ಅಧ್ಯಾತ್ಮ ಒಂದು ಟ್ರೀಟ್ಮೆಂಟ್, ಆಪರೇಷನ್ ಅಲ್ಲ!
ಭಾನುವಾರ ಮುಂಜಾನೆ ಸಾಪ್ತಾಹಿಕ ಪ್ರಭದ ಮುಖ ಪುಟದ ಮೇಲೆ ಕಣ್ಣಾಡಿಸುತ್ತಿದ್ದಂತೆ ಮನಸ್ಸು ಅರಳಿತು. ತಮ್ಮನ್ನು ತಾವು 'ತಿರುಕ'ನೆಂದು ಕರೆದುಕೊಳ್ಳುತ್ತಾ, ಸಂತನಂತೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಕೆಲಸ ಮಾಡಿದ ಚಿತ್ರದುರ್ಗ ಜಿಲ್ಲೆ ಮಲ್ಲಾಡಿಹಳ್ಳಿಯ ಸ್ವಾಮೀಜಿ ಕುರಿತ ಬರಹ ಸರಸರನೆ ಓದಿಸಿಕೊಂಡುಬಿಟ್ಟಿತು. ಎಚ್. ಎಸ್. ವೆಂಕಟೇಶ ಮೂರ್ತಿಯವರು ಸ್ವಾಮೀಜಿಯವರನ್ನು 'ವ್ಯಾಯಾಮ ಮೇಷ್ಟ್ರು' ಎಂಬುದಾಗಿ ಬಹಳ ಆಪ್ತವಾಗಿ ಬರೆದಿದ್ದರು. ಭಾರತೀಯ ಅಧ್ಯಾತ್ಮದ ಒಂದು ಪ್ರಮುಖ ಭಾಗವಾಗಿರುವ ಯೋಗ-ಸೂರ್ಯ ನಮಸ್ಕಾರದ ಮೂಲಕ ಸಮಾಜದ ಆರೋಗ್ಯವನ್ನು ಹೇಗೆ ಕಾಪಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ಮಲ್ಲಾಡಿಹಳ್ಳಿ ಸ್ವಾಮೀಜಿ. ಅಂಥವರ ಕುರಿತ ಓದು ನಿಜಕ್ಕೂ ಭಾನುವಾರದ ಮುಂಜಾವಿಗೆ ಒಂದು ಸಕಾರಾತ್ಮಕ ಮುನ್ನುಡಿಯನ್ನೇ ಬರೆದಿತ್ತು.
ಆದರೆ, ಸಾಪ್ತಾಹಿಕ ಪ್ರಭವನ್ನು ಬದಿಗಿಟ್ಟು ಮುಖ್ಯ ಪತ್ರಿಕೆಯ 9ನೇ ಪುಟ್ಟಕ್ಕೆ ಬಂದಾಗ ಆಘಾತ ಕಾದಿತ್ತು. 'ವ್ಯಾಯಾಮ ಮೇಷ್ಟ್ರು' ಕಟ್ಟಿಕೊಟ್ಟಿದ್ದ ಸಕಾರಾತ್ಮಕ ಭಾವ ಒಮ್ಮೆಲೆ ಕಂಪಿಸಿತು. ಅದಕ್ಕೆ ಕಾರಣ ಸಾಹಿತಿ ಬೋಳುವಾರು ಮೊಹಮ್ಮದ್ ಕುಂಞ ಅವರ ಒಂದೇ ಒಂದು ಹೇಳಿಕೆ.
'ಆಪರೇಷನ್ ಕಮಲ ಇದ್ದಂತೆ 'ಆಪರೇಷನ್ ಅಧ್ಯಾತ್ಮ' ಶುರುವಾಗಿದೆ. ಅಧ್ಯಾತ್ಮದ ಹೆಸರಲ್ಲಿ ಎಲ್ಲವೂ ನಡೆಯುತ್ತಿದ್ದು, ಇದು ಗಂಭೀರ ಸಮಸ್ಯೆಯಾಗಿದೆ' ಎಂಬುದಾಗಿ ಕುಂಞ ಅವರು ಹೇಳಿದ್ದಾರೆ. ಅವರು ಯಾವ ಸಂದರ್ಭದಲ್ಲಿ, ಯಾವ ಅರ್ಥದಲ್ಲಿ, ಯಾರನ್ನು ಉದ್ದೇಶಿಸಿ ಈ ಮಾತು ಹೇಳಿದ್ದಾರೆಂಬುದು ಗೊತ್ತಿಲ್ಲ. ಆದರೆ, ಅವರ ಹೇಳಿಕೆ ಅನಗತ್ಯವಾಗಿ, ಅನಪೇಕ್ಷಿತವಾಗಿ ಭಾರತೀಯ ಅಧ್ಯಾತ್ಮಕ್ಕೆ ಅಗೌರವವನ್ನು ತೋರುವಂತೆ ಕಾಣಿಸುವುದರಿಂದ ಅದನ್ನು ಪ್ರಶ್ನಿಸಲೇಬೇಕಾಗಿದೆ.
ಬೋಳುವಾರರ ಹೇಳಿಕೆ ವಿರುದ್ಧ ಸಾತ್ವಿಕವಾದ ಪ್ರತಿಭಟನೆಯನ್ನು ದಾಖಲಿಸುವ ಮುನ್ನ ಒಂದು ಸ್ಪಷ್ಟೀಕರಣ. ಬೋಳುವಾರರ ಕೆಲವೊಂದು ಕಥೆ, ಲೇಖನಗಳನ್ನು ಓದಿ ಮೆಚ್ಚಿಕೊಂಡವರು ನಾವು. ಒಬ್ಬ ಸಾಹಿತಿಯಾಗಿ ಅವರ ಕುರಿತು ಆದರ ಇದ್ದೇ ಇದೆ. ಸೈದ್ಧಾಂತಿಕವಾಗಿ ಅವರ ನಿಲುವು-ಒಲವು ಏನೇ ಇರಲಿ, ಒಬ್ಬ ಬರಹಗಾರನಾಗಿ ಅವರ ಮೇಲೆ ಪ್ರೀತಿ-ಗೌರವ ಖಂಡಿತಾ ಇದೆ. ಆದರೆ, ಅಧ್ಯಾತ್ಮದ ಬಗ್ಗೆ ಅವರು ತಳೆದಿರುವ ನಿಲುವನ್ನು ಮಾತ್ರ ಒಬ್ಬ ಭಾರತೀಯನಾಗಿ ಒಪ್ಪುವುದಕ್ಕೆ ಸಾಧ್ಯವೇ ಇಲ್ಲ.
ಮೊದಲನೆಯದಾಗಿ, ಅವರು ಅಧ್ಯಾತ್ಮವನ್ನು 'ಆಪರೇಷನ್ ಕಮಲ'ದಂಥ ಹೊಲಸು ರಾಜಕೀಯ ಪ್ರಕ್ರಿಯೆಗೆ ಹೋಲಿಸಿದ್ದು ಸರಿಯಲ್ಲ. ರಾಜಕೀಯ ಲಾಭಕ್ಕಾಗಿ ಬೇರೆ ಪಕ್ಷದ ಶಾಸಕರನ್ನು ಬಿಜೆಪಿಯವರು ಬೇರೆ ಬೇರೆ ಆಮಿಷಗಳ ಮೂಲಕ ಸೆಳೆದುಕೊಂಡಿದ್ದಕ್ಕೆ ಮಾಧ್ಯಮದವರು ಇಟ್ಟ ಹೆಸರು ಅದು. ಆದರೆ, ಅಧ್ಯಾತ್ಮದ ಮೂಲಕ ಯಾರು ಯಾರಿಗೆ ಆಮಿಷ ಒಡ್ಡುತ್ತಿದ್ದಾರೆ? ಯಾರನ್ನು, ಎಲ್ಲಿಂದ, ಎಲ್ಲಿಗೆ ಸೆಳೆಯುತ್ತಿದ್ದಾರೆ ಎಂಬುದನ್ನು ಬೋಳುವಾರರೇ ಹೇಳಬೇಕು. ಇಷ್ಟಕ್ಕೂ ಭಾರತೀಯ ಅಧ್ಯಾತ್ಮ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ ಹೊರತು ಶಸ್ತ್ರ ಚಿಕಿತ್ಸೆ ಮಾಡುವುದಿಲ್ಲ. ಬೋಳುವಾರರ ಶೈಲಿಯಲ್ಲೇ ಹೇಳುವುದಾದರೆ ನಮ್ಮ ಅಧ್ಯಾತ್ಮ ಟ್ರೀಟ್ಮೆಂಟ್ ಕೊಡುತ್ತದೆ ಹೊರತು ಎಂದಿಗೂ 'ಆಪರೇಷನ್' ಮಾಡಿಲ್ಲ, ಮಾಡುವುದೂ ಇಲ್ಲ.
ಇನ್ನು ಅವರು ಹೇಳಿದಂತಹ 'ಆಪರೇಷನ್ ಅಧ್ಯಾತ್ಮ' ಎಲ್ಲಿ ಶುರುವಾಗಿದೆಯೋ ತಿಳಿಯದು. ಹಾಗೆಯೇ, 'ಅಧ್ಯಾತ್ಮದ ಹೆಸರಲ್ಲಿ ಎಲ್ಲವೂ ನಡೆಯುತ್ತಿದೆ' ಎನ್ನುವ ಬೋಳುವಾರರ ದೃಷ್ಟಿಯಲ್ಲಿ ಈ 'ಎಲ್ಲವೂ' ಎಂದರೆ ಏನು, ಇದರಿಂದ ಅದೆಂಥ ಗಂಭೀರ ಸಮಸ್ಯೆ ಸೃಷ್ಟಿಯಾಗಿದೆ ಎಂಬುದೂ ಅರ್ಥವಾಗುತ್ತಿಲ್ಲ. ಇವತ್ತು ಜನ ಜಾತಿ, ಮತ, ಧರ್ಮ, ಅಂತಸ್ತು ಎಲ್ಲವನ್ನೂ ಮೀರಿ ನಿಧಾನವಾಗಿಯಾದರೂ ಅಧ್ಯಾತ್ಮದತ್ತ ವಾಲುತ್ತಿದ್ದಾರೆ. ಒತ್ತಡದ ಬದುಕಿನಿಂದ ಒಂದಿಷ್ಟು ಬಿಡುಗಡೆ, ಮಾನಸಿಕ ನಿರಾಳತೆ ಬಯಸಿ ಬಹಳಷ್ಟು ಮಂದಿ ಆಧ್ಯಾತ್ಮಿಕ ಚಿಂತನೆಗಳೆಡೆಗೆ ಮುಖಮಾಡುತ್ತಿದ್ದಾರೆ. ಎಲ್ಲರಿಗೂ ಬೇಕಾಗಿರುವುದು ನೆಮ್ಮದಿ, ಆತ್ಮೋನ್ನತಿ, ಆತ್ಮ ನಿಯಂತ್ರಣ. ಅಧ್ಯಾತ್ಮದ ಮೂಲಕ ಆ ನೆಮ್ಮದಿಯನ್ನು ಪಡೆಯಬಹುದು ಎಂದು ನಂಬಿದವರು ತಮಗೆ ಸರಿತೋರಿದ ಗುರುವನ್ನು, ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿ ನಂಬಿಕೆ, ಭಕ್ತಿಗಳಷ್ಟೇ ಎಲ್ಲರಿಗೂ ಊರುಗೋಲು. ಇದರಿಂದ ಸಮಾಜದಲ್ಲಿ ಯಾವುದೇ ತೆರನಾದ ಕ್ಷೋಭೆ ಅಥವಾ ಹಿಂಸೆ ಉದ್ಭವವಾಗಿರುವುದು ನಮ್ಮ ಕಣ್ಣಿಗಂತೂ ಬಿದ್ದಿಲ್ಲ.
ಬಹಳಷ್ಟು ಜನರ ಸಮಸ್ಯೆ ಎಂದರೆ, ಧರ್ಮ ಮತ್ತು ಅಧ್ಯಾತ್ಮವನ್ನು ಒಂದೇ ಎಂದು ಭಾವಿಸೋದು. ಅಧ್ಯಾತ್ಮ ಎನ್ನುವುದು ಸಂಪೂರ್ಣವಾಗಿ ನಮ್ಮ ಮನಸ್ಸಿಗೆ, ಆತ್ಮಕ್ಕೆ ಸಂಬಧಿಸಿದ್ದು. ದೇವರನ್ನು ನಂಬದವನಿಗೆ ಧರ್ಮದ ಪರಿಧಿಯಲ್ಲಿ ಜಾಗವಿಲ್ಲ. ಆದರೆ, ಅಧ್ಯಾತ್ಮ ದೇವರನ್ನು ನಂಬದವನನ್ನೂ ತನ್ನ ತೆಕ್ಕೆಯೊಳಕ್ಕೆ ಸೇರಿಸಿಕೊಳ್ಳುತ್ತದೆ.
ಅಧ್ಯಾತ್ಮ ಎನ್ನುವ ಪರಿಕಲ್ಪನೆ ನಮ್ಮ ದೇಶದಲ್ಲಿ ಮಾತ್ರ ಇದೆ ಎಂಬುದು ನಿಜ. ನಮ್ಮ ದೇಶವನ್ನು ತಲತಲಾಂತರದಿಂದಲೂ ಜಗತ್ತಿನ ಉಳಿದ ದೇಶಗಳಿಗಿಂತ ಭಿನ್ನವಾಗಿ ನಿಲ್ಲಿಸಿರುವುದೇ ಇಲ್ಲಿನ ಆಧ್ಯಾತ್ಮಿಕತೆ. ಇತಿಹಾಸವನ್ನು ಎಷ್ಟೇ ಅಗೆದರೂ, ದೊಗೆದರೂ ಮಿಕ್ಕ ದೇಶಗಳಲ್ಲಿ ಧಾರ್ಮಿಕ ನಾಯಕರು, ತತ್ವಶಾಸ್ತ್ರಜ್ಞರು ಸಿಕ್ಕಾರೆಯೇ ಹೊರತೂ ರಾಮಕೃಷ್ಣ ಪರಮಹಂಸರು, ಶಾರದಾ ಮಾತೆ, ಸ್ವಾಮಿ ವಿವೇಕಾನಂದರು, ಅರವಿಂದರು, ರಮಣ ಮಹರ್ಷಿಗಳು, ನಾರಾಯಣ ಗುರುಗಳು... ಹೀಗೆ ಸಾಲು ಸಾಲು ಆಧ್ಯಾತ್ಮಿಕ ಚಿಂತಕರು, ಗುರುಗಳು ಇನ್ನೆಲ್ಲೂ ಸಿಗಲಾರರು. ಇವತ್ತಿಗೂ ಬೇರೆ ಬೇರೆ ಗುರುಗಳು, ಸಂತರು ತಮ್ಮದೇ ಆದ ರೀತಿಯಲ್ಲಿ ಅಧ್ಯಾತ್ಮವನ್ನು ಬೋಧಿಸುತ್ತಿದ್ದಾರೆ. ಆದರೆ, ಇವರ್ಯಾರೂ ಇತರ ಧರ್ಮಗಳನ್ನು, ಮತಗಳನ್ನು ಹೀಯಾಳಿಸುವುದಾಗಲೀ, ತೆಗಳುವುದಾಗಲೀ ಮಾಡುತ್ತಿಲ್ಲ. ಅಧ್ಯಾತ್ಮದ ಮೂಲಕ ಅನ್ಯರನ್ನು ಮತಾಂತರಗೊಳಿಸುವ ಪ್ರಯತ್ನ ಮಾಡುತ್ತಿಲ್ಲ. ಇನ್ನು, ನಿತ್ಯಾನಂದನಂಥ ಢೋಂಗಿ ಸಂತರನ್ನು, ಸ್ವಯಂಘೋಷಿತ ಆಧ್ಯಾತ್ಮಿಕ ಮುಖಂಡರನ್ನು ಇಡೀ ಸಮಾಜವೇ ಉಗಿದು ಹೊರಗಿಟ್ಟಿದೆ. ಸಾರ್ವಜನಿಕವಾಗಿಯೇ ಅಂಥವರ ಮಾನ ಹರಾಜಾಗುತ್ತಿದೆ.
ಇಷ್ಟಕ್ಕೂ ನಮ್ಮ ಸಮಾಜದಲ್ಲಿ ನಡೆಯುವ ಆಧ್ಯಾತ್ಮಿಕ ಚಟುವಟಿಕೆಗಳೆಲ್ಲ ಖುಲ್ಲಂ ಖುಲ್ಲಾ. ಇಲ್ಲಿ ಯಾವುದೇ ಮುಚ್ಚು ಮರೆ ಇಲ್ಲ. ಇತರೆ ಕೆಲವು ಮತ-ಧರ್ಮಗಳಲ್ಲಿ ನಡೆಯುವಂತೆ ಇಲ್ಲಿ ಕದ್ದು ಮುಚ್ಚಿ-ಗುಟ್ಟು ಗುಟ್ಟಾಗಿ ಏನೂ ನಡೆಯುವುದಿಲ್ಲ. ಇಲ್ಲಿ ಎಲ್ಲರಿಗೂ 'ಫ್ರೀ ಎಂಟ್ರಿ ಮತ್ತು ಫ್ರೀ ಎಕ್ಸಿಟ್'. ಹೀಗಿರುವಾಗ ಅಧ್ಯಾತ್ಮದ ಕುರಿತು ಬೋಳುವಾರರಿಗೆ ಶಂಕೆ ಯಾಕೆ?
ಇನ್ನು, ದೇವರು-ಧರ್ಮ-ಮಂತ್ರ-ತಂತ್ರಗಳೆಲ್ಲವೂ ಕೆಲವೇ ಕೆಲವು ವರ್ಗದವರಿಗೆ ಮಾತ್ರ ಸೀಮಿತವಾಗಿದೆ ಎಂಬುದು ಸನಾತನ ಸಂಸ್ಕೃತಿಯ ವಿರುದ್ಧ ಸಾವಿರಾರು ವರ್ಷಗಳಿಂದ ಕೇಳಿಬರುತ್ತಿರುವ ದೂರು. ಅದು ಕೆಲ ಮಟ್ಟಿಗೆ ನಿಜ ಕೂಡ. ಆದರೆ, ಈ ತಾರತಮ್ಯವನ್ನು, ಈ ದೂರನ್ನು ದೂರ ಮಾಡುತ್ತಿರುವುದೇ ಅಧ್ಯಾತ್ಮ. ಅಂದು ಪರಮಹಂಸರು, ವಿವೇಕಾನಂದರು, ನಾರಾಯಣ ಗುರುಗಳಂಥವರು ಅಧ್ಯಾತ್ಮದ ಮೂಲಕ ಮಾಡಿದ್ದು ಈ ತಾರತಮ್ಯ ನಿವಾರಿಸುವ ಪ್ರಯತ್ನವನ್ನೇ. ಇಂದಿಗೂ ಸಾಕಷ್ಟು ಗುರುಗಳು ಇದೇ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ. ಹೀಗಾಗಿಯೇ, ಅಧ್ಯಾತ್ಮ ಎನ್ನುವುದು ಜಾತಿ, ಮತ, ಅಂತಸ್ತುಗಳ ಬೇಧವಿಲ್ಲದೇ ಎಲ್ಲರನ್ನೂ ಬೆಸೆಯುವ ಒಂದು ಸೂತ್ರವಾಗಿದೆ. ಅಧ್ಯಾತ್ಮದ ಚೌಕಟ್ಟು ಜಾತಿ, ಧರ್ಮ, ಮತಗಳ ಹೆಸರಿನಲ್ಲಿ ಚದುರಿ ಹೋಗಿರುವ ಚಿತ್ರಗಳನ್ನು ಬೆಸೆಯುವ ಅವಕಾಶ ಕಲ್ಪಿಸಿದೆ. ಇದನ್ನು ಕಂಡು ಬೋಳುವಾರರಿಗೆ ಏಕೆ ಸಂಕಟವೋ?
ನನಗೂ ಒಬ್ಬ ಆಧ್ಯಾತ್ಮಿಕ ಗುರುಗಳು ಇದ್ದಾರೆ. ಅವರು ಸಾಕ್ಷಾತ್ ಅಮ್ಮನಂತೆ. ಅಮ್ಮನಿಗೆ ಹೇಗೆ ತನ್ನ ಮಕ್ಕಳಲ್ಲಿ ಬೇಧ ಇಲ್ಲವೋ, ಹಾಗೆಯೇ ನನ್ನ ಗುರುಗಳಿಗೂ ತಮ್ಮಲ್ಲಿಗೆ ನೆಮ್ಮದಿ ಅರಸಿ ಬರುವ ಶಿಷ್ಯರಲ್ಲಿ ಯಾವುದೇ ಬೇಧ ಕಾಣಿಸುವುದಿಲ್ಲ. ಎಲ್ಲ ಧರ್ಮ, ಜಾತಿ, ಪಂಗಡದವರೂ ಅಲ್ಲಿಗೆ ಬರುತ್ತಾರೆ. ನಾವೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತೇವೆ, ಗುರುಗಳ ಮಾತು ಆಲಿಸುತ್ತೇವೆ. ಗುರುಗಳ ಮುಂದೆ ನಾವೆಲ್ಲರೂ ಮಕ್ಕಳು ಅಷ್ಟೇ. 'ದೇವಿಯನ್ನು ಎಲ್ಲಿ, ಹೇಗೆ, ಯಾವ ಹೊತ್ತಿನಲ್ಲಿ ಧ್ಯಾನಿಸಬೇಕು?' ಎಂಬುದಾಗಿ ಶಿಷ್ಯರೊಬ್ಬರು ಕೇಳಿದ ಪ್ರಶ್ನೆಗೆ ಗುರುಗಳು ನೀಡಿದ ಉತ್ತರ ಹೀಗಿತ್ತು, 'ಒಂದು ಮಗು ಯಾವ್ಯಾವ ಜಾಗದಲ್ಲಿ, ಯಾವ್ಯಾವ ಹೊತ್ತಿನಲ್ಲಿ, ಯಾವ್ಯಾವ ರೀತಿಯಲ್ಲಿ ಅಮ್ಮನನ್ನು ಕರೆಯುತ್ತೋ, ಆ ಎಲ್ಲ ಜಾಗದಲ್ಲಿ, ಆ ಎಲ್ಲ ಹೊತ್ತಿನಲ್ಲಿ, ಆ ಎಲ್ಲ ರೀತಿಯಲ್ಲಿ ನೀವೂ ಆ ತಾಯಿಯನ್ನು ಕರೆಯಬಹುದು, ಧ್ಯಾನಿಸಬಹುದು!' ಇದು ನಮ್ಮ ಅಧ್ಯಾತ್ಮ.
ಇನ್ನು 'ಲವ್ ಜಿಹಾದ್' ಹೆಸರಿನಲ್ಲಿ ಇಲ್ಲಿ ಮತಾಂತರಗಳು ನಡೆಯುತ್ತಿವೆ. ಇದರಿಂದಾಗಿ ಸಾಕಷ್ಟು ಆತಂಕಕಾರಿ ಪರಿಸ್ಥಿತಿಯೂ ಸೃಷ್ಟಿಯಾಗಿದೆ. ಹಾಗೆಯೇ, ಧರ್ಮ ಪ್ರಚಾರದ ಹೆಸರಿನಲ್ಲಿ ಮತಾಂತರಗಳು ನಡೆಯುತ್ತಿವೆ. ಇದರಿಂದಲೂ ಸಮಾಜದಲ್ಲಿ ಸಂಘರ್ಷಗಳು ಸಂಭವಿಸುತ್ತಲೇ ಇವೆ. ಆದರೆ, ಅಧ್ಯಾತ್ಮದಿಂದಾಗಿ ಈ ತೆರನಾದ ಸಮಸ್ಯೆ ಉದ್ಭವವಾದ ಒಂದಾದರೂ ಉದಾಹರಣೆ ಇದೆಯೇ? ಅದೇನಿದ್ದರೂ ಜೋಡಿಸುವ ಕೆಲಸ, ಮುರಿಯುವ ಕೆಲಸವಲ್ಲ. ಶ್ರೀ ರಾಮಕೃಷ್ಣ ಪರಮಹಂಸರ ಪರಮ ಅನುಯಾಯಿಗಳಲ್ಲಿ ಒಬ್ಬರಾದ ರಾಷ್ಟ್ರಕವಿ ಕುವೆಂಪು ಅವರು ಇದನ್ನು ಬಹಳ ಸುಂದರವಾಗಿ ಬಣ್ಣಿಸಿದ್ದಾರೆ.
'ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವದೆಲ್ಲೆ ಮೀರಿ..' ಎಂದಿದ್ದಾರೆ. ಅಂದರೆ, ನಮ್ಮ ಅಧ್ಯಾತ್ಮ ಎಲ್ಲ ಕೆಡುಕುಗಳನ್ನು, ಕಟ್ಟುಪಾಡುಗಳನ್ನು ಮೀರುವುದನ್ನು ಕಲಿಸುತ್ತದೆಯೇ ಹೊರತೂ, ಮುರಿಯುವುದನ್ನಲ್ಲ!
ಸುಧೀಂದ್ರ ಭಾರದ್ವಾಜ್
sudhikanchi@gmail.com