ಅಂಕಣಗಳು

ಸೋತವರದ್ದೇ ಬಹುಮತ, ನಮಗಿಲ್ಲವೇ ಹೊಸಪಥ?

ಚುನಾವಣೆಗಳಿಗೂ ಉದ್ಭವವಾಗಿರುವ ಈ ಪ್ರಶ್ನೆಗೂ ಸಂಬಂಧವೇನಿಲ್ಲ.

ಸೋತವರೇನು ಮಾಡಬೇಕು? ಅವರ ಪಾಲಿಗೆ ಏನಿದೆ?
ಈ ಪ್ರಶ್ನೆ ಬಹಳವಾಗಿ ಕಾಡುತ್ತಿದೆ. ಬರುತ್ತಿರುವ ಚುನಾವಣೆಗಳಿಗೂ ಉದ್ಭವವಾಗಿರುವ ಈ ಪ್ರಶ್ನೆಗೂ ಸಂಬಂಧವೇನಿಲ್ಲ. ಆದರೆ ಮುಕ್ತಾಯವಾಗುತ್ತಿರುವ ಪಿಯುಸಿ ಹಾಗೂ ಶುರುವಾಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಗಾಬರಿ- ಗದ್ದಲಗಳನ್ನೆಲ್ಲ ನೋಡಿದಾಗ ಮೇಲಿನ ಪ್ರಶ್ನೆ ಬೆನ್ನುಬಿದ್ದು ಹೆದರಿಸುತ್ತದೆ, ಉತ್ತರಗಳಿಗಾಗಿ ತಡಕಾಡುವಂತೆ ಮಾಡುತ್ತದೆ.
ಇದು ಗೆದ್ದವರ ಮೇಲಿನ ಈರ್ಷ್ಯೆಯಂತೂ ಖಂಡಿತ ಅಲ್ಲ. ನಾಳೆ ನೂರರ ಆಸುಪಾಸು ಅಂಕಗಳನ್ನು ತೆಗೆದು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವವರಿಗೆಲ್ಲ ಪ್ರತಿವರ್ಷದಂತೆ ಈ ವರ್ಷವೂ ನಮ್ಮ ಭರ್ಜರಿ ವ್ಹಾವ್ ವ್ಹಾವ್‌ಗಳೂ ಚಪ್ಪಾಳೆಗಳೂ ಸಂದಾಯವಾಗಲೇಬೇಕು. ಉಳಿದವರೆಲ್ಲ ಎಂಥೆಂಥದೋ ಝಗಮಗಗಳಲ್ಲಿ ಸಮಯ ತೇಯುತ್ತಿದ್ದಾಗ ಇವರೆಲ್ಲ ತಡರಾತ್ರಿಗಳಲ್ಲಿ ಕಣ್ಣುಬ್ಬಿಸಿಕೊಂಡು ಓದಿದ್ದಾರೆ. ಬೆಳಗಿನ ಸವಿನಿದ್ದೆಯನ್ನು ತ್ಯಾಗಮಾಡಿ ಹೆಚ್ಚುವರಿ ತರಗತಿಗಳಿಗೆ ಹೋಗಿ ಕುಳಿತವರಿವರು. ಅವರ ಶ್ರಮಕ್ಕೆ ಎಲ್ಲರ ಮೆಚ್ಚುಗೆಗೂ ಪಾತ್ರವಾಗುವ ಅರ್ಹತೆ ಇದೆ.
ಆದರೆ ಗೆಲುವಿನ ಗೆರೆಯ ನಜದೀಕಿನಲ್ಲಿ ಮುಗ್ಗರಿಸುವ ಮಿತ್ರರ ಸಂಖ್ಯೆ ದೊಡ್ಡದಿದೆ. ಹಾಗಾದರೆ ಅವರೆಲ್ಲ ಪ್ರತಿಭಾರಹಿತರೇ? 'ಏನ್ ಮಾಡೋಕಾಗುತ್ತೆ, ಮುಂಡೇವಕ್ಕೆ ತೆಪ್ಪಗೆ ಕುಳಿತು ಓದೋಕೇನಾಗಿತ್ತು ಧಾಡಿ' ಎಂಬ ಒಂದೇ ವಾಕ್ಯದಲ್ಲಿ ಅವರೆಲ್ಲರನ್ನು ನಿವಾಳಿಸಿ ಒಗೆಯಬೇಕೇ? ಫೇಲ್ ಆದವರಿಗೆ ಸಿಂಪಥಿ ದಕ್ಕುವ ಕಾಲ ಎಂದೋ ಮುಗಿದುಹೋಯಿತು. ಅವರನ್ನು ಪಕ್ಕಕ್ಕೆ ಇಟ್ಟೇ ಮಾತಾಡುವುದಾದರೂ ಎಂಬತ್ತೈದು-ತೊಂಬತ್ತರ ಗಡಿಭಾಗಗಳಿಗೆ ಬರಲಾಗದ ಎಲ್ಲರ ಮೇಲೂ ಕಡುಮೌನದಲ್ಲಿ ಅವಹೇಳನದ ಕತ್ತಿಯೊಂದು ತೂಗಾಡತೊಡಗುತ್ತದೆ. ಇವುಗಳ ಆಂತರ್ಯ ಬಗೆಯುತ್ತ ಹೋದಂತೆಲ್ಲ ಆತಂಕವೇ ಹೆಚ್ಚಾಗುತ್ತದೆ. ಕಡಿಮೆ ಅಂಕ ಗಳಿಸಿದವರದ್ದು ಅವರ ಕರ್ಮ ಎಂದು ಮುಂದೆ ಸಾಗುವಂತಿಲ್ಲ. ಈಗೊಂದು ಹತ್ತು-ಹನ್ನೆರಡು ವರ್ಷಗಳ ಹಿಂದಿನ ಸ್ಥಿತಿ ನೆನಪಿಸಿಕೊಂಡರೆ 'ಡಿಸ್ಟಿಂಕ್ಷನ್‌' ಎಂಬ ಪದಗುಚ್ಛವೊಂದು ಜಾರಿಯಲ್ಲಿತ್ತು. ಶೇಕಡ 85ರ ಗೆರೆ ಮುಟ್ಟಿದವ ಆ ಕಾಲಘಟ್ಟಕ್ಕೆ ಪ್ರತಿಭಾವಂತ. ತೊಂಬತ್ತು- ತೊಂಬತ್ತೆರಡು ಅಂತೆಲ್ಲಾ ಅಂಕಗಳನ್ನು ತೆಗೆದುಕೊಂಡವರು ಎಲ್ಲರ ಪಾಲಿನ ಅಚ್ಚರಿಗಳು. ಗುಂಪಿನಲ್ಲಿ ಎಣಿಸಲಾಗುವಂತೆ ಕಾಣಸಿಗುವವರಾಗಿದ್ದರು. ಅಲ್ಲಿಂದ ವರ್ಷದಿಂದ ವರ್ಷಕ್ಕೆ ಅಂಕ ಗಳಿಕೆಯ ತುರುಸು ಹೆಚ್ಚಾಗುತ್ತ ಸಾಗಿತು. ಅಂಕ ಗಳಿಸಬೇಕಾದ ಒತ್ತಡ ಇನ್ನಿಲ್ಲದಂತೆ ಹೆಗಲೇರಿ, ತೊಂಬತ್ತಕ್ಕಿಂತ ಕಡಿಮೆ ಅಂಕ ತೆಗೆದವನ ಅಸ್ತಿತ್ವವೇ ಪ್ರಶ್ನಾರ್ಹ ಎಂಬಮಟ್ಟಿಗೆ ಬಂದು ನಿಂತಿದೆ. ಗಮನಿಸಿ ಬೇಕಾದರೆ, ಈಗ ಎಸ್ಸೆಸ್ಸೆಲ್ಸಿಯಲ್ಲಿ ಅರವತ್ತು ಶೇಕಡ ತೆಗೆದುಕೊಂಡವನಿಗೂ ನಪಾಸಾದವನಿಗೂ ಅಂಥ ವ್ಯತ್ಯಾಸವೇನಿಲ್ಲ ಎಂಬ ಪರಿಸ್ಥಿತಿ ಇದೆ. ಮತ್ತೆ ಅದು ಅವರ ಅಸಾಮರ್ಥ್ಯ ಎಂದೇ ಉಪಸಂಹಾರ ಹಾಡುವುದಕ್ಕೆ ಮೊದಲು ಹೀಗೆ ಯೋಚಿಸೋಣ. ಈ ಅರವತ್ತು- ಎಪ್ಪತ್ತು ವಿಭಾಗದಲ್ಲಿರುವ ಒಂದು ಬಹುದೊಡ್ಡ ಗುಂಪನ್ನು, 'ನೀವು ಸರಿಯಾಗಿ ಓದದೇ ಇರುವುದು ನಿಮ್ಮ ತಪ್ಪು' ಅಂತಲೇ ಹೇಳಿ ಮತ್ತಷ್ಟು ಪ್ರಖರ ಓದಿಗೆ ಹಚ್ಚಿಸಿ ಅವರೆಲ್ಲರನ್ನೂ ತೊಂಬತ್ತಕ್ಕೆ ತಂದು ನಿಲ್ಲಿಸಿದರೆ ಏನಾದೀತು? ಹಿಂದಿನ 'ಡಿಸ್ಟಿಂಕ್ಷನ್‌' ಎಂಬ ಪದಪುಂಜ ಸವಕಲಾದ ಕತೆಯೇ ಇಲ್ಲೂ ಆದೀತು ಎಂಬುದು ಬಿಟ್ಟರೆ ಇನ್ನೂ ಹೆಚ್ಚಿನ ಸಾಧ್ಯತೆಗಳೇನೂ ಗೋಚರಿಸುತ್ತಿಲ್ಲ. ಅಂದರೆ, ತೊಂಬತ್ತೈದರ ಫಸಲು ಇನ್ನಷ್ಟು ಮಂದಿ ತೆಗೆದರೆ ಆ ಮಟ್ಟ ತನ್ನ ಹೊಳಪನ್ನು ಕಳೆದುಕೊಳ್ಳಬಹುದಾಗಲೀ ಆ ಮಟ್ಟವನ್ನು ಮುಟ್ಟಿದ ಇನ್ನಷ್ಟು ಮತ್ತಷ್ಟು ಮಂದಿಯ ಭವಿಷ್ಯವೇನೂ ತೀರ ಥಳಥಳ ಅನ್ನಿಸುವಂಥ ಸನ್ನಿವೇಶ ಇದ್ದಂತಿಲ್ಲ. ಈ ಎಲ್ಲ ಗೊಂದಲಗಳ ನಡುವೆ ಶಿಕ್ಷಣ ವಲಯದ ಉದ್ಯಮಗಳಿಗೆ ಒಂದಿಷ್ಟು ಕಾಸು ಆಗಬಹುದಷ್ಟೆ.
ತುಂಬ ಮೆರಗು- ಗ್ಲಾಮರ್‌ಗಳನ್ನು ತನ್ನೊಂದಿಗೆ ಅಂಟಿಸಿಕೊಂಡಿರುವ ಯಶಸ್ಸು ಎಂಬ ಪದಕ್ಕೆ ಇರುವಷ್ಟೇ ಕಸುವನ್ನು ಪ್ರಯತ್ನ, ಕೌಶಲ ಹಾಗೂ ಸಾರ್ಥಕ್ಯ ಎಂಬ ಪದಗಳಿಗೂ ತುಂಬುವುದು ಸಾಧ್ಯವಾದರೆ ಗತಿ ಸ್ವಲ್ಪ ಸುಧಾರಿಸೀತು. ಪ್ರಯತ್ನವನ್ನು ಗೌರವಿಸಬೇಕು ಎಂಬ ಮಾತುಗಳನ್ನು ಆಗಾಗ ಕೇಳುತ್ತಿರುತ್ತೇವಾಗಲೀ ಉಳಿದೆರಡರ ಪ್ರಸ್ತಾಪ ಅಪರೂಪ. ಅಂಕ ಗಳಿಕೆಯಲ್ಲಿ ಹಿಂದೆ ಬಿದ್ದವನಿಗೆ ಶಾಲೆಯಲ್ಲಿ ಪರೀಕ್ಷೆಗೆ ಒಳಗಾಗದ ಇನ್ಯಾವುದೋ ಕೌಶಲವಿದ್ದಿರಬಹುದು. ಆತ ತನ್ನಲ್ಲಿರುವ ಲಡಕಾಸಿ ಕ್ಯಾಮರಾದಲ್ಲಿಯೇ ಅದ್ಭುತ ಆ್ಯಂಗಲ್‌ಗಳನ್ನು ಮೂಡಿಸಬಲ್ಲ, ಆಕೆ ತುಂಬ ತಾರ್ಕಿಕವಾಗಿ ವಾದವೊಂದನ್ನು ಕಟ್ಟಬಲ್ಲಳು, ಇನ್ನೊಬ್ಬ ಹಾಳಾದ ಹತ್ತು ವಸ್ತುಗಳನ್ನು ಗುಡ್ಡೆ ಸುರುವಿಕೊಂಡು ಅವುಗಳ ಯಾವ್ಯಾವುದೋ ಪಾರ್ಟುಗಳನ್ನು ಕಿತ್ತು- ಜೋಡಿಸಿ ಹೊಸದೇನೋ ವಿನ್ಯಾಸವೊಂದನ್ನು ಮಾಡಿ ಸಂಭ್ರಮಿಸುವವ. ಇಂಥ ಪ್ರಯತ್ನಗಳಿಗೆಲ್ಲ ನೀರು- ಗೊಬ್ಬರ ಸಿಕ್ಕಿ, ಅಂಥ ಆಸಕ್ತಿಗಳನ್ನು ವೃತ್ತಿಯಾಗಿಸುವ ಶಾಸ್ತ್ರೀಯ ಶಿಕ್ಷಣ ಕ್ರಮವೊಂದಕ್ಕೆ ಜೋಡಿಸಿದರೆ ಯಶಸ್ಸಿನ ಏನೆಲ್ಲ ಸಾಧ್ಯತೆಗಳಿವೆ. ಕ್ಯಾಮರಾದಲ್ಲಿ ಕಣ್ಣು ಕೀಲಿಸಿ ಏನನ್ನೋ ಹುಡುಕುತ್ತಿರುವವ ದೃಶ್ಯಕಾವ್ಯವೊಂದನ್ನು ಕಡೆದು ನಿಲ್ಲಿಸಿ ಆಸ್ಕರ್ ಹೊಸ್ತಿಲಿಗೆ ಹೋದಾನು. ತರ್ಕಗಳ ತಿರುಗಣಿಯಲ್ಲಿ ತಿರುಗುತ್ತಿರುವವಳು ದೇಶವೇ ನಿಬ್ಬೆರಗಾಗುವ ನ್ಯಾಯವಾದಿ ಆದಾಳು. ಓದೋದು ಬಿಟ್ಟು ಕೆಲಸಕ್ಕೆ ಬಾರದ್ದು ರಿಪೇರಿ ಮಾಡಿಕೊಂಡಿದ್ದಾನೆ ಎಂಬ ಬೈಗುಳಕ್ಕೆ ಪಾತ್ರನಾದವನೇ ನಮ್ಮ ಬದುಕು ಸುಸೂತ್ರವಾಗಿಸುವ ಯಾವುದೋ ಚಿಕ್ಕ ಸಾಧನದ ರೂವಾರಿ ಆದಾನು. ಈಗ ಈ ಲಹರಿಗಳಿಗೆ ಬಿಡುವುಕೊಟ್ಟು ಸಣ್ಣದೊಂದು ಪ್ರಸಂಗ.
----
ಬಹಳ ವರ್ಷಗಳ ಹಿಂದೆ ಒಂದೂರಿನಲ್ಲಿ ಇಬ್ಬರು ಅಕ್ಕಪಕ್ಕದ ಮನೆಗಳ ಸ್ನೇಹಿತರಿದ್ದರು. ಕೃಷ್ಣ ಮತ್ತು ಗೋಪಾಲ ಎಂದಿಟ್ಟುಕೊಳ್ಳೋಣ. ಅವರು ಒಟ್ಟಿಗೇ ಶಾಲೆಗೆ ಹೋದರು, ಒಟ್ಟಾಗಿ ಆಡಿದರು, ಪರಸ್ಪರ ಹೊಡೆದಾಡಿದರು, ಮತ್ತೆ ಒಂದಾದರು. ಇವೆಲ್ಲದರ ನಡುವಿನ ಒಂದು ವ್ಯತ್ಯಾಸವೆಂದರೆ ಕೃಷ್ಣ ಅಂಕ ಗಳಿಕೆಯಲ್ಲಿ ಜೋರಿದ್ದ, ಗೋಪಾಲ ಸ್ವಲ್ಪ ಮಂಕು. ಹಾಗೆಂದು ಫೇಲಾದವನೇನಲ್ಲ, ಫಸ್ಟ್‌ಕ್ಲಾಸ್‌ಗೆ ಮೋಸವಿಲ್ಲದೇ ಡಿಸ್ಟಿಂಕ್ಶನ್‌ನ ಬಾಗಿಲನ್ನು ಯಾವತ್ತೂ ಬಡಿಯದೇ ಸಾಗಿದವನು. ಶಾಲೆಬಿಟ್ಟು ಮರಳಿದಾಗೆಲ್ಲ ಕೃಷ್ಣನಿಗೆ ಓದಿನ ಮೇಜು ಸ್ವಾಗತಿಸುತ್ತಿತ್ತು. ಗೋಪಾಲನಿಗೆ ಮನೆಯಲ್ಲಿ ಬೇಡದ ಸಾಮಾನುಗಳನ್ನು ಬೀಸಾಡಿದ ಅಟ್ಟ ಹಾಗೂ ಚಿಕ್ಕ ಪುಟ್ಟ ಗುಜರಿ ಅಂಗಡಿಗಳೆಲ್ಲ ಕೈಬೀಸಿ ಹಾಯೆನ್ನುತ್ತಿದ್ದವು.
ಇಲ್ಲದ್ದಕ್ಕೆಲ್ಲ ತಲೆ ಖರ್ಚು ಮಾಡಿಕೊಂಡಿರಬೇಡ, ಕೃಷ್ಣನ ನೋಡಿ ಕಲಿತುಕೋ ಎಂಬ ಹಿತವಚನಗಳ ನಡುವೆಯೇ ಕಾಲ ಓಡಿತು. ಇಬ್ಬರ ಪಥ ಬೇರೆಯಾಯಿತು. ತುಂಬ ಒಳ್ಳೆಯ ಕಂಪನಿಯಲ್ಲಿ ಕೆಲಸ ಹಿಡಿದ ಕೃಷ್ಣ ಶಹರದಲ್ಲಿ ಕೆಲವರ್ಷ ನೆಲೆಸಿ ನಂತರ ಅಮೆರಿಕಕ್ಕೆ ಹೋದ. ಗೋಪಾಲ ಕೃಷಿಯೊಂದಿಗೆ ಚಿಕ್ಕಪುಟ್ಟ ರಿಪೇರಿ ಕೆಲಸಗಳನ್ನೆಲ್ಲ ಮಾಡಿಕೊಂಡು ಇಲ್ಲೇ ಇದ್ದ. ಕೃಷ್ಣ ಅಮೆರಿಕಕ್ಕೆ ತೆರಳುವುದಕ್ಕೂ ಮುಂಚೆ ಶಹರದಲ್ಲಿ ಇರುವಷ್ಟು ವರ್ಷ ಆಗೀಗ ಹಳ್ಳಿಗೆ ಬರುತ್ತಿದ್ದ. ಆತ ಬಂದಾಗಲೆಲ್ಲ, 'ನೀನೂ ಅವನಂತಾಗಬಹುದಿತ್ತಲ್ಲ' ಎಂಬ ಕಣ್ಣನೋಟಗಳು ಗೋಪಾಲನಿಗೆ ಎದುರಾಗುತ್ತಿದ್ದವು. ಅಮೆರಿಕಕ್ಕೆ ಹೋದ ನಂತರ ಕೃಷ್ಣ ಬರುವುದು ನಿಂತುಹೋಯಿತು. ನಿಧಾನವಾಗಿ ಆತ ಯಾವತ್ತಿನದೋ ನೆನಪಾಗಿಹೋದ. ಕಾಲ ಮಾಗುತ್ತಿದ್ದಂತೆ ಗೋಪಾಲನತ್ತ ಎಲ್ಲರ ಸಾರ್ಥಕ ದೃಷ್ಟಿಗಳು ಸಂದಾಯವಾದವು. ಏಕೆ ನೀನು ಕಲಿತು ದೂರಹೋಗಲಿಲ್ಲ ಎಂದವರು ಹತ್ತಿರವೇ ಇರುವುದಕ್ಕೆ ಕೃತಜ್ಞತೆ ತೋರಿಸತೊಡಗಿದರು. ಆತ ಊರವರ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಕೊಡುತ್ತಿದ್ದ. ಓದಿನಲ್ಲಿ ಹಿಂದೆ ಉಳಿದ ಮಕ್ಕಳಿಗೆ ತಾಸು- ಅರ್ಧತಾಸು ಪಾಠ ಹೇಳಿಕೊಡುತ್ತಿದ್ದ. ತನ್ನ ಗುಜರಿ ಜ್ಞಾನವನ್ನುಪಯೋಗಿಸಿ ಮರ ಹತ್ತುವುದನ್ನು ಸುಲಭವಾಗಿಸುವ, ಹಲ ಬೆಳೆಗಳ ಕೊಯ್ಲು ಸುಧಾರಿಸುವ ಒಂದೆರಡು ಸಾಧನಗಳನ್ನೂ ಊರವರ ಉಪಯೋಗಕ್ಕೆ ದಕ್ಕುವಂತೆ ಮಾಡಿದ. ಹೀಗೆಯೇ ಹಳ್ಳಿಯ ಹತ್ತು ಸಮಸ್ತರು ಮಾತಿಗೆ ಕುಳಿತಿದ್ದಾಗ ಊರ ಹಿರಿ ಮನುಷ್ಯನೊಬ್ಬ ಹೇಳಿದ್ದ- 'ನಮ್ಮ ಹಳ್ಳಿ ಸುತ್ತಮುತ್ತಲಿನಿಂದ ಅವೆಷ್ಟೋ ಎಂಜಿನಿಯರುಗಳು ಆಗಿ ಪೇಟೆ-ಪಟ್ಟಣಕ್ಕೆ ರವಾನೆಯಾದರು. ಅವರ ಸಾಧನೆಯನ್ನು ಊರ ಸಾಧನೆ ಎಂದು ನಾವೂ ಸಂಭ್ರಮ ಪಟ್ವಿ. ಪತ್ರಿಕೆಗಳಲೆಲ್ಲ ಅವರ ಫೋಟೊ ಬಂತು. ಅವರ ಬದುಕಲ್ಲೂ ಹಣ-ಭಾಗ್ಯ ಬಂತು. ಆದರೆ ಅವರ್ಯಾರೂ ತಾವು ಕಲಿತ ವಿದ್ಯೆಯಿಂದ ನಮ್ಮ ಬಾಳು ಸುಸೂತ್ರವಾಗುವ ಯಾವ ಕೆಲಸಾನೂ ಮಾಡಿದ್ದಿಲ್ಲ ನೋಡ್ರಪಾ. ಆದ್ರೆ ನಮ್ ಗೋಪಾಲ ಆ ಕೆಲ್ಸ ಮಾಡಿದ. ಅಕ್ಷರ ಕಲಿತವರು ನಮ್ ಸಮಾಜದ ಬದುಕು ಸುಸೂತ್ರ ಆಗೋ ಕೆಲ್ಸ ಚಿಕ್ಕಮಟ್ಟದೇ ಮಾಡಿದ್ರೂ ಅದೇ ನಿಜವಾದ್ ಕಾಮ್‌ಯಾಬಿ...' ಆ ಅಜ್ಜನ ಮಾತುಗಳೇ ಗೋಪಾಲನಿಗೆ ಅತಿದೊಡ್ಡ ಪ್ರಶಸ್ತಿ- ಪದವಿ ಎಲ್ಲವೂ.
ತೀರ ಇತ್ತೀಚಿನ ಅಪ್‌ಡೇಟ್ ಎಂದರೆ ಕೃಷ್ಣ ಮತ್ತೆ ಸ್ವದೇಶಕ್ಕೆ ಬಂದಿದ್ದಾನೆ. ಬೆಂಗಳೂರಿಗೆ ತಾಗಿಕೊಂಡ ಬಹುದೊಡ್ಡ ಗೇಟೆಡ್ ಕಮ್ಯುನಿಟಿಯೊಂದರಲ್ಲಿ ವಾಸ. ಅದಕ್ಕಾಗಿ ಹಲವು ಕೋಟಿ ರುಪಾಯಿಗಳನ್ನು ತೆಗೆದಿರಿಸಿದ್ದಾನೆ. ಮರಗಳು, ಲಾನ್, ಸ್ವಿಮ್ಮಿಂಗ್‌ಪೂಲ್ ಎಲ್ಲವನ್ನೂ ಹೊಂದಿರುವ ಆ ವಾಸಸ್ಥಾನ ಅಷ್ಟು ತೆರುವುದಕ್ಕೆ ವರ್ಥ್ ಎನ್ನುತ್ತಿದ್ದಾರೆ ಎಲ್ಲರೂ. ಗೋಪಾಲನೂ ಸಂಸಾರದೊಂದಿಗನಾಗಿ ಚಿಕ್ಕದೊಂದು ತೋಟದ ಮನೆ ಕಟ್ಟಿಸಿದ್ದಾನೆ. ಬೇಲಿ ಹಾಕದ ಬೆಟ್ಟ, ಯಾರೂ ಈಜಬಹುದಾದ ಕೆರೆ ಎಲ್ಲವೂ ಊರಲ್ಲಿ ಮೊದಲಿನಿಂದ ಇವೆ.
----
ದೂಸ್ರಾ ಮಾತೇ ಇಲ್ಲ, ನಮ್ಮ ಸಮಾಜಕ್ಕೆ 'ಸಕ್ಸಸ್‌ಫುಲ್‌' ವ್ಯಕ್ತಿಗಳು ಬೇಕು. ತೊಂಬತ್ತಂಕಗಳ ಮಾನದಂಡವನ್ನು ಜಿಗಿಯುವುದು ಕಡಿಮೆ ಸಾಹಸದ ಮಾತೇನಲ್ಲ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತಲೇ ಸೋತವರ ಪ್ರಯತ್ನ ಕೌಶಲಗಳಿಗೆ ಪ್ರೋತ್ಸಾಹ ಕೊಟ್ಟಾಗ ಮಾತ್ರ ಸಮಾಜ ಶಾಂತವಾಗುತ್ತದೆ. ಇಲ್ಲವಾದರೆ ಇಡೀ ಸಮಾಜ ಹತಾಶವಾಗುತ್ತದೆ. ಏಕೆಂದರೆ ಯಾರೆಷ್ಟೇ ಪಲ್ಟಿ ಹೊಡೆದರೂ ಸೋಲುವವರದ್ದೇ ಇಲ್ಲಿ ಬಹುಮತ. ತಾವು ಯಶಸ್ಸಿನ ಫ್ಯಾಕ್ಟರಿಗಳು ಎಂಬ ಸೋಗಿನಲ್ಲಿರುವ ಹೆಚ್ಚಿನ ಶಿಕ್ಷಣ ಸಂಸ್ಥೆಗಳೆಲ್ಲದರ ವರಸೆ ಗಮನಿಸಿ. ಇವು ಆ ಹಿಂದಿನ ಕ್ಲಾಸಿನಲ್ಲಿ ಶೇಕಡ 95 ಅಂಕ ಗಳಿಸಿದ ವಿದ್ಯಾರ್ಥಿಗಳನ್ನಷ್ಟೇ ಕೋರ್ಸಿಗೆ ಸೇರಿಸಿಕೊಂಡು ಮುಂದಿನ ವರ್ಷದಲ್ಲಿ ತಮ್ಮ ಸಂಸ್ಥೆಯದು 90 ಪರ್ಸೆಂಟ್ ಎಂದು ಕಾಲರ್ ಜಗ್ಗಿಕೊಳ್ಳುತ್ತವೆ. ಇದು ಹೇಗೆ ಯಶಸ್ಸು ಎನಿಸಿಕೊಳ್ಳುತ್ತದೆ? ವಾಸ್ತವವಾಗಿ ಅವರು ಇಳಿಕೆಯಾದ ಐದು ಪರ್ಸೆಂಟ್‌ಗೆ ಕಾರಣ ಕೊಡಬೇಕು. ಅರವತ್ತು ಅಂಕ ಬಿದ್ದವನನ್ನು ಸೇರಿಸಿಕೊಂಡು ಅವನನ್ನು ಎಂಬತ್ತು ಅಂಕಗಳಿಗೆ ತೆಗೆದುಕೊಂಡು ಹೋಗುವುದು ಯಶಸ್ಸು. ಆದರೆ ಈಗ ಆ ಮಾದರಿಗೂ ಮರ್ಯಾದೆಯಿಲ್ಲ, ಎಂಬತ್ತಕ್ಕೂ ಖುಷಿಯಿಲ್ಲ.
ಮಂಗಳನ ಅಂಗಳದಲ್ಲಿ ನೀರು ಹುಡುಕುವ ನೌಕೆಯ ಬಿಡಿಭಾಗ ತಯಾರಿಕೆಯಲ್ಲಿ ತೊಡಗಿಕೊಂಡ ತಂತ್ರಜ್ಞ ಎಷ್ಟು ಮುಖ್ಯನೋ, ಊರಲ್ಲಿ ಹೂಳು ತುಂಬಿ ನಿಂತಿರುವ ಕೆರೆ ಸರಿ ಮಾಡಿಸುತ್ತೇವೆಂದು ಪ್ರಯತ್ನಕ್ಕೆ ಮುಂದಾಗುವ ಯುವಕರ ಗುಂಪೂ ಅಷ್ಟೇ ಮುಖ್ಯ. ಇವರೆಲ್ಲ ಅರವತ್ತಂಕಕ್ಕೇ ಉಸ್ಸೆಂದು ಊರಲ್ಲಿ ಉಳಿದವರಾಗಿದ್ದಿರಬಹುದು. ಆದರೆ ಅವರ ಕೌಶಲಗಳನ್ನೂ ಉಮೇದನ್ನೂ ಗೌರವಿಸೋಣ. ವೈದ್ಯ- ಎಂಜಿನಿಯರ್‌ಗಳಿಗೆ ಸಿಗುವ ಗೌರವ ಇವರಿಗೂ ಸಿಗಲಿ. ಇವರ ಮದುವೆಗೆ ವಧು/ವರ ಸಿಗಲಿ. ಸಮಾಜಕ್ಕೆ ಯಾವತ್ತೂ ನೆನಪಿರಬೇಕಾದ ಮಾತು: ಸೋತವರದ್ದೇ ಬಹುಮತ!

-ಚೈತನ್ಯ ಹೆಗಡೆ
cchegde@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!