ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಸರ್ಕಾರದ ಬದ್ಧತೆಯ ಕೊರತೆಯೇ ಮುಷ್ಕರಕ್ಕೆ ಕಾರಣ

Mainashree
Updated On : 13 Mar 2013, 12:25 pm

ಸರ್ಕಾರಿ ವೈದ್ಯಾಧಿಕಾರಿಗಳ ಹಾಗೂ ವೈದ್ಯೇತರ ಸಿಬ್ಬಂದಿಗಳ ಮುಷ್ಕರ ಸದ್ಯ ಸ್ಥಗಿತಗೊಂಡಿದೆ. ಮುಷ್ಕರದ ವೇಳೆ ಬಡರೋಗಿಗಳು, ವೃದ್ಧರು ಹಾಗೂ ಚಿಕ್ಕಮಕ್ಕಳು ಚಿಕಿತ್ಸೆಗಾಗಿ ಪರದಾಡಿದ ಪರಿ ಮನ ಕಲಕುವಂತಿದೆ. ಸರ್ವತ್ರ ಖಂಡನೀಯ. ಸಾರ್ವಜನಿಕರ ತೆರಿಗೆ ಹಣದಿಂದ ಉದರ ಪೋಷಣೆ ಮಾಡಿಕೊಳ್ಳುವ ಈ ಅಧಿಕಾರಿ-ನೌಕರರು ಮುಷ್ಕರ ಮಾಡುವುದು ಯಾವ ಕಾರಣಕ್ಕೂ ಸರಿಯಲ್ಲ ಎಂದು ಬುದ್ಧಿಜೀವಿಗಳು ಹಾಗೂ ನೊಂದವರು ವ್ಯಕ್ತಪಡಿಸಿದ ಆಕ್ರೋಶವನ್ನು ಮಾಧ್ಯಮದವರು ಸುಂದರವಾದ ಪದಗಳನ್ನು ಬಳಸಿ ಅಲಂಕಾರಯುಕ್ತವಾದ ವಾಕ್ಯಗಳನ್ನು ರಚಿಸಿ ಪತ್ರಿಕೆಯಲ್ಲಿ ಪ್ರಕಟಿಸಿ ತಮ್ಮ ಪಾಲಿನ ಕರ್ತವ್ಯ ಮುಗಿಸುವಾಗ ಮೇಲ್ನೋಟಕ್ಕೆ ಮುಷ್ಕರ ನಿರತರು ತಪ್ಪಿತಸ್ಥರು ಎಂಬ ಹಾಗೆ ಕಂಡು ಬರುತ್ತದೆ.
ಆದರೆ ಇದರಲ್ಲಿ ಸರ್ಕಾರದ ಪಾಲು, ಕರ್ತವ್ಯ ಲೋಪ ಇಲ್ಲವೇ? ಮುಷ್ಕರ ದಿಢೀರ್ ಆಗಿಲ್ಲ. ಪೂರ್ವಸೂಚನೆಯಿಲ್ಲದೆ ನಡೆಯುವ ಚಳವಳಿಗಳ ಮಾತು ಬೇರೆ. ಈ ಪ್ರಕರಣದಲ್ಲಿ ಹಾಗೆ ಆಗಲಿಲ್ಲ. ಮೊದಲು ಮನವಿ, ಆ ಬಳಿಕ ನೆನಪೋಲೆ. ಆನಂತರ ಮುಷ್ಕರದ ಸೂಚನೆ. ಅದಕ್ಕೂ ಸರಿಯಾದ ಪ್ರತಿಕ್ರಿಯೆ ಬಾರದಿದ್ದಾಗ ಕೊನೆಯ ಅಸ್ತ್ರವಾಗಿ ಮುಷ್ಕರ. ಈ ಪ್ರಕರಣದಲ್ಲಿ ಎಲ್ಲ ವಿಧಾನಗಳನ್ನು ಕ್ರಮಬದ್ಧವಾಗಿ ಅನುಸರಿಸಲಾಗಿದೆ. ಪ್ರಯತ್ನ 2010ರಿಂದಲೇ ನಡೆಯುತ್ತಿದೆ. ಒಂದು ಪ್ರಕರಣವನ್ನು ಇತ್ಯರ್ಥಿಸಲು ಎರಡು ವರ್ಷ ಸಾಕಾಗುವುದಿಲ್ಲ ಎಂದರೆ ಅದು ಆಡಳಿತದ ವೈಖರಿ, ದಕ್ಷತೆಯನ್ನು ಸೂಚಿಸುತ್ತದೆ. ಸರ್ಕಾರ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಹಾಗೂ ಸಮಯೋಚಿತವಾಗಿ ಸ್ಪಂದಿಸುತ್ತಿಲ್ಲವೆಂದರೆ ಅವಸರದ ಹೇಳಿಕೆಯಾಗಲಾರದು.
ಪ್ರಸ್ತಾಪದಲ್ಲಿರುವ ಪ್ರಕರಣ ಆರೋಗ್ಯ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಆಡಳಿತದ ಅನೇಕ ಸೇವೆಗಳಲ್ಲಿ ಅತೀ ಅಮೂಲ್ಯವಾದ, ಅತೀ ಮುಖ್ಯವಾದ ಹಾಗೂ ಪ್ರಥಮಾದ್ಯತೆ ಸೆಳೆಯಬಲ್ಲ ಸೇವೆ ವೈದ್ಯಕೀಯ, ಸಾರ್ವಜನಿಕ ಆರೋಗ್ಯಸೇವೆ. ಈ ಸೇವೆಗಳಲ್ಲಿ ಅತೀ ಮುಖ್ಯವಾದುದು ರೋಗ ನಿರೋಧಕ ಅರ್ಥಾತ್ ರೋಗಬಾರದಂತೆ, ಬಂದಲ್ಲಿ ಹರಡದಂತೆ ತಡೆಯುವ ಕ್ರಮಗಳು (Preventive Measures). ಒಂದು ರಾಷ್ಟ್ರದ ಅಂತಸತ್ವ ಅಡಗಿರುವುದೇ ಆ ದೇಶದ ಸಾರ್ವಜನಿಕರ ಆರೋಗ್ಯದ ಗುಣಮಟ್ಟದಲ್ಲಿ. ಶ್ರೇಷ್ಠ ಗುಣಮಟ್ಟವನ್ನು ಕಾಪಾಡುವಲ್ಲಿ ವೈದ್ಯರ ಹಾಗೂ ವೈದ್ಯೇತರ ಸಿಬ್ಬಂದಿಗಳ ಪಾತ್ರ ಮುಖ್ಯ. ಅವರ ಪ್ರಾಮಾಣಿಕ ಹಾಗೂ ಸಂಯುಕ್ತ ಸೇವೆ ಅತಿ ಅಗತ್ಯ. ವೈದ್ಯರು ಹಾಗೂ ವೈದ್ಯೇತರ ಸಿಬ್ಬಂದಿಗಳು ಮುಷ್ಕರ ಹೂಡಿದರೆ ಪರಿಸ್ಥಿತಿ ಏನಾದೀತು. ಆಸ್ಪತ್ರೆಯೊಳಗೆ ತೀವ್ರ ನಿಗಾ ಬೇಕಾದ ರೋಗಿಗಳು ಅಸುನೀಗಬಹುದು, ಉಳಿದವರಿಗೆ ರೋಗ ಉಲ್ಬಣವಾಗಬಹುದು ಹಾಗೂ ಹೊರಗೆ ರೋಗ ಹರಡಬಹುದು. ಇದು ಇನ್ನೂ ಅಪಾಯಕಾರಿ ಎಂಬುದು ಸ್ವಯಂ ವೇದ್ಯ. ಸಮಾಜದ ಒಟ್ಟು ಸ್ವಾಸ್ಥ್ಯ ಕೆಡುವುದಲ್ಲದೇ ಆದಾಯದ ದೃಷ್ಟಿಯಲ್ಲಿಯೂ ತೀರಾ ನಷ್ಟ ಉಂಟಾಗುವುದರಲ್ಲಿ ಅನುಮಾನವಿಲ್ಲ.
ಆಡಳಿತಗಾರರಿಗೆ ಪರಿಸ್ಥಿತಿಯ ತೀವ್ರತೆಯ ಅರಿವಿರಬೇಕಲ್ಲವೇ? ಅಂಥ ಸ್ಥಿತಿ ಒದಗದಂತೆ ಸಾಕಷ್ಟು ಪೂರ್ವದಲ್ಲಿ ತಕ್ಕ ಕ್ರಮಕೈಗೊಳ್ಳಬೇಕಾದುದು ಆಡಳಿತದ ಜವಾಬ್ದಾರಿ. ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಸ್ಪಂದನವಿರುವ ಸರ್ಕಾರ ಸಕಾಲದಲ್ಲಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು. ಎರಡು ವರ್ಷದ ಅವಧಿಯಲ್ಲಿ ಈ ಪ್ರಕರಣ ಇತ್ಯರ್ಥಿಸಲು ಸಾಧ್ಯವಾಗಿಲ್ಲವೆಂದಾದರೆ ಈ ಮಂತ್ರಿ ಮಾಗಧರ ಹಾಗೂ ಚುನಾಯಿತ ಪ್ರತಿನಿಧಿಗಳ ಕೆಲಸದ ಪ್ರಮಾಣ, ಒತ್ತಡ ಇತ್ಯಾದಿಗಳ ಚರ್ಚೆ ಇಲ್ಲಿ ಪ್ರಸ್ತುತವೆನಿಸುತ್ತದೆ. ಸದನದ ಹೊರಗೆ ಇವರು ಕಾರ್ಯನಿರ್ವಾಹಕ ಕೆಲಸ ಮಾಡಬೇಕಾಗಿಲ್ಲ. ಅದಕ್ಕೆ ನುರಿತ ನೌಕರಶಾಯಿ ಇದೆ. ಸದನದ ಒಳಗೆ ಕಲಾಪದಲ್ಲಿ ಭಾಗವಹಿಸುವುದು ಚುನಾಯಿತ ಪ್ರತಿನಿಧಿಗಳ ಮುಖ್ಯ ಕರ್ತವ್ಯ. ಆದರೆ ಇವರು ಎಷ್ಟು ದಿನ ಕಲಾಪದಲ್ಲಿ ಭಾಗವಹಿಸುತ್ತಾರೆ ಎಂಬ ವಿಷಯ ತಿಳಿದಾಗ ಯಾರೂ ದಂಗಾದಾರು. ಮಾಹಿತಿ ಹಕ್ಕಿನಂತೆ ಸ್ವತಃ ಸಂಗ್ರಹಿಸಿದ ಅಂಕಿ ಅಂಶದಂತೆ 2011ರ 365 ದಿನಗಳಲ್ಲಿ ಕರ್ನಾಟಕ ವಿಧಾನಸಭೆ, ಕೇವಲ 31 ದಿನ ಬೈಠಕ್ ನಡೆಸಿದೆ. ದಿನಾಂಕ 16.2.13ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದಂತೆ ಕ್ರಮವಾಗಿ 2008-17, 2009-42, 2010-31, 2011-31, 2012-45 ಮತ್ತು 2013-10 ದಿನಗಳು. ಹೀಗೆ ಐದು ವರ್ಷಗಳಲ್ಲಿ ಒಟ್ಟು 176 ದಿನ ಬೈಠಕ್ ನಡೆದಿದೆ. ಅಂದರೆ ಒಂದು ವರ್ಷದಲ್ಲಿ ಸರಾಸರಿ 35 ದಿನ.
    ಉಳಿದ ದಿನಗಳಲ್ಲಿ ಇವರು ಏನು ಮಾಡುತ್ತಾರೆ? ಒಂದಷ್ಟು ದಿನ ಜನ ಸಂಪರ್ಕಕ್ಕಾಗಿ ವಿನಿಯೋಗ ಆಗಬಹುದು. ಉಳಿದಂತೆ ಎಷ್ಟು ದಿನ ಸಾರ್ವಜನಿಕ ಹಿತಾಸಕ್ತಿಗಾಗಿ ವ್ಯಯವಾಗುತ್ತದೆ ಎಂಬ ಮಾಹಿತಿ ಸಾರ್ವಜನಿಕರಿಗೀಗಬೇಕಾಗಿದೆ. ಆ ದಿನಗಳಲ್ಲಿ ಇವರು ದಿನಚರಿ ಬರೆಯುತ್ತಾರೆಯೇ? ಅದರ ಪರಿಶೀಲನೆ ಆಗುತ್ತದೆಯೇ,
ಅದರ ಮಾನದಂಡವೇನೆಂಬುದಕ್ಕೆ ಉತ್ತರ ದೊರೆಯುತ್ತಿಲ್ಲ. ಇವರು ಪಡೆಯುವ ವೇತನ, ಇತರ ಭತ್ತೆಗಳು, ಬಳಸುವ ವಾಹನ, ವಾಸಿಸುವ ಸುಸಜ್ಜಿತ ವಸತಿ ವ್ಯವಸ್ಥೆ ಎಲ್ಲವೂ ಸಾರ್ವಜನಿಕ ತೆರಿಗೆ ಹಣದಿಂದಲ್ಲವೇ? ಅಂದ ಮೇಲೆ ಸರ್ಕಾರಿ ನೌಕರರಿಗೆ ಅನ್ವಯಿಸುವ ಉತ್ತರದಾಯಿತ್ವ ಇವರಿಗೂ ಇರಬೇಕಲ್ಲ!
ಗಹನವಾದ ವಿಚಾರಗಳಲ್ಲಿ ತೀರ್ಮಾನ ಕೈಗೊಳ್ಳಲು ಸರ್ಕಾರ ತಜ್ಞರ ಸಮಿತಿ ರಚಿಸುವುದು ಸರ್ವೇ ಸಾಮಾನ್ಯ.  ಪ್ರಜಾಸತ್ತೆಯ ಲಕ್ಷಣವೂ ಹೌದು. ಪಾರದರ್ಶಕವೂ ಹೌದು. ಆದರೆ ಅದು ಈಗ ಸರ್ಕಾರದ ಮಟ್ಟದಲ್ಲಿ ಸಾಗ ಹಾಕಲು ಒಂದು ಸೋಗು. ನೇಮಕಗೊಂಡ ಸಮಿತಿ, ಸಭೆ ನಡೆಸುವುದೇ ಇಲ್ಲ. ಸಭೆ ನಡೆದಾಗ ಮುಖ್ಯ ವ್ಯಕ್ತಿಗಳು ಹಾಜರಿರುವುದಿಲ್ಲ. ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಮುಂದಿನ ಸಭೆಗೆ ಇನ್ನೊಂದು ನೆಪ. ಪ್ರಸ್ತಾಪದಲ್ಲಿರುವ ವೈದ್ಯರ ಪ್ರಕರಣದಲ್ಲಿಯೂ ಸರ್ಕಾರ ಒಂದು ಕ್ಯಾಬಿನೆಟ್ ಉಪಸಮಿತಿ ರಚಿಸಿದೆ. ದಿನಾಂಕ 17.12.12ರಂದು ರಚಿತವಾದ ಈ ಸಮಿತಿ ದಿನಾಂಕ 10.10.13ರಂದು ಮೊದಲ ಸಭೆ ನಡೆಸಿದೆ. ಸಭೆಯ ಮುಂದೆ ಈ ಹಿಂದೆ ಹೇಳಿದ ಹಾಗೂ ಮನವಿಯಲ್ಲಿ ಉಲ್ಲೇಖಿಸಲಾದ ವಿಷಯಗಳು ಬಂದಿವೆ. "ಈ ಎಲ್ಲ ಅಂಶಗಳನ್ನು ಸಚಿವ ಸಂಪುಟ ಉಪಸಮಿತಿಯು ವಿವರವಾಗಿ ಚರ್ಚಿಸಲು ಸಭೆಯನ್ನು ಮುಂದಾಡಲಾಯ್ತು". ಇದು ನಡಾವಳಿಕೆಯ ಕೊನೆಯ ಸಾಲು. ಇನ್ನು ಯಾವಾಗ ಸಭೆ ನಡೆಯುತ್ತದೆ ಎಂದು ತಿಳಿದಿಲ್ಲ. ಇದಕ್ಕೂ ಮುನ್ನ ಕೆಲವು ಸಮಿತಿಗಳನ್ನು ರಚಿಸಿದೆ. ಸಮಸ್ಯೆ ಪರಿಹಾರವಾಗಿಲ್ಲ.
 ಇರಲಿ. ಈಗ ವಿಷಯಕ್ಕೆ ಬರುತ್ತಾ ಮುಷ್ಕರ ನಡೆಸುವ ಉದ್ದೇಶ ಅಥವಾ ಇವರ ಬೇಡಿಕೆಗಳೇನೆಂದು ತಿಳಿಯುವ. ಕೆಲವು ಮುಖ್ಯ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದೆರಡು ವರ್ಷದಿಂದ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆಂದು ತಿಳಿದು ಬಂದಿದೆ. ಮೊದಲನೆಯದು ವೇತನ ತಾರತಮ್ಯ. ಎರಡನೆಯದು ವೇತನ ಬಟವಾಡೆಯಲ್ಲಾಗುವ ಅನುಚಿತ ವಿಳಂಬ. ಮೂರನೆಯದು ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿ ಕೆಲವು ವ್ಯದ್ಯಕೀಯ ಕಾಲೇಜುಗಳನ್ನು ಸ್ವಾಯತ್ತ ಸಂಸ್ಥೆ (ಆ್ಡಡ್ಟಿಟ್ಟಿಟ್ಟ್ಡಡ ್ಝಟಿಡಡ್ಝಿಡ್ಡಿಡ್ಝ್ಟಿಟಿಡ) ಗಳಾಗಿ ಪರಿವರ್ತಿಸಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳನ್ನು ಸದ್ರಿ ಸಂಸ್ಥೆಯ ವಶ ನೀಡಿರುವುದರಿಂದ ಸ್ವಾಯತ್ತ ಸಂಸ್ಥೆಯ ಹೊರಗಿನ ವೈದ್ಯರು ಹಾಗೂ ವೈದ್ಯೇತರ ಸಿಬ್ಬಂದಿಗಳಿಗೆ ಬಡ್ತಿ ಹಾಗೂ ಸೇವಾವಕಾಶದಲ್ಲಾಗುವ ವಂಚನೆ. ಪೂರಕವಾಗಿ ಎರಡು ಇತ್ತೀಚಿನ ಬೇಡಿಕೆಗಳು. ಆರೋಗ್ಯ ಸೇವೆಯನ್ನು ಪಂಚಾಯತ್‌ರಾಜ್ ವ್ಯಾಪ್ತಿಯಿಂದ ಹೊರತರುವುದು. ಕೊನೆಯದಾಗಿ ವೈದ್ಯಾಧಿಕಾರಿಗಳ ವರ್ಗಾವಣೆಗೆ ರೂಪಿಸಲಾದ ಕೌನ್ಸಿಲಿಂಗ್ ಪದ್ಧತಿಯಲ್ಲಿ ಕೆಲವು ಬದಲಾವಣೆಗಳು.
ಇವುಗಳಾವುವೂ ಇತ್ಯರ್ಥಿಸಲಾಗದ ಅತಿ ಸಮಸ್ಯಾತ್ಮಕ ವಿಷಯಗಳಲ್ಲ. ವೇತನ ನಿಗದಿಗೆ ಮಾನದಂಡವಿದೆ. ಈಗ ಅದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಲಾಗುತ್ತಿದೆ. ವೇತನ ಬಟವಾಡೆ ಖಂಡಿತವಾಗಿಯೂ ವಿಳಂಬವಾಗಬಾರದು. ಅದು ಮೂಲಭೂತ ಹಕ್ಕು. ಯಾವ ಕುಂಟು ನೆಪ ಹೇಳದೆ ಸಕಾಲದಲ್ಲಿ ವೇತನ ಬಟವಾಡೆಯ ವ್ಯವಸ್ಥೆ ಮಾಡಬೇಕಾದುದು ಆಡಳಿತದ ಜವಾಬ್ದಾರಿ. ಇಲಾಖೆಯ ತಾಂತ್ರಿಕತೆ ಹಾಗೂ ಸಂಕೀರ್ಣ ಸ್ಥಿತಿಯನ್ನುಲಕ್ಷಿಸಿ ಪಂಚಾಯತ್‌ರಾಜ್ ವ್ಯಾಪ್ತಿಯಿಂದ ಆರೋಗ್ಯ ಸೇವೆಯನ್ನು ಹೊರತರುವ ಅಧಿಕಾರ ಸರ್ಕಾರಕ್ಕಿದೆ. ಆದರೆ ಇವರ ಪ್ರಬಲವಾದ ಬೇಡಿಕೆ ಜಿಲ್ಲಾ ಆಸ್ಪತ್ರೆಗಳನ್ನು ಈಗ ಸ್ವಾಯತ್ತೆಯ ಪಟ್ಟಕ್ಕೇರಿದ ಕಾಲೇಜುಗಳ ಹಿಡಿತದಿಂದ ವಿರಹಿತ ಪಡಿಸುವುದು ಎಂಬುದಾಗಿ ಕಂಡು ಬರುತ್ತದೆ.
ವೈದ್ಯಕೀಯ ಕಾಲೇಜ್‌ಗೆ ಸ್ವತಂತ್ರ ಕ್ಲಿನಿಕಲ್ ಸೌಲಭ್ಯವಿರಬೇಕೆಂಬುದು ನಿಯಮ. ಹಿಂದೆ ಕರ್ನಾ ಟಕದಲ್ಲಿ ಕೇವಲ ನಾಲ್ಕು ಸರ್ಕಾರಿ ವೈದ್ಯಕೀಯ ಕಾಲೇಜ್‌ಗಳಿದ್ದವು. ಈ ಕಾಲೇಜ್‌ಗಳು ಅವುಗಳ ಮುಖ್ಯ ಠಾಣೆಯಲ್ಲಿರುವ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳ ಕ್ಲಿನಿಕಲ್ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದವು. ತಕರಾರಿಲ್ಲ. 2006ರಲ್ಲಿ ಒಮ್ಮೆಲೆ ಆರು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಉದಯಕ್ಕೆ ಬಂದವು. ಇಲ್ಲಿ ಆಗಿನ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ದಿ. ಡಾ॥ ವಿ.ಎಸ್. ಆಚಾರ್ಯರ ಕ್ರಾಂತಿಕಾರಿ ಹೆಜ್ಜೆ ಸ್ಮರಣೀಯ. ಹಿಂದಿನಂತೆ ಈ ಹೊಸ ಕಾಲೇಜುಗಳೂ ಆಯಾ ಜಿಲ್ಲಾ ಆಸ್ಪತ್ರೆಗಳ ಕ್ಲಿನಿಕಲ್ ಸೌಲಭ್ಯ ಬಳಸಿಕೊಳ್ಳಲು ವ್ಯವಸ್ಥೆಯಾಗಿತ್ತು. 2007ರಲ್ಲಿ ಇದ್ದಕ್ಕಿದ್ದಂತೆ ಸರ್ಕಾರ ಈ ಹೊಸ ಕಾಲೇಜುಗಳ ಸಹಿತ ಹತ್ತು ವೈದ್ಯಕೀಯ ಕಾಲೇಜುಗಳನ್ನು ಸ್ವಾಯತ್ತ ಸಂಸ್ಥೆಗಳನ್ನಾಗಿ ಪರಿವರ್ತಿಸಿ ಆಯಾ ಜಿಲ್ಲಾ ಆಸ್ಪತ್ರೆಗಳನ್ನು ಸ್ವಾಯತ್ತ
ಸಂಸ್ಥೆಯ ನಿಯಂತ್ರಣಕ್ಕೆ ನೀಡಿತು.
ಈ ಕಾಲೇಜುಗಳನ್ನು ಸ್ವಾಯತ್ತಾ ಸಂಸ್ಥೆಗಳನ್ನಾಗಿ ಪರಿವರ್ತಿಸುವ ಸರ್ಕಾರದ ಉದ್ದೇಶವೇನೆಂಬುದು ಸ್ಪಷ್ಟವಾಗಿಲ್ಲ. ಈ ಸಂಸ್ಥೆಗಳ ಮೂಲ ಸೌಕರ್ಯ ಹೆಚ್ಚಿಸಿ ಸಂಶೋಧನಾ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಲು ಅವುಗಳನ್ನು ಸ್ವಾಯತ್ತೆಯ ಪಟ್ಟಕ್ಕೇರಿಸಲೇಬೇಕಾದ
ಅಗತ್ಯವಿಲ್ಲ. ಅಲ್ಲದೆ ಜಿಲ್ಲಾ ಆಸ್ಪತ್ರೆಗಳನ್ನು ಅವುಗಳ ವಶ ನೀಡಲೇಬೇಕಾದ ಅಗತ್ಯವಿಲ್ಲ. ಎರಡೂ ಸರ್ಕಾರಿ ವಲಯದಲ್ಲಿ ಇರುವುವುಗಳು. ಹಿಂದೆ ಪ್ರಾಯೋಗಿಕವಾಗಿ ಸ್ಥಾಪಿಸಿದ ಸಂಸ್ಥೆಗಳಿಂದ ಉತ್ತೇಜದಾಯಕವಾದ ಫಲಿತಾಂಶ ದೊರಕಿರಲಿಲ್ಲ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ನಡೆದ ಹಗರಣಗಳೇ ಸಾಕ್ಷಿ. ಅಲ್ಲದೇ ಈ ಸಂಸ್ಥೆಗಳು ಆರೋಗ್ಯ ಸೇವೆಗಳಿಗೆ ಸಾಕಷ್ಟು ಶುಲ್ಕ ವಿಧಿಸುತ್ತವೆ ಎಂಬ ಸಾರ್ವಜನಿಕ ದೂರಿದೆ. ಹೀಗೆ ಎದ್ದು ಕಾಣುವ ಲಾಭವೇನಿಲ್ಲದಿದ್ದರೂ ಈ ಸ್ವಾಯತ್ತ ಸಂಸ್ಥೆಯ ಹೊರಗಿರುವ ಸರ್ಕಾರಿ ವೈದ್ಯಾಧಿಕಾರಿಗಳೂ ಹಾಗೂ ವೈದ್ಯೇತರ ಸಿಬ್ಬಂದಿಗಳ ಆತಂಕ ಹೆಚ್ಚಿಸಲು ಕಾರಣವಾಗಿದೆ.
ಈ ಸ್ವಾಯತ್ತ ಸಂಸ್ಥೆಗಳು ಸರ್ಕಾರದ ಅಧೀನವಾದರೂ ಆಡಳಿತ ಸ್ವತಂತ್ರ. ಸರ್ಕಾರದ ಹಸ್ತಕ್ಷೇಪವಿರುವುದಿಲ್ಲ. ಬಡ್ತಿ, ನಿವೃತ್ತಿ ಅಥವಾ ಇತರೇ ಕಾರಣಗಳಿಂದ ತೆರವಾಗುವ ಹುದ್ದೆಗಳನ್ನು ಭರ್ತಿ ಮಾಡುವ ಅಧಿಕಾರ ಆಯಾ ಸ್ವಾಯತ್ತೆ ಸಂಸ್ಥೆಗಳಿಗೆ ಸೇರಿದೆ. ಹಾಗಾಗಿ ರಾಜ್ಯದ ಇತರ ಕಡೆಗಳಲ್ಲಿ ಅಲ್ಲ ಆ ಜಿಲ್ಲೆಯಲ್ಲೇ ಸ್ವಾಯತ್ತೆ ಸಂಸ್ಥೆಯ ವ್ಯಾಪ್ತಿಯ ಹೊರಗೆ ಕೆಲಸ ಮಾಡುವ ವೈದ್ಯಾಧಿಕಾರಿಗಳು ಹಾಗೂ ಅಲ್ಲಿನ ವೈದ್ಯೇತರ ನೌಕರರಿಗೆ ಈ ಜಿಲ್ಲಾ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಅವಕಾಶವಿಲ್ಲ. ಒಂದು ಅಂದಾಜಿನಂತೆ ಸುಮಾರು ಶೇಕಡಾ 15ರಷ್ಟು ಅವಕಾಶ ಕುಂಠಿತವಾಗುತ್ತದೆ. ಅಂದರೆ ಅಷ್ಟು ಪ್ರಮಾಣದ ಬಡ್ತಿ ಅವಕಾಶವೂ ಇರುವುದಿಲ್ಲ. ಇದು
ಅತೃಪ್ತಿಗೆ ಕಾರಣ ಹಾಗೂ ಮುಷ್ಕರಕ್ಕೆ ಬಲವಾದ ಪ್ರೇರಣೆ ಎಂದರೆ ತಪ್ಪಾಗಲಾರದು. ಸರ್ಕಾರಿ ನೌಕರರಿಗೆ ದೊರಕಬಹುದಾದ ಬಲುದೊಡ್ಡ ಕೊಡುಗೆ ಎಂದರೆ ಪದೋನ್ನತಿ ಮತ್ತು ಸೇವಾವಕಾಶ. ಇದು ದಕ್ಷತೆಗೆ ಪ್ರೇರಣೆ. ಈ ಅವಕಾಶ ಮೊಟಕಾಗದಂತೆ ನೋಡಿಕೊಳ್ಳುವುದು ಆಡಳಿತದ ಜವಾಬ್ದಾರಿ.
ಮುಷ್ಕರವನ್ನು ಬೆಂಬಲಿಸುವುದು ಲೇಖನದ ಉದ್ದೇಶವಲ್ಲ. ಮಾನವ ಬದುಕಿಗೆ ಅತಿ ಅಗತ್ಯವಾದ ವೈದ್ಯಕೀಯ ಹಾಗೂ ರಕ್ಷಣಾ ಸೇವಾ ನಿರತ ನೌಕರರು ಸಾಕಷ್ಟು ಸಂಯಮಶೀಲರಾಗಿರಬೇಕೆಂಬುದೇ ನಮ್ಮ ಪ್ರತಿಪಾದನೆ. ಆದರೆ ಪರಿಸ್ಥಿತಿಯ ತೀವ್ರತೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಪರಿಗಣಿಸಿ ಕ್ಷಿಪ್ರ ಕಾರ್ಯೋನ್ಮುಖವಾಗಬೇಕಾದ ಸರ್ಕಾರ ಆ ಬದ್ಧತೆಯನ್ನು ತೋರಿಸುತ್ತಿಲ್ಲ. ಇದು ಮುಷ್ಕರಕ್ಕೆ ಹೇತುವೆಂಬ ಅಂಶ ಸಾರ್ವಜನಿಕರ ಗಮನಕ್ಕೆ ಬರಲಿ ಎಂಬುದು ನೈಜ ಉದ್ದೇಶ. ಇನ್ನಾದರೂ ಸರ್ಕಾರ ಅವಶ್ಯಕ ಸೇವಾ ಕ್ಷೇತ್ರಗಳಲ್ಲಿ ಮುಷ್ಕರ ಅಥವಾ ಇತರೇ ಸ್ವರೂಪದ ಸೇವಾ ವ್ಯತ್ಯಯಗಳು ಸಂಭವಿಸದಂತೆ ತಡೆಗಟ್ಟುವ ಬದ್ಧತೆ ತೋರಿಸಲಿ ರ್ಎಂದು ಹಾರೈಸೋಣ.

- ಬೇಳೂರು ರಾಘವಶೆಟ್ಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement