ಈ ಕತೆ ಅರ್ಧ ಸತ್ಯವಾಗಿದ್ದರೆ, ಇನ್ನರ್ಧ ಸತ್ಯವೇನು?
ಸಾವು ಅರ್ಧ ಸತ್ಯವಾಗಿರಬಹುದೇ? ನಿಗೂಢ ಕಾದಂಬರಿ ಪ್ರಕಾರಗಳನ್ನು ಓದಿದವರಿಗೆ ಇದು ಸತ್ಯವೆನಿಸಬಹುದು. ಹಾಗೆ ನೋಡಿದರೆ, ಒಂದು ಕೊಲೆ ಹೊಸ ಚರ್ಚೆಗೆ ದಾರಿಯಾಗುತ್ತದೆ. ಈ ಚರ್ಚೆಗಳಿಂದ ಸತ್ತವರಿಗೇನೂ ಉಪಯೋಗವಿಲ್ಲ; ಆದರೆ ಬದುಕಿರುವವರಿಗಂತೂ ಇದು ಹೆಚ್ಚು ಚಿಂತೆಗೆ ಹಚ್ಚುವ ವಿಷಯ.
12 ವರ್ಷದ ಬಾಲಕ ಬಾಲಚಂದ್ರನ್ ಸಾವಿನ ಚಿತ್ರಗಳು ನಿಜಕ್ಕೂ ಮೈ ನಡುಗಿಸುವಂತಿವೆ. ಆ ಹುಡುಗನ ಮುಗ್ಧ ಮುಖವನ್ನು ನೋಡಿದಾಗ ಮನಸ್ಸಿಗೆ ಇನ್ನಷ್ಟು ಯಾತನೆ ಆಗುತ್ತದೆ. ಅವನು ಮಾಡಿದ ಏಕೈಕ ತಪ್ಪೆಂದರೆ ತಪ್ಪು ತಂದೆ ತಾಯಿಗೆ ಹುಟ್ಟಿದ್ದು. ಬಾಲಚಂದ್ರನ್, ಲಂಕಾದ ತಮಿಳರಿಗಾಗಿ ಪ್ರತ್ಯೇಕ ರಾಷ್ಟ್ರ ನಿರ್ಮಾಣ ಮಾಡಲು ಹೆಣಗಾಡಿ ಕೊನೆಗೆ ನಿರ್ನಾಮವಾಗಿಹೋದ ಎಲ್ಟಿಟಿಇಯ ಸರ್ವಾಧಿಕಾರಿ ಪ್ರಭಾಕರನ್ನ ಮಗ. ಅವನನ್ನು ಕೊಂದು ಹಾಕಲು ಕೊಲೆಗಡುಕರಿಗೆ ಇದೊಂದೇ ಕಾರಣ ಸಾಕಿತ್ತು. ಯಾವ ಯುದ್ಧವೂ ಆಹ್ಲಾದಕರವಾಗಿರುವುದಿಲ್ಲ ಎನ್ನುವುದೇನೋ ನಿಜ, ಆದರೆ ಇದು ಮಾತ್ರ ನಿರ್ದಯ ಕದನವಾಗಿತ್ತು. ಬಾಲಚಂದ್ರನ್ ಒತ್ತೆಯಾಳಾಗಿದ್ದು 2008-2009ರಲ್ಲಿ ಎಲ್ಟಿಟಿಇ ಶ್ರೀಲಂಕಾ ಸೇನೆಯೆದರು ಸೋತ ನಂತರ. ಶ್ರೀಲಂಕಾ ಸೇನೆಯ ಮಾನವ ಹಕ್ಕು ಉಲ್ಲಂಘನೆಯ ವಿರುದ್ಧ ತೀವ್ರ ಚಳವಳಿ ನಡೆಸಿರುವ ಬ್ರಿಟಿಷ್ ಟಿ.ವಿ ಸ್ಟೇಷನ್ನಿನ ಚಾನೆಲ್ 4 ವಾಹಿನಿ, ಬಾಲಚಂದ್ರನ್ ಹತ್ಯೆಯ ಫೋಟೋಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಆ ಹುಡುಗನನ್ನು ಶೂಟ್ ಮಾಡಲು ಸೇನೆಗೆ ಮೇಲಾಧಿಕಾರಿಗಳಿಂದ ಆಜ್ಞೆ ಬಂದಿತ್ತು ಎಂದದು ವಾದಿಸುತ್ತಿದೆ. ಲಂಕಾದ ಸೇನೆ ಚಾನೆಲ್ 4ನೇ ವಾದವನ್ನು ತಳ್ಳಿಹಾಕಿದೆ, ಇದು 'ಸುಳ್ಳು, ಅರೆ-ಸತ್ಯ ಮತ್ತು...ಊಹೆಗಳಿಂದ ಕೂಡಿದ ಕತೆ' ಎಂದದು ಹೇಳುತ್ತಿದೆ.
ಈ ಕತೆ ಅರ್ಧ ಸತ್ಯವಾಗಿದ್ದರೆ, ಇನ್ನುಳಿದ ಸತ್ಯವೇನು?
ಬಾಲಚಂದ್ರನ್ನನ್ನು ಕೊಂದುಹಾಕಲು ಮೇಲಿನಿಂದ ಆಜ್ಞೆಯಾಗಿತ್ತು ಎನ್ನುವುದು ಊಹೆಯಾಗಿರಬಹುದು. ಹಾಗೆ ಆಜ್ಞೆ ನೀಡಿದ್ದು ಯಾರು ಎನ್ನುವುದು ತಿಳಿದಿಲ್ಲವಾದರೂ, ಮೇಲಧಿಕಾರಿಗಳೇ ಆಜ್ಞೆ ನೀಡಿದ್ದಾರೆ ಎಂದು ಯಾರಿಗಾದರೂ ಸುಲಭವಾಗಿ ಅರ್ಥವಾಗುತ್ತದೆ. ಹಿರಿಯರ ಆಜ್ಞೆಯಿಲ್ಲದೆ ಯಾವ ಅಧಿಕಾರಿಯೂ ಇಂತಹ 'ಹೈ-ಪ್ರೋಫೈಲ್' ಕೈದಿಯನ್ನು ಕೊಲ್ಲುವ ಧೈರ್ಯ ಮಾಡುವುದಿಲ್ಲ. ಬಾಲಚಂದ್ರನ್ನ ಕೊನೆಯ ಕ್ಷಣದ ಚಿತ್ರಗಳು ಹೊರಬಂದ 24 ಗಂಟೆಗಳ ನಂತರ, 'ಇವೆಲ್ಲ ಮಾರ್ಫ್ಡ್ ಚಿತ್ರಗಳು' ಎಂದು ಲಂಕಾ ಸರ್ಕಾರ ಹೇಳಿತು. ಆದರೆ ಚಿತ್ರಗಳು ಯಥಾವತ್ ಇವೆ ಎಂಬುದಕ್ಕೆ ನಮ್ಮ ಬಳಿ ವೈಜ್ಞಾನಿಕಾಧಾರಗಳಿವೆ ಎಂದು ಚಾನೆಲ್ 4 ಹೇಳಿದೆ.
ಒಂದು ವೇಳೆ ಚಿತ್ರಗಳನ್ನು ರೂಪಾಂತರಗೊಳಿಸಿದ್ದೇ ನಿಜವಾದಲ್ಲಿ ಬಾಲಚಂದ್ರನ್ ಬದುಕಿರಬೇಕಲ್ಲವೇ? ಆತ ಜೀವಂತವಾಗಿದ್ದಾನೆ ಎಂದಾದರೆ, ನಿಸ್ಸಂಶಯವಾಗಿಯೂ ಲಂಕಾ ಸರ್ಕಾರದ ಬಳಿಯೇ ಇದ್ದಾನೆ ಎಂದರ್ಥ. ಆ ಚಿತ್ರಗಳಲ್ಲಿರುವುದು ಸುಳ್ಳು ಎಂದು ಸಾಬೀತುಪಡಿಸಬೇಕಾದರೆ, ಆ ಹುಡುಗನನ್ನು ಮುಂದೆ ತಂದು ತೋರಿಸಿದರಾಯಿತು!
ಆದರೆ ಹಾಗಾಗಲೂ ಸಾಧ್ಯವೇ ಇಲ್ಲ. ಮಾಧ್ಯಮಗಳು ಎಷ್ಟು ದಿನ ಈ ಸುದ್ದಿಯನ್ನು ತೋರಿಸಿಯಾವು ಎಂಬ ನಂಬಿಕೆಯ ಮೇಲೆ, ಕೆಲವು ದಿನಗಳವರೆಗೆ ಮೌನವೇ ಮುಂದುವರಿಯಲಿದೆ. ಈ ಮಾನವನ್ನು ಪ್ರಪಂಚದ ಮೂರು ಬಲಿಷ್ಠ ರಾಷ್ಟ್ರಗಳಾದ ಭಾರತ, ಚೀನಾ ಮತ್ತು ಅಮೆರಿಕ ಬೆಂಬಲಿಸಲಿವೆ. ಜೆನೆವಾ ಮಾನವ ಹಕ್ಕು ವೇದಿಕೆಯಲ್ಲಿ ಈ ವಿಷಯವಾಗಿ ಇವು ಶ್ರೀಲಂಕಾವನ್ನು ಗಂಭೀರವಾಗಿ ಪ್ರಶ್ನಿಸುವುದಕ್ಕೆ ಹೋಗುವುದಿಲ್ಲ. ಶ್ರೀಲಂಕಾದ ಪ್ರಸಕ್ತ ಸರ್ಕಾರದೊಂದಿಗೆಸಂಬಂಧ ಕೆಡಿಸಿಕೊಳ್ಳಲು ಇವುಗಳು ತಯಾರಿಲ್ಲ. ಈ ಕೊಲೆಯ ಹಿಂದಿರುವ ತರ್ಕಕ್ಕೆ ಈ ಮೂರೂ ದೇಶಗಳು ಅಂಟಿಕೊಳ್ಳಲಿವೆ. ಬಾಲಚಂದ್ರನ್ನನ್ನು ಕೊಂದದ್ದು ಒಂದೇ ಕಾರಣಕ್ಕೆ: 'ಹತ್ತು ಹದಿನೈದು ವರ್ಷಗಳ ನಂತರ ಈ ಹುಡುಗ ತನ್ನ ತಂದೆಯ ಸ್ಥಾನಕ್ಕೆ ಬಂದು ಕೂತರೆ? ಆ ಕಾರಣಕ್ಕಾಗಿಯೇ ಆತ ಬದಕಲು ಅರ್ಹನಲ್ಲ'!
ದೆಹಲಿ ಬೀಜಿಂಗ್ ಮತ್ತು ವಾಶಿಂಗ್ಟನ್ಗಳು ಉಗ್ರವಾದದ ವಿಷಯದಲ್ಲಿ ಅಷ್ಟೊಂದು ಅಸಹ್ಯ ಭಾವನೆಯನ್ನೇನೂ ತಾಳಿಲ್ಲ. ಒಂದು ತಪ್ಪು ಪದ ಅವುಗಳಿಂದ ಹೊರಬಿದ್ದಿತೆಂದರೆ ಅವುಗಳ ಬುರುಡೆ ಶಬ್ದ ಮಾಡುತ್ತಾ ಬಾಯ್ತೆರೆದುಬಿಡುತ್ತದೆ, ಆಗ ಜಿನೆವಾ ಮತ್ತು ಇನ್ನಿತರ ಭಾಗಗಳಲ್ಲಿನ ಎಲ್ಲಾ ರೀತಿಯ ದೆವ್ವಗಳೂ ಎಚ್ಚೆತ್ತುಕೊಂಡುಬಿಡುತ್ತವೆ.
ಎಲ್ಲಾ ಅಪರಾಧಿಗಳು ಮೈಮರವಿನಿಂದ ಚಿಕ್ಕ ಸುಳಿವನ್ನು ಬಿಟ್ಟು ಹೋಗಿರುತ್ತಾರೆ. ಅದು ಸಿಕ್ಕಿತೆಂದರೆ ಕತೆಗೆ ಹೊಸ ಆಯಾಮವೇ ಸಿಕ್ಕುಬಿಡುತ್ತದೆ. ಬಾಲಚಂದ್ರನ್ ಹತ್ಯೆಯ ವಿಷಯದಲ್ಲೂ ಕೊಲೆಗಡುಕರು ಒಂದು ಸರಳ ವಿಷಯವನ್ನು ಮರೆತುಬಿಟ್ಟರು. ಇದು ಮೊಬೈಲ್ ಫೋನ್ಗಳ ಕಾಲವೆಂದು!
ಈಗಂತೂ ಎಲ್ಲಾ ಮೊಬೈಲ್ ಫೋನ್ಗಳೂ ಕ್ಯಾಮೆರಾ ಹೊಂದಿರುತ್ತವೆ. ಹಾಗಾಗೇ ಎಲ್ಲರೂ ನಡೆದಾಡುವ ಕ್ಯಾಮೆರಾ ಆಗಿ ಬದಲಾಗಿದ್ದಾರೆ. ಮೊಬೈಲ್ ಫೋನ್ಗಳಿಂದಾಗುವ ಲಾಭ/ನಷ್ಟಗಳ ಪೂರ್ಣ ಅರಿವು ನಮಗಾಗಿಲ್ಲವಾದರೂ, ಹಿಂದಿನಂತೆ ಪ್ರತ್ಯಕ್ಷ ಸಾಕ್ಷಿಗಳಿಂದಾಗಿಯೇ ನ್ಯಾಯ ಹೊರಬರುತ್ತದೆ ಎನ್ನುವ ಕಾಲವಂತೂ ದೂರವಾಗಿದೆ. ಈಗೇನಿದ್ದರೂ ಕ್ಯಾಮೆರಾ ಕಣ್ಣಿನ ಸಾಕ್ಷಿಯೇ ಸತ್ಯವನ್ನು ತೆರೆದಿಡುತ್ತಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕೋ, ಬೇಡವೋ ಎನ್ನುವುದರ ಬಗ್ಗೆ ನಮಗೆ ಗೊಂದಲವಿದೆ. ಆದರೆ ಭಯೋತ್ಪಾದಕ ಕೃತ್ಯ ಜರುಗಿದಾಕ್ಷಣ ಎಲ್ಲೆಡೆಯೂ
ಅವನ್ನು ಅಳವಡಿಸಬೇಕು ಎಂದು ಬಯಸುತ್ತೇವೆ. ಇನ್ನು ಶಾಂತ ಸಮಯದಲ್ಲಿ, ಸರ್ಕಾರ ಎಲ್ಲಿ ನಮ್ಮ ಖಾಸಗಿ ಬದುಕಿನ ಮೇಲೆ ಕಣ್ಣಿಡುತ್ತದೋ ಎಂಬ ಭಯದಿಂದ ಅದನ್ನು ವಿರೋಧಿಸುತ್ತೇವೆ. ಹಾಗೆ ನೋಡಿದರೆ ಈಗ ಖಾಸಗಿ ಅನ್ನುವುದೇನೂ ಉಳಿದಿಲ್ಲ. ರಹಸ್ಯ ಸಂಸ್ಥೆಗಳಿಂದ ನಿರಂತರವಾಗಿ ದೂರವಾಣಿ ಕದ್ದಾಲಿಕೆ ನಡೆಯುತ್ತಲೇ ಇರುತ್ತದೆ. ಅಧಿಕಾರಿಯೊಬ್ಬ ತನ್ನ ಕ್ಯಾಮೆರಾ ಫೋನನ್ನು ಹೊರತೆಗೆದು ಅತ್ಯಂತ ಗೌಪ್ಯ ಫೈಲನ್ನೂ ಕ್ಷಣಾರ್ಧದಲ್ಲಿ ಕಾಪಿ ಮಾಡಬಲ್ಲ, ಭ್ರಷ್ಟಾಚಾರವನ್ನು ಹೊರಗೆಳೆಯಬಲ್ಲ, ಅಥವಾ ಸೂಕ್ತ ಸಮಯಕ್ಕಾಗಿ ಕಾದು ಅದನ್ನು ಬ್ಲ್ಯಾಕ್ಮೇಲ್ ಮಾಡಲು ಬಳಸಿಕೊಳ್ಳಬಲ್ಲ. ಈಗಂತೂ ಪ್ರತಿಯೊಂದು ಚಲನೆಗಳೂ ರೆಕಾರ್ಡ್ ಆಗುತ್ತಿವೆ; ಕೆಲವೊಂದು ಸಂಕಟದ ಭಾವದಿಂದ, ಕೆಲವೊಂದು ಸಂತೋಷದ ಭಾವದಿಂದ.
ಬಾಲಚಂದ್ರನ್ನ ಸಾವಿನ ಚಿತ್ರಗಳು ಮಾಧ್ಯಮವನ್ನು ಎರಡು ರೀತಿಯಲ್ಲಿ ತಲುಪಿರುವ ಸಾಧ್ಯತೆಗಳಿವೆ. ಸರ್ಕಾರಿ ದಾಖಲೆಗಳಿಂದ ಅದು ರಹಸ್ಯವಾಗಿ ಸೋರಿಕೆಯಾಗಿರಬಹುದು ಅಥವಾ ಆ ಸಮಯದಲ್ಲಿ ಅಲ್ಲಿ ಉಪಸ್ಥಿತನಿದ್ದ ಸೈನಿಕನೊಬ್ಬ ಆ 'ಐತಿಹಾಸಿಕ ಕ್ಷಣವನ್ನು' ಶಾಶ್ವತವಾಗಿ ತನ್ನ ಜೊತೆಗೆ ಇರಿಸಿಕೊಳ್ಳುವ ತವಕದಿಂದ ಸೆರೆಹಿಡಿದು, ನಂತರ ಮನಸಾಕ್ಷಿಗೆ ಸೋತು ಅವುಗಳನ್ನು ಹೊರಗೆಡವಿರಬಹುದು. ಇದರ ಬಗ್ಗೆ ನಿಶ್ಚಿತವಾಗಿ ಏನನ್ನೂ ಹೇಳಲೂ ಸಾಧ್ಯವಿಲ್ಲ. ಆದರೆ ಒಂದಂತೂ ಸತ್ಯ ರಕ್ಷಣೆಯ ಬೇಲಿಯೊಳಗಿಂದ ಏನೋ ಹೊರಬಿದ್ದಿದೆ ಮತ್ತು ಅದಂತೂ ಸುಳ್ಳಲ್ಲ.
- ಎಮ್.ಜೆ. ಅಕ್ಬರ್
ಸಂಪಾದಕರು
ಸಂಡೇ ಗಾರ್ಡಿಯನ್