ಅಂಕಣಗಳು

ನಿರ್ಣಾಯಕ ತೀರ್ಪು ನೀಡಿ ಸ್ಪಷ್ಟ ಸಂದೇಶ ಕಳುಹಿಸಿದ ಮತದಾರ

ಕಳೆದ 15 ವರ್ಷಗಳಲ್ಲಿ ಮತದಾರರು ಕೇವಲ ಎರಡು ಬಾರಿ ಮಾತ್ರ ನಿರ್ಣಾಯಕ ...

ಕಳೆದ 15 ವರ್ಷಗಳಲ್ಲಿ ಮತದಾರರು ಕೇವಲ ಎರಡು ಬಾರಿ ಮಾತ್ರ ನಿರ್ಣಾಯಕ ತೀರ್ಪನ್ನಿತ್ತಿದ್ದಾರೆ. ಮೊದಲನೆಯದು 1999ರಲ್ಲಿ. ಸುಭದ್ರ ಮತ್ತು ಉತ್ತಮ ಆಡಳಿತ ನೀಡುವಲ್ಲಿ ವಿಫಲವಾದ ಜನತಾ ದಳಕ್ಕೆ ಅಂದು ಹೊರಬಾಗಿಲು ತೋರಿಸಿದ್ದರು. ಈಗ ಅವರು, ಭ್ರಷ್ಟಾಚಾರ ಮತ್ತು ಕಳಪೆ ಆಡಳಿತ ನೀಡಿದ ಬಿಜೆಪಿಗೆ ಪಾಠ ಕಲಿಸಿದ್ದಾರೆ. ಈ ಎರಡೂ ಸಂದರ್ಭಗಳಲ್ಲೂ ಕಾಂಗ್ರೆಸ್ಗೇ ಲಾಭವಾಗಿದ್ದು.
ಇವೆರಡರ ನಡುವೆಯೂ ಎರಡು ಚುನಾವಣೆಗಳು ನಡೆದಿದ್ದವು ಎನ್ನುವುದನ್ನು ಮರೆಯುವುದು ಬೇಡ.  ಒಂದು 2004ರಲ್ಲಿ, ಮತ್ತೊಂದು 2008ರಲ್ಲಿ. ಆದರೆ ಈ ಎರಡೂ ಸಂದರ್ಭದಲ್ಲೂ ಮತದಾರರು ಗೊಂದಲಗೊಂಡಿದ್ದರು. ತತ್ಫಲವಾಗಿ ರಾಜ್ಯ, ಕಾಂಗ್ರೆಸ್-ಜೆಡಿಎಸ್ ಮತ್ತು ಬಿಜೆಪಿ-ಜೆಡಿಎಸ್ನ ಎರಡು ಕೆಟ್ಟ ಸಮ್ಮಿಶ್ರ ಸರ್ಕಾರಗಳಿಗೆ ಸಾಕ್ಷಿಯಾಗಬೇಕಾಯಿತು. ಇವೆರಡೂ 20 ತಿಂಗಳಿಗಿಂತಲೂ ಹೆಚ್ಚು ಹೊತ್ತು ಉಳಿಯದೇ ಮಧ್ಯಂತರ ಚುನಾವಣೆಗಳಿಗೆ ದಾರಿ ಮಾಡಿಕೊಟ್ಟವು. 2008ರಲ್ಲಿ ಬಿಜೆಪಿ ಹೆಚ್ಚು ಮತ ಗಳಿಸಿತಾದರೂ, ಸರಳ ಬಹುಮತ ಪಡೆಯಲು ಕೆಲವೇ ಸೀಟುಗಳು ಅದಕ್ಕೆ ಕಡಿಮೆ ಬಿದ್ದವು. ಅಧಿಕಾರ ದಕ್ಕಿಸಿಕೊಳ್ಳಲು ಅದು ಬೇರೆ ಪಕ್ಷದ ಎಮ್ಎಲ್ಎಗಳನ್ನು ತನ್ನತ್ತ ಸೆಳೆದುಕೊಂಡಿತು. ಕಚ್ಚಾಟಗಳು ಶುರುವಾದವು. ಭ್ರಷ್ಟಾಚಾರದ ಆಗಮನವಾಯಿತು. ಉಳಿದದ್ದೆಲ್ಲವೂ ಇತಿಹಾಸ.  
ಮತದಾರ ಈ ಬಾರಿಯ ತನ್ನ ನಿರ್ಣಾಯಕ ತೀರ್ಪಿನಿಂದ, 6 ಸ್ಪಷ್ಟ ಸಂದೇಶಗಳನ್ನು ಕಳುಹಿಸಿದ್ದಾನೆ:
ಸಂದೇಶ 1: ಸರಿಯಾಗಿ ಆಡಳಿತ ನಡೆಸದ ಮತ್ತು ಜನರ ಇಚ್ಛೆಗಳನ್ನು ತುಚ್ಛವಾಗಿ ನೋಡುವ ಪಕ್ಷ ಅಧಿಕಾರದಲ್ಲಿರಬಾರದು. ಬಿಜೆಪಿ ತನ್ನ ಒಳ ಜಗಳಗಳ ಸುಳಿಗೆ ಎಷ್ಟು ಸಿಲುಕ್ಕಿತ್ತೆಂದರೆ ಅದಕ್ಕೆ ಆಡಳಿತದತ್ತ ದೃಷ್ಟಿಹರಿಸಲೂ ಸಾಧ್ಯವಾಗಲಿಲ್ಲ. ಹಾಗಾಗೆ, ಅದು ಶಿಕ್ಷೆಗೆ ಅರ್ಹವಾಗಿತ್ತು.
ಸಂದೇಶ 2: ತೃಪ್ತಿಕರ ಬಹುಮತ ಪಡೆದಿರುವ ಏಕೈಕ ಪಕ್ಷ ಸರ್ಕಾರವನ್ನು ನಡೆಸಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮತದಾರ ಮೊದಲನೆಯ ಪಕ್ಷಕ್ಕೇ ಒಲವು ತೋರಿದ. ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರಕ್ಕೆ ಹಿಡಿದಿರುವ ಭ್ರಷ್ಟಾಚಾರದ ಗ್ರಹಣವನ್ನು ಲೆಕ್ಕಿಸದೆ ಅದನ್ನು ಅಧಿಕಾರಕ್ಕೆ ತಂದ. ಬಹುಶಃ ಮತದಾರರಿಗೆ ಸ್ಥಳೀಯ ಸಮಸ್ಯೆಗಳೇ ಪ್ರಮುಖವಾಗಿದ್ದವೇನೋ?
ಸಂದೇಶ 3: ರಾಜ್ಯದ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರಗಳು ಮಾರಕ. 2004ರಲ್ಲಿ ಹೇಗೆ ಜೆಡಿಎಸ್, ಧರಂಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಹೈಜಾಕ್ ಮಾಡಿತು ಎನ್ನುವುದನ್ನು ನಾವು ನೋಡಿದ್ದೇವೆ. ಮುಂದೆ ಅಧಿಕಾರ ಹಸ್ತಾಂತರದ ವೇಳೆಯಲ್ಲಿ ಹೇಗೆ ಅದು ಬಿಜೆಪಿಗೆ ಬತ್ತಿ ಇಟ್ಟಿತು ಎನ್ನುವುದನ್ನೂ ನೋಡಿದ್ದೇವೆ. ಈ ಸಮಯದಲ್ಲಿ ಹಾಸಿಗೆ ಹಿಡಿದದ್ದು ಮಾತ್ರ ಆಡಳಿತ ಮತ್ತು ಅಭಿವೃದ್ಧಿ.
ಸಂದೇಶ 4: ಬೇರೆಯವರಿಗಾದ ಲುಕ್ಸಾನಿನಿಂದ ಲಾಭ ಮಾಡಿಕೊಳ್ಳಲು ಯತ್ನಿಸುವ ಚಿಕ್ಕ ಪಕ್ಷಗಳನ್ನು ಬೆಂಬಲಿಸಬಾರದು. ಹಾಗಾಗೆ ಯಡಿಯೂರಪ್ಪ ನೇತೃತ್ವದ ಕೆಜೆಪಿ ಮತ್ತು ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ತಮ್ಮ ಛಾಪನ್ನು ಒತ್ತಲು ವಿಫಲವಾದವು. ಆದರೂ ಬಿಜೆಪಿಗೆ ಕಂಟಕತಂದೊಡ್ಡುವಲ್ಲಂತೂ ಸಫಲವಾದವು. ಇನ್ನು ಜೆಡಿಎಸ್ ಕಥೆಯೇನೂ ಭಿನ್ನವಾಗಿಲ್ಲ. ಕಿಂಗ್ಮೇಕರ್ ಆಗಬೇಕೆಂದು ಹಂಬಲಿಸಿದ ಆ ಪಕ್ಷದ ಮುಖವನ್ನೂ ಮತದಾರ ನೋಡಲಿಲ್ಲ.
ಸಂದೇಶ 5: ಲೋಕಸತ್ತಾ ಟಿಕೆಟ್ನ ಮೇಲೆ ಅಖಾಡಕ್ಕಿಳಿದ ಅಭ್ಯರ್ಥಿಗಳು ರೆಕ್ಕೆ ಬಿಚ್ಚುವುದಕ್ಕೆ ಇನ್ನೂ ಕೆಲವು ಸಮಯ ಕಾಯಬೇಕು. ಇವರಲ್ಲಿ ಯಾವೊಬ್ಬ ಅಭ್ಯರ್ಥಿಯೂ ಆಯ್ಕೆಯಾಗಿಲ್ಲ. ಆದರೆ ಗೌರವಾರ್ಹ ಮತಗಳನ್ನಂತೂ ಅವರು ಗಳಿಸಿದ್ದಾರೆ. ಅವರಿಗೆ ಇನ್ನೂ ಸ್ವಲ್ಪ ಕಾಲಾವಕಾಶ ಬೇಕಿದೆ.
ಸಂದೇಶ 6: ಹೊರಗೆ ಹೋಗಿ ಮತದಾನ ಮಾಡಲು ಮನಸ್ಸು ಮಾಡದವರು, ಮತದಾನ ಹೇಗೆ ಅವಶ್ಯಕವಿರುವ ಬದಲಾವಣೆಯನ್ನು ತರಬಲ್ಲದು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರತಿ ಮತವೂ ಅಮೂಲ್ಯ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರ ಹಾಜರಿ ಹೆಚ್ಚಾಗಲಿದೆ ಎನ್ನುವುದನ್ನು ಆಶಿಸೋಣ.
ಕಾಂಗ್ರೆಸ್ಗೆ ಅತಿ ಕಷ್ಟದ ಕೆಲಸ ಎದುರಾಗಿದೆ. ಒಳ್ಳೆಯ ಮತಗಳು ಬಂದಿದ್ದರೂ ತನಗೆ ಗೆಲುವು ಬಿಜೆಪಿ ವಿರೋಧಿ ಅಲೆಯಿಂದಾಗಿಯೇ ಸಿಕ್ಕಿತು ಎನ್ನುವುದು ಅದಕ್ಕೆ ಅರ್ಥವಾಗಬೇಕು. ತನ್ನ ಮಾತೃಪಕ್ಷದ ಮುಖಕ್ಕೆ ಹಗರಣಗಳಿಂದಾಗಿ ಮಸಿ ಹತ್ತಿದೆ ಎನ್ನುವುದನ್ನೂ ಅದು ಮರೆಯಬಾರದು. ಸುಭದ್ರ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಷ್ಟೇ ಅಲ್ಲದೆ ಉತ್ತಮ ಆಡಳಿತ ಮತ್ತು ತ್ವರಿತ ಅಭಿವೃದ್ಧಿ ಅದರ ಗುರಿಯಾಗಬೇಕು. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆಯಾದ್ದರಿಂದ ರಾಷ್ಟ್ರೀಯ ಪಕ್ಷದ ಮತಗಳ ಖಾತೆಗೆ ತನ್ನ ಸ್ಥಾನಗಳ ದೇಣಿಗೆಯನ್ನೂ ಅದು ನೀಡಬೇಕಾಗುತ್ತದೆ. ಇನ್ನು ಬಿಜೆಪಿ ಕೂಲಂಕಷ ಪರೀಕ್ಷೆಗಿಳಿಯಬೇಕಿದೆ. ಕರ್ನಾಟಕದ ಮೂಲಕ ದಕ್ಷಿಣ ಭಾರತದಲ್ಲೆಲ್ಲಾ ಹಬ್ಬಬೇಕು ಎಂಬ ಅದರ ಕನಸು ಛಿದ್ರವಾಗಿದೆ. ಪಕ್ಷಕ್ಕೆ ನೈತಿಕ ಶಕ್ತಿ ತುಂಬಬಲ್ಲ ಪ್ರಭಾವಿ ನಾಯಕರು ಈಗ ಅದರಲ್ಲಿಲ್ಲ. ಯಡಿಯೂರಪ್ಪನವರಿಗೆ ಆ ವರ್ಚಸ್ಸು ಇತ್ತಾದರೂ, ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದಿಂದಾಗಿ ಅವರು ಹೊರನಡೆಯಬೇಕಾಯಿತು. ಬಿಜೆಪಿ ಅವರನ್ನು ಮತ್ತೆ ಕರೆತರಬೇಕೇ? ಹಾಗೆ ಮಾಡಿದರೆ ಅದರ ಇಮೇಜು ಸರಿಯಾಗುವುದೇ? ಪಕ್ಷದ ಹಿರಿಯ ನಾಯಕರು ತ್ವರಿತ ನಿರ್ಧಾರಗಳನ್ನು ತೆಗೆದುಕೊಂಡು ಮನೆಗೆ ಆದ ಹಾನಿಯನ್ನು ಸರಿಪಡಿಸಿಕೊಳ್ಳಲೇಬೇಕಿದೆ. ಈಗ್ಗೆ ಒಂದು ವರ್ಷದ ನಂತರ ಲೋಕಸಭಾ ಚುನಾವಣೆಗಳು ನಡೆಯಲಿವೆ. ಅದು ಜನರ ಒಲವನ್ನು ಗಿಟ್ಟಿಸಿಕೊಳ್ಳುವುದಷ್ಟೇ ಅಲ್ಲದೆ, ರಾಷ್ಟ್ರೀಯ ಪಕ್ಷಕ್ಕೆ ಅಧಿಕಾರಕ್ಕೆ ಬರಲು ಸಾಧ್ಯವಾಗುವಷ್ಟು ಸ್ಥಾನಗಳನ್ನೂ ಗೆದ್ದುಕೊಳ್ಳಬೇಕಿದೆ.
ಕೊನೆಯ ಗುಟುಕು: 'ಬೆಂಗಳೂರು ಸ್ವಲ್ಪ ಡಿಫರೆಂಟ್!'
ಬೆಂಗಳೂರು ಈ ಬಾರಿ ವಿಭಿನ್ನವಾಗಿ ಮತ ನೀಡಿದೆ. ಪಕ್ಷದ ಬದಲಿಗೆ ಅದು ಅಭ್ಯರ್ಥಿಗಳಿಗೆ ಮತ ನೀಡಿದೆ. ಅದೇ ಸರಿಯಾದ ಮಾರ್ಗ. ಭವಿಷ್ಯದಲ್ಲೂ ಇದೇ ಟ್ರೆಂಡ್ ಮುಂದುವರಿಯುತ್ತದೆಂದು ಆಶಿಸೋಣ. ಈ ಬಾರಿಯ ಲಾಜಿಕ್ ಇಷ್ಟೇ- 'ಅಭ್ಯರ್ಥಿ ಯಾವ ಪಕ್ಷದವನೇ ಆಗಿರಲಿ, ಅವನು ನಮ್ಮ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾನೆಯೇ? ಮಾಡಿದ್ದರೆ ಅವನಿಗೇ ನಮ್ಮ ಮತ'. ನಗರದ ಒಟ್ಟು 28 ಅಸೆಂಬ್ಲಿ ಸೀಟುಗಳಲ್ಲಿ ಕಾಂಗ್ರೆಸ್ 13, ಬಿಜೆಪಿ 12 ಮತ್ತು ಜೆಡಿಎಸ್ 3 ಸ್ಥಾನಗಳಲ್ಲಿ ಗೆದ್ದಿವೆ. ಇವರಲ್ಲಿ 20 ಜನ ಹಾಲಿ ಎಮ್ಎಲ್ಎಗಳೇ ಇದ್ದಾರೆ. ಒಟ್ಟಿನಲ್ಲಿ ಜನರ ಇಂಗಿತಕ್ಕೆ ಪೂರಕವಾಗಿ ಅವರು ಕೆಲಸ ಮಾಡಲಿದ್ದಾರೆಯೇ ಎನ್ನುವುದನ್ನು ಕಾದು ನೋಡೋಣ. ನಿಜಕ್ಕೂ ನಗರಕ್ಕೆ ಉತ್ತಮ ವ್ಯವಸ್ಥಾಪಕರ ಅಗತ್ಯವಿದೆ.

- ಎಚ್.ಎಸ್. ಬಲರಾಮ್
hsbalram@gmail.com


(ಈ ಲೇಖನದ ಇಂಗ್ಲಿಷ್ ಅವತರಣಿಕೆ www.namma-bengaluru.org ಹಾಗೂ  www.suvarnanews.tv/features ನಲ್ಲಿ ಕನ್ನಡ ಅಂಕಣ ಲಭ್ಯ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!