ಮನಮೋಹನ್ ಹುಲ್ಲಿನ ಗರಿಯಾದರೆ, ಮೋದಿ ಆಲದ ಮರ!
ಕಳೆದ ಒಂದು ವಾರದಲ್ಲಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರಿಂದ ಹೊರಬಿದ್ದ ಹೇಳಿಕೆಗಳ ಬಗ್ಗೆ ...
ಕಳೆದ ಒಂದು ವಾರದಲ್ಲಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರಿಂದ ಹೊರಬಿದ್ದ ಹೇಳಿಕೆಗಳ ಬಗ್ಗೆ ನಮ್ಮ ಪ್ರತಿಕ್ರಿಯೆಯನ್ನು ನೋಡಿದಾಗ, ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಮನಸ್ಥಿತಿ ಹೇಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಪ್ರಧಾನಿ ಸಿಂಗ್ ಅವರು ಬಿಜೆಪಿಯ ಹಳೆಯ ಗಾಯಗಳಲ್ಲಿ ಮೆಲ್ಲಗೆ ಚೂರಿ ತೂರಿಸಿ ತಿರುಗಿಸಿಬಿಟ್ಟರು. 'ಭಾರತ ಪ್ರಕಾಶಿಸುತ್ತಿದೆ' ಎಂದು ಹೇಳುತ್ತಾ ಹೇಗೆ ಬಿಜೆಪಿ ತನ್ನ ಪ್ರಕಾಶ ಕಳೆದುಕೊಂಡಿತು, 'ಐರನ್ ಮ್ಯಾನ್' ಆಡ್ವಾಣಿ ಇದ್ದರೂ ಕೂಡ 2009ರಲ್ಲಿ ಹೇಗೆ ಯುಪಿಎ ಜಯಭೇರಿ ಬಾರಿಸಿತು ಎಂದು ಗುಡುಗಿದ್ದಷ್ಟೇ ಅಲ್ಲದೆ, ತನ್ನ 'ಅಹಂಕಾರ'ದಿಂದಾಗಿ ವಿರೋಧ ಪಕ್ಷ 2014ರ ಚುನಾವಣೆಯಲ್ಲಿ ಮಕಾಡೆ ಮಲಗಲಿದೆ ಎಂದು ಭವಿಷ್ಯ ನುಡಿದರು. ಅಲ್ಲದೆ ಎನ್ಡಿಎಗಿಂತ ಯುಪಿಎದ ಆಡಳಿತಾವಧಿಯಲ್ಲೇ ಹೆಚ್ಚು ಅಭಿವೃದ್ಧಿಯಾಗಿದೆ ಎಂದು ಹೇಳಿದರು. ಆದರೆ ಈಗ ಅಭಿವೃದ್ಧಿ 5 ಪ್ರತಿಶತಕ್ಕಿಂತಲೂ ಕೆಳಗಿಳಿದಿದೆ, ಹಣದುಬ್ಬರ ಎರಡಂಕಿಯನ್ನು ದಾಟಿದೆ ಎನ್ನುವುದು ಬೇರೇ ವಿಷಯ!
ಮಾಧ್ಯಮಗಳಂತೂ ಆನಂದ ಪರವಶವಾಗಿ 'ಗರ್ಜಿಸಿದ ಇಲಿ' ಎಂದು ಪ್ರಧಾನಿಗಳನ್ನು ಕೊಂಡಾಡಿದವು. ಮನಮೋಹನ್ ಸಿಂಗ್ ಅವರು ಎನ್ಡಿಎದ ಮೇಲೆ ಹರಿಹಾಯುತ್ತ ಮಾತಲ್ಲಿ ಮೇಲುಗೈ ಸಾಧಿಸಿದರು ಎನ್ನುವುದು ಸತ್ಯ. ಆದರೆ ಇಷ್ಟು ವರ್ಷ ಸುಮ್ಮನಿದ್ದ ವ್ಯಕ್ತಿ ಏಕಾಏಕಿ ಹೀಗೆ ಆರ್ಭಟಿಸಿದ್ದೇಕೆ? 2ಜಿ ಮತ್ತು ಕಲ್ಲಿದ್ದಲು ಹಗರಣದಲ್ಲಿ ತಮ್ಮವರು ಖಜಾನೆಯ ಕೊಳ್ಳೆ ಹೊಡೆಯುವಾಗ ಮೌನವಾಗಿದ್ದ 'ಲೋ ಪರ್ಫಾಮಿಂಗ್' ಪ್ರಧಾನಿಗಳನ್ನು, '9 ವರ್ಷ ಆಡಳಿತ ನಡೆಸಿದ್ದಾರೆ' ಎನ್ನುವ ಏಕೈಕ ಕಾರಣದಿಂದ ಹೀರೋನಂತೆ ಬಿಂಬಿಸುತ್ತಿರುವುದೇಕೆ?
ಈ ಪ್ರಶ್ನೆಗೆ ನಾವು ಆಮೇಲೆ ಉತ್ತರ ಕಂಡುಕೊಳ್ಳೋಣ. ಇಲಿ ಗರ್ಜಿಸಿದ್ದಕ್ಕೂ ಮುನ್ನ ರಾಹುಲ್ ಗಾಂಧಿಯವರು ಏನು ಹೇಳಿದರೋ ಒಮ್ಮೆ ನೋಡೋಣ. 'ನೀವು ಪ್ರಧಾನಿಯಾಗ ಬಯಸುತ್ತೀರಾ ಎಂಬ ಪ್ರಶ್ನೆ ಕೇಳುವುದೇ ತಪ್ಪು. ಪ್ರಧಾನಿ ಹುದ್ದೆ ನನ್ನ ಆದ್ಯತೆ ಅಲ್ಲ.' ಎಂದ ಅವರು ಮದುವೆಯ ವಿಷಯವೆದ್ದಾಗ, 'ಮದುವೆಯಾದ ಮೇಲೆ ಮಕ್ಕಳಾಗುತ್ತವೆ. ಬಳಿಕ ನನ್ನ ಸ್ಥಾನದಲ್ಲಿ ಮಕ್ಕಳನ್ನು ಕೂರಿಸಲು ಪ್ರಯತ್ನಿಸುತ್ತೇನೆ! ಹಾಗಾಗೇ ಅದೂ ನನ್ನ ಪ್ರಯಾರಿಟಿ ಅಲ್ಲ' ಎಂದು ಚಟಾಕಿ ಹಾರಿಸಿದರು. ಮಾಧ್ಯಮದವರಂತೂ ಈ ಬಾರಿ ಹೆಚ್ಚು ಭಾವ ಪರವಶರಾದರು, ಆದರೆ ರಾಹುಲ್ಗೆ ಅಧಿಕಾರದ ಆಸೆಯೇ ಇಲ್ಲ ಎನ್ನುವ ವಾದವನ್ನು ಒಪ್ಪಿಕೊಳ್ಳಲು ಅವರು ತಯಾರಿರಲಿಲ್ಲ. ಸೋನಿಯಾ 2004ರಲ್ಲಿ ಪ್ರಧಾನಿ ಹುದ್ದೆಯನ್ನು ನಿರಾಕರಿಸಿದಾಗಲೂ ಅವರಿಗೆ 'ಅಧಿಕಾರದಾಸೆ ಇಲ್ಲ' ಎಂದು ಅಟ್ಟಕ್ಕೇರಿಸಲಾಗಿತ್ತು. ಇನ್ನು ರಾಹುಲ್ರಿಗೆ ಪಕ್ಷದಲ್ಲಿರುವ ಸ್ಥಾನವನ್ನು ನೋಡಿದರೆ ಅವರಿಗಿರುವ ಮಹತ್ವಾಕಾಂಕ್ಷೆಯ ಕೊರತೆಯ ದರ್ಶನವಾಗುತ್ತದೆ. ಆದರೂ ಅವರನ್ನು 'ಅತ್ಯಂತ ಅರ್ಹ ಅಭ್ಯರ್ಥಿ' ಎಂದೇ ಬಿಂಬಿಸಲಾಗುತ್ತದೆ.
ಇದಕ್ಕೂ ಕೆಲ ದಿನಗಳ ಮುನ್ನ, ಬಿಜೆಪಿಯ ಅಘೋಷಿತ ಪ್ರಧಾನಿ ಹುದ್ದೆ ಅಭ್ಯರ್ಥಿ ನರೇಂದ್ರ ಮೋದಿಯವರು, 'ಪಕ್ಷದ ಕಾರ್ಯಕರ್ತರು ಅಧಿಕಾರಕ್ಕಾಗಿ ಹೋರಾಡಬೇಕು' ಎನ್ನುವ ಮೂಲಕ ಅಧಿಕಾರವನ್ನು ಹಿಡಿಯಲು ತಮಗೆ ಹೆಚ್ಚಿನ ಒಲವಿದೆ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದರು. ಮನಮೋಹನ್ ಸಿಂಗ್ ಅವರನ್ನು 'ನೈಟ್ ವಾಚ್ಮನ್' ಎಂದು ಕರೆದ ಮೋದಿ, ಕಾಂಗ್ರೆಸ್ ಪಕ್ಷಕ್ಕೆ 'ಗೆದ್ದಲು' ಹಿಡಿದಿವೆ ಎನ್ನುತ್ತಾ ಕೊನೆಗೆ, 'ಬಿಜೆಪಿಗಿದೆ ಮಿಷನ್ ಕಾಂಗ್ರೆಸ್ನ ಗುರಿ ಬರೀ ಕಮಿಷನ್' ಎಂದು ಆ ಪಕ್ಷದ ವಿರುದ್ಧ ಹರಿಹಾಯ್ದರು.
ಇನ್ನು ಅವರ ಮಾತಿಗೆ ಮಾಧ್ಯಮಗಳು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದವು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೆ. 'ಮೋದಿಯವರಿಗೆ ಈಗ ಪಕ್ಷದ ಒಳಗಿನಿಂದಲೇ ಹೆಚ್ಚು ಸಮಸ್ಯೆಗಳು ಎದುರಾಗಲಿವೆ' ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದರೆ, ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಂತೂ ಮೋದಿಯವರಿಗೆ ಆ ಸಭೆಯಲ್ಲಿ ಅಷ್ಟೊಂದು ಪ್ರಾಮುಖ್ಯತೆ ಕೊಡಲೇಬಾರದಿತ್ತು ಎಂದು ಕೆಂಡವಾಯಿತು. 'ಶಿವರಾಜ್ ಸಿಂಗ್ ಚೌಹಾಣ್, ರಮಣ್ ಸಿಂಗ್ ಮತ್ತು ಮನೋಹರ್ ಪರಿಕ್ಕರ್ರಂತಹ ಮುಖ್ಯಮಂತ್ರಿಗಳು ಮೋದಿಗಿಂತಲೂ ಉತ್ತಮ ಕೆಲಸ ಮಾಡಿದ್ದಾರೆ, ಅವರನ್ನೇಕೆ ಪಕ್ಷ ಮರೆಯಿತು?' ಎಂದು ಅದು ಪ್ರಶ್ನಿಸಿದೆ.
ಹಾಸ್ಯವೆಂದರೆ, ಮೋದಿ ಸೆಂಟರ್ ಸ್ಟೇಜ್ಗೆ ಬಂದಾಕ್ಷಣ ಮಾಧ್ಯಮಗಳಿಗೆ ಇನ್ನಿತರ ಮುಖ್ಯಮಂತ್ರಿಗಳ ಸಾಧನೆಗಳೆಲ್ಲ ಕಾಣಿಸತೊಡಗುತ್ತವೆ ಎಂಬುದು. ಮೋದಿಯವರ ವಿಷಯ ಬರದಿದ್ದರೆ ಉಳಿದವರ ಬಗ್ಗೆ ಅವು ತಲೆಕೆಡಿಸಿಕೊಳ್ಳುವುದೇ ಇಲ್ಲ!
ಮೋದಿ, ರಾಹುಲ್ ಮತ್ತು ಸಿಂಗ್ ಅವರ ಬಗ್ಗೆ ಮಾಧ್ಯಮಗಳ ಮತ್ತು ಜನರ ಪ್ರತಿಕ್ರಿಯೆಯನ್ನು ತಾಳೆ ಮಾಡಿ ನೋಡಿದಾಗ ವಿವಿಧ ಸಂಗತಿಗಳು ಹೊರಬೀಳುತ್ತವೆ. ಮೊದಲನೆಯದು, ಬೂಟಾಟಿಕೆ. ಒಳಗೊಳಗೆ ಏನೋ ಆಸೆ ಇರುತ್ತದೆ. ಆದರೆ ತನಗೆ ಆ ಆಸೆಯಿಲ್ಲ, ತಾನು ತ್ಯಾಗಿ ಎಂದು ತೋರಿಸಿಕೊಳ್ಳುವುದು. ಪ್ರಧಾನ ಮಂತ್ರಿಯಾಗುವ ಆಸೆಯಿತ್ತೆಂದರೆ ರಾಹುಲ್ ಗಾಂಧಿ ಅವರಂತೆ ವರ್ತಿಸಬೇಕು. ಸಾಚಾತನಕ್ಕೆ ಭಾರತದಲ್ಲಂತೂ ಬೆಲೆಯಿಲ್ಲ. ಉದಾಹರಣೆಗೆ, ನರೇಂದ್ರ ಮೋದಿ ಅವರು ತಮ್ಮ ಇಂಗಿತವನ್ನು ಹೊರಗೆಡವಿದಾಕ್ಷಣ ಎಲ್ಲರ ಬಾಯಲ್ಲೂ ಒಂದೇ ಮಾತು-'ಮೋದಿಗೆ ಪ್ರಧಾನ ಮಂತ್ರಿ ಆಗುವ ಆಸೆಯಿದೆಯಂತೆ! ಎಷ್ಟು ದರ್ಪ, ಎಷ್ಟು ಸ್ವಾರ್ಥ!'
ಹಾಗಂತ ಈ ಬೂಟಾಟಿಕೆ ಪಾಶ್ಚಿಮಾತ್ಯರಲ್ಲಿ ಇಲ್ಲ ಎಂದರ್ಥವಲ್ಲ. ಆದರೆ ಅವರು ಅದನ್ನು ಪ್ರದರ್ಶಿಸುವ ರೀತಿ ತುಸು ಭಿನ್ನ. ಅಧಿಕಾರ ಪಡೆಯುವ ಆಸೆಯಿದ್ದರೂ, ಅದನ್ನು ನೈತಿಕತೆಯ ಪ್ರಶ್ನೆಯೆತ್ತಿ ಅವರು ಪಡೆಯುತ್ತಾರೆ. ಸದ್ದಾಂ ಹುಸೇನ್ರನ್ನು ಕೆಳಗಿಳಿಸಬೇಕೆಂದರೆ, ಅವರ ಬಳಿ ಸಾಮೂಹಿಕ ನಾಶದ ಶಸ್ತ್ರಾಸ್ತ್ರಗಳು ಇವೆ ಎಂದು ಹೇಳಿಯೇ ದಾಳಿ ಮಾಡಲಾಗುತ್ತದೆ. ಭಾರತ ಅಥವಾ ಇನ್ನಿತರ ರಾಷ್ಟ್ರಗಳನ್ನು ಮಂಡಿಯ ಮೇಲೆ ಕೂರಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು ಬಳಸಿಕೊಳ್ಳುವ ಅಸ್ತ್ರ, 'ಮಾನವ ಹಕ್ಕು ಉಲ್ಲಂಘನೆ'. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮೇಲೆ ಡ್ರೋನ್ ದಾಳಿ ಮಾಡಿ ಅನೇಕ ಅಮಾಯಕರನ್ನು ಸಾಯಿಸುವುದು ನೈತಿಕವಾಗಿ ಸಮರ್ಥನೀಯ ಕೆಲಸ, ಅದೇ ಬಾಂಬ್ ದಾಳಿಯಿಂದ ಸಾಯುವವರೆಲ್ಲ ಉಗ್ರವಾದಿಗಳು! ಹೇಗಿದೆ ನೋಡಿ? ಇದನ್ನು Super-Sophisticated Hypocrisyಎಂದೂ ಕರೆಯಬಹುದು.
ಎರಡನೆಯದು, ಹುಸಿ ನಮ್ರತೆ. ಭಾರತದಲ್ಲಂತೂ ಇದರಷ್ಟು ಚೆನ್ನಾಗಿ ಯಾವುದೂ ಕೆಲಸ ಮಾಡಲಾರದು. ನೀವೇನಾದರೂ ಸಾಧಿಸಿದ್ದೀರೆಂದರೆ ಎಲ್ಲದಕ್ಕೂ 'ಅದೃಷ್ಟ' ಅಥವಾ 'ದೇವರ ದಯೆ' ಅಥವಾ 'ಕುಟುಂಬದ-ಗೆಳೆಯರ' ಬೆಂಬಲವೇ ಕಾರಣ ಎಂದು ಹೇಳಬೇಕು. ಆದರೆ ಅಪ್ಪಿತಪ್ಪಿಯು ಸ್ವಪ್ರಯತ್ನದಿಂದಾಗಿ ಯಶಸ್ಸು ದೊರಕಿತು ಎಂದು ಹೇಳಬೇಡಿ. ಇದೇ ಕಾರಣದಿಂದಾಗಿಯೇ ಮೋದಿಯವರ ಮಾತನ್ನು ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಗುಜರಾತ್ನ ಅಭಿವೃದ್ಧಿ ತಮ್ಮ ಪ್ರಯತ್ನದಿಂದಾಗಿ ಆಗಿದ್ದು ಎಂದು ಅವರು ಹೇಳಿಕೊಳ್ಳುತ್ತಿರುವುದನ್ನು ಎಲ್ಲರೂ ಮಹಾಪರಾಧದಂತೆ ನೋಡುತ್ತಿರುವುದು ಇದೇ ಕಾರಣಕ್ಕೆ.
ಇನ್ನು ಭಾರತದಲ್ಲಿ ಅಳತೆ ಮೀರಿದ ನಮ್ರತೆ ಪ್ರದರ್ಶಿಸುವುದರಿಂದಲೂ ಹೆಚ್ಚು ಪ್ರಸಿದ್ಧಿ ಪಡೆಯಬಹುದು. ಹಾಗಾಗೆ ಮನಮೋಹನ್ ಸಿಂಗ್ ಅವರು 'ಯುಪಿಎ ಸರ್ಕಾರದಡಿಯಲ್ಲಿಯೇ ಭಾರತ ಹೆಚ್ಚು ಅಭಿವೃದ್ಧಿಯನ್ನು ಕಂಡಿದೆ' ಎಂದು ಹೇಳಿದಾಗ ಅವರ ಮಾತನ್ನು ನಾವು ನಂಬುತ್ತೇವೆ. ಆದರೆ ಮೋದಿ 'ಗುಜರಾತ್ ಮಾದರಿಯ' ಬಗ್ಗೆ ಮಾತನಾಡಿದಾಕ್ಷಣ 'ಅದೆಲ್ಲ ಸುಳ್ಳು, ಅಹಂಕಾರಿ' ಎಂಬ ಮೂದಲಿಕೆ! ಮೂರನೆಯದಾಗಿ, ದುರ್ಬಲರೆಂದು ಬಿಂಬಿಸಿಕೊಳ್ಳುವುದು. ದುರ್ಬಲತೆಯೇ ಮನಮೋಹನ್ ಸಿಂಗ್ ಅವರ ಶಕ್ತಿ! ಇದೇ ಕಾರಣದಿಂದಾಗಿಯೇ ಅವರು ಇಷ್ಟು ವರ್ಷದಿಂದ ಕುರ್ಚಿಯಲ್ಲಿ ಗಟ್ಟಿಯಾಗಿ ಕುಳಿತಿದ್ದಾರೆ.
ರಾಜಕೀಯದಲ್ಲಿ ಹೆಚ್ಚು ಕಾಲ ಉಳಿಯಬೇಕೆಂದರೆ ಯಾವ ಸಾಧನೆಯನ್ನೂ ಮಾಡಿರಬಾರದು ಮತ್ತು ದುರ್ಬಲರಾಗಿರಬೇಕು. ಶಕ್ತಿ ಮತ್ತು ಯಶಸ್ಸು ವೈರಿಗಳ ಕಣ್ಣು ಕುಕ್ಕಿಸುತ್ತದೆ! ಇದೇ ಕಾರಣಕ್ಕಾಗಿಯೇ ಏನೋ ನಾವು ಎಂದಿಗೂ ಕೂಡ ಯಶಸ್ಸನ್ನು ನೋಡಿ ಸಂಭ್ರಮಿಸುವುದೇ ಇಲ್ಲ, ಬರೀ ಸೋಲುಗಳತ್ತಲೇ ನಮ್ಮ ಚಿತ್ತ ನೆಟ್ಟಿರುತ್ತದೆ.
ಇದರರ್ಥವಿಷ್ಟೆ, ಕಣ್ಣೆದುರು ತಪ್ಪು ನಡೆಯುತ್ತಿದ್ದರೂ ಕಾಂಪ್ರಮೈಸ್ ಮಾಡಿಕೊಂಡು ಸುಮ್ಮನೇ ನೋಡುತ್ತಾ ಇರಬೇಕು. ಹುಲ್ಲು ಗರಿಯಂತೆ ಗಾಳಿ ಎತ್ತ ಬೀಸುತ್ತದೋ ಅತ್ತ ಬಾಗಿದರೆ ಕ್ಷೇಮವಾಗಿರಬಹುದು. ಮನ ಮೋಹನ್ ಸಿಂಗ್ ಅವರು ಈ ನಿಯಮವನ್ನು ಅನುಸರಿಸಿಕೊಂಡು ಹಾಯಾಗಿದ್ದಾರೆ. ಆದರೆ ಆಲದ ಮರವನ್ನು ಅಲುಗಾಡಿಸುವ ಶಕ್ತಿ ಸಾಮಾನ್ಯ ಗಾಳಿಗಿರುವುದಿಲ್ಲ, ಅದನ್ನು ಅಲುಗಾಡಿಸಬೇಕೆಂದರೆ ಬಿರುಗಾಳಿಯೇ ಬೀಸಬೇಕು.
ಮನಮೋಹನ್ ಸಿಂಗ್ರನ್ನು ಹುಲ್ಲಿನ ಗರಿಗೆ ಹೋಲಿಸಿದರೆ, ಮೋದಿಯವರನ್ನು ಆಲದ ಮರಕ್ಕೆ ಹೋಲಿಸಬಹುದು. ಗಾಳಿ ಬೀಸಿದತ್ತ ಬಾಗಿ ಮನಮೋಹನ್ ಸಿಂಗ್ 9 ವರ್ಷಗಳ ವರೆಗೆ ಯಶಸ್ವಿಯಾಗಿ ಕುರ್ಚಿಯಲ್ಲಿ ಕುಳಿತಿದ್ದಾರೆ. ಮನಮೋಹನ್, ಮೋದಿ ಮತ್ತು ರಾಹುಲ್ರ ಗುಣಗಳ ಬಗ್ಗೆ ನಮಗೀಗ ಗೊತ್ತಾಗಿದೆ. ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಪ್ರಶ್ನೆ ನಮ್ಮ ಮುಂದಿದೆ. ಬೂಟಾಟಿಕೆ, ಹುಸಿ ನಮ್ರತೆಗಳೇ ಇಂದಿನವರೆಗೂ ನಮ್ಮ ದೇಶದಲ್ಲಿ ನಡೆಯುತ್ತಾ ಬಂದಿವೆ. ಆದರೆ ನಿಜವಾದ ನಾಯಕನಾದವನು ಆತ್ಮವಿಶ್ವಾಸಿಯಾಗಿರುತ್ತಾನೆ, ಬದಲಾವಣೆಗಾಗಿ ಹಾತೊರೆಯುತ್ತಿರುತ್ತಾನೆ, ನಿರ್ದಿಷ್ಟ ಅಜೆಂಡಾ ಹೊಂದಿರುತ್ತಾನೆ. ಅಲ್ಲದೆ ಆತನಿಗೆ ಅಹಂಕಾರವೂ ಇರುತ್ತದೆ. ಅವನು ಮಾಡುವ ಪ್ರತಿ ಕಾರ್ಯದ ಬಗ್ಗೆಯೂ ನಮಗೆ ಸಮ್ಮತಿ ಇಲ್ಲದಿರಬಹುದು. ಆದರೆ ಆತ ಇರುವ ಸ್ಥಾನದ ಮಹತ್ವ ಎಂಥದ್ದು ಎಂಬುದಾದರೂ ನಮಗೆ ಗೊತ್ತಾಗುತ್ತದೆ.
2014ರಲ್ಲಿ ಭಾರತೀಯರಿಗೆ ಯಾವ ರೀತಿಯ ಭಾರತ ಬೇಕು ಎಂಬುದು ಸ್ಪಷ್ಟವಾಗಿ ಗೊತ್ತಾಗಲಿದೆ.
- ಆರ್. ಜಗನ್ನಾಥನ್
anisikeprabha@gmail.com