ಪ್ರಿಯ ಸ್ಯಾಮ್,
ನೀನು ಮತ್ತು ನಿನ್ನ ಅಪ್ಪ- ಅಮ್ಮ ಮಾಡಬೇಕಾದ ಕೆಲಸಗಳಿವೆ. ಅವರ ಕೆಲಸ ಏನೆಂಬುದನ್ನು ತುಸು ಹೇಳಿ, ನಂತರ ನಿನ್ನ ವಿಚಾರಕ್ಕೆ ಬರುತ್ತೇನೆ.
ನಿನ್ನನ್ನು ಪ್ರೀತಿಸೋದು. ಆದಷ್ಟು ನಿನ್ನನ್ನು ಕಾಪಿಡುವುದು, ನಿನ್ನನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ನಿನ್ನ ನಗೆಬುಗ್ಗೆಯನ್ನು ಮನಸಾರೆ ಆಸ್ವಾದಿಸುವುದು ಅವರ ಕೆಲಸ. ನಿನಗೆ ಬೇರು ಮತ್ತು ರೆಕ್ಕೆಗಳೆರಡರನ್ನು ಅವರು ಕೊಡುತ್ತಾರೆ ಎಂಬ ವಿಶ್ವಾಸ ನನ್ನದು. ನಿನಗವರು ಬೇರುಗಳನ್ನು ಕೊಟ್ಟಾಗ ನಿನ್ನಲ್ಲೊಂದು ಸುರಕ್ಷತಾ ಭಾವ ಬೆಳೆಯುತ್ತದೆ. ನಿನ್ನನ್ನು ಪ್ರೀತಿಸುತ್ತಿದ್ದಾರೆ, ಅರ್ಥ ಮಾಡಿಕೊಳ್ಳುವುದಕ್ಕೆ ಯತ್ನಿಸುತ್ತಿದ್ದಾರೆ ಎಂಬ ನಿರಾಳತೆ ನಿನ್ನದಾಗುತ್ತದೆ. ನಿನಗೆ ರೆಕ್ಕೆಗಳನ್ನು ಕೊಟ್ಟಾಗ ಯೋಚನೆಯ ಪರಿಧಿಯನ್ನು ವಿಸ್ತರಿಸುವುದಕ್ಕೆ, ಮುಕ್ತ ಆಲೋಚನೆಗಳಿಗೆ ತೆರೆದುಕೊಳ್ಳುವುದಕ್ಕೆ. ನಿನ್ನದೆಯೊಳಗಿನ ಜಗವನ್ನೂ ಹೊರಗಿನ ಪ್ರಪಂಚವನ್ನೂ ಅನ್ವೇಷಿಸುವುದಕ್ಕೆ ಸಾಧ್ಯವಾಗುತ್ತದೆ.
ಸ್ಯಾಮ್... ಇನ್ನು ನಿನ್ನ ಕೆಲಸ ಏನು? ಯಹೂದಿ ಪ್ರವಚನವೊಂದು ನಮಗೆ ಒಳ್ಳೆಯ ಕತೆ ಹೇಳುತ್ತದೆ. ಮಗು ಹುಟ್ಟುವುದಕ್ಕೂ ಮುಂಚೆ ದೇವರು ಅದಕ್ಕೆ ಜೀವನದುದ್ದಕ್ಕೂ ಬೇಕಾಗುವ ಜ್ಞಾನವನ್ನು, ಬುದ್ಧಿಮತ್ತೆಯನ್ನು ತುಂಬುತ್ತಾನಂತೆ. ನಂತರ ಆ ಮಗುವಿನ ತುಟಿ ಮೇಲೆ ದೇವರು ತನ್ನ ಕೈ ಬೆರಳುಗಳನ್ನಿಟ್ಟು 'ಶ್...' ಎಂದು ಹೇಳುತ್ತಾನಂತೆ. ಅದು ದೇವರು ಮತ್ತು ಮಗುವಿನ ನಡುವಿನ ರಹಸ್ಯ ಒಪ್ಪಂದ ಮುದ್ರೆ.
ಆದರೆ ದಿನಗಳೆದಂತೆ ಆ ಜ್ಞಾನದ ಪಾವಿತ್ರ್ಯ ಮುಸುಕಾಗುತ್ತ ಸಾಗುತ್ತದೆ. ಮಕ್ಕಳು ಸಾಮಾಜಿಕ ವಾತಾವರಣದಲ್ಲಿ ಬೆಳೆಯುತ್ತಲೇ ಅನುಭವಗಳು ಅವರನ್ನು ರೂಪಿಸುತ್ತವೆ. ಬದುಕು ಅವರನ್ನು ಭಿನ್ನವಾಗಿ ಬೆಳೆಸುತ್ತದೆ. ಬಹಳ ವರ್ಷಗಳ ಹಿಂದೆ ನಮ್ಮ ಮನೆಯ ಕಿಟಕಿ ರಿಪೇರಿ ಮಾಡುವುದಕ್ಕೆ ಬಂದವ. ಯಹೂದಿಯಾಗಿದ್ದ ಆತ ಸ್ಫುಟವಾಗಿ ಇಟಾಲಿಯನ್ ಮಾತಾಡುತ್ತಿದ್ದುದು ನನ್ನಲ್ಲಿ ಆಸಕ್ತಿ ಕೆದರಿಸಿತು. ರೋಮ್‌ನಿಂದ ಬಂದಿದ್ದ ಆತಮಾತನಾಡುತ್ತ ಲಹರಿಗೆ ಬಿದ್ದ. ಹೀಗೆ ನ್ಯೂಜೆರ್ಸಿಯಲ್ಲಿ ಕಿಟಕಿ-ಬಾಗಿಲು ರಿಪೇರಿ ಮಾಡುವುದಕ್ಕಿಂತ ರೋಮ್‌ನಲ್ಲಿ ಪುರೋಹಿತನಾಗಬೇಕೆಂದು ಬಯಸಿದ್ದೆ ಎಂದ.
ನೋಡು ಸ್ಯಾಮ್. ಬದುಕಿನ ಪ್ರವಾಹಕ್ಕೆ ಸಿಲುಕಿ ನಮ್ಮ ಮೊನಚುಗಳು ಕ್ಷೀಣಿಸುತ್ತವೆ. ಪರಿಣಾಮ ಒಳ್ಳೆಯದೂ ಆದೀತು. ನಮಗೆ ಅಚ್ಚರಿ-ಸಂತೃಪ್ತಿ ಸಿಗುವಂತೆ ಬದುಕು ಹೊಸ ರಚನೆಗಳನ್ನು ಪಡೆದುಕೊಳ್ಳಬಹುದು. ನಾವು ಹುಟ್ಟಿನಿಂದ ಹೊಂದಿದ್ದ ಬುದ್ಧಿಮತ್ತೆಯ ಕೆಲಭಾಗ ಈ ಪ್ರಕ್ರಿಯೆಯಲ್ಲಿ ಇಲ್ಲವಾಗುತ್ತದೆ. ಆದರೆ ಆ ಜ್ಞಾನದ ಕುರುಹು ನಮ್ಮೊಳಗೆ ಇದ್ದೇ ಇರುತ್ತದೆ. ಸ್ಯಾಮ್... ಹೀಗಾಗಿ ನಿನ್ನ ಕೆಲಸ ಇಷ್ಟು. ನಿನ್ನೊಳಗಿನ ಧ್ವನಿಯನ್ನು ಕೇಳಿಸಿಕೋ. ೆದೇವರೊಂದಿಗಿನ ಒಪ್ಪಂದವನ್ನು ನೆನಪಿಸಿಕೊಳ್ಳುತ್ತ ನಿನ್ನೊಳಗಿನ ಜ್ಞಾನವನ್ನು ಮರುವಶ ಮಾಡಿಕೊಳ್ಳುವ ನಿಟ್ಟಿನಲ್ಲೇ ಸಾಗಲಿ ನಿನ್ನ ಪ್ರಯತ್ನ.
-----
ಸ್ಯಾಮ್..., ನಾನು ಹರೆಯದ ಹೊಸ್ತಿಲಿನಲ್ಲಿರುವಾಗ ಹುಡುಗಿಯೊಂದಿಗಿನ ಮೊದಲ ಅನುಭವಕ್ಕೆ ತೆರೆದುಕೊಂಡೆ. ಆ ವಯಸ್ಸಿನ ಎಲ್ಲ ಹುಡುಗರಂತೆ ನನಗೆ ಗೊತ್ತಿರುವುದಕ್ಕಿಂತ ಹೆಚ್ಚಿನದನ್ನೇ ತಿಳಿದಿರುವಂತೆ ತೋರಿಸಿಕೊಳ್ಳುತ್ತಿದ್ದೆ. ನನ್ನಲ್ಲಿಲ್ಲದ ಸಾಮರ್ಥ್ಯವನ್ನು, ಇಲ್ಲದ ಅನುಭವವನ್ನು ಇದ್ದಂತೆ ಬಿಂಬಿಸಿಕೊಳ್ಳುತ್ತಿದ್ದೆ. ಆಗ ನನಗೆ ಸಲಹೆ ನೀಡುವುದಕ್ಕೆ ಯಾರೂ ಇದ್ದಿದ್ದಿಲ್ಲ. ಹೀಗಾಗಿ ಹರೆಯದ ಎಲ್ಲ ಚಟುವಟಿಕೆಗಳಿಗೆ ನಾನು ಸಿದ್ಧನಾಗಿದ್ದೇನೆಯೇ ಎಂದು ಪ್ರಶ್ನಿಸಿಕೊಳ್ಳುವ ಗೋಜಿಗೇ ಹೋಗಲಿಲ್ಲ. 'ಗಂಡಸು' ಎಂದೆನಿಸಿಕೊಳ್ಳುವ ಅತಿ ಒತ್ತಡವೊಂದು ನನ್ನ ಮೇಲೆ ಕೆಲಸ ಮಾಡುತ್ತಿತ್ತು. ಹೀಗಾಗಿ ನಾನು ಸುಳ್ಳು ಹೇಳತೊಡಗಿದೆ. ನನ್ನ ಬಳಿ ಬಂದ ಹುಡುಗಿಯರಿಗೆ ನಾನು ಹಲ ವಿಷಯಗಳಲ್ಲಿ ಮಹಾ ಅನುಭವಸ್ಥನೆಂಬಂತೆ ತೋರಿಸಿಕೊಂಡೆ. ಹಾಗೆಯೇ ನನ್ನ ಓರಗೆಯ ಹುಡುಗರ ಬಳಿ ಹುಡುಗಿಯರ ಕುರಿತ ನನ್ನ ಅನುಭವಗಳನ್ನು ಸುಳ್ಳಿನ ಮಾಲೆಯಲ್ಲಿ ಪೋಣಿಸಿ ವರ್ಣಿಸಿದೆ. ನಾವು ಭಯಂಕರ ತಿಳಿದುಕೊಂಡಿದ್ದೇವೆ ಎಂದು ನಟಿಸುವುದು ಗಂಡಸರ ಜಾಯಮಾನವಾಗಿ ಬಿಟ್ಟಿದೆ. ನಮಗೆ ಗೊತ್ತಿಲ್ಲದ ವಿಷಯ ಎದುರಾದಾಗ ಸುಳ್ಳಿಗೆ ಮೊರೆ ಹೋಗುತ್ತೇವೆ. ಆದರೆ ಅದರಿಂದೇನೂ ಒಳಿತಾಗುವುದಿಲ್ಲ. ಅದರಲ್ಲೂ ನೀವು ಕಂಡುಕೊಂಡ ಪ್ರೀತಿಯೊಂದಿಗೆ ವ್ಯವಹರಿಸುವಾಗ ಈ ಆಟ ಕಟ್ಟಲೇ ಕೂಡದು. ನಂಗೆ ಗೊತ್ತು ಅಂತ ನಾಟಕ ಮಾಡುವುದಕ್ಕಿಂತ ಅಜ್ಞಾನವನ್ನು ಪ್ರಕಟಿಸುವುದರಲ್ಲೇ ಹೆಚ್ಚಿನ ಫಾಯಿದೆಯಿದೆ.
ಮನಶಾಸ್ತ್ರಜ್ಞನಾಗಿ ನಾನು ಕೌಟುಂಬಿಕ ಥೆರಪಿ ಕಲಿಯುತ್ತಿದ್ದ ಸಂದರ್ಭದಲ್ಲಿ ಕಾರ್ಲ್ ವಿಟೇಕರ್ ಎಂಬ ಅದ್ಭುತ ಶಿಕ್ಷಕನೊಬ್ಬ ನನಗೆ ಗೊಂದಲದ ಲಾಭಗಳನ್ನು ತಿಳಿಸಿಕೊಟ್ಟ. 'ತಿಳಿದುಕೊಂಡಿದ್ದೇನೆ' ಎಂಬುದು 'ಹುಡುಕುತ್ತಿದ್ದೇನೆ' ಎನ್ನುವುದಕ್ಕಿಂತ ಪ್ರಬಲವಾದದ್ದೇನೂ ಅಲ್ಲ ಎಂದೇ ಪ್ರತಿಪಾದಿಸುತ್ತಿದ್ದ ಕಾರ್ಲ್, ಕನ್‌ಫ್ಯೂಸನ್ ಅಥವಾ ಗೊಂದಲವೆಂಬುದು ರಸಗೊಬ್ಬರವಿದ್ದಂತೆ ಎನ್ನುತ್ತಿದ್ದ. ಗೊಂದಲವೆಂಬುದು ಹೊಲಸು ತ್ಯಾಜ್ಯದಂತೆ ಕಾಣಬಹುದಾದರೂ ಅದಿಲ್ಲದೇ ಏನೂ ಬೆಳೆಯುವುದಿಲ್ಲ.
ಸ್ಯಾಮ್... ಅಜ್ಞಾನಿಯಾಗಿರುವುದಕ್ಕೆ ಹಿಂಜರಿಕೆ ಬೇಡ. ಅದು ಅದ್ಭುತವೊಂದರ ಮುನ್ನುಡಿ. ನಿನ್ನ ಸಂಗಾತಿ 'ನನಗಿದು ಗೊತ್ತಿಲ್ಲ' ಎಂದಾಗ ಅಥವಾ ನೀನೇ ಆ ಮಾತನ್ನು ನಿನ್ನ ಸಂಗಾತಿಗೆ ಹೇಳಿದಾಗ ನೀವಿಬ್ಬರೂ ಕಲಿಯುವುದಕ್ಕೆ ಮುಂದಾಗುತ್ತೀರಿ. ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಹೊಸದನ್ನು ಆಗ ಅನ್ವೇಷಿಸುತ್ತೀರಿ. ಸೆಕ್ಸ್, ಪ್ರೀತಿ, ಬದುಕು, ಹೆದರಿಕೆ ಹಾಗೂ ನಿನ್ನ ಬಗ್ಗೆಯೇ ನಿನಗೆ ಹೊಸ ಸಂಗತಿಗಳು ತಿಳಿಯುತ್ತವೆ. ಯಾರ ಬಗ್ಗೆ ಪ್ರೀತಿ- ಗೌರವಗಳು ಇರುತ್ತವೆಯೋ ಅವರ ಸಾನಿಧ್ಯದಲ್ಲಿರುವಾಗ ಉತ್ಕಟ ಖುಷಿಯೊಂದನ್ನು ನಮ್ಮದಾಗಿಸಿಕೊಳ್ಳುವುದಕ್ಕೆ ಅನುಸರಿಸಬೇಕಾದ ಕೊಡು-ಕೊಳ್ಳುವಿಕೆಯ ಅಂಶಗಳ ಬಗ್ಗೆ ಮುಕ್ತವಾಗಿ ಕೇಳಿಕೊಳ್ಳಬೇಕು. ನಿನಾಗಿಯೇ ನೀನು ಕಲಿತುಕೊಳ್ಳುವುದಕ್ಕಿಂತ ನೀವಿಬ್ಬರೂ ಸೇರಿ ಕಲಿತುಕೊಳ್ಳುವುದು-ಕಂಡುಕೊಳ್ಳುವುದರ ಪ್ರಮಾಣ ಹೆಚ್ಚಿನದಾಗಿರುತ್ತದೆ. ನಿನ್ನ ಸಂಗಾತಿಯ ಅಗತ್ಯಗಳನ್ನು ಕಾಳಜಿ, ಪ್ರೀತಿ ಹಾಗೂ ತಾಳ್ಮೆಯಿಂದ ಗಮನಿಸುವುದಕ್ಕೆ ಮುಂದಾದಾಗ ನಿನ್ನಲ್ಲಿನ ಭಾವತೀವ್ರತೆ ಪರಿಪೂರ್ಣವಾಗುತ್ತದೆ. ನಿನ್ನ ಸಂಗಾತಿಯ ಖುಷಿ, ದುಃಖಗಳನ್ನೆಲ್ಲ ಆಕೆ ಹತ್ತಿರವಿಲ್ಲದಿದ್ದಾಗಲೂ ಅನುಭವಕ್ಕೆ ತಂದು ಮಿಂದೇಳುವುದು ಶಕ್ಯವಾಗುತ್ತದೆ ಹಾಗೂ ಇದೇ ನಿನ್ನ ಬದುಕನ್ನು ಮುನ್ನಡೆಸುತ್ತದೆ.
-----
ಸ್ಯಾಮ್, ನಾನು ಅಪಘಾತಕ್ಕೆ ತುತ್ತಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮಲಗಿದ್ದ ದಿನಗಳವು. ಹಾಸಿಗೆಯೇ ಜಗತ್ತಾಗಿತ್ತು. ಗಾಯ ಮಾಗುವುದನ್ನೇ ಕಾಯಬೇಕಿತ್ತು. ವೈದ್ಯರು ಅದಕ್ಕೆ ಮೂವತ್ತು ದಿನಗಳು ಬೇಕೆಂದರು. ಅದು ಹೇಗೆ ಅಷ್ಟು ದಿನಗಳೆಂದು ಲೆಕ್ಕ ಹಾಕುತ್ತೀರಿ ಎಂದು ಕೇಳಿದೆ. ಆಗ ಅವರು ಚರ್ಮದ ಹಾನಿಯನ್ನು ವಿವರಿಸಿ, ಆರೋಗ್ಯಕರ ವಾತಾವರಣದಲ್ಲಿದ್ದರೆ ದಿನಕ್ಕೆ ಒಂದು ಮಿಲಿಮೀಟರ್ ಲೆಕ್ಕದಲ್ಲಿ ಗಾಯ ವಾಸಿಯಾಗುವುದೆಂದರು. ಗಾಯಕ್ಕೆ ಪಟ್ಟಿ ಕಟ್ಟಿದಾಗ ನಾನು ವಿಚಾರಿಸಿದೆ. 'ಗಾಯ ಮಾಗುವುದಕ್ಕೆ ಆಮ್ಲಜನಕ ಬೇಕಲ್ಲವೇ? ಹಾಗಾದಲ್ಲಿ ಗಾಯವನ್ನು ಗಾಳಿಗೆ ತೆರೆದಿಡಬೇಕಲ್ಲ?' ಆಗ ವೈದ್ಯರು ಹೇಳಿದರು- 'ಗಾಯ ಮಾಗುವುದಕ್ಕೆ ಆಮ್ಲಜನಕ ಬೇಕಿರುವುದು ಖರೆ. ಆದರೆ ಗಾಳಿಯಲ್ಲಿರುವುದಲ್ಲ. ನಿಮ್ಮ ರಕ್ತದಲ್ಲಿರುವಂಥದ್ದು. ಗಾಯ ಮಾಗುವುದಕ್ಕೆ ಬೇಕಾದ ಎಲ್ಲ ಅಂಶಗಳೂ ನಿಮ್ಮ ದೇಹದಲ್ಲೇ ಇರುತ್ತವೆ. ಆ ಪೋಷಕ ಶಕ್ತಿಯ ಜತೆ ಸಂಪರ್ಕ ಸಾಧಿಸುವುದಷ್ಟೇ ನಿಮ್ಮ ಕೆಲಸ'.
ಈ ಮಾತು ನನ್ನನ್ನು ಬಹಳ ಪ್ರಭಾವಿಸಿತು. ಮಗು ಮತ್ತು ದೇವರ ನಡುವಿನ ಒಪ್ಪಂದದ ಕತೆ ಹೇಳಿದ್ದೆನಲ್ಲಾ? ನಮ್ಮ ಹೃದಯ ಮಾಗುವುದಕ್ಕೆ ಬೇಕಿರುವ ಅಂತಃಸತ್ವವೂ ನಮ್ಮೊಳಗೇ ಇದೆ ಎಂಬ ಅರಿವು ನನಗಾಯಿತು.
-------
ಇವಿಷ್ಟೂ ತಾತನೊಬ್ಬ ತನ್ನ ಮೊಮ್ಮಗನಿಗೆ ಬರೆದ ಪತ್ರಗಳಲ್ಲಿ ಇಣುಕಿರುವ ಜೀವನಸಾರದ ಸಾಲುಗಳು. ಡ್ಯಾನಿಯಲ್ ಗಾತಿಲಿಯಬ್ ಫಿಲಿಡೆಲ್ಫಿಯಾದ ಮನೋವಿಶ್ಲೇಷಕ. ಆತ ತನ್ನ ಮೊಮ್ಮಗ ಸ್ಯಾಮ್‌ನಿಗೆ ಬದುಕಿನ ಬಗ್ಗೆ, ಅದರ ಮೌಲ್ಯಗಳ ಕುರಿತು ತನ್ನ ಅನುಭವದ ಪದ ಪಾಕದಲ್ಲಿ ಪತ್ರ ಬರೆಯುತ್ತಾ ಹೋಗುತ್ತಾನೆ. ಪತ್ರದ ಅನೇಕ ಅಂಶಗಳು ಎಳವೆಯಲ್ಲಿ ಸ್ಯಾಮ್‌ಗೆ ಅರ್ಥವಾಗದಿದ್ದರೂ ಮುಂದೊಮ್ಮೆ ಆತ ಅಲ್ಲಿನ ಅರ್ಥಗಳನ್ನು ಆಯ್ದುಕೊಳ್ಳುತ್ತಾನೆ ಎಂಬ ಭರವಸೆಯಲ್ಲಿ. ಇಲ್ಲೊಂದು ಕೌತುಕದ ಸಂಗತಿಯಿದೆ. ಈ ಡ್ಯಾನಿಯಲ್ ದೇಹದ ಕೆಳ ಭಾಗದ ಸ್ವಾಧೀನ ಕಳೆದುಕೊಂಡು ಗಾಲಿ ಕುರ್ಚಿಯನ್ನು ಅವಲಂಬಿಸಿರುವ ಹಿರಿ ಮನುಷ್ಯ. ಈತನ ಮೊಮ್ಮಗ 'ಆಟಿಸಂ' ಎಂಬ ಕಾಯಿಲೆಗೆ ತುತ್ತಾದವ. ವ್ಯಕ್ತಿಯ ಸಾಮಾಜಿಕ ಬೆಳವಣಿಗೆ, ಸಂವಹನ ಸಾಮರ್ಥ್ಯಗಳನ್ನು ಕುಗ್ಗಿಸುವ ಕಾಯಿಲೆ ಇದು. ಇಂಥ ಸಂದರ್ಭದಲ್ಲಿ ಬೇಕಾಗಿರುವ ಸಮಧಾನ. ಒತ್ತಾಸೆ, ಪ್ರೀತಿ, ಭರವಸೆಗಳನ್ನೆಲ್ಲ ತನ್ನ ಒಲವಿನ ಓಲೆಯಲ್ಲಿ ಹರಿಸಿದ್ದಾರೆ ಡ್ಯಾನಿಯಲ್ ಗಾತಿಲಿಯಬ್. ಈ ಜೀವನದೃಷ್ಟಿಯ ಸಾಲುಗಳನ್ನು ಹೊತ್ತ ಪತ್ರಗಳು 'ಲೆಟರ್ಸ್ ಟು ಸ್ಯಾಮ್' ಎಂಬ ಶೀರ್ಷಿಕೆಯಲ್ಲಿ ಪುಸ್ತಕವಾಗಿ ಪ್ರಕಟಗೊಂಡಾಗ 'ಇಂಟರ್ ನ್ಯಾಷನಲ್ ಬೆಸ್ಟ್ ಸೆಲ್ಲರ್' ಎನಿಸಿಕೊಂಡಿತು. ರೇಡಿಯೋ- ಟಿ.ವಿ.ಗಳಲ್ಲಿ ಡ್ಯಾನಿಯಲ್‌ಗೆ ಈ ಪಾಠಗಳನ್ನು ಹಂಚಿಕೊಳ್ಳುವಂತೆ ಅಪಾರ ಬೇಡಿಕೆಗಳ ಪ್ರವಾಹ ನಂತರ ಡ್ಯಾನಿಯಲ್ ಸರಣಿ ಪುಸ್ತಕಗಳನ್ನೇ ಬರೆದರು.
ಇನ್ನೊಂದು ತಿಂಗಳಲ್ಲಿ ನಮ್ಮ ಶೈಕ್ಷಣಿಕ ವರ್ಷದ ಹೆಚ್ಚಿನ ಪರೀಕ್ಷೆಗಳೆಲ್ಲ ಮುಗಿಯುತ್ತವೆ. ಹಾಗೆಂದು ಮಕ್ಕಳು ಉಸಿರೆಳೆದುಕೊಳ್ಳುವಂತಿಲ್ಲ. ವೃತ್ತಿ ಬದುಕು ರೂಪಿಸಿಕೊಳ್ಳುವುದಕ್ಕೆ ಅನಿವಾರ್ಯವಾಗಿರುವ ಹತ್ತೆಂಟು ಪರೀಕ್ಷೆಗಳ ತಿರುಗಣಿಗೆ ಮತ್ತೆ ಬೀಳಬೇಕಿದೆ. ಇವೆಲ್ಲದರ ನಡುವೆ ಜೀವನಪಠ್ಯ ಮಾತ್ರ ಧೂಳು ತಿನ್ನುತ್ತದೆಯೇನೋ ಎಂಬ ಆತಂಕ ಆಗೀಗ ಕಾಡುತ್ತ್ತದೆ. ಹಿರಿ ಪೀಳಿಗೆಯ ಭಾವ-ಬುದ್ಧಿವಂತಿಕೆಗಳು ಹೊಸ ಜೀವಗಳಿಗೆ ರವಾನೆಯಾಗುವುದಕ್ಕೆ ಪುರುಸೊತ್ತೇ ಸಿಗುತ್ತಿಲ್ಲವೇನೋ ಎಂದೆಲ್ಲ ಅನಿಸುತ್ತದೆ. ಈ ಎಲ್ಲ ದುಗುಡಗಳ ಮಧ್ಯೆ 'ಲೆಟರ್ಸ್ ಟು ಸ್ಯಾಮ್' ನಂಥ ಪುಸ್ತಕಗಳು ಗಾಢವಾಗಿ ಓದಿಸಿಕೊಳ್ಳುತ್ತವೆ!
- ಚೈತನ್ಯ ಹೆಗಡೆ
cchegde@gmail.com