ್ಟ್ ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪು ಅಧಿಸೂಚನೆ ಪ್ರಕಟಿಸಿ ಎಂದು ನಿರ್ದೇಶನ ನೀಡಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ನಾವು ಪಾಲಿಸಲೇ ಬೇಕು ಎಂದು'.
ಸುಪ್ರೀಂ ಕೋರ್ಟ್ ಬಗ್ಗೆ ನಾನು ಬಹಳ ಗೌರವ ಇಟ್ಟುಕೊಂಡಿದ್ದೇನೆ. ಒಂದು ಬಾರಿಯೂ ನಾನು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವಂತಿಲ್ಲ, ಪಾಲಿಸಬೇಕಿಲ್ಲ ಎಂಬ ಭಾವನೆ ವ್ಯಕ್ತಪಡಿಸಿಲ್ಲ. ಇಲ್ಲ ನಾನೆಂದೂ ಹೇಳಿಲ್ಲ. ಆದರೆ, ಇದು ಸತ್ಯ. ಪೂರ್ಣ ಸತ್ಯ. ಅಥವಾ ವಾಸ್ತವ ಬೇರೆ ಇದೆಯೇ? ಈ ಪ್ರಶ್ನೆಯನ್ನು ನಾನು ಸರ್ಕಾರದ ಮುಂದಿಡಬಯಸುತ್ತೇನೆ. ನಿಜವಾಗಿಯೂ ಹೇಳಿಕೊಂಡಂತೆ ನ್ಯಾಯ ಒದಗಿಸಲಾಗಿದೆಯಾ? ಅಥವಾ ನಿಮ್ಮ ಅಜೆಂಡಾ ಅನುಷ್ಠಾನ ಮಾಡಲು ನೀವು ಅನುಸರಿಸಿದ ಅನಕೂಲಸಿಂಧು ರಾಜಕಾರಣ ನಿಮ್ಮನ್ನು ಇದರಲ್ಲಿ ಭಾಗಿಯನ್ನಾಗಿ ಮಾಡಿದೆಯಾ? ತುರಾತುರಿಯಲ್ಲಿ ಅಧಿಸೂಚನೆ ಹೊರಡಿಸುವ ಅಗತ್ಯವೇನಿತ್ತು? ಕೇಂದ್ರದ ಮೌನವು ಕರ್ನಾಟಕದ ಜನರನ್ನು ಸಂಕಷ್ಟಕ್ಕೆ ತಳ್ಳಿ ಬಿಟ್ಟಿದೆ.
ದಯವಿಟ್ಟು ಕೇಳಿ, ನಾನು ಹೇಳಬೇಕೆಂದಿದ್ದನ್ನು ಹೇಳಲು ಇದೇ ನನಗೆ ವೇದಿಕೆ. ಏನಾಗಿದೆ ಕೇಳಿ, ಕಾವೇರಿ ಪಾತ್ರದ ಜನರು ಸಂಕಷ್ಟ ಎದುರಿಸಲು ಈಗ ಅಧಿಕಾರ ನಡೆಸುತ್ತಿರುವ ಸರ್ಕಾರ ಮತ್ತು 2004-05ರಲ್ಲಿದ್ದ ಸಮ್ಮಿಶ್ರ ಸರ್ಕಾರವೇ ಹೊಣೆ. ಈ ಸರ್ಕಾರಗಳು ರಾಜ್ಯದ ಹಿತಾಸಕ್ತಿ ಕಾಪಾಡಲು ವಿಫಲವಾಗಿವೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೇಳಿರುವ ಸ್ಪಷ್ಟನೆಗಳಿಗೆ ಇನ್ನು ಉತ್ತರ ಸಿಕ್ಕಿಲ್ಲ. ಅದು ಯಾವ ನ್ಯಾಯಾಧಿಕರಣದಲ್ಲಿ ನ್ಯಾಯಾಧಿಕರಣದ ಅಧ್ಯಕ್ಷರು ರಾಜಿನಾಮೆ ನೀಡಿದ್ದಾರೆ. ನ್ಯಾಯಾಧಿಕರಣ ಸದಸ್ಯರ ನಡವಳಿಕೆ ಬಗ್ಗೆಯೇ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಗಂಭೀರ ಆಕ್ಷೇಪ ಎತ್ತಿದೆ. ನನ್ನ ಬಳಿ ಆದೇಶದ ಪ್ರತಿ ಇದೆ. ಆದೇಶ ಹೇಳಿದೆ- ಎರಡು ಮತ್ತು ಮೂರನೇ ಆದೇಶ ನೀಡಿರುವುದು ಸರಿಯಿಲ್ಲ. ಇದು ಎಲ್ಲಾ ನ್ಯಾಯಾಂಗ ನಿಯಮಗಳಿಗೆ ತದ್ವಿರುದ್ದವಾಗಿದೆ. ನಾನು ನ್ಯಾಯಾಧಿಕರಣದ ನಡಾವಳಿಯನ್ನು ಪ್ರಸ್ತಾಪಿಸಿದ್ದೇನೆ. ನಾನು ಇನ್ನೂ ಎರಡು ನಿಮಿಷ ತೆಗೆದುಕೊಳ್ಳುತ್ತೇನೆ. ಈ ಪದಗಳನ್ನು ಗುರುತು ಹಾಕಿಕೊಳ್ಳಿ, ಇವೆಲ್ಲವು ನನ್ನ ಮಾತುಗಳಲ್ಲ. 56 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ನ್ಯಾಯವಾದಿಗಳ ಮಾತುಗಳಿವು... ಈ ವಿಷಯಗಳೆವೂ ಹೇಗೆ ಸಾರ್ವಜನಿಕ ದಾಖಲೆಗೆ ಸೇರಿದವೆಂಬುದು ನನಗೆ ಗೊತ್ತಿಲ್ಲ. ಕೋಟ್ಯಂತರ ಜನರ ಹಣೆಬರಹ ನಿರ್ಧರಿಸುವ ಅಧಿಕಾರವನ್ನು ಇವರಿಗೆ ನೀಡಬಹುದೇ? ನ್ಯಾಯ ದಕ್ಕಿಸಿಕೊಟ್ಟಿಲ್ಲದಿದ್ದರೂ ನ್ಯಾಯವನ್ನು ದಕ್ಕಿಸಿಕೊಟ್ಟಂತೆ ಮಾಡಲಾಗಿದೆ.
ಸದನದ ಮುಂದೆ ಎರಡು ಅಂಶಗಳನ್ನು ತರಬಯಸುತ್ತೇನೆ. ಅವುಗಳೆಂದರೆ, ಕಾವೇರಿ ನ್ಯಾಯಾಧಿಕರಣವನ್ನು ಸೆಕ್ಷನ್ 4(1)ಅಡಿ ರಚಿಸಲಾಗಿದೆ. ನ್ಯಾಯಾಧಿಕರಣದ ಮುಂದೆ ಇರುವ ವಿಷಯಗಳನ್ನು ಪ್ರಸ್ತಾಪಿಸುತ್ತೇನೆ. ಕರ್ನಾಟಕ 2007 ಮೇ 3ರಂದು ಸಲ್ಲಿಸಿರುವ ಅರ್ಜಿ, ತಮಿಳುನಾಡು 2007 ಏಪ್ರಿಲ್ 27 ರಂದು, ಕೇರಳ 2007 ಏಪ್ರಿಲ್ 30 ರಂದು ಹಾಗೂ ಪಾಂಡಿಚೇರಿ 2007 ಮೇ 3 ರಂದು ಸಲ್ಲಿಸಿರುವ ಅರ್ಜಿ, ಮತ್ತು ಭಾರತ ಸರ್ಕಾರ 2007 ಮೇ 1ರಂದು ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗಬೇಕಿದೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಪ್ರಧಾನಿ ಅವರಿಗೆ ಪತ್ರ ಬರೆದು ನ್ಯಾಯಾಧಿಕರಣಕ್ಕೆ ಅಧ್ಯಕ್ಷರನ್ನು ನೇಮಕಮಾಡುವಂತೆ ಕೋರಿದ್ದಾರೆ. ಈಗಾಗಲೇ ನಮಗೆ ನ್ಯಾಯ ನಿರಾಕರಿಸಿರುವ ಇಬ್ಬರು ಸದಸ್ಯರಿಂದ ನಾವು ನ್ಯಾಯ ನಿರೀಕ್ಷಿಸಲಾದೀತೆ?
ಈ ರಾಷ್ಟ್ರದ ನಾಯಕರು, ರಾಜತಾಂತ್ರಿಕರೂ ಆಗಿರುವ ಪ್ರಧಾನಿಗಳು ಇದನ್ನು ಹೇಳಬೇಕಿದೆ. ಈಗ ನ್ಯಾಯಾಧಿಕರಣದ ಅಂತಿಮ ಐತೀರ್ಪು ಪ್ರಕಟಿಸುವಲ್ಲಿ ಭಾಗಿಯಾಗಿರುವ ಇಬ್ಬರು ಸದಸ್ಯರಿಂದ ನಾವು ನ್ಯಾಯ ನಿರೀಕ್ಷಿಸಲಾದೀತೆ? ಒಂದು ಲೋಟ ನೀರಿಗಾಗಿಯೂ ನಾವು ಅವರಲ್ಲಿ ಬೇಡಬೇಕಾದ ಪರಿಸ್ಥಿತಿ ಬಂದಿದೆ. ಈ ಸರ್ಕಾರ ಈಗ ಡಿಎಂಕೆಯನ್ನು ಅವಲಂಬಿಸಿದೆ. ಅದನ್ನು ನೇರವಾಗಿ ಹೇಳುತ್ತೇನೆ. ಮತ್ತೊಂದು ಕಡೆ, ಆಕೆ ರಾಷ್ಟ್ರದ ಪ್ರಧಾನಿಯಾಗುವ ಹಕ್ಕನ್ನು ಪಡೆದಿದ್ದಾರೆ. ಯಾಕಾಗಬಾರದು? ನಾನು ಇದನ್ನು ಸ್ವಾಗತಿಸುತ್ತೇನೆ. ಆಕೆ 40 ಸ್ಥಾನಗಳನ್ನು ಗೆದ್ದರೆ ಯಾಕಾಗಬಾರದು? ಇದೇ ವೇಳೆ ಆಕೆ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಹೋಗುತ್ತಾರೆ. ಈ ಸಂಬಂಧ ನಮ್ಮ ಮೇಲೆ ಪರಿಣಾಮ ಬೀರುತ್ತಿವೆ. ಸರ್ಕಾರ ಡಿಎಂಕೆಯಿಂದಾಗಿ ನಡೆಯುತ್ತಿದೆ. ಸರ್ಕಾರ ನಮಗೆ ನ್ಯಾಯ ಕೊಡಲು ಬಯಸುತ್ತಿಲ್ಲ. ನಮ್ಮ 186 ವರ್ಷಗಳ ಹೋರಾಟಕ್ಕೆ ನ್ಯಾಯಾದಕ್ಕುತ್ತದೆಯೇ ಎಂಬುದನ್ನು ನಾನು ಸದನಕ್ಕೆ ಮತ್ತು ದೇಶಕ್ಕೆ ಬಿಡುತ್ತೇನೆ.
ಈಗ ಜಯಲಲಿತಾಗೆ ಹುಟ್ಟುಹಬ್ಬದ ಉಡುಗೊರೆ, ಅದನ್ನು ಅವರು ಸ್ವಾಗತಿಸುತ್ತಾರೆ ಕೂಡ. ಆಕೆ ಸಂತೋಷಕ್ಕಾಗಿ ಈ ಉಡುಗೊರೆ. ನನ್ನ ರಾಜಕೀಯ ಕೊನೆ ಹಂತದಲ್ಲಿ ನಾನು ಕಣ್ಣೀರು ಹಾಕುವಂತೆ ಮಾಡಬೇಡಿ, ನನ್ನ 80 ವರ್ಷದ ಜೀವನದಲ್ಲಿ ನಾನು 56 ವರ್ಷ ಕಾವೇರಿಗಾಗಿ ಹೋರಾಟ ಮಾಡಿದ್ದೇನೆ. ನಮ್ಮ ಜನರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಅಥವಾ ಕಾನೂನು ಮುರಿಯಲು ಹೇಳಲಾದೀತೆ? ನಾನೆಂದೂ ಹೇಳಿಲ್ಲ. 1991ರಲ್ಲಿ ಜಯಲಲಿತಾ ಉಪವಾಸ ಮಾಡಿದರು. ಈ ರಾಷ್ಟ್ರದಲ್ಲಿ ಅದೇ ಮೊದಲ ಬಾರಿಗೆ ಮಧ್ಯಂತರ ಆದೇಶ ನೀಡಿದರು. ಇಡೀ ಪ್ರಪಂಚದಲ್ಲಿ ಯಾವುದೇ ಅಂತಾರಾಜ್ಯ ಜಲ ವಿವಾದದಲ್ಲಿ, ಅಂತಾರಾಷ್ಟ್ರೀಯ ಜಲವಿವಾದದಲ್ಲಿ ಮಧ್ಯಂತರ ಆದೇಶ ನೀಡಿಲ್ಲ. ನಾವು ಅಧಿಕಾರದಲ್ಲಿದ್ದಾಗ ಭಾರತ- ಬಾಂಗ್ಲಾದೇಶ ನಡುವೆ ಗಂಗಾ ಜಲ ವಿವಾದವನ್ನು ಬಗೆಹರಿಸಿದೆವು. ಇಲ್ಲಿರುವ ಒಬ್ಬ ನಾಯಕರು ಆಗ ಉಪಸ್ಥಿತರಿದ್ದರು. ಆ ವಿವಾದ ಸುಮಾರು 35 ವರ್ಷಗಳಿಂದ ಇತ್ತು. ಆದರೆ, ನಾವು ಅದನ್ನು ಬಗೆಹರಿಸಿದೆವು. ಅಂದು ಮಾಡಿಕೊಂಡ ಒಪ್ಪಂದ ಈಗ ಸರಾಗವಾಗಿ ನಡೆಯುತ್ತಿದೆ. ನಾವು ಈ ವಿಷಯವನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲವೆ? ಡಾ. ತಂಬಿದೊರೈ ಅವರೆ, ನೀವು ಗಡಿ ಭಾಗದಲ್ಲಿ ಒಂದು ಅಣೆಕಟ್ಟೆ ಕಟ್ಟಿಕೊಂಡರೆ ವಿವಾದ ತನ್ನಿಂತಾನೆ ಬಗೆಹರಿಯುತ್ತದೆ. ಅವರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ. ಈಗ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುತ್ತಿದೆ. ಈ ನಿಟ್ಟಿನಲ್ಲಿ ಹೋರಾಟ ಮಾಡೋದು ಬೇಡ, ನಾವು ಒಗ್ಗಟ್ಟಾಗಿ ನಿರ್ಧಾರ ಕೈಗೊಳ್ಳೋಣ,
ಹೌದು. ನಾನು ಹೇಳುತ್ತೇನೆ, ಅವರು 192 ಟಿಎಂಸಿ ಕೇಳುತ್ತಿದ್ದಾರೆ. ಈ ವಿವಾದ ಹುಟ್ಟಿಕೊಂಡಿದ್ದು, ಜಯಲಲಿತಾ 1991ರಲ್ಲಿ ಉಪವಾಸ ಮಾಡಿದ್ದರಿಂದ. ಇದು ಸದನದ ಗಮನಕ್ಕೂ ಬರಲಿ, 1991-92ರಲ್ಲಿ 340 ಟಿಎಂಸಿ ನೀರು ಹರಿದು ಹೋಗಿದೆ. ಆದರೆ, ಈಗ ಅವರು ಕೇಳುತ್ತಿರುವುದು 195 ಟಿಎಂಸಿ. ನಾವು ಅಣೆಕಟ್ಟು ಕಟ್ಟುವ ಪ್ರಸ್ತಾಪ ಇಟ್ಟಾಗ ಕೇಂದ್ರ ಸರ್ಕಾರ ಒಂದು ಪೈಸೆ ಕೂಡಾ ನೀಡಲಿಲ್ಲ. ಆದರೆ, 1924ರ ಒಪ್ಪಂದವನ್ನು ಉಲ್ಲಂಘಿಸಿ ತಮಿಳುನಾಡಿನಲ್ಲಿ ಹಲವು ಅಣೆಕಟ್ಟೆಗಳನ್ನು ಕಟ್ಟಿದ್ದಾರೆ. ಅವರು ಕರ್ನಾಟಕದ ಅನುಮತಿ ಪಡೆದಿದ್ದಾರೆಯೆ? ಭಾರತ ಸರ್ಕಾರ ತಮಿಳುನಾಡಿಗೆ ಸಹಾಯ ಮಾಡುತ್ತಿದೆ. ತಮಿಳುನಾಡಿಗೆ ರಾಜಕೀಯ ಬೆಂಬಲ ಇದೆ.
ಈ ಸದನದ ಮಾಹಿತಿಗಾಗಿ ನಾನು ಗಡಿಯಿಂದ ಎಷ್ಟು ನೀರು ಹರಿದು ಹೋಗುತ್ತದೆ ಎಂಬುದನ್ನು ತಿಳಿಸುತ್ತೇನೆ.  ತಮಿಳುನಾಡಿನವರು ಈಗ 195 ಟಿಎಂಸಿ ಕೇಳುತ್ತಿದ್ದಾರೆ. 1992ರಲ್ಲಿ 340 ಟಿಎಂಸಿ, 1993ರಲ್ಲಿ 358 ಟಿಎಂಸಿ, 1994ರಲ್ಲಿ 234 ಟಿಎಂಸಿ, 95ರಲ್ಲಿ 393 ಟಿಎಂಸಿ, 1996ರಲ್ಲಿ 195 ಟಿಎಂಸಿ, 1997ರಲ್ಲಿ 248 ಟಿಎಂಸಿ, 1998ರಲ್ಲಿ 278 ಟಿಎಂಸಿ ನೀರು ಹರಿದು ಸಮುದ್ರ ಸೇರಿದೆ. ತಮಿಳುನಾಡಿನವರು ಗರಿಷ್ಠ ನೀರು ಬಯಸುತ್ತಿದ್ದಾರೆ. ಅಷ್ಟೇ ಅಲ್ಲ ನಮ್ಮ ಕುಡಿಯುವ ನೀರಿನ ಹಕ್ಕನ್ನೂ ಕಿತ್ತುಕೊಳ್ಳುತ್ತಿದ್ದಾರೆ. ಕೇರಳ ರಾಜ್ಯ ಅಣೆಕಟ್ಟು ಕಟ್ಟ ಬಯಸಿದೆ. ಆದರೆ, ತಮಿಳುನಾಡು ಒಪ್ಪಿಗೆ ನೀಡಿಲ್ಲ. ಸಮ್ಮಿಶ್ರ ಸರ್ಕಾರ ನಡೆಸುವುದು ಎಷ್ಟು ಕಷ್ಟ ಎಂಬುದು ಪ್ರಧಾನಿಗಳಿಗೆ ಗೊತ್ತು. ಇದು ರಾಜಕೀಯ ಕ್ಷಾಮ...!
ಕರ್ನಾಟಕ ಮತ್ತು ಆಂಧ್ರದ ಮಧ್ಯೆ ವಿವಾದ ಇಲ್ಲ. ನಾವು ಬಗೆಹರಿಸಿಕೊಂಡಿದ್ದೇವೆ. ಆಂಧ್ರ, ಕರ್ನಾಟಕ ಮತ್ತು ಮಹಾರಾಷ್ಟ್ರ ಈಗ ಕೃಷ್ಣ ನೀರಿಗಾಗಿ ಹೋರಾಡುತ್ತಿವೆ. 5 ಟಎಂಸಿ ನೀರನ್ನು ಮಹಾರಾಷ್ಟ್ರಕ್ಕೂ 5 ಟಿಎಂಸಿ ನೀರನ್ನು ಆಂಧ್ರಕ್ಕೂ ನೀಡಬೇಕು. ಚೆನ್ನೈನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ ಮೆಡಮ್ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತದೆ. ಉಳಿದ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಚೆನ್ನೈಗೆ ನೀರು ಬಿಡಲು ಒಪ್ಪುತ್ತಾರೆ. ನಾನು ಕಾವೇರಿ ಕಣಿವೆಯ 2.27 ಕೋಟಿ ಜನರಿಗೆ ಕುಡಿಯುವ ನೀರು ಒದಗಿಸಿ ಎಂದು ಕೇಳಲು ಈ ಸದನದ ಮುಂದೆ ನಿಂತಿದ್ದೇನೆ. ನ್ಯಾಯಾಧಿಕರಣದ ಪರಿಭಾವನೆಯಂತೆ 8.7 ಟಿಎಂಸಿ ನೀರನ್ನು ಅಂತರ್ಜಲದಿಂದ ಪಡೆಯಬೇಕು. ನಮಗೆ 70 ಟಿಎಂಸಿ ನೀರು ಬೇಕು. ಯಾರು ಬೇಕಾದರೂ ಈ ಸೂತ್ರದಂತೆ ಲೆಕ್ಕ ಹಾಕಬಹುದು.
ಗೌರವಾನ್ವಿತ ಪ್ರಧಾನಿಗಳು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡುತ್ತೇನೆ. ನಾವು ಬೆಂಬಲ ಹಿಂಪಡೆಯುತ್ತೇವೆಂದು ಎಂದೂ ಹೇಳಿಲ್ಲ. ನಾವು ಸದನದಲ್ಲಿ ಕೇವಲ ಮೂವರು ಸದಸ್ಯರಿದ್ದೇವೆ. ಬಿಜೆಪಿ 17 ಸದಸ್ಯರಿದ್ದಾರೆ. ಕಾಂಗ್ರೆಸ್ 6 ಸದಸ್ಯರಿದ್ದಾರೆ. ಅವರೆಂದೂ ತಮ್ಮ ಧ್ವನಿ ಎತ್ತಲಾರರು. ಅಗತ್ಯ ಬಿದ್ದರೆ ನಾನು ಅನಿರ್ದಿಷ್ಟ ಕಾಲದ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧ. ನನ್ನ ಬದುಕು ಬಹುತೇಕ ಮುಗಿಯುತ್ತಾ ಬಂದಿರುವುದರಿಂದ ಇದೇ ನನ್ನ ಕೊನೆ ಹೋರಾಟ. ಅದನ್ನು ಈಗ ಗೌರವಾನ್ವಿತ ಸದನದ ಗಮನಕ್ಕೆ ತರುತ್ತಿದ್ದೇನೆ. ಧನ್ಯವಾದಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement