ಇಟಲಿ-ಇಂಡಿಯಾಗಳ ನಡುವೆ ಅದೇನು ನಡೆಯುತ್ತಿದೆ?
ಕೇರಳದ ಇಬ್ಬರು ಮೀನುಗಾರರನ್ನು ಹತ್ಯೆ ಮಾಡಿದ ಇಬ್ಬರು ಇಟಲಿ ನಾವಿಕರನ್ನು ನಮ್ಮ ದೇಶಕ್ಕೆ ವಾಪಾಸು ಕಳುಹಿಸುವುದಿಲ್ಲ ಎಂಬ ನಿರ್ಧಾರವನ್ನು ಇಟಲಿ ಸರ್ಕಾರ ಬಹಿರಂಗಗೊಳಿಸಿದೆ. ಕಳೆದ ವರ್ಷ ನಡೆದ ಘಟನೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ನ ವಿಚಾರಣೆಯನ್ನು ಎದುರಿಸುತ್ತಿದ್ದ ಇಟಲಿಯ ಈ ಇಬ್ಬರು ಆರೋಪಿಗಳು ಇನ್ನು ಅಲಭ್ಯ.
ಮಸ್ಸಿಮಿಲಿಯಾನೊ ಲತೊರ್ರೆ ಹಾಗೂ ಸಾಲ್ವತೊರ್ ಗಿರೋನ್ ಎಂಬ ಈ ಇಬ್ಬರು ನಾವಿಕರು ಕೊಲೆ ಆರೋಪದಲ್ಲಿ ಇಲ್ಲಿ ಬಂಧನಕ್ಕೆ ಒಳಗಾಗಿದ್ದರು. ಇಟಲಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸುವುದಕ್ಕೆ ಸುಪ್ರೀಂಕೋರ್ಟ್ನ ಅನುಮತಿಯೊಂದಿಗೆ ಅವರು ತಮ್ಮ ದೇಶಕ್ಕೆ ತೆರಳಿದ್ದರು. ಈ ಹಿಂದೆಯೂ ಕ್ರಿಸ್ಮಸ್ ಸಮಯದಲ್ಲಿ ಅವರು ತಮ್ಮ ಕುಟುಂಬದೊಂದಿಗೆ ಹಬ್ಬದಲ್ಲಿ ಪಾಲ್ಗೊಳ್ಳಬೇಕೆಂಬ ಕಾರಣ ನೀಡಿ ಇಟಲಿಗೆ ಹೋಗಿದ್ದರು. ನಂತರ ಹಿಂತಿರುಗಿ ವಿಚಾರಣೆಗೆ ಹಾಜರಾಗಿದ್ದರು. ಆದರೆ ಈ ಬಾರಿ ಅಂಥದೇ ಕರಾರಿನೊಂದಿಗೆ ಇಟಲಿಗೆ ತೆರಳಿದ್ದೇ ಬಂತು. ಈಗ ಅಲ್ಲಿನ ಸರ್ಕಾರ ಅವರನ್ನು ವಾಪಾಸು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಹೇಳಿದೆ.
ಈ ಇಬ್ಬರು ಆರೋಪಿಗಳು ಇಟಲಿಯ ತೈಲನೌಕೆ ಎನ್ರಿಕಾ ಲೆಕ್ಸಿಯಾದ ಮಿಲಿಟರಿ ಭದ್ರತೆಯ ತಂಡದಲ್ಲಿ ಇದ್ದವರು. ಭಾರತದ ಮೀನುಗಾರರನ್ನು ಸೊಮಾಲಿಯಾದ ಕಡಲ್ಗಳ್ಳರು ಎಂದು ತಿಳಿದುಕೊಂಡು ಗುಂಡು ಹಾರಿಸಿದೆವು ಎಂಬುದು ಇವರಿಬ್ಬರು ನೀಡಿದ್ದ ವಿವರಣೆ. ಆದರೆ ಇಲ್ಲಿನ ವಾಸ್ತವಾಂಶಗಳು ಬೇರೆಯದಿವೆ. ಭಾರತದ ಕರಾವಳಿಯನ್ನು ಸಮೀಪಿಸುತ್ತಿದ್ದ ಸಂದರ್ಭದಲ್ಲಿ ಆ ವಲಯದಲ್ಲಿ ಕಡಲ್ಗಳ್ಳರ ಹಾವಳಿಯೇನೂ ಇಲ್ಲ ಎಂಬುದು ಅವರಿಗೆ ತಿಳಿದಿದ್ದ ಅಂಶವೇ ಆಗಿತ್ತು. ಗುಂಡು ಹಾರಿಸುವುದರಲ್ಲಿ ವಿಚಿತ್ರ ಖುಷಿ ಅನುಭವಿಸುವ ಇಟಲಿ ನಾವಿಕರ ವಿಕ್ಷಿಪ್ತ ಧೋರಣೆಯನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೇ ಎಚ್ಚರಿಕೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ ನಂತರವಷ್ಟೇ ಮುಂದಿನ ಧಾಳಿ ನಡೆಸುವುದು ಸಮುದ್ರಯಾನದ ಶಿಷ್ಟಾಚಾರವಾಗಿದ್ದು, ಅದರ ಉಲ್ಲಂಘನೆಯಾಗಿದೆ.
ಇಟಲಿ ಸರ್ಕಾರ ಹೇಳಿದ್ದೇನೆಂದರೆ- ಈ ವಿಷಯವಾಗಿ ರಾಜತಾಂತ್ರಿಕ ಮಾರ್ಗದ ಪರಿಹಾರವನ್ನು ಅನ್ವೇಷಿಸುವಂತೆ ಅದು ಭಾರತವನ್ನು ಮನವಿ ಮಾಡಿಕೊಂಡಿತ್ತು. ಆದರೆ ಅದರ ಬೇಡಿಕೆಗೆ ಪುರಸ್ಕಾರ ಸಿಗಲಿಲ್ಲ. ಭಾರತವು ಈ ನಾವಿಕರನ್ನು ವಿಚಾರಣೆಗೆ ಒಳಪಡಿಸುವ ವ್ಯಾಪ್ತಿಯನ್ನು ಹೊಂದಿದೆ ಎಂದು ಸುಪ್ರೀಂಕೋರ್ಟ್ ಜನವರಿಯಲ್ಲಿ ನೀಡಿದ್ದ ರೂಲಿಂಗ್ ಅನ್ನು ಇಟಲಿ ಒಪ್ಪಿಕೊಳ್ಳುತ್ತಿಲ್ಲ. ಏಕೆಂದರೆ ಅದು ಪ್ರತಿಪಾದಿಸುವ ಪ್ರಕಾರ ಶೂಟಿಂಗ್ ಆಗಿದ್ದು ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ. ಹೀಗಾಗಿ ಅದು ವಿವಾದವನ್ನು ಅಂತಾರಾಷ್ಟ್ರೀಯ ನ್ಯಾಯವೇದಿಕೆಗೆ ತೆಗೆದುಕೊಂಡು ಹೋಗುವುದಕ್ಕೆ ಇಷ್ಟಪಡುತ್ತದೆ. 'ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಆಫ್ ದಿ ಲಾ ಆಫ್ ದ ಸೀ'ಯ ಆಧಾರದ ಮೇಲೆಯೇ ಇದರ ವ್ಯಾಖ್ಯಾನ ಆಗಬೇಕು ಎಂಬ ನಿಲುವು ಇಟಲಿಯದ್ದು.
ಆದರೆ ಅದರ ಧೋರಣೆ ಅವಿವೇಕದ್ದು. ಭಾರತದ ಸನಿಹದ ಜಲಪ್ರದೇಶದಲ್ಲಿ ಅಪ್ರಚೋದಿತವಾಗಿ ಧಾಳಿ ನಡೆಸಿದ್ದು ಹಾಗೂ ಅದು ಅಚಾತುರ್ಯ ಎಂಬುದೇ ಆಗಿದ್ದರೆ ಭಾರತದ ಗಾರ್ಡ್ಗಳಿಂದ ಪ್ರಶ್ನೆಗೆ ಒಳಗಾಗುವುದಕ್ಕೂ ಮೊದಲು ಈ ನಾವಿಕರೇಕೆ ಘಟನೆಯ ವಿವರ ತಿಳಿಸುವುದಕ್ಕೆ ಮುಂದಾಗಲಿಲ್ಲ ಎಂಬ ಪ್ರಶ್ನೆ ಇವೆಲ್ಲವೂ ಅವರು ಭಾರತದ ಕಾನೂನಿನ ಮೂಲಕವೇ ವಿಚಾರಣೆಗೆ ಒಳಗಾಗಬೇಕಾದ ಅಗತ್ಯವನ್ನು ಸಾರುತ್ತವೆ.
ಈ ಕೃತ್ಯದಿಂದ ಇಟಲಿಯೇನೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ಕುಗ್ಗಿಸಿಕೊಂಡಿದೆ. ಆದರೆ ಕೆಲ ಅಂಶಗಳ ಬಿಡುವಿಕೆ- ಸೇರಿಸಿಕೊಳ್ಳುವಿಕೆ ಪ್ರಕ್ರಿಯೆಯಲ್ಲಿ ನಿರತವಾದ ಯುಪಿಎ ಸರ್ಕಾರದ ಕಾರ್ಯವೈಖರಿಯೂ ಇಂಥದೊಂದು ಫಲಿತಾಂಶ ಬರುವುದಕ್ಕೆ ಕಾರಣವಾಗಿದೆ ಎಂಬುದನ್ನು ಮರೆಯುವಂತಿಲ್ಲ.ಪ್ರಾರಂಭದಿಂದಲೇ ಈ ವಿದ್ಯಮಾನವು ಕಾನೂನಿನ ವಿಷಯ ಮಾತ್ರ ಆಗದೇ ಜಾಗತಿಕ ರಾಜಕೀಯದ ವಿಷಯವಾಗಲಿದೆ ಎಂಬುದು ಸ್ಪಷ್ಟವಾಗಿತ್ತು. ಕಾನೂನಿನ ಮಾರ್ಗ ಅನುಸರಿಸುವುದಕ್ಕಿಂತ ರಾಜತಾಂತ್ರಿಕ ಮಾರ್ಗಕ್ಕೇ ಬರುವಂತೆ ಇಟಲಿ ಸರ್ಕಾರವು ಭಾರತದ ಮೇಲೆ ಅಗಾಧ ಒತ್ತಡವನ್ನು ಹೇರಿದ್ದಂತೂ ಗುಟ್ಟಿನ ಸಂಗತಿ ಏನಲ್ಲ.
ಆದರೆ ಆ ಒತ್ತಡವನ್ನು ಹಿಂದಕ್ಕೆ ತಳ್ಳಿದಂತೆ ಸರ್ಕಾರವು ಆ ಕ್ಷಣದಲ್ಲಿ ತೋರಿಸಿಕೊಂಡಿತು. ಯುಪಿಎದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಟಲಿ ಮೂಲದವರಾಗಿರುವುದರಿಂದ ಇಟಲಿ ಸರ್ಕಾರದ ಒತ್ತಡಗಳಿಗೆ ತಾವು ಬಾಗುತ್ತಿಲ್ಲವೆಂದು ತೋರಿಸಿಕೊಳ್ಳುವ ದರ್ದು ಯುಪಿಎ ಸರ್ಕಾರಕ್ಕಿತ್ತು.
ಅಲ್ಲದೇ ಕೇರಳದಲ್ಲೂ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಇದ್ದು, ಮೀನುಗಾರರ ಹತ್ಯೆಗೆ ಉಂಟುಮಾಡಿದ ಆಕ್ರೋಶದ ಬಿಸಿ ಅದಕ್ಕೆ ಸ್ವಯಂವೇದ್ಯವಾಗಿತ್ತು. ಇವೆಲ್ಲದರ ನಡುವೆಯೂ ಯುಪಿಎ ಸರ್ಕಾರದ ಆಟಗಳನ್ನು ಮರೆಯುವಂತಿಲ್ಲ. ಏಕೆಂದರೆ ಬೋಫೋರ್ಸ್ ಹಗರಣದ ಪ್ರಮುಖ ರೂವಾರಿಯಾಗಿದ್ದ ಒಟ್ಟಾವಿಯಾ ಕ್ವಟ್ರೋಕಿಯನ್ನು ದೇಶ ತೊರೆದು ಹೋಗುವುದಕ್ಕೆ ಎಲ್ಲ ರೀತಿಯ ಸಹಕಾರಗಳನ್ನೂ ಒದಗಿಸಿದ ಸರ್ಕಾರ ಇದು. ಕ್ವಟ್ರೋಕಿ ಸೋನಿಯಾ ಮತ್ತು ರಾಜೀವ್ ಗಾಂಧಿ ಆಪ್ತ ಬಳಗದಲ್ಲಿದ್ದ ವ್ಯಕ್ತಿ ಎಂಬುದು ಎಲ್ಲರಿಗೂ ತಿಳಿದೇ ಇದೆ.
ಅದೇನೇ ಇರಲಿ, ಇಟಲಿ ನಾವಿಕರ ಪ್ರಕರಣ ನಮ್ಮ ನ್ಯಾಯಾಲಯದ ಎದುರಿಗೆ ಬರುವುದಕ್ಕೂ ಪೂರ್ವದಲ್ಲಿಯೇ ಸರ್ಕಾರ ಈ ಬಗ್ಗೆ ವಿಳಂಬ ಮನಸ್ಥಿತಿಯಲ್ಲಿ ವರ್ತಿಸಿತು. ಜನವರಿ 18ರಂದೇ ಪ್ರಕರಣವನ್ನು ಕೇಂದ್ರಕ್ಕೆ ವಹಿಸಿದ ಸುಪ್ರೀಕೋರ್ಟ್, ವಿಶೇಷ ನ್ಯಾಯಾಲಯ ರೂಪಿಸುವುದಕ್ಕೆ ಶಿಫಾರಸ್ಸು ಮಾಡಿತ್ತು. ಈ ನಿಟ್ಟಿನಲ್ಲಿ ಕಾನೂನಿನ ಸೂಕ್ಷ್ಮ ಆಯಾಮಗಳನ್ನು ಅರ್ಥ ಮಾಡಿಕೊಂಡು ಮುಂದಡಿ ಇಡಬೇಕಿದೆ ಎಂಬ ಕಾರಣ ನೀಡುತ್ತ ಗೃಹ ಸಚಿವಾಲಯ, ಕಾನೂನು ಸಚಿವಾಲಯ ಹಾಗೂ ವಿದೇಶ ವ್ಯವಹಾರ ಸಚಿವಾಲಯಗಳು ಕಾಲ ಕಳೆದವು. ಫೆಬ್ರುವರಿ ಕೊನೆ ಬಂದರೂ ನಮ್ಮ ಕಾನೂನು ಸಚಿವಾಲಯವು ನಾವಿಕರಿಗೆ ಇಟಲಿ ಭೇಟಿಗೆ ಅಗತ್ಯ ದಾಖಲೆಗಳನ್ನು ತಯಾರು ಮಾಡುವುದರಲ್ಲಿ ಆಸಕ್ತಿ ವಹಿಸಿತೇ ಹೊರತು ಸುಪ್ರೀಂಕೋರ್ಟ್ ಆದೇಶ ಪಾಲನೆ ನಿಟ್ಟಿನಲ್ಲಿ ಅಲ್ಲ.
ಆಗಲೇ ಎರಡು ರಾಷ್ಟ್ರಗಳ ನಡುವೆ ನೇಪಥ್ಯದಲ್ಲಿ ಏನಾದರೂ ಒಪ್ಪಂದಗಳಾಗಿದ್ದಿರಬಹುದು ಎಂಬ ಅನುಮಾನ ಹೊಗೆಯಾಡಿದ್ದು. ಅದರಲ್ಲೂ ಆಗಸ್ಟಾ ವೆಸ್ಟ್ಲ್ಯಾಂಡ್ ಒಪ್ಪಂದಕ್ಕೆ ಸಂಬಂಧಿಸಿ ಇಟಲಿಯಲ್ಲಿ ಶುರುವಾದ ವಿಚಾರಣೆ ವೇಳೆಗೆ ಭಾರತದ ಸೇನಾಪಡೆಯ ಅಧಿಕಾರಿಗಳೂ ಸೇರಿದಂತೆ ಹಲವು ರಾಜಕಾರಣಿಗಳು ಮಧ್ಯವರ್ತಿಯಾಗಿ ಹಣ ನುಂಗಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂತು. ಅದು 'ನೀ ನನಗಿದ್ದರೆ ನಾ ನಿನಗೆ' ಎಂಬರ್ಥದ ನೇಪಥ್ಯದ ಒಪ್ಪಂದಕ್ಕೆ ಕಾರಣವಾಗಿರಬಹುದೇ ಎಂಬ ಅನುಮಾನವನ್ನು ದಟ್ಟವಾಗಿಸಿದೆ. ಆಗಸ್ಟಾ ವೆಸ್ಟ್ಲ್ಯಾಂಡ್ ಹಗರಣದ ತನಿಖೆ ಇನ್ನೂ ಆಳಕ್ಕೆ ಇಳಿಯುತ್ತಾ ಹೋಗುವುದು ಭಾರತದಲ್ಲಿ ಸರ್ಕಾರ ನಡೆಸುತ್ತಿರುವವರಿಗೆ ಬೇಕಿಲ್ಲ. ಇಟಲಿ ನಾವಿಕರ ವಿಷಯದಲ್ಲಿ ಉದಾರವಾಗಿ ನಡೆದುಕೊಳ್ಳುವ ಮೂಲಕ ಆಗಸ್ಟಾ ತನಿಖೆಯಲ್ಲಿ ಇಟಲಿ ಸರ್ಕಾರದ ವಿಶ್ವಾಸವನ್ನು ತನ್ನದಾಗಿಸಿಕೊಳ್ಳುವತ್ತ ಪ್ರಭಾವಿಗಳು ಕೆಲಸ ಮಾಡಿರಬಹುದಲ್ಲವೇ?
ಈ ಹಂತದಲ್ಲಿ ಇದು ಕೇವಲ ಸಂಚಿನ ಆಯಾಮವಷ್ಟೇ. ಆದರೆ ಇಟಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಈ ನಿಟ್ಟಿನಲ್ಲಿ ಅನುಮಾನಗಳು ಗಟ್ಟಿಯಾಗುವಂತೆ ಮಾಡುತ್ತಿದೆ. ಈ ಹಂತದಲ್ಲಿ ಭಾರತದ ನಿರಂತರ ಗಡಸು ಪ್ರತಿಕ್ರಿಯೆಯೇ ಈ ಎಲ್ಲ ಅನುಮಾನಗಳನ್ನು ಹೋಗಲಾಡಿಸುವುದಕ್ಕೆ ದಾರಿಯಾಗಬಲ್ಲದು. ಇಟಲಿಯೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟು ಸಂಭವಿಸಿದರೂ ಪರವಾಗಿಲ್ಲ ಎಂಬಷ್ಟರಮಟ್ಟಿಗಿನ ಮೊನಚು ಪ್ರತಿಕ್ರಿಯೆ ವ್ಯಕ್ತವಾದಾಗ ಮಾತ್ರ ನಾವಿಕರ ಪ್ರಕರಣ ಹಾಗೂ ಆಗಸ್ಟಾ ಹಗರಣದ ನಡುವೆ ಕೊಂಡಿ ಇಲ್ಲ ಹಾಗೂ ಈ ನಿಟ್ಟಿನಲ್ಲಿ ಯಾವುದೇ ರಾಜಕೀಯ ಡೀಲ್ಗಳು ಆಗಿಲ್ಲ ಎಂದು ನಂಬಬಹುದಷ್ಟೆ.
- ವೆಂಕಿ ವೆಂಬು
ಅಂಕಣಕಾರ