ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ವಿಮರ್ಶೆಯ ಸ್ಥಿತಿ ಏನು, ಮುಂದಿನ ಗತಿ ಏನು?

Mainashree
Updated On : 13 Mar 2013, 12:26 pm

ಕನ್ನಡ ಸಾಹಿತ್ಯ ವಿಮರ್ಶೆ ಸಾಗುತ್ತಿರುವ ಮಾರ್ಗವನ್ನು ಡಿ. ಎ. ಶಂಕರ ಅವರು ವಿಶ್ಲೇಷಿಸಿದ್ದರು. ಅದಕ್ಕೆ ಪೂರಕವಾಗಿ ಎಚ್. ಆನಂದರಾಮಶಾಸ್ತ್ರಿ ಬರೆದಿದ್ದರು. ಇದು ಇನ್ನೊಂದು ಪೂರಕ ಅಭಿಪ್ರಾಯ.
---
ನಮ್ಮ ಕನ್ನಡ ಕೃತಿಗಳ ವಿಮರ್ಶೆಯ ಇಂದಿನ ಸ್ಥಿತಿಯನ್ನು ಗಮನಿಸಿದ ಯಾರಿಗಾದರೂ, ಈ ಹೀನ ಸ್ಥಿತಿಯೇ ಮುಂದುವರೆದರೆ ನಾಳೆ ಇದರ ಗತಿ ಏನಾಗುವುದೋ ಎಂಬ ಚಿಂತೆ ಕಾಡದಿರದು. ವಿಮರ್ಶೆಯ ಇಂದಿನ ಈ ಹೀನದೆಶೆಗೆ ಕಾರಣ ಒಂದಲ್ಲ ಹಲವಾರು.
1) ಇಂದಿನ ವಿಮರ್ಶೆಯು ಕೃತಿನಿಷ್ಠವಾಗಿರುವುದಿಲ್ಲ. ನಿಜವಾದ ವಿಮರ್ಶಕರ ದೃಷ್ಟಿಯು ಕೇವಲ ಕೃತಿಯ ಮೇಲಿರಬೇಕೇ ವಿನಾ ಕೃತಿಕಾರನತ್ತ ಇದು ಹೊರಳಬಾರದು. ಕೃತಿಯ ವಿಷಯ ವಸ್ತು ಅದರ ಪ್ರತಿಪಾದನೆ ಅದರಲ್ಲಿ ಸರಿಯಾಗಿ ಆಗಿದೆಯೇ, ಒಂದೊಮ್ಮೆ ಆಗದಿದ್ದಲ್ಲಿ ಕೃತಿಕಾರ ಎಲ್ಲೆಲ್ಲಿ ಎಡವಿದ್ದಾನೆ ಎಂಬುದನ್ನು ತೋರಿಸುವುದಷ್ಟೇ ವಿಮರ್ಶಕನ ಕೆಲಸ. ಆದರೆ ಇಂದಿನ ಕೃತಿ ವಿಮರ್ಶಕರು ಕೃತಿಯನ್ನಷ್ಟೇ ಗಮನಿಸದೆ ಲೇಖಕನ ಒಳಹೊರಗುಗಳತ್ತ ಹೊರಳುವುದು ಕಂಡು ಬರುತ್ತದೆ. ಕೃತಿಕಾರನ ವಿದ್ಯಾರ್ಹತೆ (ಅವನು ಯಾವ ವಿಶ್ವವಿದ್ಯಾಲಯದ "ಡಾಕ್ಟರು") ಅವನ ಹಿನ್ನೆಲೆ, ಮುನ್ನೆಲೆ ಮುಂತಾದವುಗಳೊಂದೂ ಅವನ ಕೃತಿ ರಚನೆಗೆ ಸಹಾಯಕವಾಗಲಾರವು. ಏಕೆಂದರೆ ವಿ.ವಿ.ದ ಡಾಕ್ಟರೇಟ್ ಪಡೆದ "ಪರದೇಶಿ"ಯೂ ಆಗಿರುವನೊಬ್ಬ ಅತಿ ಕೀಳು ದರ್ಜೆಯ ಕೃತಿಯನ್ನು ರಚಿಸಬಹುದು. ಅಥವಾ ಕಾಲೇಜು ಮೆಟ್ಟಿಲು ಹತ್ತದೆ ಭಾರತ ಬಿಟ್ಟು ಇನ್ಯಾವುದೇ ದೇಶದ ಪ್ರವಾಸವನ್ನೂ ಮಾಡದವನೊಬ್ಬ ಶ್ರೇಷ್ಠ ಕೃತಿಯೊಂದರ ರಚನೆ ಮಾಡಬಹುದು. ಆದ್ದರಿಂದಲೇ ಹೇಳಿದ್ದು ವಿಮರ್ಶಕನಿಗೆ ಕೃತಿ ಮುಖ್ಯವಾಗಬೇಕೇ ವಿನಾ ಕೃತಿಕಾರನಲ್ಲ.
2) ಇಂದುನಮ್ಮ ವಿಮರ್ಶಾ ಕ್ಷೇತ್ರವು  ಲೇಖಕರು ಮತ್ತು ವಿಮರ್ಶಕರ ನಡುವಿನ ಕುಸ್ತಿ ಅಖಾಡವಾಗಿ ಮಾರ್ಪಟ್ಟಿದೆ. ಅವರ ನಡುವಿನ ಕುಸ್ತಿಯ ವಿವರವನ್ನು ಕೊಡುವ ಕೆಲಸವನ್ನು ಮಾಡುತ್ತಿರುವುದು ಸುದ್ದಿ ಮಾಧ್ಯಮಗಳು. ಈ ಕುಸ್ತಿ ಪಂದ್ಯಾಟಕ್ಕೆ ವಿಮರ್ಶಕರು ಸಹೃದಯರಾಗಿ ಯಾವುದೇ ಕೃತಿಯನ್ನು ವಿಮರ್ಶಿಸದಿರುವುದು ಮತ್ತು ವಿಮರ್ಶೆಯನ್ನು ತನ್ನ ವೈಯಕ್ತಿಕ ಅವಮಾನವೆಂದು ಭಾವಿಸುವ ಲೇಖಕರೂ ಕಾರಣ. ಇಂದು ಪ್ರಚಲಿತವಾಗಿರುವ ಹೊಸ ಹೊಸ ವಾದಗಳು ಪಂಥಗಳು ಮತ್ತು ರಾಜಕೀಯ ಕ್ಷೇತ್ರದಲ್ಲಷ್ಟೇ ಕಂಡು ಬರುತ್ತಿದ್ದ ಜಾತಿ, ಪ್ರಾಂತ್ಯ ಮುಂತಾದ ಹೇಸಿಗೆ ಹುಟ್ಟಿಸುವ ಸಾಧನೆಗಳಿಂದಲೇ ಈ ಕುಸ್ತಿಯು ನಡೆಯೋದು. ಇದು ನಿಂತರೆ ಮಾತ್ರ ನಾವು ಹಿಂದಿನ ಮಾದರಿಯ ವಿಮರ್ಶೆಯನ್ನು ನಿರೀಕ್ಷಿಸಲು ಸಾಧ್ಯ. ಸಹೃದಯತೆಯೇ ಈ ರೀತಿಯ ರೋಗಕ್ಕೆ ರಾಮಬಾಣ.
3) ಇನ್ನೊಂದು ಕಾರಣ-ಕೃತಿಯನ್ನು ಅದು ಇದ್ದಂತೆ ನೋಡದೇ, ವಿಮರ್ಶಕ ತನ್ನ ಮೂಗಿನ ನೇರಕ್ಕೆ ನೋಡುವುದು. ಅರ್ಥಾತ್ ಅದು ಹೀಗೇ ಇರಬೇಕಿತ್ತು ಎನ್ನುವ ಧಾರ್ಷ್ಟ್ಯ ತೋರುವುದು. ಒಂದು ಕೃತಿಯ ವಿಷಯದ ಆಯ್ಕೆ ಲೇಖಕನದೇ ವಿನಾ ವಿಮರ್ಶಕನದಲ್ಲ. ಆದ್ದರಿಂದ ಈ ಕೃತಿ ಹೇಗಿದೆಯೋ ಹಾಗೆಯೇ ವಿಮರ್ಶೆ ಮಾಡಬೇಕಾದ್ದು ಯುಕ್ತ. ಇಲ್ಲವಾದಲ್ಲಿ ಅದು ಲೇಖಕನ ಅಭಿಪ್ರಾಯ ಸ್ವಾತಂತ್ರ್ಯದ ಹರಣವಾಗುತ್ತದೆ. ಕೃತಿಯು ಕವಿತಾ ಸಂಗ್ರಹ ಅಥವಾ ಕಾವ್ಯ ಆಗಿದ್ದರಂತೂ, ಈ ಹೇಳಿಕೆ ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತದೆ. ಏಕೆಂದರೆ ''Poetry is the spontaneous over flow of powerfu feelings''ಈ    feelings  ಅನ್ನು ಹೊರಗಿನಿಂದ ಕವಿಯ ತಲೆಯೊಳಗೆ ತೂರಿಸಲು ಸಾಧ್ಯವೇ? ಕವಿತೆಯು ತಾನಾಗಿ ಸ್ಫುರಿಸಬೇಕಷ್ಟೇ?!
4) ಇಂದಿನ ಬಹುತೇಕ ವಿಮರ್ಶಕರು ನಾನು ಮೊದಲು ತಿಳಿಸಿದಂತೆ ಯೂನಿವರ್ಸಿಟಿಯ ಡಾಕ್ಟರುಗಳು. ಹೀಗಾಗಿ ಇವರು "ವಿಮರ್ಶಾ ಪಂಡಿತರೇ" ಹೊರತು ಸ್ವಂತ ಕೃತಿ ರಚನೆಗೆ ಅಸಮರ್ಥರು. ಕೆಲವು ವಿಮರ್ಶಕರಂತೂ ವಿದೇಶದಿಂದ ವಾಪಸಾದ ವಿಮರ್ಶಾ ಪಂಡಿತರು. ಆದ್ದರಿಂದ ಇವರ ವಿಮರ್ಶೆಯಲ್ಲಿ ಕೃತಿಯ ಬಗ್ಗೆ ನಮಗೇನೂ ತಿಳಿಯದೇ ಹೋದರೂ ಸದರಿ ವಿಮರ್ಶಕರ ವಿಮರ್ಶಾ ಪಾಂಡಿತ್ಯದ ಆಳ ಇವರ ಇಂಗ್ಲಿಷ್ ಜ್ಞಾನದ ಉದ್ದ ಇಂಥವುಗಳ (ಬೇಡಾದ) ಜ್ಞಾನ ಸಂಪೂರ್ಣವಾಗಿ ಆಗುತ್ತೆ. ಇಂಥ ವಿಮರ್ಶಕರಿಂದ ನಾವು ಯಾವುದೇ ಕೃತಿಯ ವಸ್ತುನಿಷ್ಠ ವಿಮರ್ಶೆಯನ್ನು ನಿರೀಕ್ಷಿಸುವುದಾದರೂ ಹೇಗೆ?
5) ಕಡೆಯ ರೀತಿಯ ವಿಮರ್ಶಕರಂತೂ ನನಗೆ 'ಶಾಲಾ ಬಾಲಕ'ರನ್ನು ನೆನಪಿಸುತ್ತಾರೆ. ಇವರು ಕೃತಿಯ 98ರ್ ಸಾರಾಂಶವನ್ನು ಕೊಟ್ಟು, ನಂತರ ಕೃತಿಕಾರನ ದೇಶ, ಭಾಷೆ, ಶೈಲಿ ಬಗ್ಗೆ ನಾಲ್ಕು ಸಾಲು ಬರೆದು ತಮ್ಮ ವಿಮರ್ಶೆಯ ಇತಿಶ್ರೀ ಹಾಡಿ ಕೈ ತೊಳೆದು ಕೊಳ್ಳುತ್ತಾರೆ! ಇವರು ಒದಗಿಸುವಂಥ ಕಥಾಸಾರಾಂಶವು ನನಗೆ, ನಾವು ಬಾಲಕರಾಗಿದ್ದಾಗ ಗಿಟ್ಟಿಸುತ್ತಿದ್ದ (ಕಷ್ಟಪಟ್ಟು) ಸಿನಿಮಾ ಕರಪತ್ರಗಳನ್ನು ನೆನಪಿಸುತ್ತೆ. ಅದರಲ್ಲಿ ಸಿನಿಮಾದವರು ಸಿನಿಮಾದ 98ರ್ ಕಥೆಯನ್ನು ಕೊಟ್ಟು ಕೊನೆಯಲ್ಲಿ "ರಾಜಕುಮಾರ"ನಿಗೆ ರಾಜಕುಮಾರಿ ಸಿಕ್ಕು ಅವರ ಮದುವೆ ಆಗುವುದೇ?" ಎಂಬುದನ್ನು ಸಿನಿಮಾ ನೋಡಿ ತಿಳಿಯಿರಿ ಎಂದಿರುತ್ತಿತ್ತು.
ನನಗೆ ಭೈರಪ್ಪನವರ "ಕವಲು" ಕೃತಿಯ 5 ಭಿನ್ನ ವಿಮರ್ಶೆಗಳು ಇಂಥದೇ ವಿಮರ್ಶಕರ "ಕೃಪೆ"ಯಿಂದ ಪ್ರಾಪ್ತವಾಗಿ, ನನಗೆ "ಕವಲು" ಕೃತಿಯ ಸಂಪೂರ್ಣ ಕಥೆ ತಿಳಿದು ಅದನ್ನು ಓದುವ ಉತ್ಸಾಹವೇ ಇಲ್ಲದ ದುರ್ಗತಿ ಪ್ರಾಪ್ತವಾಯಿತು. ಇದು ಇಂದಿನ ವಿಮರ್ಶೆ!
1991ರಲ್ಲಿ ಪ್ರಕಟವಾದ ಎ.ಎನ್.ಮೂರ್ತಿರಾಯರ ಕೃತಿ 'ದೇವರು'ವಿನ ವಿಮರ್ಶೆ 1992 ಫೆಬ್ರವರಿ ಮಾಸದ 'ಮಯೂರ'ದಲ್ಲಿ ಪ್ರಕಟವಾಗಿದೆ. ವಿಮರ್ಶಕರು ಎಲ್.ಎನ್. ಶೇಷಗಿರಿರಾಯರು. ಅದರಲ್ಲಿ ಮೂರ್ತಿರಾಯರ ಪ್ರಸ್ತಾಪ ಬಂದಿರುವುದು ಕೇವಲ ಒಮ್ಮೆ ಮಾತ್ರ. ಉಳಿದಂತೆ ಲೇಖನವನ್ನು ಸಂಪೂರ್ಣವಾಗಿ ಆವರಿಸಿರುವುದು ವಸ್ತುನಿಷ್ಠ ವಿಮರ್ಶೆ ಮಾತ್ರ. ಮೂರ್ತಿರಾಯರು ಎಡವಿರುವ ಜಾಗವನ್ನು ಶೇಷಗಿರಿರಾಯರು ನಿರ್ದಾಕ್ಷಿಣ್ಯವಾಗಿ, ಆದರೆ ಸೂಚ್ಯವಾಗಿ ಸಹೃದಯತೆಯಿಂದ ಸೂಚಿಸಿದ್ದಾರೆ. ಎಲ್ಲಿಯೂ ಮೂರ್ತಿರಾಯರನ್ನು ತೆಗಳುವ ಮಟ್ಟಕ್ಕೆ ಇಳಿದಿಲ್ಲ ಮತ್ತು ಕೃತಿಯನ್ನು ಹೇಗೆ ಬರೆಯಬೇಕಾಗಿತ್ತು ಎಂದು ಎಲ್ಲಿಯೂ ಹೇಳಿಲ್ಲ. ಕೃತಿಕಾರ ಮತ್ತು ವಿಮರ್ಶಕ ಇಬ್ಬರೂ ಇಂಗ್ಲಿಷ್‌ನಲ್ಲಿ ಪ್ರಕಾಂಡ ಪಾಂಡಿತ್ಯ ಹೊಂದಿದವರೇ. ಆದರೆ ಎಲ್ಲಿಯೂ ತಾವು
ಇಂಗ್ಲಿಷ್‌ನ ಪ್ರೌಢಿಮೆಯನ್ನು ತೋರಿಸಿಲ್ಲ. ವಸ್ತುನಿಷ್ಠ, ಸಾರ್ಥಕ, ಸಹೃದಯ ವಿಮರ್ಶೆಯೆಂದರೆ ಇದು. ಇಂದು ನಮ್ಮ ಮಧ್ಯೆ ಇರುವವರು ಸಹೃದಯ ವಿಮರ್ಶಕರಾಗಿರದೇ ಕ್ಷುದ್ರ ವಿಮರ್ಶಕರಾಗಿರುವುದು ನಮ್ಮ ದುರ್ದೈವ. (ಕ್ಷುದ್ರ ವಿಮರ್ಶಕರನ್ನು ಇಂಗ್ಲಿಷ್‌ನಲ್ಲಿ CritiCsster ಎನ್ನುತ್ತಾರೆ.)
ಇಂಥ ಕ್ಷುದ್ರ ವಿಮರ್ಶಕರನ್ನು ಒಬ್ಬ ಸಂಸ್ಕೃತ ಕವಿ ಹೀಗೆ ವಿಡಂಬಿಸಿದ್ದಾನೆ.
"ವಿದ್ವಾನೇನ ವಿಜಾನಾತಿ ವಿದ್ವಜ್ಜನ ಪರಿಶ್ರಮಂ
ನ ಹಿ ವಂಧ್ಯಾ ವಿಜನಾತಿ ಗುರ್ವೀಂ ಪ್ರಸವ ವೇದನಾಂ"
ಕೃತಿ ರಚನೆಗಾಗಿ ರಚನಾಕಾರನು ಪಡುವ ಪರಿಶ್ರಮವನ್ನು ವಿದ್ವಾಂಸರಷ್ಟೇ ತಿಳಿಯಬಲ್ಲರು. ಪ್ರಸವ ವೇದನೆಯ ಗುರುತ್ವವನ್ನು ಬಂಜೆ ಹೇಗೆ ತಾನೇ ಅರಿಯಬಲ್ಲಳು?
ಸ್ವತಃ ಬರೆಯುವ ಶಕ್ತಿ ಇಲ್ಲದ ಇಂದಿನ ವಿಮರ್ಶಾಪಂಡಿತರ ಪಾಂಡಿತ್ಯವೂ ಕೇವಲ ಶುಷ್ಕ ಪಾಂಡಿತ್ಯ.
ಇಂದಿನ 'ವಿಮರ್ಶೆ'ಯನ್ನು ಅನುಭವಿಸುತ್ತಿರುವ ಸಾಮಾನ್ಯ ಓದುಗನೊಬ್ಬನ ಅನಿಸಿಕೆ ಇದಷ್ಟೇ.

- ಜಿ.ಎಂ. ಶಾಸ್ತ್ರಿ, ಬಂಟ್ವಾಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement