ನಾಳೆ ಮೇ 5, ಕರ್ನಾಟಕದ ಜನತೆ ಕಾತರದಿಂದ ಎದುರು ನೋಡುತ್ತಿರುವ ದಿನ. ಈ ದಿನ ಅವರ ಬಲವನ್ನು ಸಾಬೀತುಗೊಳಿಸುವುದಕ್ಕೆ ಅವಕಾಶವನ್ನು ಒದಗಿಸಲಿದೆ. ಅದು ಅವರ ಶಾಸಕರನ್ನು ಆರಿಸಿಕೊಳ್ಳುವ ದಿನ. ತಮ್ಮ ಕ್ಷೇತ್ರವನ್ನು ಉತ್ತಮ ರೀತಿಯಲ್ಲಿ ಕಾಳಜಿ ಮಾಡುವ ಸಾಮರ್ಥ್ಯ ಯಾರಿಗಿದೆ ಎಂದು ನಿರ್ಧರಿಸುವ ದಿನ. ಯಾವ ಪಕ್ಷ ಸ್ಥಿರ ಸರ್ಕಾರ ಹಾಗೂ ಉತ್ತಮ ಆಡಳಿತ ನೀಡಬಲ್ಲುದು ಎಂಬುದನ್ನು ನಿರ್ಧರಿಸುವ ದಿನ ಅವತ್ತು. ಆ ದಿನ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು. ಅದಿಲ್ಲದಿದ್ದರೆ ಇನ್ನು ಐದು ವರ್ಷಗಳ ನಂತರವೇ ಅವಕಾಶ ಸಿಗುವುದಷ್ಟೆ.
ಈಗ ಎಲ್ಲರ ಕಣ್ಣು ನೆಟ್ಟಿರುವುದು ಬೆಂಗಳೂರಿನ ಮೇಲೆ. ಏಕೆಂದರೆ ಇಲ್ಲಿ ನಾಗರಿಕರು ಮತ್ತು ನಾಗರಿಕರ ಗುಂಪುಗಳು, ನಮ್ಮ ಬೆಂಗಳೂರು ಫೌಂಡೇಷನ್‌ನಂಥ ನಾಗರಿಕ ಸಂಸ್ಥೆಗಳು ಜನರನ್ನು ಮತದಾರರನ್ನಾಗಿ ದಾಖಲು ಆಗುವುದಕ್ಕೆ ಹಾಗೂ ತಮ್ಮ ಅಭ್ಯರ್ಥಿಗಳಿಗೆ ಕೇಳಬೇಕಾಗಿರುವ ಪ್ರಶ್ನಾವಳಿಗಳನ್ನು ಮುಂದಿಟ್ಟು ಜವಾಬ್ದಾರಿಯುತ ಮತದಾನ ಮಾಡುವುದಕ್ಕೆ ಸಲಹೆ ನೀಡುವಲ್ಲಿ ತೊಡಗಿಸಿಕೊಂಡಿದ್ದವು. ನಾಗರಿಕರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕಾದ ಉತ್ತಮ ನಿರ್ವಾಹಕರನ್ನು ಬಹುವಾಗಿ ಬೇಡುತ್ತಿದೆ ಬೆಂಗಳೂರು ನಗರ. ಬೆಂಗಳೂರು ಆರಿಸಲಿರುವ 25 ಶಾಸಕರು ಸುಧಾರಣೆಗಳು ಹಾಗೂ ಕಾನೂನುಬದ್ಧ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಮತ್ತು ನಾಗರಿಕ ಕೇಂದ್ರಿತ ಆಡಳಿತವನ್ನು ನಡೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕಿದೆ. ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ತರುವುದು ಅವರ ಕರ್ತವ್ಯ.
ಬೆಂಗಳೂರಿಗರು ಈಗ ಆಕ್ರೋಶಗೊಂಡಿರುವಂತೆ ಯಾವತ್ತೂ ಸಿಡಿಮಿಡಿಗೊಂಡಿರಲಿಲ್ಲ. ಸಾರ್ವಜನಿಕ ಸೇವೆ ದಯನೀಯ ಸ್ಥಿತಿಯಲ್ಲಿದೆ. ನಗರದ ತೀವ್ರ ಬೆಳವಣಿಗೆಗೆ ಸರಿಯಾಗಿ ಮೂಲ ಸೌಕರ್ಯಾಭಿವೃದ್ಧಿ ಆಗುತ್ತಲೇ ಇಲ್ಲ. ರಸ್ತೆಗಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತಿರದೇ ಅಸ್ತವ್ಯಸ್ತವಾಗಿವೆ. ಸಾರ್ವಜನಿಕ ಸಾರಿಗೆ ಅಸಮರ್ಪಕವಾಗಿದೆ. ಮೆಟ್ರೊ ರೈಲು ಮಾರ್ಗದ ನಿರ್ಮಾಣದ ಪ್ರಗತಿಯೂ ನಿಧಾನಗತಿ ತಲುಪಿದೆ. ವಿದ್ಯುತ್ ಮತ್ತು ಕುಡಿಯುವ ನೀರಿನ ಪರಿಸ್ಥಿತಿಯೂ ಕೆಟ್ಟದಾಗಿದೆ. ನಾಗರಿಕರಿಂದ ಬರುವ ದೂರುಗಳಿಗೆ ಚುನಾಯಿತ ಪ್ರತಿನಿಧಿಗಳು ಕಿವುಡಾಗಿದ್ದಾರೆ. ಒಂದೊಮ್ಮೆ ಸಾಫ್ಟ್‌ವೇರ್ ತಂತ್ರಜ್ಞಾನವು ಹುಟ್ಟುಹಾಕಿದ್ದ ಅಲೆಗಳಿಂದ ಗುರುತಿಸಿಕೊಳ್ಳುತ್ತಿದ್ದ ಬೆಂಗಳೂರು ನಗರವು ಇಂದು ನಗರದ ಅವ್ಯವಸ್ಥೆಗೆ ಉದಾಹರಣೆಯಾಗಿ ಉಲ್ಲೇಖವಾಗುತ್ತಿದೆ. ಮತದಾನ ಮಾಡಿದರಷ್ಟೇ ಸಾಲದು, ಜವಾಬ್ದಾರಿಯುತ ಮತದಾನವೂ ಅವಶ್ಯ ಎಂದು ನಾಗರಿಕರನ್ನು ಎಚ್ಚರಿಸಿ ಪ್ರೇರೇಪಿಸುವ ನಿಟ್ಟಿನಲ್ಲಿ ನಮ್ಮ ಬೆಂಗಳೂರು ಫೌಂಡೇಷನ್ ಅನನ್ಯ ಸೇವೆಯನ್ನೇ ಸಲ್ಲಿಸಿದೆ. ಪ್ರತಿ ಮತವೂ ಇಲ್ಲಿ ಗಣನೆಗೆ ಇದೆ. ಹೀಗಾಗಿ ನಾಳೆ ಮತಕೇಂದ್ರಕ್ಕೆ ಹೋಗುವುದಕ್ಕೂ ಮೊದಲು ಬೆಂಗಳೂರಿಗರು ಕೊನೆಯ ಬಾರಿಗೆ ಈ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು.
-ನೀವು ಮತ ನೀಡಲಿರುವ ಅಭ್ಯರ್ಥಿ ಬೆಂಗಳೂರಿಗರನ್ನು ಸುರಕ್ಷಿತವಾಗಿಡುವಲ್ಲಿ ಸಮರ್ಥನೇ? ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಕಾಳಜಿಯನ್ನು ವಿಶೇಷವಾಗಿ ತೆಗೆದುಕೊಳ್ಳಬಲ್ಲನೇ? ಸ್ವೀಕಾರಾರ್ಹ ಹಾಗೂ ಸಂಪರ್ಕಕ್ಕೆ ಸಿಗುವ ಪೊಲೀಸ್ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡಿ ನಿಮ್ಮ ನಗರವನ್ನು ಸುರಕ್ಷಿತವಾಗಿಡುವ ಅಭ್ಯರ್ಥಿಗೆ ನಿಮ್ಮ ಮತ ಸಲ್ಲಿಕೆಯಾಗುವುದನ್ನು ಖಾತ್ರಿ ಪಡಿಸಿಕೊಂಡಿದ್ದೀರಾ?
- ನೀವು ಮತ ಹಾಕಲಿರುವ ಅಭ್ಯರ್ಥಿ, ಒಬ್ಬ ನಾಗರಿಕನಾಗಿ, ನಿಮ್ಮ ವಾಸ್ತವ್ಯ ಪ್ರದೇಶದ ಹಾಗೂ ನೆರೆಹೊರೆಯ ಪ್ರದೇಶದ ಮೇಲೆ ಪ್ರಭಾವವಾಗುವಂತ ನಿರ್ಧಾರಗಳಲ್ಲಿ ಪಾಲುಗೊಳ್ಳುವಿಕೆ ತೋರಿಸುತ್ತಾನೆಯೇ? ಪ್ರದೇಶಕ್ಕೆ ಸಂಬಂಧಿಸಿದ ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲಿ ವಾರ್ಡ್ ಸಮಿತಿಗಳ ಮೂಲಕ ಸ್ಥಳೀಯ ಶ್ರೇಯೋಭಿವೃದ್ಧಿ ಒಕ್ಕೂಟಗಳು ಭಾಗವಹಿಸುವುದನ್ನು ಸಾಧ್ಯವಾಗಿಸುವ ಅಭ್ಯರ್ಥಿಗೆ ನಿಮ್ಮ ಆದ್ಯತೆ ಇರಲಿ.
-ಬಿಡಿಎ, ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ, ಬೆಸ್ಕಾಂ ಇಂಥ ಸಂಸ್ಥೆಗಳಲ್ಲಿ ಸುಧಾರಣೆ, ಪಾರದರ್ಶಕತೆಗಳನ್ನು ತರುವ ಒಲವನ್ನು ಹೊಂದಿರುವ ಅಭ್ಯಥಿಗಳಿಗೆ ನಿಮ್ಮ ಮತ ಸಿಗಲಿ. ನಾಗರಿಕ ಸಂಸ್ಥೆಗಳಲ್ಲಿ ಉತ್ತರದಾಯಿತ್ವವನ್ನು ಬಯಸಿ ಭ್ರಷ್ಟಾಚಾರದ ವಿರೋಧಿ ನಿಲವನ್ನು ಹೊಂದಿದವರಿಗೆ ನಿಮ್ಮ ಮತ ಇರಲಿ.
- ಸರ್ಕಾರಕ್ಕೆ ಸೇರಿದ ಜಾಗಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ನಿಮ್ಮ ಅಭ್ಯರ್ಥಿ ಪ್ರಾಮಾಣಿಕತೆ ಹೊಂದಿರುವನೇ? ಖಾಸಗಿ ಹಿತಾಸಕ್ತಿಗಳ ಕೈಲಿರುವ ಲಕ್ಷಾಂತರ ಎಕರೆ ಭೂಮಿಯನ್ನು ಮರುವಶಕ್ಕೆ ತೆಗೆದುಕೊಳ್ಳುವ ಧ್ಯೇಯ ಹೊಂದಿರುವವನಿಗೆ ಇರಲಿ ತಮ್ಮ ಮತ. ಶಾಲೆ ಕಾಲೇಜು, ಪಾರ್ಕ್ ಮತ್ತು ಹಾಸ್ಪಿಟಲ್ ನಿರ್ಮಾಣಗಳಿಗೆ ಹೊರತುಪಡಿಸಿ ಅನ್ಯ ಕಾರಣಗಳಿಗೆ ಲ್ಯಾಂಡ್ ನೋಟಿಫಿಕೇಷನ್ ಮಾಡುವ ಪದ್ಧತಿಗೆ ನಿಮ್ ಅಭ್ಯರ್ಥಿ ವಿರೋಧವಾಗಿದ್ದಾನೆಯೇ ಗಮನಿಸಿ.
-ವಾಸ್ತವ್ಯ ಪ್ರದೇಶಗಳಲ್ಲಿ ವ್ಯವಹಾರಿಕ ಕಟ್ಟಡಗಳಿಗೆ ಜಾಗವಿಲ್ಲ ಎಂಬ ನಿಯಮವನ್ನು ಪಾಲಿಸುವುದಕ್ಕೆ ನಿಮ್ಮ ಅಭ್ಯರ್ಥಿ ಸಿದ್ಧನಾಗಿದ್ದಾನೆಯೇ? ವಸತಿ ಪ್ರದೇಶಗಳಲ್ಲಿ ವ್ಯಾವಹಾರಿಕ ಸಂಕೀರ್ಣಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಧೋರಣೆ ಇರುವ ವ್ಯಕ್ತಿಗೆ ನಿಮ್ಮ ಬೆಂಬಲವಿರಲಿ.
-ಇನ್ನೂ ಒಳ್ಳೆಯ ಸಾರ್ವಜನಿಕ ಸಾರಿಗೆ ಹಾಗೂ ಸಂಚಾರ ವ್ಯವಸ್ಥೆ ಒದಗಿಸುವ ನಿಟ್ಟಿನಲ್ಲಿ ಅಭ್ಯರ್ಥಿ ಉತ್ಸುಕನಾಗಿದ್ದಾನೆಯೇ? ಬೇರೆ ಬೇರೆ ಸಾರಿಗೆ ಮಾದರಿಗಳನ್ನು ಸಂಯೋಜಿಸುವ ದೃಷ್ಟಿಕೋನವಿರುವ, ಅದನ್ನು ಸುಧಾರಣೆ, ಬಲಪಡಿಸುವಿಕೆಗಳಿಗೆ ತೆರೆದಿಡುವ ಸಾಮರ್ಥ್ಯದ ಅಭ್ಯರ್ಥಿಗೆ ನಿಮ್ಮ ಮತವಿರಲಿ. ಮೋಟಾರೇತರ ಸಾರಿಗೆ ವ್ಯವಸ್ಥೆಯಾದ ಬೈಸಿಕಲ್‌ನಂಥವುಗಳಿಗೆ ಪ್ರೋತ್ಸಾಹ ನೀಡುವ, ಆ ನಿಟ್ಟಿನಲ್ಲಿ ವ್ಯವಸ್ಥೆ ಒದಗಿಸುವುದಕ್ಕೆ ಕಟಿಬದ್ಧನಾಗಿರುವ ಅಭ್ಯರ್ಥಿ ನಿಮ್ಮವನೇ?
-ನಗರದ ಮಾಸ್ಟರ್ ಪ್ಲಾನ್‌ಗೆ ಸಂಬಂಧಿಸಿದಂತೆ ಬಂಡವಾಳ, ಗುತ್ತಿಗೆ ಬರುವಂತೆ ನೋಡಿಕೊಳ್ಳುವ ಸಾಮರ್ಥ್ಯ ಆತನಿಗಿದೆಯೇ? ಕೆಲವು ಬಿಲ್ಡರ್‌ಗಳು ಮತ್ತು ಗುತ್ತಿಗೆದಾರರ ಹಿತಾಸಕ್ತಿಗೆ ಒಳಗಾಗಿರುವ ಇಂದಿನ ಗುತ್ತಿಗೆ ಪದ್ಧತಿಯ ಲೋಪಗಳನ್ನು ಸರಿಪಡಿಸುವ ಸ್ಥೈರ್ಯ ಆತನಿಗೆ ಇದೆಯೇ? ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಡುವಿನ ಅಕ್ರಮ ಬಾಂಧವ್ಯವನ್ನು ಕೊನೆಗಾಣಿಸುವ ಸಾಮರ್ಥ್ಯ ಇರುವವನಿಗೆ ನಿಮ್ಮ ಮತ ನೀಡಿ.
-ನೀವು ಮತ ನೀಡಲಿರುವ ಅಭ್ಯರ್ಥಿ ಪರಿಸರ ಸ್ನೇಹಿ ಹಾಗೂ ಸುಸ್ಥಿರ ಬೆಂಗಳೂರು ನಿರ್ಮಾಣಕ್ಕೆ ಅಗತ್ಯ ದೃಷ್ಟಿಕೋನ ಹೊಂದಿರುವನೇ? ಕೆರೆಗಳು ಹಾಗೂ ಜಲಮೂಲಗಳನ್ನು ಸಂರಕ್ಷಿಸಿ ನಗರದ ಹಸಿರು ಪದರವನ್ನು ರಕ್ಷಿಸುವ ಅಭ್ಯರ್ಥಿಗೆ ನಿಮ್ಮ ಮತವಿರಲಿ. ರಾಜಾ ಕಾಲುವೆಗಳ ಒತ್ತುವರಿಗಳನ್ನು ತೆರವುಗೊಳಿಸಿ ಸುಸ್ಥಿರ ಅಭಿವೃದ್ಧಿ ಮಾದರಿಗೆ ಬದ್ಧತೆ ತೋರುವವನನ್ನು ಬೆಂಬಲಿಸಿ.
ಇವೆಲ್ಲದರ ಜತೆಯಲ್ಲಿ, ಮತದಾರರು ಅವರವರ ಮತಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳಲ್ಲಿ ಅಭ್ಯರ್ಥಿಗಳ ಸಾಮರ್ಥ್ಯವನ್ನು ಪರೀಕ್ಷಿಸಬೇಕು. ಒಟ್ಟಿನಲ್ಲಿ ಮತದಾನಕ್ಕೂ ಮೊದಲು ಯೋಚಿಸಿ. ನಿಮ್ಮ ಮತಕ್ಷೇತ್ರದ ಅಗತ್ಯಗಳ ಬಗ್ಗೆ ಕಾಳಜಿ ತೋರುವ ಅಭ್ಯರ್ಥಿಗೆ ಮಾತ್ರ ನಿಮ್ಮ ಮತವಿರಲಿ. ನಿಮ್ಮ ಮತಕ್ಕೆ ಮೌಲ್ಯ ಬರುವಂತೆ ನೋಡಿಕೊಳ್ಳಿ.
ನಮ್ಮ ಬೆಂಗಳೂರು ಫೌಂಡೇಷನ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.namma-bengaluru.org ಗೆ ಲಾಗ್‌ಆನ್ ಆಗಿ.
ಕೊನೆ ಗುಟುಕು: ಒಂದು ಆಸಕ್ತಿಕರ ಟ್ವೀಟ್- ಮತ ಹಾಕೋಣ. ನಮಗೆ ಅರ್ಹವಾದ ನಾಯಕರು ಸಿಗುತ್ತಾರೆ. ನಾವು ಮತ ಹಾಕದಿದ್ದರೆ ನಮ್ಮ ಮತದ ಅನುಮತಿಯೇ ಇಲ್ಲದ ನಾಯಕತ್ವವನ್ನು ಬಯ್ದುಕೊಳ್ಳುವ ಕುರಿತ ಭವಿಷ್ಯವನ್ನು ಬರೆಯಬೇಕಾಗುತ್ತದೆ.
- ಎಚ್.ಎಸ್. ಬಲರಾಮ್
hsbalram@gmail.com